ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಚಾಮರಾಜನಗರದಲ್ಲಿನ ಹೂಡಿಕೆ ಫಲಪ್ರದವಾಗಬೇಕೆಂದರೆ...

ಹಿಂದುಳಿದ ಮತ್ತು ಗಡಿ ಜಿಲ್ಲೆಯಾದ ಚಾಮರಾಜನಗರ ಪ್ರದೇಶವನ್ನು ರಾಜ್ಯದ ಪ್ರಮುಖ ಹೂಡಿಕೆ ತಾಣವಾಗಿಸುವ ನಿಟ್ಟಿನಲ್ಲಿ ಕರ್ನಾಟಕ ...

Rashmi Kasaragodu
Updated On : 25 Jan 2014, 1:16 am

ಹಿಂದುಳಿದ ಮತ್ತು ಗಡಿ ಜಿಲ್ಲೆಯಾದ ಚಾಮರಾಜನಗರ ಪ್ರದೇಶವನ್ನು ರಾಜ್ಯದ ಪ್ರಮುಖ ಹೂಡಿಕೆ ತಾಣವಾಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಹೆಜ್ಜೆ ಅಭಿನಂದನಾರ್ಹ. ಆ ಪ್ರದೇಶದಲ್ಲಿರುವ ಅವಕಾಶಗಳನ್ನು ಒಂದು ವೈಜ್ಞಾನಿಕ ಸಮೀಕ್ಷೆಯ ಮೂಲಕ ಪರೀಕ್ಷಿಸಿದ್ದೇ ಆದರೆ ಇಂಥ ಯೋಜನೆಗಳು ಬಹಳಷ್ಟು ಪರಿಣಾಮಕಾರಿಯಾಗಬಲ್ಲವು ಎಂಬುದರಲ್ಲಿ ಸಂಶಯವಿಲ್ಲ. ಈಗ ಅಂದಾಜು ಮಾಡಲಾಗಿರುವ ಸುಮಾರು 12000 ಕೋಟಿ ರುಪಾಯಿ ಮೊತ್ತದ ಹೂಡಿಕೆ ನಿಜಕ್ಕೂ ಫಲ ನೀಡುತ್ತದೆ ಎಂಬುದು ಕೃಷಿ ವಿಜ್ಞಾನಿಗಳ ಅನಿಸಿಕೆಯೂ ಆಗಿದೆ. ಅದೇ ಜಿಲ್ಲೆಯವನಾಗಿದ್ದು ಓರ್ವ ಕೃಷಿವಿಜ್ಞಾನಿಯಾಗಿ ಸೇವೆ ಸಲ್ಲಿಸಿರುವ ನಾನು ಇಲ್ಲಿ ಒಂದೆರಡು ಸಲಹೆ ನೀಡುವುದು ಸೂಕ್ತವೆಂಬ ನನ್ನ ಅನಿಸಿಕೆಯನ್ನು ಸರ್ಕಾರದ ಮುಂದಿಡುವ ಪ್ರಯತ್ನ ಮಾಡುತ್ತೇನೆ...
ಕೆಲವೇ ದಿನಗಳ ಹಿಂದೆ ಚಾಮರಾಜನಗರದಲ್ಲಿ ನಡೆದ ಒಂದು ಸಮಾರಂಭದಲ್ಲಿ ಈ ಅನಿಸಿಕೆಗಳನ್ನು ಅಲ್ಲಿನ ನಾಗರಿಕರ ಜೊತೆ ಹಂಚಿಕೊಳ್ಳುವ ಅವಕಾಶ ನನಗೆ ದೊರೆಕಿತ್ತು.  ಪ್ರೊ.ಬಿ.ಜೆ. ನಂಜುಂಡಪ್ಪ ವರದಿ ಪ್ರಕಾರ ಬಹಳ ಹಿಂದುಳಿದ ಚಾಮರಾಜನಗರ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಗಮನ ಕೊಡಬೇಕಾಗಿದೆ ಎಂಬುದನ್ನು ಯಾರೇ ಆಗಲಿ ಒಪ್ಪಿಯಾರು. ಈಗತಾನೇ ವಿಶೇಷ ಸ್ಥಾನ ಮಾನ ದೊರಕಿರುವ ಹೈದರಾಬಾದ್ ಪ್ರದೇಶಕ್ಕೆ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿರುವುದು ಸಮಾಧಾನಕರ ಸಂಗತಿ. ಚಾಮರಾಜನಗರದ ಕಡೆ ಸರ್ಕಾರದ ಗಮನ ಸೆಳೆಯುವುದು ಹೇಗೆ ಎಂದು ಯೋಚಿಸುತ್ತಿದ್ದಂತೆಯೇ ಮುಖ್ಯಮಂತ್ರಿಗಳು ಅಲ್ಲಿಗೆ ಭೇಟಿಯಿತ್ತದ್ದು ಒಂದು ಆಶಾಕಿರಣ ಮೂಡಿಸುವಂತಾಗಿದ್ದು, ಈಗ ಸರ್ಕಾರ ಘೋಷಿಸಿರುವ ಯೋಜನೆಯನ್ನು ನೋಡಿದರೆ  ಆ ಭಾಗದ ಜನರಿಗೆ ಏನೋ ಶುಕ್ರದೆಶೆ ತಿರುಗಿದಂತೆ ಕಂಡುಬರುತ್ತಿದೆ. ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಇದೀಗ  ನಿಧಾನವಾಗಿಯಾದರೂ ಕೇಂದ್ರ ವಿಶ್ವವಿದ್ಯಾಲಯ (Traditional University)ಸ್ಥಾಪನೆಯಾಗಿ ಕಾರ್ಯಾಚರಣೆಯಲ್ಲಿರುವುದು ಸಂತಸದ ವಿಷಯ. ಆದರೆ ಅಷ್ಟೇ ಹಿಂದುಳಿದಿರುವ ಚಾಮರಾಜನಗರದ ಬಗ್ಗೆ ಯೋಚಿಸುತ್ತಾ ಕುಳಿತಾಗ ಒಂದು ಆಶಾಕಿರಣ ಮೂಡಿತು. 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿ ಶಿಕ್ಷಣ ಮತ್ತು ಸಂಶೋಧನೆಗೆಂದೇ ಮೂರು ಕೇಂದ್ರ ಕೃಷಿ ವಿಶ್ವವಿದ್ಯಾಲಯಗಳ ಸ್ಥಾಪನೆ ಕೇಂದ್ರ ಸರ್ಕಾರದ ಮಂಜೂರಾತಿಯನ್ನು ಪಡೆದಿದೆ.  ಅವುಗಳಲ್ಲಿ ಈಗಾಗಲೇ ಬಿಹಾರ್ನಲ್ಲಿರುವ ರಾಜೇಂದ್ರ ಕೃಷಿವಿಶ್ವವಿದ್ಯಾಲಯವನ್ನು ಕೇಂದ್ರ ಕೃಷಿವಿಶ್ವವಿದ್ಯಾಲಯವಾಗಿ ಪರಿವರ್ತಿಸುವ ಚಿಂತನೆ ಅಂತಿಮ ಮಟ್ಟಕ್ಕೆ ಬಂದಂತೆ ಸೂಚನೆಗಳಿವೆ. ಉಳಿದ ಎರಡರಲ್ಲಿ ಒಂದು ಚಾಮರಾಜನಗರ ಪ್ರದೇಶಕ್ಕೆ ಸಿಕ್ಕಿದ್ದೇ ಆದರೆ, ದಕ್ಷಿಣ ಭಾರತಕ್ಕೆ ಅದು ಒಂದು ಕೊಡುಗೆಯಾದೀತು. ಈ ಪ್ರದೇಶ ಮೂರು ರಾಜ್ಯಗಳೂ ಸೇರುವ ತಾಣವಾಗಿದ್ದು, ಪ್ರಾಚೀನ ಕಾಲದಿಂದಲೂ  ಮೂರೂ ರಾಜ್ಯಗಳ ರೈತರು ಸೇರಿ ಬೆಳೆಸಿದ ಕೃಷಿ ಸಂಸ್ಕೃತಿಯ ಒಂದು ಮಾದರಿಯೇ ಆಗಿರುವುದರಿಂದ, ಇಲ್ಲಿ ಒಂದು ಕೇಂದ್ರ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯಾದರೆ ಸಾರ್ಥಕವಾದೀತು. ಬಹುಷಃ ಎಲ್ಲಾ ತರಹದ ಮಣ್ಣು ಮತ್ತು ಭೂಮಿ, ನೈಸರ್ಗಿಕ ಸಂಪತ್ತು, ವನ್ಯ ಜೀವಿ ಸಂಪತ್ತು, ಮೀನುಗಾರಿಕೆ ಮುಂತಾದವು ಸಮಗ್ರ ಕೃಷಿ ಸಂಶೋಧನೆಗೆ ಹೇಳಿ ಮಾಡಿಸಿದಂತಿರುವುದು ಒಂದು ಮಹತ್ವದ ಅವಕಾಶ. ದಕ್ಷಿಣ ಬಾರತದಲ್ಲಿ ಇಂತಹ ಯೋಗ್ಯವಾದ  ಪ್ರದೇಶ ಬೇರೊಂದು ಸಿಗಲಾರದು ಎಂದು ಒಬ್ಬ ಕೃಷಿ ವಿಜ್ಞಾನಿಯಾಗಿ ನಾನು ಸಮರ್ಥಿಸಬಲ್ಲೆ. ಕಾಕತಾಳೀಯವೆಂಬಂತೆ,  ಐದು ವಾರಗಳ ಹಿಂದೆ ನಾನು ಸಿದ್ಧಪಡಿಸಿದ್ದ ಕೇಂದ್ರ ಕೃಷಿ ವಿಶ್ವವಿದ್ಯಾಲಯ ಪ್ರಸ್ತಾವನೆಯನ್ನು ಚಾಮರಾಜನಗರದ ಜಿಲ್ಲಾಪಂಚಾಯಿತಿಯ ಸಭೆಯಲ್ಲಿ ಚರ್ಚಿಸಿ ಮತ್ತು ಸರ್ಕಾರದ ವತಿಯಿಂದ  ಶಿಫಾರಸು ಮಾಡಿಸಿ  ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿರುವುದಾಗಿ ಆ ಭಾಗದ ಜನಪ್ರತಿನಿಧಿಗಳಿಂದ ತಿಳಿದು ಬಂದಿದೆ. ನಮ್ಮ  ರಾಜ್ಯದ ಧುರೀಣರು ಇದನ್ನು ಪಟ್ಟುಹಿಡಿದು ಮಾಡಿಸಬೇಕಾಗಿದೆ. ಮಾಡಿಸುವರೆಂಬ ನಂಬಿಕೆಯಿದೆ.
ದೇಶೀಯ ಮತ್ತು ವಿದೇಶೀಯ ಬಂಡವಾಳ ಹೂಡಿಕೆ ಲಾಭದಾಯಕವಾಗಿರುವ ಹಾಗೂ ದಿವಾಳಿಯಾದ ಎರಡೂ ತರಹದ ಉದಾಹರಣೆಗಳು  ಭಾರತದಲ್ಲಿ ಹಲವಾರು.  ಆದ್ದರಿಂದ ವಿಶೇಷ ವಿತ್ತ ವಲಯ(ವಿವಿವ)ಗಳ ಬಗ್ಗೆ ಹತ್ತಾರು ಕಡೆ ಚರ್ಚೆಗಳು ನಡೆದಿವೆ, ನೂರಾರು ಲೇಖನಗಳು ಪ್ರಕಟವಾಗಿವೆ. ಶಿಫಾರಸುಗಳು ಸಂಬಂಧಪಟ್ಟವರಿಗೆ ರವಾನಿಸಲ್ಪಟ್ಟಿವೆ. ಕೆಲವು ಕಡೆ ಭೂಮಿಯನ್ನು ಕೈಗಾರಿಕೆಗಳಿಗೆ ನೀಡುತ್ತಿರುವ ಪ್ರಕ್ರಿಯೆ ನೋಡಿದರೆ, ಗಾಬರಿಯಾಗದಿರದು. ಯಾವುದೇ ಅಳತೆಗೋಲನ್ನು ಬಳಸದೆ, ಅಥವಾ  ವೈಜ್ಞಾನಿಕ ಆಧಾರದ ಮೇಲೆ ವಿಂಗಡಣೆ ಮಾಡದೆ, ರೈತರ ಫಲವತ್ತಾದ ಕೃಷಿಭೂಮಿಯನ್ನು ವಿ. ವಿ. ವ.ಗೆ ಹಂಚಿಕೆ ಮಾಡುತ್ತಿರುವು ಸರಿಯಾದ ಕ್ರಮವಲ್ಲ. ಮತ್ತೊಂದು ದೊಡ್ಡ ಆತಂಕದ ವಿಷಯವೆಂದರೆ, ಎಲ್ಲೆಲ್ಲಿಯೂ ಗೋಮಾಳಗಳು ಬಹಳ ವೇಗವಾಗಿ ಕುಸಿಯುತ್ತಿರುವುದು. ಅವುಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಯನ್ನು ಆದ್ಯತೆಯ ಸಾಲಿಗೆ ತರುವುದು ಅತ್ಯವಶ್ಯ. ಕೃಷಿ ಭೂಮಿಯ ಪ್ರತಿಶತ 20 ರಷ್ಟನ್ನು ಗೋಮಾಳಕ್ಕಾಗಿ ಉಳಿಸಿಕೊಳ್ಳಬೇಕೆಂದು ವೈಜ್ಞಾನಿಕವಾಗಿ ನಿಗದಿಪಡಿಸಲಾಗಿರುವುದನ್ನು ಗಮನದಲ್ಲಿಡಬೇಕಾಗಿದೆ. ಆದ್ದರಿಂದ ಈ ಪ್ರದೇಶದಲ್ಲಿ ಕೈಗಾರಿಕೆಗಳಿಗೆಂದು ಭೂಮಿಯನ್ನು ಕೊಡುವ ಮುನ್ನ ಪರಿಣಿತರ ಸಮಿತಿಯೊಂದರಿಂದ ಸಮೀಕ್ಷೆ ನಡೆಸಿ ಫಲವತ್ತಾದ ಭೂಮಿಯನ್ನು ಎಂದೆಂದಿಗೂ ಕೃಷಿಗಾಗಿಯೇ ಮೀಸಲು ಎಂದು ಘೋಷಿಸಿ ಉಳಿದ ಭೂಮಿಯನ್ನು ಮಾತ್ರ ವಿಶೇಷ ಆರ್ಥಿಕ ವಲಯಕ್ಕೆ ಕೊಡುವುದು ಸೂಕ್ತ. ಇದು ನಮ್ಮ ಮುಂದಿನ ಪೀಳಿಗೆಯ ಭವಿಷ್ಯದ ಹಿತ ಮತ್ತು ಆಹಾರ ಹಾಗೂ ಪೌಷ್ಟಿಕಾಂಶ ಭದ್ರತೆ ದೃಷ್ಟಿಯಿಂದ ಕಡ್ಡಾಯವಾಗಿ ನಿರ್ವಹಿಸಬೇಕಾದ ಕ್ರಮ. ಜಾಗತೀಕರಣದ ಈ ದಿನಗಳಲ್ಲಿ ವಿ. ವಿ. ವ. ಬೇಡವೆಂದು ನಾವು ಹಿಂಜರಿಯುವುದೂ ಸಲ್ಲ. ದೇಶದ ಭವಿಷ್ಯದ ದೃಷ್ಟಿಯಿಂದ ವಿಶೇಷ ಆರ್ಥಿಕ ವಲಯಗಳ ನಿರ್ಮಾಣವನ್ನು ಗಂಭೀರವಾಗಿ ಪರಿಶೀಲಿಸಿ ವಿಳಂಬಮಾಡದೆ ಕಾರ್ಯೋನ್ಮುಖರಾಗಲೇ ಬೇಕು. ಒಂದು ಎಚ್ಚರಿಕೆ ವಹಿಸಬೇಕಾದ ವಿಷಯವೆಂದರೆ ಭಾರತದ ಸಮಸ್ಯೆಗಳನ್ನು ಕೈಗಾರಿಕೆಗಳ ಸ್ಥಾಪನೆಯೇ ಏಕೈಕವಾಗಿ ನೀಗಿಸಲಾರದು. ಕೃಷಿವಿರುದ್ಧ ಕೈಗಾರಿಕೆಯಾಗಿರಬಾರದು; ಕೃಷಿ ಜತೆ ಕೈಗಾರಿಕೆ ಕೈಜೋಡಿಸಬೇಕು. ಆಗ ಮಾತ್ರ ಜಾಗತೀಕರಣದ ಯುಗದಲ್ಲಿ ಭಾರತ ಎದ್ದುನಿಲ್ಲಲು ಸಾಧ್ಯವಾದೀತು. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ರಫ್ತಿನ ವಿಚಾರದಲ್ಲಿ ಸಣ್ಣ ಪ್ರಮಾಣದ ಗ್ರಾಮೀಣ ಗೃಹ ಕೈಗಾರಿಕೆಗಳಿಗೆ ಆದ್ಯತೆ ಇರಬೇಕೆಂಬುದು. ದ್ವಿತೀಯ ಕೃಷಿಗೆ ಉತ್ತೇಜನ ಸಿಕ್ಕಿ ಪ್ರಾಥಮಿಕ ಕೃಷಿಯಿಂದ ಬೆಳೆದ ಸಾಮಾಗ್ರಿಗಳ ಮೌಲ್ಯ ಅಧಿಕಗೊಳಿಸಿ ರೈತರಿಗೆ ಹೆಚ್ಚು ಲಾಭ ಸಿಗುವಂತೆ ಮಾಡುವುದು ತುರ್ತಾಗಿ ಮಾಡಬೇಕಾದ ಕೆಲಸ.
ಈ ಎಲ್ಲಾ ವಿಷಯಗಳ ಅರಿವು ಉಂಟುಮಾಡಲು ರೈತರು ಮತ್ತು ರೈತ ಯುವಜನಾಂಗ ಪಣತೊಟ್ಟು ನಿಲ್ಲಬೇಕಾಗಿದೆ. ಚಾಮರಾಜನಗರ ಪ್ರದೇಶದಲ್ಲಿ ವಿಶೇಷ ಗುಣವುಳ್ಳ ವನ್ಯ ಮರ, ಬೆಳೆ ಮತ್ತು ತಳಿಗಳು ಎಣಿಸಲಾಗದಷ್ಟಿವೆ. ಬಟ್ಟಲುತೆಂಗು (ಓರ್ವ ಮನುಷ್ಯ ಕುಡಿಯಲಾರದಷ್ಟು ಎಳನೀರು ಹೊಂದಿರುವ ತೆಂಗು ತಳಿ), ದೇಶೀಯ ಜೋಳ, ರಾಗಿ, ಬದನೆ, ಮಲ್ಲಿಗೆ, ಸೇವಂತಿಗೆ ಮತ್ತು ಹಣ್ಣುಹಂಪಲು ತಳಿಗಳು ಹೇರಳವಾಗಿವೆ. ಈ ತಳಿಗಳ ಗುಣಗಳು ಆಯಾ ಪ್ರದೇಶಗಳಲ್ಲಿ ಬೆಳೆದಾಗ ಮಾತ್ರ ಕಾಣಿಸಿಕೊಳ್ಳುತ್ತವೆ. ಇಂತಹ ತಳಿಗಳನ್ನು  ಸಸ್ಯತಳಿ ರಕ್ಷಣೆ ಮತ್ತು ರೈತರಹಕ್ಕು ಕಾಯ್ದೆಯಡಿ ನೊಂದಾಯಿಸಿ ಹಕ್ಕು ಪಡೆದುಕೊಂಡರೆ, ಅದರಿಂದ ಈ ಭಾಗದ ರೈತರು ಮುಂದಿನ ದಿನಗಳಲ್ಲಿ ಬಹಳ ಲಾಭ ಪಡೆಯಬಹುದಾಗಿದೆ.
ಪರಿಣಿತರ ಸಮಿತಿ ರಚನೆ ಮತ್ತು ಶಿಫಾರಸು ರಾಜ್ಯದ ಭೂ ವಿಸ್ತೀರ್ಣದಲ್ಲಿ ಅರಣ್ಯವನ್ನು ಹೊರತುಪಡಿಸಿ ಬಳಸಬಹುದಾದ ಭೂಮಿಯನ್ನು ಆನುಭಾವಿ ಪರಣಿತರ ಸಮಿತಿಯೊಂದರ ಮೂಲಕ ಸಮೀಕ್ಷೆ ನಡೆಸಿ ಫಲವತ್ತಾದ ಕೃಷಿ-ಯೋಗ್ಯ ಭೂಮಿಯನ್ನು ನಕ್ಷೆ ಮಾಡಿ ಅದನ್ನು ಸಂರಕ್ಷಿಸಲು ಅಂದರೆ ಈಗಲೋ ಅಥವಾ ಮುಂದೆಯೋ ವ್ಯವಸಾಯಕ್ಕೆಂದೇ ಮೀಸಲಿಡಬೇಕು. ನಂತರ ಉಳಿದ ಭೂಮಿಯಲ್ಲಿ ಕೃಷಿಯೇತರ ಉದ್ದೇಶಗಳಿಗೆ ಬಳಸಲು ಕೊಡಬೇಕು. ಪರಿಣತರ ಸಮಿತಿಯು ಅನುಭವವುಳ್ಳ ರೈತರು, ನಿಷ್ಠಾವಂತ ನಾಯಕರು, ಕೃಷಿ ವಿಜ್ಞಾನಿಗಳು, ಕಾರ್ಯನೀತಿ ರೂಪಿಸುವವರು, ಅಧಿಕಾರಶಾಹಿಗಳು, ಸಮಾಜ ವಿಜ್ಞಾನಿಗಳನ್ನೊಳಗೊಂಡಂತೆ ನುರಿತ ಅಧಿಕಾರಿಗಳು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡಿರಬೇಕು. ಶಿಫಾರಸುಗಳನ್ನು ಸಿದ್ಧಪಡಿಸಿ ಸಾರ್ವಜನಿಕರೊಡನೆ ಚರ್ಚಿಸಿ ಮುಂದುವರಿದರೆ ಯೋಜನೆಯ ಘೋಷಣೆ ಅರ್ಥಪೂರ್ಣವಾಗುವುದರಲ್ಲಿ ಸಂದೇಹವಿಲ್ಲ. ಹೂಡಿಕೆ ಫಲಪ್ರದವಾಗುವುದೂ ಖಚಿತ. ಇಡೀ ರಾಜ್ಯದಲ್ಲೇ ಅತಿ ಹಿಂದುಳಿದಿರುವ ಈ ಪ್ರದೇಶದ ಕೃಷಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣಾ ಕಾರ್ಯಗಳು ಉನ್ನತ ಮಟ್ಟಕ್ಕೇರಿ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುವಂತಾಗಿ ಗ್ರಾಮೀಣ ಯುವಕರು ಪಟ್ಟಣ ಮುಖಿಗಳಾಗುವುದನ್ನು ಗಣನೀಯವಾಗಿ ಇಳಿಮುಖವಾಗಿಸಬಹುದು. ಅಲ್ಲದೆ ಇದು ಪ್ರಾದೇಶಿಕ ಸಮತೋಲನ ಸಾಧಿಸುವ ಮಾರ್ಗವೂ ಅಹುದು.


-ಪ್ರೊ. ಎಂ. ಮಹದೇವಪ್ಪ

mahadevrice@yahoo.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement