ಅಷ್ಟಕ್ಕೂ ಡಬ್ಬಿಂಗ್ ಬೇಕಿರುವುದು ಯಾರಿಗೆ?
ಡಬ್ಬಿಂಗ್ ವಿರೋಧಿ ಬಣಗಳು ಕೊಡುವ ಕಾರಣ ಕೇವಲ ಅವರ ಮೂಗಿನ ನೇರಕ್ಕಿದ್ದು...
ಡಬ್ಬಿಂಗ್ ವಿರೋಧಿ ಬಣಗಳು ಕೊಡುವ ಕಾರಣ ಕೇವಲ ಅವರ ಮೂಗಿನ ನೇರಕ್ಕಿದ್ದು ಅಲ್ಲೇನೂ ಕನ್ನಡ ಕಲಾವಿದರ, ಕನ್ನಡ ಚಿತ್ರರಂಗದವರ, ಕಿರುತೆರೆಯವರ ಉದ್ಯೋಗ, ಉದರ ಪೋಷಣೆ, ಅಭಿವೃದ್ಧಿ, ಆ ಮೂಲಕ ಕನ್ನಡ ಕಲೆ ಸಂಸ್ಕೃತಿಯನ್ನು ಜೀವಂತವಾಗಿ ಉಳಿಸಿ ಬೆಳೆಸುವ ಕಾಳಜಿ-ಪ್ರೀತಿ ಕಾಣಿಸುತ್ತಿಲ್ಲವೆಂದೇ ಆರೋಪಿಸಬೇಕಾಗಿದೆ. ಬಹಳ ವರ್ಷಗಳ ಹಿಂದೆಯೇ ನಮ್ಮಲ್ಲಿ ಡಬ್ಬಿಂಗ್ ಸಿನಿಮಾಗಳು ದಾಳಿಯಿಟ್ಟದ್ದುಂಟು. 'ಮಾಯಾಬಜಾರ್', 'ಜಗದೇಕವೀರನಿ ಕಥಾ'ದಂತಹ ತೆಲುಗು ಸಿನಿಮಾಗಳು ಅಸಹ್ಯವಾಗಿ ಕನ್ನಡವನ್ನು ತೆಲುಗು ಕಲಾವಿದರ ಬಾಯಲ್ಲಿ ಉದುರಿಸುತ್ತಾ ಬಂದಾಗ ಆಗತಾನೆ ತಲೆ ಎತ್ತುತ್ತಿದ್ದ ಕನ್ನಡ ಚಿತ್ರರಂಗದ ಶ್ರೇಯಸ್ಸಿಗಾಗಿ ಡಾ. ರಾಜ್ಕುಮಾರ್, ಅನಕೃ, ಮ.ರಾಮಮೂರ್ತಿ, ವಾಟಾಳ್ರಂಥವರು ಧ್ವನಿ ಎತ್ತಿ ಪ್ರತಿಭಟಿಸಿದ್ದರಿಂದ ಡಬ್ಬಿಂಗ್ ಪೀಡೆ ತೊಲಗಿತ್ತು. ಹೋದೆಯಾ ಪಿಶಾಚಿಯೆಂದರೆ ಬಂದೆ ಗವಾಕ್ಷೀಲಿ ಎಂಬಂತೆ ಕೆಲವು ಕನ್ನಡ ನಿರ್ಮಾಪಕರೇ ತೆಲುಗಿನ ಡಬ್ಬಾ ಸಿನಿಮಾಗಳ ಡಬ್ಬಗಳನ್ನು ಕೋಟಿಗಟ್ಟಲೆ ಸುರಿದುಕೊಂಡು ಶೇಖರಿಸಿಟ್ಟು ಸರದಿ ಸದಾವಕಾಶಕ್ಕಾಗಿ ತುದಿಗಾಲಲ್ಲಿ ನಿಂತಿದ್ದಾರೆ. ಇವರ ವ್ಯವಹಾರಿಕ ಮನಸ್ಥಿತಿಂತೆಯೇ ಡಬ್ಬಿಂಗ್ ಬೇಕು ಎನ್ನುತ್ತಿರುವ ಕೆಲವೇ ಕೆಲವು ಕನ್ನಡ ಮಣಿಗಳ ಮನೋವ್ಯಾಧಿ ಮಾತ್ರ ಅರ್ಥವಾಗದ್ದೇನಲ್ಲ. ರಾಜಕುಮಾರರ ಕಾಲದಲ್ಲಿ ಇದ್ದ ಸ್ಥಿತಿ ಈಗಿಲ್ಲ. ಚಿತ್ರರಂಗ ಬೆಳೆಯಲು ಇನ್ನೂ ಎಷ್ಟು ವರ್ಷ ಬೇಕು? ಅದು ತನ್ನ ಕಾಲ ಮೇಲೆ ತಾನು ಏಕೆ ಈವರೆಗೆ ನಿಂತಿಲ್ಲ? ಕನ್ನಡ ಚಿತ್ರಗಳೂ ಇತರೆ ಭಾಷೆಗೆ ಡಬ್ ಆಗುತ್ತಿಲ್ಲವೇ? ಎಂದೆಲ್ಲಾ ದಬಾಯಿಸುವವರು ಉದಾರ ಮನಸ್ಸಿನಿಂದ ಯೋಚಿಸುವ ಅಗತ್ಯವಿದೆ. ನಮ್ಮವರು ತೆಲುಗು ತಮಿಳು, ಮಲೆಯಾಳಿ, ಹಿಂದಿ, ಇಂಗ್ಲಿಷ್ ಇತ್ಯಾದಿ ಚಿತ್ರಗಳ ಪೈಪೋಟಿ ನಡುವೆಯೇ ಸುಪುಷ್ಟವಾಗಿ ಬೆಳೆದಿದ್ದಾರೆಂದರೆ ಅದು ತಮ್ಮ ನಟನಾ ಕೌಶಲ್ಯ, ಆತ್ಮವಿಶ್ವಾಸ ಮತ್ತು ಸ್ವಂತಿಕೆಯಿಂದ ಮಾತ್ರ. ಯಾವ ಅನ್ಯ ಭಾಷಾ ಪ್ರೇಕ್ಷಕರ ಪ್ರೋತ್ಸಾಹದಿಂದಲ್ಲವೇ ಅಲ್ಲ. ಬೇರೆ ಭಾಷಿಗರ ಅದ್ಧೂರಿತನ ತಾಜಾತನ ಆಡಂಬರ ಅಬ್ಬರದ ಪ್ರಚಾರದ ನಡುವೆಯೂ ಬಡ ಕನ್ನಡ ಚಿತ್ರರಂಗ ಪೈಪೋಟಿ ಕೊಡುತ್ತಲೇ ತನ್ನತನವನ್ನು, ತನ್ನನ್ನೂ ಕಾಪಾಡಿಕೊಂಡು ಕಮರ್ಶಿಯಲ್ಲಾಗಿಯೂ ಕಲಾತ್ಮಕವಾಗಿಯೂ ಪರಭಾಷಾ ಚಿತ್ರಗಳಿಗೆ ಸಡ್ಡು ಹೊಡೆಯುತ್ತಿದೆಯೆಂದರೆ ಕನ್ನಡಿಗರು ಖಂಡಿತ ಮೀಸೆ ಹುರಿಗೊಳಿಸಲೇಬೇಕು. ಏಕೆಂದರೆ ಇಂತಹ ಪೈಪೋಟಿ ಬೇರೆ ಯಾವ ಭಾಷೆಯ ಚಲನಚಿತ್ರಗಳಿಗೆ ಪೀಡೆಯಂತೆ ಕಾಡುತ್ತಿದೆ ಹೇಳಿ? ಇರಲಿ, ಅಸೂಯೆ ಪಡುವ ಜಾಯಮಾನವಂತೂ ನಮ್ಮದಲ್ಲ. ಇಲ್ಲದಿದ್ದರೆ ಬೇರೆ ರಾಜ್ಯಗಳಲ್ಲಿ ನಮ್ಮ ಚಿತ್ರಗಳು ಕನಿಷ್ಟ ಬೆಳಗಿನ ಆಟಗಳಲ್ಲೂ ಓಡದಿರುವಾಗ ನಾವೇಕೆ ಅವುಗಳನ್ನು ಪ್ರದರ್ಶಿಸಬೇಕಿತ್ತು? ಆ ಚಿತ್ರಗಳ ಪ್ರದರ್ಶನವನ್ನೇ ರದ್ದುಗೊಳಿಸಬೇಕೆಂಬ ಚಳವಳಿಯನ್ನೂ ಡಾ.ರಾಜ್ ಕಾಲದಲ್ಲಿ ಹೂಡಿದ್ದರೆ ಗೆಲುವು ನಮ್ಮದಾಗುತ್ತಿರಲಿಲ್ಲವೇ? ಆದರೆ ಅಂತಹ ಸಣ್ಣತನ ರಾಜ್ ಮತ್ತು ಕನ್ನಡಿಗರಿಗೆ ಇರಲಿಲ್ಲ. ಡಬ್ಬಿಂಗ್ ಅನ್ನು ವಿರೋಧಿಸಿದ್ದಕ್ಕೆ ಕಾರಣ ನಮ್ಮವರ ತುತ್ತಿಗೆ ಕಲ್ಲು ಬೀಳುತ್ತದೆಂಬ ಸಹಜ ಭಯ. ಅದು ನಿಜ ಕೂಡ. ಕೆಲವು ತಂತ್ರಜ್ಞರಿಗೆ, ಡಬ್ಬಿಂಗ್ ಕಲಾವಿದರಿಗೆ, ಸಾಹಿತಿಗಳಿಗೆ, ಸ್ಟುಡಿಯೋಗಳಿಗೆ ಡಬ್ಬಿಂಗ್ನಿಂದ ಅನುಕೂಲವಾಗಬಹುದು. ಆದರೆ ಕಲಾವಿದರು, ಕ್ಯಾಮರಾಮೆನ್, ನಿರ್ದೇಶಕರು, ಅಪ್ಪಟ ಸಾಹಿತಿಗಳು, ನಿರ್ಮಾಪಕರು, ಕಲಾ ನಿರ್ದೇಶಕರು ಸಂಗೀತ ನಿರ್ದೇಶಕರು, ಕನ್ನಡ ಕಾರ್ಮಿಕರ ಒಕ್ಕೂಟ ಹೀಗೆ ನೂರಾರು ಸಂಖ್ಯೆಯಲ್ಲಿ ಜನರು ಮೂಲೆಗೆ ಬಿದ್ದು ತುತ್ತು ಅನ್ನಕ್ಕಾಗಿ ಭಿಕ್ಷೆ ಬೇಡಬೇಕಾದೀತು. ಏಕೆಂದರೆ ಅನೇಕರಿಗೆ ಸಿನಿಮಾ ನಟನೆ ಬಿಟ್ಟರೆ ಬೇರೆ ಕಸುಬು ಗೊತ್ತಿಲ್ಲ. ಈಗಲೂ ಯಾವ ರಾಜ್ಯದವರು ನಮ್ಮ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದಾರೆ, ವೀಕ್ಷಿಸುತ್ತಿದ್ದಾರೆ ಹೇಳಿ? ನಮಗಿರುವುದು ಕೇವಲ ನಮ್ಮದೇ ಮಾರುಕಟ್ಟೆ, ಪರಭಾಷಿಗರೂ ಅದರಲ್ಲಿಯೇ ಪಾಲು ಪಡೆದು ನಮಗಿಂತಲೂ ಹೆಚ್ಚು ಸಂಪಾದಿಸುತ್ತಿರುವುದನ್ನು ನೋಡಿ ಹೊಟ್ಟೆ ಉರಿದರೂ ಸೌಹಾರ್ದತೆ, ಕಾನೂನು, ಸಂವಿಧಾನ ಅಂತ ಅನುಸರಿಸಿಕೊಂಡು ದಿನದೂಡುತ್ತಿಲ್ಲವೆ? ನಮ್ಮ ಈ ತಾಳ್ಮೆ ತಮಿಳು, ತೆಲುಗರಿಗಿದೆಯೇ? ಹಿಂದಿ ಚಿತ್ರರಂಗದವರಿಗಿದೆಯೇ?
ನಮ್ಮ ಮಕ್ಕಳು ಕಾರ್ಟೂನ್, ನ್ಯಾಷನಲ್ ಜಿಯಾಗ್ರಫಿ, ಡಿಸ್ಕವರಿಯಂತಹ ಚಾನೆಲ್ಗಳನ್ನು ತಮ್ಮ ಭಾಷೆಯಲ್ಲೇ ನೋಡದೆ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ! ನೋಡಿದರೇನೇ ಅರ್ಥವಾಗುವಂತಹ, ಆಗಾಗ ಒಂದೆರಡು ಡೈಲಾಗ್ಗಳಿರುವ ಅವನ್ನು ಭಾಷೆಯ ಹಂಗಿಲ್ಲದೆಯೇ ಆರಾಮವಾಗಿ ನೋಡಬಹುದು. ನಮ್ಮ ಮಕ್ಕಳೇ ಯಾರೂ ಇಲ್ಲಿತನಕ ಈ ಪ್ರಶ್ನೆ ಎತ್ತೇ ಇಲ್ಲವೆ?! ಅವರಿಗೆ ಪಾಠ ಪ್ರವಚನ, ಟ್ಯೂಷನ್ಗಳಿಗೆ ಸಮಯ ಒದಗಿಸಲಾಗುತ್ತಿಲ್ಲ, ಸಮಯ ಸಿಕ್ಕಾಗ ಅವರು ಹೆಚ್ಚಾಗಿ ಪುನೀತ್, ಶಾರುಖ್, ಗಣೇಶ್ ಚಿತ್ರಗಳನ್ನು ಆಸೆಪಟ್ಟು ನೋಡುತ್ತಾರೆಂಬುದು ಅಪ್ರಿಯ ಸತ್ಯ. ಈ ಪ್ರಶ್ನೆಗಾದರೂ ಉತ್ತರ ಕೊಡುತ್ತೀರಾ? ನಮ್ಮಲ್ಲಿ ಬರುವ ಅನೇಕ ಮಕ್ಕಳ ಚಿತ್ರವನ್ನು ಅದೆಷ್ಟು ಸಾವಿರ ಮಕ್ಕಳು ಪೋಷಕರು ಥಿಯೇಟರಿಗೇ ಹೋಗಿ ನೋಡಿ ನೂರಾರು ದಿನ ಓಡಿಸಿದ್ದಾರೆ?
ಇನ್ನು ಪರಭಾಷಿಕರನ್ನು ತಂದು ಕುಣಿಸುತ್ತಾರೆಂದು ಅಪಾದಿಸುವುದೊಂದು ಫ್ಯಾಷನ್ ಆಗಿಬಿಟ್ಟಿದೆ. ಅವರೆಲ್ಲಾ ಹಾಗೆ ಬಂದು ಹೀಗೆ ಹೋಗುತ್ತಾರೆ. ಇಲ್ಲಿ ಗಟ್ಟಿಯಾಗಿ ತಳ ಊರಿರುವವರು ನಮ್ಮವರೇ ಆದ ರಮ್ಯ, ಶ್ರುತಿ, ರಾಧಿಕಾಪಂಡಿತ್, ನಿಧಿಸುಬ್ಬಯ್ಯ, ದೀಪಾ ಸನ್ನಿಧಿ, ನಮ್ಮವರೇ ಆಗಿ ಉಳಿದಿರುವ ಪೂಜಾಗಾಂಧಿ ಇತ್ಯಾದಿ ಇತ್ಯಾದಿ. ಬಹಳ ಮುಖ್ಯವಾಗಿ ನಮ್ಮವರು ಬಹುಭಾಷಾ ಪರಿಣಿತಮತಿಗಳ್! ಹಲವು ಭಾಷಾ ಚಿತ್ರಗಳನ್ನು ಆಯಾ ಭಾಷೆಗಳಲ್ಲೇ ನೋಡಿ 25 ವಾರಗಳಷ್ಟು ಓಡಿಸಬಲ್ಲ ಚತುರಮತಿ, ಉದಾರಿಗಳು. ಹೀಗಿರುವಾಗ ನಮಗೇಕೆ ಡಬ್ಬಿಂಗ್ ಚಿತ್ರಗಳು ಬೇಕೆಂಬ ಹಠ? ನಮ್ಮವರು ಮೂಲ ಚಿತ್ರಗಳನ್ನೇ ಕನ್ನಡ ಚಿತ್ರಗಳಿಗಿಂತಲೂ ಹೆಚ್ಚು ನೋಡಿ ಆಸ್ವಾಧಿಸುತ್ತಿರುವಾಗ ಡಬ್ಬಿಂಗ್ ಚಿಂತೆ ನಿಮಗೇಕೆ ಸ್ವಾಮಿ? ಮಕ್ಕಳಾಗಲಿ ಗ್ರಾಮೀಣ ಪ್ರದೇಶದ ಜನರಾಗಲಿ ನ್ಯಾಶನಲ್ ಜಿಯಾಗ್ರಫಿಯನ್ನು ಕನ್ನಡದಲ್ಲೇ ನೋಡಬೇಕು, ಸತ್ಯ ಮೇವ ಜಯತೆ, ಅವತಾರ್ ಅನ್ನು ಕನ್ನಡದಲ್ಲೇ ನೋಡಬೇಕೆಂದು ಹಪಾಹಪಿಸುತ್ತಲೂ ಇಲ್ಲ. ಇವೆಲ್ಲಾ ನಗರದ ಹೈಟೆಕ್ ಮಂದಿ ಕೀಟಲೆಯಷ್ಟೆ. ಹಾಗಿದ್ದಿದ್ದರೆ ಅತೃಪ್ತರೆಲ್ಲಾ ಸೇರಿ ಧರಣಿಯನ್ನೋ, ಅಕ್ಷರ ಚಳವಳಿಯನ್ನೋ ಈಗಾಗಲೇ ಹೂಡಬೇಕಿತ್ತಲ್ಲವೆ?
ಇನ್ನು ಸಾಹಿತ್ಯದಲ್ಲಿ ಅನುವಾದ ನಡೆಯುವುದು ವ್ಯವಹಾರಕ್ಕಲ್ಲ. ಆದರೆ ಸಿನಿಮಾ ಇವತ್ತು ವ್ಯಾಪಾರೀಕರಣವಾಗಿದೆ. ಗೊಂಬೆ ಆಡಿಸುವ ಅಂಬರೀಷ್, ಲೈಫ್ ಇಷ್ಟೇನೇ ಎಂಬ ತೀರ್ಮಾನಕ್ಕೆ ಬಂದಿರುವ ಭಟ್ಟರು, ಯಾರೇ ಕೂಗಾಡಲಿ ರಿಮೇಕೆ ಉಸಿರಾಡಲಿ ಅನ್ನುವ ಪುನೀತ್, ಕಚ್ಚಾಸಡಾ, ಎಬಡ ತಬಡ ಎಂದು ಕುಣಿವ ದರ್ಶನ್, ಹುಚ್ಚ ಸುದೀಪ್...ಇವರ್ಯಾರಿಗೂ ಹೊಣೆಗಾರಿಕೆಯೂ ಇಲ್ಲ, ಕಾಳಜಿಯೂ ಇದ್ದಂತಿಲ್ಲ. ಕನ್ನಡಿಗನಿಗೆ ಎಲ್ಲಾ ಕಾರ್ಯಕ್ರಮಗಳನ್ನು ಕನ್ನಡದಲ್ಲಿಯೇ ನೋಡುವ ಹಕ್ಕು ಇದೆ ನಿಜ. ಅದನ್ನು ಯಾರೂ ಅಲ್ಲಗಳೆಯಲಾರರು. ಡಬ್ಬಿಂಗ್ ನಮ್ಮ ಜನ್ಮಸಿದ್ದ ಹಕ್ಕು ಎಂಬುದು ಮಾತ್ರ ವಿತಂಡವಾದ. ಡಬ್ಬಿಂಗ್ ಅನ್ನು ಕಾನೂನಾತ್ಮಕವಾಗಿ ನೋಡದೇ ಭಾವನಾತ್ಮಕವಾಗಿ ನೋಡುವ ಅಗತ್ಯವಿದೆ. ಡಬ್ಬಿಂಗ್ ಸಿನಿಮಾ ನೋಡಿ ಕೊಳಕು ಕನ್ನಡ ಕಲಿತು ಕಾನ್ವೆಂಟ್ ಇಂಗ್ಲಿಷ್ ಸ್ಪೀಕ್ ಮಾಡಿ ಮಾತನಾಡಿದರೂ ಕನ್ನಡ ಅಳಿಯುವುದಿಲ್ಲ ಎನ್ನುವ ಭಾಷಾತಜ್ಞರ ಬಗ್ಗೆ ಮರುಕಪಡೋಣ. ಡಬ್ಬಿಂಗ್ ಇರುವ ತಮಿಳು, ತೆಲುಗು, ಹಿಂದಿ, ಮರಾಠಿ, ಮಲೆಯಾಳಿಗರ ಸಂಸ್ಕೃತಿಗಳೆಲ್ಲಾ ಇಷ್ಟು ಹೊತ್ತಿಗೆ ನಶಿಸಿ ಹೋಗಬೆಕಿತ್ತಲ್ಲವೆ ಎಂಬ ವಾದವಿದೆ. ಅಲ್ಲಿನವರೆಗೆ ತಮ್ಮ ಭಾಷೆ, ಸಂಸ್ಕೃತಿಯ ಮೇಲಿರುವಷ್ಟು ಒಲವು ನಮ್ಮವರಿಗೆ ಕನ್ನಡದ ಮೇಲಿದೆಯೇ? ಇಲ್ಲ ಎನ್ನಲು ಡಬ್ಬಿಂಗ್ ಪರ ವಾದಿಸುವ ಗಿರಾಕಿಗಳೇ ಸಾಕ್ಷಿ.
ಇವರು ಸುಮ್ಮನೇ ಕೂಡದೇ, ಕೊಡಗಿನಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಚಿತ್ರರಂಗದವರು ಭಾಗವಹಿಸಲಿಲ್ಲವೆಂದು ತಿಪ್ಪೆ ಕೆದಕುತ್ತಾರೆ. ಚಿತ್ರರಂಗದವರಿಗೆ ಆಹ್ವಾನ ನೀಡುವುದೂ ವಿರಳ. ಸಾಹಿತ್ಯದ ಪ್ರಭೃತಿಗಳಿಗೆ ಸಿನಿಮಾದವರೆಂದರೇನೇ ಅಲರ್ಜಿ. ಸಿನಿಮಾ ನಟರ ಉಪಸ್ಥಿತಿ ಇದ್ದರೆ ಸಾಹಿತಿಗಳನ್ನು ಕೇಳೋರು ಯಾರು? ಸಿನಿಮಾ ನಟರು ಭಾಗವಹಿಸುವುದರಿಂದ ಸಾಹಿತ್ಯ ಸಮಾರಂಭ ಗೊಂದಲದ ಗೂಡಾಗುವುದೆಂಬ ಸತ್ಯದ ಅರಿವಿದ್ದೂ ಮಾತನಾಡುವುದು ತರವಲ್ಲ. ಡಾ.ರಾಜ್, ಡಾ. ವಿಷ್ಣು ಅವರ ಸಾವಿನ ಸಮಯದಲ್ಲಿ ಯಾವ ಸಾಹಿತ್ಯವರೇಣ್ಯರು ಭಾಗವಹಿಸಿದ್ದರಪ್ಪ? ಉತ್ತರ ಕರ್ನಾಟಕ ಇಬ್ಭಾಗದ ವಿಷಯವಾಗಲಿ, ಕೃಷ್ಣ ನ್ಯಾಯಾಧೀಕರಣದ ವಿರುದ್ಧ, ಬೆಳಗಾವಿ ನಮ್ಮದೆಂಬ ಬಗ್ಗೆ ನಿರುದ್ಯೋಗ ಸಮಸ್ಯೆ ಕುರಿತು ಸಿನಿಮಾನಟರು ಅವರ ಸಿನಿಮಾಗಳ ಮೂಲಕ ಮಾತನಾಡಿದ್ದಾರೆ. ಎಚ್ಚರಿಸುತ್ತಿರುತ್ತಾರೆ. ಡೈಲಾಗ್ ಹೊಡೆಯುತ್ತಾರೆಂಬ ಅಣಕದ ಮಾತಿಗೆ ಬಂದರೆ, ತಮ್ಮ ಮೊಮ್ಮಕ್ಕಳನ್ನು ಇಂಗ್ಲೀಷ್ ಶಾಲೆಗಳಿಗೆ ಕಳುಹಿಸುವ ಸಾಹಿತಿಗಳ ಬರಹಗಳನ್ನು ಅನುಮಾನಿಸಬೇಕಾಗುತ್ತದಲ್ಲವೆ?
ಬಹುರಾಷ್ಟ್ರೀಯ ಕಂಪನಿಗಳಿಗೆ ಲಾಭ ಮಾಡಿಕೊಡಲೋಸುಗ ಕನ್ನಡ ಚಿತ್ರರಂಗವನ್ನು ಡಬ್ಬಿಂಗ್ ಕಣಕ್ಕೊಡುವುದು ಯಾವ ನ್ಯಾಯ? ಎಲ್ಲಾ ಭಾಷೆಯಲ್ಲೂ ಮಚ್ಚು, ಲಾಂಗ್, ಕುಣಿತಗಳೇ ವಿಜೃಂಭಿಸುತ್ತಿರುವಾಗ ಇವುಗಳನ್ನು ಡಬ್ ಮಾಡಬೇಕೇಕೆ? ಪ್ರಶಸ್ತಿ ವಿಜೇತ ಚಿತ್ರಗಳನ್ನು ಬೇಕಾದರೆ ಮಾಡಲಿ ಎನ್ನೋಣವೆಂದರೆ ಎಷ್ಟು ಜನ ನಮ್ಮ ಭಾಷೆಯ ಅವಾರ್ಡ್ ಚಿತ್ರಗಳನ್ನು ನೋಡುತ್ತಾರಪ್ಪ? ಕನ್ನಡ ನಟರಿಗೆ ಕೋಟಿಗಟ್ಟಲೆ ಹಣ ಕೊಡುವುದು ನಿರ್ಮಾಪಕರದ್ದೇ ತಪ್ಪು. ನಂತರ ಕೋಟಿಗಟ್ಟಲೆ ದುಡಿದುಕೊಳ್ಳುವ ಅವರೇ ದೂರುವುದು ಕೈಲಾಗದವನು ಮೈ ಪರಚಿಕೊಂಡಂತಷ್ಟೆ. ನಮ್ಮಲ್ಲಿ ನೂರು ಚಿತ್ರಗಳು ಬಂದರೂ 10 ರಿಂದ 15 ಒಳ್ಳೆ ಚಿತ್ರಗಳಾದರೂ ಬರುತ್ತವೆ. ಬೇರೆ ಭಾಷೆಗಳಲ್ಲಿ ಒಳ್ಳೇ ಚಿತ್ರಗಳಿಗೇ ಬರ. ಬರೀ ಅಬ್ಬರವೆಂಬ ಸತ್ಯ ನಮ್ಮವರಿಗೆ ತಿಳಿಯದ್ದೇನಲ್ಲ. ಆದರೂ ಕನ್ನಡ ಚಿತ್ರರಂಗದ ಬಗ್ಗೆ ವಿನಾಕಾರಣ ದ್ವೇಷ ಕಾರುತ್ತಿರುವವರೊಡನೆ ನ್ಯೂಸ್ ಚಾನಲ್ನವರೂ ಸ್ಪರ್ಧೆಗಿಳಿದುಬಿಟ್ಟಿದ್ದಾರೆ. ಪರಭಾಷಾ ನಟರನ್ನು, ಚಿತ್ರಗಳನ್ನು ಇವರುಗಳು ಹಾಡಿ ಹೊಗಳುವ ಔದಾರ್ಯ ಅತಿಯಾಯಿತಲ್ಲವೆ?
ನಮ್ಮ ಕರ್ನಾಟಕ ಬಹುಭಾಷಾ ಸಂಸ್ಕೃತಿ ಸದಾಚಾರ ವೇಷಭೂಷಣ ಸಂಪ್ರದಾಯಗಳ ತಾಣವೆಂಬುದು ಹೆಮ್ಮೆಯ ಸಂಗತಿ. ಇಲ್ಲಿ ಸರ್ವರಿಗೂ ಬಾಳಿಬದಕಲು ಉದ್ಯೋಗ ವ್ಯಾಪಾರ ವ್ಯವಹಾರ ನಡೆಸಲು ತಮ್ಮ ತಮ್ಮ ಭಾಷೆಗಳಲ್ಲೇ ನಿತ್ಯ ವ್ಯವಹರಿಸಲು ಮುಕ್ತ ಅವಕಾಶವಿದೆ. ಅವರಿಗೆ ನಮ್ಮ ಭಾಷೆ ಗೊತ್ತಿಲ್ಲದಿದ್ದರೇನಂತೆ ನಾವೇ ಅವರದ್ದೇ ಭಾಷೆಗಳಲ್ಲಿ ವ್ಯವಹರಿಸುವಷ್ಟು ಕಡುಜಾಣರು. ನಮಗೆ ಕುಡಿಯಲು ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತೇವೆ. ಕಾನೂನಿಗಿಂತ ಬೆಳಗಾವಿ ನಮ್ಮದು ಅನ್ನುವ ಎಂ.ಇ.ಎಸ್. ಪ್ರತಿನಿಧಿಗಳನ್ನೇ ಗೆಲ್ಲಿಸಿ ಬಿಡುತ್ತೇವೆ. ಭಾಷೆ, ನೆಲ, ಜಲದ ಬಗ್ಗೆಯೇ ತಲೆ ಕೆಡಿಸಿಕೊಳ್ಳದ ನಮ್ಮವರು ಡಬ್ಬಿಂಗ್ ಇರಲಿ ಎಂಬುದರಲ್ಲಿ ಅಚ್ಚರಿಯೇನಿಲ್ಲ ಬಿಡಿ. ಪರಭಾಷೆಯವರಿಗೆ ಮಣೆ ಹಾಕುತ್ತಾ ಹಾಕುತ್ತಾ ನಿಧಾನವಾಗಿ ನಮ್ಮ ನುಡಿಯ ಅಂತ್ಯಕ್ಕೆ ನಾವೇ ಮುನ್ನುಡಿ ಬರೆಯುತ್ತೇವೆ. ಔದಾರ್ಯವೆಂದರೆ ಹಾಗೆಯೇ!
- ಡಾ. ಬಿ.ಎಲ್. ವೇಣು
ಸಾಹಿತಿ