ಬ್ಯಾಂಕ್ ನೌಕರರ ಬವಣೆ ನಮಗೇಕೆ ಕಾಣದು?
ಇತ್ತೀಚೆಗೆ ನಾನು ನನ್ನ ಗೆಳೆಯನ ಮನೆಗೆ ತೆರಳಿದ್ದೆ. ಆತ ಬ್ಯಾಂಕ್ ಉದ್ಯೋಗಿಯಾದ್ದರಿಂದ...
ಇತ್ತೀಚೆಗೆ ನಾನು ನನ್ನ ಗೆಳೆಯನ ಮನೆಗೆ ತೆರಳಿದ್ದೆ. ಆತ ಬ್ಯಾಂಕ್ ಉದ್ಯೋಗಿಯಾದ್ದರಿಂದ ಸಂಜೆ 5ರ ಮೇಲೆ ಮನೆಯಲ್ಲಿ ಸಿಗುತ್ತಾನೆ ಎಂದು ಸಂಜೆಯ ಹೊತ್ತಿಗೇ ಹೋಗಿದ್ದೆ. ಆ ಫ್ಲಾಟ್ನಲ್ಲಿ ವಾಸವಿದ್ದ ಅಕ್ಕ ಪಕ್ಕದ ಮನೆಯವರೆಲ್ಲಾ ಸರಕಾರಿ ಉದ್ಯೋಗಿಗಳು. ಮತ್ತವರು ಅದಾಗಲೇ ಮನೆ ಸೇರಿದ್ದರು. ಇನ್ನೂ ಕೆಲವರು ಮಕ್ಕಳೊಂದಿಗೆ ಹೊರಾಂಗಣದಲ್ಲಿ ಆಟವಾಡುತ್ತಿದ್ದರು. ಆದರೆ ನನ್ನ ಗೆಳೆಯ ಬಂದಾಗ ರಾತ್ರಿ 7.30 ಆಗಿತ್ತು.
ಬಹುಪಾಲು ಬ್ಯಾಂಕ್ ಉದ್ಯೋಗಿಗಳು ಅನುಭವಿಸುತ್ತಿರುವ ದಿನಚರಿಯಿದು. ಕೆಲಸದ ಮೇಲೆ ಬ್ಯಾಂಕ್ಗೆ ಹೋದಾಗ ನಾವು ಅದೆಷ್ಟೋ ಸಲ ಅಲ್ಲಿನ ನೌಕರನಿಗೆ ಮುಲಾಜಿಲ್ಲದೆ ಬಯ್ಯುತ್ತೇವೆ. ನಮ್ಮ ದುಡ್ಡು ಕೊಡಲು ಇವನೇಕೆ ಸತಾಯಿಸುತ್ತಾನೆ ಎಂದೂ ಜರಿದಿದ್ದೇವೆ. ಸಾಲ ಕೇಳಿದಾಗ ಬ್ಯಾಂಕ್ ಮ್ಯಾನೇಜರ್ ಕೇಳುವ ದಾಖಲೆಗಳನ್ನು ಪೂರೈಸಲಾಗದೇ ಆತನಿಗೇ ಹಿಡಿ ಶಾಪ ಹಾಕುತ್ತೇವೆ. ಸರಕಾರಿ ಕಚೇರಿಗಳಿಗಾದರೆ ತಿಂಗಳಾನುಗಟ್ಟಳೆ ಅಲೆದು, ಸಮಯಕ್ಕೆ ಸಿಗದ ಸಿಬ್ಬಂದಿ- ಅಧಿಕಾರಿಗಳನ್ನು ಹಿಡಿದು ಲಂಚ ನೀಡಿ, ಏನೂ ಅನ್ನದೆ ಕೆಲಸಮಾಡಿಸುವ ನಾವು ಬ್ಯಾಂಕ್ಗಳಲ್ಲಿ ಒಂದರ್ಧ ಗಂಟೆ ಲೇಟಾದರೂ ಕಸಿವಿಸಿಗೊಳ್ಳುತ್ತೇವೆ. ಅಲ್ಲೇ ಮುಂದೆ ಸಿಗುವ ಫ್ರಂಟ್ಲೈನ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳುತ್ತೇವೆ.
ಎಲ್ಲೋ ಇರುವ ಊರು, ಕುಟುಂಬ, ಸಂಗಾತಿಗಳನ್ನು ಬಿಟ್ಟು ಇನ್ನೊಂದು ಊರಿನಲ್ಲಿ ವಾಸ್ತವ್ಯ ಹೂಡಿ ಸೇವೆ ಸಲ್ಲಿಸುತ್ತಿರುವ ಹಲವಾರು ಬ್ಯಾಂಕ್ ನೌಕರರು ನಮ್ಮ ಸುತ್ತಮುತ್ತ ಸಿಗುತ್ತಾರೆ. ಹಾಗೇನೇ 3-4 ವರ್ಷ ಒಂದೂರಲ್ಲಿ ನಿಂತು ಇನ್ನೇನು ಅಡ್ಜಸ್ಟ್ ಆಯಿತು ಅನ್ನುವಾಗಲೇ ಕಂಡರಿಯದ ಇನ್ನೊಂದು ಊರಿಗೆ ವರ್ಗಾವಣೆಗೊಳ್ಳುತ್ತಾ, ಜೊತೆ ಜೊತೆಗೆ ಮಕ್ಕಳನ್ನು ಇನ್ನೊಂದು ಶಾಲೆಗೆ ಸೇರಿಸುತ್ತಾ ಪಾಡು ಪಡುವ ನೌಕರರೂ ಇದ್ದಾರೆ. ಬ್ಯಾಂಕ್ ಉದ್ಯೋಗವೇ ಹಾಗೆ. ಪ್ರಮೋಷನ್ ಸಿಕ್ಕಿತು ಎಂದಾದರೆ ನೀವು ಇನ್ನೊಂದು ಕಡೆ ಪಯಣಿಸಲೇ ಬೇಕು. ಅಲ್ಲೊಂದಷ್ಟು ವರ್ಷ ಇದ್ದು ಬಳಿಕ ಮತ್ತೊಂದು, ಮಗದೊಂದು ಅಂತ ಊರೂರು ತಿರುಗುತ್ತಲೇ ಇರಬೇಕು. ಭಾವನೆಗಳನ್ನು ಅದುಮಿಟ್ಟುಕೊಂಡು, ತನ್ನೆಲ್ಲಾ ಸಮಸ್ಯೆಗಳನ್ನು ಪಕ್ಕಕ್ಕಿಟ್ಟುಕೊಂಡು, ಅಧಿಕ ಕೆಲಸದ ಒತ್ತಡವನ್ನೂ ಸಹಿಸಿಕೊಂಡು ಹೊಸ ಊರು ಹೊಸ ಜನರೊಡನೆ ಬಾಂಧವ್ಯಯುತವಾಗಿ ವ್ಯವಹರಿಸುವ ನೌಕರರು ನಿಜಕ್ಕೂ ಅಭಿನಂದನಾರ್ಹರು.
ಇಂದು ಗ್ರಾಮ ಪಂಚಾಯತ್ನಿಂದ ಹಿಡಿದು ಬಹುತೇಕ ಎಲ್ಲಾ ಸರಕಾರಿ ಕಚೇರಿ, ಪೋಲಿಸ್, ಶಿಕ್ಷಣ, ವೈದ್ಯಕೀಯರಂಗ ಹೀಗೆ ಯಾವುದೇ ಸರಕಾರಿ ಸಂಬಂಧಿ ಕಚೇರಿಗಳನ್ನು ತೆಗೆದುಕೊಂಡರೂ ಅಲ್ಲೊಂದು ಅಸ್ತವ್ಯಸ್ತತೆ ಕಾಣಿಸುತ್ತದೆ. ಉಸ್ಸಪ್ಪ ಅನ್ನಿಸುವಷ್ಟು ಲಂಚಗುಳಿತನವನ್ನು ಕಾಣುತ್ತೇವೆ. ಇದಕ್ಕೆ ಬೆರಳೆಣಿಕೆಯ ಅಪವಾದವಿದ್ದರೆ ಅದು ನಮ್ಮ ಪುಣ್ಯವೆಂದೇ ಹೇಳಬೇಕು. ಸಣ್ಣ ಕಡತಗಳು ಮುಂದಿನ ಹಂತಕ್ಕೆ ತೇರ್ಗಡೆಗೊಳ್ಳಬೇಕಾದರೆ ನೀವು ಅಲ್ಲಿ ಹಣ ತೆರಲೇಬೇಕು. ಇವೆಲ್ಲ ಕಾನೂನು ಬಾಹಿರವೆಂದು ಗೊತ್ತಿದ್ದರೂ ಇವನ್ನೆಲ್ಲಾ ಕೊಂಚವೂ ಬೇಸರಿಸದೆ ಸ್ವೀಕರಿಸಿದ್ದೇವೆ. ಆದರೆ ಇಂದು ಕೂಡ ಲಂಚಕೊಡದೇನೆ ನಮ್ಮ ಕೆಲಸಗಳನ್ನು ಸಲೀಸಾಗಿ ಮಾಡಬಹುದು ಎಂದೆನ್ನುವ ರಂಗವೊಂದಿದ್ದರೆ ಅದು ಬ್ಯಾಂಕ್ಗಳು ಮಾತ್ರ. ಹೌದು ಬ್ಯಾಂಕ್ಗಳು ಸರಕಾರಿ ಇಲ್ಲವೇ ಖಾಸಾಗಿಯಾಗಿರಲಿ ಇಲ್ಲಿ ಯಾವುದೇ ರೀತಿಯ ಲಂಚಗುಳಿತನ, ಆಮಿಷಗಳು ನಡೆಯುವುದಿಲ್ಲ. ಅಥವಾ ಅದರ ಪ್ರಮಾಣ ತೀರಾ ಕಡಿಮೆ. ಅಷ್ಟೇ ಏಕೆ, ಇಲ್ಲಿನ ಕಾರ್ಯವೈಖರಿಗಳಿರಲಿ, ಅಚ್ಚುಕಟ್ಟು ಅತ್ಯಾಧುನಿಕತೆಗಳಿರಲಿ ಹೀಗೆ ಯಾವುದೇ ವಿಚಾರವನ್ನು ತೆಗೆದುಕೊಂಡರೂ ಕೂಡ ನಮ್ಮ ಸರಕಾರಿ ಕಚೇರಿಗಳಿಗಿಂತ ಬಹುಪಾಲು ಮುಂದೆ ನಿಲ್ಲುತ್ತವಿವು. ಹೀಗಿದ್ದರೂ...ಇಂತಹ ಒಂದು ಔದ್ಯೋಗಿಕ ರಂಗದ ಉದ್ಯೋಗಿಗಳು ಮಾತ್ರ ಇತ್ತೀಚೆಗೆ ತೀವ್ರ ನಿರಾಶೆಗೊಳಗಾಗುತ್ತಿದ್ದಾರೆ. 6ನೇ , 7ನೇ ವೇತನಗಳೆಂದು ಸರಕಾರಿ ಉದ್ಯೋಗಿಗಳ ವೇತನ ಹಾಗು ಇತರ ಭತ್ಯೆಗಳು ಚಕಚಕನೆ ಏರುತ್ತಿರಬೇಕಾದರೆ ಗರಿಷ್ಟ ಉದ್ಯೋಗ, ಗರಿಷ್ಟ ಒತ್ತಡ ಹೊಂದಿರುವ ನಮಗ್ಯಾಕೆ ಈ ಪಾಡು ಎಂದು ಮರಗುತ್ತಿದ್ದಾರೆ ಇವರು. ದಿನಪೂರ್ತಿ ಗ್ರಾಹಕರೊಡನೆ ವ್ಯವಹರಿಸಿ, ಪಾರದರ್ಶಕ ಸೇವೆ ಸಲ್ಲಿಸುತ್ತಾ ಸುಸ್ತಾಗುತ್ತಿರುವ ಈ ಉದ್ಯೋಗಿ ಮಿತ್ರರುಗಳು ಇದೀಗ ತಮ್ಮ ಆರ್ಥಿಕ ವಿಚಾರಕ್ಕೆ ವ್ಯಥೆಗೊಳ್ಳುವಂತಾಗಿರುವುದು, ಬೀದಿಗಿಳಿದು ಹೋರಾಡಲು ಅಣಿಯಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯೇ.
ಭಾರತದಲ್ಲಿ ಬ್ಯಾಂಕ್ ಸಂಬಂಧಿ ವಿಚಾರಗಳ ಮೇಲ್ವಿಚಾರಣೆಯನ್ನು ಐಬಿಎ (Indian Banks Association) ನೋಡಿಕೊಳ್ಳುತ್ತಿದೆ. ನೌಕರರ ವೇತನಗಳ ಪರಿಷ್ಕರಣೆ ಕೂಡ ಇವುಗಳದ್ದೇ ಜವಬ್ದಾರಿ. ಎಫ್ಬಿಐಯು (United Forum of Bank Unions) ನ ಜೊತೆ ಸೇರಿಕೊಂಡು ಪ್ರತೀ ಐದು ವರ್ಷಗಳಿಗೊಮ್ಮೆ ನಡೆಯುವ ಬೈಪಾರ್ಟಿಟಿ (bipartite) ಸೆಟಲ್ಮೆಂಟ್ಗಳ ಮೂಲಕ ವೇತನ ಪರಿಷ್ಕರಣೆ ಮಾಡಲಾಗುತ್ತದೆ. ಈ ವರೆಗೆ 9 ಬೈಪಾರ್ಟಿ ಸೆಟೆಲ್ಮೆಂಟ್ಗಳನ್ನು ಉದ್ಯೋಗಿಗಳು ಕಂಡಿದ್ದು ಇದೀಗ 10ನೇ ಬೈಪಾರ್ಟಿ ಸೆಟಲ್ಮೆಂಟನ್ನು ಎದುರು ನೋಡುತ್ತಿದ್ದಾರೆ. ಸರಕಾರಿ ಸಿಬ್ಬಂದಿಗಳಿಗಾದರೆ ವೇತನ ಆಯೋಗಗಳು ನಿರ್ಧರಿಸಿದಂತೆ ಸಂಬಳ ಸವಲತ್ತುಗಳು ಬದಲಾಗುತ್ತದೆ. ಒಂದು ವೇತನ ಆಯೋಗದ ಕಾಲಾವಧಿ ಮುಗಿದ ಕೂಡಲೇ ಮುಂದಿನ ವೇತನ ಆಯೋಗದ ಮೂಲಕ ಪರಿಷ್ಕರಿಸಲ್ಪಟ್ಟ ಸುಧಾರಿತ ಹಾಗೂ ಅಷ್ಟೇ ಆಕರ್ಷಣೀಯ ವೇತನವನ್ನು ಸಿಬ್ಬಂದಿಗಳು ಪಡೆಯುತ್ತಾರೆ. ಒಂದುವೇಳೆ ಚುನಾವಣೆಗಳು ಎದುರಾಗುತ್ತವೆ ಎಂದಾದರೆ ಕಾಲವಧಿ ಪೂರ್ಣಗೊಳ್ಳುವ ಮೊದಲೇ ಇನ್ನೊಂದು ವೇತನ ಆಯೋಗದ ಅನುಮೋದನೆ ಕೂಡ ಪಡೆಯುತ್ತದೆ. ಅದರೆ ಬ್ಯಾಂಕ್ನ 9ನೇ ಬೈಪಾರ್ಟಿ ಸೆಟಲ್ಮೆಂಟ್ನ ಅವಧಿಯು 2012ನೇ ಅಕ್ಟೋಬರ್ ತಿಂಗಳಿಗೆ ಮುಗಿದಿದೆಯಾದರೂ ಈವರೆಗೂ ಪರಿಷ್ಕೃತ ಸವಲತ್ತುಗಳನ್ನು ಹೊಂದಿರುವ 10ನೇ ಬೈಪಾರ್ಟಿ ಸೆಟಲ್ಮೆಂಟ್ ಬಂದೇ ಇಲ್ಲ. ಹಳೆಯ ವೇತನದಲ್ಲೇ ದಿನನೂಕುತ್ತಿರುವ ಇವರುಗಳು ಇತ್ತೀಚೆಗೆ ತಮ್ಮ ಕಾರ್ಮಿಕ ಸಂಘಟನೆಗಳ ಮೂಲಕ ಐಬಿಎಗೆ ಒತ್ತಡ ಹಾಕಲು ಪ್ರಾರಂಭಿಸಿದ ಬಳಿಕ ನಿಧಾನವಾಗಿ ಐಬಿಎಯು ಈ ಬಗ್ಗೆ ಕಾರ್ಯಪ್ರವೃತ್ತವಾದಂತೆ ನಟಿಸುತ್ತಿದೆ. ಆದರೆ ಬ್ಯಾಂಕ್ ನೌಕರರಿಗೆ ಉತ್ತಮ ವೇತನ ನೀಡುವ ಇರಾದೆಯಾಗಲಿ ಅವರ ಇತರ ಬೇಡಿಕೆಗಳಿಗೆ ಕಿವಿಗೊಡುವ ಮನಸ್ಸಾಗಲಿ ಐಬಿಎಗೆ ಇದ್ದಂತೆ ಕಾಣುತ್ತಿಲ್ಲ. ಯಾಕೆಂದರೆ ಈವರೆಗೆ ಐಬಿಎ-ಬ್ಯಾಂಕ್ ಯೂನಿಯನ್ನ ಮಧ್ಯೆ ಹಲವಾರು ಸುತ್ತಿನ ಮಾತುಕತೆಗಳು ನಡೆದಿವೆಯಾದರೂ ಬ್ಯಾಂಕಿನ ಬಹುತೇಕ ಬೇಡಿಕೆಗಳನ್ನು ಐಬಿಎ ಪುರಸ್ಕರಿಸದೇ ಸಾರಸಗಟಾಗಿ ತಳ್ಳಿಹಾಕಿದೆ. ನಡೆದಿರುವ ಮಾತುಕತೆಗಳು ವಿಫಲವಾಗಿರುವುದರಿಂದ ಪರಿಷ್ಕೃತ ವೇತನಕ್ಕಾಗಿ ಇನ್ನಷ್ಟು ತಿಂಗಳು ಕಾಯುವ ಪರಿಸ್ಥಿತಿ. 8ನೇ ಬೈಪಾರ್ಟಿ ಸೆಟಲ್ಮೆಂಟಿನಲ್ಲಿ (2002-2007) 13.25 ಪ್ರತಿಶತ ವೇತನ ಏರಿಕೆಮಾಡಿ 9ನೇ ಬೈಪಾರ್ಟಿ ಸೆಟಲ್ಮೆಂಟಿನಲ್ಲಿ (2007-2012) 17.5 ಪ್ರತಿಶತ ಏರಿಕೆಗೆ ಒಪ್ಪಿದ್ದ ಐಬಿಎ ಇದೀಗ 10ನೇ ಬೈಪಾರ್ಟಿ ಸೆಟಲ್ಮೆಂಟಿನಲ್ಲಿ ಮಾತ್ರ ಕೇವಲ ಶೇಕಡಾ 10 ರಷ್ಟು ಏರಿಸುವುದಾಗಿ ಹೇಳುತ್ತಿದೆ ತೀರಾ ಅವೈಜ್ಞಾನಿಕವಾಗಿರುವ ಈ ಪರಿಷ್ಕರಣೆಗೆ ಸಿಬ್ಬಿಂದಿ ಯೂನಿಯನ್ಗಳು ಆಕ್ಷೇಪ ವ್ಯಕ್ತಪಡಿಸಿರುವುದು ಮಾತ್ರವಲ್ಲದೆ ಮುಂದಿನ ತಿಂಗಳು ಎರಡು ದಿನಗಳ ಮುಷ್ಕರಕ್ಕೂ ಕರೆ ನೀಡಿರುವುದು ಸಹಜವೇ.
ಭಾರತದಾದ್ಯಂತ ಇರುವ ಬ್ಯಾಂಕ್ ಸಿಬ್ಬಂದಿಗಳು ಇದೀಗ ಜೊತೆಯಾಗಿದ್ದು ಒಂದು ವೇಳೆ ಮುಷ್ಕರ ನಡೆಸಿದವೆಂದಾದರೆ ಅದರಿಂದ ದೇಶದ ಅರ್ಥವ್ಯವಸ್ಥೆಗೆ ಬೀಳುವ ಹೊಡೆತ ಅಷ್ಟಿಷ್ಟಲ್ಲ. ಈ ಕಾರಣಕ್ಕಾಗಿಯಾದರು ಸಿಬ್ಬಂದಿಗಳು ನ್ಯಾಯಯುತವಾಗಿ ಕೇಳುತ್ತಿರುವ ಒಂದಷ್ಟು ಬೇಡಿಕೆ ಹಾಗು ಆಕರ್ಷಣೀಯ ವೇತನವನ್ನು ಆದಷ್ಟು ಬೇಗ ನೀಡುವ ಮನಸ್ಸು ಮಾಡಬೇಕು ನಮ್ಮ ಸರಕಾರ. ಬೊಕ್ಕಸಕ್ಕೆ ಹೊರೆಯಾಗಿರುವ ಅದೆಷ್ಟೋ ಇಲಾಖೆಗಳ ಸಿಬ್ಬಂದಿಗಳು ಕೂಡ ಕೈತುಂಬಾ ವೇತನ ಪೆಡೆಯುತ್ತಿರುವಾಗ ಸತತವಾಗಿ ಲಾಭವನ್ನೇ ಗಳಿಸಿ ದೇಶದ ಆರ್ಥಿಕತೆಗೆ ಸಹಾಯ ಮಾಡುತ್ತಿರುವ ಬ್ಯಾಂಕ್ಗಳ ನೌಕರರುಗಳು ತಮಗೂ ಕೂಡ ಆಕರ್ಷಣೀಯ ವೇತನವನ್ನು ನೀಡಿ ಎನ್ನುವುದರಲ್ಲಿ ನ್ಯಾಯವಿದೆ ಅಲ್ಲವೆ?
ಹಿಂದೊಂದು ಕಾಲವಿತ್ತು. ಅಲ್ಲಿ ಬ್ಯಾಂಕ್ ನೌಕರನಿಗೆ ಅವನದ್ದೇ ಆದ ಘನತೆ. ಯಾಕೆಂದರೆ ಅವನ ವೇತನ, ಸೌಲಭ್ಯಗಳು ಉತ್ತಮವಾಗಿದ್ದವು. ಮಾತ್ರವಲ್ಲದೆ ಆರಾಮದಾಯಕ ಕೆಲಸವೆಂಬ ಹೆಗ್ಗಳಿಕೆ ಬೇರೆ. ಆದರೆ ಇಂದು ವಸ್ತುಶಃ ಈ ಚಿತ್ರಣ ಬದಲಾಗಿದೆ. ಇಲ್ಲಿ ಸಿಗುವ ಆಕರ್ಷಣೀಯವಲ್ಲದ ವೇತನಕ್ಕೆ ಯುವ ಜನಾಂಗ ಕೂಡ ಬ್ಯಾಂಕ್ ಉದ್ಯೋಗವನ್ನು ದೂರವಿಟ್ಟಿದೆ, ಇಲ್ಲವೇ ಇನ್ನೊಂದು ಸರಕಾರಿ ಉದ್ಯೋಗ ದೊರೆತಾಕ್ಷಣ ರಾಜೀನಾಮೆ ಸಲ್ಲಿಸಿ ಪಲಾಯನ ಮಾಡುತ್ತಿದೆ. ಆಧುನೀಕರಣಗೊಂಡಿರುವ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಧಿಕ ಕೆಲಸದ ಒತ್ತಡದೊಂದಿಗೆ ಸಮಯ ಮೀರಿ ದುಡಿಯುತ್ತಾ ಅದಾಗಲೇ ಸೊರಗಿರುವ ನೌಕರರನ್ನು ವೇತನ ವಿಚಾರದಲ್ಲಿ ಇನ್ನಷ್ಟು ಪೀಡಿಸಿ ಸೊರಗಬಿಟ್ಟರೆ ಮುಂದೊಂದು ದಿನ ಬ್ಯಾಂಕ್ಗಳು ಸಿಬ್ಬಂದಿಯನ್ನು ಕಾಣದೆ ಪರದಾಡಬೇಕಾಗಬಹುದು. ಬಹುತೇಕ ಎಲ್ಲಾ ಬ್ಯಾಂಕ್ಗಳಲ್ಲೂ ಇಂದು ಸಿಬ್ಬಂದಿಗಳ ಕೊರತೆಯಿರುವುದು ಇದರ ಮುನ್ಸೂಚನೆಯೆಂದೇ ಹೇಳಬೇಕು.
ಪ್ರಸಾದ್ ಕುಮಾರ್
ಮಾರ್ನಬೈಲ್