ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ರೇಲ್ವೆ ಬಜೆಟ್: ನಿರೀಕ್ಷೆಗಳ ಬೋಗಿ ಉದ್ದುದ್ದ

ಬಜೆಟ್ ಸಮಯದಲ್ಲಿ ದೇಶಾದ್ಯಂತ ಕಾತರ ಮನೆಮಾಡಿದೆ. ರೇಲ್ವೆ ಬಜೆಟ್ನಲ್ಲಿ ವಿದೇಶಿ ನೇರ ಬಂಡವಾಳ ...

Rashmi Kasaragodu
Updated On : 7 Jul 2014, 12:49 pm

ಬಜೆಟ್ ಸಮಯದಲ್ಲಿ ದೇಶಾದ್ಯಂತ ಕಾತರ ಮನೆಮಾಡಿದೆ. ರೇಲ್ವೆ ಬಜೆಟ್ನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹೇಗೆ ಕೆಲಸ ಮಾಡಬಹುದು, ಖಾಸಗಿ- ಸಾರ್ವಜನಿಕ ಸಹಭಾಗಿತ್ವ, ರೇಲ್ವೆ ಆಧುನೀಕರಣ, ಸುರಕ್ಷತೆ ಮತ್ತು ಭದ್ರತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳು, ಮೊದಲ ಬಾರಿಗೆ ಬುಲೆಟ್ ಟ್ರೇನ್ ಘೋಷಣೆಯ ನಿರೀಕ್ಷೆ, ಸೆಮಿ ಹೈಸ್ಪೀಡ್ ರೈಲು ಕಾರಿಡಾರ್ಗಳು, ಭಾರತದ ಗಡಿಯುದ್ದಕ್ಕೆ ಹೊಸ ರೇಲ್ವೆ ಲೈನುಗಳ ನಿರ್ಮಾಣ ಇಂಥ ಎಲ್ಲ ಆದ್ಯತೆಗಳು ರೇಲ್ವೆ ಸಚಿವಾಲಯದ ಎದುರಿಗಿವೆ.
ಈಗ ಎಲ್ಲರ ಕಣ್ಣು ಮಂದಸ್ಮಿತ ರೇಲ್ವೆ ಸಚಿವ ಸದಾನಂದ ಗೌಡರ ಮೇಲೆ. ರೇಲ್ವೆಯ ಆರ್ಥಿಕ ಸ್ಥಿತಿ ಹದಗೆಟ್ಟಿರುವುದರಿಂದ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯ ಅವರ ಮೇಲಿದೆ. ನಿತ್ಯ ಯಾತ್ರಿಕರು ಹಾಗೂ ವಹಿವಾಟಿಗಾಗಿ ರೇಲ್ವೆಯನ್ನು ಅವಲಂಬಿಸಿರುವ ವರ್ಗ ಎಲ್ಲರನ್ನೂ ಇನ್ನೊಂದು ಸಂತೃಪ್ತಿಯ ಹಂತಕ್ಕೆ ತೆಗೆದುಕೊಂಡುಹೋಗಬೇಕಾದ ಹೊಣೆ ಇದೆ. ಇತ್ತೀಚಿನ ರೇಲ್ವೆ ಪ್ರಯಾಣ ಮತ್ತು ಸರಕು ದರ ಏರಿಕೆಯು ರೇಲ್ವೆ ಆಧುನೀಕರಣ ಮತ್ತು ಸುರಕ್ಷತೆಯ ಯೋಜನೆಗಳಿಗೆಲ್ಲ ಹಣ ಒದಗಿಸುವಷ್ಟು ಶಕ್ತವಾಗಿಯೇನೂ ಇಲ್ಲ. ಹೀಗಾಗಿ ರೇಲ್ವೆ ಸಚಿವಾಲಯವು ಆದಾಯವನ್ನು ತರುವ ಇತರ ಮೂಲಗಳತ್ತ ಒತ್ತು ನೀಡಬೇಕಾಗುತ್ತದೆ. ಉದಾಹರಣೆಗೆ ಜಾಹೀರಾತು, ಕೇಟರಿಂಗ್, ಸರಕು ಏರಿಸುವ ಸೇವೆ, ಪಾರ್ಸೆಲ್ ಸೇವೆ ಇತ್ಯಾದಿ ವಿಭಾಗಗಳಲ್ಲಿ ಆದಾಯ ಸೆಳೆಯುವುದು.
2007ರಿಂದಲೂ ರೇಲ್ವೆ ಬೋರ್ಡ್ಗಳು ಹಾಗೂ ಹಿಂದಿನ ರೇಲ್ವೆ ಮಂತ್ರಿಗಳೆಲ್ಲ ಬುಲೆಟ್ ಟ್ರೇನ್ಗಳ ಬಗ್ಗೆ, ವಿಶ್ವದರ್ಜೆಯ ಸ್ಟೇಷನ್ಗಳ ಬಗ್ಗೆ ಮಾತಾಡಿದ್ದೇ ಆಯಿತಾದರೂ ಈವರೆಗೆ ಆ ನಿಟ್ಟಿನಲ್ಲಿ ಯಾವ ಪ್ರಯತ್ನಗಳೂ ಆಗಿಲ್ಲ. ಈಗ ರೇಲ್ವೆ ಸಚಿವರು ತಮ್ಮ ರೇಲ್ವೆ ಬಜೆಟ್ನಲ್ಲಿ ಪುಣೆ- ಮುಂಬೈ-ಅಹಮದಾಬಾದ್ ಅಥವಾ ಮುಂಬೈ-ಅಹಮದಾಬಾದ್ ಬುಲೆಟ್ ಟ್ರೇನ್ ಕಾರಿಡಾರ್ ಯೋಜನೆ ಅಳವಡಿಸಿಕೊಂಡರೆ ಉತ್ತಮ. ಇದನ್ನು ತನ್ನ ಸ್ವಂತ ಬಲದಿಂದ ಮಾಡುವ ಆರ್ಥಿಕ ಸಾಮರ್ಥ್ಯ ರೇಲ್ವೆ ಇಲಾಖೆಗಿಲ್ಲ. ಹೀಗಾಗಿ ಇಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅಥವಾ ಸಾರ್ವಜನಿಕ- ಖಾಸಗಿ ಸಹಭಾಗಿತ್ವದ ಮಾದರಿಗೆ ಮೊರೆ ಹೋಗಬೇಕಾಗುತ್ತದೆ. 2010ರಲ್ಲಿ ರೇಲ್ವೆ ಬೋರ್ಡ್ ಮತ್ತು 'ಜಪಾನ್ ಇಂಟರ್ನ್ಯಾಷನಲ್ ಕೋ ಆಪರೇಷನ್ ಏಜೆನ್ಸಿ' (ಜೆಐಸಿಎ) ಜಂಟಿಯಾಗಿ ಕಾರ್ಯಸಾಧು ಸಮೀಕ್ಷೆಯನ್ನು ಹಾಗೂ ಎಂಜಿನಿಯರಿಂಗ್ ಮತ್ತು ಟ್ರಾಫಿಕ್ ಸರ್ವೆಯನ್ನು ಕೈಗೊಂಡಿದ್ದವು. ಆ ಅಧ್ಯಯನ ಅಂದಾಜಿಸಿದಂತೆ ಈ ಯೋಜನೆಗೆ 65 ಸಾವಿರ ಕೋಟಿ ರುಪಾಯಿಗಳು ಬೇಕಾಗುತ್ತವೆ. ಈ ಕಾರಿಡಾರ್ ಪ್ರಯಾಣಿಕರಿಗೆ ಮತ್ತು ಸರಕು ಸಾಗಣೆಗೆ ಬಹಳ ಅನುಕೂಲಕರ. ಏಕೆಂದರೆ ಮಹಾರಾಷ್ಟ್ರ ಮತ್ತು ಗುಜರಾತ್ಗಳ ಈ ಸೆರಗಿನಲ್ಲಿ ರಾಸಾಯನಿಕ, ಜವಳಿ ಮತ್ತು ಬಿಡಿಭಾಗ ತಯಾರಿಕೆಗಳ ಕೈಗಾರಿಕಾ ಜಾಲವೇ ಇದ್ದು, ಅಂತರ್ರಾಜ್ಯ ವಹಿವಾಟು ಮತ್ತು ಪ್ರಯಾಣಿಕರ ಆಗಮನ- ನಿರ್ಗಮನಗಳು ಬಿರುಸಿನಿಂದ ಕೂಡಿರುತ್ತವೆ.
ಒಂದು ತುದಿಯಿಂದ ಇನ್ನೊಂದು ತುದಿಗೆ ಐದು ನಿಲುಗಡೆಗಳು ಇರುವ ಪ್ರೀಮಿಯಮ್ ರೈಲುಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಸಚಿವರು ಉತ್ಸುಕರಾಗಬೇಕು. ಇದಕ್ಕೆ ಪ್ರೀಮಿಯಮ್ ಹಾಲಿಡೆ ಮತ್ತು ಹಬ್ಬಗಳ ವಿಶೇಷ ಸೇವೆಯೂ ಜತೆಯಾಗಬೇಕು. ಏಕೆಂದರೆ ಏಕಮುಖ ಪ್ರೀಮಿಯಮ್ ಟ್ರೇನ್ ಪ್ರಯಾಣದಿಂದ ಸುಮಾರು 43 ಶೇ.ದಷ್ಟು ಹೆಚ್ಚುವರಿ ಲಾಭವಾಗುತ್ತದೆ. ಜಾಗತಿಕ ದರ್ಜೆಯ ಬುಲೆಟ್ ಟ್ರೇನ್, ಸೆಮಿ ಹೈ ಸ್ಪೀಡ್ ಟ್ರೇನ್ ಇತ್ಯಾದಿಗಳ ಸುಖವನ್ನು ಭಾರತೀಯ ಪ್ರಯಾಣಿಕರಿಗೂ ಒದಗಿಸುವತ್ತ ಕ್ರಮಗಳು ಪ್ರಕಟವಾಗಬೇಕಿದೆಯಲ್ಲದೇ 'ಹಸಿರು ರೈಲು'ಗಳ ಪರಿಕಲ್ಪನೆಯೂ ಬಲಗೊಳ್ಳಬೇಕು. ಹಚ್ಚ ಹಸಿರಿನ ಕಾಡಹಾದಿಯಲ್ಲಿ ಸಂಚರಿಸುವ ರೈಲುಗಳಿಗೆ ಲೋ ಎಮಿಷನ್ ಡಿಸೈಲ್ ಎಂಜಿನ್ಗಳು ಅವಶ್ಯ. ಹಳೆಯ ಬೋಗಿಗಳನ್ನು ಹೊಗೆಪತ್ತೆ ಉಪಕರಣ, ಎಚ್ಚರಿಕೆ ಮೊಳಗಿಸುವ ಸಾಧನಗಳೇ ಮೊದಲಾದ ಉನ್ನತ ತಂತ್ರಜ್ಞಾನದ ಸುರಕ್ಷತಾ ಫೀಚರ್ಗಳಿರುವ ಆಧುನಿಕ ಬೋಗಿಗಳೊಂದಿಗೆ ಬದಲಾಯಿಸಬೇಕು. ರೈಲಿನಲ್ಲಿ ಒದಗಿಸುವ ಆಹಾರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕಿರುವುದು, ಪ್ರಯಾಣಿಕರಿಗೆ ಹಿತಾನುಭವ ಒದಗಿಸುವ ನಿಟ್ಟಿನಲ್ಲಿ ಸೌಕರ್ಯಗಳ ಪೂರೈಕೆ ಕಡೆ ಗಮನ ವಹಿಸುವುದೂ ಮುಖ್ಯ. ಜೈವಿಕ ಸಂಸ್ಕರಣೆಯ ಶೌಚಾಲಯಗಳು ಹಾಗೂ ಸೌರ-ಪವನ ಶಕ್ತಿಗಳನ್ನು ವ್ಯವಸ್ಥೆಯಲ್ಲಿ ತರುವ ಬಗ್ಗೆ ಆಲೋಚನೆಗಳನ್ನು ತೆರೆದಿಡುವ ಕೆಲಸ ಇನ್ನಾದರೂ ಆಗಬೇಕಿದೆ. ರೇಲ್ವೆ ವೆಬ್ಸೈಟ್ನ ಸರ್ವರ್ ಸಾಮರ್ಥ್ಯ ವೃದ್ಧಿಗೊಳ್ಳಲಿ. ಪಿಎನ್ಆರ್ ಸ್ಟೇಟಸ್ ಬದಲಾದಾಗ ಎಸ್ಎಮ್ಎಸ್ ಅಲರ್ಟ್ ಬರುವುದು, ಅಪಘಾತಗಳ ತಡೆಗೆ ಸಂಘರ್ಷದ ಜಾಡು ತಿಳಿಸುವ ಸಾಧನಗಳ ಅಳವಡಿಕೆ ಇವೆಲ್ಲವೂ ಆಗಬೇಕಿದೆ.
ಸ್ವಚ್ಛ ಸ್ಟೇಷನ್ ಎಂಬ ಅಭಿಯಾನವೊಂದು ರಾಷ್ಟ್ರಾದ್ಯಂತ ರೂಪುಗೊಳ್ಳಬೇಕು. ರೇಲ್ವೆ ನಿಲ್ದಾಣಗಳ ಪಟರಿಗಳೆಂದರೆ ಮಾನವನ ಮಲಮೂತ್ರಗಳ ನಿಲುಗಡೆ ಸ್ಥಾನ ಎಂಬಂತಾಗಿ ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ಇದೆ. ರೇಲ್ವೆ ಸ್ಟೇಷನ್ಗಳನ್ನು ಶುದ್ಧವಾಗಿಡುವ ಹೊಣೆಯನ್ನು ಆಯಾ ಪ್ರದೇಶದ ಅಧಿಕಾರಿಗಳಿಗೆ ಹೊರೆಸಿ ಅವರನ್ನು ಉತ್ತರದಾಯಿಯನ್ನಾಗಿ ಮಾಡಬೇಕು.
ತಮ್ಮವರೇ ಆದ ಸದಾನಂದ ಗೌಡರು ರೇಲ್ವೆ ಸಚಿವರಾಗಿದ್ದಾರೆ ಎಂಬ ಸಂಭ್ರಮದಲ್ಲಿ ಕನ್ನಡಿಗರಿದ್ದಾರೆ. ನಿರೀಕ್ಷೆಗಳ ಎತ್ತರ ದೊಡ್ಡದು. ಅದರಲ್ಲೂ ಕರಾವಳಿಯ ಜನ ಬಹಳ ಕಾಲದಿಂದ ನೆನೆಗುದಿಗೆ ಬಿದ್ದಿರುವ ರೇಲ್ವೇ ಯೋಜನೆಗಳು ಮರು ಆರಂಭಗೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಮಧ್ಯಾಂತರ ರೇಲ್ವೆ ಬಜೆಟ್ನಲ್ಲಿ ಆಗಿನ ರೇಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕಕ್ಕೆ ಹಲವು ಯೋಜನೆಗಳು ಮತ್ತು ಕೆಲವು ರೈಲುಗಳನ್ನು ಘೋಷಿಸಿದ್ದರು. ಸದಾನಂದಗೌಡರು ಇನ್ನಷ್ಟು ಯೋಜನೆ ಮತ್ತು ರೈಲುಗಳನ್ನು ರಾಜ್ಯಕ್ಕೆ ಒದಗಿಸಲಿ ಎಂಬುದು ನಮ್ಮೆಲ್ಲರ ಅಪೇಕ್ಷೆ. ರಾಜ್ಯದೊಂದಿಗೆ ವೆಚ್ಚ ಹಂಚಿಕೆ ಮಾದರಿಯಲ್ಲಿ ಇಂಟರ್ಸಿಟಿ ಮತ್ತು ಇಂಟರ್ಸ್ಟೇಟ್ ರೈಲುಗಳನ್ನು ಪ್ರಾರಂಭಿಸಬೇಕಿದೆ. ಕರ್ನಾಟಕ ಸರ್ಕಾರವು ಬಿನ್ನಿಮಿಲ್ ಭೂಮಾಲಿಕರೊಂದಿಗೆ ಸಂಧಾನ ನಡೆಸಿ 28 ಎಕರೆ ಭೂಸ್ವಾಧೀನಕ್ಕೆ ಬೇಕಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕು. ಸಿರಸಿ ಫ್ಲೈ ಒವರ್ ಬಳಿಯ ಎಲ್ಆ್ಯಂಡ್ಟಿ ನಿರ್ಮಿತಿಗೆ ಸಂಬಂಧಿಸಿದ ತೊಡಕನ್ನೂ ನಿವಾರಿಸಿಕೊಳ್ಳಬೇಕಿದೆ. ಬೆಂಗಳೂರು ನಗರ ರೇಲ್ವೆ ಸ್ಟೇಷನ್ ಅನ್ನು ವಿಶ್ವದರ್ಜೆಯ ನಿಲ್ದಾಣವಾಗಿ ರೂಪಿಸಬೇಕಿರುವುದು ಅಗತ್ಯ.
ಕೆಲವು ಆಯ್ದ ರೇಲ್ವೆ ಸ್ಟೇಷನ್ಗಳಲ್ಲಿ ರೇಲ್ವೆ ಪ್ರಯಾಣಿಕರಿಗೆ ಉಚಿತ ವೈಫೈ ಒದಗಿಸುವ ಹೊಸ ಪ್ರಯೋಗದ ಬಗ್ಗೆ ಯೋಚನೆ ಮಾಡಬಹುದು. ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಗುಲ್ಬರ್ಗ, ಮುಂಬೈ, ಪುಣೆ, ದೆಹಲಿ, ವಾರಾಣಸಿ, ಚೆನ್ನೈ, ಭೋಪಾಲ್, ಜೈಪುರ, ಚಂಡೀಗಢ, ತಿರುವನಂತಪುರ, ಇಂದೋರ್, ಅಹಮದಾಬಾದ್ ಇತ್ಯಾದಿಗಳ 50 ನಿಲ್ದಾಣಗಳಲ್ಲಿ ಪ್ರಥಮ ಹಂತದಲ್ಲಿ ಇದನ್ನು ಪರಿಚಯಿಸಿ, ನಂತರ ಎರಡನೇ ಹಂತದ ಬಗ್ಗೆ ಯೋಚಿಸಬಹುದು.
ಜಂಟಿ ಸಹಭಾಗಿತ್ವ ಹಾಗೂ ವೆಚ್ಚ ಹಂಚಿಕೆ ಮಾದರಿಯನ್ನು ಮೊದಲಿಗೆ ಅಪ್ಪಿಕೊಂಡ ರಾಜ್ಯ ಕರ್ನಾಟಕ. ಕೆಲವು ಯೋಜನೆಗಳಿಗೆ ಉಚಿತ ಭೂಮಿಯನ್ನೂ ಕೊಟ್ಟಿದೆ. ಸದ್ಯಕ್ಕೆ 21 ಸಾವಿರ ಕೋಟಿ ರುಪಾಯಿಗಳ 24 ಯೋಜನೆಗಳು ರಾಜ್ಯದಲ್ಲಿವೆ. ಕೆಲ ಯೋಜನೆಗಳು ಕೆಲ ಹಂತ ಪೂರೈಸಿದ್ದರೆ ಇನ್ನು ಕೆಲವು ಭೂಸ್ವಾಧೀನ ಪ್ರಕ್ರಿಯೆಯಲ್ಲಿವೆ.
ಬೆಂಗಳೂರು ನಗರ ರೇಲ್ವೆ ಮತ್ತು ಯಶವಂತಪುರ ರೇಲ್ವೆ ಟರ್ಮಿನಲ್ಗಳಲ್ಲಿ ಜನಸಂದಣಿ ಹೆಚ್ಚಾಗಿರುವುದರಿಂದ ಇನ್ನೊಂದು ಟರ್ಮಿನಲ್ನ ಅವಶ್ಯ ಇದೆ. ಬಯಪ್ಪನಹಳ್ಳಿ ರೇಲ್ವೆ ಬಳಿ 80 ಎಕರೆ ಭೂಮಿ ಇದ್ದು, ಹತ್ತಿರದ ಅಂತರ್ರಾಜ್ಯ ಬಸ್ ಟರ್ಮಿನಸ್ ಹಾಗೂ ಮೆಟ್ರೋ ಟ್ರೇನ್ ಸ್ಟೇಷನ್ಗಳಿಗೆ ಇದು ಹತ್ತಿರವಾಗಿದೆ. ಇಲ್ಲಿ ಮೂರನೇ ಟರ್ಮಿನಲ್ ನಿರ್ಮಿಸಬಹುದಾಗಿದೆ.   ಈಗಿನ ಪಾಲ್ಘಾಟ್ ರೇಲ್ವೆ ವಿಭಾಗದಿಂದ ತಮಗೆ ಮಲತಾಯಿ ಧೋರಣೆ ವ್ಯಕ್ತವಾಗುತ್ತಿದ್ದು ಮಂಗಳೂರಿಗೆ ಪ್ರತ್ಯೇಕ ವಿಭಾಗ ಬೇಕು ಎಂಬುದು ಅಲ್ಲಿನ ಜನರ ಬಹುಕಾಲದ ಬೇಡಿಕೆ. ರೈಲು ಕಾರ್ಯಾಚರಣೆ ಹಾಗೂ ಆಡಳಿತಾತ್ಮಕ ಕಾರಣಗಳಿಂದ ಮಂಗಳೂರು ವಿಭಾಗ ಪ್ರಾರಂಭಿಸುವುದು ಸದ್ಯಕ್ಕೆ ಸಾಧ್ಯವಿಲ್ಲ ಎಂದಾದರೆ ಕೆಲವು ಸೆಕ್ಷನ್ಗಳನ್ನು ಮೈಸೂರು ವಿಭಾಗಕ್ಕಾದರೂ ನೀಡಬಹುದು. ಮಂಗಳೂರು ಜಂಕ್ಶನ್ (ಕಂಕನಾಡಿ)ಯಿಂದ ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಶನ್ನಿಂದ ಪಣಂಬೂರು ಮತ್ತು ಮಂಗಳೂರು ಜಂಕ್ಷನ್ನಿಂದ ತೋಕೂರು ವ್ಯಾಪ್ತಿಗಳನ್ನು ಮೈಸೂರಿನ ವಿಭಾಗಕ್ಕೆ ಸೇರಿಸಬಹುದಾಗಿದೆ.
ಈಗ ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಬಹಳಷ್ಟು ಯೋಜನೆಗಳು ಹಣಕಾಸಿನ ಅಭಾವ ಹಾಗೂ ಶಿಸ್ತುಬದ್ಧವಲ್ಲದ ಯೋಜನೆಗಳ ಮೂಲಕ ನಿಧಾನಗತಿಯಲ್ಲಿವೆ. ಭೂಸ್ವಾಧೀನ ನಿಧಾನವಾಗುತ್ತಿರುವುದು, ಯೋಜನೆಗಳ ಸಮಾಪ್ತಿಗೆ ಸಮಯಮಿತಿ ಇಲ್ಲದಿರುವಿಕೆ ಇವೆಲ್ಲವೂ ವೆಚ್ಚವನ್ನು ಹೆಚ್ಚು ಮಾಡುತ್ತಿವೆ. ಸಮಯಮಿತಿಯಲ್ಲಿ ಯೋಜನೆಗಳು ಮುಗಿದು ಪ್ರಯಾಣಿಕರು ಮತ್ತು ಸರಕು ಸಾಗಣೆಗೆ ಮುಕ್ತವಾಗಿದ್ದರೆ ನಾವು ಕೋಟ್ಯಂತರ ರುಪಾಯಿಗಳನ್ನು ಉಳಿಸಬಹುದಿತ್ತಲ್ಲದೇ ಆದಾಯವನ್ನೂ ಗಳಿಸಬಹುದಿತ್ತು.


-ಪ್ರಕಾಶ್ ಮಂಡೋತ್
ವಲಯ ರೇಲ್ವೆ ಪ್ರಯಾಣಿಕರ ಸಮಿತಿ ಮಾಜಿ ಸದಸ್ಯ
mandoth46@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement