ಪ್ರಥಮ ಪ್ರಜೆ ಪ್ರಣಬ್ರ ಪ್ರಬುದ್ಧ ಭಾಷಣ
ಸ್ವಾಂತಂತ್ರ್ಯ ದಿನ, ಗಣರಾಜ್ಯೋತ್ಸವದ ದಿನ ಬಂದಿತೆಂದರೆ ನಮಗೆಲ್ಲ ಎಲ್ಲಿಲ್ಲದ ಉತ್ಸಾಹ. ಮೈಸೂರಿನಲ್ಲಿ ಓದುವಾಗ ಇವುಗಳೇ ನಮಗೆ ಮಹತ್ವದ ಹಬ್ಬದ ದಿನಗಳು. ಎರಡು ಆಚರಣೆಗಳು ಬರುವುದು ಮಳೆಗಾಲ ಮತ್ತು ಚಳಿಗಾಲಗಳಲ್ಲಿ ನಮ್ಮನ್ನು 4 ಗಂಟೆಗೆ ಎಬ್ಬಿಸುತ್ತಿದ್ದರು. ಪ್ರತಿಯೊಬ್ಬರೂ ಸ್ನಾನ ಮಾಡಿ 7 ಗಂಟೆಗೆ ಸರಿಯಾಗಿ ತಿಂಡಿಗೆ ಹೋಗಬೇಕಾಗುತ್ತಿತ್ತು. ನಂತರ ಶಿಕ್ಷಕರೆಲ್ಲ ಬರುತ್ತಿದ್ದರು. ತಯಾರು ಮಾಡಿದ್ದ ಭಾಷಣವನ್ನು ಮತ್ತೆ ಮತ್ತೆ ಓದುವುದು ನಡೆಯುತ್ತಿತ್ತು. ಈ ಎರಡೂ ಹಬ್ಬಗಳ ಮುನ್ನಾ ದಿನ ನಮ್ಮ ದೇಶದ ಪ್ರಥಮ ಪ್ರಜೆ-ರಾಷ್ಟ್ರಪತಿಗಳ ಭಾಷಣ. ಅದನ್ನು ಕೇಳುವುದೆಂದರೆ ನಮಗೆಲ್ಲ ಏನೋ ಸಡಗರ. ಗ್ಯಾನಿ ಜೇಲ್ ಸಿಂಗ್ ರಾಷ್ಟ್ರಪತಿ ಆದಾಗಿನಿಂದಲೂ ನಾನು ನಿರಂತರವಾಗಿ ಭಾಷಣ ಕೇಳುತ್ತಿದ್ದೆ. ಆಗ ಹಿಂದಿ, ಇಂಗ್ಲಿಷ್ ಅರ್ಥವಾಗುತ್ತಿರಲಿಲ್ಲ.
ಆದರೂ ಕೇಳಬೇಕೆಂಬ ಉತ್ಸಾಹ. ಏಕೆ ಗೊತ್ತೇ? ಪ್ರಾರಂಭದಲ್ಲಿ ಮತ್ತು ಮುಕ್ತಾಯದಲ್ಲಿ ರಾಷ್ಟ್ರಗೀತೆಯನ್ನು ನುಡಿಸುತ್ತಾರಲ್ಲ ಅದಕ್ಕೆ. ಮುಂದೆ ಕಾಲೇಜು ದಿನಗಳಲ್ಲಿ ರಾಷ್ಟ್ರಪತಿ ಭಾಷಣಗಳು ಅರ್ಥವಾಗಲು ಪ್ರಾರಂಭವಾದ ಮೇಲೆ ಭಾಷಣಗಳು ಸಪ್ಪೆ ಎನಿಸಲಾರಂಭಿಸಿದ್ದವು. ಕಾಲೇಜುಗಳಲ್ಲಿ ರಾಷ್ಟ್ರಗೀತೆಯನ್ನು ಹಾಡಿಸದಿರುವುದು ನನಗೆ ಇಂದಿಗೂ ಬೇಸರ ತರಿಸುವ ಸಂಗತಿಯಾಗಿದೆ.
ನಮ್ಮ ದೇಶದ್ದೇ ಆದ ಕೆಲವು ಪ್ರದೇಶಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಅವಕಾಶವಿಲ್ಲದಿರುವುದಂತೂ ಇನ್ನೂ ಬೇಸರದ ಸಂಗತಿ. ಕೆಲವು ರಾಜಕಾರಣಿಗಳ ಕೀಳು ರಾಜಕೀಯದಿಂದ ದೇಶಭಕ್ತಿಯಲ್ಲಿಯೂ ಕೋಮುವಾದವನ್ನು ಹುಡುಕುವಂತಾಗಿರುವುದು ಅತ್ಯಂತ ಖೇದಕರ ಸಂಗತಿ. ಇತ್ತೀಚಿನ ಕೆಲವು ವರ್ಷಗಳಿಂದ ರಾಷ್ಟ್ರಪತಿಗಳ ಭಾಷಣವನ್ನು ಕೇಳುವುದನ್ನೇ ಬಿಟ್ಟುಬಿಟ್ಟಿದ್ದೆ. ಇದೊಂದು ಆಳುವ ಸರ್ಕಾರದ ಮುಖವಾಣಿ, ಯಾರೋ ಬರೆದುಕೊಟ್ಟಿದ್ದನ್ನು ಓದಿಮುಗಿಸುವ ನಿರ್ಜೀವ ಆಚರಣೆ ಎಂಬ ಭಾವ ನನ್ನಲ್ಲಿ ಉಂಟಾಗಿತ್ತು. ಅದೃಷ್ಟವಶಾತ್ ಮೊನ್ನೆ ನಡೆದ 65ನೇ ಗಣರಾಜ್ಯೋತ್ಸವದ ಹಿಂದಿನ ದಿನ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿಯವರ ಭಾಷಣವನ್ನು ಕೇಳಿ ಹೃದಯ ತುಂಬಿ ಬಂದಿತು. ಹೊಸ ಆಶಾಕಿರಣ ಮೂಡಿತು. ಆ ಕಿರಣದ ಕೆಲವು ಹೊಳಹುಗಳನ್ನು ಓದುಗರೊಂದಿಗೆ ಹಂಚಿಕೊಳ್ಳಬೇಕೆನಿಸಿತು. ರಾಷ್ಟ್ರಪತಿಗಳ ಭಾಷಣ ಸರ್ಕಾರದ ಮುಖವಾಣಿಯಂತಿರದೆ ಎಚ್ಚರಿಕೆಯ ಗಂಟೆಯಾಗಿತ್ತು. ಭವಿಷ್ಯತ್ತು ಹೇಗಿರಬೇಕೆಂಬ ನಿರ್ದೇಶನ ನೀಡುವಂತಿತ್ತು. ಪ್ರಜೆಗಳಿಗೆ ಈ ಮಾರ್ಗದಲ್ಲಿ ನಡೆಯಿರಿ ಎಂಬ ಸ್ಪಷ್ಟ ಸಂದೇಶ ನೀಡುವಂತಿತ್ತು.
ಪ್ರಜಾಪ್ರಭುತ್ವಕ್ಕೆ ತನ್ನನ್ನು ತಾನು ಗುಣಪಡಿಸಿಕೊಳ್ಳುವ ಶಕ್ತಿ ಇದೆ. ಪ್ರಪಂಚ ಅನೇಕ ಆಡಳಿತ ಸಾಧ್ಯತೆಗಳನ್ನು ಕಂಡಿದೆ. ವಂಶಪಾರಂಪರ್ಯವಾಗಿ ಬರುವ ರಾಜಪ್ರಭುತ್ವ, ಹಿಂಸೆ ಮತ್ತು ಶಕ್ತಿಗಳಿಂದ ವಶಪಡಿಸಿಕೊಂಡು ಸರ್ವ ಅಧಿಕಾರಿ ಪ್ರಭುತ್ವ "ಸಮತಾವಾದಿ" ಪ್ರಭುತ್ವ(ಕಮ್ಯುನಿಸಮ್), ಸರ್ವರೂ ಶಿಕ್ಷಿತರು, ಜಾಗೃತರೂ ಆಗುತ್ತಿರುವ ಈ ದಿನಗಳಲ್ಲಿ ಮೇಲಿನ ಮೂರು ಪ್ರಭುತ್ವಗಳು ಜನರಿಗೆ ಇಷ್ಟವಾಗುತ್ತಿಲ್ಲ. ಅನೇಕ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಟ ನಡೆಯುತ್ತಿದೆ. ಹಾಗೆಂದು ಪ್ರಜಾಪ್ರಭುತ್ವದಲ್ಲಿ ದೋಷಗಳೇ ಇಲ್ಲವೆಂದಲ್ಲ. ಈ ಜಗತ್ತಿನಲ್ಲಿ ಇದುವರೆಗೆ ಸಂಪೂರ್ಣ ದೋಷಮುಕ್ತವಾದ ಆಡಳಿತ ವ್ಯವಸ್ಥೆಯನ್ನಾಗಲಿ, ಧಾರ್ಮಿಕ ವ್ಯವಸ್ಥೆಯನ್ನಾಗಲಿ, ಯಾವ ಪ್ರವಾದಿಯಿಂದಲೂ ಕೊಡಲು ಸಾಧ್ಯವಾಗಿಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ ಬದಲಾವಣೆಗೆ, ಸುಧಾರಣೆಗೆ ಹೆಚ್ಚಿನ ಅವಕಾಶವಿದೆ. 238 ವರ್ಷಗಳ ಹಿಂದೆ ಸ್ವಾತಂತ್ರ್ಯ ಪಡೆದು ಯಶಸ್ವಿಯಾಗಿ ಪ್ರಜಾಪ್ರಭುತ್ವವನ್ನು ಅನುಸರಿಸಿಕೊಂಡು ಬರುತ್ತಾ ಹಿರಿಯಣ್ಣನೆನೆಸಿಕೊಂಡ ಅಮೆರಿಕ ಸಂಯುಕ್ತ ಸಂಸ್ಥಾನ ಪ್ರಜಾಪ್ರಭುತ್ವದ ಯಶಸ್ಸಿಗೆ ಸಾಕ್ಷಿಯಾಗಿ ನಿಂತಿದೆ. ನಮ್ಮ ರಾಜಕಾರಣಿಗಳಂತೆ ಅಮೆರಿಕದ ನಾಯಕರು ಪೊಳ್ಳು ಜಾತ್ಯತೀತ ವಾದವನ್ನು ಎತ್ತಿಹಿಡಿದಿಲ್ಲ. ಅವರು ಬಹಿರಂಗವಾಗಿಯೇ ಕ್ರಿಶ್ಚಿಯಾನಿಟಿಯನ್ನು ಒಪ್ಪಿಕೊಂಡಿದ್ದಾರೆ. ನಾಸ್ತಿಕರಿಗೆ ಮತ್ತು ಯಹೂದಿಗಳಿಗೆ ರಾಷ್ಟ್ರಪತಿಯಾಗುವ ಹಕ್ಕನ್ನು ಕೊಟ್ಟಿಲ್ಲ. ಆದರೆ ಎಲ್ಲಾ ನಾಗರಿಕರಿಗೂ ಸಮಾನವಾಗಿ ಬದುಕುವ ಹಕ್ಕನ್ನು ಕೊಟ್ಟಿದ್ದಾರೆ. ಆದರೆ ನಮ್ಮಲ್ಲಿ, ತಾವು ಜಾತ್ಯತೀತರು ಎಂದು ಘೋಷಿಸಿದವರೇ ಒಂದು ಕೋಮನ್ನು ಓಲೈಸಿ ಓಟ್ ಬ್ಯಾಂಕನ್ನಾಗಿ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಆದರೆ ಇಂದಿನ ಯುವ ಜನಾಂಗ ಎಚ್ಚೆತ್ತಿದೆ. ರಾಷ್ಟ್ರಪತಿಗಳು ಹೇಳಿದ ಹಾಗೆ ಪ್ರಜಾಪ್ರಭುತ್ವಕ್ಕೆ ತನ್ನನ್ನು ತಾನು ಗುಣಪಡಿಸಿಕೊಳ್ಳುವ ಶಕ್ತಿ ಇದೆ ಎಂಬುದನ್ನು ಕಳೆದ ತಿಂಗಳು ಪ್ರಕಟವಾದ 4 ರಾಜ್ಯಗಳ ಚುನಾವಣೆಯ ಫಲಿತಾಂಶ ತೋರಿಸಿಕೊಟ್ಟಿದೆ.
"ಸ್ಥಿರ ಸರ್ಕಾರದ ರಚನೆಯಾಗಬೇಕು- ಪ್ರತಿಯೊಬ್ಬ ಮತದಾರನೂ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು." ರಾಷ್ಟ್ರಪತಿಗಳ ದೂರದರ್ಶಿತ್ವ ಮತ್ತು ಆಳವಾದ ಚಿಂತನೆಗೆ ಮೇಲಿನ ವಾಕ್ಯಗಳು ಸಾಕ್ಷಿಯಾಗಿವೆ. 1989 ರಿಂದಲೂ ಒಂದು ಪಕ್ಷಕ್ಕೆ ಸ್ಪಷ್ಟವಾದ ಬಹುಮತ ಬಂದಿಲ್ಲ. ಇದಕ್ಕೆ ಅನೇಕ ಕಾರಣಗಳಿವೆ. ನಮ್ಮ ಚುನಾವಣೆಗಳಲ್ಲಿ ಹಣ ಮತ್ತು ಹೆಂಡ ಪ್ರಮುಖ ಪಾತ್ರ ವಹಿಸುತ್ತಿವೆ. ಪ್ರತಿ ಚುನಾವಣೆಯ ಸಂದರ್ಭದಲ್ಲಿಯೂ ಸಾವಿರಾರು ಜನ ಹೊಸ ಕುಡುಕರು ನಿರ್ಮಾಣವಾಗುತ್ತಿದ್ದಾರೆ. ಬಹಳಷ್ಟು ಜನ ರಾಜಕಾರಣಿಗಳು ತಾವು ಮುಚ್ಚಿಟ್ಟಿದ್ದ ಕಪ್ಪು ಹಣವನ್ನು ಹಂಚಿ ಗೆದ್ದು ಬರುತ್ತಾರೆ. ಪ್ರಾದೇಶಿಕ ಪಕ್ಷಗಳು ನಾಯಿ ಕೊಡೆಗಳಂತೆ ಹುಟ್ಟಿಕೊಂಡು ಸ್ಥಿರ ಸರ್ಕಾರ ಬರುವುದಕ್ಕೆ ಅಡ್ಡಿಪಡಿಸುತ್ತವೆ. ಮುಂದಿನ ದಿನಗಳಲ್ಲಿ ಮತದಾರರು ಜಾಗೃತರಾಗಿ ಸ್ವಾರ್ಥ ಪ್ರೇರಿತವಾದ, ಜಾತಿ ಪ್ರೇರಿತವಾದ, ಪ್ರಾದೇಶಿಕ ಪಕ್ಷಗಳನ್ನು ತಿರಸ್ಕರಿಸಿ ರಾಷ್ಟ್ರ ಧರ್ಮವನ್ನು ಎತ್ತಿ ಹಿಡಿಯುವ ನಮ್ಮ ದೇಶಕ್ಕೆ ಜಗತ್ತಿನ ದೃಷ್ಟಿಯಲ್ಲಿ ಒಳ್ಳೆಯ ಸ್ಥಾನವನ್ನು ತಂದುಕೊಡುವ, ಪಕ್ಷಕ್ಕೆ ಸಂಪೂರ್ಣಗಳ ಬಹುಮತ ಬರುವಂತೆ ಮಾಡಬೇಕು. ನಮ್ಮ ದೊಡ್ಡ ದೋಷವೆಂದರೆ ವಿದ್ಯಾವಂತರು, ವಿಚಾರವಾದಿಗಳು, ಸ್ವಾಮೀಜಿಗಳು, ಮತದಾನ ಮಾಡಲು ಮುಂದೆ ಬರದಿರುವುದು. ಇದು ಪ್ರಜಾಪ್ರಭುತ್ವದ ದೊಡ್ಡ ಗಾಯ. ರಾಷ್ಟ್ರಪತಿಗಳ ಈ ವರ್ಷ ನಡೆಯುವ ಮಹಾ ಚುನಾವಣೆಯಲ್ಲಿ ಈ ಗಾಯವನ್ನು ನಿವಾರಿಸಲು ಕರೆಕೊಟ್ಟಿದ್ದಾರೆ.
ನಮ್ಮ ದೇಶದಲ್ಲಿ ನಡೆದಷ್ಟು ಭ್ರಷ್ಟಾಚಾರದ ಹಗರಣಗಳು ಪ್ರಪಂಚದ ಯಾವ ದೇಶದಲ್ಲಿಯೂ ನಡೆದಿಲ್ಲವೇನೋ. ಇದಕ್ಕೆಲ್ಲಾ ಮೂಕ ಸಾಕ್ಷಿಯಾಗಿ ನಿಂತು ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿ ತಾವೂ ಕಪ್ಪು ಬೂದಿ ಅಂಟಿಸಿಕೊಂಡಿರುವ ಮನಮೋಹನ ಸಿಂಗ್, ಇತಿಹಾಸದಲ್ಲಿ ಅತ್ಯಂತ ದುರ್ಬಲ ಪ್ರಧಾನಿಯೆಂಬ ಅಪಖ್ಯಾತಿಯನ್ನು ಪಡೆದುಕೊಂಡು ನಿವೃತ್ತರಾಗುತ್ತಿದ್ದಾರೆ. ಭ್ರಷ್ಟಾಚಾರವೆಂಬ ಕ್ಯಾನ್ಸರ್ ರೋಗ ಎಷ್ಟು ಉಲ್ಬಣಿಸಿದೆಯೆಂದರೆ ಬರುವ ಚುನಾವಣೆಯಲ್ಲಿ ಒಬ್ಬ ಸಮರ್ಥ ಶಸ್ತ್ರ ಚಿಕಿತ್ಸಕ ಸ್ಥಿರ ಸರ್ಕಾರದೊಂದಿಗೆ ಬರದಿದ್ದರೆ ದೇಶಕ್ಕೆ ದೊಡ್ಡ ಗಂಡಾಂತರವಿದೆ.
ಸರ್ಕಾರಗಳು ದಾನ - ಧರ್ಮ ನೀಡುವ ಸಂಸ್ಥೆಗಳಲ್ಲ: ಚುನಾವಣೆಯಲ್ಲಿ ಗೆಲ್ಲುವುದೆಂದರೆ ಭ್ರಮಾಧೀನನಾಗಿ ಬದುಕುವುದಲ್ಲ. ಈ ಮಾತನ್ನು ಅನೇಕ ಜನ ನೇರವಾಗಿ ಕೇಜ್ರಿವಾಲರಿಗೆ ಅನ್ವಯಿಸಿದರು, ಇದು ಸತ್ಯವೇ ಆಗಿತ್ತು. ಆದರೆ ಸಿದ್ದರಾಮಯ್ಯ ನೀಡುತ್ತಿರುವ ಅನ್ನ ಭಾಗ್ಯ, ಶಾದಿ ಭಾಗ್ಯ, ಯೋಜನೆಗಳು ಜಯಲಲಿತ ನೀಡಿರುವ ಟಿ.ವಿ, ಲ್ಯಾಪ್ಟಾಪ್, ಕೇಂದ್ರ ಸರ್ಕಾರ ಅನುಮೋದಿಸಿರುವ ಆಹಾರ, ಭದ್ರತಾ ಕಾಯಿದೆ, ಇವೆಲ್ಲವಕ್ಕೂ ರಾಷ್ಟ್ರಪತಿಗಳು ಚಾಟಿ ಬೀಸಿದ್ದಾರೆಂದೇ ಹೇಳಬೇಕು. ತಾವು ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಪ್ರಜೆಗಳನ್ನು ಭಿಕ್ಷುಕರನ್ನಾಗಿ ದುರ್ಬಲರನ್ನಾಗಿ ಮಾಡುವುದು ಯಾವ ನ್ಯಾಯ? 12 ವರ್ಷ ಗುಜರಾತನ್ನು ಆಳಿರುವ ಮತ್ತು ಗುಜರಾತನ್ನು ಇಡೀ ವಿಶ್ವವೇ ಗಮನಿಸುವಂತೆ ಮಾಡಿರುವ ನರೇಂದ್ರ ಮೋದಿ ಇಂತಹ ಯಾವ ಅಗ್ಗದ ಕೊಡುಗೆಗಳನ್ನೂ ಗುಜರಾತಿನ ಜನರಿಗೆ ಕೊಟ್ಟಿಲ್ಲ. ಅವರಿಗೆ 24 ತಾಸು ವಿದ್ಯುತ್ತನ್ನು ಕೊಟ್ಟಿದ್ದಾರೆ, ಕುಡಿಯಲು ಶುದ್ಧ ನೀರು ಒದಗಿಸಿದ್ದಾರೆ. ದುಡಿಯುವ ಪ್ರವೃತ್ತಿಯನ್ನು ಬೆಳೆಸಿದ್ದಾರೆ. ಈ ಕಾರಣದಿಂದ ಗುಜರಾತ್ ಸಾರಮುಕ್ತ ರಾಜ್ಯವಾಗಿದೆ.
ಮತದಾರರು ಬಹಳ ನಿರೀಕ್ಷೆ ಭರವಸೆಗಳನ್ನು ಇಟ್ಟುಕೊಂಡು ಸರ್ಕಾರಗಳನ್ನು ಚುನಾಯಿಸುತ್ತಾರೆ ಪ್ರಗತಿ ಆಮೆ ವೇಗದಲ್ಲಿರಬಾರದು. ವೇಗವಾದ ಪ್ರಗತಿಯನ್ನು ತೋರಿಸಬೇಕು. ಜನರ ಭರವಸೆಗಳನ್ನು ಹುಸಿಗೊಳಿಸಿದರೆ ಸರ್ಕಾರಗಳನ್ನೇ ಕಿತ್ತು ಹಾಕುತ್ತಾರೆ. ಈ ಮಾತುಗಳನ್ನು ಬಹಳ ಎಚ್ಚರಿಕೆಯಿಂದ ಗಮನಿಸಬೇಕು. ಸ್ವಾತಂತ್ರ ಬಂದು 67 ವರ್ಷಗಳಾದರೂ ಮೂಲಭೂತ ಅವಶ್ಯಕತೆಗಳಾದ ಆಹಾರ, ಶುದ್ಧ ಕುಡಿಯುವ ನೀರು, ರಕ್ಷಣೆಗೆ ಸೂರು, ಮೈ ತುಂಬಾ ಬಟ್ಟೆ, ಶಿಕ್ಷಣ, ಇಂತಹ ಸಾಮಾನ್ಯ ವಿಷಯಗಳನ್ನು ಒದಗಿಸುವುದರಲ್ಲಿ ವಿಫಲವಾಗಿವೆ. ರಸ್ತೆಗಳ ವಿಷಯದಲ್ಲಂತೂ ವಾಜಪೇಯಿ ಪ್ರಧಾನಮಂತ್ರಿಯಾಗುವವರೆಗೂ ಉತ್ತಮ ಕೆಲಸವಾಗಿರಲಿಲ್ಲ. ಈ ಸಾಮಾನ್ಯ ಅವಶ್ಯಕತೆಗಳೇ ಈಡೇರದಿದ್ದರೆ, ಉನ್ನತ ಚಿಂತನೆ ಸಾಧ್ಯವಿಲ್ಲ. ಕೇವಲ ಹೊಟ್ಟೆ ತುಂಬಿಸಿಕೊಳ್ಳಲು ವಿಜ್ಞಾನಿ, ತತ್ವಜ್ಞಾನಿ, ಆಧ್ಯಾತ್ಮ ಜೀವಿಯಾಗಲು ಸಾಧ್ಯವಿಲ್ಲ. ಜನರ ಭರವಸೆಗಳನ್ನು ಈಡೇರಿಸದಿದ್ದರೆ ಜನರು ಸರ್ಕಾರಗಳನ್ನು ಕಿತ್ತು ಹಾಕುತ್ತಾರೆಂದು ರಾಷ್ಟ್ರಪತಿಗಳು ಹೇಳಿದ್ದರೂ ಆ ಧ್ವನಿಯ ಹಿಂದೆ ಈಗ ಅಸ್ತಿತ್ವದಲ್ಲಿರುವ ಅಶಕ್ತ ಕೇಂದ್ರ ಸರ್ಕಾರವನ್ನು ಕಿತ್ತು ಹಾಕಬೇಕೆಂಬ ಬಯಕೆಯೇ ಎದ್ದು ಕಾಣುವಂತಿದೆ.
ಸುಧಾರಣೆಯೆಂಬುದು ಒಂದೇ ರಾತ್ರಿಯಲ್ಲಿ ನಡೆದುಹೊಗುವ ಪವಾಡವಲ್ಲ- ಈ ಕಟುವಾಸ್ತವವು ರಾಷ್ಟ್ರಪತಿಗಳಿಗೆ ಚೆನ್ನಾಗಿ ಮನವರಿಕೆಯಾಗಿದೆ. ನಮ್ಮ ರಾಜಕಾರಣಿಗಳು 'ಭಾರತ ಬಡದೇಶ', 'ಅಭಿವೃದ್ಧಿ ಹೊಂದುತ್ತಿರುವ ದೇಶ' ಎಂದು ಭಾಷಣ ಕೊಚ್ಚುತ್ತಾ ನಮ್ಮ ಎಲ್ಲಾ ಪ್ರಗತಿಯನ್ನು ಜನಸಂಖ್ಯಾ ಸ್ಫೋಟವೇ ನುಂಗಿ ಹಾಕುತ್ತಿದೆ ಎಂದು ಉಪದೇಶಿಸುತ್ತಾ ಸುಮಾರು 400 ಲಕ್ಷ ಕೋಟಿ ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್ ಆದಿಯಾಗಿ ಜಗತ್ತಿನ ಬೇರೆ ಬೇರೆ ಬ್ಯಾಂಕುಗಳಲ್ಲಿ ಇರಿಸಿದ್ದಾರೆ. ಮತದಾರರ ಇಚ್ಛಾಶಕ್ತಿ ಜಾಗೃತವಾಗಿ ಸಮರ್ಥ ನಾಯಕ ಸ್ಥಿರ ಸರ್ಕಾರದೊಂದಿಗೆ ದಕ್ಷ ಆಡಳಿತ ನೀಡಿದರೆ ಖಂಡಿತವಾಗಿಯೂ 5 ವರ್ಷಗಳಲ್ಲಿ ಪವಾಡ ಜರುಗಬಹುದು. ಈ ಭಾಷಣವನ್ನು ಕೇಳಿದ ಮೇಲೆ ಮುಖರ್ಜಿಯವರೆ ಏಕೆ ಹತ್ತು ವರ್ಷ ಪ್ರಧಾನಿಯಾಗಲಿಲ್ಲ ಎಂದು ಸಂಕಟವಾಯಿತು. ಪ್ರಣಬ್ ಮುಖರ್ಜಿಯವರು ಪ್ರಧಾನಮಂತ್ರಿ ಆಗಿದ್ದರೆ ದೇಶದ ಚಿತ್ರಣವೇ ಬದಲಾಗುತ್ತಿತ್ತೇನೋ? ಆದರೆ ಸೋನಿಯಾ ಗಾಂಧಿಯವರಿಗೆ ಪ್ರಂಪಚದ ಶ್ರೀಮಂತರ ಪೈಕಿ ಇಂಗ್ಲೆಂಡ್ ರಾಣಿಯನ್ನು ಮೀರಿಸಿ 12 ನೇ ಸ್ಥಾನವನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ!
ಶ್ರೀ ಬಸವಾನಂದ ಸ್ವಾಮಿಗಳು