ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಶೂಟೌಟ್ ಹಕೀಕತ್ ಹೊರಬೀಳುವುದು ಯಾರಿಗೂ ಬೇಡವೆ?

ಭೂಗತ ಪಾತಕಿ ಮುನ್ನಾ ವಿರುದ್ಧದ ಪೊಲೀಸರ ಕಾರ್ಯಾಚರಣೆಯಲ್ಲಿ ಪಿಎಸ್‌ಐ ...

Rashmi Kasaragodu
Updated On : 24 Jan 2014, 2:03 am

ಭೂಗತ ಪಾತಕಿ ಮುನ್ನಾ ವಿರುದ್ಧದ ಪೊಲೀಸರ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ವೀರಮರಣ ಹೊಂದಿದ ಗುಲ್ಬರ್ಗ ಶೂಟೌಟ್ ಪ್ರಕರಣದಲ್ಲಿ ನಡೆದದ್ದಾರೂ ಏನು ಎಂಬುದು ಈಗ ಜನಮನಕ್ಕೆ ಕಾಡುತ್ತಿರುವ ಪ್ರಶ್ನೆ.
ಛೋಟಿ ದೇವಡಿಗಲ್ಲಿ (ರೋಜಾ ಬಡಾವಣೆ) ಯ ಹತ್ತು ಅಡಿ ಉದ್ದಗಲದ ಮಬ್ಬುಗತ್ತಲಿನ ಕೋಣೆಯಲ್ಲಿ ಹಾಡುಹಗಲೇ ಗುಂಡಿನ ಕಾಳಗ ನಡೆದರೂ ಕಾಳಗದ ಸುತ್ತಮುತ್ತಲಿನ ಬೆಳವಣಿಗೆಗಳು ಸ್ಪಷ್ಟವಾಗಿಲ್ಲ. ಎಲ್ಲವೂ ಆಯೋವುಯ. ಹೀಗಾಗಿ ಈ ಎನ್‌ಕೌಂಟರ್ ತನ್ನೊಡಲಲ್ಲಿ ಹತ್ತು ಹಲವು ಉತ್ತರ ಸಿಗದ ಪ್ರಶ್ನೆಗಳು, ಸಂದೇಹಗಳು, ಶಂಕೆಗಳನ್ನು ಮುಚ್ಚಿಟ್ಟುಕೊಂಡಿದೆ. ಶೂಟೌಟ್ ಹುಟ್ಟುಹಾಕಿರುವ ಅದೆಷ್ಟೋ ಬೆಳವಣಿಗೆಗಳು ಇಂದಿಗೂ ಯಕ್ಷಪ್ರಶ್ನೆಯಾಗಿಯೇ ಉಳಿದಿವೆ.
- ಮುನ್ನಾ ಪಾತಕಿಯಾದರೂ ಪೊಲೀಸರೆಂದರೆ ಹೆದರುತ್ತಿದ್ದ ಎಂದು ಪೊಲೀಸರೇ ಹೇಳುತ್ತಾರೆ. ಹಾಗಾದ್ರೆ ಮುನ್ನಾಗೆ ಠಾಣೆಗೇ ಕರೆದು ವಿಚಾರಣೆ ನಡೆಸಬಹುದು ಎಂದಿರುವಾಗ ಆತನ ಮೇಲೆ ಮುಗಿಬಿದ್ದದ್ದೇಕೆ?
-ದಾಳಿ ಸಂದರ್ಭದಲ್ಲಿ ಪಾತಕಿ ಮುನ್ನಾ ಬಳಿ ಆಯುಧಗಳಿದ್ದವೆ? ಹಾಗಿದ್ದರೆ ಏನೆಲ್ಲಾ ಆಯುಧಗಳನ್ನು ಆತ ಹೊಂದಿದ್ದ? ಗುಂಡಿನ ಕಾಳಗದಲ್ಲಿ ಆತ ಅದ್ಯಾವ ಆಯುಧದಿಂದ ಗುಂಡು ಸಿಡಿಸಿದ?
- ಪಿಎಸ್‌ಐ ಬಂಡೆ ತಲೆ ಹೊಕ್ಕ 2 ಗುಂಡುಗಳು ಮುನ್ನಾ ಆಯುಧದಿಂದ ಹಾರಿದ್ದೆ? ಪೊಲೀಸರ ಸರ್ವಿಸ್ ರಿವಾಲ್ವರ್‌ನಿಂದ ಸಿಡಿದದ್ದೆ?
- ಪೊಲೀಸ್ ಸರ್ವಿಸ್ ರಿವಾಲ್ವರ್‌ನ ಗುಂಡುಗಳು ಬಂಡೆ ತಲೆಹೊಕ್ಕಿದ್ದು ಎಂದಾದರೆ ಆ ಬೆಳವಣಿಗೆ ಹೇಗಾಯ್ತು?
- ಪೊಲೀಸ್ ಸರ್ವಿಸ್ ರಿವಾಲ್ವರ್ ರೌಡಿ ಮುನ್ನಾ ಕೈ ಸೇರಿತೋ ಅಥವಾ ಇನ್ನೇನಾದರೂ ಯಡವಟ್ಟು ಅಲ್ಲಿ ಘಟಿಸಿತೋ?
- ತನ್ನ ಸುದೀರ್ಘ ಪಾತಕ ಇತಿಹಾಸ (ಮುಂಬೈ- ಗುಲ್ಬರ್ಗ ಸೀಮೆ) ದಲ್ಲಿ ಒಮ್ಮೆಯೂ ಪೊಲೀಸರ ಮೇಲೆ ಎಗರಿ ಬೀಳದ ಮುನ್ನಾ ಜ.  8 ರಂದು ಅದ್ಯಾಕೆ ಗುಂಡಿನ ಸುರಿಮಳೆಗರೆದ?
- ಸುಪಾರಿ ಕೊಲೆ, ಹಫ್ತಾ ವಸೂಲಿ, ಸುಲಿಗೆಯಂತಹ ದಂಧೆಗಷ್ಟೇ ಸೀಮಿತವಾಗಿದ್ದ ಮುನ್ನಾ, ಸಿನಿಮಿಯ ಶೈಲಿಯಲ್ಲಿ ಗನ್ ಪಾಯಿಂಟ್‌ನಲ್ಲಿ ಸಿಬ್ಬಂದಿಗೆ ಪ್ರಾಣಭೀತಿ ಒಡ್ಡಿ ನಡೆಸಲಾದಂತಹ ಮುತ್ತೂಟ್ ಫೈನಾನ್ಸ್ ದರೋಡೆಯಲ್ಲಿ ಪಾಲ್ಗೊಂಡಿರಲು ಸಾಧ್ಯವೇ?
-ಮುಂಬೈನಿಂದ ಓಡಿ ಬಂದು ಗುಲ್ಬರ್ಗದಲ್ಲಿ ನೆಲೆಯೂರಿದ್ದ ಮುನ್ನಾ ಭೂಗತ ಲೋಕದ ನಂಟಿರುವ ಆಸಾಮಿ ಎಂಬುದು ಗೊತ್ತಿದ್ದರೂ ಆತನ ವಿಚಾರಣೆಗೆ ತೆರಳುವ ಪೊಲೀಸರು ಅದ್ಯಾಕೆ ಸುಖಾಸುಮ್ಮನೆ ಹೋದರೋ?
- ಪಿಎಸ್‌ಐ ಮರಳಿ, ಹೇಮಂತ ಪಿಸ್ತೂಲ್ ಹೊಂದಿದ್ದರೆ, ಪಿಎಸ್‌ಐ ಬಂಡೆ ಮಫ್ತಿಯಲ್ಲಿ, ಅದೂ ಪಿಸ್ತೂಲ್ ಇಲ್ಲದೆ ಹೋದರೇಕೆ?
- ಮುನ್ನಾ ಭೂಗತ ಲೋಕದ ಪಾತಕಿ, ಶಾರ್ಪ ಶೂಟರ್ ಎಂಬುದರಿತರೂ ಆತನೇನು ಮಾಡುತ್ತಾನೆಂದು ಪಾತಕಿಯನ್ನು ಹಗುರವಾಗಿ ಪರಿಗಣಿಸಿದ್ದು ಹಾಗೂ ಹುಂಬಧೈರ್ಯ ಪ್ರದರ್ಶಿಸಿದ್ದೇ ಪೊಲೀಸರಿಗೆ ಮುಳುವಾಯ್ತೆ?
- ಪೊಲೀಸರ ದಾಳಿಯಲ್ಲಿ ಪೂರ್ವಸಿದ್ಧತೆ ಕೊರತೆ ಇತ್ತೆ? ಸಾಕಷ್ಟು ತಾಲೀಮು ಮಾಡದೆಯೇ ಅಖಾಡಕ್ಕೆ ಇಳಿದುದ್ದರ ಕೆಟ್ಟ ಪರಿಣಾಮ ಹೀಗಾಯ್ತೆ? ತರಾತುರಿಯಲ್ಲಿನ ದಾಳಿ ಲೋಪಗಳ ಸಂಗಮವಾಯ್ತೆ?
- ಪಾತಕಿ ಮುನ್ನಾ ರೋಜಾ ಠಾಣೆ ವ್ಯಾಪ್ತಿಯಲ್ಲಿದ್ದರೂ ಆತನ ಮೇಲೆ ನಿಗಾ ಇಡುವಲ್ಲಿ ಪೊಲೀಸರು ವಿಫಲವಾಗಿದ್ದೇ ಮುಳುವಾಯ್ತೆ? ಫೈನಾನ್ಸ್ ದರೋಡೆ ನಂತರವಷ್ಟೇ ಪೊಲೀಸರು ಆತನ ಚಲನವಲನದ ಮೇಲೆ ಚಿತ್ತ ಹರಿಸಿದ್ದರೆ?
-ಸಾಮಾನ್ಯವಾಗಿ ಶೂಟೌಟ್, ರೌಡಿ ನಿಗ್ರಹ ದಳದ ಪಕ್ಕಾ ಟೀಂ ವರ್ಕ್ ಆಗಿರುತ್ತದೆ. ಇಲ್ಯಾಕೆ ಅದು ಸಂಘಟಿತ ಕೆಲಸವಾಗದೆ ಹರಕು ಮುರುಕು ಕಾರ್ಯಾಚರಣೆಯಾಯ್ತ? ರೌಡಿ ವಿರೋಧಿ ಕಾರ್ಯಾಚರಣೆಗೆ ಮುಂದಾದ ತಂಡಕ್ಕೆ ಹಿರಿಯ ಅಧಿಕಾರಿಗಳಿಂದ ನಿರೀಕ್ಷಿತ ಬಲ- ಬೆಂಬಲ ಸಿಕ್ಕಿತ್ತೆ?
- ಫೈರಿಂಗ್ ಶುರುವಾದ ನಂತರ ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಯೊಬ್ಬರು ಮುನ್ನಾಗೆ ಜೀವಂತ  ಹಿಡಿಯಲು ಯತ್ನಿಸಿರಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದು ನಿಜವೆ?
- ಶೂಟೌಟ್ ನಂತರವಷ್ಟೆ ಹಿರಿಯ ಅಧಿಕಾರಿಗಳಿಗೆ ಮುನ್ನಾ ನಟೋರೀಯಸ್ ಎಂಬುದು ಗೊತ್ತಾಯ್ತಂತೆ! ಇದಕ್ಕಿಂತ ಬೇಜವಾಬ್ದಾರಿ ಇನ್ನೇನಿದೆ?
ಗುಲ್ಬರ್ಗ ಶೂಟೌಟ್ ಗುಪ್ತವಾರ್ತೆ ಆಧರಿತ ಬೆಳವಣಿಗೆ, ಇಲ್ಲಿ ತನಿಖೆ ಯಾಕೆ ಎಂದು ಘಟನೆ ನಡೆದ ಮಾರನೆ ದಿನವೇ ವಿಚಾರಣೆಗೆ ರೆಡ್ ಸಿಗ್ನಲ್ ತೋರಿಸಿದವರು ರಾಜ್ಯ ಎಡಿಜಿಪಿ (ಕಾನೂನು- ಸುವ್ಯವಸ್ಥೆ) ಎಂಎನ್ ರೆಡ್ಡಿ. ಇದಾದ ನಂತರ ಗೃಹ ಸಚಿವರಾದಿಯಾಗಿ ಎಲ್ಲರೂ ತನಿಖೆ ಅನಗತ್ಯ ಎಂದೇ ಹೇಳುತ್ತ ಹೋದರು.
ಇಡೀ ಪೊಲೀಸ್ ಇಲಾಖೆಯಲ್ಲೇ ಸಂಚಲನ ಮೂಡಿಸಿರುವ ಪ್ರಕರಣ ಇದು. ಅದರೊಡಲಲ್ಲಿ ಹುದುಗಿರುವ ಹತ್ತು ಹಲವು ನಿಗೂಢಗಳನ್ನು ಭೇದಿಸಲಾದರೂ ವಿಚಾರಣೆಗೊಳಪಡಲು ಎಲ್ಲಾ ರೀತಿಯಲ್ಲಿ ಗುಲ್ಬರ್ಗ ಶೂಟೌಟ್ ಅರ್ಹ ಪ್ರಕರಣವಾಗಿದ್ದರೂ ವಿಚಾರಣೆ ಯಾರಿಗೂ ಇಷ್ಟವಿಲ್ಲ ಎಂಬಂತಾಗಿದ್ದು ದುರಂತವಲ್ಲದೆ ಮತ್ತೇನು?
ಗೊಂದಲಮಯವಾದಂತಹ ಗುಂಡಿನ ಕಾಳಗಗಳಲ್ಲಿ ಸಾಮಾನ್ಯವಾಗಿ ನ್ಯಾಯಾಂಗ ತನಿಖೆ, ಸಿಓಡಿ ವಿಚಾರಣೆ ನಡೆಸಲಾಗುತ್ತದೆ. ಇಲ್ಲಿಯೂ ಇಂತಹದ್ದೆ ತನಿಖೆ ನಡೆಯಲಿ, ಸತ್ಯಾಸತ್ಯತೆ ಹೊರಬೀಳಲಿ ಎಂಬುದು ಜನರ ಆಗ್ರಹವಾಗಿತ್ತಾದರೂ ಸರ್ಕಾರ ಈ ವಿಚಾರದಲ್ಲಿ ಮುಗುಮ್ಮಾಗಿರುವುದು ನೋಡಿದರೆ ನಮ್ಮನ್ನಾಳುವವರಿಗೆ, ಪೊಲೀಸ್ ಇಲಾಖೆಗೆ ತನಿಖೆಯೇ ಬೇಡವಾದಂತಿದೆ.
ಶೂಟೌಟ್‌ನಲ್ಲಿ ಪಾತಕಿ ಮುನ್ನಾ ಸತ್ತ, ಆತನ ಗುಂಡಿಗೆ ಪಿಎಸ್‌ಐ ಬಂಡೆ ಹುತಾತ್ಮರಾದರು. ಹೀಗಾಗಿ ಇದನ್ನು ಎಲ್ಲ ಎನ್‌ಕೌಂಟರ್‌ಗಳಂತೆ ಮಾಮೂಲಿ ಎಂದು ಸುಮ್ಮನಿರಲಾಗದು. ಇದೊಂದು ಹಿಕ್ಮತ್ತಿನ ಚಕಮಕಿಯಾಗಿ ಪೊಲೀಸರ ಕೂದಲೆಳೆಯೂ ಕೊಂಕದೆ ಪಾತಕಿ ಸಾವನ್ನಪ್ಪಿದ್ದರೆ ಆ ಸಂದರ್ಭವೇ ಭಿನ್ನವಾಗಿರುತ್ತಿತ್ತು. ಆದರಿಲ್ಲಿ ಪಾತಕಿ ತಾನು ಸಾಯುವುದರ ಜೊತೆಗೇ ಪೊಲೀಸ್ ಅಧಿಕಾರಿಯ ಬಲಿ ಪಡೆದಿದ್ದಾನೆ.
ಅಷ್ಟೇ ಅಲ್ಲ, ಇಡೀ ಪೊಲೀಸ್ ಇಲಾಖೆಯ ನೈತಿಕತೆ, ಶಿಸ್ತಿನ ಸುತ್ತ ಹಲವು ಶಂಕೆಗಳು ಮೂಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಈ ಕಾಳಗದಲ್ಲಿ ಜಾತಿ- ಕೋಮಿನ ಕಮಟು ವಾಸನೆಯೂ ರಾಚುತ್ತಿರುವಾಗ ತನಿಖೆ ಮಾಡಿ ಇಲ್ಲದ ಉಸಾಬರಿ ಯಾಕೆ ಎಂದು ಹಲವರು ಚಿಂತಿಸಿದಂತಿದೆ. ಹೀಗಾಗಿ ಗುಲ್ಬರ್ಗ ಶೂಟೌಟ್ ಬೇರೆಲ್ಲ ಎನ್‌ಕೌಂಟರ್‌ಗಳಿಗಿಂತ ಸ್ವತಂತ್ರವಾಗಿ ವಿಚಾರಣೆ ನಡೆಸಿ ಸತ್ಯ ಬಯಲಿಗೆ ಎಳೆಯಲು ಹೆಚ್ಚು ಅರ್ಹ ಪ್ರಸಂಗವಾದರೂ ವಿಚಾರಣೆಗೊಳಪಡದಂತಾಗಿದೆ.
ಸತ್ಯ ಕೆಲವೊಮ್ಮೆ ಹಲವರಿಗೆ ಅಪ್ರಿಯವಾಗಿರುತ್ತದಂತೆ. ಗುಲ್ಬರ್ಗ ಶೂಟೌಟ್‌ನಲ್ಲಿಯೂ ವಿಚಾರಣೆಯಿಂದ ಇಂತಹದ್ದೇ ಅಪ್ರಿಯ ಸತ್ಯ ಹೊರಬಂದರೆ ಹೇಗೆ ಎಂಬ ಭಯವೇ?


- ಶೇಷಮೂರ್ತಿ ಅವಧಾನಿ
ಕನ್ನಡಪ್ರಭ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement