ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಚಿತ್ರರಂಗಕ್ಕೆ ಕನ್ನಡದ ಕಾಳಜಿ ಎಷ್ಟಿದೆ?

ಕನ್ನಡದಲ್ಲಿ ಡಬ್ಬಿಂಗ್‌ಗೆ ಅನುಮತಿ ಕೊಡಬೇಕೆ ಬೇಡವೆ ಎನ್ನುವ ಚರ್ಚೆ ಮತ್ತೆ ಜೋರಾಗಿದೆ. ಮೊದಲಿಗೆ ಯಾರು ಯಾರಿಗೆ ಅನುಮತಿ ...

Rashmi Kasaragodu
Updated On : 23 Jan 2014, 1:06 am

ಕನ್ನಡದಲ್ಲಿ ಡಬ್ಬಿಂಗ್‌ಗೆ ಅನುಮತಿ ಕೊಡಬೇಕೆ ಬೇಡವೆ ಎನ್ನುವ ಚರ್ಚೆ ಮತ್ತೆ ಜೋರಾಗಿದೆ. ಮೊದಲಿಗೆ ಯಾರು ಯಾರಿಗೆ ಅನುಮತಿ ಕೊಡುತ್ತಾರೆ ಅನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಡಬ್ಬಿಂಗ್ ಪರ-ವಿರೋಧದ ಚರ್ಚೆಗಳು ಹಾಗಿರಲಿ. ಆದರೆ ನಮ್ಮ ಕನ್ನಡ ಚಿತ್ರರಂಗದ ಅನೇಕರು ಡಬ್ಬಿಂಗ್ ಬರುವುದರಿಂದ ಕನ್ನಡ ನಾಡು ನುಡಿಗೆ ಮಾರಕ, ಕನ್ನಡ ಸಂಸ್ಕೃತಿಗೆ ಹಾನಿಯಾಗುತ್ತದೆ ಅನ್ನುವ ಮಾತುಗಳನ್ನು ವೀರಾವೇಶದಿಂದ ಆಡುತ್ತಾರೆ. ಚಿತ್ರರಂಗದ ಈ ಸಂಸ್ಕೃತಿ ರಕ್ಷಕರಿಗೆ ನನ್ನ ಕೆಲವು ಪ್ರಶ್ನೆಗಳು ಹೀಗಿವೆ:
-    ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ ಸಮ್ಮೇಳನದಲ್ಲಿ ಎಷ್ಟು ಜನ ಕನ್ನಡ ಚಿತ್ರರಂಗದ ಮಂದಿ ಭಾಗವಹಿಸಿದ್ದರು? ಇದೀಗ ಡಬ್ಬಿಂಗ್ ವಿರೋಧಿ ಆಂದೋಲನದಲ್ಲಿ ಹೋರಾಟ ನಡೆಸಲು ಸಜ್ಜಾಗಿರುವ ಒಬ್ಬೇ ಒಬ್ಬರೂ ಅಲ್ಲಿ ಕಾಣಲಿಲ್ಲವಲ್ಲಾ?
-    ಕನ್ನಡ ನಾಡು ಕಂಡ ಅತ್ಯಂತ ಪ್ರಬುದ್ಧ ಕವಿಗಳಲ್ಲಿ ಒಬ್ಬರಾದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ತೀರಿಕೊಂಡಾಗ ಅವರ ದರ್ಶನ ಭಾಗ್ಯ ಪಡೆಯಲು ಹೊರಟ ಚಿತ್ರರಂಗದ ನಾಡು-ನುಡಿ ರಕ್ಷಕರು ಎಷ್ಟು ಜನ?
-    ಕರ್ನಾಟಕದ ಕೆಲವು ಶಾಸಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ ಕರ್ನಾಟಕವನ್ನು ಇಬ್ಭಾಗ ಮಾಡಬೇಕು, ಹೈದ್ರಾಬಾದ್ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಅಂದರಲ್ಲ, ಅವರ ವಿರುದ್ಧ ನಮ್ಮ ಚಿತ್ರರಂಗದ ನಾಡು-ನುಡಿ ಕಾವಲುಗಾರರು ಚಕಾರವೆತ್ತಿಲ್ಲವಲ್ಲ ಯಾಕೆ?
-    ಕನ್ನಡಿಗರ ಪಾಲಿಗೆ ಮರಣಶಾಸನವಾದ ಕಾವೇರಿ ನದಿನೀರು ಹಂಚಿಕೆಯ ಗೆಜೆಟ್ ವಿರುದ್ಧ ಕನ್ನಡ ಚಿತ್ರರಂಗದ ದನಿ ಕೇಳಲಿಲ್ಲವಲ್ಲಾ ಯಾಕೆ?
-    ಉತ್ತರ ಕರ್ನಾಟಕ ಭಾಗದ ಅನೇಕ ಜಿಲ್ಲೆಗಳಲ್ಲಿ ವಾಸವಿರುವ ಕೋಟ್ಯಂತರ ಜನರಿಗೆ ಕುಡಿಯುವ ನೀರಿನ ಬವಣೆಯಿದೆ. ಅಲ್ಲಿನ ಭಾಗಗಳಿಗೆ ಕೃಷ್ಣಾ ನ್ಯಾಯಾಧಿಕರಣ ಕೊಡಲಿ ಪೆಟ್ಟನ್ನು ನೀಡಿದೆ. ಅದರ ವಿರುದ್ಧ ಚಿತ್ರರಂಗದ ನಾಡು-ನುಡಿ ಕಾಪಾಡುವವರ ಮಾತು ಕೇಳಿಸುತ್ತಲೇ ಇಲ್ಲವಲ್ಲ? ಕಳಸಾ ಬಂಡೂರಿ ಮತ್ತು ಮಹದಾಯಿ ನದಿಗಳ ಯೋಜನೆಗಳ ಬಗ್ಗೆ ಚಿತ್ರರಂಗದ ಮಂದಿಗೆ ಗೊತ್ತಿದೆಯೇ?
-    ಮಹಾರಾಷ್ಟ್ರ ಏಕೀಕರಣ ಸಮಿತಿಯ ಶಾಸಕ ಸಾಂಬಾಜಿ ಪಾಟೀಲ್ ಕರ್ನಾಟಕದ ಶವಯಾತ್ರೆ ಮಾಡುತ್ತೀನಿ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇನೆ ಅನ್ನುವ ನಾಡ ದ್ರೋಹಿ ಮಾತುಗಳನ್ನು ಆಡಿದಾಗ ಚಿತ್ರರಂಗದ ನಾಡು-ನುಡಿ ಕಾಪಾಡುವ ಮಂದಿ ಎಲ್ಲಿದ್ದರು, ಏಕೆ ಪ್ರತಿಭಟಿಸಲಿಲ್ಲ?
-    ಕನ್ನಡದ ಯುವಕರ ಪಾಲಿಗೆ ಆಶಾಕಿರಣವಾಗುವಂಥ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವಂತ ಸರೋಜಿನಿ ಮಹಿಶಿ ವರದಿಯ ಅನುಷ್ಠಾನದ ವಿಷಯವಾಗಿ ಚಿತ್ರರಂಗದ ಜನರ ಹೋರಾಟವೇಕಿಲ್ಲ?
-    ಗಡಿ ಸಮಸ್ಯೆ ಬಗೆಹರಿಸುವ ಮಹಾಜನ್ ವರದಿ ಮತ್ತು ನಾಡಿನ ಎಲ್ಲ ಭಾಗಗಳ ಅಭಿವೃದ್ಧಿಪಡಿಸಲು ರಚಿಸಿದ ಡಾ.ನಂಜುಂಡಪ್ಪ ವರದಿಯ ಅನುಷ್ಠಾನದ ವಿಷಯವಾಗಿ ಕನ್ನಡ ಚಿತ್ರರಂಗ ಎಂದೂ ದನಿಯಾಗಿಲ್ಲ ಏಕೆ?
ಹೀಗೆ ಹುಡುಕುತ್ತಾ ಹೋದರೆ, ಕನ್ನಡ ಚಿತ್ರರಂಗದ ಅನೇಕರು ತಮ್ಮ ಸ್ವಾರ್ಥಕ್ಕಾಗಿ ಕನ್ನಡ, ನಾಡು, ನುಡಿ, ನೆಲ, ಜಲ ಅನ್ನುವ ಸಿನಿಮೀಯ ಡೈಲಾಗುಗಳನ್ನು ಹೊಡೆಯುತ್ತಾರೆ. ಒಮ್ಮೆ ಅವರ ರಾಜ್ಯಪರ ಬದ್ಧತೆಯ ಲೆಕ್ಕ ಪತ್ರವನ್ನು(ಬ್ಯಾಲೆನ್ಸ್ ಶೀಟನ್ನು) ಕನ್ನಡಿಗರ ಮುಂದಿಡಲಿ. ನಂತರ ತಾವು ನಾಡು-ನುಡಿಯ ರಾಯಭಾರಿಗಳು ಅನ್ನುವಂತೆ ಮಾತನಾಡಲಿ.

-ಅಮರನಾಥ್ ಶಿವಶಂಕರ್, ಬೆಂಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement