ಜವಳಿ ಪಾರ್ಕಿನ ಆರ್ಥಿಕ, ಸಾಮಾಜಿಕ ಪ್ರಯೋಜನವೇನು?
ಕಳೆದ ವಾರ, ಜವಳಿ ಪಾರ್ಕನ್ನು ಸ್ಥಾಪಿಸುವುದಕ್ಕೆ ವೇಗವಾಗಿ ಸರ್ಕಾರ ತೆಗೆದುಕೊಂಡ ತೀರ್ಮಾನದ ಬಗ್ಗೆ....
ಕಳೆದ ವಾರ, ಜವಳಿ ಪಾರ್ಕನ್ನು ಸ್ಥಾಪಿಸುವುದಕ್ಕೆ ವೇಗವಾಗಿ ಸರ್ಕಾರ ತೆಗೆದುಕೊಂಡ ತೀರ್ಮಾನದ ಬಗ್ಗೆ ನಿಮಗೆ ಹೇಳುತ್ತಿದ್ದೆ. ಸಚಿವ ಸಂಪುಟದ ಒಪ್ಪಿಗೆಯನ್ನು ಪಡೆದದ್ದೇ ಈ ಕಥೆ ಕೊನೆಯಲ್ಲ. ಇದು ಕಥೆಯ ಆರಂಭ.
ರಾಜ್ಯದಲ್ಲಿ ಉದ್ಯಮಗಳನ್ನು ಉತ್ತೇಜಿಸಲು ಹಾಗೂ ವೇಗವಾಗಿ ಅವಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಒಂದು ಏಕಗವಾಕ್ಷಿ ವ್ಯವಸ್ಥೆಯನ್ನು ತೆರೆಯಲಾಗಿದೆ. ಆದರೆ ನೈಜವಾಗಿ ಒಬ್ಬ ಉದ್ಯಮಿ/ಸಂಸ್ಥೆ ಹತ್ತರಿಂದ ಹದಿನೈದು ಬೇರೆ ಬೇರೆ ಇಲಾಖೆಗಳನ್ನು ಸಂಪರ್ಕಿಸಿ ಸರ್ಕಾರದ ವಿವಿಧ ಅನುಮೋದನೆಗಳನ್ನು ಪಡೆಯಬೇಕಾಗುತ್ತದೆ. ಉದಾ: ಜಮೀನು ಹಾಗೂ ಅದರ ಸರ್ವೇ ಮತ್ತು ನೋಂದಣಿ, ನೀರು, ವಿದ್ಯುತ್, ತೆರಿಗೆ, ಇತ್ಯಾದಿ ಸೌಲಭ್ಯಗಳು ಹಾಗೂ ಸೇವೆಗಳನ್ನು ಪ್ರತ್ಯೇಕವಾಗಿ ಪಡೆಯಬೇಕಾಗುತ್ತದೆ. ಸಚಿವ ಸಂಪುಟದ ನಿರ್ಣಯದಂತೆ ಜವಳಿ ಪಾರ್ಕ್ಗೆ 50 ಎಕರೆ ಭೂಮಿಯನ್ನು ಕೆ.ಐ.ಎ.ಡಿ.ಬಿ. ಮೂಲಕ ಹಸ್ತಾಂತರ ಮಾಡಬೇಕಾಗಿತ್ತು. ಇದಕ್ಕಾಗಿ ಸರ್ಕಾರದ ನೀತಿ ನಿಯಮಗಳ ಪರಿಪಾಲನೆ ಜೊತೆಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಹಲವಾರು ಸಂಸ್ಥೆಗಳೊಂದಿಗೆ ವ್ಯವಹರಿಸಬೇಕಾಗಿತ್ತು. ಪ್ರತಿಯೊಂದು ಹಂತದಲ್ಲಿ ಮೇಲಾಧಿಕಾರಿಗಳೊಂದಿಗೆ ಮಾತನಾಡದಿದ್ದರೆ ಕೆಲಸ ಆಗುವುದಿಲ್ಲ!
ಭಾರತ ಸರ್ಕಾರದ ಸಮಗ್ರ ಜವಳಿ ಪಾರ್ಕ್ ಯೋಜನೆ ಮತ್ತು ಕರ್ನಾಟಕ ಸರ್ಕಾರದ ಸುವರ್ಣ ವಸ್ತ್ರ ನೀತಿ-2008-2013 ರ ಅಡಿಯಲ್ಲಿ ಬಂಡವಾಳ ಸಹಾಯ ಧನಕ್ಕೆ ಈ ಪಾರ್ಕ್ ಅರ್ಹವಿರುತ್ತದೆ. ರಾಜ್ಯಮಟ್ಟದಲ್ಲಿ ಯೋಜನೆ ಅಂಗೀಕಾರವಾದ ನಂತರ ಕೇಂದ್ರ ಮಟ್ಟದಲ್ಲಿ ಅಂಗೀಕಾರ ದೊರಕಬೇಕಾಗುತ್ತದೆ. ಅಲ್ಲದೇ ಕೇಂದ್ರ ಸರ್ಕಾರದ ಅನುದಾನವನ್ನು ಪಡೆಯಬೇಕಾದರೆ ಆಂಗ್ಲ ಭಾಷೆಯಲ್ಲಿ ಒಂದು ಯೋಜನೆಯನ್ನು ತಯಾರಿಸಬೇಕಾಗುತ್ತದೆ. ಆದರೆ ಗುಲ್ಬರ್ಗ ಎಸ್.ಪಿ.ವಿ. ಗೆ ಇಂಥ ಯೋಜನೆ ತಯಾರಿಸಲು ತಾಂತ್ರಿಕ ಪರಿಣತಿ ಇರಲಿಲ್ಲ. ಐ.ಎಲ್. ಅಂಡ್ ಎಫ್.ಎಸ್. ನವರು ಭಾರತ ಸರ್ಕಾರದ ಹಾಗೂ ಕರ್ನಾಟಕ ಸರ್ಕಾರದ ಯೋಜನಾ ನಿರ್ವಹಣೆ ಸಲಹೆಗಾರರಾಗಿರುವ ಕಾರಣ ಪಾರ್ಕ್ನ ಸದಸ್ಯರ ಅನುಕೂಲಕ್ಕಾಗಿ ಅವರ ನೈಪುಣ್ಯತೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ನನ್ನ ಜೊತೆಯಲ್ಲಿ ತರಬೇತಿ ಪಡೆದ ಒಬ್ಬ ಐ.ಎ.ಎಸ್. ಅಧಿಕಾರಿ ಸ್ವಯಂ ನಿವೃತ್ತಿ ಪಡೆದುಕೊಂಡು ಐ.ಎಲ್.ಎಫ್.ಎಸ್. ಎಂಬ ಸಂಸ್ಥೆಯನ್ನು ಸೇರಿದ್ದರು. ನಮಗೆ ತಕ್ಷಣ ಒಂದು ಯೋಜನೆಯನ್ನು ತಯಾರು ಮಾಡಿಕೊಡುವಂತೆ ಅವರನ್ನು ವಿನಂತಿಸಿಕೊಂಡೆ. ಅಲ್ಲದೆ ಈ ಹಿಂದೆ ನನ್ನ ಪತಿ ರಜನೀಶ್ರವರು ಕೇಂದ್ರ ಸರ್ಕಾರದಲ್ಲಿ ಜವಳಿ ಇಲಾಖೆಯಲ್ಲಿ ಕೆಲಸ ಮಾಡಿದ್ದರು. ಆಗ ನಾವು ತಮಿಳುನಾಡಿನಲ್ಲಿರುವ ತಿರುಪ್ಪೂರಿಗೂ ಮತ್ತು ಹೈದರಾಬಾದಿನಲ್ಲಿರುವ ಪೋಚುಂಪಳ್ಳಿ ಜವಳಿ ಪಾರ್ಕ್ಗೂ ಭೇಟಿ ನೀಡಿದ್ದೆವು. ಹಾಗಾಗಿ ಅವರಿಂದಲೂ ಸಾಕಷ್ಟು ಮಾಹಿತಿ ಪಡೆದು ಯೋಜನೆ ತಯಾರಿಸಲು ಒಪ್ಪಿದ್ದ ಐ.ಎಲ್.ಎಫ್. ಎಸ್. ಸಂಸ್ಥೆಗೆ ಜವಳಿ ಇಲಾಖೆ ಮೂಲಕ ನಿಲವು ನೀಡಿದೆವು. ನಂತರ ಕೇಂದ್ರ ಸರ್ಕಾರದಲ್ಲಿ ಈ ಉದ್ದೇಶಕ್ಕಾಗಿ ನಿಗದಿತ ಆಯವ್ಯಯದಲ್ಲಿ ಕೇವಲ ಕೆಲವೇ ಪಾರ್ಕುಗಳನ್ನು ಅಂಗೀಕಾರ ಮಾಡಲಾಗುತ್ತಿತ್ತು. ಅದೃಷ್ಟವಶಾತ್ ನನ್ನ ಜೊತೆಯಲ್ಲಿಯೇ ತರಬೇತಿ ಪಡೆದ ಐ.ಎ.ಎಸ್. ಅಧಿಕಾರಿ ಕೇಂದ್ರ ಸರ್ಕಾರದಲ್ಲಿ ಈ ಯೋಜನೆಯ ಜವಾಬ್ದಾರಿಯನ್ನು ಜಂಟಿ ಕಾರ್ಯದರ್ಶಿಯಾಗಿ ನಿರ್ವಹಿಸುತ್ತಿದ್ದರು. ಅವರೊಂದಿಗೆ ಮಾತನಾಡಿ ಎಸ್.ಪಿ.ವಿ. ಸದಸ್ಯರುಗಳನ್ನು ದೆಹಲಿಗೆ ಕಳುಹಿಸಿದೆ. ಅವರು ಈ ಯೋಜನೆಯ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ವಿವರಿಸಿ ಮಂತ್ರಿಗಳು ಒಪ್ಪುವಂತೆ ಟಿಪ್ಪಣಿಯನ್ನು ತಯಾರಿಸಿ, ಗುಲ್ಬರ್ಗ ಕ್ಷೇತ್ರದ ಪ್ರತಿನಿಧಿ, ಕೇಂದ್ರ ಮಂತ್ರಿಗಳಾಗಿದ್ದವರ ಸಹಾಯವನ್ನೂ ಪಡೆದು ಕೊನೆಗೂ ಕೇಂದ್ರದ ಅಂಗೀಕಾರವನ್ನು ಪಡೆಯುವುದರಲ್ಲಿ ಅವರು ಯಶಸ್ವಿಯಾದರು. ಉಡುಪು ತಯಾರಿಕಾ ಉದ್ದಿಮೆಯು ಗುಲ್ಬರ್ಗದಲ್ಲಿ ಹತ್ತು ವರ್ಷಗಳಿಗೂ ಹಳೆಯದಾಗಿದ್ದು, ಸದರಿ ತಯಾರಕರು ವಿಶೇಷ ಕೌಶಲ್ಯ, ಅನುಭವ ಮತ್ತು ಹೆಬ್ಬಯಕೆಯನ್ನು ಹೊಂದಿದವರು. ಗುಲ್ಬರ್ಗ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಸಣ್ಣ ಉಡುಪು ತಯಾರಕರ ಸಂಸ್ಥೆಯ ಸುವ್ಯವಸ್ಥೆ ಮತ್ತು ವಿನ್ಯಾಸದ ಕೊರತೆಯನ್ನು ನೀಗಿಸಿಕೊಂಡು ಪುರಾತನ ಕಾಲದ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಅನುಕೂಲ ಮಾಡಿಕೊಡುವುದು ಎಸ್.ಪಿ.ವಿ.ಯ ಮೂಲ ಉದ್ದೇಶವಾಗಿರುತ್ತದೆ. ಸ್ಥಳೀಯ ತಯಾರಕರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಂದು ಅವರು ತಯಾರಿಸಿದ ರಚನಾತ್ಮಕ ಉಡುಪುಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಕರಿ ಮಾಡುವುದು ಸಹ ಎಸ್.ಪಿ.ವಿ.ಯ ಒಂದು ಉದ್ದೇಶವಾಗಿರುತ್ತದೆ.
ಜವಳಿ ಪಾಕರ್ನಲ್ಲಿ ಉದ್ದೇಶಿತ ಘಟಕಗಳ ಸಂಖ್ಯೆ: ಒಟ್ಟು ವಿಸ್ತೀರ್ಣ ಸುಮಾರು 1,40,000 ಚದರಡಿಯಲ್ಲಿ ಉದ್ದಿಮೆದಾರರ ವರ್ಗ ಮತ್ತು ಅವರ ಅಗತ್ಯಗಳನ್ನು ಗಮನದಲ್ಲಿರಿಸಿ, ಎಸ್.ಪಿ.ವಿ. ಮೂರು ವಿಧದ ಅಳತೆಯ ಶೆಡ್ಗಳು ಮತ್ತು ನಿವೇಶನಗಳನ್ನು ಕೆಳಕಂಡಂತೆ ವಿಂಗಡಿಸಿದೆ:
ವರ್ಗ-ಎ: 8000 ಚದರಡಿ ಕಟ್ಟಡವಿರುವ
30,000 ಚದರಡಿಯ ನಿವೇಶನ-18 ಪ್ಲಾಟ್ಗಳು.
ವರ್ಗ-ಬಿ: 8000 ಚದರಡಿ ಕಟ್ಟಡವಿರುವ
20,000 ಚದರಡಿಯ ನಿವೇಶನ-28 ಪ್ಲಾಟ್ಗಳು.
ವರ್ಗ-ಸಿ: 4000 ಚದರಡಿ ಕಟ್ಟಡವಿರುವ
10,000 ಚದರಡಿಯ ನಿವೇಶನ-30 ಪ್ಲಾಟ್ಗಳು.
ಇದು ಗ್ರೀನ್ಫೀಲ್ಡ್ ಟೆಕ್ ಸ್ಟೈಲ್ ಪಾರ್ಕ್ ಎಂಬುದಾಗಿ ಅನುಮೋದನೆಗೊಂಡಿದೆ. ಈ ಪಾರ್ಕ್ಗೆ ಕೌಶಲ್ಯ ಹಾಗೂ ಕೌಶಲ್ಯರಹಿತ ಕಾರ್ಮಿಕರಿಗೆ, ವಿಶೇಷವಾಗಿ ಮಹಿಳೆಯರಿಗೆ ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗಾವಕಾಶ ಒದಗಿಸುವ ಸಾಮರ್ಥ್ಯವಿತ್ತು. ಉದ್ದಿಮೆದಾರರು ಮತ್ತು ಅವರ ಕಾರ್ಮಿಕ ವರ್ಗಕ್ಕೆ ಅವರ ಕೌಶಲ್ಯವನ್ನು ಅಭಿವೃದ್ಧಿ, ಸುಧಾರಣೆಗೊಳಿಸಲು ಇದು ಸಾಕಷ್ಟು ಅವಕಾಶ ಕಲ್ಪಿಸಲಿದೆ. ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸುವವರೆಗೆ ಉದ್ದಿಮೆದಾರರ ಪ್ರತಿಯೊಂದು ವ್ಯವಹಾರ ಚಟುವಟಿಕೆಗಳಲ್ಲಿ ಅಂದರೆ ಕಚ್ಚಾ ವಸ್ತುಗಳ ದಾಸ್ತಾನು, ಉತ್ಪಾದನಾ ಪ್ರಕ್ರಿಯೆ, ಉಳಿತಾಯ ಮತ್ತು ಸಾಮರ್ಥ್ಯಗಳು, ಪ್ಯಾಕಿಂಗ್ ಸೇರಿದಂತೆ ಪ್ರತಿಯೊಂದು ಹಂತದಲ್ಲಿ ಸೂಕ್ತ ಮಾರ್ಗದರ್ಶನ ನೀಡುವ ಸಾಮರ್ಥ್ಯ. ಕೈಗಾರಿಕೆಗೆ ಅಗತ್ಯವಿರುವ ಮಾನವ ಶಕ್ತಿ ಹೊಂದಲು ಶೈಕ್ಷಣಿಕ ಮತ್ತು ವೃತ್ತಿ ತರಬೇತಿ ಕೇಂದ್ರಗಳಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಮತ್ತು ಅಪೆರೆಲ್ ಟ್ರೈನಿಂಗ್ ಅಂಡ್ ಡಿಸೈನ್ ಸೆಂಟರ್ಗಳನ್ನು ತೆರೆಯಲಾಗುವುದು. ಹಸಿರು ಪ್ರದೇಶ ಅಭಿವೃದ್ಧಿಪಡಿಸಲು ಹೆಚ್ಚು ಒತ್ತುಕೊಡುವ ಮೂಲಕ ಆರೋಗ್ಯಕರ ಮತ್ತು ಮಾಲಿನ್ಯರಹಿತ ಪಾರ್ಕ್ ನಿರ್ಮಾಣ. ಆದುದರಿಂದ ಗುಲ್ಬರ್ಗದ ಕೆ.ಐ.ಎ.ಡಿ.ಬಿ. ಯ ನಂದೂರ್ ಕಸರಟಗಿ ಕೈಗಾರಿಕಾ ಪ್ರದೇಶದಲ್ಲಿ ಐವತ್ತು ಎಕರೆ ಜಾಗದಲ್ಲಿ ತಲೆ ಎತ್ತುತ್ತಿರುವ ಜವಳಿ ಪಾರ್ಕ್ ಅನ್ನು ನಮ್ಮ ಯೋಜನೆಯಂತೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಸ್ಟೇಟ್ ಆಫ್ ಆರ್ಟ್ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ನಾನು ಬೆಳಗಾವಿ ಜಿಲ್ಲಾಧಿಕಾರಿಯಾಗಿದ್ದಾಗ ಅಲ್ಲಿನ ಆಟೋನಗರದಲ್ಲಿ ಇಂಥ ಒಂದು ಯೋಜನೆ ಫಲಕಾರಿಯಾಗದಿದ್ದುದನ್ನು ಕಂಡಿದ್ದೆ. ನಿವೇಶನಗಳು ಕೇವಲ ರಿಯಲ್ ಎಸ್ಟೇಟ್ ದಂಧೆಯಾಗದೆ ಉದ್ದೇಶಿತ ಕಾರ್ಯಕ್ಕೆ ಬಳಕೆಯಾಗಬೇಕೆಂಬ ಹೆಬ್ಬಯಕೆಯಿಂದ ಉದ್ಯಮಿಗಳ ಕಾರ್ಯಾಗಾರವನ್ನು ನಡೆಸಿ ಮನದಟ್ಟು ಮಾಡಿಕೊಡಲಾಯಿತು. ಅದುದರಿಂದ ಸದಸ್ಯರಿಗೆ ಅನುಕೂಲವಾಗುವಂಥ ಕೆಲವು ಸೌಕರ್ಯಗಳು ನೋಡಿದರೆ ಮಾತ್ರ ಅವರು ಅಲ್ಲಿ ಬರಲು ಇಷ್ಟಪಡುತ್ತಾರೆ ಇಲ್ಲವಾದಲ್ಲಿ ಈಗ ಇರುವ ಜಾಗದಲ್ಲಿ ಉಳಿಯುತ್ತಾರೆ. ಹಾಗಾಗಿ ಹಲವಾರು ಸೌಕರ್ಯಗಳ ಜೊತೆಗೆ, ಈ ಕೆಳಕಂಡ ಸೌಕರ್ಯಗಳನ್ನು ಪಾರ್ಕಿನಲ್ಲಿ ಒದಗಿಸಲಾಗುವುದು.
ತಯಾರಕರ ಅವಶ್ಯಕತೆಗನುಗುಣವಾಗಿ ಪ್ಲಾಟ್ಗಳನ್ನು ಅಭಿವೃದ್ಧಿಪಡಿಸಿ ಅದರಲ್ಲಿ ಒಂದೇ ತರಹದ ಶೆಡ್ಗಳನ್ನು ನಿರ್ಮಿಸುವುದು.
ವಿಶಾಲವಾದ ಹಾಗೂ ಉತ್ತಮವಾಗಿ ನಿರ್ಮಿಸಲಾದ ರಸ್ತೆಗಳು. ಆಂತರಿಕ ಮತ್ತು ಮುಖ್ಯ ರಸ್ತೆಗಳು.
ಪ್ರತಿ ಘಟಕಕ್ಕೆ ಸಾಕಷ್ಟು ನೀರಿನ ಲಭ್ಯತೆ, ಮಳೆನೀರು ಕೊಯ್ಲು, ಮಳೆ ನೀರು ಚರಂಡಿ ವ್ಯವಸ್ಥೆ
ಚರಂಡಿ ನೀರು ಶುದ್ಧೀಕರಣ ಮತ್ತು ಮರುಬಳಕೆ ಘಟಕ, ಸಮರ್ಪಕ ಹಾಗೂ ನಿರಂತರ ವಿದ್ಯುತ್ ಸರಬರಾಜು ಖಾತರಿ
ಆಡಳಿತ, ಬ್ಯಾಂಕ್, ಎ.ಟಿ.ಎಂ., ಅಂಚೆ ಕಚೇರಿ ಸೌಲಭ್ಯಗಳು
ಉಪಹಾರ ಗೃಹ, ಪ್ರಾಥಮಿಕ ಚಿಕಿತ್ಸಾ ಕೇಂದ್ರ
ವಸ್ತುಪ್ರದರ್ಶನ ಸಭಾಂಗಣ, ತರಬೇತಿ ಮತ್ತು ವಿನ್ಯಾಸ ಕೇಂದ್ರ, ಉಗ್ರಾಣದಂತಹ ಉತ್ಪನ್ನ ಮತ್ತು ಮಾರುಕಟ್ಟೆ ಸೌಲಭ್ಯಗಳು
ಅತ್ಯಗತ್ಯ ಸೇವೆಯ ನೌಕರರಿಗೆ ವಸತಿ, ಶಿಶುಪಾಲನೆ ಮತ್ತು ಮನರಂಜನಾ ಕ್ಲಬ್ಗಳು, ಸಮ್ಮೇಳನ ಮತ್ತು ಸಭಾ ಕೊಠಡಿಗಳು, ಇಡೀ ಪ್ರದೇಶವನ್ನು ಸುತ್ತುವರಿದಂತೆ ಕಾಂಪೌಂಡ್, ಹುಲ್ಲುಹಾಸು ಮತ್ತು ಕೈದೋಟ
ನಾನು ಯಾವಾಗಲೂ ಹೇಳುವಂತೆ ಯೋಜನೆಗಳು ಉತ್ತಮವಾಗಿರುತ್ತವೆ. ಆದರೆ ಅವುಗಳನ್ನು ಫಲಕಾರಿಯಾಗಿ ಮಾಡುವುದು ನಮ್ಮ ಕೈಯಲ್ಲೇ ಇದೆ. ತಂತ್ರಜ್ಞಾನದಲ್ಲಿ ನಮ್ಮ ದೇಶ ಇಡೀ ಪ್ರಪಂಚಕ್ಕೇ ಗೊತ್ತಾಗುವ ರೀತಿಯಲ್ಲಿ ಬೆಳೆದಿದೆ. ತಂತ್ರಜ್ಞಾನವನ್ನು ಎಲ್ಲಾ ಕ್ಷೇತ್ರಗಳಲ್ಲೂ ಅಳವಡಿಸಿ, ಒಬ್ಬ ರೈತನಿಂದ ಹಿಡಿದು ಪ್ರತಿಯೊಬ್ಬ ಪ್ರಜೆಯೂ ತಾನು ಮಾಡುವ ಕೆಲಸದಲ್ಲಿ ಯಶಸ್ಸನ್ನು ಸಾಧಿಸಿದ ತೃಪ್ತಿಯನ್ನು ಕಂಡಾಗ ನಾವು ಆ ನಿಟ್ಟಿನಲ್ಲಿ ಮಾಡಿದ ಕೆಲಸಗಳಿಗೆ ಸಾರ್ಥ್ಥಕ್ಯ ಬರುತ್ತದೆ. ಆ ದಿನ ಖಂಡಿತ ದೂರವಿಲ್ಲ.
- ಶಾಲಿನಿ ರಜನೀಶ್, ಐಎಎಸ್
anisikeprabha@gmail.com