ಷಡ್ಯಂತ್ರ ಭೇದಿಸುವುದು ಸರ್ಕಾರದ ಹೊಣೆ
ಜನವರಿ 8ರಂದು ಗುಲ್ಬರ್ಗದ ಛದೋಟಿ ದೇವಡಿ ಗಲ್ಲಿಯಲ್ಲಿ ನಡೆದ ಶೂಟೌಟ್, ಪಾತಕಿ...
ಜನವರಿ 8ರಂದು ಗುಲ್ಬರ್ಗದ ಛದೋಟಿ ದೇವಡಿ ಗಲ್ಲಿಯಲ್ಲಿ ನಡೆದ ಶೂಟೌಟ್, ಪಾತಕಿ ಮುನ್ನಾ ಸಾವು, ಗುಂಡೇಟು ತಗುಲಿ 8 ದಿನ ನರಳಿ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಹೊಂದಿದ ವೀರಮರಣದ ಘಟನೆಗಳು ಇಡಿ ರಾಜ್ಯದ ಗಮನ ಸೆಳೆದ ಪ್ರಸಂಗ. ಆದರೆ ಗುಲ್ಬರ್ಗದ ಈ ಶೂಟೌಟ್ ಸುತ್ತ ಹಲವು ಅನುಮಾನಗಳ ಹುತ್ತವೇ ಹುಟ್ಟಿಕೊಂಡಿದೆ. ತನ್ನ ಪತಿಯ ದಾರುಣ ಸಾವಿನಿಂದ ಕಂಗಾಲಾಗಿರುವ ಪತ್ನಿ ಮಲ್ಲಮ್ಮ (ಮಧು) ಬಂಡೆ ಪತಿಯ ಸಾವು, ಅದರ ಸುತ್ತಲಿನ ಪ್ರಸಂಗಗಳು, ತನಿಖೆಯ ವಿಚಾರ, ಹಿರಿಯ ಅಧಿಕಾರಿಗಳ ಕಿರುಕುಳ, ಸರ್ಕಾರದ ಸ್ಪಂದನೆ... ಇತ್ಯಾದಿ ಸಂಗತಿಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.
- ನಿಮ್ಮ ಪತಿ ಪಾತಕಿ ಜೊತೆಗಿನ ಕಾಳಗದಲ್ಲಿ ವೀರಮರಣ ಅಪ್ಪಿದ್ರು, ಇಡೀ ಪ್ರಸಂಗದಲ್ಲಿ ಸರ್ಕಾರದ ಸ್ಪಂದನೆ ನಿಮಗೆ ತೃಪ್ತಿ ತಂದಿದೆಯೆ?
ನನಗಂತೂ ಎಳ್ಳಷ್ಟೂ ತೃಪ್ತಿ ತಂದಿಲ್ಲ. ರೌಡಿ ನಿಗ್ರಹ ದಳದ ತಂಡ ಇದ್ದಾಗ್ಯೂ ನನ್ನ ಪತಿ ಸೇರಿದಂತೆ ಮೂವರನ್ನೇ ಯಾಕೆ ಈ ಕೆಲಸಕ್ಕೆ ಕಳುಹಿಸಿದ್ರು? ಪಾತಕಿ ಮುನ್ನಾ ವಿರುದ್ಧದ ಕಾರ್ಯಾಚರಣೆ ನಡೆಸುವಾಗಲೇ ಗುಲ್ಬರ್ಗದಿಂದ ಶುರುವಾಗೋ ಈ ಅಸಹಕಾರ ಪತಿ ಮರಣಹೊಂದಿದ ನಂತರವೂ ಹಾಗೇ ಮುಂದುವರಿದಿದೆ. ಪರಿಹಾರದ ವಿಚಾರದಲ್ಲೂ ಗೊಂದಲ, ನನ್ನ ಗಂಡನ ಸಾವಿಗೆ ಬೆಲೆ ಕಟ್ಟುವ ಧೋರಣೆಯಲ್ಲೇ ಈ ಸರ್ಕಾರ ಹೇಳಿಕೆ ನೀಡ್ತು. ಗೃಹ ಸಚಿವರೊಂದು ಹೇಳಿದ್ರೆ, ಸಿಎಂ ಮತ್ತೊಂದು ಹೇಳೋದು, ಮಧ್ಯದಲ್ಲಿ ಪೊಲೀಸ್ ಅಧಿಕಾರಿಗಳದ್ದು ಇನ್ನೊಂದು ಹೇಳಿಕೆ... ಗಂಡನ ಸಾವಿನ ಹಿನ್ನೆಲೆಯಲ್ಲಿ ನಾನಂತೂ ಈಶಾನ್ಯ ವಲಯ ಐಜಿಪಿ ವಿರುದ್ಧ ಆರೋಪ ಮಾಡಿದ್ರೂ ಅವರನ್ನ ವರ್ಗ ಮಾಡಿಲ್ಲ. ವರ್ಗ ಮಾಡೀವಿ ಅಂದ್ರು, ಏಕದಂ ನಾವು ಹಾಗೇ ಹೇಳಿಲ್ಲ ಅಂತ ಉಲ್ಟಾ ಹೊಡದ್ರು. ಸೂಕ್ಷ್ಮ ಪ್ರಕರಣದಾಗೂ ಹೀಂಗ ನಡ್ಕೋಂಡ್ರ ಹ್ಯಾಂಗ್ರಿ? ಯಾರನ್ನ ನಂಬಬೇಕು ಹೇಳ್ರಿ?
- ಇಡೀ ಪ್ರಸಂಗದಲ್ಲಿ ಐಜಿಪಿ ವಿರುದ್ಧ ಆರೋಪ ಯಾಕೆ?
ನನ್ನ ಪತಿ ರೌಡಿಗಳನ್ನ ಮಟ್ಟ ಹಾಕ್ಬೇಕು, ಹೆಸರ ಮಾಡಬೇಕು ಅನ್ನೋ ಹುಚ್ಚು ಇರೋರು. ಮನ್ಯಾಗ ಸಹ ಗಳಿಗೆ ಸುಮ್ನ ಇರ್ತಿರಲಿಲ್ಲ. ಇಂಥವರಿಗೆ ಐಜಿಪಿ ಅನೇಕ ಸಂದರ್ಭಗಳಲ್ಲಿ ಕಿರುಕುಳ ಕೊಡ್ತಿದ್ರು. ನನ್ನ ಪತಿ ಮನೆಯಲ್ಲಿ ಎಲ್ಲವನ್ನೂ ಚರ್ಚಿಸುತ್ತ ಸಂಕಟಪಡುತ್ತಿದ್ದರು. ಅಪರಾಧ ವಿಭಾಗ ಬೇಡ, ಕಾನೂನು-ಸುವ್ಯವಸ್ಥೆ ವಿಭಾಗದ ಹೊಣೆಗಾರಿಕೆ ಕೊಡುವಂತೆ ಕೋರಿದ್ದರೂ ಅದನ್ನವರಿಗೆ ಕೊಡಲಿಲ್ಲ. ಈ ಬಗ್ಗೆ ಎಲ್ಲ ದಾಖಲೆಗಳು ನನ್ನ ಬಳಿ ಇವೆ. ಹುಮ್ನಾಬಾದ್ನಲ್ಲಿದ್ದಾಗ ಪ್ರಚೋದನಾಕಾರಿ ಭಾಷಣ ಆರೋಪದಲ್ಲಿ ನಡೆದ ಶಾಸಕರೊಬ್ಬರ ಬಂಧನ, ಆ ನಂತರದ ಬೆಳವಣಿಗೆಗಳಂತೂ ನನ್ನ ಪತಿಗೆ ಇಂತಹ ಕಿರುಕುಳ ಪ್ರಸಂಗಗಳನ್ನು ಇನ್ನು ಹೆಚ್ಚಿಸಿದವೇ ಹೊರತು ನೆಮ್ಮದಿ ತರಲಿಲ್ಲ. ಹೀಗಿರುವಾಗ ಗಂಡ ಸತ್ತ ಅಂತಾದ್ರೆ ನಾನು ಐಜಿಪಿ ವಿರುದ್ಧ ಆರೋಪ ಮಾಡದೆ ಇನ್ನಾರ ವಿರುದ್ಧ ಮಾಡ್ಲಿ? ನನ್ನ ಜೊತೆ ಗಂಡ ಏನೆಲ್ಲಾ ಚರ್ಚಿಸಿದ್ದ ಅನ್ನೋದು ಇಲ್ಲಿ ಮುಖ್ಯವೇ ಹೊರತು ಐಜಿಪಿ ಯಾರು, ಯಾವ ಜಾತಿ- ಕೋಮು ಅನ್ನೋದು ಮುಖ್ಯವಲ್ಲ. ಯಾರಿಂದ ಗಂಡ ತೊಂದರೆ ಅನುಭವಿಸಿದ್ದಾನೆ ಎಂಬುದರ ಅಂದಾಜಿರುವ ನಾನು ಅಂಥವರತ್ತಲೇ ಬೆರಳು ತೋರಿಸಬೇಕಲ್ಲವೆ?
- ಜ. 8ರ ಆ ದಿನ ಬಂಡೆ ಜೊತೆಗಿನ ನಿಮ್ಮ ಭೇಟಿ ಸಂದರ್ಭ ಹೇಗಿತ್ತು?
ಜ.8ರ ಬುಧವಾರ ದಿನ ಆರ್ಯನ್ ಶಾಲೆಯಲ್ಲಿ ಸಮಾರಂಭವಿದೆ ಎಂದು ಸಮವಸ್ತ್ರ ಧರಿಸಿ ಹೋಗಿದ್ರು. ಅಲ್ಲಿಂದ ಬಂದಾಗ ನಾನು ಮಗ ಸಾಯಿ ದರ್ಶನ ಜೊತೆ ಮನೆಯಂಗಳದಲ್ಲಿದ್ದು ಮಗುವಿಗೆ ಉಣಬಡಿಸುತ್ತಿದ್ದೆ. ಬಂದವರೇ ಜೀಪಿನಲ್ಲೇ ಕುಳಿತಿದ್ದರು. ಮೊಬೈಲ್ನಲ್ಲಿ ಮಾತನಾಡುತ್ತ ಮನೆಯೊಳಗೆ ಬಂದವರೇ ತಕ್ಷಣ ಸಮವಸ್ತ್ರ ಕಳಚಿಟ್ಟು ಬಣ್ಣದ ಉಡುಗೆ ತೊಟ್ಟು ಹೊರಟೇಬಿಟ್ರು. ನಾನೇ ಚಹಾ ಕುಡ್ದು ಹೋಗ್ರಿ... ಅಂದಾಗ ಟೀ ಕುಡದವ್ರು ಹಾಗೇ ಜೀಪ್ ಹತ್ತಿದ್ರು. ಹೀಂಗ ಹೋದ ಗಂಡನ್ನ ಮತ್ತ ನೋಡಿದ್ದು ಗುಂಡು ತಲೆ ಹೊಕ್ಕಾಗ ಮೇಲೆನೇ... ಬಸವೇಶ್ವರ ಆಸ್ಪತ್ರೆಯಲ್ಲಿ...
- ಗುಂಡಿನ ಕಾಳಗ ಪುಟ್ಟದಾದ ಕೋಣೆಯಲ್ಲಿ ನಡೆದದ್ದು, ಇಡೀ ಪ್ರಸಂಗದ ಬಗ್ಗೆ ನಿಮಗೇನು ಗೊತ್ತು? ನಿಮ್ಮ ಅನುಮಾನಗಳೇನು?
ಅನುಮಾನ ನೂರಾರಿವೆ. ಪುಟ್ಟ ಕೋಣೆಯಲ್ಲಿ ಶೂಟೌಟ್ ನಡೆದಿದೆ. ಪಿಎಸ್ಐ ಮುರಳಿ, ಹೇಮಂತ ಎಲ್ರೂ ಪಾತಕಿ ಜೊತೆ ಗುದ್ದಾಡುವಾಗ ಗುಂಡು ನನ್ನ ಗಂಡನ ತಲೆಗೇ ಹೇಗೆ ತಾಕಿತು? ಪಾತಕಿ ಇವರನ್ನು ಬಿಟ್ಟು ನನ್ನ ಪತಿಯನ್ನೇ ಯಾಕೆ ಗುರಿಯಾಗಿಸಿಕೊಂಡ? ಪಿಸ್ತೂಲ್ ಇಲ್ಲದೆ ಬಂಡೆ ಬಂದಿದ್ರು ಅಂತಾರೆ, ಹಾಗಾದ್ರೆ ಇವರ ಜೇಬಲ್ಲಿ ಗುಂಡುಗಳು ಪತ್ತೆಯಾಗಿವೆ ಅವು ಬಂದದ್ದು ಎಲ್ಲಿಂದ? ಕೋಣೆಯಲ್ಲಿ ಏನಾಯ್ತು ಅಂತ ಕೇಳಿದ್ರೆ ಸಾಕ್ಷಾತ್ ಅಲ್ಲಿದ್ದಂಥ ಪಿಎಸ್ಐ ಮುರಳಿ, ಹೇಮಂತ, ಗೋಪಾಲ ರಾಠೋಡ ಒಂದೊಂದು ರೀತಿ ಹೇಳುತ್ತಿದ್ದಾರೆ. ಒಬ್ಬರ ಮಾತು ಇನ್ನೊಬ್ಬರ ಹೇಳಿಕೆಗೆ ಹೊಂದಿಕೆಯಾಗುತ್ತಿಲ್ಲ. ಗುಂಡಿನ ಕಾಳಗ ನಡೆದಾಗ ಐಜಿಪಿ ಅಲ್ಲೇ ಹಾಜರಿದ್ರು ಅಂತಾದ್ರೆ ತಮ್ಮ ಅಧಿಕಾರಿಯೊಬ್ಬರಿಗೆ ಗುಂಡು ತಗಲುವಂಥ ಪ್ರಸಂಗವನ್ನು ಅವರು ಗಮನಿಸಲಿಲ್ಲವೆ? ನಾನು ಹೋಗಬೇಡ ಅಂದ್ರೂ ಬಂಡೆ ಹೋದ್ರು ಅಂತ ಐಜಿಪಿ ಹೇಳುವುದು ಅದೆಷ್ಟು ನಿಜ? ತುಂಬ ಹತ್ತಿರದಿಂದ ಮುನ್ನಾ ಗುಂಡು ಹಾರಿಸಿದ್ದರೆ ನನ್ನ ಗಂಡನ ತಲೆ ಹೊಕ್ಕಿದ್ದು ಪೊಲೀಸ್ ರಿವಾಲ್ವರ್ನಿಂದ ಹಾರಿದ ಗುಂಡುಗಳು... ಮುನ್ನಾ ಹಾರಿಸಿದನೆ? ಅಲ್ಲಿದ್ದ ಜೊತೆಗಾರ ಅಧಿಕಾರಿಗಳು ಹಾರಿಸಿದರೆ? ಅಲ್ಲಿ ನಡೆದ್ದಾದರೂ ಏನು? ಇತರೆ ಪಿಎಸ್ಐಗಳಿಗೆ ಏನೂ ಆಗೇ ಇಲ್ಲವಲ್ಲ, ಅದ್ಹೇಗೆ? ಇವೆಲ್ಲ ಅನುಮಾನಗಳಿಗೆ ಉತ್ತರ ಕೊಡುವವರು ಯಾರು?
- ಪ್ರಕರಣದ ಸಿಐಡಿ ತನಿಖೆ ಸಾಗಿದೆ, ಇದಕ್ಕೇನಂತೀರಿ?
ಸಿಐಡಿ ತನಿಖೆ ಸಾಗಿದೆ. ಅದೂ ಆರೋಪ ಹೊತ್ತ ಹಿರಿಯ ಪೊಲೀಸ್ ಅಧಿಕಾರಿ ಅದೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಈ ತನಿಖೆಯಲ್ಲಿ ವಿಶ್ವಾಸವಿಲ್ಲ. ಆದರೂ ನ್ಯಾಯ ಕೊಡಿಸುವ ಭರವಸೆ ಸಿಐಡಿ ಅಧಿಕಾರಿಗಳು ನೀಡಿದ್ದಾರೆ. ಹೀಗಾಗಿ ಸಿಐಡಿ ತನಿಖೆಯ ಸ್ವರೂಪ ಏನಿರಬಹುದು ಎಂಬುದನ್ನು ಕಾದು ನೋಡುವ ನಿಲುವು ತೆಗೆದುಕೊಂಡಿರುವೆ. ಸಿಐಡಿ ತನಿಖೆ ನನ್ನ ಹಾಗೂ ಕುಟುಂಬದವರು ಶೂಟೌಟ್ ಸುತ್ತ ಹೊಂದಿರುವ ಅನುಮಾನಗಳಿಗೆ ಉತ್ತರ ರೂಪದಲ್ಲಿ ಹೊರಬೀಳದೆ ಹೋದಲ್ಲಿ ಆಗ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ. ಸಿಬಿಐ ತನಿಖೆಯೇ ನಡೆಯಬೇಕು. ಆಗಲೇ ಸತ್ಯ ಹೊರಬರೋದು. ಹಾಗಂತ ದುಡುಕಿ ಹೇಳಿಕೆ ನೀಡಲಾರೆ. ಎಲ್ಲದಕ್ಕೂ ಸಮಯ- ಸಂದರ್ಭ ನೋಡಬೇಕಲ್ಲ.
- ಶೂಟೌಟ್ ಪ್ರಕರಣದ ಸುತ್ತ ಜಾತಿ-ಕೋಮು ಬಣ್ಣ ಬಳಿಯಲಾಗುತ್ತಿದೆ ಎಂಬ ಆರೋಪಗಳಿವೆಯಲ್ಲ, ನಿಮಗೂ ಹಾಗನ್ನಿಸಿದೆಯೆ?
ಯಾವ ಜಾತಿ- ಕೋಮಿನ ವಾಸನೆ ಇಲ್ಲಿ ಇಲ್ಲ. ಹಾಗೇ ರಾಚಲು ಕಾರಣಗಳೂ ಇಲ್ಲ. ಏಕೆಂದರೆ ಜಾತಿ- ಕೋಮು ಮೀರಿದ್ದು ಈ ಪ್ರಸಂಗ. ದೇಶದ್ರೋಹಿಯನ್ನು ಹಿಡಿಯಲು ಹೋಗಿ ಗಂಡ ಮೃತಪಟ್ಟಿದ್ದಾರೆ. ದೇಶದ ಹಿತಾಸಕ್ತಿ ಮುಂದೆ ಜಾತಿ ವಿಚಾರ ಗೌಣವಾಗಬೇಕಲ್ಲವೆ? ನನ್ನ ಹೋರಾಟ, ಮಾತುಕತೆಯಲ್ಲಿ ಎಲ್ಲಿಯೂ ಜಾತಿ ಇಲ್ಲ. ಐಜಿಪಿ ವಿರುದ್ಧದ ಆರೋಪ ನನ್ನೊಳಗಿನ ಆಕ್ರೋಶ. ಗಂಡನಾಡಿದ ಮಾತು, ಆತನ ಚರ್ಚೆಗಳ ಹಿನ್ನೆಲೆಯಿಂದ ಬಂದಂತಹ ಕೋಪದ ಪ್ರತಿಫಲ. ಅಲ್ಲಿ ಯಾಕೆ ಜಾತಿ ಕಾಣಬೇಕು ಘಟನೆಯನ್ನು ತಿರುಚಲು ಹಲವರು ಜಾತಿ ಎಂದು ಹುಯಿಲೆಬ್ಬಿಸುತ್ತಿದ್ದಾರೆ. ಗಂಡ ಜನಸ್ನೇಹಿಯಾಗಿದ್ದರು. ಅದಕ್ಕೆ ಜನತೆ ಅವರು ಸತ್ತಾಗ ಆಕ್ರೋಶಗೊಂಡಿದ್ದಾರೆಂಬುದು ಎಲ್ಲರೂ ಅರಿಯಲಿ. ರಾಜಕೀಯ, ಜಾತಿ ಯಾವುದೂ ಸೋಂಕದ ಮಾತು ನನ್ನದು. ನ್ಯಾಯ ಬೇಕು. ಕೋಣೆಯೊಳಗಿನ ಗುಂಡಿನ ಚಕಮಕಿ ಹುದುಗಿಸಿಕೊಂಡಿರುವ ಹಲವು ಕರಾಳ ಸತ್ಯಗಳು ಹೊರಬರಬೇಕು ಎಂಬುದೇ ನನ್ನ- ಕುಟುಂಬದವರೆಲ್ಲರ ಆಗ್ರಹ. ಹಾಗೇ ಹೊರಬರುವ ಕಟುವಾಸ್ತವ ಇಡಿ ಪೊಲೀಸ್ ಇಲಾಖೆ- ಜನತೆಗೆ ಗೊತ್ತಾಗಬೇಕು.
- ಗಂಡನಿಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳ ಅಂತ ಹೇಳ್ತೀರಿ, ಮೇಲಧಿಕಾರಿಗಳಿಗೆ ದೂರಬಹುದಿತ್ತಲ್ಲ?
ಕಿರುಕುಳ ಇತ್ತು ಅಂತ ಗಂಡನೇ ಅನೇಕ ಸಾರಿ ಹೇಳುತ್ತಿದ್ದರು. ನಾವು ಪರಿಸ್ಥಿತಿ ಇಂದೋ, ನಾಳೆಯೋ ಸುಧಾರಿಸಬಹುದು ಅಂತ ನಂಬಿಕೆ ಇಟ್ಟುಕೊಂಡಿದ್ದೆವು. ಆದ್ರ ಕಿರುಕುಳ ಈ ರೀತಿ ಚಕಮಕಿ ಸ್ವರೂಪಕ್ಕೂ ಬರ್ತದ ಅಂತ ಕನಸಲ್ಲೂ ನೆನೆಸಿದವರಲ್ಲ. ಪಾತಕಿಯನ್ನು ಹಿಡಿಯಲು ನನ್ನ ಪತಿಗೆ ಅಲ್ಲಿಗೆ ಕಳುಹಿಸಲಿಲ್ಲ, ನನ್ನ ಪತಿಯನ್ನೇ ಗುರಿಯಾಗಿಸಿಕೊಂಡು ಬಲಿ ಪಡೆಯಲಿಕ್ಕೇ ಏನೆಲ್ಲಾ ಹಂತದಲ್ಲಿ ಸಂಚು, ಷಡ್ಯಂತ್ರ ನಡೆಯಿತಾ ಎಂಬ ಬಲವಾದ ಅನುಮಾನ ನನ್ನನ್ನ ಕಾಡುತ್ತಿದೆ. ಅದಕ್ಕೇ ಸಿಐಡಿ ವಿಚಾರಣೆಗಿಂತ ಸಿಬಿಐ ವಿಚಾರಣೆ ನಡೆದಾಗಲೇ ಹಕೀಕತ್ ಹೊರಬರೋದು.
- ಸರ್ಕಾರಕ್ಕೆ ನಿಮ್ಮ ಆಗ್ರಹ ಏನು?
ಸಿಐಡಿ ವಿಚಾರಣೆಗಿಂತ ಪ್ರಕರಣದ ಸಿಬಿಐ ವಿಚಾರಣೆ ನಡೆಸಬೇಕು. ವಾಸ್ತವ ಸಂಗತಿಗಳ ಮೇಲೆ ಬೆಳಕು ಚೆಲ್ಲಬೇಕು. ಈ ಪ್ರಸಂಗದ ಲೋಪಗಳು ಹೊರಬಂದರಷ್ಟೇ ಪೊಲೀಸ್ ಇಲಾಖೆ ಪುನಾ ಜನರ ವಿಶ್ವಾಸಕ್ಕೆ ಪಾತ್ರವಾಗುತ್ತದೆ. ಇಲ್ಲದಿದ್ದಲ್ಲಿ ಇಡಿ ಇಲಾಖೆಯ ಬಗ್ಗೆಯೇ ಜನಮನದಲ್ಲಿ ಶಂಕೆಗಳು ಉಳಿದುಕೊಳ್ಳುವ ಅಪಾಯಗಳೇ ಹೆಚ್ಚು. ಸರ್ಕಾರ ವಿಚಾರಣೆ ಸಿಬಿಐಗೆ ವಹಿಸುವ ಮೂಲಕ ಈ ವಿಚಾರದಲ್ಲಿ ತನ್ನ ಪ್ರಾಮಾಣಿಕತೆ ಪ್ರದರ್ಶಿಸಲಿ. ಅಧಿವೇಶನ ನಡೆದಿದೆ. ಪ್ರಕರಣ ಚರ್ಚೆಗೆ ಬಂದಿದೆ. ಅಲ್ಲಿ ಪ್ರತಿಪಕ್ಷದವರು ಪ್ರಕರಣದ ಪರ ಮಾತನಾಡಿ- ಚರ್ಚಿಸಿ ಸದನದ ಗಮನ ಸೆಳೆದು ನ್ಯಾಯ ನೀಡುವ ನಿರೀಕ್ಷೆ ಇದೆ.
- ಶೇಷಮೂರ್ತಿ ಅವಧಾನಿ, ಕನ್ನಡಪ್ರಭ