ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

60 ದಿನಗಳ 'ಮೋದಿ ಸರ್ಕಾರ್‌' ಹಿನ್ನೋಟ

'ಆತ ಬಂದ.. ಆತ ನೋಡ್ದ.. ಆತ ಗೆದ್ದ' ನೆಪೋಲಿಯನ್ ಬೊನಾಪಾರ್ಟೆಯ...

Vishwanath S
Updated On : 19 Jul 2014, 1:49 am

'ಆತ ಬಂದ.. ಆತ ನೋಡ್ದ.. ಆತ ಗೆದ್ದ' ನೆಪೋಲಿಯನ್ ಬೊನಾಪಾರ್ಟೆಯ ಐತಿಹಾಸಿಕ ದಂಡಯಾತ್ರೆಯನ್ನು ಬಣ್ಣಿಸುವ ಈ ನುಡಿಗಟ್ಟನ್ನೇ ಈ ಸಲದ ಲೋಕಸಭಾ ಚುನಾವಣೆಯಲ್ಲಿನ ನರೇಂದ್ರ ಮೋದಿಯ ದಿಗ್ವಿಜಯ ಯಾತ್ರೆಗೂ ಅನ್ವಯಿಸಿದರೆ ಅದು ಉತ್ಪ್ರೇಕ್ಷೆಯಾಗದು. ಆ ಮಹಾಚುನಾವಣೆಯು ಪಕ್ಷಗಳ ನಡುವಿನ ಮತಗಳಿಕೆಯ ಸ್ಪರ್ಧೆಯಾಗುವುದರ ಬದಲು ಭಾರತಕ್ಕೆ ನರೇಂದ್ರ ಮೋದಿ ಬೇಕೆ ಅಥವಾ ಬೇಡವೇ ಎಂಬ ಪ್ರಶ್ನೆ ಕುರಿತ ಜನಮತಗಣನೆಯಾಗಿಬಿಟ್ಟಿತು.
ಮೇಲ್ಜಾತಿ, ಮೇಲ್ವರ್ಗ ಅಥವಾ ಯಾವುದೇ ರಾಜವಂಶದ ಹಿನ್ನೆಲೆಯಲ್ಲದ, ಮಧ್ಯಮ ಗಾತ್ರದ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಒಬ್ಬ ಪ್ರಾದೇಶಿಕ ನಾಯಕ ತನ್ನದೇ ರಾಜ್ಯದ ಆಡಳಿತ ಮಾದರಿ ಮತ್ತು ಅಭಿವೃದ್ಧಿ ಮಾದರಿಯನ್ನು ಮುಂದಿಟ್ಟುಕೊಂಡು ಇಡೀ ದೇಶಾದ್ಯಂತ ಮತಯಾಚನೆ ಮಾಡುವ ಎದೆಗಾರಿಕೆ ಪ್ರದರ್ಶಿಸುತ್ತಾ ಬಂದನಲ್ಲ! ಅದುವೇ ಮೋದಿಯ ಯಶಸ್ಸಿನ ಹೆಗ್ಗುರುತಾಗಿತ್ತು.
ಮೇ 16ರಂದು ಫಲಿತಾಂಶ. ಮೇ 26ರಂದು ಪ್ರಮಾಣವಚನ. ಈ 10 ದಿನಗಳ ಮಧ್ಯಂತರ ಅವಧಿಯಲ್ಲಿಯೇ ಈ ನರೇಂದ್ರ ಮೋದಿ ಎಂಬ ಜನನಾಯಕನದ್ದು ಎಂಥ ಚಮತ್ಕಾರಿಕ ಚಟುವಟಿಕೆ.
ಮೊದಲು ಎನ್‌ಡಿಎ ಸಂಸದೀಯ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ. ಅತ್ತ ನಿರ್ಗಮಿತ ಪ್ರಧಾನಿ ಡಾ. ಮನಮೋಹನ್ ಸಿಂಗ್ ರಾಜೀನಾಮೆ ಸಲ್ಲಿಸುತ್ತಲೇ ಇತ್ತ ಭಾರತ ಸರ್ಕಾರದ ಸುಮಾರು 84 ಪ್ರಮುಖ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ಆಯಾ ಖಾತೆಯ ಸ್ಥಿತಿಗತಿಗಳ ಸಂಕ್ಷಿಪ್ತ ವರದಿ ಸಿದ್ಧಪಡಿಸಲು ತುರ್ತು ಆದೇಶ. ಮತ್ತೊಂದೆಡೆ, ತಮ್ಮ ತವರು ರಾಜ್ಯ ಗುಜರಾತ್‌ನಲ್ಲಿ ತಾನು ತೆರವುಗೊಳಿಸಿದ ಮುಖ್ಯಮಂತ್ರಿ ಹುದ್ದೆ ತುಂಬಲು ಉತ್ತರಾಧಿಕಾರಿಯ ಆಯ್ಕೆಗೋಸ್ಕರ ಗಾಂಧಿನಗರಕ್ಕೆ ತುರ್ತು ರವಾನೆ. ಅಲ್ಲಿ ತಮ್ಮಷ್ಟೇ ದಕ್ಷತೆ ಮತ್ತು ನಿಷ್ಠುರ ಆಡಳಿತಕ್ಕೆ ಹೆಸರಾದ ಮಹಿಳಾ ಸಹೋದ್ಯೋಗಿಯನ್ನೇ ಅತ್ಯಂತ ಸುಲಲಿತವಾಗಿ ಪಟ್ಟಕ್ಕೆ ಕೂರಿಸಿದ ಸಮಾಧಾನ.  
ದೆಹಲಿಗೆ ವಾಪಸ್ಸಾಗುತ್ತಿದ್ದಂತೆಯೇ ಪ್ರಪಂಚದ ಸುಮಾರು 20 ರಾಷ್ಟ್ರಗಳ ವರಿಷ್ಠರ ಜೊತೆ ಖುದ್ದು ಪರಿಚಯಾತ್ಮಕ ಸಂಭಾಷಣೆ. ಅವರ ಪೈಕಿ ಸಾರ್ಕ್ ರಾಷ್ಟ್ರಗಳ ಮುಖ್ಯಸ್ಥರಿಗೆ ತಮ್ಮ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಯಶಸ್ವಿ ಮನವೊಲಿಕೆ. ರಾಷ್ಟ್ರಪತಿಗೆ ಸರ್ಕಾರ ಸ್ಥಾಪನೆಯ ಹಕ್ಕು ಮಂಡನೆ ಮತ್ತು ಪ್ರಧಾನಮಂತ್ರಿ ಹುದ್ದೆಗೆ ನೇಮಕಾತಿ ಆದೇಶ ಪ್ರಕಟಣೆ. ಪ್ರಮಾಣವಚನದ ಆಕರ್ಷಕ ಸಮಾರಂಭ ಮುಗಿದ ಕೇವಲ 24 ತಾಸುಗಳಲ್ಲಿಯೇ ಖಾತೆಗಳ ಹಂಚಿಕೆ.
'ಸುಶಾಸನ್ ಔರ್ ವಿಕಾಸ್‌' ಎಂಬ ಅವಳಿ ಸೂತ್ರಗಳನ್ನೇ ತನ್ನ ಗುಜರಾತ್ ಮಾದರಿಯ ದಿಕ್ಸೂಚಿಗಳನ್ನಾಗಿ ಬಿಂಬಿಸುತ್ತಾ ಸುಮಾರು 400ಕ್ಕೂ ಅಧಿಕ ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಪ್ರಚಾರ ಭಾಷಣ ಮಾಡಿದ ನರೇಂದ್ರ ಮೋದಿ ಅಸಲಿಗೆ ಏನು ಹೇಳಿದರೆಂಬುದನ್ನು ಕೇಳಿಸಿಕೊಳ್ಳುವ ವ್ಯವಧಾನ ಅವರ ಕಟ್ಟಾ ಬೆಂಬಲಿಗರಿಗೂ ಇರಲಿಲ್ಲ. ಅವರ ಕಡುಟೀಕಾಕಾರರಲ್ಲೂ ಕಾಣಿಸಲಿಲ್ಲ. ಬೆಂಬಲಿಗರಿಗೆ ನಮೋ ನಾಮ ಜಪವೇ ಮುಖ್ಯವಾಗಿತ್ತು.  ವಿರೋಧಿಗಳಿಗೆ ಆತ ಒಬ್ಬ ನರಹಂತಕ, ಕೊಲೆಗಡುಕ ಎಂದು ನಿಂದಿಸುವುದೇ ಚುನಾವಣಾ ಪ್ರಣಾಳಿಕೆಯಾಗಿತ್ತು.
ದಾವಣಗೆರೆಯ ರ್ಯಾಲಿಯಲ್ಲಿ ಮೋದಿ ಹೇಳಿದ್ದೇನು ಗೊತ್ತೇ? ಕರ್ನಾಟಕದ ಮ್ಯಾಂಚೆಸ್ಟರ್ ಅಂತ ದೇಶಾದ್ಯಂತ ಪ್ರಸಿದ್ಧವಾಗಿದ್ದ ದಾವಣಗೆರೆಯ ಕಾಟನ್ ಮಿಲ್ಲುಗಳೆಲ್ಲಾ ಬಂದಾಗಿ ದಶಕಗಳೇ ಕಳೆದಿವೆ. ಇದನ್ನು ಕಂಡಾಗ ನಮಗೆಲ್ಲಾ ನಿಜಕ್ಕೂ ನೋವಾಗುತ್ತದೆ. ಇದೇ ಜವಳಿ ಉದ್ಯಮದ ಪುನಶ್ಚೇತನಕ್ಕಾಗಿ ನಾವು ಗುಜರಾತ್‌ನಲ್ಲಿ 5-ಎಫ್‌ಗಳ ಪಂಚತತ್ವ ನೀತಿಯನ್ನು ಜಾರಿಗೊಳಿಸಿದ್ದೇವೆ. ಫಾರಂ-ಫೈಬರ್- ಫ್ಯಾಬ್ರಿಕೇಷನ್ ಮತ್ತು ಫಾರೆನ್ ಎಂಬ ಈ ಮಾದರಿಯಿಂದಾಗಿ ಅಹ್ಮದಾಬಾದ್ ಮತ್ತು ಸೂರತ್‌ನಲ್ಲಿನ ಜವಳಿ ಉದ್ಯಮ ಸಮೃದ್ಧಿಯಿಂದ ನಳನಳಿಸುತ್ತಿದೆ. ಇಲ್ಲೂ ಅಂತಹ ಪ್ರಯತ್ನ ನಡೆಯಬಾರದೇಕೆ?'
ನೇತ್ರಾವತಿ ತಿರುವು ಮತ್ತು ಎತ್ತಿನಹೊಳೆ ಯೋಜನೆಗಳ ವಿವಾದದಲ್ಲಿ ಸಿಲುಕಿದ ಮಂಗಳೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ನರೇಂದ್ರ ಮೋದಿಯ ಮಾತು ಮತ್ತೊಂದು ಮಜಲೇರಿತ್ತು. 'ಅಟಲ್‌ಜಿಯವರು ಪ್ರಧಾನಿಯಾಗಿದ್ದಾಗ ನದಿಗಳ ಜೋಡಣೆಯ ಕನಸು ಕಂಡಿದ್ದರಲ್ಲವೇ? ನಾವು ಗುಜರಾತಿನಲ್ಲಿ ಅಂತಹ ಒಂದು ಸಣ್ಣ ಪ್ರಯೋಗ ಮಾಡಿದ್ದೇವೆ. ಅದರ ಪರಿಣಾಮವಾಗಿ ಇವತ್ತು ಸಾಬರಮತಿ ನದಿಯಲ್ಲಿ ಹರಿಯುತ್ತಿರೋದು ಸಾಬರಮತಿಯ ನೀರಲ್ಲ, ನರ್ಮದಾ ನದಿ ನೀರು. ಇದರಿಂದಾಗಿ ಬತ್ತಿಹೋಗಿದ್ದ ಶೇ.90ರಷ್ಟು ಕೆರೆಗಳಲ್ಲಿ ನೀರು ತುಂಬಿಸಿ ಸಹಸ್ರಾರು ಎಕರೆ ಕೃಷಿ ಜಮೀನಿಗೆ ನೀರುಣಿಸುವುದು ಸಾಧ್ಯವಾಯಿತು. ಸೋಲಾರ್ ಬ್ಯಾಟರಿಗಳ ಬೃಹತ್ ಜಾಲದ ಮೂಲಕ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮತ್ತು ಬಹುತೇಕ ಗ್ರಾಮಗಳಿಗೆ ಪಕ್ಕಾ ಟಾರ್ ರಸ್ತೆ ಸಂಪರ್ಕ ಕಲ್ಪಿಸಿ, ಕೃಷಿ ಕ್ಷೇತ್ರದಲ್ಲಿ ಶೇ. 8.4ರಷ್ಟು ವಾರ್ಷಿಕ ಪ್ರಗತಿಯನ್ನು ಸಾಧಿಸಲಾಯಿತು. ಇವತ್ತು ರಾಷ್ಟ್ರೀಯ ಕೃಷಿ ಪ್ರಗತಿ ವೇಗ ಶೇ.3 ಮಾತ್ರ.
ಗುಲ್ಬರ್ಗಾದ ಸಭೆಯಲ್ಲಿ ಬ್ರಿಟಿಷರ ಆಳ್ವಿಕೆಯ ನಂತರ ಒಮ್ಮೆಯೂ ಜಮೀನುಗಳ ಸಮಗ್ರ ಸರ್ವೇ ಕಾರ್ಯ ನಡೆದಿಲ್ಲದಿರುವುದನ್ನು ಪ್ರಸ್ತಾಪಿಸಿದರು. ಪರಿಣಾಮವಾಗಿ ಬಡ ರೈತರು ಪದೇ ಪದೆ ಒಕ್ಕಲೆಬ್ಬಿಸುವ ಭಯದಲ್ಲಿ ನರಳುವಂತಾದುದನ್ನು ನೆನಪಿಸಿದ ಮೋದಿ ಅದಕ್ಕೂ ತಮ್ಮ ಗುಜರಾತ್ ಮಾದರಿಯ ಪರಿಹಾರವನ್ನು ಸೂಚಿಸಿದರು. ರೈತರ ಕೈಗೇ ಜಿ.ಪಿ.ಎಸ್. ಎಂಬ ಎಲೆಕ್ಟ್ರಾನಿಕ್ ಸಾಧನವನ್ನು ಕೊಟ್ಟು, ಅವರುಗಳೇ ತಮ್ಮ ತಮ್ಮ ಜಮೀನಿನ ಪೋಡಿ ಗುರುತಿಸುವ ಮೂಲಕ ಕಳೆದ ಮೂರು ವರ್ಷಗಳಲ್ಲಿ ಗುಜರಾತಿನ ಎಲ್ಲಾ ಹಿಡುವಳಿದಾರರ ಜಮೀನು ಸರ್ವೇ ದಾಖಲೆಗಳನ್ನು ಪಕ್ಕಾ ಮಾಡಿರುವ ನೈಜ ಕಥೆಯನ್ನು ಹಂಚಿಕೊಂಡರು.
ತಾನು ಆರಿಸಿಕೊಂಡ ಎರಡನೇ ಲೋಕಸಭಾ ಕ್ಷೇತ್ರವಾದ ವಾರಾಣಸಿಯಲ್ಲಿ ಸಹ ಗಂಗೆಯ ಶುದ್ಧೀಕರಣದ ಜೊತೆಗೇ ಅಲ್ಲಿನ ಜಗತ್ ಪ್ರಸಿದ್ಧ ಬನಾರಸ್ ಸೀರೆಗಳನ್ನು ತಯಾರಿಸುವ ಮುಸ್ಲಿಂ ನೇಕಾರ ಬಾಂಧವರ ದಯನೀಯ ಸ್ಥಿತಿಯತ್ತ ಗಮನ ಸೆಳೆದರು. ಸೂರತ್‌ನಲ್ಲಿ ಇದೇ ರೀತಿ ನೇಕಾರಿಕೆ ಮಾಡುವ ಕುಶಲಕರ್ಮಿಗಳು ಇವತ್ತು ಅತ್ಯಂತ ಲಾಭದಾಯಕ ಉದ್ಯಮಿಗಳಾಗಿರುವುದನ್ನು ಉದಾಹರಿಸಿ ಬನಾರಸ್ ಬಂಧುಗಳಿಗೂ ಪುನಶ್ಚೇತನದ ಖಚಿತ ಆಶ್ವಾಸನೆಯನ್ನಿತ್ತರು ಮೋದಿ.
ಅವರ ಬಹುತೇಕ ಪ್ರಚಾರ ಭಾಷಣಗಳ ವೈಖರಿ ಇದೇ ರೀತಿಯಿತ್ತು. ಅಂದರೆ, ಸ್ಥಳೀಯತೆಯ ಮೂಲಕವೇ ರಾಷ್ಟ್ರೀಯತೆ ಎಂಬ ಅನಿಸಿಕೆ ಪ್ರಧಾನವಾಗಿತ್ತು. ನರೇಂದ್ರ ಮೋದಿಯ ಮಾತಿನ ಲಹರಿ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿದ್ದ ಭಾಜಪದ ನೇತಾರರುಗಳಿಗೇ ಅಪರಿಚಿತವಾಗಿತ್ತು.
ಮೋದಿ ವರ್ಸಸ್ ರಾಹುಲ್ ಗಾಂಧಿ ಎಂಬ ಸಂಘರ್ಷ ಕೋಮುವಾದ ಮತ್ತು ಸೆಕ್ಯುಲರ್ ವಾದದ ನಡುವಿನ ಭಯಂಕರ ಸೆಣಸಾಟವಾಗುವ ಬದಲು ಬರಬರುತ್ತ ಪ್ರಜಾಪ್ರಭುತ್ವ ಮತ್ತು ರಾಜಪ್ರಭುತ್ವದ ನಡುವಿನ ಮುಖಾಮುಖಿ ಸಮರವಾಗಿಬಿಟ್ಟಿತು. ರಾಹುಲ್ ಗಾಂಧಿ ಕಳೆದ ಹತ್ತು ವರ್ಷಗಳ ಕಾಲ ಆಳುವ ಮೈತ್ರಿಕೂಟದ ಸಂಸದನಾಗಿದ್ದೂ, ಒಬ್ಬ ಮೇಧಾವಿ ಪ್ರಧಾನಮಂತ್ರಿಯ ಸಂಪುಟದಲ್ಲಿ ಮಂತ್ರಿಯಾಗಿ ಕೆಲಸ ಮಾಡುವ ವಿನಯವನ್ನೂ ಪ್ರದರ್ಶಿಸಿದವರಲ್ಲ. ಇಂದಿರಾಗಾಂಧಿಯ ವಂಶದ ಕುಡಿಯಾದ ತಾನೇನಿದ್ದರೂ ಭಾರತದ ಪ್ರಧಾನಮಂತ್ರಿ ಹುದ್ದೆಗಾಗಿಯೆ ಧರೆಗಿಳಿದ ಮಹಾನ್ ಅವಧೂತನೆಂಬ ಅಹಂಕಾರ ಮೆರೆಯುತ್ತಾ ಬಂದರು.
ನಮ್ಮ ಪ್ರಗತಿಪರ ಚಿಂತಕರು ಮತ್ತು ಸೆಕ್ಯೂಲರಿಸಮ್ಮಿನ ಪ್ರತಿಪಾದಕರು ಗಮನಿಸದೇ ಹೋದ ಪ್ರಮುಖ ಸಂಗತಿಯೆಂದರೆ ಈ ನರೇಂದ್ರ ಮೋದಿ ಆರೆಸ್ಸೆಸ್ ಶಾಖಾದಿಂದ ನೇರವಾಗಿ ಪ್ರಧಾನಮಂತ್ರಿ ಹುದ್ದೆಗೆ ಧಾವಿಸಿ ಬಂದವರಲ್ಲ. ಆತ 2001ರಿಂದ ಸತತವಾಗಿ 13 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿ ಎಂಬ ಸಾರ್ವಜನಿಕ ಹುದ್ದೆಯಲ್ಲಿದ್ದು, ತನ್ನ ಮೂಲ ಸೈದ್ಧಾಂತಿಕ ನೆಲೆಯಿಂದ ಬಹುದೂರ ಸಾಗಿ ಬಂದಿದ್ದರು. ಹೀಗೆ ಗಳಿಸಿದ ಹೊಸ ದೃಷ್ಟಿಕೋನ ಹಾಗೂ ತನ್ನ ಪ್ರತಿಭೆ, ಸಾಮರ್ಥ್ಯ ಹಾಗೂ ಸಾಧನೆಯ ಬಲದಿಂದಲೇ ಭಾರತದ ಮತದಾರರನ್ನು ಒಲಿಸಿಕೊಳ್ಳುವುದು ಸಾಧ್ಯವಾಯಿತು.
ಒಕ್ಕೂಟ ವ್ಯವಸ್ಥೆಯಬಗ್ಗೆ ನರೇಂದ್ರ ಮೋದಿಯವರು ಈವರೆಗೆ ತೋರಿರುವ ನಿಲವುಗಳು ಈ ಕುರಿತ ಬುದ್ಧಿಜೀವಿಗಳ ಪ್ರತಿಪಾದನೆಗಳಿಗಂತ ದೃಢ ಹಾಗೂ ಕಾಳಜಿ ಪೂರ್ಣವಾಗಿರುವುದರಿಂದ ಅಲ್ಲೂ ಎದುರಾಳಿಗಳು ನಿರಾಯುಧರಾಗಿದ್ದಾರೆ. ಅಲ್ಲದೇ ಮೋದಿ ಬಲಪಡಿಸಲು ಇಚ್ಛಿಸುತ್ತಿರುವ ಇದೇ ಒಕ್ಕೂಟ ವ್ಯವಸ್ಥೆಯಲ್ಲೇ ಮಮತಾ ಬ್ಯಾನರ್ಜಿ, ಜಯಲಲಿತಾ, ನವೀನ್ ಪಟ್ನಾಯಕ್ ಅವರಂಥ ಸಮರ್ಥ ಪ್ರಾದೇಶಿಕ ನಾಯಕರು ಇದ್ದಾರಾದ್ದರಿಂದ ಬಹುಮತದ ಹೊರತಾಗಿಯೂ ಮೋದಿ ಸರ್ವಾಧಿಕಾರಿಯಾಗಲಾರರೆಂಬ ವಿಶ್ವಾಸ ಗಟ್ಟಿಯಾಗಿದೆ.
ಇವತ್ತು ನರೇಂದ್ರ ಮೋದಿ ಮತ್ತು ಸ್ವಲ್ಪಮಟ್ಟಿಗೆ ಆಮ್ ಆದ್ಮಿ ಪಕ್ಷದ ಹಿಂದೆ ಬಹಿರಂಗವಾಗಿ ಗುರುತಿಸಿಕೊಂಡಿರುವ ಲಕ್ಷಾಂತರ ಮಂದಿ ಹೊಸ ತಲೆಮಾರಿನ ವಿದ್ಯಾವಂತ ಯುವಕರೆಲ್ಲ ಡಾ. ಸಿಂಗ್ ಪ್ರಣೀತ ಜಾಗತೀಕರಣದ ಆರ್ಥಿಕ ನೀತಿಯ ಫಲಾನುಭವಿಗಳೇ. ಆದರೆ ಅವರನ್ನು ಅವರದ್ದೇ ಪಕ್ಷದ ಅಧಿನಾಯಕಿ ಮತ್ತು ಆಕೆಯ ಪುತ್ರ ಚುನಾವಣೆಯ ಹೊತ್ತಿಗೆ ಕೆಲಸಕ್ಕೆ ಬಾರದ ಮಂಕುದಿಣ್ಣೆ ಎಂಬಂತೆ ನಿಷ್ಕ್ರಿಯಗೊಳಿಸಿದ್ದರು. ಇದರ ಪರಿಣಾಮವೇ ಕಾಂಗ್ರೆಸ್‌ನ ಡಿಎನ್‌ಎ (ವಂಶಪಾರಂಪರ್ಯ) ರಾಜಕೀಯದ ವಿರುದ್ಧ ಮೋದಿಯ ಎನ್‌ಡಿಎ ರಾಜಕೀಯದ ಪ್ರಚಂಡ ಗೆಲುವು.
ನರೇಂದ್ರ ಮೋದಿ ತನ್ನ ಚುನಾವಣಾ ಗೆಲುವಿನ ನಂತರದ ಕಳೆದ 60 ದಿನಗಳಲ್ಲಿ ಒಮ್ಮೆಯೂ ಎದುರಾಳಿಗಳ ಬಗ್ಗೆ ಒಂದೇ ಒಂದು ಕೊಂಕು ಮಾತನಾಡಿಲ್ಲ. ಬದಲಾಗಿ ಪ್ರತಿಪಕ್ಷಗಳ ಸಹಭಾಗಿತ್ವವಿಲ್ಲದೇ ದೇಶ ನಡೆಸುವ ಭ್ರಮೆ ತಮಗಿಲ್ಲ ಎಂದು ಸಾರಿದ್ದಾರೆ. ಇಂದಿನ ದಿನಮಾನಗಳಲ್ಲಿ ಒಂದು ಸ್ವಾಗತಾರ್ಹವಾದ ರಾಜಕೀಯ ಮನೋಧರ್ಮ ಅಲ್ಲವೇ?


- ರವೀಂದ್ರ ರೇಷ್ಮೆ
ravindrareshme@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement