ಅಭಿವೃದ್ಧಿ ಬಯಸದವರೇ ಸ್ಥಾವರದ ವಿರೋಧಿಗಳು
ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಮತ್ತು ಈ...
ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಮತ್ತು ಈ ಯೋಜನೆ ವಾಸ್ತವಾಂಶಗಳನ್ನು ವಿವರಿಸಿರುವ ಬಿಜಾಪುರ ಲೋಕಸಭಾ ಸದಸ್ಯ ರಮೇಶ್ ಜಿಗಜಿಣಗಿ ಅವರು, ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಯೋಜನೆ ಅನಿವಾರ್ಯ, ಇದು ರೈತರಿಗಾಗಿಯೇ ರೂಪುಗೊಂಡಿದೆ, ಈ ಯೋಜನೆಯಿಂದ ಬಿಜಾಪುರ ಜಿಲ್ಲೆ ಅಭಿವೃದ್ಧಿ ಹೆಬ್ಬಾಗಿಲು ತೆರೆಯಲಿದೆ ಎನ್ನುತ್ತಾರೆ...
ಕೈಗಾರಿಕೆಯಲ್ಲಿ ಹಿಂದೆ ಬಿದ್ದಿರುವ ಬಿಜಾಪುರ ಜಿಲ್ಲೆಗೆ 30,000 ಕೋಟಿ ರುಪಾಯಿಗಳ ಬೃಹತ್ ಯೋಜನೆ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ಮೂಲಕ ಬಂದಿದೆ. 14,000 ಕೋಟಿ ರು. ವೆಚ್ಚವೂ ಆಗಿದೆ. ಈ ಹಂತದಲ್ಲಿ ಪ್ರತಿಭಟನೆ ಏಕೆ?
ಈ ಪ್ರತಿಭಟನೆಯ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳಿವೆ. ಬಿಜಾಪುರ ಜಿಲ್ಲೆಯ ಏಳಿಗೆಯನ್ನು ಸಹಿಸದ ಮತ್ತು ಜಿಲ್ಲೆಯ ರೈತರ, ಜನರ ಅಭಿವೃದ್ಧಿ ಬಯಸದವರು ಈ ಪ್ರತಿಭಟನೆಗೆ ಪ್ರೋತ್ಸಾಹಿಸುತ್ತಿದ್ದಾರೆ.
ಯೋಜನೆ ಆರಂಭದಲ್ಲಿ ಇಲ್ಲದ ಪ್ರತಿಭಟನೆ ಈ ಹಂತದಲ್ಲಿ ಭುಗಿಲೆದ್ದಿದ್ದೇಕೆ?
ಉಷ್ಣ ಸ್ಥಾವರ ಯೋಜನೆ ನಿರೀಕ್ಷೆ ಮೀರಿ ತ್ವರಿತವಾಗಿ ಅನುಷ್ಠಾನವಾಗುತ್ತಿದೆ. ಇದನ್ನು ಸಹಿಸದ ಕಾಣದ ಕೈಗಳು ಪ್ರತಿಭಟನೆ ನಡೆಸುತ್ತಿವೆ.
ಪ್ರತಿಭಟನೆಯಲ್ಲಿ ಸ್ಥಳೀಯರ ಪಾತ್ರ ಇಲ್ಲವೇ?
ಸ್ಥಳೀಯರ ಬೆಂಬಲದಿಂದಲೇ ಈ ಯೋಜನೆ ಅನುಷ್ಠಾನಕ್ಕೆ ಬರುತ್ತಿರುವುದು. ಕೂಡಗಿ ವಿದ್ಯುತ್ ಸ್ಥಾವರ ಯೋಜನೆಯನ್ನು ರೈತರ ಹಿತದೃಷ್ಟಿಯಿಂದ ರೂಪಿಸಲಾಗಿದೆ. ಈಗ ಪ್ರತಿಭಟನೆ ಏನೇ ಆಗಲಿ, ಯೋಜನೆ ಅನುಷ್ಠಾನಗೊಂಡ ನಂತರ ರೈತರ ಬದುಕು ಹಸನಾಗುತ್ತದೆ. ಈ ಯೋಜನೆಯನ್ನು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಹಿನ್ನೆಲೆಯಲ್ಲಿ ಸಮಗ್ರ ದೃಷ್ಟಿಯಿಂದ ನೋಡಬೇಕು.
ಭೂಮಿ ಕಳೆದುಕೊಂಡವರೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರಾ?
ಇಲ್ಲ. ಜಿಲ್ಲೆಯ ರೈತರಿಗೆ ಗೊತ್ತಿದೆ, ತಮಗೆ ಏಳಿಗೆ ತರುವ ಯೋಜನೆ ಇದು ಅಂತ. ಜತೆಗೆ ಅವರ ನಿರೀಕ್ಷೆ ಮೀರಿ ಪರಿಹಾರ ನೀಡಲಾಗಿದೆ. ಪರಿಹಾರ ನೀಡುವಾಗ ಉದಾರ ನೀತಿ ಅನುಸರಿಸಲಾಗಿದೆ. ಉಪಯೋಗಕ್ಕೆ ಬಾರದ ಒಣಭೂಮಿಗೂ ಉತ್ತಮ ಪರಿಹಾರ ನೀಡಲಾಗಿದೆ.
ಕಾಣದ ಕೈಗಳಿವೆ ಎಂದು ಹೇಗೆ ಹೇಳುತ್ತೀರಿ?
ಈ ಯೋಜನೆಯಿಂದ ರೈತರಿಗೆ ಅನುಕೂಲ ಆಗುತ್ತದೆ ಅನ್ನೋದು ನೂರಕ್ಕೆ ನೂರು ಸತ್ಯ. ಕಾಮಗಾರಿ ಪ್ರಾರಂಭ ಆಗುವ ಹಂತದಲ್ಲಿ ಜನರು ಒಕ್ಕೊರಲಿಂದ ಬೇಡ ಅಂದಿದ್ರೆ ಯೋಜನೆ ಬಿಡಬಹುದಿತ್ತು. ಆದರೆ, ಜನರು ಒಪ್ಪಿದ ನಂತರವೇ ಪ್ರಾರಂಭವಾಗಿದೆ. ರೈತರು ಪರಿಹಾರವನ್ನು ಪಡೆದಿದ್ದಾರೆ. ಈಗ ಕಾಮಗಾರಿ ಮುಗಿಯುತ್ತಾ ಬಂದಿದೆ, ಈ ಹಂತದಲ್ಲಿ ಪ್ರತಿಭಟನೆ ನಡೆದರೆ ಕಾಣದ ಕೈಗಳ ಕೆಲಸ ಇದು ಅನ್ನೋದು ಸ್ಪಷ್ಟ ಅಲ್ಲವೇ?
ಬಿಜಾಪುರ ಜಿಲ್ಲೆ ಅಭಿವೃದ್ಧಿ ಹೇಗೆ ಸಾಧ್ಯ?
ಜಿಲ್ಲೆಯಲ್ಲಿ ಎಲ್ಲೆಡೆ ಕಾಲುವೆ ಮುಖಾಂತರ ನೀರಾವರಿ ನೀಡಲು ಸಾಧ್ಯವಿಲ್ಲ. ಆದರೆ ಆಲಮಟ್ಟಿಯಿಂದ ಏತನೀರಾವರಿ ಮೂಲಕ ನೀರು ಒದಗಿಸಲು ಸಾಧ್ಯ. ಗುತ್ತಿ ಬಸವಣ್ಣ, ಮುಳವಾಡ ಸೇರಿದಂತೆ ನಾಲ್ಕೈದು ಏತ ನೀರಾವರಿ ಯೋಜನೆಗಳ ಮೂಲಕ ರೈತರ ಭೂಮಿಗೆ ನೀರು ಕೊಡುವ ಯೋಜನೆಗಳು ಮುಂಬರುವ ದಿನಗಳಲ್ಲಿ ರೂಪುಗೊಳ್ಳಲಿವೆ. ಏತ ನೀರಾವರಿಗೆ ವಿದ್ಯುತ್ ತರುವುದು ಕಷ್ಟದ ಕೆಲಸ. ಈಗಾಗಲೇ ರಾಜ್ಯದಲ್ಲಿ ವಿದ್ಯುತ್ ಕೊರತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ನಮಗೆ ಏತ ನೀರಾವರಿಗೆ ವಿದ್ಯುತ್ ಕೊಡುವುದು ಸಾಧ್ಯವೇ ಇಲ್ಲ. ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಬಂದರೆ, ಏತ ನೀರಾವರಿ ಯೋಜನೆಗೆ ವಿದ್ಯುತ್ ಪಡೆಯಲು ಸಾಧ್ಯವಾಗುತ್ತದೆ. ಈ ಕಾರಣಕ್ಕಾಗಿಯೇ ಜಿಲ್ಲೆಗೆ, ಕೂಡಗಿಗೆ ಉಷ್ಣ ವಿದ್ಯುತ್ ಸ್ಥಾವರ ತರಲಾಗಿದೆ. ಈ ವಾಸ್ತವಾಂಶವನ್ನು ಮರೆಮಾಚಿರುವ ಪಟ್ಟಭದ್ರ ಹಿತಾಸಕ್ತಿಗಳು ಜನರನ್ನು ತಪ್ಪು ಹಾದಿಗೆಳೆದು ಪ್ರತಿಭಟನೆಗೆ ಪ್ರೇರೇಪಿಸುತ್ತಿವೆ.
ಈ ಯೋಜನೆಯಿಂದ ಸುತ್ತಮುತ್ತಲ ಪರಿಸರದ ಮೇಲೆ ಹಾನಿ ತಡೆಯೋದು ಹೇಗೆ?
ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಿಂದ ಪರಿಸರದ ಮೇಲೆ ಯಾವ ಹಾನಿಯೂ ಆಗದು. ಈ ಹಿಂದೆ ವಿಧಾನಸಭಾ ಸದಸ್ಯರಾಗಿದ್ದ ಬೆಳ್ಳುಬ್ಬಿ ಅವರು ರೈತರನ್ನು ರಾಷ್ಟ್ರದ ವಿವಿಧ ಉಷ್ಣ ಸ್ಥಾವರಗಳಿಗೆ ಕರೆದೊಯ್ದು ತೋರಿಸಿಕೊಂಡು ಬಂದಿದ್ದಾರೆ. ಅಲ್ಲಿ ಪರಿಸರದ ಮೇಲೆ ಹಾನಿ ಆಗುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಂಡ ನಂತರವೇ ರೈತರು ಯೋಜನೆ ಜಾರಿಗೆ ಒಪ್ಪಿ ತಮ್ಮ ಭೂಮಿ ನೀಡಿದ್ದಾರೆ.
ಈ ಯೋಜನೆಯಿಂದ ಸ್ಥಳೀಯರಿಗೆ ಉಪಯೋಗವೇನು?
ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಎಂಬ ಸೂಚನೆಯನ್ನು ಎನ್ಟಿಪಿಸಿಗೆ ಒಪ್ಪಿದೆ. ಕೂಡಗಿ ಸುತ್ತಮುತ್ತಲ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಲಿದೆ. ಉತ್ತಮ ರಸ್ತೆ, ಶಾಲೆ, ಶೌಚಾಲಯ ಸೇರಿದಂತೆ ಇಡೀ ಪ್ರದೇಶದ ಅಭಿವೃದ್ಧಿ ಹಂತ ಹಂತವಾಗಿ ಆಗುತ್ತದೆ.
ರೈತ ಸಂಘದ ಉಭಯ ಬಣಗಳು ಪ್ರತ್ಯೇಕ ಪ್ರತಿಭಟನೆಗಳನ್ನು ನಡೆಸಲು ಮುಂದಾಗಿವೆಯಲ್ಲಾ?
ಇದು ಜಿಲ್ಲೆಯ ರೈತರ ಬದುಕಿಗೆ ಬೆಳಕಾಗುವ ಯೋಜನೆ. ರೈತರ ಏಳಿಗೆ ಪರ ಇದ್ದವರು ಈ ಯೋಜನೆ ವಿರೋಧಿಸುವುದಿಲ್ಲ. ವಿರೋಧಿಸುವವರು ರೈತ ವಿರೋಧಿಗಳು, ಅಷ್ಟೆ ಅಲ್ಲ ಅಭಿವೃದ್ಧಿ ವಿರೋಧಿಗಳು. ಅಭಿವೃದ್ಧಿ ಆಗಿಲ್ಲ ಎಂಬ ಕೂಗು ಒಂದು ಕಡೆ. ಜಿಲ್ಲೆಯ ಅಭಿವೃದ್ಧಿಗಾಗಿ ಇಂತಹ ಯೋಜನೆಗಳನ್ನು ತಂದರೆ, ಅದಕ್ಕೆ ಪರಿಸರದ ಹೆಸರಿನಲ್ಲಿ ವಿರೋಧಿಸಲಾಗುತ್ತಿದೆ. ಇಂತಹ ಸಣ್ಣ ಪುಟ್ಟ ವಿರೋಧಗಳಿಂದಾಗಿಯೇ ಜಿಲ್ಲೆ ಕೈಗಾರಿಕಾ ಕ್ಷೇತ್ರದಲ್ಲಿ ಹಿಂದೆ ಬಿದ್ದಿದೆ.
ಪ್ರತಿಭಟನಾನಿರತರ ಮನವೊಲಿಸುತ್ತೀರಾ?
ಜಿಲ್ಲೆಯಲ್ಲಿ ಕೆಲ ನೀರಾವರಿ ಯೋಜನೆ ಬಿಟ್ಟರೆ ಆರು ದಶಕಗಳಿಂದ ಯಾವ ಅಭಿವೃದ್ಧಿ ಆಗಿಲ್ಲ. ಈಗ ಒಂದೇ ಯೋಜನೆ ಮೂಲಕ 30,000 ಕೋಟಿ ಬಂಡವಾಳ ಬಂದಿದೆ. ಈ ಯೋಜನೆ ಮೂಲಕ ಜಿಲ್ಲೆಯ ಅಭಿವೃದ್ಧಿ ಹೆಬ್ಬಾಗಿಲು ತೆರೆಯಲಿದೆ. ಇದು ಆರಂಭ. ಈ ಯೋಜನೆಯ ನಂತರ ಮತ್ತಷ್ಟು ಯೋಜನೆಗಳು ಬಂದು ಜನರಿಗೆ ಉದ್ಯೋಗ ಸಿಗುತ್ತದೆ. ಅಷ್ಟೆ ಅಲ್ಲ ಪೂರಕ ಆರ್ಥಿಕ ಚಟುವಟಿಕೆ ತೀವ್ರಗೊಂಡು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ. ಪ್ರತಿಭಟನಾ ನಿರತರು ಈ ವಾಸ್ತಾವಂಶ ಅರಿಯಬೇಕು. ರೈತರಿಗೆ ನಾನು ಮನವಿ ಮಾಡುತ್ತೇನೆ, ಪ್ರತಿಭಟನೆ ಕೈ ಬಿಡಿ, ಜಿಲ್ಲೆಯ ಅಭಿವೃದ್ಧಿಗೆ ಕೈಜೋಡಿಸಿ. ಇನ್ನು ಎಷ್ಟು ತಲೆಮಾರುಗಳು ಅಭಿವೃದ್ಧಿ ವಂಚಿತವಾಗಬೇಕು?
ಉಷ್ಣ ಸ್ಥಾವರ ಯೋಜನೆ ಕಾಮಗಾರಿ ಸ್ಥಗಿತಗೊಂಡಿದೆಯೇ?
ಇಲ್ಲ. ಪ್ರತಿಭಟನೆಯಿಂದ ಕೊಂಚ ನಿಧಾನವಾಗಿದೆ. ಜನರು ವಾಸ್ತವಾಂಶ ತಿಳಿದು ಪ್ರತಿಭಟನೆ ಕೈಬಿಡುತ್ತಾರೆ ಎಂದು ನಮಗೆ ವಿಶ್ವಾಸ ಇದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಹೋಗಿದ್ದ ಕಾರ್ಮಿಕರು ಹಿಂತಿರುಗುತ್ತಿದ್ದಾರೆ. ಯೋಜನೆ ಸಕಾಲದಲ್ಲಿ ಅನುಷ್ಠಾನವಾಗುತ್ತದೆ. ಈ ಯೋಜನೆಯಿಂದ ಬಿಜಾಪುರ ಜಿಲ್ಲೆಗಷ್ಟೆ ಅಲ್ಲ, ವಿದ್ಯುತ್ ಕ್ಷಾಮ ಎದುರಿಸುತ್ತಿರುವ ಕರ್ನಾಟಕಕ್ಕೂ ಅನುಕೂಲ ಆಗಲಿದೆ. ಈಗಾಗಲೇ ಮೊದಲ ಹಂತದ ಯೋಜನೆಯ ಶೇ.70ರಷ್ಟು ಕಾಮಗಾರಿ ಮುಗಿದಿದೆ. ನಿರೀಕ್ಷೆಯಂತೆ 2016 ಜುಲೈಗೆ ಈ ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆ ಆಗಲಿದೆ. ಮೊದಲ ಹಂತದಲ್ಲಿ 2400 ಮೆಗಾವ್ಯಾಟ್ ಮತ್ತು ಎರಡನೇ ಹಂತದಲ್ಲಿ 1800 ಮೆಗಾವ್ಯಾಟ್ ಸೇರಿ ಒಟ್ಟು 4000 ಮೆಗಾವ್ಯಾಟ್ ವಿದ್ಯುತ್ ಲಭ್ಯ. ಈ ಪೈಕಿ ಶೇ.50ರಷ್ಟು ಕೇಂದ್ರ ಗ್ರಿಡ್ಗೆ ಮತ್ತು ಶೇ.50ರಷ್ಟು ಅಂದರೆ 2000 ಮೆಗಾವ್ಯಾಟ್ ಕರ್ನಾಟಕಕ್ಕೆ ಸಿಗುತ್ತದೆ. ಜಿಲ್ಲೆಯ ಏತ ನೀರಾವರಿ ಯೋಜನೆಗಾಗಿ ಹೆಚ್ಚುವರಿ ವಿದ್ಯುತ್ ನೀಡುವಂತೆ ಎನ್ಟಿಪಿಸಿಗೆ ಕೇಳಬಹುದು. ಹೀಗಾಗಿ ಜಿಲ್ಲೆಯಷ್ಟೆ ಅಲ್ಲ ರಾಜ್ಯಕ್ಕೂ ಈ ಯೋಜನೆಯಿಂದ ಬೆಳಕಾಗುತ್ತದೆ.
-ರೇಣುಕಾಪ್ರಸಾದ್ ಹಾಡ್ಯ, ಕನ್ನಡಪ್ರಭ