ಕರಾವಳಿಯ ಈ ಸಾಮರಸ್ಯದ ಚರ್ಚೆ ಇತರೆಡೆಗೂ ಪಸರಿಸಲಿ
ವರುಷ ಒಂದು ಕಳೆದರೂ ತನಿಖೆ ಮುಗಿಯದ ಕು.ಸೌಜನ್ಯ ಅತ್ಯಾಚಾರ ಮತ್ತು ಹತ್ಯೆಯಿಂದ ಮೊದಲ್ಗೊಂಡು ಮಣಿಪಾಲದ ...
ವರುಷ ಒಂದು ಕಳೆದರೂ ತನಿಖೆ ಮುಗಿಯದ ಕು.ಸೌಜನ್ಯ ಅತ್ಯಾಚಾರ ಮತ್ತು ಹತ್ಯೆಯಿಂದ ಮೊದಲ್ಗೊಂಡು ಮಣಿಪಾಲದ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ, ಅನ್ಯ ಕೋಮಿನ ಅಶಕ್ತ ಮಹಿಳೆಗೆ ಕಳಕಳಿಯಿಂದ ಸಹಾಯ ಮಾಡಿದ ಪತ್ರಕರ್ತನ ಮೇಲೆ ಮತಾಂಧರಿಂದ ನಡೆದ ಪ್ರಾಣಾಂತಿಕ ಹಲ್ಲೆ, ದೇರಳಕಟ್ಟೆಯ ವಿದ್ಯಾರ್ಥಿನಿಯನ್ನು ಎಂಟು ಜನ ಕಾಮುಕರು ಅಪಹರಿಸಿ ಅತ್ಯಾಚಾರ ಮಾಡಿ, ವೀಡಿಯೊ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡಿದ ರಾಕ್ಷಸಿತನ, ಉಡುಪಿಯ ವಿದ್ಯಾರ್ಥಿನಿಯ ಸ್ನೇಹಿತನೇ ಆಕೆಯ ಜೊತೆಗಿನ ಅಶ್ಲೀಲ ಭಂಗಿಯ ಫೋಟೋಗಳನ್ನು ಫೇಸ್‌ಬುಕ್‌ಗೆ ಹಾಕಿದ್ದು ಮತ್ತು ಆತನ ಕೃತ್ಯಕ್ಕೆ ಅಭಿನಂಧನೆ ಸಲ್ಲಿಸಿದ ಮನೋವಿಕಾರಿಗಳು, ಕಾಲೇಜು ಕ್ಯಾಂಪಸ್‌ಗಳಿಂದ ಕಾಣೆಯಾಗುತ್ತಿರುವ ಹಿಂದೂ ತರುಣಿಯರು ಮತ್ತು ಅದರ ಹಿಂದಿರುವ ಲವ್ ಜಿಹಾದ್ ಜಾಲ, ಐಸ್‌ಕ್ರೀಮ್, ಪಾನೀಪೂರಿಗಳಲ್ಲೂ ಡ್ರಗ್ಸ್ ಸೇರಿಸಿ ಶಾಲೆಗೆ ಹೋಗುವ ಹುಡುಗ ಹುಡುಗಿಯರಿಗೆ ಡ್ರಗ್ಸ್ ಚಟ ಹತ್ತಿಸಿ ಸ್ನೇಹಾ ಉಪಾದ್ಯಾಯಳಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಬಲಿತೆಗೆದುಕೊಳ್ಳುವ ಮಾಫಿಯಾಗಳು ಕರಾವಳಿಯ ನೆಮ್ಮದಿಯನ್ನು ಕೆಡಿಸಿದೆ.
ಇಂಥ ವಾತಾವರಣದಲ್ಲಿ ಸ್ವಸ್ಥ ಸಮಾಜದ ನಿರ್ಮಾಣ ಹೇಗೆ ಸಾಧ್ಯ, ಸಮಾಜದಲ್ಲಿ ಚಿಂತಕರ, ಜನಪ್ರತಿನಿಧಿಗಳ, ಸಾಮಾಜಿಕ ಕಾರ್ಯಕರ್ತರ ಪಾತ್ರ ಏನು ಎನ್ನುವ ಚರ್ಚೆ ನಡೆಯುತ್ತಿರುತ್ತದೆ. ಇಂತಹ ಚರ್ಚೆ ಚಿಂತನೆಗಳಿಗೆ ಒಂದು ಸಾಂಘಿಕ ರೂಪವನ್ನು ನೀಡಿದ್ದು ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ 'ಸುರಕ್ಷಿತ ಮಹಿಳೆ -ಸ್ವಸ್ಥ ಸಮಾಜ' ಎಂಬ ದುಂಡು ಮೇಜಿನ ಸಭೆ. ದೇಶದ ಮುಂಚೂಣಿಯ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯು ಈ ದುಂಡು ಮೇಜಿನ ಸಭೆಯನ್ನು ಆಯೋಜಿಸಿತ್ತು. ಪಕ್ಷ ರಾಜಕೀಯದಿಂದ ಸದಾ ದೂರವಿದ್ದು ರಾಷ್ಟ್ರರಾಜಕಾರಣದ ಕುರಿತು ಮಾತ್ರ ತನ್ನ ಆಸಕ್ತಿಯನ್ನು ಹೊಂದಿರುವ ಎಬಿವಿಪಿ ಈ ಸಭೆಗೆ ಒಂದು ಅಕಡೆಮಿಕ್ ಸ್ವರೂಪವನ್ನು ನೀಡಿತ್ತು.
ಕಾಂಗ್ರೆಸ್‌ನ ಪ್ರಮುಖ ಮಹಿಳಾ ನಾಯಕಿ ಡಾ. ತೇಜಸ್ವಿನಿ ರಮೇಶ್, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷರಾದ ಕು.ಮಂಜುಳಾ, ಸಮಾಜ ಶಾಸ್ತ್ರಜ್ಞರಾದ ಚ.ನ.ಶಂಕರ್‌ರಾವ್, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಕರಾವಳಿ ಮಹಿಳಾ ವೇದಿಕೆಯ ವಿದ್ಯಾ ನಾಯಕ್, ಮಂಗಳೂರು ವಿ.ವಿ.ಯ ಸಂಶೋಧನಾ ವಿದ್ಯಾರ್ಥಿಗಳು, ಪತ್ರಕರ್ತರೂ ಸೇರಿದಂತೆ ಸುಮಾರು 100 ಜನ ನಾಲ್ಕು ಗಂಟೆಗಳ ಕಾಲ ಚಿಂತನ ಮಂಥನದಲ್ಲಿ ತೊಡಗಿದ್ದರು.
ಸಂವೇದನಾ ಶೂನ್ಯ ಸರ್ಕಾರಗಳು, ಪೊಲೀಸ್‌ವ್ಯವಸ್ಥೆ, ನ್ಯಾಯ ವಿಳಂಬ ಪ್ರಕ್ರಿಯೆಗಳ ಕುರಿತು ಇಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಡಾ.ತೇಜಸ್ವಿನಿ ರಮೇಶ್ ಮಾತನಾಡುತ್ತಾ- ಮಹಿಳೆಗೆ ರಕ್ಷಣೆ ಆಕೆಯ ಹಕ್ಕು, ಅದು ಆಕೆಗೆ ನೀಡುವ ಬಿಕ್ಷೆಯಲ್ಲ. ಮಹಿಳೆಯರನ್ನು ರಕ್ಷಿಸಲಾಗದ ಸರ್ಕಾರಗಳು ಆಳಲು ನಾಲಾಯಕ್ಕು. ಮಹಿಳಾ ಆಯೋಗ ಅಧ್ಯಕ್ಷರಿಲ್ಲದೆ ಇನ್ನೂ ಖಾಲಿ ಬಿದ್ದಿದೆ ಎಂದು ತಮ್ಮದೇ ಪಕ್ಷದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಸಾಮಾಜಿಕ ಸ್ವಾಸ್ಥ್ಯದ ಕುರಿತು ನಡೆಯುತ್ತಿದ್ದ ಚರ್ಚೆಗಳಲ್ಲಿ ಕರಾವಳಿಯ ಒಟ್ಟು ಸುರಕ್ಷೆಗೆ ಇರುವ ಸವಾಲುಗಳನ್ನು, ಕರಾವಳಿಯಲ್ಲಿ ಬೇರು ಬಿಟ್ಟಿರುವ ಸಮಾಜ ವಿರೋಧಿ ಜಾಲಗಳ ಕುರಿತು ಹಲವು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದರು. ಮಂಗಳೂರು ಸುರಕ್ಷಿತವಾಗಿಲ್ಲ, ಮಹಿಳೆಗಷ್ಟೇ ಅಲ್ಲ ಒಟ್ಟು ಸಮಾಜಕ್ಕೆ ಅಪಾಯಕಾರಿಯಾಗಿ ಮಂಗಳೂರು ಬೆಳೆಯುತ್ತಿದೆ ಎಂಬ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆಗೆ ಬಂದ ಆಘಾತಕಾರಿ ಸಂಗತಿಗಳು:
ಟಿ ಮಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ತನ್ನ ಜಾಲವನ್ನು ಕಾಲೇಜು, ಹೈಸ್ಕೂಲ್ ಕ್ಯಾಂಪಸ್‌ಗಳವರೆಗೂ ವಿಸ್ತರಿಸಿದೆ. ದಿನದಿಂದ ದಿನಕ್ಕೆ ಮಾದಕ ವ್ಯಸನಗಳಿಗೆ ದಾಸರಾಗುತ್ತಿರುವ ವಿದ್ಯಾರ್ಥಿಗಳು ಹೆಚ್ಚುತ್ತಿದ್ದಾರೆ. ಶಾಲೆ- ಕಾಲೇಜುಗಳ ಸಮೀಪದಲ್ಲಿರುವ ಪಾನೀಪೂರಿ ಅಂಗಡಿಗಳಲ್ಲಿ ಪಾನೀಪೂರಿಗೆ, ಐಸ್‌ಕ್ರೀಮ್ ಸ್ಟಾಲ್‌ಗಳಲ್ಲಿ ಐಸ್‌ಕ್ರೀಮ್‌ಗೆ, ಚಾಕೋಲೇಟ್‌ಗೆ ಡ್ರಗ್ಸ್ ಸೇರಿಸಿ ಅದನ್ನು ಅಮಾಯಕ ವಿದ್ಯಾರ್ಥಿಗಳಿಗೆ ಕೊಟ್ಟು ಅದರ ಚಟ ಅಂಟಿಸಿ ಮುಂದೆ ಅವರು ಡ್ರಗ್ಸ್‌ಗೆ ದಾಸರಾಗುವಂತೆ ಮಾಡಿ ಭವಿಷ್ಯದ ಗ್ರಾಹಕರನ್ನು ತಯಾರಿಸುತ್ತಿದ್ದಾರೆ.
ಟಿ ಬೆಳಗಿನಿಂದ ಸಂಜೆಯವರೆಗೆ ಖಾಲಿ ಇರುವ ಅಪಾರ್ಟ್‌ಮೆಂಟ್‌ಗಳನ್ನು (ಗಂಡ-ಹೆಂಡತಿ ಇಬ್ಬರೂ ದುಡಿಯಲು ಹೋಗಿ ಹಗಲು ಹೊತ್ತಿನಲ್ಲಿ ಖಾಲಿ ಇರುವ) ಅನೈತಿಕ ಚಟುವಟಿಕೆಗಳಿಗೆ ಬಾಡಿಗೆಗೆ ನೀಡಲಾಗುತ್ತಿದೆ. ಇಂತಹ ಜಾಗಗಳಿಗೆ ಹುಡುಗಿಯರನ್ನು ಪೂರೈಸುವ ದಂಧೆ ನಗರದಲ್ಲಿ ಸಕ್ರಿಯವಾಗಿದೆ.
ಟಿ ಮೊಬೈಲ್ ರಿಚಾರ್ಜ್ ಸೆಂಟರ್‌ಗಳಲ್ಲಿ ರಿಚಾರ್ಜ್‌ಗಾಗಿ ಬಂದ ಹುಡುಗಿಯರ ನಂಬರ್‌ಗಳನ್ನೇ ಬಳಸಿಕೊಂಡು ಅವರನ್ನು ಹಿಂಬಾಲಿಸುವ, ಅವರಿಗೆ ಕರೆ ಮಾಡುವ, ಎಸ್ಸೆಮ್ಮೆಸ್ ಕಳಿಸುವ ಮೂಲಕ ಪರಿಚಯ ಬೆಳೆಸಿಕೊಂಡು ಕ್ರಮೇಣ ಅವರನ್ನು ಪ್ರಿತಿಸುವ ನಾಟಕವಾಡಿ ದೈಹಿಕವಾಗಿ ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುವ ಮತ್ತು ಲವ್ ಜಿಹಾದ್‌ಗಾಗಿ ಉಪಯೋಗಿಸುವ ಜಾಲಗಳಿವೆ. ಬಹುತೇಕ ಲವ್ ಜಿಹಾದ್ ಪ್ರಕರಣಗಳ ಆರಂಭ ರಿಚಾರ್ಜ್ ಸೆಂಟರ್‌ಗಳಿಂದಲೇ ಆಗಿದೆ.
ಟಿ ಫೇಸ್‌ಬುಕ್‌ನಲ್ಲಿ ನಕಲಿ ಹೆಸರಿನ ಖಾತೆಗಳನ್ನು ತೆರೆದು ಹಿಂದೂ ಹುಡುಗಿಯರ ಜೊತೆ ಸ್ನೇಹ ಬೆಳೆಸಿ, ಸ್ನೇಹವನ್ನು ಪ್ರೀತಿಯಾಗಿಸಲು ಭಾವನಾತ್ಮಕ ಒತ್ತಡವನ್ನು ಸೃಷ್ಟಿಸಿ ಅಮಾಯಕ ಹುಡುಗಿಯರನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ. ನಗರಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತುವ, ಯಾವ ನಿರ್ಬಂಧವೂ ಇಲ್ಲದ ವಿದ್ಯಾರ್ಥಿನಿಯರ ಪೇಯಿಂಗ್ ಗೆಸ್ಟ್ (ಪಿ.ಜಿ)ಗಳಲ್ಲಿ ವಾಸವಾಗಿರುವ ಹುಡುಗಿಯರನ್ನು ವ್ಯವಸ್ಥಿತವಾಗಿ ಇಂತಹ ಅನೈತಿಕ ಜಾಲಗಳ ಒಳಗೆ ಸೆಳೆಯಾಲಾಗುತ್ತಿದೆ
ಟಿ 6-7-8ನೇ ತರಗತಿಯಲ್ಲಿ ಕಲಿಯುತ್ತಿರುವ ವಯೋವಾನದ ಶೇ 70 ವಿದ್ಯಾರ್ಥಿನಿಯರು ವಿವಿಧ ರೀತಿಯ ದೌರ್ಜನ್ಯಗಳಿಗೆ ಒಳಗಾಗಿದ್ದಾರೆ ಎಂದು ಆಪ್ತ ಸಮಾಲೋಚಕಿಯೊಬ್ಬರು ಬಹಿರಂಗ ಪಡಿಸಿದ ಮಾಹಿತಿ!
ಟಿ ಮಾನವ ಕಳ್ಳ ಸಾಗಾಣಿಕೆಯ ಜಾಲ ಕರಾವಳಿಯಲ್ಲಿ ಸಕ್ರಿಯವಾಗಿದೆ.
ಟಿ ನಗರದ ಆಸುಪಾಸಿನ ಅನೇಕ ರಸ್ತೆಗಳಲ್ಲಿ ರಾತ್ರಿ ಎಂಟರ ಸುಮಾರಿಗೆ ವ್ಯವಹಾರಗಳೆಲ್ಲ ಬಂದ್ ಆಗುತ್ತಿದ್ದು, ಆ ಬಳಿಕ ಅಂತಹ ಸ್ಥಳಗಳಲ್ಲಿ ಹೊರಗಿನವರಿಗೆ ಸಂಚರಿಸುವುದೇ ಸಾಧ್ಯವಿಲ್ಲ. ಅಂತಹ ಜಾಗಗಳು ಅನೈತಿಕ ಮತ್ತು ನಿಷೇಧಿತ ಚಟುವಟಿಕೆಗಳಿಗೆ ಬಳಕೆಯಾಗುತ್ತಿವೆ.
ಟಿ ಹೈಸ್ಕೂಲ್- ಕಾಲೇಜ್‌ಗಳ ಪಕ್ಕದಲ್ಲೇ ಸದಾ ವಯಸ್ಕರ ಸಿನಿಮಾಗಳನ್ನೇ ಪ್ರದರ್ಶಿಸುವ ಸಿನಿಮಾ ಥಿಯೇಟರ್‌ಗಳಿವೆ.
ಟಿ ಕಮರ್ಷಿಯಲ್ ಕಾಂಪ್ಲೆಕ್ಸ್‌ಗಳ ಮಳಿಗೆಯಲ್ಲಿ ನಡೆಯುವ ಖಾಸಗಿ ಕಾಲೇಜುಗಳ ಹುಡುಗಿಯರ ಹಾಸ್ಟೇಲ್‌ಗಳು. ನಿತ್ಯವೂ ಪುಂಡರ ಹಾವಳಿ. ವಿದ್ಯಾರ್ಥಿನಿಯರ ಸುರಕ್ಷೆಯನ್ನು ಕಡೆಗಣಿಸಿದ ಆಡಳಿತ ಮಂಡಳಿಗಳು.
ಟಿ ಅಬ್ಬಾ... ಇಂತಹ ಹತ್ತಾರು ಆಘಾತಕಾರಿ ಸಂಗತಿಗಳು ಈ ಸಭೆಯಲ್ಲಿ ಪ್ರಸ್ತಾಪವಾಯಿತು. ಒಂದೊಂದು ಮಾಹಿತಿಗಳೂ ಕೂಡ ಪ್ರಜ್ಞಾವಂತರನ್ನು ಬೆಚ್ಚಿ ಬೀಳಿಸುತ್ತಿದೆ. ಇವೆಲ್ಲವನ್ನೂ ಜಿಲ್ಲಾಡಳಿತ, ಅದರ ಪೊಲೀಸ್ ವ್ಯವಸ್ಥೆ, ಇಂತಹ ಮಾಫಿಯಾಗಳ ಹಿಡಿತದಲ್ಲಿರುವ ಜನಪ್ರತಿನಿಧಿಗಳು ಮೂಕ ಸಾಕ್ಷಿಗಳಾಗಿ ನೋಡುತ್ತಿದ್ದಾರೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಕೇಡು ಸನ್ನಿಹಿತವಾಗುತ್ತದೆ. ಅಪರಾಧಿಗಳನ್ನು ಅವರ ಜಾತಿ, ಮತಗಳಿಂದ, ಅವರು ಬೆಂಬಲಿಸುವ ರಾಜಕೀಯ ಸಿದ್ಧಾಂತಗಳಿಂದ ನೋಡದೆ, ಅವರನ್ನು ಕಾನೂನಿನ ಕಟಕಟೆಗೆ ತಂದು ನಿಲ್ಲಿಸಿ ಕಠಿಣವಾಗಿ ಶಿಕ್ಷಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಭೆಯು ಅಂಗೀಕರಿಸಿದ ನಿರ್ಣಯಗಳು ಹೀಗಿವೆ:
ಟಿ ಸಂಕಷ್ಟಕ್ಕೆ ಸಿಲುಕಿದ ಮಹಿಳೆಯರು ತಮ್ಮ ದೂರನ್ನು ದಾಖಲಿಸುವುದಕ್ಕೆ ಅನುಕೂಲವಾಗುವ ಹಾಗೆ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಹಾಯವಾಣಿಗಳನ್ನು ಸ್ಥಾಪಿಸಿದ್ದು, ಅದು ದಿನದ 24 ಗಂಟೆಯೂ ಕಾರ್ಯಾಚರಿಸುವಂತೆ ಮಾಡುವುದು. ನಾಲ್ಕು ಅಂಕೆಗಳ ಉಚಿತ ಸಹಾಯವಾಣಿಯ ವ್ಯವಸ್ಥೆಯನ್ನು ಆರಂಭಿಸಿ ಅದರ ಕುರಿತು ಪರಿಣಾಮಕಾರಿ ಪ್ರಚಾರವನ್ನು ಮಾಡುವುದು.
ಟಿ ಬಹುಪಾಲು ಹೆಣ್ಣು ಮಕ್ಕಳು ತಮ್ಮ ಮುಗ್ಧತೆ, ಅಮಾಯಕತೆಗಳಿಂದ ದುಷ್ಟಜಾಲದ ಒಳಗೆ ಸಿಲುಕುತ್ತಿದ್ದು, ಇದನ್ನು ತಡೆಗಟ್ಟಲು ಪ್ರೌಢಾವಸ್ಥೆಗೆ ಕಾಲಿಡುತ್ತಿರುವ ಹುಡುಗಿಯರಲ್ಲಿ ಇಂತಹ ಸಂಗತಿಗಳ ಬಗೆಗೆ ತಜ್ಞ ಆಪ್ತ ಸಮಾಲೋಚಕರಿಂದ ಅರಿವುಂಟು ಮಾಡುವ ವ್ಯವಸ್ಥೆಯನ್ನು ಪ್ರೌಢಶಾಲಾ ಮಟ್ಟದಲ್ಲಿ ಕಡ್ಡಾಯವಾಗಿ ಹಮ್ಮಿಕೊಳ್ಳುವುದು. ಈ ಬಗೆಯ ಆಪ್ತ ಸಮಾಲೋಚನೆಯನ್ನು ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಪ್ರತ್ಯೇಕವಾಗಿ ನಡೆಸಬೇಕು. ಶಾಲಾ ಶಿಕ್ಷಣದಲ್ಲಿ ಕಾನೂನಿನ ಬಗೆಗೆ ಸೂಕ್ತ ಮಾಹಿತಿಯನ್ನು ನೀಡಿ ಅಪರಾಧದ ಪರಿಣಾಮ, ಶಿಕ್ಷೆಯ ಪ್ರಮಾಣಗಳ ಬಗ್ಗೆ ತಿಳಿಸುವುದು.
ಟಿ ಉದ್ಯೋಗ ನೀಡುವ ಹೆಸರಲ್ಲಿ ಮತ್ತು ಮೊಬೈಲ್ ರಿಚಾರ್ಜ್ ಮಾಡುವ ಕೇಂದ್ರಗಳಲ್ಲಿ ಹಾಗೂ ಮಾಲ್‌ಗಳಲ್ಲಿ ವಿದ್ಯಾರ್ಥಿನಿಯರನ್ನು ಮೋಹದ ಬಲೆಗೆ ಸೆಳೆದು ಅಪಹರಿಸುವ ಜಾಲಗಳ ಬಗ್ಗೆ ಕಾನೂನಿನ ಕಣ್ಣಿಡುವುದು.
ಟಿ ವಿದ್ಯಾರ್ಥಿನಿಯರ ಹಾಸ್ಟೇಲ್, ಪಿ.ಜಿ.ಗಳಿಗೆ ಸೂಕ್ತವಾದ ಲಿಖಿತ ನಿಯಮಗಳನ್ನು ರೂಪಿಸುವುದು ಮತ್ತು ಅವುಗಳ ಅನುಷ್ಠಾನದ ಬಗೆಗೆ ಗಮನಿಸಲು ಇಲಾಖಾ ಮಟ್ಟದ ಅಧಿಕಾರಿಗಳ ತಂಡ ಧಿಡೀರನೆ ಭೇಟಿ ನೀಡಿ ಪರಿಶೀಲಿಸಿ ಸಾಂದರ್ಭಿಕ ಕ್ರಮ ಕೈಗೊಳ್ಳುವುದು.
ಟಿ ತಾಲೂಕು-ನಗರ-ಜಿಲ್ಲಾ ಮಟ್ಟದಲ್ಲಿ ವಿದ್ಯಾರ್ಥಿನಿಯರನ್ನೂ ಒಳಗೊಂಡಂತೆ ಮಹಿಳಾ ಸುರಕ್ಷತೆಯ ಬಗೆಗೆ ಭರವಸೆ ತುಂಬಬಲ್ಲ ರಾಜಕೀಯೇತರ ಸಲಹಾ ಸಮಿತಿಯೊಂದನ್ನು ರೂಪಿಸುವುದು. ಈ ಸಮಿತಿಯಲ್ಲಿ ವಿದ್ಯಾರ್ಥಿನಿಯರೂ ಸೇರಿದಂತೆ 50 ಮಹಿಳಾ ಸದಸ್ಯರಿರುವುದು. ಮಹಿಳಾ ದೌರ್ಜನ್ಯ ಪ್ರಕರಣಗಳ ಎಫ್.ಐ.ಆರ್ ಪ್ರತಿಗಳನ್ನು ಸಲಹಾ ಸಮಿತಿಗೆ ನೀಡುವುದು ಮತ್ತು ವಿಚಾರಣೆಯ ಮಾಹಿತಿಗಳನ್ನು ಕೂಡ ಒದಗಿಸುವುದು. ಮಹಿಳಾ ಆಯೋಗವು ಪ್ರಕರಣಗಳ ತನಿಖೆಗೆ ಗಮನ ಹರಿಸುವುದು.
ಟಿ ವಿದ್ಯಾಸಂಸ್ಥೆಗಳ ಬಳಿ ದೊರೆಯುವ ಪಾನೀಪೂರಿ, ಬೀಡ, ಐಸ್‌ಕ್ರೀಮ್‌ಗಳಲ್ಲಿ ಮಾದಕ ವಸ್ತುಗಳನ್ನು ಸೇರಿಸಿ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಪ್ರಕರಣಗಳು ಕಂಡುಬರುತ್ತಿದ್ದು ಇದರ ವಿರುದ್ಧ ಸೂಕ್ತ ಮುನ್ನೆಚ್ಚರಿಕೆಯನ್ನು ಕೈಗೊಳ್ಳುವುದು.
ಟಿ ಹೋಂಸ್ಟೇಗಳು, ಪಬ್‌ಗಳು ಮತ್ತು ಖಾಲಿ ಅಪಾರ್ಟ್‌ಮೆಂಟ್‌ಗಳು ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತಿದ್ದು, ಇವುಗಳ ಬಗೆಗೆ ಹದ್ದಿನ ಕಣ್ಣುಗಳಿಂದ ವೀಕ್ಷಿಸಿ ಕ್ರಮ ಕೈಗೊಳ್ಳುವುದು.
ಟಿ ರಿಯಾಲಿಟಿ ಶೋ, ಜಾಹಿರಾತು ಮತ್ತು ಟಿ.ವಿ. ಕಾರ್ಯಕ್ರಮಗಳಲ್ಲಿ ಅಶ್ಲೀಲತೆ ಹೆಚ್ಚುತ್ತಿದ್ದು, ಇವುಗಳನ್ನು ಸೂಕ್ತ ಸೆನ್ಸಾರ್‌ಗೆ ಒಳಪಡಿಸುವುದು. ಇದನ್ನು ತಡೆಗಟ್ಟಲು ಪರಿಣಾಮಕಾರಿ ಕಾನೂನುಗಳನ್ನು ಜಾರಿಗೆ ತರಬೇಕು.
ಟಿ ಮಹಿಳಾ ದೌರ್ಜನ್ಯದ ಪ್ರಕರಣಗಳು ನಡೆದಾಗ ಅದನ್ನು ಕುಟುಂಬದ ಜಾತಿಯ ಮರ್ಯಾದೆಯ ಪ್ರಶ್ನೆಯನ್ನಾಗಿ ನೋಡದೆ ಅದೊಂದು ಕಾನೂನು ವಿರೋಧಿದುಷ್ಕೃತ್ಯವೆಂದೇ ಪರಿಗಣಿಸಿ, ಪೋಷಕರೂ ಒಳಗೊಂಡಂತೆ ಸಮಾಜ ಅಂತಹ ಕುಕೃತ್ಯಗಳನ್ನು ಎದುರಿಸುವುದಕ್ಕೆ ಸಹಕರಿಸುವುದು. ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ಸೂಕ್ತ ರಕ್ಷಣೆ ನೀಡುವುದು.
ಸರ್ಕಾರವು ಜಿಲ್ಲಾಡಳಿತದ ಪ್ರಮುಖ ಅಧಿಕಾರಿಗಳನ್ನು, ಪೊಲೀಸ್ ಇಲಾಖೆಯ, ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯನ್ನು ಕರೆದು ಸಮಾಜ ವಿಧ್ವಂಸಕ ಚಟುವಟಿಕೆಗಳನ್ನು ಕೂಡಲೇ ತಡೆಗಟ್ಟುವುದಕ್ಕೆ ಮನಸ್ಸು ಮಾಡಬೇಕಾಗಿದೆ.
-ರೋಹಿಣಾಕ್ಷ ಶಿರ್ಲಾಲು
ಕನ್ನಡ ಪ್ರಾಧ್ಯಾಪಕರು
anisikeprabha@gmail.com