ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕೊಹ್ಲಿಯೊಬ್ಬರೇ ತಂಡವನ್ನು ಹೊತ್ತೊಯ್ಯಬೇಕಾ ಧೋನಿ?

ನ್ಯೂಜಿಲೆಂಡ್ ವಿರುದ್ಧದ ಮೊದಲನೆಯ...

Mainashree
Updated On : 28 Jan 2014, 1:17 am

ಇತ್ತೀಚಿನ ಕೆಲವು ಸರಣಿಗಳಲ್ಲಿ ಭಾರತ ತಂಡ ವೈಫಲ್ಯ ಕಂಡಿದೆ. ಸಮರ್ಥ ಆಟಗಾರರು ತಂಡದಲ್ಲಿದ್ದಾರಾದರೂ, ಅವರ ಸಾಮರ್ಥ್ಯ ಮಾತ್ರ ಅನಾವರಣವಾಗುತ್ತಿಲ್ಲ. ಕೊಹ್ಲಿ ಅವರನ್ನು ಹೊರತುಪಡಿಸಿ ಉಳಿದ ಆಟಗಾರರ ಪ್ರದರ್ಶನ ತೀರಾ ನೀರಸವಾಗಿದೆ. ಈ ಕುರಿತು ಆಶಿಶ್ ಮಗೋತ್ರಾ ಫಸ್ಟ್‌ಪೋಸ್ಟ್ ಜಾಲತಾಣದಲ್ಲಿ ಮಾಡಿರುವ ವಿಶ್ಲೇಷಣೆ ಇಲ್ಲಿದೆ...

ನ್ಯೂಜಿಲೆಂಡ್ ವಿರುದ್ಧದ ಮೊದಲನೆಯ ಏಕದಿನ ಪಂದ್ಯದ ನಂತರ ಮಾತನಾಡಿದ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ನಾಲ್ಕು ಮತ್ತು ಐದನೇ ಕ್ರಮಾಂಕದ ಆಟಗಾರರು ಹೆಚ್ಚು ಸ್ಥಿರತೆಯಿಂದ ಆಡಬೇಕಿದೆ ಎಂದು ಹೇಳಿದರು(ಅಜಿಂಕ್ಯಾ ರಹಾನೆ ಮತ್ತು ಸುರೇಶ್ ರೈನಾ). ಎರಡನೆಯ ಏಕದಿನದ ನಂತರ, "ಓಪನರ್‌ಗಳು ಹೆಚ್ಚು ಜವಾಬ್ದಾರಿ ಹೊರಬೇಕು" ಎಂದರು(ಶಿಖರ್ ಧವನ್ ಮತ್ತು ರೋಹಿತ್ ಶರ್ಮ). ಅಂದರೆ ಭಾರತದ ಇಡೀ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಸರಿಯಾಗಿ ತನ್ನ ಕೆಲಸ ನಿರ್ವಹಿಸುವ ಒಬ್ಬೇ ಒಬ್ಬ ಆಟಗಾರನಾಗಿ ವಿರಾಟ್ ಕೋಹ್ಲಿ ಮಾತ್ರ ಉಳಿಯುತ್ತಾರೆ. ಇದೇನು ಆಶ್ಚರ್ಯ ತರಿಸುವ ವಿಷಯವಲ್ಲ. ಆದರೆ ತಂಡದಲ್ಲಿ ಬದಲಾವಣೆ ತರಲು ಬಯಸದ ಧೋನಿಯ ಅಸಂಬದ್ಧ ಧೋರಣೆ ಮಾತ್ರ ಹೆಚ್ಚುತ್ತಲೇ ಸಾಗಿರುವುದು ಕಳವಳಕಾರಿ. ತಂಡದಲ್ಲಿ ಭಾರೀ ಬದಲಾವಣೆ ತರಬೇಕು ಎಂದಿಲ್ಲಿ ಹೇಳುತ್ತಿಲ್ಲ. ಆದರೆ ಅವಶ್ಯಕ ಬದಲಾವಣೆಗಳಾಗದ ಕಾರಣದಿಂದಾಗಿಯೇ ಭಾರತ ಸಾಲುಸಾಲು ಸೋಲನುಭವಿಸುತ್ತಿದೆ ಎನ್ನುವುದು ಸ್ಪಷ್ಟ. ಈಗ ಇಲ್ಲೊಂದು ಪ್ರಶ್ನೆ ಉದ್ಭವವಾಗುತ್ತದೆ- ಒಂದು ವೇಳೆ ವಿದೇಶೀ ಪಿಚ್‌ಗಳಲ್ಲಿ ನಮ್ಮ ಯುವ ಆಟಗಾರರು ಸರಿಯಾಗಿ ಆಡುತ್ತಿಲ್ಲವೆಂದರೆ(ಧೋನಿಯ ಅಳತೆಗೆ ತಕ್ಕಂತೆಯೇ ಎಂದುಕೊಳ್ಳೋಣ), ಭಾರತ ಗೆಲ್ಲುವುದಾದರೂ ಹೇಗೆ?  
ವಿರಾಟ್ ಅವರನ್ನು ಹೊರತುಪಡಿಸಿದರೆ ನಮ್ಮ ಮತ್ಯಾವ ಬ್ಯಾಟ್ಸಮನ್‌ಗೂ ನ್ಯೂಜಿಲೆಂಡ್ ಬೌಲರ್‌ಗಳ ಶಾರ್ಟ್‌ಬಾಲ್‌ಗಳನ್ನು ಎದುರಿಸುವುದಕ್ಕೆ ಆಗುತ್ತಿಲ್ಲ. ಹೇಗೆ ಎದುರಿಸ ಬೇಕು ಎಂಬ ಅರಿವೇ ಅವರಿಗಿಲ್ಲ. ಹಾಗಾಗೇ, ಒಂದು ಕಾಲದಲ್ಲಿ ಸಚಿನ್ ತೆಂಡೂಲ್ಕರ್ ಅವರ ನೆರಳಲ್ಲೇ ಯಾವ ರೀತಿಯಲ್ಲಿ ಇಡೀ ತಂಡ ಆಶ್ರಯ ಪಡೆದಿತ್ತೋ ಅದೇ ರೀತಿ ಈಗ ವಿರಾಟ್ ಕೊಹ್ಲಿ ಅವರನ್ನೇ ನಮ್ಮ ಆಟಗಾರರು ಅತಿಯಾಗಿ ಅವಲಂಬಿಸಿದ್ದಾರೆ ಅನಿಸುತ್ತಿದೆ.
ಇದು ಯುವ ತಂಡವೇ ಇರಬಹುದು. ಆದರೆ ರೋಹಿತ್ ಶರ್ಮಾ ಮತ್ತು ಸುರೇಶ್ ರೈನಾರಂಥ ಆಟಗಾರರು ಬಹಳ ವರ್ಷಗಳಿಂದ ತಂಡದಲ್ಲಿದ್ದಾರೆ. ಆ ಕಾರಣಕ್ಕಾದರೂ ಅವರು ತಮ್ಮ ಅನುಭವವನ್ನು ಪ್ರದರ್ಶಿಸುವ ಕೆಲಸ ಮಾಡಬೇಕು. ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದ ವಿರುದ್ಧದ ಸರಣಿಗೆ ಮುನ್ನ ಸೂಕ್ತ ತಯಾರಿ ನಡೆಸುವುದಕ್ಕೆ ತಮ್ಮ ಆ 'ಅನುಭವ' ಅವರಿಗೆ ಸಾಥ್ ನೀಡಬೇಕಿತ್ತು. ಆದರೆ ಅಂಕಿ ಸಂಖ್ಯೆಗಳನ್ನು ನೋಡಿದಾಗ ವೇಗಕ್ಕೆ ತಕ್ಕಂತೆ ಅವರು ಹೊಂದಿಕೊಂಡಿಲ್ಲ/ ತಯಾರಿ ನಡೆಸಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ಇತ್ತೀಚೆಗೆ ಭಾರತ ತಂಡವೇನಾದರೂ ಸ್ಪರ್ಧಾತ್ಮಕವಾಗಿ ಆಡುತ್ತಿದೆಯೆಂದರೆ, ಅದಕ್ಕೆ ಕೊಹ್ಲಿಯ ಏಕಾಂಗಿ ಹೋರಾಟವೇ ಕಾರಣ.
ಜುಲೈ 1, 2013ರ ನಂತರ ನಮ್ಮ ಭಾರತೀಯ ಕಲಿಗಳು ವಿದೇಶೀ ಪಿಚ್‌ಗಳಲ್ಲಿ ತೋರಿದ ಪ್ರದರ್ಶನವನ್ನೇ ಒಮ್ಮೆ ಗಮನಿಸಿ: ಕೊಹ್ಲಿ: 11 ಪಂದ್ಯಗಳು, 531ರನ್, 75.85ರ ಸರಾಸರಿ. ರೈನಾ: 11 ಪಂದ್ಯಗಳು, 210 ರನ್, ಸರಾಸರಿ 30. ರೋಹಿತ್: 10 ಪಂದ್ಯಗಳು, 205 ರನ್, ಸರಾಸರಿ 25.62. ಧವನ್: 10 ಪಂದ್ಯಗಳು, 334 ರನ್, ಸರಾಸರಿ 37.11. ಧೋನಿ: 5 ಪಂದ್ಯಗಳು, 180 ರನ್, ಸರಾಸರಿ 45. ರಹಾನೆ: 4 ಪಂದ್ಯಗಳು 101ರನ್, ಸರಾಸರಿ 25.25. ವಿರಾಟ್ ಎಂಥ ಅದ್ಭುತ ಫಾರ್ಮ್‌ನಲ್ಲಿದ್ದಾರೆಂದರೆ, ಅವರಿಂದಾಗಿಯೇ ನಮ್ಮ ತಂಡದ ಉಳಿದ ಆಟಗಾರರ ಹುಳುಕುಗಳೆಲ್ಲ ಮುಚ್ಚಿಹೋಗುತ್ತಾ ಬಂದಿವೆ. ಆದರೆ ದಕ್ಷಿಣ ಆಫ್ರಿಕಾ ಮತ್ತು ನ್ಯೂಜೆಲೆಂಡ್ ಪ್ರವಾಸದವೇಳೆಗೆ ಗಾಳಿಯಲ್ಲಿ ಬ್ಯಾಟ್ ಬೀಸುವವರ ಬಂಡವಾಳವೆಲ್ಲ ಬಯಲಾಯಿತು.  
ಮೇಲ್ನೋಟಕ್ಕೆ ಧವನ್ ಉತ್ತಮವಾಗೇ ಆಡುತ್ತಿದ್ದಾರೆ ಅನಿಸಬಹುದು, ಆದರೆ ಅವರು ಗಳಿಸಿರುವ 334 ರನ್‌ಗಳಲ್ಲಿ 209 ರನ್‌ಗಳು ಜಿಂಬಾಬ್ವೆ ವಿರುದ್ಧದ 4 ಏಕದಿನ ಪಂದ್ಯಗಳಿಂದ ಬಂದಿವೆಯಷ್ಟೆ. ಇನ್ನು ರೈನಾ ವಿಷಯದಲ್ಲಂತೂ ಈ ಅಂಕಿ ಸಂಖ್ಯೆಗಳೂ ತೀರಾ ನೆಲಕಚ್ಚಿವೆ. ಜಿಂಬಾಬ್ವೆ ವಿರುದ್ಧ 48.50ರ ಸರಾಸರಿಯಲ್ಲಿ ಅವರು ಗಳಿಸಿದ 97ರನ್‌ಗಳನ್ನೇನಾದರೂ ಕಳೆದುಬಿಟ್ಟರೆ, ಉಳಿದ ತಂಡಗಳ ವಿರುದ್ಧದ ಅವರು ಬ್ಯಾಟಿಂಗ್ ವೈಖರಿಯನ್ನು ನೋಡುವುದಕ್ಕೇ ಮನಸ್ಸಾಗುವುದಿಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ಒಂದು ಏಕದಿನ ಪಂದ್ಯದಲ್ಲಿ ಅವರು 10 ರನ್ ಗಳಿಸಿದರು; ದಕ್ಷಿಣ ಆಫ್ರಿಕಾದ ವಿರುದ್ಧ ಅವರ ಸರಾಸರಿ 25 ರಷ್ಟಿದ್ದರೆ, ನ್ಯೂಜಿಲೆಂಡ್ ವಿರುದ್ಧ ಅದು 26.50ರಷ್ಟಿದೆ. ಇಂಥ ಕಳಪೆ ಪ್ರದರ್ಶನದ ಹೊರತಾಗಿಯೂ ಅವರಿಗೆ ಭಾರತ ತಂಡದಲ್ಲಿ ಅದ್ಹೇಗೆ ಜಾಗ ಸಿಗುತ್ತಿದೆಯೋ ಆ ಧೋನಿಯೇ ಬಲ್ಲ!
ಧೋನಿ ಪ್ರಶ್ನೆಯೊಂದನ್ನು ಕೇಳಿಕೊಳ್ಳಬೇಕು- ಸುರೇಶ್ ರೈನಾ ಮ್ಯಾಚ್ ವಿನ್ನಿಂಗ್ ಎನ್ನುವಂಥ ಪಂದ್ಯವನ್ನು ಕಳೆದ ಬಾರಿ ಆಡಿದ್ದು ಯಾವಾಗ? ಈ ಪ್ರಶ್ನೆಗೆ ರೈನಾ ಬೆಂಗಲಿಗರೂ ಕೊಡುವ ಕಾರಣವೇ ಬೇರೆ. "ಆತ ತುಂಬಾ ಕೆಳಕ್ರಮಾಂಕದಲ್ಲಿ ಆಡುತ್ತಿದ್ದಾನೆ, ಹಾಗಾಗೇ ರನ್ ಗಳಿಸಲು ದೊಡ್ಡ ಹೊಡೆತಕ್ಕೆ ಕೈಹಾಕಿ ಕೈಸುಟ್ಟುಕೊಳ್ಳಬೇಕಾಗುತ್ತದೆ" ಎಂದು. ಆದರೆ ಧೋನಿ ಕೂಡ ಕೆಳ ಕ್ರಮಾಂಕದಲ್ಲೇ ಆಡುತ್ತಾರಲ್ಲವೇ? ಇದನ್ನೆಲ್ಲ ನೋಡಿದಾಗ, ಈಗಲಾದರೂ ಸ್ಟುವರ್ಟ್ ಬಿನ್ನಿಯನ್ನು ತಂಡಕ್ಕೆ ಸೇರಿಸಿಕೊಳ್ಳುವುದರಲ್ಲಿ ಅರ್ಥವಿದೆ ಅನಿಸುತ್ತದೆ. ರಾಜಸ್ಥಾನ್ ರಾಯಲ್ಸ್ ಪಂದ್ಯಗಳಲ್ಲಿ ಕೆಳಕ್ರಮಾಂಕದಲ್ಲಿ ಆಡಿ ಸೈ ಎನಿಸಿಕೊಂಡಿರುವ ಸ್ಟುವರ್ಟ್, ಮಧ್ಯಮ ಗತಿಯಲ್ಲಿ ಬೌಲಿಂಗ್ ಕೂಡ ಮಾಡಬಲ್ಲರು. ರೈನಾರಂಥ ಕ್ಷೇತ್ರರಕ್ಷಕ ಅವರಲ್ಲವಾದರು, ಸದ್ಯಕ್ಕೆ ಭಾರತಕ್ಕೆ ಕೆಳಕ್ರಮಾಂಕದಲ್ಲಿ ಆಸರೆ ನೀಡಬಲ್ಲ ಆಟಗಾರನ ಅಗತ್ಯವಂತೂ ಹೆಚ್ಚಿದೆ.
ಇನ್ನು ಪರಿಣತ ಬ್ಯಾಟ್ಸ್‌ಮನ್ ಬೇಕಾದರೆ ಅಂಬಟಿ ರಾಯ್ಡುಗೆ ಅವಕಾಶ ಕೊಡುವುದಕ್ಕೆ ಇದು ಉತ್ತಮ ಸಮಯ. ರಾಯ್ಡು ಅಂತೂ ಈಗಿನ ಬ್ಯಾಟ್ಸ್‌ಮನ್‌ಗಳಿಗಿಂತಲೂ ಕಳೆಪೆಯಾಗಿ ಏನೂ ಆಡಲಾರರು ಮತ್ತು ಅವರು ಇನ್ನಿತರರಂತೆ ಮನೆಯಲ್ಲಷ್ಟೇ ಹುಲಿಯಲ್ಲ! ಇನ್ನು ಧೋನಿ, ರೈನಾ ಮತ್ತು ರಹಾನೆಗಿಂತಲೂ ಮುಂಚಿತವಾಗಿಯೇ ಅಂಗಣಕ್ಕಿಳಿಯಬೇಕು. ದಕ್ಷಿಣ ಆಫ್ರಿಕಾದಲ್ಲಿ 42ರ ಸರಾಸರಿಯಲ್ಲಿ ಅವರು ರನ್ ಗಳಿಸಿದರೆ, ನ್ಯೂಜಿಲೆಂಡ್ ವಿರುದ್ಧ (ಎರಡು ಏಕದಿನ ಪಂದ್ಯಗಳು) ಅವರ ರನ್‌ಗಳಿಕೆ 48ರ ಸರಾಸರಿಯಲ್ಲಿದೆ. ಅಗ್ರ ಕ್ರಮಾಂಕದ ಆಟಗಾರರು ಉತ್ತಮ ಪ್ರದರ್ಶನ ನೀಡಿದರೆ, ಫಿನಿಶಿಂಗ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ಆದರೆ ಕೊಹ್ಲಿ ಹೊರತುಪಡಿಸಿದರೆ ಉಳಿದ ಯಾವ ಬ್ಯಾಟ್ಸ್‌ಮನ್‌ಗಳೂ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಈ ಕಾರಣಕ್ಕಾಗಿಯೇ ಸಾಧ್ಯವಾದರೆ ಅವರು 4ನೇ ಕ್ರಮಾಂಕದಲ್ಲಿ ಆಡುವುದು ಒಳಿತು. ಇಡೀ ತಂಡ ಎಷ್ಟು ದಿನವೆಂದು ಕೊಹ್ಲಿಯ ಹೆಗಲ ಮೇಲೆ ಕೂತು ಸಾಗುತ್ತದೆ? ಸೌರವ್ ಗಂಗೂಲಿ ಏಕದಿನ ಪಂದ್ಯಗಳಲ್ಲಿ ಹಲವಾರು ವರ್ಷಗಳು ತಂಡವನ್ನು ಇದೇ ರೀತಿಯಲ್ಲಿ ಮುನ್ನಡೆಸಿದರು. ಆದರೆ ಕಾಲಾಂತರದಲ್ಲಿ ಅವರ ಆಟ ಕಳೆ ಕಳೆದುಕೊಳ್ಳುತ್ತಾ ಬಂದಿತು. ತಮ್ಮ ವೃತ್ತಿ ಜೀವನದ ಕೊನೆಯ 4 ವರ್ಷಗಳಲ್ಲಿ ಗಂಗೂಲಿಗೆ ಒಂದೇ ಒಂದು ಶತಕವನ್ನೂ ಸಿಡಿಸಲು ಸಾಧ್ಯವಾಗಲಿಲ್ಲ. ಹಾಗಾಗೇ ಎಲ್ಲರನ್ನೂ ಹೊತ್ತುಕೊಂಡು ಹೋಗುವಷ್ಟು ಶಕ್ತಿ ಒಬ್ಬ ಆಟಗಾರನ ಭುಜದಲ್ಲಿ ಯಾವಾಗಲೂ ಇರುವುದಿಲ್ಲ. ಅಲ್ಲದೆ ಈ ರೀತಿಯ ಹೆಚ್ಚಿನ ಜವಾಬ್ದಾರಿಯಿಂದಾಗಿ ಯುವ ಕೊಹ್ಲಿಗೆ ಅನವಶ್ಯಕ ಒತ್ತಡ ಹೇರಿದಂತಾಗುವುದಿಲ್ಲವೇ? ಒಂದು ವೇಳೆ ವಿರಾಟ್‌ಗೆ ಮುನ್ನಡೆಯುವುದು ಕಷ್ಟವಾಯಿತೆಂದರೆ, ಭಾರತ ತಂಡಕ್ಕೆ ನಿಸ್ಸಂಶಯವಾಗಿಯೂ ಸಂಕಷ್ಟಗಳು ಎದುರಾಗಲಿವೆ. ಏಕೆಂದರೆ ಅವರು ಶತಕದ ಮೇಲೆ ಶತಕ ಗಳಿಸಿದರೂ, ಉಳಿದ ಆಟಗಾರರಿಗೆ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗುತ್ತಿಲ್ಲ.
ಇನ್ನೊಂದು ವಿಷಯ. ಭಾರತ ತಂಡದ ಎಲ್ಲಾ ಆಟಗಾರರೂ ಸ್ಟ್ರೋಕ್‌ಪ್ಲೇಯರ್‌ಗಳೇ! ಅಂದರೆ ಹೊಡಿಬಡಿ ಗುಣದವರು. ಆದರೆ ತಂಡಕ್ಕೆ, ಇನ್ನೊಬ್ಬ ಆಟಗಾರನಿಗೆ ಅವಕಾಶ ನೀಡುತ್ತಾ, ಉತ್ತಮ ಜೊತೆಯಾಟ ನಡೆಸಬಲ್ಲ ಸಂಯಮಿ ಆಟಗಾರನ ಅಗತ್ಯವೂ ಇರುತ್ತದೆ. ಉದಾಹರಣೆಗೆ ಚೇತೇಶ್ವರ ಪೂಜಾರರಂಥ ಆಟಗಾರರದ್ದು.
  ಈ ಕೆಲಸವನ್ನು ತೆಂಡೂಲ್ಕರ್ ಹಲವಾರು ವರ್ಷಗಳಿಂದ ಮಾಡುತ್ತಾ ಬಂದರು. ಈಗ ಅವರ ನಿವೃತ್ತಿಯ ನಂತರ ಇಡೀ ತಂಡದ ಜವಾಬ್ದಾರಿ ಕೊಹ್ಲಿ ಬೆನ್ನೇರಿದಂತಾಗಿದೆ. ಕೆಲವು ಆಟಗಾರರ ಮೇಲೆ ಧೋನಿಗೆ ಬಹಳ ವಿಶ್ವಾಸವಿರಬಹುದು, ಆದರೆ ಅವರು ಕಳಪೆ ಪ್ರದರ್ಶನ ನೀಡುತ್ತಿರುವುದರಿಂದ ತಂಡಕ್ಕೇ ಹಾನಿಯಾಗುತ್ತಿದೆ ಎನ್ನುವುದನ್ನು ಧೋನಿ ಕಡೆಗಣಿಸಬಾರದು. ಎಲ್ಲಾ ಆಟಗಾರರಿಗೂ ಒಂದು ಸರಳ ಸಂದೇಶವನ್ನು ಅವರು ಕೂಡಲೇ ತಲುಪಿಸಿಬೇಕು: 'ಆಡಿ, ಇಲ್ಲವೇ ಅಳಿದುಹೋಗಿ"!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement