ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಇತಿಹಾಸ ಬದಲಾಗದು, ಆದರೆ ಭವಿಷ್ಯ ಬದಲಿಸಬಹುದಲ್ಲ?

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಕಟಾರಾದಲ್ಲಿ ಶ್ರೀ ಶಕ್ತಿ ಎಕ್ಸಪ್ರೆಸ್ನ ಉದ್ಘಾಟನೆಯಾದದ್ದು,..

Rashmi Kasaragodu
Updated On : 7 Jul 2014, 12:51 pm

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಕಟಾರಾದಲ್ಲಿ ಶ್ರೀ ಶಕ್ತಿ ಎಕ್ಸಪ್ರೆಸ್ನ ಉದ್ಘಾಟನೆಯಾದದ್ದು, ಕೋಟಿ ರೇಲ್ವೆ ಯಾತ್ರಿಕರ ಕಂಗಳಲ್ಲಿ ಹೊಸ ಕನಸನ್ನು ಹುಟ್ಟುಹಾಕಿದೆ. ಭಾರತದಲ್ಲಿ ರೈಲು ಯಾತ್ರೆಯನ್ನು ಸರಳ, ಸುಗಮ ಮತ್ತು ಸಮಯಬದ್ಧವಷ್ಟೇ ಅಲ್ಲದೆ ಸ್ವಚ್ಛ-ಸುಂದರವೂ ಆಗಿಸಲು ನರೇಂದ್ರ ಮೋದಿ ಸರ್ಕಾರಕ್ಕೆ ವೈಷ್ಣೋದೇವಿ ಮಾತೆಯು ಶಕ್ತಿ ತುಂಬಲಿ ಎಂದು ಭಾರತೀಯರೆಲ್ಲ ಪ್ರಾರ್ಥಿಸುತ್ತಿದ್ದಾರೆ.
ರೇಲ್ವೆ ಯಾತ್ರಿಕರು ಹೆಚ್ಚೇನು ಬಯಸರು. ರೈಲುಗಳು ಸಮಯಕ್ಕೆ ಸರಿಯಾಗಿ ಅಡ್ಡಾಡಲಿ ಎನ್ನುವುದು ಅವರ ಮುಖ್ಯ ಆಸೆಗಳಲ್ಲೊಂದು. ಇಂದಿಗೂ ಸಮಯಕ್ಕೆ ಸರಿಯಾಗಿ ರೈಲು ಬರುವುದನ್ನು ಪ್ರಯಾಣಿಕರು ಪವಾಡವೆನ್ನುವಂತೆಯೇ ನೋಡುತ್ತಾರೆ. ಇಂಥ ವಿಳಂಬಕ್ಕೆ ರೈಲ್ವೆ ವಿಭಾಗ ಪ್ರಯಾಣಿಕರಿಗೆ ಪರಿಹಾರವನ್ನು ಕೊಡುವುದಿಲ್ಲ.
ಇನ್ನು ರೈಲುಗಳಲ್ಲಿ ಸಿಗುವ ಊಟದ ಬಗ್ಗೆಯಂತೂ ಮಾತನಾಡುವಂತೆಯೇ ಇಲ್ಲ. ಆಹಾರದ ಗುಣಮಟ್ಟ ಹೀಗಿರಬೇಕು ಎನ್ನುವ ಯಾವ ಮಾನದಂಡವೂ ಇಲ್ಲ. ಶತಾಬ್ದಿ ಮತ್ತು ಇತರ ರೈಲುಗಳಲ್ಲಿ ಕೊಡಲಾಗುವ ಅಧಿಕ ಆಹಾರವನ್ನು ಕಡಿಮೆಗೊಳಿಸಿ, ಅದರ ಗುಣಮಟ್ಟವನ್ನು ಹೆಚ್ಚಿಸಬಹುದು ಅಥವಾ ಊಟದ ವ್ಯವಸ್ಥೆಯನ್ನೇ ನಿಲ್ಲಿಸಿ ರೈಲ್ವೆ ದರ ಇಳಿಸಬೇಕು.
ಇದೀಗ ಪಂಡಿತ್ ದೀನ್ದಯಾಳ್ ಉಪಾಧ್ಯಾಯರ ಜನ್ಮ ಶತಾಬ್ಧಿಯ ವರ್ಷ ಪ್ರಾರಂಭವಾಗಲಿದೆ. ಹೀಗಾಗಿ, ಭಾರತದ ಸಾಧಾರಣ, ಗ್ರಾಮೀಣ ಮತ್ತು ಬಡ ಯಾತ್ರಿಗಳಿಗೆಂದೇ ವಿಶೇಷ ವ್ಯವಸ್ಥೆಯುಳ್ಳ, ಗ್ರಾಮೀಣ ಭಾಗಗಳನ್ನು ನಗರಗಳೊಂದಿಗೆ ಜೋಡಿಸುವ ರೈಲುಗಾಡಿಗಳನ್ನು ದೀನ್ದಯಾಳ್ ಎಕ್ಸಪ್ರೆಸ್ನ ಹೆಸರಿನಲ್ಲಿ ಹೊರಡಿಸಬಹುದಲ್ಲವೇ? ಕಡುಬಡವರಿಗೂ ಕೂಡ ಬರ್ತ್ ಸಿಗುವಂಥ, ಆತ್ಮಾಭಿಮಾನದಿಂದ ಅವರೂ ರೈಲ್ವೆ ಯಾತ್ರೆ ಕೈಗೊಳ್ಳುವಂಥವ್ಯವಸ್ಥೆ ಮಾಡಬಹುದಲ್ಲವೇ?
ಅಸ್ಸಾಮ್ನಿಂದ ಕೇರಳಕ್ಕೆ ಹೊರಡುವ ಎಕ್ಸ್ಪ್ರೆಸ್ ಗಾಡಿಯ ಹೆಸರನ್ನು ಆದಿಶಂಕರ ಎಕ್ಸಪ್ರೆಸ್, ತಿರುವನಂತಪುರ ಅಥವಾ ಚೆನ್ನೈನಿಂದ ಜಮ್ಮು ವರೆಗೆ ಹೊರಡುವ ಎಕ್ಸ್ಪ್ರೆಸ್ ಗಾಡಿಯ ಹೆಸರನ್ನು ಸ್ವಾಮಿ ವಿವೇಕಾನಂದ ಎಕ್ಸ್ಪ್ರೆಸ್ ಮತ್ತು ಕೋಲ್ಕತಾವನ್ನು ಜಮ್ಮುವಿನೊಂದಿಗೆ ಜೋಡಿಸುವ ಗಾಡಿಗೆ ಡಾ. ಶ್ಯಾಮ್ಪ್ರಸಾದ್ಮುಖರ್ಜಿ ಎಕ್ಸ್ಪ್ರೆಸ್ನ ಹೆಸರಲ್ಲಿ ಓಡಿಸಬಹುದು. ಪಂಡಿತ್ ನೆಹರು ಅವರ ಜನ್ಮಶತಾಬ್ಧಿಯ ವರ್ಷದಂದು ಮಾಧವರಾವ್ ಸಿಂಧಿಯಾ ರೇಲ್ವೆ ಮಂತ್ರಿಯಾಗಿದ್ದರು. ಆ ಸಮಯದಲ್ಲಿ ಶುರುವಾದ ಶತಾಬ್ದಿ ಎಕ್ಸ್ಪ್ರೆಸ್ನ ಓಡಾಟ ಇಂದಿಗೂ ಮುಂದುವರಿದಿದೆ.  
ಇಂದು ದೆಹಲಿ, ಮುಂಬೈ, ಕೋಲ್ಕತಾದಂಥ ಬೃಹತ್ ನಗರಗಳಲ್ಲಷ್ಟೇ ಅಲ್ಲ, ಸಾಮಾನ್ಯ ನಗರಗಳ ರೈಲ್ವೆ ಸ್ಟೇಷನ್ಗಳಲ್ಲೂ ಕೂಡ ಟಿಕೆಟ್ ಖರೀದಿಸುವುದಕ್ಕಾಗಿ ಗುಂಪುಗಟ್ಟುವಿಕೆ, ತಳ್ಳಾಟ, ಹೊಡೆದಾಟವನ್ನು ನೋಡಬಹುದು. ಇಂಥ ಪರಿಸ್ಥಿತಿ ಆಯಾ ರಾಜ್ಯಗಳ ಗೌರವ ಮತ್ತು ಪ್ರತಿಷ್ಠೆಯನ್ನಂತೂ ಬಿಂಬಿಸುವುದಿಲ್ಲ ಬಿಡಿ. ಪ್ರತಿಯೊಬ್ಬ ಭಾರತೀಯನಿಗೂ ಆತ್ಮಗೌರವದಿಂದ ರೈಲುಗಳಲ್ಲಿ ಪಯಣಿಸುವ, ಉನ್ನತ ಸೌಲಭ್ಯಗಳನ್ನು ಬಳಸಿಕೊಳ್ಳುವ ಹಕ್ಕಿಲ್ಲವೇ? ರೇಲ್ವೆ ಟಿಕೆಟ್ ರೇಲ್ವೆ ಸ್ಟೇಷನ್ಗಳಲ್ಲೇ ಏಕೆ ಸಿಗಬೇಕು? ಗ್ರಾಮೀಣ ರೇಲ್ವೆ ಟಿಕೆಟ್ ಯೋಜನೆಯ ಮೂಲಕ ಗ್ರಾಮೀಣ ಭಾಗದ ಬಡವರಿಗೂ ಸ್ಲೀಪರ್ ಕ್ಲಾಸ್ನ ಟಿಕೆಟ್ ಅವರ ಗ್ರಾಮದಲ್ಲೇ ಸಿಗುವಂತೆ ಮಾಡುವ ಕೆಲಸವಾಗಬಾರದೇ? ಸಾಮಾನ್ಯ ಜನರು ಗಂಟೆಗಟ್ಟಲೇ ಟ್ರೇನಿಗಾಗಿ ಪ್ಲಾಟ್ಫಾರ್ಮ್ನ ಮೇಲೆ ಕಾದು ಕುಳಿತು, ಕೊನೆಗೆ ರೈಲು ಬಂದಾಗ ಜನರಲ್ ಬೋಗಿಗೆ ನುಗ್ಗುವ ದೃಶ್ಯ ಮನಕರಗಿಸುವಂತಿರುತ್ತದೆ. ಇದೆಲ್ಲ ನಮ್ಮ ನಾಯಕರಿಗೆ ಕಾಣಿಸುವುದಿಲ್ಲವೇ?
ಹೇಗೆ ತಾನೇ ಕಾಣಿಸೀತು ಸಾರ್? ತಮಗೆ ಎಸಿ ಕೋಚ್ಗಳಲ್ಲಿ ಸೀಟು ಸಿಕ್ಕೇ ಸಿಗುತ್ತದೆ ಎನ್ನುವುದು ಅವರಿಗೆ ಗೊತ್ತಿರುತ್ತದೆ. ಹಾಗಾಗಿ ಇನ್ನೇನು 1 ನಿಮಿಷದಲ್ಲಿ ಟ್ರೇನು ಹೊರಡುತ್ತದೆ ಎನ್ನುವಾಗ ನಿಶ್ಚಿಂತೆಯಿಂದ ಬೋಗಿ ಹತ್ತಿ, ಪರದೆ ಎಳೆದುಕೊಳ್ಳುತ್ತಾರವರು! ಇನ್ನು ಅಂತರ್ಜಾಲದಲ್ಲಿ ಟಿಕೆಟ್ ಬುಕ್ ಮಾಡುವ ವ್ಯವಸ್ಥೆಯಿದೆಯಲ್ಲ ಎಂದು ನೀವು ಕೇಳಬಹುದು, ಆದರೆ ಎಷ್ಟು ಮಂದಿಗೆ ಅಂತರ್ಜಾಲದ ಬಳಕೆಯ ಬಗ್ಗೆ ಜ್ಞಾನವಿದೆ? ಆ ಸೌಲಭ್ಯವಿದೆ? ಸರಿಯಾದ ವಿದ್ಯುತ್ ಪೂರೈಕೆ ಇಲ್ಲದೇ ದಿನಕ್ಕೆ ಹತ್ತಾರು ಗಂಟೆ ಕತ್ತಲಲ್ಲಿ ಬದುಕು ದೂಡುವವರು ಹೇಗೆ ತಾನೆ ಅಂತರ್ಜಾಲದಲ್ಲಿ ಟಿಕೆಟ್ ಕಾಯ್ದಿರಿಸಬಲ್ಲರು?
ಬ್ರಿಟಿಷರು ದೇಶ ಬಿಟ್ಟು ಹೊರಡುವಾಗ ರೇಲ್ವೆ ವ್ಯವಸ್ಥೆ ಹೇಗಿತ್ತೋ ಈಗಲೂ ಅಜಮಾಸು ಹಾಗೆಯೇ ಇದೆ. ನಮ್ಮ ಉತ್ತರಾಖಂಡದಲ್ಲಿ ಕಾಠ್ಗೋದಾಮ್ ಎನ್ನುವ ಪ್ರದೇಶದವರೆಗೆ ರಾಣಿಖೇತ್ ಎಕ್ಸ್ಪ್ರೆಸ್ ಎನ್ನುವ ರೈಲು ಸಂಚರಿಸುತ್ತದೆ. ಅದು ಸಮಯಕ್ಕೆ ಸರಿಯಾಗಿ ಬಂದದ್ದನ್ನು ನೋಡಿದವರು ಇಲ್ಲವೇ ಇಲ್ಲ. ಇನ್ನು ಅದರ ಡಬ್ಬಿಗಳನ್ನು ಜೋಧ್ಪುರ್ (ರಾಜಸ್ಥಾನ)ಗೆ ಕಳುಹಿಸಲಾಗುತ್ತದೆ. ಏಕೆ ಹೀಗೆ ಎಂದು ಕೇಳಿದರೆ "ಸ್ಟೇಷನ್ನಲ್ಲಿ ಡಬ್ಬಿಗಳನ್ನು ನಿಲ್ಲಿಸಲು ಜಾಗವಿಲ್ಲ" ಎಂಬ ವಿಚಿತ್ರ ಉತ್ತರ ಎದುರಾಗುತ್ತದೆ. ನೆನಪಿರಲಿ, ಕಾಠ್ಗೋದಾಮ್ನಿಂದ ಜೋಧ್ಪುರ್ ಸುಮಾರು 850 ಕಿ.ಮಿ. ದೂರವಿದೆ!! ಹಿಮಾಚಲ ಪ್ರದೇಶದ ರೈಲ್ವೆ ವ್ಯವಸ್ಥೆಯ ಪರಿಸ್ಥಿತಿಯೂ ಭಿನ್ನವಾಗಿಲ್ಲ.  ಅತಿ ಕಡಿಮೆ ಸಮಯದಲ್ಲಿ ನೆರೆಯ ರಾಜ್ಯಗಳನ್ನು ಸಂಪರ್ಕಿಸುವ ಗಾಡಿಗಳು ಯಾವಾಗ ಬರುತ್ತವೋ? ಉತ್ತರಾಖಂಡದ ಲಕ್ಸರ್ನಿಂದ ದೆಹ್ರಾದೂನ್ ನಡುವೆ ಸಿಂಗಲ್ ಲೈನ್ ರೈಲು ಪಟರಿಗಳಿವೆ. ಇದನ್ನು ಬ್ರಿಟಿಷರು ಹಾಕಿಹೋಗಿದ್ದರು. ಈಗಲೂ ಒಂಚೂರು ಆ ಮಾರ್ಗದಲ್ಲಿ ಬದಲಾವಣೆಯಾಗಿಲ್ಲ. ಈ ಕಾರಣಕ್ಕಾಗೇ ಒಂದು ಗಾಡಿ ಹರಿದು ಹೋಗಬೇಕೆಂದರೆ, ದೆಹಲಿಯಿಂದ ಬರುವ ಎಲ್ಲಾ ರೈಲುಗಳಿಗೂ ಕಾಯಬೇಕಾದ ಅನಿವಾರ್ಯತೆಯಿದೆ. ಆಂಗ್ಲ ವೈಸ್ರಾಯ್ನ ಸಮಯದಲ್ಲಿ ದೆಹಲಿಯಿಂದ ದೆಹ್ರಾದೂನ್ಗೆ ಹೊರಡಲು ಮಸೂರಿ ಎಕ್ಸ್ಪ್ರೆಸ್ ಅನ್ನು ಶುರುಮಾಡಲಾಯಿತು. ಈಗಲೂ ಏನಿಲ್ಲವೆಂದರೂ 10 ಗಂಟೆಗಳ ಪಯಣವದು. ಆದರೆ ಬಹುತೇಕ ಬಾರಿ ದೆಹಲಿಯಿಂದ ದೆಹ್ರಾದೂನ್ ತಲುಪುಲು ಈ ರೈಲು 12-13 ಗಂಟೆ ತೆಗೆದುಕೊಳ್ಳುತ್ತದೆ. ಆದರೆ ಇದೇ ಮಾರ್ಗದಲ್ಲಿ ಅಡ್ಡಾಡುವ ಎಸಿ ಎಕ್ಸ್ಪ್ರೆಸ್ ದೆಹ್ರಾದೂನ್ ತಲುಪಲು ತೆಗೆದುಕೊಳ್ಳುವುದು ಕೇವಲ 5 ಗಂಟೆ 40 ನಿಮಿಷಗಳು ಮಾತ್ರ! ವಾಸ್ತವದಲ್ಲಿ ದೆಹ್ರಾದೂನ್-ದಿಲ್ಲಿ ರೈಲ್ವೆ ಮಾರ್ಗ ಕೇವಲ 3 ಗಂಟೆ ಅವಧಿಯದ್ದೇ ಆಗಿದೆ. ಆದರೆ ಚಿಕ್ಕ ಮತ್ತು ನೇರ ಓಡಾಟಕ್ಕಾಗಿ ಹೊಸ ಪಟರಿಗಳನ್ನು ಹಾಕಬೇಕಾಗುತ್ತದೆ, ಹೊಸ ಮಾರ್ಗವನ್ನು ಶುರುಮಾಡಬೇಕಾಗುತ್ತದೆ. ಇಡೀ ಉತ್ತರಾಖಂಡದ ಅರ್ಥವ್ಯವಸ್ಥೆಯನ್ನೇ ಬದಲಿಸುವ ಶಕ್ತಿ ಹೊಂದಿರುವ ಈ ನಿರ್ಧಾರವನ್ನು ಕೈಗೊಳ್ಳಲು ರೈಲ್ವೆ ಸಚಿವರು ಧೈರ್ಯ ತೋರಿಸಬೇಕಷ್ಟೆ.
ನವ ದೆಹಲಿ ಮತ್ತು ಪುರಾನಿ ದೆಹಲಿ ರೇಲ್ವೆ ಸ್ಟೇಷನ್ಗಳಲ್ಲಿ ಇಳಿಯುವುದೇ ದುಃಸ್ವಪ್ನದಂತಿರುತ್ತದೆ. ತುಂಬಿ ತುಳುಕಾಡುವ ಚಿಕ್ಕ ಪ್ಲಾಟ್ಫಾರ್ಮ್, ಗಾಡಿಗಳಿಗೆ ಮುಂದೆ ಸಾಗುವುದಕ್ಕೆ ಜಾಗವಿರುವುದಿಲ್ಲ, ಇದರ ಜೊತೆಗೆ ಆಟೋರಿಕ್ಷಾದವರ ಆತಂಕ-ಕಿರಿಕಿರಿ ಬೇರೆ. ದುರ್ಬಲರು, ವಿಶಿಷ್ಟ ಚೇತನರು ಮತ್ತು ವೃದ್ಧರಿಗೆ ಟ್ರೇನ್ನಿಂದ ಕೆಳಗಿಳಿದು ಸ್ಟೇಷನ್ನ ಹೊರಗೆ ಬರುವಷ್ಟರಲ್ಲೇ ಸಾಕುಸಾಕಾಗಿರುತ್ತದೆ. ಇಂಥವರನ್ನು ಹೊರಗೆ ತಲುಪಿಸಲು ಯಾವುದೇ ವ್ಯವಸ್ಥೆಯಿರುವುದಿಲ್ಲ. ನಮ್ಮ ತಾಯಿ ಅನಾರೋಗ್ಯ ಪೀಡಿತರಾದಾಗ, ಅವರನ್ನು ಟ್ರೇನ್ನ ಬರ್ತ್ವರೆಗೂ ಕರೆದೊಯ್ಯುವುದರಲ್ಲಿ ನಾವು ಪಟ್ಟ ಪರಿಪಾಟಲು ಅಷ್ಟಿಷ್ಟಲ್ಲ. ಕೊನೆಗೆ ಸ್ಟೇಷನ್ ಮಾಸ್ಟರ್ರನ್ನು ಭೇಟಿಯಾಗಿ ವೀಲ್ಚೇರ್ ತರಬೇಕಾಯಿತು. ಆದರೆ ವೀಲ್ಚೇರ್ನಲ್ಲಿ ಕೂಡಿಸಿ ಪ್ಲಾಟ್ಫಾರ್ಮ್ನ ಮೇಲೆ ತಳ್ಳಿಕೊಂಡು ಹೋಗುವುದೂ ಸುಲಭದ ಕೆಲಸವಲ್ಲ. ಜನರ ಗದ್ದಲ, ತಗ್ಗುದಿಣ್ಣೆಗಳನ್ನು ದಾಟುವುದು...ಅಬ್ಬಬ್ಬಾ, ನಿಜಕ್ಕೂ ರೋಗಿ ಇನ್ನಷ್ಟು ನಿತ್ರಾಣಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ವೀಲ್ಚೇರ್ ಅನ್ನು ಇನ್ನೊಂದು ಪ್ಲಾಟ್ಫಾರ್ಮ್ವರೆಗೆ ಯಾವ ಮಾರ್ಗವಾಗಿ ಒಯ್ಯಬೇಕು ಎನ್ನುವುದಕ್ಕೆ ಅತ್ತ ಸೈನ್ ಬೋರ್ಡ್ಗಳೂ ಇಲ್ಲ, ಇತ್ತ ಉತ್ತಮ ಅಂಡರ್ಪಾಸ್ ಕೂಡ ಇಲ್ಲ. ಅಶಕ್ತರು ಮತ್ತು ವಿಶಿಷ್ಟ ಚೇತನರ ಬಗ್ಗೆ ಭಾರತ ಸಂವೇದನೆಯನ್ನೇ ಕಳೆದುಕೊಂಡುಬಿಟ್ಟಿದೆಯೇ? ಚಿಕ್ಕ, ಸಾಧಾರಣ ನಗರಗಳ ಅಥವಾ ವಿಶ್ವ ವಿಖ್ಯಾತ ತೀರ್ಥಕ್ಷೇತ್ರಗಳಾದ ಹರಿದ್ವಾರ, ಪ್ರಯಾಗ, ನಾಸಿಕ್, ಉಜ್ಜೈನಿ, ಅಮೃತಸರ, ಜಮ್ಮು, ಮಥುರಾಗಳ ರೇಲ್ವೆ ಸ್ಟೇಷನ್ನುಗಳಂತೂ ದೆಹಲಿ ಸ್ಟೇಷನ್ನಿಗಿಂತ ಹೀನವಾಗಿವೆ.
ಇಂಥಲ್ಲೇ ಹೀಗಿರಬೇಕಾದರೆ, ಬಿಹಾರ, ಒಡಿಶಾ, ಉತ್ತರಪ್ರದೇಶದ ಪೂರ್ವ ಭಾಗ, ಜಾರ್ಖಂಡ್, ಬಂಗಾಳ ಮತ್ತು ಅಸ್ಸಾಮ್ನಂಥ ಪ್ರದೇಶಗಳಲ್ಲಿ ರೇಲ್ವೆ ವ್ಯವಸ್ಥೆ ಹೇಗಿರಬಹುದೋ ನೀವೇ ಊಹಿಸಿ! ಅಸ್ಸಾಮ್ನ ಆಚೆಗೆ ರೈಲುಗಾಡಿಗಳೇ ಕಾಣಿಸುವುದಿಲ್ಲ.
ಭಾರತದ ರೇಲ್ವೆ ವ್ಯವಸ್ಥೆ ಪ್ರಪಂಚದಲ್ಲಿಯೇ ಅತ್ಯಂತ ಸುಂದರವಾಗಲಿ ಎಂಬ ಕನಸು ಎಲ್ಲರದ್ದು. ನಮ್ಮ ರೇಲ್ವೆ ಡಬ್ಬಿಗಳ ಇತಿಹಾಸವನ್ನಂತೂ ನಾವು ಬದಲಿಸಲಾರೆವು, ಆದರೆ ಅವುಗಳ ಭೂಗೋಳ ಮತ್ತು ಭವಿಷ್ಯವನ್ನಂತೂ ಬದಲಿಸಬಹುದಲ್ಲ?


 -ತರುಣ್ ವಿಜಯ್
tarunvijay2@yahoo.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement