ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ರಾಹುಲ್, ಇಂಥ ಯೋಚನೆಗಳು ಬಂದಿದ್ದು ಎಲ್ಲಿಂದ?

ರಾಹುಲ್ ಗಾಂಧಿಯ ಸಂದರ್ಶನದಿಂದ ಪತ್ರಕರ್ತ ಅರ್ಣಬ್ ಗೋಸ್ವಾಮಿ...

Mainashree
Updated On : 29 Jan 2014, 1:09 am

ರಾಹುಲ್ ಗಾಂಧಿಯ ಸಂದರ್ಶನದಿಂದ ಪತ್ರಕರ್ತ ಅರ್ಣಬ್ ಗೋಸ್ವಾಮಿ ಪಾಠವೊಂದನ್ನು ಕಲಿಯಬಹುದು. ಅದೇನೆಂದರೆ, ಅತಿಥಿಗಳಿಗೆ ಹೆಚ್ಚು ಮಾತನಾಡಲು ಅವಕಾಶ ಕೊಡುವುದರಲ್ಲಿ ಬಹಳ ಲಾಭವಿದೆ ಎನ್ನುವುದು. ಮಾತನಾಡುತ್ತಾ ಅತಿಥಿಗಳು ತಮ್ಮ  ಅಸಮರ್ಪಕತೆಯನ್ನೆಲ್ಲ(ಒಳಗಿರುವುದನ್ನೆಲ್ಲ) ಹೊರಕ್ಕೆ ಹಾಕಿಬಿಡಬಹುದು.
ಆ ಸಂದರ್ಶನವನ್ನು ನೋಡಿ, ಅದರ ಲಿಪ್ಯಂತರವನ್ನು ಓದಿದ ನಂತರ, ನನ್ನ ತಲೆಯಲ್ಲಿ ಸುಳಿದ ಪ್ರಶ್ನೆಯೆಂದರೆ, "ದೇಶಕ್ಕೆ ಕೊಡಲು ರಾಹುಲ್ ಗಾಂಧಿಯವರ ಬಳಿ ಏನಿದೆ?" ಅಥವಾ "ಒಂದು ವಿಷಯದ ಬಗ್ಗೆ ನಿರ್ದಿಷ್ಟವಾಗಿ ಮಾತನಾಡಲು ಅವರು ಬಹಳ ಗೊಂದಲಗೊಂಡು, ಆ ಕಾರಣಕ್ಕಾಗಿಯೇ ಅದೂ ಇದು ಮಾತನಾಡುತ್ತಾರಾ?" ಎನ್ನುವುದು. ಆ ಸಂದರ್ಶನದಲ್ಲಿ ಅವರು ಹೇಳಿದ ಕೆಲವು ಮಾತುಗಳನ್ನು ನಾನು ವಿಶ್ಲೇಷಿಸಿಸಲು ಬಯಸುತ್ತೇನೆ.
ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿಯೇಕಿಲ್ಲ? ಇದಕ್ಕೆ ರಾಹುಲ್ ನೀಡಿದ ಉತ್ತರವನ್ನು ಒಪ್ಪುವುದಕ್ಕೆ ಸಾಧ್ಯವಾಗುವುದಿಲ್ಲ. ಆಡಳಿತ ಪಕ್ಷದ ಸಂಸತ್ ಸದಸ್ಯರು, ಪ್ರಧಾನಿಯಾಗಬೇಕಾದ ನಾಯಕನನ್ನು ಆಯ್ಕೆ ಮಾಡುತ್ತಾರೆ ಎನ್ನುವುದು ನಮಗೆಲ್ಲಾ ಗೊತ್ತಿದೆ. ಅಲ್ಲದೆ, ಒಬ್ಬ ಛಾಯಾ ಪ್ರಧಾನಿಯನ್ನು ತೋರಿಸುವುದೇನೂ ಸಂವಿಧಾನಬಾಹಿರ ಕೆಲಸವಲ್ಲ ಎನ್ನುವುದೂ ನಮಗೆ ಗೊತ್ತಿದೆ. ಇದು ಪ್ರಪಂಚದಲ್ಲಿ ಎಲ್ಲಾ ಕಡೆ ನಡೆಯುವಂಥದ್ದೇ.
ವ್ಯವಸ್ಥೆಯ ಬದಲಾವಣೆ ಮತ್ತು ಜನರ ಸಬಲೀಕರಣದ ಬಗ್ಗೆ: ನಮ್ಮದು ಸಂಸದೀಯ ಪ್ರಜಾಪ್ರಭುತ್ವ. ಭಾರತಕ್ಕೆ ಈ ವ್ಯವಸ್ಥೆ ಅತ್ಯಂತ ಸೂಕ್ತವಾಗಿದೆ. ಹಾಗಿದ್ದರೆ ರಾಹುಲ್ ಗಾಂಧಿಯವರ ತಲೆಯಲ್ಲಿರುವ ಪರ್ಯಾಯ ವ್ಯವಸ್ಥೆಯಾವುದು? ತಮಗೆ ಪ್ರಜಾಪ್ರಭುತ್ವದಲ್ಲಿ, ಆರ್‌ಟಿಐನಲ್ಲಿ ಮತ್ತು ಜನರಿಗೆ ಅಧಿಕಾರಕೊಡುವುದರಲ್ಲಿ ನಂಬಿಕೆಯಿದೆ ಎಂದವರು ಹೇಳುತ್ತಾರೆ. ಇದೇ ತಮ್ಮ ಮತ್ತು ಮೋದಿಯ ನಡುವಿರುವ ಭಿನ್ನತೆ ಎನ್ನುವ ಧಾಟಿಯಲ್ಲಿ ಮಾತನಾಡುತ್ತಾರೆ. ಆದರೆ ನಿಜಕ್ಕೂ ಈ ವಿಷಯಗಳಲ್ಲಿ ಅವರಿಬ್ಬರ ನಡುವೆ ಭಿನ್ನತೆಯಿದೆ ಎನ್ನುವುದಕ್ಕೆ ನನಗೇಕೋ ಅನುಮಾನ. ಭಾರತೀಯ ರಾಜಕಾರಣದಲ್ಲಿ ಎಲ್ಲರೂ ಪ್ರಜಾಪ್ರಭುತ್ವದ ಮೇಲೆ, ಮುಕ್ತ ವ್ಯವಸ್ಥೆಯ ಮೇಲೆ ಪ್ರಜೆಗಳ ಸಬಲೀಕರಣದ ಮೇಲೆ ನಂಬಿಕೆಯಿಡಬೇಕು. ಆ ನಿಟ್ಟಿನಲ್ಲೇ ದುಡಿಯಬೇಕು! ತಮಗೆ ಆರ್‌ಟಿಐ ಮತ್ತು ಸಬಲೀಕರಣದ ಮೇಲೆ ಬಹಳ ನಂಬಿಕೆಯಿದೆ ಎಂದು ಖುದ್ದು ಸರ್ಟಿಫಿಕೇಟ್ ಕೊಟ್ಟುಕೊಳ್ಳುವ ಅವಶ್ಯಕತೆಯೇನಿತ್ತು? ಕಾಂಗ್ರೆಸ್‌ನಲ್ಲಿ ಕೆಲವೇ ಕೆಲವು ಜನರಿಂದ ಒಬ್ಬ ಅಭ್ಯರ್ಥಿಯ ಆಯ್ಕೆಯಾಗುವ ಸಂಪ್ರದಾಯವಿದೆ ಎನ್ನುವುದೇ ವಾಸ್ತವ. ಬಿಜೆಪಿಯಲ್ಲಿ ಹಾಗಿಲ್ಲ. ನಮ್ಮಲ್ಲಿ ಬ್ಲಾಕ್ ಮತ್ತು ಜಿಲ್ಲಾ ಘಟಕಗಳು ಅಭ್ಯರ್ಥಿಗಳ ಹೆಸರನ್ನು ರಾಜ್ಯಘಟಕಕ್ಕೆ ಸೂಚಿಸುತ್ತವೆ. ರಾಜ್ಯಘಟಕಗಳು ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರ ಚುನಾವಣಾ ಸಮಿತಿಯ ಮುಂದಿಡುತ್ತವೆ. ಅದಾದ ನಂತರವೇ ತೀವ್ರ ಸಮಾಲೋಚನೆ ನಡೆಸಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯೂ ಇಷ್ಟೇ ಜಟಿಲವಾಗಿತ್ತು. ಬಹಳಷ್ಟು ನಾಯಕರ ಹೆಸರುಗಳು ಮುಂದಾದವು. ಕೊನೆಗೆ ಅವುಗಳಲ್ಲಿ ಎಲ್ಲರಿಗಿಂತಲೂ ಅರ್ಹ ಅನಿಸಿದ ವ್ಯಕ್ತಿಯನ್ನೇ ಪ್ರಧಾನಿ ಅಭ್ಯರ್ಥಿಯನ್ನಾಗಿಸಲಾಯಿತು. ಆದರೆ ಕಾಂಗ್ರೆಸ್ ಪಕ್ಷದಲ್ಲಾಗುವುದೇನು? ಪ್ರಧಾನಿ ಅಭ್ಯರ್ಥಿಯಾರಾಗಬೇಕೆಂಬುದು, ಅವರು ಯಾವ ಕುಟುಂಬಕ್ಕೆ ಸೇರಿದ್ದಾರೆ ಎನ್ನುವುದರ ಮೇಲೆಯೇ ನಿರ್ಧರಿತವಾಗಿದೆ! ಒಂದು ವೇಳೆ ರಾಹುಲ್ ಗಾಂಧಿಯೇನಾದರೂ, ಬೇರೆ ಯಾವುದಾದರೂ ರಾಜಕೀಯ ಪಕ್ಷಗಳ ಅಭ್ಯರ್ಥಿಯಾಗಿದ್ದರೆಂದರೆ, ಅವರು ಇದುವರೆಗೂ ಉನ್ನತ ಸ್ಥಾನಕ್ಕೇರಲು ಹೆಣಗಾಡುತ್ತಲೇ ಇರಬೇಕಾಗುತ್ತಿತ್ತು. ನಿಜವಾಗಲು ಬದಲಾವಣೆಯ ಅವಶ್ಯಕತೆಯಿರುವುದು ಕಾಂಗ್ರೆಸ್‌ಗೇ ಹೊರತು ಇಡೀ ವ್ಯವಸ್ಥೆಗಲ್ಲ ಎನ್ನುವುದನ್ನು ಅವರು ಮೊದಲು ಅರ್ಥಮಾಡಿಕೊಳ್ಳಬೇಕು.
ಭಾರತವನ್ನು ಉತ್ಪಾದನಾ ಹಬ್ ಮಾಡಬೇಕೆಂಬ ಮತ್ತು ಚೀನಾದೊಂದಿಗಿನ ಹೋಲಿಕೆಯ ಬಗ್ಗೆ: ಈ ವಲಯದಲ್ಲಿ ಬದಲಾವಣೆ ತರಲು ಕಳೆದ ಹತ್ತು ವರ್ಷಗಳಿಂದ ಯುಪಿಎ ಸರ್ಕಾರ ಮಾಡಿರುವುದೇನು? ಚೀನಾದ ಪ್ರಮುಖ ಶಕ್ತಿಯೆಂದರೆ ಅದರ ಕಡಿಮೆ ವೆಚ್ಚದ ಉತ್ಪಾದನಾ ಸಾಮರ್ಥ್ಯ. ಭಾರತೀಯ ಉತ್ಪಾದನಾ ವಲಯವನ್ನು ಸ್ಪರ್ಧಾತ್ಮಕವಾಗಿಸಬೇಕೆಂದರೆ, ಅದಕ್ಕೆ ಸಾಮಾನ್ಯ ಬಡ್ಡಿ ದರ, ವಿಶ್ವದರ್ಜೆಯ ಮೂಲಸೌಕರ್ಯ, ವ್ಯಾಪಾರ ಸೌಲಭ್ಯ, ಜಾಗತಿಕವಾಗಿ ಸ್ಪರ್ಧಾತ್ಮಕವಾದಂಥ ತೆರಿಗೆ ನಿಯಮ, ಶೀಘ್ರ ನಿರ್ಧಾರ ಕೈಗೊಳ್ಳುವ ಆಡಳಿತವನ್ನು ಒದಗಿಸುವ ಅಗತ್ಯವಿದೆ. ಅದಾಗ್ಯೂ ಈ ಕೊನೆಯ ಮೂರು ಅಂಶಗಳು, ರಾಜಕೀಯವಾಗಿ ಅನುಷ್ಠಾನಕ್ಕೆ ತರಲು ಬಹಳ ಕಷ್ಟಕರ ಕೆಲಸಗಳು ಎನ್ನುವುದೇನೋ ಸತ್ಯ. ಆದರೆ ಈ ನಿಟ್ಟಿನಲ್ಲಿ ಯುಪಿಎ ಸರ್ಕಾರ ಒಂದಿಂಚಾದರೂ ಮುಂದಕ್ಕೆ ಹೆಜ್ಜೆಯಿಟ್ಟಿದೆಯೇ? "ಇಲ್ಲ" ಎನ್ನುವುದೇ ಈ ಪ್ರಶ್ನೆಗೆ ಉತ್ತರ.
1984ರ ಸಿಖ್ ಹತ್ಯಾಕಾಂಡ ಮತ್ತು 2002ರ ಗುಜರಾತ್ ಹಿಂಸಾಚಾರ: "ಖೂನ್ ಕಾ ಬದ್ಲಾ ಖೂನ್‌" ಎನ್ನುವ ಘೋಷಣೆ ಶುರುವಾಗಿದ್ದು 31 ಅಕ್ಟೋಬರ್ 1984ರಂದು. ಅದೂ ಇಂದಿರಾ ಗಾಂಧಿಯವರ ದೇಹವನ್ನಿರಿಸಲಾಗಿದ್ದ ಆಸ್ಪತ್ರೆಯ ಮುಂದೆ. ಉದ್ರಿಕ್ತ ಗುಂಪುಗಳನ್ನು ಕಾಂಗ್ರೆಸ್‌ನ ನಾಯಕರುಗಳೇ ಮುನ್ನಡೆಸಿದರು. ಸಾವಿರಾರು ಜಾಗಗಳಲ್ಲಿ ಸಿಖ್ಖರನ್ನು ಕೊಲ್ಲಲಾಯಿತು. ಹಿಂಸಾನಿರತ ಗುಂಪುಗಳನ್ನು ಚದುರಿಸುವುದಕ್ಕಾಗಿ ಎಲ್ಲಿಯೂ ಕೂಡ ಪೊಲೀಸರು ಒಂದೇ ಒಂದು ಗುಂಡು ಹಾರಿಸಲಿಲ್ಲ. ಕೇಸುಗಳ ತನಿಖೆಯಾಗಲಿಲ್ಲ. ಒಂದು ವಿಚಾರಣಾ ಸಮಿತಿಯನ್ನು ನೇಮಿಸಲಾಯಿತಾದರೂ, ಅದು ಕಪಟ ವರದಿಯೊಂದನ್ನು ಎದುರಿಗಿಟ್ಟಿತು. ಆ ಸಮಿತಿಯ ನೇತೃತ್ವ ವಹಿಸಿದ್ದ ನ್ಯಾಯಾಧೀಶರನ್ನು ಕೆಲವೇ ಕಾಲದಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯನ್ನಾಗಿ ಮಾಡಿ ರಾಜ್ಯಸಭೆಯಲ್ಲಿ ಕೂರಿಸಲಾಯಿತು! ಇಂದಿಗೂ ಪೀಡಿತರಿಗೆ ನ್ಯಾಯ ದೊರೆತಿಲ್ಲ.
ಗುಜರಾತ್‌ನಲ್ಲಿ ಹಿಂಸೆ ಎಸಗಿದ ಸಾವಿರಾರು ಜನರನ್ನು ಬಂಧಿಸಲಾಯಿತು. ತುಸು ಹೆಚ್ಚೇ ಇದ್ದ ಪೊಲೀಸ್ ತುಕಡಿಗಳು ಹಲವಾರು ಜಾಗಗಳಲ್ಲಿ ಗುಂಡಿನ ಮಳೆಗೈದವು. ಪೊಲೀಸರ ಗುಂಡಿಗೆ ಸುಮಾರು 300 ಮಂದಿ ಗಲಭೆ ನಿರತರು ಮೃತಪಟ್ಟರು. ಸಾವಿರಾರು ಆರೋಪಗಳು ದಾಖಲಾದವು. ಇಲ್ಲಿಯವರೆಗೂ ನೂರಾರು ಜನರಿಗೆ ಶಿಕ್ಷೆಯಾಗಿದೆ. ಖುದ್ದು ಆ ರಾಜ್ಯದ ಮುಖ್ಯಮಂತ್ರಿಯೇ ಅನೇಕ ಬಾರಿ ತನಿಖೆಯನ್ನು ಎದುರಿಸಿದರು. ಸುಪ್ರೀಂ ಕೋರ್ಟ್ ನೇಮಿತ ವಿಶೇಷ ತನಿಖಾತಂಡದ ಎದುರೂ ಹಾಜರಾದರು. ಕೊನೆಗೆ ಅವರ ವಿರುದ್ಧದ ಯಾವ ಸಾಕ್ಷ್ಯಗಳೂ ಸಿಗಲಿಲ್ಲ.
1984ರ ಹಿಂಸಾಚಾರದಲ್ಲಿ ಕಾಂಗ್ರೆಸ್‌ನ ಪಾತ್ರವಿರಲಿಲ್ಲ ಎನ್ನುವ ಯೋಚನೆ ರಾಹುಲ್‌ರ ತಲೆಗೆ ಅದೆಲ್ಲಿಂದ ನುಸುಳಿತೋ ತಿಳಿಯದು!   
ಭ್ರಷ್ಟಾಚಾರದ ಬಗ್ಗೆ: ಕಾಂಗ್ರೆಸ್ ಪಕ್ಷ ಬಿಹಾರದ ಕಳಂಕಿತ ನಾಯಕನೊಂದಿಗೆ ಕೈಜೋಡಿಸಿದೆ. ಏಕೆಂದರೆ ಲಾಲು ಪ್ರಸಾದ್ ಇಲ್ಲದೇ ಆರ್‌ಜೆಡಿಯೂ ಇಲ್ಲ ಎನ್ನುವುದು ಕಾಂಗ್ರೆಸ್‌ಗೆ ಗೊತ್ತಿದೆ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಮೇಲಿನ ಆರೋಪದ ವಿಷಯ ಬಂದಾಗ ರಾಹುಲ್ ಗಾಂಧಿ ಆಕಾಶ ನೋಡುತ್ತಾರೆ. ಆದರ್ಶ್ ಹಗರಣದಿಂದ ಅಶೋಕ್ ಚೌವಾಣ್‌ರನ್ನು ದೋಷಮುಕ್ತಗೊಳಿಸಿದ ವಿಷಯವನ್ನು ಪ್ರಸ್ತಾಪಿಸಿದಾಗ ರಾಹುಲ್ ತೊದಲುತ್ತಾರೆ. 2ಜಿ ಹಗರಣ, ಕಲ್ಲಿದ್ದಲು ಘಟಕಗಳ ಹಂಚಿಕೆಯ ಬಗ್ಗೆ ಕೇಳಿದರೆ ಮೌನಕ್ಕೆ ಶರಣಾಗುತ್ತಾರೆ. ಕೆಲವೊಂದು ಶಾಸನಗಳಿಂದ ಭ್ರಷ್ಟಾಚಾರದ ಪಿಡುಗನ್ನು ತೊಲಗಿಸಬಹುದು ಎಂದವರು ಭಾವಿಸುತ್ತಾರೆ.  
ಇಡೀ ಸಂದರ್ಶನದಲ್ಲಿ ನನ್ನನ್ನು ಚಕಿತಗೊಳಿಸಿದ ಸಂಗತಿಯೆಂದರೆ...
"ನಾನು ಕುಟುಂಬ ರಾಜಕಾರಣದ ಕಡು ವಿರೋಧಿ, ನನ್ನನ್ನು ಬಲ್ಲವರಿಗೆ ಇದು ಗೊತ್ತು" ಎಂದು ರಾಹುಲ್ ಗಾಂಧಿ ಹೇಳಿದ್ದು! ಮಿ. ರಾಹುಲ್ ನಿಮ್ಮ ಮಾತನ್ನ ಜನರು ನಂಬುತ್ತಾರೆ ಎಂದುಕೊಂಡಿದ್ದೀರಾ?

- ಅರುಣ್ ಜೇಟ್ಲಿ
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement