ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮಹಾನಗರದ ಜಾತ್ರೆಯಲ್ಲಿ ಮಾನವೀಯತೆ ಹೋಯಿತೆಲ್ಲಿ?

Mainashree
Updated On : 17 Jul 2014, 9:36 am

ದುಡ್ಡು, ದುಡ್ಡು, ದುಡ್ಡು.... ಎಷ್ಟರ ಮಟ್ಟಿಗೆ ಎಂದರೆ ಮುಂದೊಂದು ದಿನ ಹಣವೆಂಬುದು ತನ್ನ ಮೌಲ್ಯವನ್ನು ಕಳೆದುಕೊಂಡು ಶೂನ್ಯವಾಗಬಹುದೇನೋ ಎಂಬ ಭಯ ಶುರುವಾಗಿದೆ. ದುಡ್ಡಿಗಾಗಿ ನಾವು ನಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದೇ ಈ ಅನುಮಾನಕ್ಕೆ ಕಾರಣ. ಕಸದ ಬಗ್ಗೆ ಪ್ರತಿಕ್ರಿಯಿಸುವಾಗ ನಿರ್ದೇಶಕ ಯೋಗರಾಜ್ ಭಟ್ಟರು ಮುಂದೊಂದು ದಿನ ನಾವು ಸ್ನಾನ ಇಲ್ಲದೇ, ಬಟ್ಟೆಯಿಲ್ಲದೇ, ಕಸದ ರಾಶಿಯಲ್ಲಿ ಬದುಕುವ ಅನಾಗರಿಕರಾಗಬಹುದು. ಕಾಲಚಕ್ರ ತಿರುಗಬಹುದು ಎಂದಿದ್ದರು. ಅವರ ಮಾತು ನಿಜ. ಹಾಗಾದರೆ ಜಗತ್ತು ಚೆನ್ನಾಗಿರಬಹುದೇನೊ ಎನ್ನಿಸಲು ಶುರುವಾಗಿದೆ.
ಮೊನ್ನೆ ಒಂದು ಪುಟ್ಟ ಅಪಘಾತ. ಗಂಡ-ಹೆಂಡತಿ-ಮಗು ರಾತ್ರಿ ಯಾವುದೋ ಮದುವೆ ರಿಸಪ್ಷನ್ ಮುಗಿಸಿಕೊಂಡು ಬೈಕ್‌ನಲ್ಲಿ ಬರುತ್ತಿದ್ದರು. ಲಾರಿಯ ತುದಿ ಬೈಕ್‌ಗೆ ತಗುಲಿ ಬೈಕ್ ಬಿದ್ದಿದೆ. ಬೈಕ್ ಓಡಿಸುತ್ತಿದ್ದ ಹೆಂಡತಿ ಕೆಳಕ್ಕೆ ಬಿದ್ದಿದ್ದಾಳೆ. ಗಂಡ-ಮಗುವಿಗೆ ಅದೃಷ್ಟವಶಾತ್ ಏನೂ ಆಗಿಲ್ಲ. ಆದರೆ ಹೆಂಡತಿ ತಲೆಗೆ ಪೆಟ್ಟಾಗಿದೆ. ಎಲ್ಲ ನಿಂತುಕೊಂಡು ಅಪಘಾತ ನೋಡಿದವರೇ ಹೊರತು ಯಾರೂ ಅವರ ಸಹಾಯಕ್ಕೆ ಬರಲಿಲ್ಲ. ಕೊನೆಗೆ ಗಂಡ ಇಬ್ಬರು ಅಪರಿಚಿತ ಗಂಡಸರನ್ನು ಸ್ಥಳದಲ್ಲಿ ಬಿಟ್ಟು ಮಗುವನ್ನು ಎದೆಗವಚಿಕೊಂಡು ಸಮೀಪದಲ್ಲೇ ಇರುವ ವೈದ್ಯರನ್ನು ಕರೆದುಕೊಂಡು ಬರಲು ಹೋಗಿದ್ದಾರೆ. ಆತ ಹೋಗಿ ವಾಪಾಸ್ ಬರುವುದರೊಳಗೆ ಆ ಇಬ್ಬರು ಪುಣ್ಯಾತ್ಮರು ಪ್ರಾಣ ಹೋಗುತ್ತಿರುವ ಹೆಣ್ಣಿನ ಮಾಂಗಲ್ಯ ಸರದಿಂದ ಹಿಡಿದು ಎಲ್ಲವನ್ನೂ ದೋಚಿಕೊಂಡು ಪರಾರಿಯಾಗಿದ್ದಾರೆ. ಜೀವನ್ಮರಣ ಹೋರಾಟದಲ್ಲಿ ಹೆಣ್ಣು ಮಗಳು ಸತ್ತಿದ್ದಾಳೆ. ಇದು ಬೆಂಗಳೂರಿನಲ್ಲಿ ತೀರಾ ಇತ್ತೀಚೆಗೆ ನಡೆದ ನೈಜ ಘಟನೆ.
ಎಲ್ಲ ಮುಗಿಯಿತು. ಗಂಡ ತನ್ನ ಹೆಂಡತಿಯನ್ನು ಕಳೆದುಕೊಂಡು ದುಃಖ ಮಡುಗಟ್ಟಿದ ಮೇಲೆ ಬೈಕ್ ತರಲು ಪೊಲೀಸ್ ಸ್ಟೇಷನ್‌ಗೆ ಹೋಗಿದ್ದಾನೆ. ಬೈಕ್‌ನಲ್ಲಿ ಆ ಹೆಣ್ಣುಮಗಳ ಪರ್ಸ್ ಮತ್ತು ಮೊಬೈಲ್ ಜೊತೆಗೆ 3000 ಸಾವಿರ ರು. ನಗದು ಹಣವಿತ್ತಂತೆ. ಮನೆಗೆ ಬಂದು ನೋಡಿದರೆ ಎರಡೂ ಮಾಯ! ಪೊಲೀಸರನ್ನು ಕೇಳಿದರೆ ವಿಷಯವೇ ಗೊತ್ತಿಲ್ಲ ಎನ್ನುತ್ತಿದ್ದಾರೆ. ಸಾವಿನ ಮನೆಯ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುವುದು ಎಂದರೆ ಇದೆ ಇರಬೇಕು? ಇದು ತೀರಾ ನನ್ನ ಪರಿಚಿತರ ಮನೆಯಲ್ಲಿ ನಡೆದ ಘಟನೆ. ಆದರೆ ಬೆಂಗಳೂರಿನಲ್ಲಿ ದಿನಕ್ಕೆ ಇಂಥ ಹತ್ತಾರು ಘಟನೆಗಳು ನಡೆಯುತ್ತಿರುತ್ತವೆ. ಬಸ್ಸು, ಲಾರಿ ತಲೆ ಮೇಲೆ ಹತ್ತಿಹೋದರೂ ಎಷ್ಟೋ ಸಲ ನೋಡಲು ಯಾರೂ ಇರುವುದಿಲ್ಲ. ಅಯ್ಯೊ ನಮಗ್ಯಾಕೆ ಆ ಸಾಹವಾಸ, ಸುಮ್ಮನೆ ರಿಸ್ಕ್, ಬಾಡಿ ಮುಟ್ಟಿದ್ರೆ ಕೇಸು, ಅಲೆದಾಟ ಎಂದು ಎಷ್ಟೋ ಜನ ನಿಂತಲ್ಲೇ ಇಣುಕಿ ನೋಡಿಕೊಂಡು ಹೋಗುತ್ತಾರೆ. ಅನಾಥವಾಗಿ ಚೀರಾಡಿದರೂ ಸಾಯುವ ಹೊತ್ತಿನಲ್ಲಿ ನೀರು ಕೊಡುವವರೂ ಗತಿಯಿಲ್ಲ. ಇದು ಈ ಮಹಾನಗರಿಯ ಕಥೆ-ವ್ಯಥೆ ಎರಡೂ ಹೌದು.
ಇನ್ನು ಕಳ್ಳರಿಗೆ ಬಸ್ ಪಲ್ಟಿ ಹೊಡೆದರೆ, ಅಪಘಾತವಾದರೆ ಸುಗ್ಗಿ! ಸ್ವಲ್ಪ ತಿಂಗಳ ಹಿಂದೆ ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಇಂಥದ್ದೆ ಘಟನೆ ನಡೆದು ಅದರಲ್ಲಿ ಪೊಲೀಸ್ ಪೇದೆಗಳೇ ಆಭರಣ-ಹಣ ಲೂಟಿ ಮಾಡಿ ಸಿಕ್ಕಿಬಿದ್ದದ್ದು ದೊಡ್ಡ ಸುದಿಯಾಗಿತ್ತು. ಅಂಥ ನೂರಾರು ಪ್ರಕರಣಗಳಲ್ಲಿ ಒಂದೆರಡಷ್ಟೇ ಸುದ್ದಿಯಾಗುತ್ತನೆ ಎನ್ನುವುದು ಸತ್ಯ. ಇಲ್ಲಿ ಆಘಾತಕಾರಿ ಅಂಶ ಎಂದರೆ ವ್ಯಕ್ತಿ ಜೀವಕ್ಕಿಂತ ಆತನ ಬಳಿ ಇರುವ ಹಣ, ಆಭರಣದ ಮೌಲ್ಯವೇ ಹೆಚ್ಚಾಗಿ ಕಾಣಿಸುತ್ತಿರುವುದು. ಸಿಕ್ಕಷ್ಟು ಇವತ್ತಿನ ಖರ್ಚಿಗಾಯ್ತು ಎಂಬ ಧೋರಣೆ. ಅವರ ವಿಷಯ ಬಿಡಿ ನಮಗೇನಾಗಿದೆ? ಎದುರಿಗಿರುವ ವ್ಯಕ್ತಿ ಸಾಯುತ್ತಿದ್ದಾನೆ, ನೀರು ಕೊಡಬೇಕು, ಸಂಕಟಪಡುತ್ತಾ ಚೀರುತ್ತಿದ್ದಾನೆ ಎಂಬ ಕನಿಷ್ಠ ಮಾನವೀಯತೆಯನ್ನು ನಾವು ಕಳೆದುಕೊಂಡುಬಿಟ್ಟಿದ್ದೇವೆ. ಎಲ್ಲವನ್ನೂ ಹೀಗೆ ಜನರಲೈಸ್ ಮಾಡಲು ಸಾಧ್ಯವಿಲ್ಲ. ಆದರೆ ಬೆಂಗಳೂರಿನ ಅಪಘಾತದಲ್ಲಿ 10ರಲ್ಲಿ 6 ಪ್ರಕರಣಗಳಲ್ಲಿ ಹೀಗೆ ಆಗುತ್ತಿದೆ!
"ಸಾರ್ ನೋ ಪಾರ್ಕಿಂಗ್ ಏರಿಯಾದಲ್ಲಿ ಕಾರು ನಿಲ್ಲಿಸಿದ್ರೆ ಎತ್ತಾಕೊಂಡು ಹೋಗ್ತಾರೆ. ಕಾರು ವಾಪಾಸ್ ತರುವಾಗ ಒಳಗೆ ಏನು ಇರಲ್ಲ. ಸ್ಪೇಪ್ ಪಾರ್ಟ್ಸ್‌ಗಳನ್ನು ಬಿಚ್ಚಿ ಮಾರಿಬಿಡ್ತಾರೆ ಸಾರ್. ನೋಡಿ ಸಾರ್ ಕಾರನ್ನು. ಇಂಟಿರಿಯರ್‌ಗೆ 60 ಸಾವಿರ ರು ಖರ್ಚುಮಾಡಬೇಕು." ಎಂದು ಪರಿಚಿತರೊಬ್ಬರು ತಮ್ಮ ದುಃಖ ತೋಡಿಕೊಳ್ಳುತ್ತಿದ್ದರು. ಹಾಗಿದ್ದರೆ ಯಾರಿಗೆ ಹೇಳೋಣ ನಮ್ಮ ಸಮಸ್ಯೆ? ಯಾರ ವಿರುದ್ಧ ಹೋರಾಟ ಮಾಡೋಣ? ಯಾರನ್ನು ತಪ್ಪಿತಸ್ಥರನ್ನಾಗಿಸೋಣ? ಮನೆ ಬಾಗಿಲಿನಲ್ಲಿ ನಿಲ್ಲಿಸಿದ ನನ್ನದೇ ಬೈಕ್‌ನ ಪೆಟ್ರೋಲನ್ನು 3 ಸಲ ಕದ್ದರು. ಕೊನೆಗೆ ಜೆಸಿ ರಸ್ತೆಗೆ ಹೋಗಿ ಒಂದು ಲಾಕರ್ ಹಾಕಿಸಿಕೊಂಡು ಬಂದೆ. ಅಂದರೆ ಬೆಂಗಳೂರು 100 ರುಪಾಯಿ ಪೆಟ್ರೋಲ್ ಕದಿಯುವಷ್ಟರ ಮಟ್ಟಿಗೆ ಬದಲಾಗಿದೆ. ಸಾಯುತ್ತಿರುವವರ ಸರ-ಬಳೆ ದೋಚುತ್ತಾರೆ ಎಂದಾದ ಮೇಲೆ ನಿರ್ಜೀವ ವಸ್ತುಗಳನ್ನು ಕದಿಯುವುದರಲ್ಲಿ ಯಾವುದೇ ಅಚ್ಚರಿ ಇಲ್ಲ ಬಿಡಿ. ಇತ್ತೀಚಿನ 2-3 ವರ್ಷಗಳಲ್ಲಿ ಇಂಥ ಪ್ರಕರಣಗಳು ತೀರಾ ಹೆಚ್ಚಾಗಿವೆ. ಬೆಂಗಳೂರು ಬಾನೆತ್ತರಕ್ಕೆ ಬೆಳೆಯುತ್ತಿರುವುದು, ಇಲ್ಲಿನ ಬಾಡಿಗೆ, ಬದುಕು ದುಸ್ತರವಾಗಿರುವುದು ಇದಕ್ಕೆ ಕಾರಣವಾಗಿರಬಹುದು.
ನಿಜ ಬೀದಿಯಲ್ಲಿ ಪಾನಿಪುರಿ ಮಾರುವವನು ಯಾವ ಮೂಲಾಜು ಇಲ್ಲದೇ 300 ರುಪಾಯಿ ಮಾಮೂಲಿಯನ್ನು ಕೊಡಬೇಕಾದವನಿಗೆ ಕೊಡಲೇಬೇಕು. ಇಲ್ಲವಾದರೆ ಮರುದಿನ ಅವನ ಜೀವನೋಪಾಯಕ್ಕೆ ದಾರಿ ಇಲ್ಲ. ಎಲ್ಲಿ ನೋಡಿದರೂ ದುಡ್ಡು, ದುಡ್ಡು.  ಒಂದರ್ಥದಲ್ಲಿ ಅನಾಗರಿಕ, ಅಲೆಮಾರಿ ಬದುಕೇ ಉತ್ತಮ ಎನ್ನಿಸುತ್ತದೆ. ಅಲ್ಲಿ ದುಡ್ಡಿನ ಹಂಗಿಲ್ಲ. ಒಂದು ರೀತಿ ಪಶು-ಪಕ್ಷಿ-ಪ್ರಾಣಿಗಳಂತೆ ನೆಮ್ಮದಿಯ ಜೀವನ. ಅಲ್ಲಿ ಕೊಲೆಯಂತೆ, ಇಲ್ಲಿ ದರೋಡೆಯಂತೆ ಎಂಬುದಿಲ್ಲ. ನಮಗೆ ನಾವೇ ಕಟ್ಟಿಕೊಂಡ ಮರ್ಯಾದೆ ಎಂಬ ಕೋಟೆ ಅಲ್ಲಿ ಇಲ್ಲವಾದರೂ ಪ್ರಾಣ ಸಂಚಕಾರದ ಭಯವಿಲ್ಲ.
ಇತ್ತೀಚಿನ ದಿನಗಳಲ್ಲಿ ಈ ಮಹಾನಗರಿಗಳ ವಿದ್ಯಾಮಾನಗಳನ್ನು ಗಮನಿಸಿದರೆ ಹಾಗನ್ನಿಸಲು ಶುರುವಾಗಿದೆ. ಹಾಗಂತ ಅದ್ಯಾವುದೂ ಸಾಧ್ಯವಿಲ್ಲದ ಮಾತು. ಕೆಳಗಿನ ಮನೆಯಲ್ಲಿ ಯಾರೋ ಸತ್ತಿದ್ದಾರೆ ಎಂಬುದು ಮೇಲಿನ ಮನೆಯವನಿಗೆ ಗೊತ್ತಿಲ್ಲದ ಈ ಮಹಾನಗರಗಳಲ್ಲಿ ವ್ಯಕ್ತಿಯೊಬ್ಬನಿಗೆ ಇನ್ನೊಬ್ಬನ ಜೀವದ ಬೆಲೆ ಗೊತ್ತಾಗುವುದು ತೀರಾ ಅವರಿಗೆ ಆತ್ಮೀಯವಾದವರನ್ನು ಕಳೆದುಕೊಂಡಾಗಲಷ್ಟೇ ಅನ್ನಿಸುತ್ತದೆ. ಇಂದಿನಿಂದಲಾದರೂ ಸಾಯುತ್ತಿರುವವರನ್ನು ತುದಿಯಲ್ಲಿ ನಿಂತು ಚೆಂದ ನೋಡುವ ವ್ಯಕ್ತಿಗಳು ನಾವಾಗುವುದು ಬೇಡ. ಕನಿಷ್ಠ ಪಕ್ಷ ನೀರು ಕೊಟ್ಟು ಪ್ರಾಣ ಉಳಿಸಲಾದರೂ ಪ್ರಯತ್ನಿಸಿಸೋಣ.

= ವಿನಾಯಕ ಕೋಡ್ಸರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement