ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಪರಭಾಷಾ ನುಸುಳುವಿಕೆ ಇರಲಿ ಅಂಕುಶ

ಕನ್ನಡಪ್ರಭದ ಗೆಟಪ್ ಬದಲಾಗಿದೆ. ಪ್ರತಿ ಭಾನುವಾರ ಬರುವ ಖುಷಿ ಓದುಗರ ಮನಸ್ಸಿಗೆ ಖುಷಿ ತಂದಿದೆ. ತೆಲುಗಿನ ಪ್ರಮುಖ ಪತ್ರಿಕೆ...

Rashmi Kasaragodu
Updated On : 26 Jan 2014, 1:44 am

ಕನ್ನಡಪ್ರಭದ ಗೆಟಪ್ ಬದಲಾಗಿದೆ. ಪ್ರತಿ ಭಾನುವಾರ ಬರುವ ಖುಷಿ ಓದುಗರ ಮನಸ್ಸಿಗೆ ಖುಷಿ ತಂದಿದೆ. ತೆಲುಗಿನ ಪ್ರಮುಖ ಪತ್ರಿಕೆಗಳು ಭಾನುವಾರ ಪುಸ್ತಕ ರೂಪದ ಪುರವಣಿ ಕೊಡುತ್ತಿದ್ದು ನೋಡ್ತಾ ಇದ್ದೆ. ಕನ್ನಡ ಪತ್ರಿಕೆಗಳು ಸಹಾ ಇಂಥ ಪ್ರಯೋಗ ಮಾಡಿದರೆ ಚೆನ್ನಾಗಿರುತ್ತೆ ಎಂದು ಚಿಂತಿಸುತ್ತಿದ್ದೆ. ಖುಷಿಯನ್ನು ನೋಡಿ ನಿಜವಾಗಲೂ ಖುಷಿಯೇ ಆಗಿದೆ. ಒಳ್ಳೆ ಬೋಧಕವಾದ ಲೇಖನಗಳು ಓದುಗರಿಗೆ ಬೇಕಾಗಿರುವ ಸಾಹಿತ್ಯ ಓದಗಿಸಿದ್ದೀರಿ.
-ಮೊಳಕಾಲ್ಮೂರು ಸುರೇಶ್, 93, ನರಸಿಂಹ ನಿಲಯ, ಗಾಂಧಿನಗರ, ಬಳ್ಳಾರಿ.

ಕನ್ನಡಪ್ರಭದಲ್ಲಿ ನೀವು ಸುದ್ದಿಗಳಿಗಿಂತ ಅವುಗಳ ಶೀರ್ಷಿಕೆಗೇ ಹೆಚ್ಚಿನ ಮಹತ್ವ ನೀಡುತ್ತೀರಿ. ಯಾವುದೋ ಸುದ್ದಿಗೆ ಏನೇನೋ ಲಾಗಾ ಹೊಡೆದು ವಿಭಿನ್ನ ಶೀರ್ಷಿಕೆಯನ್ನು ನೀಡುತ್ತೀರಿ. ಇದರಿಂದ ಎಷ್ಟು ಸಮಸ್ಯೆಯಾಗುತ್ತಿದೆ ಎಂದರೆ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಪತ್ರಿಕೆ ಓದುವ ಹವ್ಯಾಸವನ್ನು ಬೆಳೆಸಲು ಕಷ್ಟವಾಗುತ್ತಿದೆ. ಏಕೆಂದರೆ ನಮಗೆ ಅರ್ಥವಾಗುವಷ್ಟು ಸುಲಭವಾಗಿ ನಮ್ಮ ವಿದ್ಯಾರ್ಥಿಗಳಿಗೆ ಅರ್ಥವಾಗುವುದಿಲ್ಲ. ಇದೇ ರೀತಿಯ ಸಮಸ್ಯೆ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಸಾಮಾನ್ಯ ಅಕ್ಷರಸ್ಥರಿಗೂ ಆಗಬಹುದು ಎಂದು ಭಾವಿಸಿದ್ದೇನೆ. ಆದ್ದರಿಂದ ಮಕ್ಕಳಿಗೂ ಹಾಗೂ ಸಾಮಾನ್ಯ ಅಕ್ಷರಸ್ಥರಿಗೂ ಸುಲಭವಾಗಿ ಅರ್ಥವಾಗುವಂತಹ ಶೀರ್ಷಿಕೆಗಳನ್ನು ಪ್ರಕಟಿಸಿ. ಇನ್ನೊಂದು ವಿನಂತಿ ಏನೆಂದರೆ, ಕನ್ನಡಿಗರ ಜನಪ್ರಿಯ ಪತ್ರಿಕೆ ಕನ್ನಡಪ್ರಭದಲ್ಲಿ ಬರುವ ಕೆಲವು ಸುದ್ದಿ ಹಾಗೂ ಶೀರ್ಷಿಕೆಗಳಲ್ಲಿ ಪರಭಾಷಾ ಶಬ್ದಗಳು ನುಸುಳುತ್ತಿವೆ. ನಿಜವಾಗಿಯೂ ಇವು ಕನ್ನಡ ದಿನಪತ್ರಿಕೆಯೊಂದಕ್ಕೆ ಶೋಭೆ ತರುವುದಿಲ್ಲ. ಕನ್ನಡದಲ್ಲಿ ಅವುಗಳ ಸಮಾನ ಶಬ್ದಗಳು ಇಲ್ಲದ ಸಮಯದಲ್ಲಿ ಸಹಿಸಿಕೊಳ್ಳಬಹುದು. ಆದರೆ ಇದು ಅತಿಯಾಗಬಾರದು. ವಿಭಿನ್ನ ಶೀರ್ಷಿಕೆಯನ್ನು ಹುಡುಕಲು ಕಷ್ಟಪಡುವ ಬದಲು ಅಚ್ಚ ಕನ್ನಡ ಪದಗಳನ್ನು ಬಳಸಲು ಒತ್ತು ನೀಡಿರಿ.
-ಸೋಮಲಿಂಗಪ್ಪ ಗುಳದಳ್ಳಿ, ಶಿಕ್ಷಕರು, ಜ್ಞಾನಭಾರತಿ ಶಾಲೆ, ಗಿಣಿಗೇರಾ. ತಾ. ಜಿ. ಕೊಪ್ಪಳ, ದೂ. 97408 87028

ಸೆಕ್ಸ್ ಎನ್ನುವುದು ಹಸಿವು, ತೃಷೆಯಷ್ಟೇ ಸತ್ಯ. ಸಿಕ್ಕಾಪಟ್ಟೆ ತಿಂದರೆ, ಕುಡಿದರೆ ಏನಾಗುತ್ತದೆ ಎಂಬುದೂ ಎಲ್ಲರಿಗೂ ಗೊತ್ತು. ಸೆಕ್ಸ್ ವಿಚಾರದಲ್ಲಿ ಪಶುಪಕ್ಷಿಗಳಿಗೆ ತರಬೇತಿ ನೀಡುವವರು ಯಾರು? ಯೌವ್ವನದಲ್ಲಿ ತಂತಾನೇ ಅರಿಯುವಂತೆ ಮನುಷ್ಯ ಪ್ರಾಣಿಯೂ ಅರಿತುಕೊಳ್ಳುತ್ತವೆ. ಮದುವೆ ಆಗಿದೇಂತ ಗಂಡ -ಹೆಂಡತಿ ಬೀದಿಯಲ್ಲಿ ಮಂಚ ಹಾಕುತ್ತಾರೆಯೇ? ಕನ್ನಡಪ್ರಭದ ಖುಷಿಯಲ್ಲಿ 'ಬೆಡ್ ಜಾಮ್‌' ಎಂದು ಪ್ರಾರಂಭಿಸಿರುವುದು ನಮ್ಮ ಮನೆಯವರಿಗೆಲ್ಲಾ ಬಹಳ ಮುಜುಗರವಾಗಿದೆ. ಖುಷಿಯನ್ನು ತಪ್ಪದೇ ಪ್ರತಿಯೊಬ್ಬರೂ ಓದಲೇಬೇಕೆಂದು ಮಕ್ಕಳಿಗೂ ಒತ್ತಾಯ ಮಾಡಿದ್ದೆ. ನನ್ನ ಮೊಮ್ಮಗಳು ಬಂದು 'ಬೆಡ್‌ಜಾಮ್‌' ಎಂದರೇನು ಅಜ್ಜ? ಒಮ್ಮೆ ತನ್ನಿ ಅಂದಳು. ಸದ್ಯ ಅಷ್ಟೇ ಕೇಳಿದಳು! ಪೆಚ್ಚಾದೆ. ಬೇಕಾದರೆ 'ಸೆಕ್ಸ್ ಎಜುಕೇಶನ್‌' ಅಂತಲೇ ಒಂದು ಪತ್ರಿಕೆ ಹೊರಡಿಸಿ-ತುಂಬಾ ಖರ್ಚಾಗುತ್ತದೆ. ಆದರೆ ದಯವಿಟ್ಟು ಖುಷಿಯಲ್ಲಿ ಈ ಅಂಕಣವನ್ನು ಕಿತ್ತು ಹಾಕಿ. ಮಕ್ಕಳಿಗೆ ಬೇಕಾದ ಮಾತಾ ಪಿತೃ ಭಕ್ತಿ, ಪರೋಪಕಾರ, ದೇಶಭಕ್ತಿ, ಮಾತೃಭಾಷಾ ಭಕ್ತಿ ಇತ್ಯಾದಿಗಳ ಬಗ್ಗೆ ತಿಳಿಸುವಂಥ ನೀತಿ ಬೋಧಕ ಅಂಕಣವನ್ನು ಪ್ರಾರಂಭಿಸಿದರೆ ಎಷ್ಟೋ ಮಂದಿಗೂ ದಾರಿದೀಪವಾದೀತೆಂದು ನನ್ನ ಕೋರಿಕೆ.
-ಕುಂಜಿತ್ತಾಯ ರಾಘವೇಂದ್ರ ರಾವ್, ವಿದ್ಯಾ ಇಲಾಖೆ
10/11, ಶ್ರೀಕೃಷ್ಣ, ಸನ್‌ರೈಸ್ ಸ್ಕೂಲ್ ಹಿಂಭಾಗ
ಚಿನ್ನಪ್ಪ ಬಡಾವಣೆ, ಹೆಬ್ಬಾಳ್ ಕೆಂಪಾಪುರ, ಬೆಂಗಳೂರು.
ಮೊ. 876 2780 221.

'ಮೀಸಲಾತಿ ನಿಜಕ್ಕೂ ಶೋಷಿತ ವರ್ಗಕ್ಕೆ ಸಿಗಬೇಕಲ್ಲವೆ?' ಸಿಂಧೂರ ಬಿ.ಆರ್. ಅವರ ಬರಹ ಅತ್ಯಂತ ಸೃಜನಶೀಲ ಹಾಗೂ ತಾರ್ಕಿಕವಾಗಿದೆ. ಶ್ರೇಣೀಕೃತ ಸಮಾಜ ನಿರ್ಧಾರವಾಗುವುದು ಮೌಲ್ಯಗಳಿಂದಲೇ ಹೊರತು ಹುಟ್ಟಿನಿಂದಲ್ಲ. ಮೌಲ್ಯಗಳು ಅವನತಿಯತ್ತ ಸಾಗಿದಾಗ ಬಂಡಾಯ ಶುರುವಾಗಿ ಶ್ರೇಣೀಕೃತ ಸಮಾಜ ವಿಘಟನೆಯಾಗುವುದು ಸಾಮಾನ್ಯ. ಒಂದು ನಿಜ ಸಂಗತಿ ಎಂದರೆ ಅಂಬೇಡ್ಕರ್ ಎಂದೂ ಶ್ರೇಣೀಕೃತ ಸಮಾಜದ ವಿರೋಧಿಯಾಗಿರಲಿಲ್ಲ. ಹುಟ್ಟಿನಿಂದ ನಿರ್ಧಾರವಾಗುವ ಶ್ರೇಣೀಕೃತ ವ್ಯವಸ್ಥೆಯನ್ನು ಮಾತ್ರ ಅವರು ವಿರೋಧಿಸಿದ್ದರು. ಸಾಧನೆ ಹಾಗೂ ಮೌಲ್ಯಗಳಿಂದ ನಿರ್ಧಾರವಾಗುವ ಶ್ರೇಣೀಕೃತ ಸಮಾಜ ಬಹಳ ಕಾಲ ಇರುತ್ತದೆ. ಆದರೆ ಹುಟ್ಟಿನಿಂದ ಬರುವ ಶ್ರೇಣೀಕೃತ ವ್ಯವಸ್ಥೆ ಅಪಹಾಸ್ಯಕ್ಕೆ ಗುರಿಯಾಗುತ್ತದೆ.
-ಕೆ. ಪ್ರಕಾಶ್, ಜವಹರ್ ನವೋದಯ ವಿದ್ಯಾಲಯ
ಚಿಕ್ಕಜೋಗಿಹಳ್ಳಿ, ಕೂಡ್ಲಿಗಿ ತಾ., ಬಳ್ಳಾರಿ ಜಿಲ್ಲೆ.

ಜನಪ್ರತಿನಿಧಿಗಳು ಮಾಡದಂತಹ ಕೆಲಸವನ್ನು ಒಂದು ಪತ್ರಿಕೆ ಮಾಡಿದೆ ಶಿರಾಡಿಘಾಟ್ ವಿಚಾರವಾಗಿ. ಅದಕ್ಕಾಗಿ ಕನ್ನಡಪ್ರಭಕ್ಕೆ ಅಭಿನಂದನೆಗಳು. ನೋಡ್ತಾ ಇರಿ ಏನೋನೋ ಮಾಡ್ತೀವಿ ಅಂತ ಹೇಳುತ್ತಿರುತ್ತೀರಿ. ಅತಿಯಾದರೆ ಅಮೃತವೂ ವಿಷವಾಗುತ್ತದೆ ಅಂತ ತಮಗೂ ಜ್ಞಾಪಕವಿರಲಿ.
-ಹುಚ್ಚೇರ ಭಾಸ್ಕರ್ ಕೆನ್ನಾಳು, ಪಾಂಡವಪುರ.


ನಿಮ್ಮ ಅನಿಸಿಕೆಗಳನ್ನು  ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್‌ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement