ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಅರಳಿದ ಶಿರವಾಲ್

ಕಳೆದ ಕೆಲವು ವಾರಗಳಿಂದ ನಿಮಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಪ್ರವಾಸೀ ತಾಣಗಳ ಪರಿಚಯ ಮಾಡಿಕೊಡುತ್ತಿದ್ದೇನೆ...

Rashmi Kasaragodu
Updated On : 27 Jan 2014, 12:28 pm

ಕಳೆದ ಕೆಲವು ವಾರಗಳಿಂದ ನಿಮಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಪ್ರವಾಸೀ ತಾಣಗಳ ಪರಿಚಯ ಮಾಡಿಕೊಡುತ್ತಿದ್ದೇನೆ. ಹಲವಾರು ಓದುಗರು ಈ ಬರಹಗಳನ್ನು ಓದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ತಮಗೆ ಕೇವಲ ಹಂಪಿಯ ಬಗ್ಗೆ ಮಾತ್ರ ಗೊತ್ತಿತ್ತು. ಈಗ ಆಸಕ್ತಿ ಮೂಡಿ ಬೇಸಗೆಯ ರಜೆಯ ದಿನಗಳಲ್ಲಿ ತಮ್ಮ ಮಕ್ಕಳೊಂದಿಗೆ ಈ ಪ್ರದೇಶಗಳಲ್ಲಿ ಪ್ರವಾಸ ಮಾಡುತ್ತೇವೆ ಎಂದು ಬರೆದು ತಿಳಿಸಿದ್ದಾರೆ. ಇದನ್ನು ಓದಿದ ಮೇಲೆ ನನ್ನ ಶ್ರಮ ಸಾರ್ಥಕವೆನಿಸಿತು. ಈಗ ಅಂಥದ್ದೇ, ಅಷ್ಟಾಗಿ ಜನಕ್ಕೆ ಗೊತ್ತಿಲ್ಲದ ಗುಲ್ಬರ್ಗಾ ಜಿಲ್ಲೆಯ ಶಹಾಪೂರ್ ತಾಲೂಕಿನಿಂದ ಹತ್ತು ಕಿ.ಮೀ. ದೂರದಲ್ಲಿ ಭೀಮಾ ನದಿಯ ಬಲದಂಡೆಯ ಸಮೀಪ ಇರುವ "ಶಿರವಾಲ್‌" ಎಂಬ ಹಳ್ಳಿಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ.
ಶಿರವಾಲ್ ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಹೆಸರುವಾಸಿಯಾಗಿದ್ದ ಒಂದು ಜಾಗ. ಇಲ್ಲಿ ನಲವತ್ತಾರು ಸ್ಮಾರಕಗಳಿವೆ ಎಂದರೆ ನೀವು ನಂಬುತ್ತೀರಾ! ಐದು ಬಾವಿಗಳು, ಏಳು ಮಠಗಳು ಮತ್ತು ಮೂವತ್ತನಾಲ್ಕು ದೇವಾಲಯಗಳಿವೆ. ಇವುಗಳಲ್ಲಿ ಬಹುಪಾಲು ಒಟ್ಟಿಗಿವೆ, ಕೆಲವು ಮಾತ್ರ ಅಲ್ಲಿ ಇಲ್ಲಿ ಚದರಿ ಹೋಗಿವೆ. ಹತ್ತನೇ ಶತಮಾನದಲ್ಲಿ ಸ್ಥಳೀಯವಾಗಿ ದೊರಕುತ್ತಿದ್ದ ಸುಣ್ಣದಕಲ್ಲನ್ನು ಬಳಸಿ ರಾಷ್ಟ್ರಕೂಟರ ಆಳ್ವಿಕೆಯ ಸಮಯದಲ್ಲಿ ಇವುಗಳನ್ನು ಕಟ್ಟಲಾಯಿತು. ಇದೊಂದೇ ಜಾಗದಲ್ಲಿ ಇಷ್ಟೊಂದು ಸ್ಮಾರಕಗಳಿರುವುದು ಪ್ರವಾಸೋದ್ಯಮ ವಿಭಾಗದವರ ಸಂಶೋಧನೆ ಇಲ್ಲದ್ದಿದರೆ ನನಗೂ ಗೊತ್ತಾಗುತ್ತಿರಲಿಲ್ಲ.
ಈ ಹಳ್ಳಿಯು ಶಿವನ ಆರಾಧನೆಗೆ ಹೆಸರಾಗಿದ್ದು ಇದನ್ನು ದಕ್ಷಿಣ ಕಾಶಿ ಎಂದು ಕರೆಯುತ್ತಿದ್ದರು. ಈ ಹಳ್ಳಿಯನ್ನು ಧರ್ಮದ ಮನೆ ಎಂದೂ, ಇದು ಮೊದಲ ಪಟ್ಟಣವಾದುದರಿಂದ ಆದಿ ಪಟ್ಟಣ ಎಂದೂ ಕರೆಯಲಾಗುತ್ತಿತ್ತು. ರಾಷ್ಟ್ರಕೂಟರು ಮಹಾರಾಷ್ಟ್ರದ ಎಲ್ಲೋರ, ಎಲಿಫೆಂಟಾ ಮತ್ತಿತರ ಜಾಗಗಳಲ್ಲಿ ಬಹಳ ದೇವಾಲಯಗಳನ್ನು ಕಟ್ಟಿದ್ದರು, ಆದರೆ ಕರ್ನಾಟಕದಲ್ಲಿ ಕೆಲವನ್ನು ಮಾತ್ರ ಎಂಬ ಮಾತುಗಳು, ಶಿರವಾಲ್ ಅನ್ನು ನೋಡಿದಾಗ ಸುಳ್ಳು ಎಂದು ಗೊತ್ತಾಗುತ್ತದೆ. ಏಕೆಂದರೆ ರಾಷ್ಟ್ರಕೂಟರ ರಾಜಧಾನಿಯಾಗಿದ್ದ ಸೇಡಂನಲ್ಲಿರುವ ಮಲ್ಕೇಡಿನ ಅತಿ ಸಮೀಪದಲ್ಲೇ ಶಿರವಾಲ್ ಇದೆ. ಮಲ್ಕೇಡ ಕೋಟೆ ಸಹ ದುಸ್ಥಿತಿಯಲ್ಲಿ ಇದ್ದುದನ್ನು ನಾನು ಗಮನಿಸಿದೆ.
ಶಿರವಾಲದಲ್ಲಿ ಬಹಳಷ್ಟು ದೇವಾಲಯಗಳು ಶಿಥಿಲಗೊಂಡು ಕೇವಲ ಆರು ದೇವಾಲಯಗಳು ಸುಸ್ಥಿತಿಯಲ್ಲಿವೆ. ಪ್ರತಿ ದೇವಾಲಯವನ್ನೂ ವಿವಿಧ ವಾಸ್ತು ಶಾಸ್ತ್ರದ ನಿಯಮಗಳಿಂದ ನಿರ್ಮಿಸಲಾಗಿದೆ. ಬಹುತೇಕ ದೇವಾಲಯಗಳಲ್ಲಿ ಗರ್ಭಗೃಹ, ಅಂತರಾಳ ಮತ್ತು ಸಭಾ ಮಂಟಪ ಇರುವುದನ್ನು ಕಾಣಬಹುದು. ಅವುಗಳು- ನಾಣಯ್ಯ ದೇವಾಲಯ, ನಾದಯ್ಯ ದೇವಾಲಯ, ಸುಜ್ಞಾನೇಶ್ವರ ದೇವಾಲಯ, ಸಿದ್ದೇಶ್ವರ ದೇವಾಲಯ, ಮಲ್ಲಿಕಾರ್ಜುನ ದೇವಾಲಯ ಮತ್ತು ಈಶ್ವರ ದೇವಾಲಯ.
ರಾಷ್ಟ್ರಕೂಟರ ಸಮಯದ ಉತ್ತಮ ವಾಸ್ತುಶಿಲ್ಪವನ್ನು ಹೊಂದಿರುವುದು ನಾಣಯ್ಯ ದೇವಾಲಯದಲ್ಲಿ, ವಿವಿಧ ಭಂಗಿಗಳಲ್ಲಿರುವ ಮಾನವರ ಆಕೃತಿಗಳು, ಶಿವಲಿಂಗ, ನಂದಿ, ಆನೆ, ಒಂಟೆ, ಪಕ್ಷಿಗಳು, ಕೋತಿ, ಪುಷ್ಪಗಳು, ಸಿಂಹಗಳು, ದೇವರುಗಳು, ಕಾಮ, ಸೂರ್ಯ, ವೈಣಿಕ, ಭೈರವಿ, ಹಿರಣ್ಯಕಶಿಪುವನ್ನು ಸಂಹರಿಸುತ್ತಿರುವ ನರಸಿಂಹ, ಅಂಜಲಿ ಮುದ್ರೆಯಲ್ಲಿ ಮಂಡಿಯೂರಿ ಕುಳಿತಿರುವ ಭಕ್ತ, ವಾದ್ಯವೃಂದದವರೊಂದಿಗೆ ನರ್ತಿಸುತ್ತಿರುವ ಶಿವ, ವಿಷ್ಣು, ಶಿವ-ಪಾರ್ವತಿ, ಮುಂತಾದ ಕೆತ್ತನೆಗಳಿವೆ. ಗರ್ಭಗೃಹದ ಉತ್ತರದ ಗೋಡೆಯಿಂದ ಕೆತ್ತಿರುವ ಮಕರದ ಬಾಯಿಯಿಂದ ನೀರು ಬರುವುದನ್ನು ನಾವು ಕಾಣಬಹುದು.
ನಾದಯ್ಯನ ದೇವಾಲಯ ನಾಣಯ್ಯನ ದೇವಾಲಯದ ಪಕ್ಕದಲ್ಲಿಯೇ ಇದೆ. ಈ ದೇವಾಲಯದಲ್ಲಿ ದೊಡ್ಡ ಶಿವಲಿಂಗವಿದೆ. ಸಂಗೀತಗಾರರು, ಕುಬ್ಜರು, ದ್ವಾರಪಾಲಕರು, ಗಜಲಕ್ಷ್ಮಿ, ಆನೆಗಳು, ಅಂತರಾಳದ ತೋರಣಗಳು, ಎಂಟು ಕೀರ್ತಿಮುಖಗಳು, ಮುಂತಾದ ಕೆತ್ತನೆಗಳನ್ನು ನಾವು ಕಾಣಬಹುದು. ಸುಜ್ಞಾನೇಶ್ವರ ದೇವಾಲಯವ ಕಂಬಗಳ ಸಭಾಮಂಟಪವನ್ನು ಇತ್ತೀಚೆಗೆ ಸುಸ್ಥಿರಗೊಳಿಸಲಾಗಿದೆ. ನವೀನ ಪ್ರಾಕಾರದಲ್ಲಿ ದೇವಾಲಯವಿದೆ. ಈ ದೇವಾಲಯದಲ್ಲಿ ಎರಡು ಗರ್ಭಗೃಹಗಳಿದ್ದರೂ, ಒಂದರಲ್ಲಿ ಯಾವ ದೇವರ ಪ್ರತಿಮೆಯೂ ಇಲ್ಲ.
ಮಲ್ಲಿಕಾರ್ಜುನನ ದೇವಾಲಯ, ಹಳ್ಳಿಯ ಹೊರಭಾಗದಲ್ಲಿದ್ದು, ಭೀಮಾ ನದಿಯ ದಂಡೆಯ ಮೇಲಿದೆ. ಕೆಲವು ಮರದ ತೊಲೆಗಳು ಬಿರುಕು ಬಿಟ್ಟಿರುವುದನ್ನು ಬಿಟ್ಟರೆ ದೇವಾಲಯ ಇಂದಿಗೂ ಸುಸ್ಥಿತಿಯಲ್ಲಿದೆ. ಇಲ್ಲಿ ನಿತ್ಯವೂ ದೇವರಿಗೆ ಪೂಜೆ ಸಲ್ಲುತ್ತದೆ.
ಈಶ್ವರನ ದೇವಸ್ಥಾನವೂ ಒಳ್ಳೆಯ ಸ್ಥಿತಿಯಲ್ಲಿದ್ದು ಇಲ್ಲಿ ನಂದಿಯನ್ನು ನಾವು ಕಾಣಬಹುದು. ಪಂಚತಂತ್ರದ ಕಥೆಗಳೂ ಕೆತ್ತನೆಯಲ್ಲಿ ಜೀವಪಡೆದಿವೆ. ಸಿಂಹ, ಮೊಸಳೆ, ಆನೆ, ಕಾಡು ಹಂದಿ ಮತ್ತು ಮಾನವರ ಕೆತ್ತನೆಗಳನ್ನೂ ಸಹ ನಾವು ನೋಡಬಹುದು. ಕೆಲವು ಕಡೆ ಹೂ-ಬಳ್ಳಿ, ರೇಖಾಗಣಿತದ ವಿನ್ಯಾಸಗಳು, ಸಂದೇಶಗಳನ್ನು ನೀಡುವ ಚಿತ್ರಗಳ ಕೆತ್ತನೆಗಳೂ ಸಹ ಇವೆ.
ಸಿದ್ದೇಶ್ವರ ದೇವಾಲಯದಲ್ಲಿ ಹಲವಾರು ಗರ್ಭಗೃಹಗಳೂ, ಸಭಾ ಮಂಟಪಗಳೂ, ಕೆಲವು ಉಪ ಗುಡಿಗಳೂ ಇವೆ. ಇಲ್ಲಿ ನಿತ್ಯವೂ ಪೂಜೆ ನಡೆಯುತ್ತದೆ. ದೊಡ್ಡ ಪ್ರಾಕಾರದಲ್ಲಿ ಮುಖ್ಯವಾದ ಸಿದ್ದೇಶ್ವರ ದೇವಸ್ಥಾನವಿದ್ದು, ಐದು ಉಪ ಗುಡಿಗಳೂ, ಎರಡು ಇನ್ನಿತರ ದೇವಸ್ಥಾನಗಳೂ ಇವೆ. ಪ್ರಾಕಾರದ ಸ್ವಲ್ಪ ಭಾಗ ಶಿಥಿಲಗೊಂಡಿದ್ದು, ಸ್ವಲ್ಪ ಭಾಗ ರಿಪೇರಿಯಾಗಿದ್ದು, ಉತ್ತರಕ್ಕೆ ಮಹಾದ್ವಾರವನ್ನು ಹೊಂದಿದೆ.  
ಇನ್ನು ಕೆಲವು ಸಣ್ಣ ದೇವಸ್ಥಾನಗಳನ್ನೂ ನಾವು ನೋಡಬಹುದು. ಒಂದು ಗುಂಪಿನಲ್ಲಿ ಮೂರು ಜೈನ ಗುಡಿಗಳು ಹಳ್ಳಿಯ ದಕ್ಷಿಣಕ್ಕೆ ಶಿರವಾಲ್-ಶಹಾಪುರ್ ರಸ್ತೆಯಲ್ಲಿ ಒಂದು ಮೈದಾನದಲ್ಲಿದೆ. ಆ ದೇವಾಲಯದ ಅಧಿಷ್ಟಾನವನ್ನು ಬಿಟ್ಟರೆ ಮಿಕ್ಕೆಲ್ಲವೂ ಶಿಥಿಲಾವಸ್ಥೆಯಲ್ಲಿವೆ. ಮಧ್ಯ ಭಾಗದಿಂದ ಉತ್ತರ, ದಕ್ಷಿಣ ಮತ್ತು ಪೂರ್ವಕ್ಕೆ ಮೂರು ಗುಡಿಗಳಿವೆ. ಪ್ರತಿಯೊಂದು ಗುಡಿಯಲ್ಲೂ ಗರ್ಭಗೃಹ, ಅಂತರಾಳ ಮತ್ತು ಮಧ್ಯಕ್ಕೆ ಎತ್ತರವಿರುವ ಸಭಾಮಂಟಪಗಳಿವೆ.
ಜೋಡಿ ಹನುಮನ ದೇವಾಲಯವು ವಿನೂತನ ದೇವಾಲಯವಾಗಿದ್ದು, ರಾಷ್ಟ್ರಕೂಟರ ಕಾಲದ ಕಂಬಗಳು, ಏಕಶಿಲಾ ಸ್ತಂಭಗಳು ಮತ್ತು ಬಾಗಿಲುಗಳನ್ನು ಮತ್ತೆ ಬಳಸಿ ವಿನೂತನವನ್ನಾಗಿ ಮಾಡಲಾಗಿದೆ. ಏಕ ಶಿಲಾ ಸ್ತಂಭಗಳ ಮೇಲೆ ಗಣೇಶ, ಮಹಿಷಾಸುರ ಮರ್ದಿನಿ, ಮಾನವಾಕೃತಿಗಳನ್ನು ನಾವು ಕಾಣಬಹುದು.
ಭೀಮಾ ನದಿ ದಂಡೆಯ ಮಣ್ಣನ್ನು ಬಳಸಿ ಕುಂಬಾರರು ಮಡಕೆಗಳನ್ನು ಮಾಡುತ್ತಿದ್ದುದರಿಂದ ಅಲ್ಲಿನ ದೇವಾಲಯವನ್ನು ಕುಂಬಾರ ದೇಗುಲವೆಂದು ಕರೆಯಲಾಗುತ್ತಿತ್ತು. ಗೋಡೆಗಳು ಹಾಳಾಗಿರುವುದು ಬಿಟ್ಟರೆ ದೇವಾಲಯ ಸುಸ್ಥಿತಿಯಲ್ಲಿದೆ. ಆದರೆ ಈಗ ಅದನ್ನು ದನಕರುಗಳ ಮೇವು, ಒಣ ಹುಲ್ಲು, ಬೂಸಾ ಮುಂತಾದವುಗಳನ್ನು ಇಡಲು ಬಳಸಲಾಗುತ್ತಿದೆ. ಸೂರ್ಯನ ದೇವಾಲಯದ ಕೆಲ ಭಾಗಗಳೂ ಸಹ ಶಿಥಿಲಗೊಂಡಿವೆ. ಚೌಕಟ್ಟಾದ ಗರ್ಭಗೃಹವನ್ನು ದನಕರುಗಳ ಮೇವು, ಒಣ ಹುಲ್ಲು, ಬೂಸಾ ಮುಂತಾದವುಗಳನ್ನು ಇಡಲು ಬಳಸಲಾಗುತ್ತಿದೆ ಇನ್ನುಳಿದ ದೇವಾಲಯಗಳೆಲ್ಲವೂ ಶಿಥಿಲಗೊಂಡಿವೆ.
ಈಗ ನಿಮಗೆ ಅಲ್ಲಿರುವ ಐದು ಬಾವಿಗಳ ಬಗ್ಗೆ ತಿಳಿಸುತ್ತೇನೆ. ಕಲೆ ಮತ್ತು ವಾಸ್ತುಶಿಲ್ಪದ ದೃಷ್ಟಿಯಿಂದ ಈ ಬಾವಿಗಳು ಮುಖ್ಯವಾಗಿವೆ. ಮೊದಲನೆಯ ಬಾವಿಯನ್ನು ಉತ್ತಮವಾಗಿ ಕಾಪಾಡಲಾಗಿದೆ. ಇದು ಹಳ್ಳಿಯ ವಾಯುವ್ಯ ದಿಕ್ಕಿನಲ್ಲಿ ಭೀಮಾ ನದಿಯ ತೊರೆಯ ಇನ್ನೊಂದು ಬದಿಯಲ್ಲಿದೆ. ಉತ್ತಮವಾಗಿ ಸಂಸ್ಕರಿಸಿದ ಸುಣ್ಣದಕಲ್ಲಿನಿಂದ ಇದನ್ನು ನಿರ್ಮಿಸಲಾಗಿದೆ. ಚೌಕಾಕಾರದ ಈ ಬಾವಿಗೆ ದಕ್ಷಿಣ ದಿಕ್ಕಿನಿಂದ 'ಔ' ಆಕಾರದಲ್ಲಿ ಮೆಟ್ಟಲುಗಳನ್ನು ನಿರ್ಮಿಸಲಾಗಿದೆ. ಬಾವಿಗೆ ಇಳಿಯುವ ಮೇಲ್ಭಾಗವನ್ನು ಪಶ್ಚಿಮದಿಂದ ಪೂರ್ವಕ್ಕೂ, ಕೆಳಗಿನ ಭಾಗವನ್ನು ದಕ್ಷಿಣದಿಂದ ಉತ್ತರಕ್ಕೂ ನಿರ್ಮಿಸಲಾಗಿದೆ. ಕೆಳಗಿನ ಭಾಗವು ಸಾದಾ, ನಿರಾಡಂಬರವಾಗಿದ್ದರೆ, ಮೇಲಿನ ಭಾಗದಲ್ಲಿ ರಾಮಾಯಣ, ಮಹಾಭಾರತ, ಭಾಗವತ, ಮತ್ತು ಪಂಚತಂತ್ರಗಳ ಕಥೆಗಳನ್ನು ನಿರೂಪಿಸುವ ಕೆತ್ತನೆಯ ಹಲಗೆಗಳು ಇವೆ.
ಎರಡನೆಯ ಬಾವಿಯು ಹಳ್ಳಿಯ ಪೂರ್ವ ದಿಕ್ಕಿನಲ್ಲಿದೆ. ಪೂರ್ವ ದಿಕ್ಕಿನಿಂದ ನದಿಯ ತೊರೆಯ ಉತ್ತರ ದಿಕ್ಕಿನಲ್ಲಿರುವ ಬಾವಿಗೆ ಇಳಿಯಲು ಮೆಟ್ಟಲುಗಳಿವೆ. ಈ ಬಾವಿಯು ಶಿಥಿಲಾವಸ್ಥೆಯಲ್ಲಿದೆ. ಕೇವಲ ಏಳು ಮೆಟ್ಟಲುಗಳು ಮಾತ್ರ ಕಾಣುತ್ತಿದ್ದು ಮಿಕ್ಕೆಲ್ಲ ಮೆಟ್ಟಲುಗಳು ಭಗ್ನಾವಶೇಷಗಳಲ್ಲಿ ಮುಳುಗಿ ಹೋಗಿದೆ. ಮೂರನೆಯ ಬಾವಿಯು ವಿಶಾಲವಾಗಿದ್ದರೂ ಆಳವಾಗಿಲ್ಲ. ನಾಲ್ಕನೆಯ ಬಾವಿಯು ಶಿಥಿಲಗೊಂಡಿದ್ದು ಈಗ ಪುನರುತ್ಥಾನಗೊಳಿಸಿ ವ್ಯವಸಾಯಕ್ಕೆ ಇದರ ನೀರನ್ನು ಬಳಸಲಾಗುತ್ತಿದೆ. ಐದನೆಯ ಬಾವಿ ಸುಸ್ಥಿತಿಯಲ್ಲಿದ್ದು ಕೆಳಗೆ ಇಳಿಯಲು ದಕ್ಷಿಣದಿಂದ ಮೆಟ್ಟಲುಗಳಿವೆ.
ಶಿರವಾಲ್‌ನಲ್ಲಿರುವ ಶಿಲ್ಪಕಲೆಗಳು ರಾಮಾಯಣ, ಮಹಾಭಾರತ, ಭಾಗವತ, ಗಂಗಾವತರಣ, ಶಿವ ಭಕ್ತರು, ಸಮುದ್ರ ಮಥನ, ಪಂಚತಂತ್ರ, ಸಣ್ಣ ಕಥೆಗಳು ಮತ್ತಿತರ ಮಾನವರ ಆಕೃತಿಗಳು, ಪ್ರಾಣಿಗಳು, ಪಕ್ಷಿಗಳು, ಬಳ್ಳಿಗಳು, ಹೂವುಗಳು, ಮುಂತಾದವುಗಳನ್ನೊಳಗೊಂಡಿದೆ. ಅಲ್ಲಿ ರಾಷ್ಟ್ರಕೂಟರ ಕಾಲದ ಏಳು ಶಾಸನಗಳೂ, ಶಿಲಾಹಾರದ ಎರಡು ಶಾಸನಗಳೂ, 1537 ಎ.ಡಿ. ಕಾಲದ ಒಂದು ಶಾಸನವೂ ಇವೆ.
ಚಾರಿತ್ರಿಕವಾಗಿ ಸಮೃದ್ಧವಾದ ಈ ಹಳ್ಳಿಯ ದೇವಾಲಯಗಳನ್ನಾಗಲೀ, ಬಾವಿಗಳನ್ನಾಗಲೀ, ಶಾಸನಗಳನ್ನಾಗಲೀ ಪುನರುತ್ಥಾನಗೊಳಿಸಿದಾಗ ಜನಸಾಮಾನ್ಯರು ಭೇಟಿ ಕೊಟ್ಟು ವಿಷಯ ತಿಳಿದುಕೊಳ್ಳುವುದರೊಂದಿಗೆ ಆ ಭಾಗದ ಜನರಿಗೆ ಆರ್ಥಿಕವಾಗಿ ಉಪಯೋಗವೂ ಆಗಬಲ್ಲದು. ಅಲ್ಲಿನ ಜನರಿಗೆ ತಮ್ಮಲ್ಲಿರುವ ಅಭೂತಪೂರ್ವ ವಸ್ತುಗಳ ಹಿರಿಮೆಯ ಬಗ್ಗೆ ತಿಳಿದಿಲ್ಲದಿರುವುದೂ ಒಂದು ದುರಂತ. ಇಂಥಹ ಅದ್ಭುತವಾದ ಸ್ಥಳಗಳನ್ನು ಕಾಪಾಡಿಕೊಳ್ಳುವ ಕಾಳಜಿ ಸರ್ಕಾರಕ್ಕಿಂತ ಹೆಚ್ಚಾಗಿ ಸ್ಥಳೀಯರಿಗೆ ಇರಬೇಕು. ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿ ಶಿರವಾಲ್ ಒಂದು ಉತ್ತಮ ಪ್ರವಾಸೋದ್ಯಮ ತಾಣವಾಗಬೇಕು ಎನ್ನುವುದು ನನ್ನ ಅಭಿಲಾಷೆ. ನಾನು ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಯಾಗಿದ್ದಾಗ ಪಂಚಾಯತ್‌ಗಳ ಮೂಲಕ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಮೇಲೆ ಹೇಳಿದ ಸ್ಥಳಗಳ ಪುನರುತ್ಥಾನ, ಜನರು ಈ ಸ್ಥಳಗಳನ್ನು ಬಂದು ವೀಕ್ಷಿಸಲು ಅನುಕೂಲವಾಗುವಂತೆ ಉತ್ತಮ ರಸ್ತೆಗಳು, ಮಾರ್ಗಸೂಚಿ, ಪ್ರವಾಸ ತಾಣಗಳಲ್ಲಿ ಗಿಡ ಮರಗಳನ್ನು ನೆಡುವುದು ಮತ್ತು ಇತರ ಸೌಕರ್ಯಗಳನ್ನು ಕಲ್ಪಿಸುವ ಕ್ರಮಗಳನ್ನು ಕೈಗೊಂಡಿದ್ದೆ. ಈ ಲೇಖನದ ಮೂಲಕ ಗುಲ್ಬರ್ಗಾ ಜಿಲ್ಲೆಯ ಜನತೆಗೆ ನನ್ನ ಮನವಿ ಏನೆಂದರೆ ಇಂಥ ಪಾರಂಪರಿಕ ಸ್ಥಳಗಳು ಹಾಳಾಗಲು ಬಿಡಬೇಡಿ. ಜನತೆ ಮನಸ್ಸು ಮಾಡಿದರೆ ಶಿರವಾಲ್ ಹಳ್ಳಿಯು ಇಡೀ ಪ್ರಪಂಚವೇ ಗುರುತಿಸುವಂತಾಗಬಹುದು. ಆ ಸಾಧ್ಯತೆ ನಿಮ್ಮ ಕೈಲೇ ಇದೆ. ನಿಮಗೆ ಅಸ್ಥೆ ಅತೀವವಾಗಿದ್ದರೆ ಸರ್ಕಾರವೂ ನಿಮ್ಮ ಬೆಂಬಲಕ್ಕೆ ಸದಾ ಸಿದ್ಧವಿರುವುದು.


- ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement