ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಇಡೀ ವರ್ಷ ಸಾಹಿತ್ಯ ಪರಿಷತ್‌ಗೇನು ಕೆಲಸ?

ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಿನ ವಾರ್ಷಿಕ ಕಾರ್ಯಕ್ರಮದವರೆಗಿನ ಕೆಲಸವೇನು?

Rashmi Kasaragodu
Updated On : 23 Jan 2014, 4:38 am

80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವೆಂಬ ಜಾತ್ರೆ ಮಡಿಕೇರಿಯಲ್ಲಿ ಕೂಡಿತು. ಮೂರು ದಿನದ ನಂತರ ಹೋಯಿತು. ಯಾರಿಗೆ ಅರ್ಥವಾಯಿತೋ ಅಥವಾ ಉಪಯೋಗವಾಯಿತೋ ಬಿಟ್ಟಿತೋ, ಒಂದಷ್ಟು ಜನರಿಗೆ (ಇವರು ಏನು ಸಾಹಿತ್ಯ ಕೃಷಿ ಮಾಡಿದ್ದಾರೆಂದು ಅನೇಕರಿಗೆ ತಿಳಿದಿರುವುದಿಲ್ಲ!) ವೇದಿಕೆ ಹತ್ತಿ ಗೋಷ್ಠಿಗಳಲ್ಲಿ ಮಾತಾಡಲು, ಕಾವ್ಯ ವಾಚಿಸಲು ಅವಕಾಶ ದೊರಕಿತಷ್ಟೇ. ಪುಸ್ತಕಗಳು ಮಾರಾಟವಾಗಿದ್ದು ಒಳ್ಳೆ ಅಂಶ.
ಇನ್ನೂ ಜಾರಿಯಾಗದ ನಿರ್ಣಯಗಳನ್ನು ತೆಗೆದುಕೊಂಡು, ಸಮ್ಮೇಳನವನ್ನು ಯಶಸ್ವಿಯಾಗಿ ಮುಗಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಿನ ವಾರ್ಷಿಕ ಕಾರ್ಯಕ್ರಮದವರೆಗಿನ ಕೆಲಸವೇನು? ಈ ಸಮ್ಮೇಳನದ ಲೆಕ್ಕ ಸರಿ ಮಾಡುವುದು, ಮುಂದಿನ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಮತ್ತು ತಯಾರಿಬಿಟ್ಟರೆ ಅದಕ್ಕೆ ಬೇರೇನಾದರೂ ಕೆಲಸಗಳುಂಟೆ? ವರ್ಷದಲ್ಲಿ ಮೂರು ದಿನ ಪರಿಷತ್ತಿನ ಅಸ್ತಿತ್ವ ಬಿಟ್ಟರೆ ವರ್ಷದ ಪೂರ್ಣ ಸಾಹಿತ್ಯ ಪರಿಷತ್ತು ಜನಕ್ಕೆ ಹತ್ತಿರವಾಗುವ ಯಾವುದಾದರೂ ಯೋಜನೆಗಳು ಹೊಂದಿರುವುದೇ? ಗೊತ್ತಿಲ್ಲ. ಪರಿಷತ್ತಿನಲ್ಲಿ ಆಗಾಗ ಕೆಲವು ಕಾರ್ಯಕ್ರಮಗಳು ನಡೆಯುತ್ತವೆ ನಿಜ. ಪ್ರಚಾರವೇ ಇಲ್ಲದ ಆ ಕಾರ್ಯಕ್ರಮಗಳಿಗೆ ಬೆಂಗಳೂರಿನ ವಾಹನ ದಟ್ಟಣೆಯಲ್ಲಿ, ಬಿ.ಎಂ.ಟಿ.ಸಿ. ಹಾಗೂ ಆಟೋದ ವೆಚ್ಚ ಭರಿಸಿಕೊಂಡು ಇತರ ದೂರದ ಸ್ಥಳದವರು ಬಿಡಿ ಗಾಂಧಿಬಜಾರ್, ಬಸವನಗುಡಿ ಮತ್ತು ಚಾಮರಾಜಪೇಟೆಯವರೇ ಅಲ್ಲಿಗೆ ಬರುವುದಿಲ್ಲ. ಇಲ್ಲಿ ಕನ್ನಡಿಗರ ಅಭಿಮಾನದ ಪ್ರಶ್ನೆ ಬೇಡ. ಈ ಪ್ರದೇಶದ ಇತರ ಭಾಷಿಕರ ಕೈ ಸೇರುತ್ತ ಕನ್ನಡಿಗರ ಅಸ್ತಿತ್ವವೇ ಕಡಿಮೆ ಆಗುತ್ತಿದೆ! ಆದುದರಿಂದ ಸ್ಪಷ್ಟವಾಗುವ ಒಂದು ಸತ್ಯವೇನೆಂದರೆ ಕನ್ನಡ ಹೇಗೋ ಬಳಕೆಯಲ್ಲಿರಬಹುದು. ಆದರೆ ಕನ್ನಡ ಉಳಿಸಬೇಕೆಂದರೆ ಕನ್ನಡಿಗರ ಅಭಿಮಾನ, ಸ್ವಾಭಿಮಾನ ಎಲ್ಲವಕ್ಕೂ ಮಾತೃ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಬೆಚ್ಚಗೆ ಚಾಮರಾಜಪೇಟೆಯಲ್ಲಿ ಕೂಡುವುದು ಬಿಟ್ಟು, ಇತರ ಕನ್ನಡ ಪರ ಸಂಘ ಸಂಸ್ಥೆಗಳನ್ನು ಒಟ್ಟು ಮಾಡಿಕೊಂಡು ಇತರ ಜನ, ಇತರ ಸ್ಥಳ, ಇತರ ಭಾಷಿಕರು ಹಾಗೂ ಎಚ್ಚರವಿದ್ದರೂ ಮಲಗಿರುವ ಕನ್ನಡಿಗರನ್ನು ಜಾಗೃತಗೊಳಿಸುವ ಕೆಲಸಕ್ಕೆ ಮುಂದಾಗಬೇಕು. ಅದು ಏನು ಮಾಡಬಹುದೆಂದರೆ, ಪ್ರಥಮವಾಗಿ,
1. ಕನ್ನಡ ಸಾಹಿತ್ಯ ಪರಿಷತ್ತಿಗೆ ತನ್ನದೇ ಆದ ಹಣದ ಮೂಲವಿಲ್ಲ. ಅನಿವಾರ್ಯವಾಗಿ ಸರ್ಕಾರದ ಮುಂದೆ ಕೈ ಚಾಚಬೇಕು. ಸರಕಾರದ ಮುಂದೆ ಕೈ ಚಾಚುವುದೆಂದರೆ ರಾಜಕಾರಣಿ, ಜಾತಿ ಮತ್ತು ಕೂಟ ರಾಜಕೀಯದ ಅನಗತ್ಯ ಪ್ರವೇಶವಾಯಿತೆಂದೇ ಅರ್ಥ. ಆದುದರಿಂದ ನಾವು ಕನ್ನಡಿಗರು 5-6 ಕೋಟಿ ಜನರು ಎಂದು ಹೇಳಿಕೊಂಡು ತಿರುಗುತ್ತೇವೆ. ತಲಾ ಹತ್ತು ರುಪಾಯಿಯಿಂದ ನೂರು ರುಪಾಯಿಯವರೆಗೂ ಸಾಹಿತ್ಯ ಪರಿಷತ್ತಿಗೆ 'ಚಂದಾ' ಕೊಡಲು ನಮಗೆ ಶಕ್ತಿ ಇಲ್ಲವೆ? ಕರ್ನಾಟಕದ ಒಂದು ಹಳ್ಳಿಯೂ ಬಿಡದೆ ಅಭಿಯಾನ ಶುರು ಮಾಡಿದರೆ ಕೋಟಿಗಳ ಲೆಕ್ಕದಲ್ಲಿ ನಿಧಿ ಸಂಗ್ರಹಿಸಲಾಗುವುದಿಲ್ಲವೇ? ಇದನ್ನು ಶಾಶ್ವತ ನಿಧಿ ಸ್ಥಾಪಿಸಿ, ಬರುವ ಬಡ್ಡಿ ಹಣದಲ್ಲಿ ಯೋಜನಬದ್ಧವಾಗಿ ಯಾವುದೇ ಕಾರ್ಯವನ್ನು ಹಣದ ಕೊರತೆ ಆಗದಂತೆ ನಿರ್ವಹಿಸಬಹುದಲ್ಲವೇ?
2. ನಮ್ಮ ಸರ್ಕಾರ ಕನ್ನಡ ಜಾರಿಯಲ್ಲಿ ನಿರ್ಲಕ್ಷ್ಯ ತೋರುತ್ತದೆ ಎಂಬ ಅಪವಾದ ನಿರಂತರವಾಗಿದೆ. ಆಗಾಗ ನಾವೆಲ್ಲರು ಕೂಗಾಡುವುದು ಬಿಟ್ಟು ಬೇರೆ ರೀತಿ ಸಮಸ್ಯೆಗೆ ಪರಿಹಾರ ಹುಡುಕಲು ಪ್ರಯತ್ನಿಸಿದ್ದೇವೆಯೇ? ಸರ್ಕಾರಿ ವ್ಯವಸ್ಥೆಯನ್ನು ಚಾಲನೆಯಲ್ಲಿಡುವವರು ಕಾರ್ಯಾಂಗದವರು. ಅಲ್ಲಿನ ಹೆಚ್ಚಿನ ಮಂದಿ ಕನ್ನಡಿಗರು ಕುಳಿತಿಲ್ಲ. ಅಲ್ಲಿ ಕನ್ನಡಿಗರ ಹೆಚ್ಚಿನವರು ಕೂರಬೇಕೆಂದರೆ ಕ.ಸಾ.ಪ. ಮತ್ತು ಕನ್ನಡ ಸಂಘ ಸಂಸ್ಥೆಗಳು ಇತರರನ್ನು ದೂರುವುದು ಬಿಟ್ಟು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಎಲ್ಲಾ ಸಣ್ಣ ಪುಟ್ಟ ಉದ್ಯೋಗದಿಂದ ಐ.ಎ.ಎಸ್.ವರೆಗಿನ ಉದ್ಯೋಗದವರು ಕನ್ನಡದ ಹುಡುಗರನ್ನು ತಯಾರು ಮಾಡಲು ಪ್ರತಿಯೊಂದು ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಬೇಕು. ಪರಿಸ್ಥಿತಿ ಈಗ ಒಂದಿಷ್ಟು ಸಂಭಾಳಿಸುವ ಹಂತದಲ್ಲಿದ್ದರೂ ಬ್ಯಾಂಕಿಂಗ್ ಕ್ಷೇತ್ರ ಕನ್ನಡಿಗರ ಪಾಲಿಗೆ ಅಪಾಯಕಾರಿ ಮಟ್ಟ ಮುಟ್ಟುತ್ತಿದೆ. ಕರ್ನಾಟಕ ಐದು ರಾಷ್ಟ್ರೀಕೃತ ಬ್ಯಾಂಕಿನ ತವರು. ಆದರೆ ನಮ್ಮವರು 'ಐಟಿ ಬಿಟಿ'ಯ ಉದ್ಯೋಗದ ಆಕರ್ಷಣೆಗೆ ಬಿದ್ದು, 30-35 ವರ್ಷದ ಸ್ಥಿರ ಉದ್ಯೋಗದ ಖಾತರಿ ಇರುವ ಕಲ್ಪನೆ ಇಲ್ಲದೆ ನೂರಾರು ಬ್ಯಾಂಕಿನ ಉದ್ಯೋಗ ಬೇರೆಯವರಿಗೆ ಬಿಟ್ಟು ಕೊಡುತ್ತಿದ್ದಾರೆ. ಈಗಾಗಲೇ ನಮ್ಮ ಐದು ಬ್ಯಾಂಕ್‌ಗಳ ಶಾಖೆಯಲ್ಲಿ 'ಹಿಂದಿ' ಮಾತಾಡುವವರ ಲಾಬಿ ಎಷ್ಟು ಬಲಗೊಳ್ಳುತ್ತಿದೆ ಎಂದರೆ ಮುಂದಿನ ಕೆಲವೇ ವರ್ಷದಲ್ಲಿ ಕನ್ನಡಿಗರ ಕೈಯಿಂದ ಈ ಬ್ಯಾಂಕುಗಳ ಅಧಿಕಾರ ಸೂತ್ರ ತಪ್ಪಿ ಹೋಗಬಹುದು!
3. ಹೆಚ್ಚು ಕಡಿಮೆ 1990 ದಶಕದ ನಂತರ ನಮ್ಮ ಜನರು ಕನ್ನಡ ಮಾಧ್ಯಮ ಶಾಲೆಯನ್ನು ಆಯ್ಕೆ ಮಾಡಿಕೊಳ್ಳುವುದನ್ನೇ ಮರೆಯುತ್ತಿದ್ದಾರೆ. ಇಂಗ್ಲಿಷ್ ಮಾಧ್ಯಮ ಏಕೆ ಬೇಕಾಗುತ್ತಿದೆ ಎಂಬ ಚರ್ಚೆ ಇಲ್ಲಿ ಬೇಡ. ಆದರೆ ಕಸಾಪ ಮತ್ತು ಇತರರು ಏನು ಮಾಡಬಹುದೆಂಬುದನ್ನು ನೋಡೋಣ. ಸ್ವಯಂ ಪ್ರೇರಿತವಾಗಿ ಶಾಲೆ, ಕಾಲೇಜು ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕಸಾಪ ಮತ್ತು ಇತರರು ಸ್ವಯಂ ಸೇವಕರ ನೆರವಿನಿಂದ ವಾರದಲ್ಲಿ ಒಂದೆರಡು ದಿನ, ನಿಶ್ಚಿತವಾಗಿ ಕನ್ನಡ, ಕರ್ನಾಟಕ, ಕರ್ನಾಟಕದ ನಾಡು ನುಡಿ, ಸಂಸ್ಕೃತಿಯ ಹಿನ್ನೆಲೆಯಲ್ಲಿ ಆಕರ್ಷಕ ಕಾರ್ಯಕ್ರಮಗಳು ಹಮ್ಮಿಕೊಳ್ಳಬೇಕು. ಮಕ್ಕಳಿಗೆ 'ಅ, ಆ. ಇ. ಈ' ಎಂದು ಪೊರೆಯುವ ಆಟೋಟದಲ್ಲಿ ಭಾಷೆಯನ್ನು ಕಲಿಸಬೇಕು. ಪ್ರೌಢಶಾಲೆ, ಕಾಲೇಜಿನ ಹುಡುಗರಲ್ಲಿ ಅನೇಕ ವಿಧವಾದ ಕಲೆಗಳು ಹುದುಗಿರುತ್ತವೆ. ಅವರಿಗೆ ವೇದಿಕೆಯಾಗಿ ಬರವಣಿಗೆ, ವಾಚನ, ಭಾಷಣ, ಸಂಗೀತ, ನಾಟಕ ಇತ್ಯಾದಿ ಕಲೆಗಳ ಮೂಲಕ ಅವರಲ್ಲಿ ಕನ್ನಡತನವನ್ನು ಜಾಗೃತಿಗೊಳಿಸಬಹುದು. 'ಐಟಿ ಬಿಟಿ' ಯಂತಹ ಖಾಸಗಿ ಸಂಸ್ಥೆಯಲ್ಲಿರುವವರಿಗೆ ನಮ್ಮ ಭಾಷೆ, ಸಂಸ್ಕೃತಿ, ರಾಜ್ಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇರದೆ ಇರುವುದಿಲ್ಲ. ಅವರಿಗೆ ಸರಿಯಾದ ಮಾರ್ಗಸೂಚಿ ಇರುವುದಿಲ್ಲ. ನಾವು ಸ್ವಯಂಪ್ರೇರಿತರಾಗಿ ದಾರಿದೀಪ ತೋರುವ ಕೆಲಸ ಮಾಡುವುದು ಅಗತ್ಯವಾಗಿದೆ. ಇಂಗ್ಲಿಷಿನ ಸವಾರಿ ಕೇವಲ ಕನ್ನಡ ಭಾಷೆ ಮೇಲೊಂದೇ ಅಲ್ಲ, ಭಾರತೀಯ ಸಮಸ್ತ ಭಾಷೆಗಳ ಮೇಲೆ ಆಗುತ್ತಿದೆ. ಹಿಂದಿಯನ್ನು ಹಿಂದಿ ಲಿಪಿಗಿಂತ ಇಂಗ್ಲಿಷಿನಲ್ಲಿ ಅದನ್ನು ಬರೆದರೆ ಸುಲಭವಾಗಿ ಓದುವಂತಹ ದುರಂತ ಪರಿಸ್ಥಿತಿ ಎದುರಾಗುತ್ತಿದೆ! ಇದನ್ನು ನಾವು ಅವರಿಗೆ ಅರ್ಥ ಮಾಡಿಸಿದಾಗ ತಾವಾಗಿಯೇ ನಮ್ಮ ಭಾಷೆಯ ಮಹತ್ವ ಅರಿತುಕೊಳ್ಳಬಲ್ಲರು.
4. ಇದುವರೆಗೂ 80 ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದಿವೆ, ನಿಜ. ಆದರೆ ಈ 80 ಊರು ಅಥವಾ ಜಿಲ್ಲೆಗಳಿಂದ ಸ್ಥಳೀಯ ನವ ಪ್ರತಿಭೆಗಳನ್ನು ಗುರುತಿಸಿ, ಸಮ್ಮೇಳನದಲ್ಲಿ ಅವರುಗಳನ್ನು ಮುಂದೆ ತರುವ ಕೆಲಸಗಳೇನಾದರೂ ಪರಿಷತ್ತು ಇದುವರೆಗೂ ಮಾಡಿರುವುದೇ? ಈ ಸಮ್ಮೇಳನಗಳಲ್ಲಿ ಸಾಮಾನ್ಯ ಜನರಿಗೆ, ಏನಾದರೂ ಸಾಧಿಸುವ ಉತ್ಸಾಹವಿರುವ ಯುವಜನರಿಗೆ ಹತ್ತಿರವಾಗುವ ಕಾರ್ಯಕ್ರಮಗಳು ಪರಿಷತ್ತಿನ ಪಟ್ಟಿಯಲ್ಲಿರುವುದೇ? ನನ್ನ ಉದ್ದೇಶದಲ್ಲಿ ಯಾವ ಊರಿನಲ್ಲಿ ಸಮ್ಮೇಳನ ನಡೆಯುವುದೋ ಆ ಜಿಲ್ಲೆಯ ಪ್ರತಿಭೆಗಳು ಸಮ್ಮೇಳನದಲ್ಲಿ ಪ್ರಮುಖವಾಗಿ ಬೆಳಕಿಗೆ ತರುವ ಕೆಲಸ ಮಾಡಬೇಕು. ಇದು ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗದೆ ಜಾನಪದರು, ಕಲಾವಿದರು, ನಾಟಕಕಾರರು, ಸಂಗೀತಗಾರರು ಇತರ ಎಲ್ಲಾ ಕಲೆಯ ಆರಾಧಕರನ್ನು ಸಮಸ್ತ ಕನ್ನಡ ಕುಲಕೋಟಿಗೆ ಪರಿಚಯ ಮಾಡಿಕೊಡುವ ವೇದಿಕೆ ಸಮ್ಮೇಳನ ಆಗಬೇಕು. ಇದಕ್ಕಾಗಿ, ಪ್ರತಿಭೆಗಳನ್ನು ಅನ್ವೇಷಿಸಲು ಸ್ಪರ್ಧೆಗಳನ್ನು ಆಯೋಜಿಸಿ, ಆಯ್ಕೆಗೊಂಡವರನ್ನು ಮುಂದೆ ತರುವುದು ದೊಡ್ಡ ವಿಚಾರವೇನಲ್ಲ. ಹೀಗೆ ಮಾಡುವುದರಿಂದ ಇಡೀ ಜಿಲ್ಲೆಯೇ ಸಮ್ಮೇಳನದ ಭಾಗವಾಗುತ್ತದೆ. ಜನರಲ್ಲಿ ಪೈಪೋಟಿಯ ಉತ್ಸಾಹ ವರ್ಷದ ಪೂರ ತುಂಬಿ ತುಳುಕುವುದರಲ್ಲಿ ಸಂಶಯವಿಲ್ಲ.
ಅರುಂಧತಿ ನಾಗ್‌ರವರು 'ರಂಗಶಂಕರ'ದಂತಹ ರಂಗಮಂದಿರವನ್ನು ನಿತ್ಯ ಸಿನಿಮಾ ಮಂದಿರದಂತೆ ನಡೆಸುವ ಶ್ರದ್ಧೆ, ಶಕ್ತಿ ಹೊಂದಿರುವಾಗ ಸಾಹಿತ್ಯ ಪರಿಷತ್ತು, ನಾಟಕ ಅಕಾಡೆಮಿ ಮತ್ತು ಇತರ ಸಂಸ್ಥೆಗಳ ನೆರವಿನಿಂದ ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿ ಇಂತಹ ರಂಗಮಂದಿರಗಳನ್ನು ಅಭಿವೃದ್ಧಿಪಡಿಸಿ, ನಾಟಕರಂಗ ಒಂದೇ ಅಲ್ಲ ಇತರ ಪ್ರದರ್ಶನ ಕಲೆಗಳನ್ನು ನಿತ್ಯ ತೋರುವ ಸಾಧ್ಯತೆಗಳಿಲ್ಲವೇ?
ನಾವು ಸುಮ್ಮನೆ ಕನ್ನಡದ ದುಃಸ್ಥಿತಿ ಬಗ್ಗೆ ಬೊಬ್ಬೆ ಹಾಕುತ್ತಾ, ನಗರಗಳ ಕೇಂದ್ರ ಪ್ರದೇಶಗಳಲ್ಲಿ ಹೋರಾಟ ಮಾಡಿದರೆ ಏನೂ ಪ್ರಯೋಜನವಿಲ್ಲ. ಪ್ರಥಮವಾಗಿ ನಾವು ಕನ್ನಡಿಗರಿಗೆ ಕನ್ನಡವನ್ನು ಸರಿಯಾಗಿ ಮಾರ್ಕೆಟಿಂಗ್ ಮಾಡಬೇಕಿದೆ. ನಂತರ ನಮ್ಮ ರಚನಾತ್ಮಕ ಕಾರ್ಯಗಳಿಂದ ಇತರರು ನಮ್ಮನ್ನು ಅರ್ಥಮಾಡಿಕೊಳ್ಳುವಂತಹ ವಾತಾವರಣ ನಿರ್ಮಾಣ ಮಾಡಬೇಕಿದೆ. ಇದೆಲ್ಲವೂ ನಾವು ಇಂದಿನ ಪೈಪೋಟಿ ಯುಗದಲ್ಲಿ ಒಂದು ಅಕ್ರಮಶೀಲ ಕಂಪನಿಯಂತೆ ಯೋಚಿಸಿ, ನಮ್ಮ ಯೋಜನೆಗಳನ್ನು ನಿಶ್ಚಿತ ಗುರಿ ಹೊಂದಿ ಸಾಧಿಸಿದರೆ ಯಾವುದೂ ಕಷ್ಟವಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಇತರ ಕನ್ನಡ ಸಂಘಟನೆಗಳು ಹೊಸ ರೀತಿಯಲ್ಲಿ ಚಿಂತಿಸಿ, ಹೊಸ ರೀತಿಯಲ್ಲಿ ಯಾರೂ ಉಣಬಡಿಸದಿದ್ದರೆ ನವಪೀಳಿಗೆ ಯಾವುದನ್ನೂ ಗಮನಿಸುವುದಿಲ್ಲ ಎಂಬುದು ಅಷ್ಟೇ ಸತ್ಯ. ನೆನಪಿರಲಿ.

 -ಸಂಜಯ್ ಎಸ್. ಪಾಟೀಲ್
ಬೆಂಗಳೂರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement