ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಭಾರತಕ್ಕೆ ಬೇಕಿರುವುದು ಸಮಾನತೆಯ ಭಾಷಾನೀತಿ

Mainashree
Updated On : 1 Jul 2014, 9:59 am

ಭಾರತದಲ್ಲಿ ಜಾರಿಯಿರುವ ಭಾಷಾನೀತಿಯ ಕುರಿತ ಚರ್ಚೆಗಳು ಏರ್ಪಡುತ್ತಿರುವ ಈ ಹೊತ್ತಿನಲ್ಲಿ ಸ್ವಾತಂತ್ರ್ಯಾನಂತರ ಭಾರತದಲ್ಲಿ ಜಾರಿಯಲ್ಲಿದ್ದ ಭಾಷಾನೀತಿಯ ಪರಿಣಾಮ ಶಿಕ್ಷಣ ವ್ಯವಸ್ಥೆಯ ಮೇಲೆ ಯಾವ ರೀತಿಯಲ್ಲಿ ಆಗಿದೆ ಎನ್ನುವುದನ್ನು ನೋಡೋಣ.
ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಗುಣಮಟ್ಟದ ಶಿಕ್ಷಣದಿಂದ ಮಾತ್ರ ಏಳ್ಗೆಯಾಗಲು ಸಾಧ್ಯ ಎಂಬುದನ್ನು ಅರಿತ ಸರ್ಕಾರ, ಶಿಕ್ಷಣದ ಗುಣಮಟ್ಟ ಉತ್ತಮಗೊಳಿಸುವ ವಿಷಯವಾಗಿ ಒಂದಾದಮೇಲೆ ಒಂದರಂತೆ ಹಲವಾರು ಆಯೋಗಗಳನ್ನು ರಚಿಸಿತು. ಅದರಲ್ಲಿ ಅತಿ ಮುಖ್ಯವಾದದ್ದು 1964ರಲ್ಲಿ ಸ್ಥಾಪನೆಯಾದ ಪ್ರೊ. ಡಿ. ಎಸ್. ಕೊಠಾರಿ ಆಯೋಗ. ಅಕ್ಟೋಬರ್ 2, 1964ರಂದು ಆರಂಭವಾದ ಈ ಆಯೋಗ ಜೂನ್ 29, 1966ರಂದು ಅಂದಿನ ಶಿಕ್ಷಣ ಸಚಿವರಾಗಿದ್ದ ಎಂ. ಸಿ. ಛಾಗ್ಲ ಅವರಿಗೆ ತನ್ನ ವರದಿ ಸಲ್ಲಿಸಿತು. ದೇಶ ವಿದೇಶಗಳ ನುರಿತ ತಜ್ಞರು ಸೇರಿದ 17 ಮಂದಿಯ ಈ ತಂಡ ಭಾರತದಲ್ಲಿ ಆಗಬೇಕಾದ ಶೈಕ್ಷಣಿಕ ಬದಲಾವಣೆಗಳ ಬಗ್ಗೆ ಹೇಳಿದ್ದು ಹೀಗೆ:
"ಶಿಕ್ಷಣವನ್ನು ಜನರ ಜೀವನ ಮತ್ತು ಆಶೋತ್ತರಗಳಿಗೆ ಸಂಬಂಧಿಸಿದಂತೆ ರೂಪಿಸುವ ಮೂಲಕ ರಾಷ್ಟ್ರೀಯ ಐಕ್ಯತೆಯ ನಿಟ್ಟಿನಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಬದಲಾವಣೆಗೆ ಒಳ್ಳೆಯ ಉಪಕರಣವಾಗಿ ಬಳಸಿಕೊಳ್ಳಬಹುದು".
ಇದನ್ನು ಸಾಧಿಸಲು ಈ ಕೆಳಗಿನ 5 ಅಂಶಗಳನ್ನು ಆಯೋಗ ಸೂಚಿಸಿತು: ಶಿಕ್ಷಣಕ್ಕೂ ಮತ್ತು ಉತ್ಪಾದನಾ ಸಾಮರ್ಥ್ಯಕ್ಕೂ ಸಂಬಂಧ ಬೆಸೆಯುವುದು, ಸಾಮಾಜಿಕ ಮತ್ತು ರಾಷ್ಟ್ರೀಯ ಐಕ್ಯತೆ ಹೆಚ್ಚಿಸುವುದು, ಪ್ರಜಾಪ್ರಭುತ್ವವನ್ನು ಶಿಕ್ಷಣದ ಮೂಲಕ ಒಳಗೂಡಿಸುವುದು, ಸಾಮಾಜಿಕ-ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಹುಟ್ಟು ಹಾಕುವುದು ಮತ್ತು ಸಾಮಾಜಿಕ ಆಧುನೀಕರಣಕ್ಕೆ ಸಹಕಾರಿಯಾಗುವ ಮೌಲ್ಯಗಳನ್ನು ಮತ್ತು ಕೌಶಲಗಳನ್ನು ನೀಡುವುದು
"ರಾಷ್ಟ್ರೀಯ ಐಕ್ಯತೆಗೆ ಪೂರಕವಾದ ಭಾಷಾ ನೀತಿಯನ್ನು ರೂಪಿಸಬೇಕು. ಮೊದಲ ಹಂತದ ಮತ್ತು ಎರಡನೇ ಹಂತದ ಕಲಿಕೆ ಆಯಾ ಪ್ರಾದೇಶಿಕ ಭಾಷೆಗಳಲ್ಲೇ ನಡೆಯಬೇಕು. ಅಲ್ಲದೆ ಉನ್ನತ ಕಲಿಕೆಯೂ ಪ್ರಾದೇಶಿಕ ಭಾಷೆಗಳಲ್ಲೇ ಸಾಧ್ಯವಾಗಬೇಕು. ಪ್ರತಿಯೊಂದು ಪ್ರದೇಶದಲ್ಲೂ ಅಲ್ಲಿನ ಜನರ ಭಾಷೆಗಳೇ ಆಡಳಿತ ಭಾಷೆಯಾಗಿರಬೇಕು. ಪ್ರತಿಯೊಂದು ಪ್ರದೇಶದ ಜನರ ಭಾಷೆಗಳಲ್ಲಿ ಹೆಚ್ಚಿನ ವೈಜ್ಞಾನಿಕ ಪುಸ್ತಕಗಳನ್ನು ರೂಪಿಸಬೇಕು. ಇದರ ಹೊಣೆಯನ್ನು ್ಖಎಈ ಹೊರಬೇಕು. ರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸಬೇಕು. ಮುಂದಿನ ದಿನಗಳಲ್ಲಿ ಹಿಂದಿ ಭಾಷೆ ಕಲಿಕಾ ಮಾಧ್ಯಮವಾಗಬೇಕು. ಈ ಕೆಲಸವನ್ನು ಜೋಪಾನವಾಗಿ ಮಾಡತಕ್ಕದ್ದು. ಇಂಗ್ಲಿಷ್ ಅನ್ನು ಶಾಲಾ ಹಂತದಲ್ಲೇ ಕಲಿಸಬೇಕು. ಅಂತಾರಾಷ್ಟ್ರೀಯ ಭಾಷೆಗಳ ಕಲಿಕೆಗೆ ಒತ್ತು ನೀಡಬೇಕು, ವಿಶೇಷವಾಗಿ ರಷ್ಯನ್ ಭಾಷೆಗೆ ಒತ್ತು ನೀಡತಕ್ಕದ್ದು. ಉನ್ನತ ಶೈಕ್ಷಣಿಕ ವಲಯದಲ್ಲಿ ಇಂಗ್ಲಿಷ್ ಭಾಷೆಯೇ ಸಂಪರ್ಕ ಭಾಷೆಯಾಗಿರಲಿ. ಆದರೆ ಮುಂದಿನ ದಿನಗಳಲ್ಲಿ ಆ ಸ್ಥಾನವನ್ನು ಹಿಂದಿ ಭಾಷೆ ತುಂಬಬೇಕು. ಏಕೆಂದರೆ ಹಿಂದಿ ಭಾಷೆಯು ಭಾರತದ ಆಡಳಿತ ಭಾಷೆ ಮತ್ತು ಸಂಪರ್ಕ ಭಾಷೆಯಾಗಿದೆ. ಹಾಗಾಗಿ ಹಿಂದಿ ಭಾಷೆಯನ್ನು ಹಿಂದಿಯೇತರ ಪ್ರದೇಶಗಳಿಗೂ ಹರಡಬೇಕು." ಎಂದು ಕೊಠಾರಿ ಸಮಿತಿ ತನ್ನ ವರದಿಯಲ್ಲಿ ಹೇಳಿತು.
ಕೊಠಾರಿ ಸಮಿತಿಯ ವರದಿಯನ್ನು ಪರಿಗಣಿಸಿ ಮುಂದಿನ ದಿನಗಳಲ್ಲಿ ಆಗಬೇಕಾದ ಶೈಕ್ಷಣಿಕ ಬದಲಾವಣೆಗಳನ್ನು ಕಾರ್ಯರೂಪಕ್ಕೆ ತರಲು ಸಂಸದರನ್ನೊಳಗೊಂಡ 'ರಾಷ್ಟ್ರೀಯ ಶೈಕ್ಷಣಿಕ ನೀತಿ'ಯ ಆಯೋಗವನ್ನು ರಚಿಸಲಾಯಿತು. ಈ ಆಯೋಗವು ಶಿಕ್ಷಣದ ಭಾಷಾ ನೀತಿಯನ್ನು ಈ ರೀತಿ ರೂಪಿಸಿತು:
"ಮಕ್ಕಳಿಗೆ ಶಿಕ್ಷಣದ ಮೊದಲ ಮತ್ತು ಎರಡನೇ ಹಂತದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಕಲಿಸಬೇಕು. ಉನ್ನತ ಕಲಿಕೆಯ ವಿಶ್ವವಿದ್ಯಾನಿಲಯಗಳಲ್ಲೂ ಪ್ರಾದೇಶಿಕ ಭಾಷೆಗಳಲ್ಲೇ ಕಲಿಕೆ ಆಗಬೇಕು. ದೇಶದೆಲ್ಲೆಡೆ ತ್ರಿಭಾಷಾ ಸೂತ್ರ ಜಾರಿಯಾಗಬೇಕು. ಹಿಂದಿ ಭಾಷಿಕ ಪ್ರದೇಶಗಳಲ್ಲಿ ಓದುವ ಮಕ್ಕಳಿಗೆ ಹಿಂದಿ, ಇಂಗ್ಲಿಷ್ ಕಲಿಸುವುದರೊಂದಿಗೆ ದಕ್ಷಿಣ ಭಾರತದ ಯಾವುದಾದರೂ ಒಂದು ಭಾಷೆಯನ್ನೂ ಕಲಿಸಬೇಕು. ಅಂತೆಯೇ ಹಿಂದಿಯೇತರ ಭಾಷಿಕರು ತಮ್ಮ ಪ್ರಾದೇಶಿಕ ಭಾಷೆ, ಇಂಗ್ಲಿಷ್ ಭಾಷೆಗಳೊಂದಿಗೆ ಹಿಂದಿಯನ್ನೂ ಕಲಿಯಬೇಕು. ಹಿಂದಿಯೇತರ ಪ್ರದೇಶಗಳಲ್ಲಿ ವ್ಯಾಪಕವಾಗಿ ಹಿಂದಿ ಹರಡಲು ಉತ್ತೇಜಿಸಬೇಕು. ಹಿಂದಿ ದೇಶದ ಸಂಪರ್ಕ ಭಾಷೆಯಾಗಬೇಕು. ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಮಾಧ್ಯಮದಲ್ಲಿ ಕಲಿಸುವ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಸಂಸ್ಕೃತ ಭಾಷೆ ಭಾರತದ ಸಾಂಸ್ಕೃತಿಕ ಐಕ್ಯತೆಗೆ ಕಾರಣವಾಗಿದೆ. ಹಾಗಾಗಿ ಅದರ ಕಲಿಕೆಗೆ ಹೇರಳವಾಗಿ ಬೆಂಬಲ ಸಿಗತಕ್ಕದ್ದು."
ಮೇಲೆ ಹೇಳಿದ ಐತಿಹಾಸಿಕ ಘಟನೆಗಳತ್ತ ನೋಡಿದಾಗ ಗಮನಿಸಬೇಕಾದ ಕೆಲವು ಅಂಶಗಳು ಈ ರೀತಿಯಾಗಿವೆ:
ಭಾರತದ ಪ್ರಜೆಗಳನ್ನು ಕೇಂದ್ರ ಸರ್ಕಾರ "ಹಿಂದಿ ಮತ್ತು ಹಿಂದಿಯೇತರ" ಎಂಬ ಎರಡು ಪಂಗಡಗಳಾಗಿ ನೋಡುತ್ತಾ ಬಂದಿದೆ. ಕೊಠಾರಿ ಆಯೋಗ ತನ್ನ ವರದಿ ಬರೆಯುವ ಹೊತ್ತಿಗೆ ಆ ಆಯೋಗದ ಸದಸ್ಯರು "ಹಿಂದಿ ಭಾಷೆ ನಮ್ಮ ದೇಶದ ಸಂಪರ್ಕ ಭಾಷೆಯಾಗಿದೆ" ಎನ್ನುವ ತಪ್ಪು ಕಲ್ಪನೆ ಹೊಂದಿರುವುದು ಕಾಣುತ್ತದೆ. ಅಂದು ಮಾತ್ರವಲ್ಲ, ಇಂದಿಗೂ ದೆಹಲಿ - ಮುಂಬೈ ನಗರ ಪ್ರದೇಶಗಳನ್ನು ಮತ್ತು ಹಿಂದಿ ಮಾತನಾಡುವ ರಾಜ್ಯಗಳನ್ನು ಹೊರತುಪಡಿಸಿದರೆ ದೇಶದ ಇತರೆಡೆಗಳಲ್ಲಿ ಹಿಂದಿ ಭಾಷೆಯ ಹರವು ಸೀಮಿತವಾಗಿಯೇ ಇದೆ. ಅಂದಿನ ಕಾಲಕ್ಕೆ ಹಿಂದಿ ಭಾಷೆಯ ಹರವು ಮತ್ತಷ್ಟು ಸೀಮಿತವಾಗಿರಬೇಕಾದ್ದು ಸಹಜವೇ.
ಅಂದಿನ ರಾಷ್ಟ್ರೀಯ ಶಿಕ್ಷಣ ನೀತಿಯ ಆಯೋಗದ ಶಿಫಾರಸ್ಸಿನಂತೆ ಹಿಂದಿಯೇತರ ರಾಜ್ಯದ ಜನರಿಗೆ, ಅವತ್ತಿನಿಂದ ಇವತ್ತಿನ ತನಕ ಹಿಂದಿ ಕಲಿಸಲಾಗಿದೆಯೇ ಹೊರೆತು ಹಿಂದಿ ರಾಜ್ಯಗಳ ಜನರಿಗೆ ದಕ್ಷಿಣದ ಭಾಷೆಗಳನ್ನು ಕಲಿಸುವ ಕೆಲಸ ಆಗಿಲ್ಲ. ಹಾಗೊಮ್ಮೆ ಕಲಿಸಿದ್ದಿದ್ದರೆ ದೆಹಲಿ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಬಿಹಾರಗಳಲ್ಲಿ ತಕ್ಕ ಮಟ್ಟಿಗೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಕಲಿತವರು ಇರುತ್ತಿದ್ದರು. ಇಷ್ಟೇ ಅಲ್ಲ, ಹಿಂದಿ ಪ್ರದೇಶಗಳಲ್ಲಿ ಮಕ್ಕಳು ಎರಡೇ ಭಾಷೆ ಕಲಿಯುತ್ತಾರೆ. ಇದರಿಂದ ಮೂರನೇ ಭಾಷೆ ಕಲಿಯುವ ಹೊರೆ ಅವರಿಗಿಲ್ಲ. ಆದರೆ ಕರ್ನಾಟಕದ ಮಕ್ಕಳು ಹಿಂದಿ ಭಾಷೆಯನ್ನೂ ಕಲಿಯಬೇಕಾದ ಕಾರಣ ಮೂರು ಭಾಷೆಗಳನ್ನು ಕಲಿಯಬೇಕಾಗುತ್ತದೆ ಇನ್ನು ಪ್ರಾದೇಶಿಕ ಭಾಷೆಗಳಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆಯಂತೂ ಇಂದಿಗೂ ಕೇಳಲೂ ಸಿಗುತ್ತಿಲ್ಲ.
ಒಂದೆಡೆ ರಾಷ್ಟ್ರೀಯ ಏಕೀಕರಣ ಆಗಬೇಕೆನ್ನುವ ಭಾರತದ ಸರ್ಕಾರಗರಳು ದೇಶದ ಅತ್ಯಂತ ಸುಂದರ ಅಂಶವಾದ ವೈವಿಧ್ಯತೆಯನ್ನೇ ಬದಿಗೊತ್ತಿರುತ್ತವೆ.
ತುರ್ತು ಪರಿಸ್ಥಿತಿಯ ನಂತರದ ದಿನಗಳಿಂದಲೂ ಕೇಂದ್ರ ಸರ್ಕಾರದ ಕೈಗೆ ಸಿಕ್ಕಿರುವ ಶಿಕ್ಷಣ ವ್ಯವಸ್ಥೆಯನ್ನು ರೈಲ್ವೆ, ಅಂಚೆ, ವಿಮೆ ಇಲಾಖೆಗಳಂತೆ ಮತ್ತೊಂದು ಹಿಂದಿ ಹೇರಿಕೆಯ ಏಜನ್ಸಿಯ ರೂಪದಲ್ಲಿ ಬಳಸಿಕೊಳ್ಳಲಾಗುತ್ತಾ ಬಂದಿದೆ. ಕರ್ನಾಟಕದ ಶಾಲೆಗಳಲ್ಲಿ ಮಕ್ಕಳಿಗೆ ಮೊದಲಿಗೆ ಹಿಂದಿಯನ್ನು ಕೇವಲ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ನೀಡಿ, ನಂತರ ನೋಡ ನೋಡುತ್ತಿದ್ದಂತೆಯೇ 100 ಅಂಕಗಳಿಗೆ ಕಡ್ಡಾಯವಾಗಿ ಹಿಂದಿ ಪರೀಕ್ಷೆ ಬರೆಯಬೇಕಾಗಿ ಬಂತು. ಅಂದರೆ ಕರ್ನಾಟಕದಲ್ಲಿ ಓದುವ ಮಕ್ಕಳು ಹಿಂದಿ ಕಲಿಯದೇ ಶಾಲಾ ಕಲಿಕೆಯನ್ನು ಪೂರ್ಣಗೊಳಿಸಲಾಗದ ಸ್ಥಿತಿ ಬಂದೊದಗಿದೆ. ಕರ್ನಾಟಕದ ಶಿಕ್ಷಣ ರಾಜ್ಯಪತ್ರದ ಪ್ರಕಾರ ಹಿಂದಿ ಕಲಿಕೆ ಕಡ್ಡಾಯವಲ್ಲ. ಬದಲಾಗಿ 11 ಭಾಷೆಗಳ ಪೈಕಿ ಯಾವುದನ್ನಾದರೂ ಮೂರನೆಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಮೂರನೇ ಭಾಷೆಯಾಗಿ ಹಿಂದಿಯಲ್ಲದೆ ಬೇರೆ ಯಾವುದೇ ಭಾಷೆಯ ಆಯ್ಕೆಯೇ ಇರುವುದಿಲ್ಲ. ಹಾಗಾಗಿ ಪ್ರಾಥಮಿಕ ಹಂತದಿಂದಲೇ ಕನ್ನಡದ ಮಕ್ಕಳಿಗೆ ಹಿಂದಿ ಕಲಿಸಲಾಗುತ್ತಿದೆ.
ಬ್ರಿಟೀಷರ ಆಳ್ವಿಕೆಯಲ್ಲಿ ಭಾರತದಲ್ಲಿ ಯಾವ ಶಿಕ್ಷಣ ವ್ಯವಸ್ಥೆ ಇರಬೇಕು ಅನ್ನುವ ನಿರ್ಧಾರವನ್ನು ಸಾವಿರಾರು ಮೈಲಿ ದೂರದಲ್ಲಿದ್ದ ಇಂಗ್ಲೆಂಡಿನ ನಾಯಕರು ನಿರ್ಧರಿಸುತ್ತಿದ್ದರು. ಇಂದು ಕರ್ನಾಟಕದಲ್ಲಿನ ಶಿಕ್ಷಣ ವ್ಯವಸ್ಥೆ ಹೇಗಿರಬೇಕು ಅನ್ನುವ ಬಗ್ಗೆ ಸಾವಿರಾರು ಮೈಲಿ ದೂರದ ದೆಹಲಿಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಆಡಳಿತ ಎನ್ನುವುದು ಪ್ರಜೆಗಳಿಗೆ ಅತ್ಯಂತ ಹತ್ತಿರದಲ್ಲಿರಬೇಕು ಎನ್ನುವ ಪ್ರಜಾಪ್ರಭುತ್ವದ ಮೂಲ ಆಶಯವನ್ನು ಕಡೆಗಣಿಸಿ ಶಿಕ್ಷಣ ವ್ಯವಸ್ಥೆಯ ಬಗ್ಗೆ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿದೆ.
ಕೊಠಾರಿ ಆಯೋಗದಲ್ಲಿ ಹೇಳಲಾಗಿರುವ ಅಂಶಗಳಲ್ಲಿ, ಹಿಂದಿಯ ಹರಡುವಿಕೆಗೆ ಬೆಂಬಲ ನೀಡಬೇಕು ಎಂಬ ಒಂದು ಅಂಶವನ್ನು ಮಾತ್ರ ಗಮನವಿಟ್ಟು ಕೆಲಸ ಮಾಡಿದಂತೆ ಕಾಣುತ್ತದೆ. ಜನರ ಭಾಷೆಗಳಲ್ಲಿ ಉನ್ನತ ಕಲಿಕೆಯನ್ನು ಕಟ್ಟಬೇಕು ಎಂಬ ಆಶಯವು ಇಂದಿಗೂ ಆಶಯವೇ ಆಗಿ ಉಳಿದಿದೆ.
ಭಾರತಕ್ಕಿಂದು ಬೇಕಿರುವುದು ಸಮಾನತೆಯ ಭಾಷಾನೀತಿ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ದೇಶದ ಶೇ.60 ರಷ್ಟಿರುವ ಹಿಂದಿಯೇತರ ಪ್ರಜೆಗಳ ಆಶೋತ್ತರಗಳಿಗೆ ಸ್ಪಂದಿಸುವಂತಾಗಲಿ.

-ವಲ್ಲೀಶ್ ಕುಮಾರ್. ಎಸ್
vallishkumar@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement