ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಜೊತೆಯಲ್ಲೇ ಬಳಕೆಯಾಗಬೇಕಾದ ಸಂವಾದಿ ಪದಗಳು

Vishwanath S
Updated On : 22 Jul 2014, 12:22 pm

'ನೂರೆಂಟು ನೋಟ'ದಲ್ಲಿ ಪ್ರಕಟವಾದ 'ನಮಗೆ ತುರ್ತಾಗಿ ಹಲವು ಪದಗಳು ಬೇಕಿವೆ...' ಲೇಖನಕ್ಕೆ ಪ್ರತಿಕ್ರಿಯೆಯಿದು. ಒಂದು ಹೊಸ ಪರಿಕಲ್ಪನೆ, ಹೊಸ ಆವಿಷ್ಕಾರವು (ಉದಾಹರಣೆಗೆ, ವೈಜ್ಞಾನಿಕ ಆವಿಷ್ಕಾರಗಳು) ಕನ್ನಡಕ್ಕೆ ಬರುವಾಗಲೇ, ಅಲ್ಲಿ ಕನ್ನಡದ ಹೊಸಪದವನ್ನು ಟಂಕಿಸಿಬಿಡಬೇಕು. ಇಂಗ್ಲಿಷ್ ಅಥವಾ ಬೇರೆ ಭಾಷೆಯ ಪದವೊಂದು ನೇರವಾಗಿ-ಸರ್ವ ಪ್ರಥಮವಾಗಿ ಬಳಕೆಗೆ ಬಂದುಬಿಟ್ಟರೆ ಅದನ್ನು ಅನಂತರ ಪುನರ್‌ಭರ್ತಿ ಮಾಡುತ್ತೇವೆ ಎನ್ನುವುದು ಆಗದ ಮಾತು.  1980ರ ದಶಕದಲ್ಲಿ ಫೀಡ್‌ಬ್ಯಾಕ್ ಎನ್ನುವ ಪದ ಪರಿಚಯವಾದಾಗ ಪ್ರತಿಯೊಬ್ಬರಿಗೂ ಅದರ ಅರ್ಥವನ್ನು ವಿವರಿಸಬೇಕಿತ್ತು. ಅದನ್ನು ಅನುವಾದಿಸುವುದಾದರೆ 'ಪ್ರತ್ಯಾವರ್ತನೆ' ಎನ್ನಬಹುದು. ಆದರೆ ಅದನ್ನು ಅನುವಾದಿಸುವ, ಕನ್ನಡದಲ್ಲಿ ಹೊಸ ಪರಿಕಲ್ಪನೆಗಳನ್ನು ತಕ್ಷಣ ಪರಿಚಯಿಸುವ ಕೆಲಸ ಆಗಲೇ ಇಲ್ಲ. 'ಪ್ರತ್ಯಾವರ್ತನೆ' ಪದವು ಬಳಕೆಗೆ ಬರಲೇ ಇಲ್ಲ. ಬ್ಯಾಂಕಿಂಗ್, ವಿಜ್ಞಾನ, ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಅಗಾಧವಾದ ಬದಲಾವಣೆ ಆಗುವ ಕಾಲದಲ್ಲಿ ಕನ್ನಡದ (ಅಥವಾ ಯಾವುದೇ ಭಾರತೀಯ ಭಾಷೆ) ಸ್ಥಾನವನ್ನು ಇಂಗ್ಲಿಷ್ ಪೂರ್ಣವಾಗಿ ಆಕ್ರಮಿಸಿಕೊಂಡಿದ್ದುದರಿಂದ ಬರಿಯ ಇಂಗ್ಲಿಷ್ ಪದಗಳೇ ಬಳಕೆಗೆ ಬಂದುಬಿಟ್ಟವು. ಕನ್ನಡ ಹಿಂದೆ ಉಳಿದುಬಿಟ್ಟಿತು. ಅದೇ ಫ್ರೆಂಚ್, ಜಾಪ್‌ನೀಸ್, ಹೀಬ್ರೂ, ರಷ್ಯನ್ ಭಾಷೆಗಳಲ್ಲಿಯೇ ವಿಜ್ಞಾನ - ತಂತ್ರಜ್ಞಾನಗಳನ್ನು ಆಯಾ ದೇಶಗಳಲ್ಲಿ ಕಲಿಸುವುದು ಮುಂದುವರಿದಾಗ - ಅಂದರೆ ಆ ಭಾಷೆಗಳು 'ಮಾಧ್ಯಮ'ಗಳಾದಾಗ ಅವೂ ಜೊತೆಜೊತೆಯಾಗಿ ಬೆಳೆದವು. ನಮ್ಮಲ್ಲಿಯಾದರೋ ಕನ್ನಡ ಮಾಧ್ಯಮ ಕೊನೆಯುಸಿರೆಳೆಯುತ್ತಿದೆ.
ಮೊಬೈಲ್ ಫೋನ್ ಹತ್ತು-ಹದಿನೈದು ವರ್ಷಗಳ ಹಿಂದೆ ಪರಿಚಯವಾಯಿತು. ಕೊನೆಗದು 'ಮೊಬೈಲ್‌' ಆಯಿತು. ಈಗ ಬರಿಯ 'ಮಾಬ್‌' ಆಗಿಬಿಟ್ಟಿದೆ. ಅನೇಕ ಜನ ಜಂಗಮವಾಣಿ, ಚರವಾಣಿ, ಸಂಚಾರಿವಾಣಿ, ಸಂಚಾರಿದೂರವಾಣಿ, ಎಂದೆಲ್ಲಾ ಅನುವಾದಿಸಿದರು. ವಿದ್ವಾಂಸರೊಬ್ಬರು 'ಸನಿಹವಾಣಿ' (ದೂರವಾಣಿ ಎಂಬುದಕ್ಕೆ ಸಂವಾದಿಯಾಗಿಯೂ ಇದೆ) ಚೆನ್ನಾಗಿರುತ್ತದೆ, ಎಂದರು. ಆದರೆ, ಇಂತಹ ಪದಗಳ ಸೂಕ್ತತೆಯನ್ನು ನಿರ್ಧರಿಸುವವರು ಯಾರು? ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ವಿಶ್ವವಿದ್ಯಾಲಯಗಳು ಇಂತಹ ಹೊಸ ಪದಗಳ - ಹೊಸ ಪರಿಕಲ್ಪನೆಗಳ ಆವಿಷ್ಕಾರದ ಸಂದರ್ಭದಲ್ಲಿಯೇ ಸಂವಾದಿಯಾದ ಪದವನ್ನು ನೀಡುವುದು ಸಾಧ್ಯವಾಗಿದ್ದಿದ್ದರೆ, ಬಳಕೆಯಲ್ಲಿ ಏಕರೂಪತೆ ಇರುತ್ತಿತ್ತು. ಆದರೆ ಅವೆರಡೂ ಈ ನಿಟ್ಟಿನಲ್ಲಿ ಸಂಪೂರ್ಣ ವಿಫಲವಾಗಿವೆ.
ಇನ್ನು ಮಿಕ್ಸರ್, ಗ್ರೈಂಡರ್, ಮೈಕ್ರೋವೇವ್ ಓವನ್ ಮುಂತಾದ ಪದಗಳನ್ನು ಕನ್ನಡದಲ್ಲಿ ಟಂಕಿಸುವುದು ತುಂಬ ಕಷ್ಟದ ಕೆಲಸವೇನಾಗಿರಲಿಲ್ಲ. ಆದರೆ ಆ ಕೆಲಸ ಆಗಲಿಲ್ಲ. ಈಗ ಟಂಕಿಸಿದರೂ ಅವು ಬಳಕೆಗೆ ಬರುವುದು ಕಷ್ಟ.
ಇಂಗ್ಲಿಷಿನಲ್ಲಿ 'ಲಿವಿಂಗ್ ಇನ್ ರಿಲೇಷನ್‌ಶಿಪ್‌' 'ಲೈವ್ ರನ್‌', 'ಫೀಡ್ ಬ್ಯಾಕ್‌', 'ಸ್ಕೂಲ್‌', 'ಡಿಸಿಪ್ಲಿನ್‌' ಮುಂತಾದ ನೂರಾರು ಪದಗಳನ್ನು ಬೇರೆಯೇ ಅರ್ಥದಲ್ಲಿ ಬಳಸುವುದಿದೆ. ಅಲ್ಲದೆ ಈ ಪದಗಳೂ ವೈಜ್ಞಾನಿಕವಾಗಿ ರೂಪಿತವಾಗಿರುವುದಿಲ್ಲ, ವ್ಯುತ್ಪತ್ತಿಯಾಗಿರುವುದಿಲ್ಲ. ಅದೂ ದೊಡ್ಡ ಸಮಸ್ಯೆಯೇ. ಕನ್ನಡದಲ್ಲಿ ಬಳಸುವಾಗ ನಾವು ಅರ್ಥವು ಸಮರ್ಪಕವಾಗಿರಬೇಕೆಂದು (ಅದು ಸರಿಯೇ) ನಿರೀಕ್ಷಿಸುತ್ತೇವೆ. 'ಲೈವ್ ರನ್‌' ಪದಕ್ಕಿರುವ ಆರೋಪಿತ ಅರ್ಥವನ್ನು ಕೈಬಿಟ್ಟು ಕಂಪ್ಯೂಟರ್ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ, 'ಕಂಪ್ಯೂಟರುಗಳನ್ನು ಸ್ವತಂತ್ರವಾಗಿ (ಪುಸ್ತಕಗಳಲ್ಲಿಯೂ ದಾಖಲಿಸುವ ಅಧಿಕವಾದ ಕೆಲಸವನ್ನು ನಿಲ್ಲಿಸಿ) ನಿರ್ವಹಿಸಲಾಗುತ್ತಿದೆ', ಎಂದು (1989ರಲ್ಲಿ) ಅನುವಾದಿಸಲಾಯಿತು. ಪ್ರತಿ ಹೆಜ್ಜೆಯಲ್ಲಿಯೂ ಇಂತಹ ಅಧ್ಯಯನ-ಪರಾಮರ್ಶೆ-ಚರ್ಚೆ-ಏಕರೂಪತೆಗಳನ್ನು ಕಾಯ್ದುಕೊಳ್ಳಬೇಕಾಗಿದೆ.
ಮೂರು ದಶಕಗಳ ಹಿಂದೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಜನಭಾಷೆಯಾದ ಕನ್ನಡವು ಬಳಕೆಯಾಗಬೇಕೆಂದು ಎಚ್ಚೆಸ್ಕೆ ಅವರ ನೇತೃತ್ವದಲ್ಲಿ, ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಮೈಸೂರು ಬ್ಯಾಂಕ್ ಕನ್ನಡ ಸಂಘಗಳ ಆಸಕ್ತರು ತುಂಬ ಶ್ರಮಿಸಿದರು. ಆದರೆ ಬಹುಪಾಲು ಬ್ಯಾಂಕ್‌ಗಳ ಆಡಳಿತ ವರ್ಗಗಳು ಯಾವುದೇ ಸಹಕಾರ ನೀಡಲಿಲ್ಲ. ಬೇರೆ ಭಾಷೆಯ ಅಧಿಕಾರಿಗಳಿಗೆ ಬೇಕಾಗಿರಲಿಲ್ಲ, ಇನ್ನು ಕನ್ನಡದ ಅಧಿಕಾರಿಗಳೂ ಪುಕ್ಕಲು. ಆ ಕಾಲದಲ್ಲಿ ಕನ್ನಡ ಕಾವಲು ಸಮಿತಿ, ವಿಧಾನಸೌಧಗಳನ್ನು ನೂರು ಬಾರಿ ಎಡತಾಕಿದರೂ ರಾಜಕಾರಣಿಗಳಿಗೆ-ಐ.ಎ.ಎಸ್ ಪಡೆ ಏನೂ ಮಾಡಲಿಲ್ಲ. ಎಚ್ಚೆಸ್ಕೆ ಅವರ ಅಪಾರ ಶ್ರಮದಿಂದ ಕೆಲಮಟ್ಟಿಗೆ, ಕನ್ನಡದ ಅನುಷ್ಠಾನವು ನಮೂನೆಗಳಲ್ಲಿ ಆಗಿದ್ದರೂ, ಉಳಿದಂತೆ ಯಶಸ್ವಿಯಾಗಲಿಲ್ಲ. ಬ್ಯಾಂಕಿಂಗ್ ಸೇರಿದಂತೆ, ಅನೇಕ ಕ್ಷೇತ್ರಗಳಲ್ಲಿ ಉಂಟಾದ - ಆಗುತ್ತಿರುವ ತಾಂತ್ರಿಕ ಬದಲಾವಣೆಯ ವೇಗದಲ್ಲಿ ಕನ್ನಡ ತುಂಬ ಹಿಂದೆ ಬೀಳಬೇಕಾಯಿತು.
ಆಗ 'ಇಮೇಜ್‌' ಎನ್ನುವ ಪದದ ಅನುವಾದ ಮಾಡಬೇಕಿತ್ತು. 1854ರ ಮೋನಿಯರ್ ವಿಲ್ಲಿಯಮ್ಸ್ ಇಂಗ್ಲಿಷ್ ಸಂಸ್ಕೃತ ಶಬ್ದಕೋಶದಿಂದ ಹಿಡಿದು, ಆಪ್ಟೆ ಅವರ ಉಳಿದವರ ಹತ್ತರು ನಿಘಂಟುಗಳನ್ನು ಪರಿಶೀಲಿಸಿದರೂ ತೃಪ್ತಿಕರ ಅನುವಾದ ಸಾಧ್ಯವಾಗಲೇ ಇಲ್ಲ. ಆ ಪದಕ್ಕೆ 'ಬಿಂಬ' ಎಂಬ ಅರ್ಥ ಮಾತ್ರ ಇತ್ತು. ಸಮಸ್ಯೆಯಿರುವುದು ಬಳಕೆಯಲ್ಲಿ. ಇಂಗ್ಲಿಷಿನ 'ಇಮೇಜ್‌' ಪದವು ಕಳೆದ ನೂರು ವರ್ಷಗಳಲ್ಲಿ ಹೆಚ್ಚಿನ ಅರ್ಥವನ್ನು - ಹೆಚ್ಚಿನ ಆಯಾಮವನ್ನು ಪಡೆದಿದೆ. ಮೆಕಾಲೆಯ ಕಾರಣಕ್ಕೆ ಕನ್ನಡವೂ ಸೇರಿದಂತೆ ಎಲ್ಲ ಭಾರತೀಯ ಭಾಷೆಗಳು ತುಂಬ ಹಿಂದೆ ಉಳಿದುಬಿಟ್ಟವು. ಅಂತೆಯೇ 'ಬಿಂಬ' ಪದವೂ ಹಿಂದುಳಿದುಬಿಟ್ಟಿತು. ಕಾನೂನು, ಮಾರುಕಟ್ಟೆ, ರಾಜಕೀಯ, ಪತ್ರಿಕೋದ್ಯಮ, ವಾಣಿಜ್ಯ  ಮುಂತಾದ ಎಲ್ಲ ಕ್ಷೇತ್ರಗಳಲ್ಲಿನ ಬಳಕೆಯಿಂದ ಇಂಗ್ಲಿಷಿನ 'ಇಮೇಜ್‌' ಪದಕ್ಕೆ ಅಂತಸ್ತು ಹೆಚ್ಚಾಯಿತು, ಆಕರ್ಷಣೆ-ಪ್ರತಿಷ್ಠೆ-ಗೌರವಗಳೂ ಸೇರಿಕೊಂಡವು. ಹೀಗಿರುವಾಗ 'ಇಮೇಜ್ ಬಿಲ್ಡಿಂಗ್‌'ನಂತಹ ಪದಗಳ-ಪರಿಕಲ್ಪನೆಗಳ ಅನುವಾದ ಹೇಗೆ ಸಾಧ್ಯ?
1990ರ ದಶಕದ ಆರಂಭದ ಸಮಯದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿಗೆ, ಕನ್ನಡ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದು ಎರಡು ಪ್ರಸ್ತಾವಗಳನ್ನಿಟ್ಟೆ. ಒಂದು 'ತೆಸಾರಸ್‌'ಅನ್ನು (ಇದನ್ನು ಕನ್ನಡದಲ್ಲಿ ಸಮಾನಭಾವ ಪದಕೋಶ ಎನ್ನಬಹುದು) ಕನ್ನಡದಲ್ಲಿ ತರುವುದು, ಎರಡನೆಯದು ಮಾರುಕಟ್ಟೆಯಲ್ಲಿ ಬರುತ್ತಿರುವ ಹೊಸ ಪರಿಕಲ್ಪನೆಗಳಿಗೆ ಸೂಕ್ತ ಸಂವಾದಿ ಪದಗಳನ್ನು ಸಿದ್ಧಪಡಿಸುವುದು.
ನನ್ನ ಯಾವುದೇ ಪ್ರಸ್ತಾವಕ್ಕೆ ಯಾರೂ ಪ್ರತಿಕ್ರಿಯಿಸಲಿಲ್ಲ ಮತ್ತು ಈ ಯೋಜನೆಗಳನ್ನು ಅವರೂ ಕೈಗೆತ್ತಿಕೊಳ್ಳಲಿಲ್ಲ.
1997ರಲ್ಲಿ ಪ್ರೊ. ಜಿ.ವೆಂಕಟಸುಬ್ಬಯ್ಯನವರು ಶಿವಮೊಗ್ಗಕ್ಕೆ ಭೇಟಿ ನೀಡಿದಾಗಲೂ ತೆಸಾರಸ್ ಬಗೆಗೆ ಚರ್ಚಿಸಿದೆ. ಆ ವಯಸ್ಸಿನಲ್ಲಿಯೂ ಅವರು "ನಾನೇ ಪ್ರಾರಂಭಿಸಿದ್ದೇನೆ, ಯಾರೂ ಮಾಡಲಿಲ್ಲ, ಇನ್ನೇನು ತಾನೇ ಮಾಡಲಿ?" ಎಂದರು (ಆದರೆ, ಅವರಿಗೂ ಕಾರಣಾಂತರಗಳಿಂದ  ಮಾಡಲಾಗಲಿಲ್ಲ. ವಿಶ್ವವಿದ್ಯಾಲಯಗಳು - ಅಕಾಡೆಮಿಗಳು - ಪರಿಷತ್ತು ಮಾಡಲಾಗದ ಈ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದ ಪ್ರಶಾಂತ್ ಮಾಡ್ತ ಅವರು 2007ರಲ್ಲಿ 'ಕನ್ನಡ ಪದನಿಧಿ' ಎಂಬ ಹೆಸರಿನಲ್ಲಿ ಹೊರತಂದಿದ್ದಾರೆ).
ಸಂವಾದಿ ಪದಗಳ ವ್ಯುತ್ಪತ್ತಿ, ಬಳಕೆಗೆ ಸಂಬಂಧಿಸಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಯು, ಎಲ್ಲ ಅಕಾಡೆಮಿಗಳ - ವಿಶ್ವವಿದ್ಯಾಲಯಗಳ - ಪತ್ರಿಕಾ ಸಂಪಾದಕರ - ವಿವಿಧ ಕ್ಷೇತ್ರಗಳ ವಿದ್ವಾಂಸರ ಒಂದು ಪ್ರತ್ಯೇಕ ಸಮಿತಿಯನ್ನು ರಚಿಸಿ, ಈ ನಿಟ್ಟಿನಲ್ಲಿ ಕೆಲಸ ಮಾಡುವುದಾದರೆ ಹಾಗೂ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದಿಂದ ಈ ಕಾರ್ಯಕ್ಕೆ ಅಧಿಕೃತತೆ ಬರುವುದಾದರೆ, ಈಗಲೂ ಕಾಲ ಮಿಂಚಿಹೋಗಿಲ್ಲ ಎನ್ನಿಸುತ್ತದೆ.


- ಮಂಜುನಾಥ  ಅಜ್ಜಂಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement