ಕೈಮಗ್ಗ ಉಳಿಸಿ ಚಳವಳಿ ಮುಂದುವರಿಸೋಣ
ನಮ್ಮ ದೇಶದ ಪರಂಪರೆ ಮತ್ತು ಜೀವನೋಪಾಯದ ಬಹುಮುಖ್ಯ ಭಾಗವಾಗಿರುವ ಕೈಮಗ್ಗ...
ನಮ್ಮ ದೇಶದ ಪರಂಪರೆ ಮತ್ತು ಜೀವನೋಪಾಯದ ಬಹುಮುಖ್ಯ ಭಾಗವಾಗಿರುವ ಕೈಮಗ್ಗ ಉದ್ದಿಮೆಯನ್ನು ಉಳಿಸುವ ಸಲುವಾಗಿ ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟವು ದೇಶಾದ್ಯಂತ ಸತ್ಯಾಗ್ರಹವನ್ನು ಕೈಗೊಂಡಿದ್ದು, ಕರ್ನಾಟಕದಲ್ಲಿ ಈ ಬಗ್ಗೆ ಅರಿವು-ಬೆಂಬಲದ ಸಲುವಾಗಿ ಕೈಗೊಂಡಿರುವ ಪಾದಯಾತ್ರೆಯು ಇದೇ 27ರಂದು ಬನಶಂಕರಿಯಲ್ಲಿ ಸಮಾವೇಶಗೊಂಡಿದೆ.
ಕೈಮಗ್ಗದ ಯಾಂತ್ರೀಕರಣ ನಿಲ್ಲಿಸಬೇಕು, ಕೈಮಗ್ಗ ಉದ್ದಿಮೆಗಿರುವ ಮೀಸಲಾತಿಯನ್ನು ಸಶಕ್ತವಾಗಿ ಜಾರಿಗೆ ತರಬೇಕು, ವಿದ್ಯುತ್ ಮಗ್ಗಗಳ ನೇಕಾರರಿಗೆ ನೂಲು ಒದಗಿಸಿ, ಮರುಖರೀದಿ ಮಾಡಬೇಕು ಹಾಗೂ ವಿವಿಧ ಕೈಮಗ್ಗ ಯೋಜನೆಗಳು ಗ್ರಾಮೀಣ ಫಲಾನುಭವಿಗಳಿಗೆ ವಿಳಂಬವಿಲ್ಲದೇ ತಲುಪಬೇಕು ಎಂಬ ಬೇಡಿಕೆಗಳನ್ನಿಟ್ಟುಕೊಂಡು ನಡೆಯುತ್ತಿರುವ ಈ ಚಳವಳಿಗೆ ಸರ್ಕಾರ ಸ್ಪಂದಿಸಿದಂತೆ ಕಾಣಿಸುತ್ತಿಲ್ಲ. ಯಾವುದೇ ಚಳವಳಿಯನ್ನೂ ಉದಾಸೀನದ ಮೂಲಕ ವಿಫಲಗೊಳಿಸುವ ತಂತ್ರ ಎಲ್ಲ ಸರ್ಕಾರಗಳೂ ಮಾಡುತ್ತಾ ಬಂದಿವೆ. ಕೈಮಗ್ಗ ಈ ದೇಶದ ಪ್ರಮುಖ ಜೀವನೋಪಾಯ ಎಂಬುದು ಸರ್ಕಾರಕ್ಕೂ ಗೊತ್ತಿದೆ. ಆದರೆ ಜಾಗತೀಕರಣದ ದೆಸೆಯಿಂದಾಗಿ ಬಟ್ಟೆ ತಯಾರಿಕೆ ಬಂಡವಾಳಶಾಹೀ ಉದ್ದಿಮೆದಾರರ ಪಾಲಾಗಿ ನಮ್ಮ ಗ್ರಾಮೀಣ ಕಾರ್ಮಿಕರು, ಮುಖ್ಯವಾಗಿ ಹೆಣ್ಣುಮಕ್ಕಳು ಈಗ ಗಾರ್ಮೆಂಟ್ ಉದ್ದಿಮೆಯಲ್ಲಿ ಜೀತದಾಳುಗಳಂತೆ ದುಡಿಯುತ್ತಿದ್ದಾರೆ. ಕೈಮಗ್ಗ ಉದ್ದಿಮೆಗೆ ಜೀವ ತುಂಬಿದರೆ, ನೇಕಾರಿಕೆ ಬಲ್ಲ ಕುಶಲಿಗಳು ಘನತೆಯಿಂದ ಬಾಳುವುದೂ ಸಾಧ್ಯವಾಗುತ್ತದೆ.
ಈ ಪಾದಯಾತ್ರೆ ಆರಂಭವಾಗಿ ಹಲವಾರು ದಿನಗಳಾದರೂ, ನಮ್ಮ ಮಾಧ್ಯಮಗಳಾಗಲೀ ಸರ್ಕಾರವಾಗಲೀ ವಿಶೇಷ ಗಮನ ಹರಿಸುತ್ತಿಲ್ಲ. ಜೊತೆಗೆ, ನಮ್ಮ ಸಾಮಾಜಿಕ-ಸಾಂಸ್ಕೃತಿಕ ವಲಯ ಕೂಡಾ ತೀವ್ರವಾಗಿ ಸ್ಪಂದಿಸಿಲ್ಲ. ಇದನ್ನು ಆಪಾದನೆಯಾಗಿ ಹೇಳುತ್ತಿಲ್ಲ. ಇದು ನಮ್ಮ ಕಾಲದ ಫಜೀತಿಯೆಂದು ಭಾವಿಸಬೇಕಷ್ಟೆ.
ಈ ಚಳವಳಿಯ ಭಾಗವಾಗಿ ನಮ್ಮ ಪ್ರೀತಿಯ 'ದೇಸಿ' ಪ್ರಸನ್ನ, ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಈ ಬಗ್ಗೆ ನನ್ನ ಮುಖ್ಯ ಆಕ್ಷೇಪವೆಂದರೆ, ಬಹುತೇಕರಿಗೆ ಈ ವಿಚಾರದ ತೀವ್ರತೆ ಸ್ಪಷ್ಟವಾಗಿ ಗೊತ್ತಾಗಿಲ್ಲ. ನಮ್ಮ ಬಹುತೇಕ ನೇಕಾರರೂ ಸರ್ಕಾರದ ಮೇಲೆ ಮುಗ್ಧತೆಯಿಂದಲೋ, ಅಸಹಾಯಕತೆಯಿಂದಲೋ ಸಾಂಸ್ಥಿಕ ಕಾರಣಕ್ಕೋ ಅವಲಂಬಿತರಾಗಿದ್ದಾರೆ. ಒಂದು ವಿಚಾರ ಜನಮಾನಸಕ್ಕೆ ತಲುಪಲು ತಿಂಗಳ ಕಾಲ (ಈ ಕಾಲದಲ್ಲಿ) ಸಾಲದು.
ಈ ಪಾದಯಾತ್ರೆ ಸಮಾಪನವಾದ ಮೇಲೆ, ಸರ್ಕಾರವನ್ನು ಇನ್ನೊಮ್ಮೆ ಒತ್ತಾಯಿಸಿ ಗಡುವು ಕೊಟ್ಟು ಅದೂ ಉದಾಸೀನದಲ್ಲೇ ಪರ್ಯಾವಸಾನಗೊಂಡರೆ, ಆಮರಣ ಉಪವಾಸದಂಥಾ ಅಸ್ತ್ರವನ್ನು ಬಳಸಬಹುದೇನೋ? ತೀರಾ ವೈಯಕ್ತಿಕವಾಗಿ ನನಗನ್ನಿಸುವುದೆಂದರೆ, ಬೇಡಿಕೆಗಳ ಈಡೇರಿಕೆಗೆ ಸಾಮುದಾಯಿಕ ಸತ್ಯಾಗ್ರಹದ ಒತ್ತಡ ತರಬೇಕೇ ವಿನಃ ಆಮರಣಾಂತ ಉಪವಾಸ ಕೂರಬಾರದು. ಪ್ರಭುತ್ವ/ಸಮುದಾಯದ ಮನಃ ಪರಿವರ್ತನೆಗಷ್ಟೇ ಬಳಸಬಹುದಾದ ನೈತಿಕ ಅಸ್ತ್ರ -ಉಪವಾಸ.
ಸಮಸ್ಯೆ ಎಷ್ಟೇ ತೀವ್ರವಾಗಿದ್ದರೂ ಪ್ರಜಾಸತ್ತೆಯಲ್ಲಿ ನಾವು ಬಳಸಬಹುದಾದ ಸಕಲ ದಾರಿಗಳೂ ಮುಚ್ಚಿದಾಗ ಮಾತ್ರ ಈ ಉಪವಾಸಕ್ಕೆ ಮೊರೆಹೋಗಬಹುದೇನೋ? ಪ್ರಸನ್ನ ಅವರ ಬಗ್ಗೆ ಅಪಾರ ಆದರ, ಗೌರವ ಇರುವ ಕಾರಣವೇ ಈ ಮಾತು ಹೇಳುತ್ತಿದ್ದೇನೆ. ಪ್ರಸನ್ನ ಅವರ ಜೀವ, ಕ್ರಿಯಾಶೀಲತೆ ಮತ್ತು ಚಿಂತನೆ ಬಲು ಅಮೂಲ್ಯ. ಅವರು ಬ್ರಹ್ಮಾಸ್ತ್ರ ಉಪಯೋಗಿಸಬಾರದು.
ದಯವಿಟ್ಟು ಈ ಉಪವಾಸ ಈಗ ಬೇಡ ಎಂದಷ್ಟೇ ನಾನು ಹೇಳುತ್ತಿರುವುದು. ಇದನ್ನು ಒಬ್ಬ ಅನಾಮಿಕ ಆದರೆ ಕಾಳಜಿಯ ವ್ಯಕ್ತಿಯಾಗಿ ಹೇಳುತ್ತಿದ್ದೇನೆ. ನಮಗೆ ಹೆಚ್ಚು ದಿನ ಉಳಿದಿಲ್ಲ. ಕೈಮಗ್ಗ ಉಳಿಸಿ ಚಳವಳಿ ಗಾಂಧೀ ಕನಸಿನ ಜೀವನ್ಮರಣದ ಪ್ರಶ್ನೆಯೆಂದು ನಾವೆಲ್ಲರೂ ಭಾವಿಸಿದಲ್ಲಿ ಮಾತ್ರ ಪ್ರಸನ್ನ ಅವರಲ್ಲಿ ಉಪವಾಸ ಮಾಡಬೇಡಿ ಎಂದು ಹೇಳುವ ನೈತಿಕ ಧೈರ್ಯ ಇರುತ್ತದೆ ಎಂದಷ್ಟೇ ಹೇಳಬಲ್ಲೆ.
ನಮ್ಮ ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಗಳ ಹಿರಿಯರು ಕೈಮಗ್ಗ ಉಳಿಸಿ ಚಳವಳಿಯನ್ನು ತಮ್ಮದೆಂದು ಭಾವಿಸಿ, ಪ್ರಸನ್ನ ಅವರ ಮನವೊಲಿಸಬೇಕು. ಇದು ಸಾಧ್ಯವಾಗುವುದು, ನಿರ್ಲಕ್ಷ್ಯ ಧೊರಣೆಯಲ್ಲಿರುವ ಸರ್ಕಾರವನ್ನು ಗದರಿಸಿ ಸ್ಪಂದಿಸುವಂತೆ ಒತ್ತಾಯಿಸಿದರೆ ಮಾತ್ರ.
- ಕೆ.ಪಿ. ಸುರೇಶ, ಬೆಂಗಳೂರು