ಉಪವಾಸವೆಂಬ ಅಂತರಂಗ ವ್ಯಾಯಾಮ, ಹೋರಾಟದ ಆಯಾಮ
ವಿಶ್ವಾದ್ಯಂತ ಮುಸ್ಲಿಮರು ಶ್ರದ್ಧೆಯಿಂದ ಆಚರಿಸುತ್ತಿರುವ ಉಪವಾಸ ವ್ರತ ಇನ್ನೇನು ಎರಡು ದಿನಗಳಲ್ಲಿ ಮುಗಿಯಲಿದೆ. ಈದ್-ಉಲ್-ಫಿತರ್ ಹಬ್ಬದ ಮೂಲಕ ರಂಜಾನ್ ಮಾಸಕ್ಕೆ ತೆರೆ ಬೀಳಲಿದೆ. ವ್ರತ ಮುಗಿಯುತ್ತಾ ಬಂದಿರುವಾಗ ರಂಜಾನ್ ಬಗ್ಗೆ ಮಾತಾಡುತ್ತಿರುವುದು ಅಪ್ರಸ್ತುತ ಎಂದು ನಿಮಗೆ ಅನಿಸಬಹುದು. ಆದರೆ, ಪ್ರತಿ ಬಾರಿಯ ರಂಜಾನ್ ತಿಂಗಳಲ್ಲೂ ನನಗಾದ ಕೆಲವು ಅನುಭವಗಳು, ಕಂಡುಕೊಂಡ ಸಂಗತಿಗಳು ನನ್ನಲ್ಲಿ ಕೆಲ ಪ್ರಶ್ನೆಗಳನ್ನು ಎಬ್ಬಿಸಿವೆ.
ಉಪವಾಸದ ವಿಚಾರಕ್ಕೆ ಬರುವುದಾದರೆ, ಇದಕ್ಕೆ ಇಸ್ಲಾಂ ಧರ್ಮದಲ್ಲಿ ಭಾರಿ ಮಾನ್ಯತೆಯಿದೆ. ಧರ್ಮದಲ್ಲಿ ನಂಬಿಕೆಯುಳ್ಳ ಪ್ರತಿಯೊಬ್ಬನೂ ಕಡ್ಡಾಯವಾಗಿ ಪೂರ್ಣಗೊಳಿಸಬೇಕಾದ ಐದು ಕರ್ಮಗಳಲ್ಲಿ ಇದೂ ಒಂದು. 30 ದಿನಗಳ ಪವಿತ್ರ ರಂಜಾನ್ ಮಾಸದಲ್ಲಿ ಬೆಳಗಿನ ಜಾವದಿಂದ ಸೂರ್ಯಾಸ್ತದವರೆಗೂ ನೀರು ಮತ್ತು ಆಹಾರವನ್ನು ಸೇವಿಸದೇ ದೈವಾನುಗ್ರಹಕ್ಕೆ ಪಾತ್ರರಾಗಬೇಕಾದ್ದು ಈ ಆಚರಣೆಯ ಮೂಲ ಉದ್ದೇಶ. ಅರಿಷಡ್ವರ್ಗಗಳು ತುಂಬಿದ ಶರೀರವನ್ನು ಶುದ್ಧೀಕರಿಸುವುದು, ಬಡವರ ಸಂಕಷ್ಟಗಳನ್ನು ಹತ್ತಿರದಿಂದ ಅರಿಯುವುದು, ತ್ಯಾಗ-ದಾನದ ಮೂಲಕ ಭಗವಂತನಿಗೆ ಪ್ರೀತಿಪಾತ್ರರಾಗುವುದೂ ಈ ಉದ್ದೇಶಗಳಲ್ಲಿ ಸೇರಿದೆ. ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ ವ್ಯಕ್ತಿಯ ಆರೋಗ್ಯದ ಗುಟ್ಟೂ ಉಪವಾಸದಲ್ಲಿ ಅಡಗಿದೆ. ರಂಜಾನ್ ಉಪವಾಸದ ಬಗ್ಗೆ ವಿವರಿಸಲು ಹೋದರೆ ಪುಟಗಟ್ಟಲೆ ಬರೆಯಬೇಕಾದೀತು.
ನನ್ನ ಅನುಭವದ ಬಗ್ಗೆ ಹೇಳಬೇಕೆಂದರೆ, ಚಿಕ್ಕ ವಯಸ್ಸಿನಿಂದಲೇ ಉಪವಾಸದ ಬಗ್ಗೆ ಅನೇಕರಿಂದ ಕುಹಕದ ಮಾತುಗಳನ್ನು ಕೇಳುತ್ತಾ ಬಂದಿದ್ದೇನೆ. ಆಗಿನ್ನೂ ಮಕ್ಕಳಾದ್ದರಿಂದ ಅದರ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಬೆಳೆಯುತ್ತಾ ಬಂದಂತೆ ಅಪಹಾಸ್ಯದ ಮಾತುಗಳು ಮನಸ್ಸಿನ ಮೂಲೆಯಲ್ಲೆಲ್ಲೋ ನೋವನ್ನು ಉಂಟುಮಾಡುತ್ತಿತ್ತು. ಎಷ್ಟೋ ಮಂದಿ ಉಪವಾಸ ವ್ರತ ಆಚರಿಸುತ್ತಿರುವವರನ್ನು ಅನುಮಾನದ ದೃಷ್ಟಿಯಿಂದ ನೋಡುವುದು, ಮನೆಯೊಳಗೆ ತಿಂದು ಬಂದು ಹೊರಗೆ ನಾಟಕವಾಡುತ್ತಿದ್ದಾರೆ ಎಂದು ಮೂದಲಿಸುವುದು, ವ್ರತ ಮುರಿಯುವಾಗ ಹೊಟ್ಟೆ ಹೋಳಾಗುವಷ್ಟು ತಿನ್ನುತ್ತಾರೆ, ಅದು ಕರಗಲು ಎರಡು ದಿನಗಳು ಬೇಕು ಎಂದು ತಮಾಷೆ ಮಾಡುವುದು, ಇಂತಹ ಕುಹಕಗಳು ಒಂದೆರಡಲ್ಲ. ಆದರೆ ಉಪವಾಸ ವ್ರತದ ಪ್ರಾಮುಖ್ಯತೆ ಗೊತ್ತಿಲ್ಲದೇ ಮಾತನಾಡುವವರೊಂದಿಗೆ ತರ್ಕ ಮಾಡಿ ಪ್ರಯೋಜನವಿಲ್ಲ ಎಂದು ಭಾವಿಸುತ್ತಾ ಮೌನ ತಾಳುವುದನ್ನೇ ಮುಂದುವರಿಸಿದ್ದೇನೆ. ಮೌನ, ತಾಳ್ಮೆಯೂ ವ್ರತಧಾರಿಯ ಆಭರಣಗಳು. ಒಳ್ಳೆಯ ಮಾತುಗಳಿಂದ ಇನ್ನೊಬ್ಬರ ಮನಸ್ಸನ್ನು ಗೆಲ್ಲಬೇಕೇ ವಿನಾ ಕೋಪ-ತಾಪದಿಂದ ಏನೂ ಸಾಧಿಸಿದಂತಾಗುವುದಿಲ್ಲ. 'ನೀವು ಖರ್ಜೂರದ ಹೋಳನ್ನಾದರೂ ದಾನ ಮಾಡಿ ನರಕದಿಂದ ರಕ್ಷೆ ಹೊಂದಿರಿ. ಅದಿಲ್ಲದಿದ್ದರೆ ಒಳ್ಳೆಯ ಮಾತಿನಿಂದ. ಒಳ್ಳೆಯ ಮಾತೂ ಒಂದು ರೀತಿಯಲ್ಲಿ ದಾನವೇ' ಎನ್ನುತ್ತದೆ ಇಸ್ಲಾಂ ಧರ್ಮ.
ರಂಜಾನ್ ಮಾಸದಲ್ಲಿ ದಾನಕ್ಕೂ ಹೆಚ್ಚಿನ ಪ್ರಾಮುಖ್ಯ ನೀಡಲಾಗಿದೆ. ಉಳ್ಳವರು ಇಲ್ಲದವರಿಗೆ ದಾನ ಮಾಡುತ್ತಾರೆ. ಹಸಿದವನ ನೋವು ತಿಳಿಯುವಾಗ ದಾನ ಮಾಡಲು ಕೈ ತನ್ನಿಂತಾನೇ ಮುಂದೆ ಬರುತ್ತದೆ. ಮತ್ತೊಂದು ವಿಚಾರ ಇಲ್ಲಿ ತಿಳಿಸಲೇಬೇಕು. ಇತ್ತೀಚಿನ ದಿನಗಳಲ್ಲಿ ಇಫ್ತಾರ್ ಕೂಟವೆಂಬುದು ಪ್ರತಿಷ್ಠೆಯ ಕಣವಾಗಿ ಮಾರ್ಪಾಡಾಗುತ್ತಿದೆ. ಅವನಿಗಿಂತ ಅದ್ಧೂರಿಯಾಗಿ ನಾನು ಮಾಡಬೇಕು ಎಂಬ ಸ್ಪರ್ಧೆಯ ಕೂಟವಾಗಿ ಬದಲಾಗುತ್ತಿದೆ. ಇದು ಶ್ರೀಮಂತಿಕೆ ಪ್ರದರ್ಶನದ ತಾಣವಲ್ಲ. ಪಕ್ಕದ ಮನೆಯವನೊಂದಿಗೆ, ಪ್ರತಿಸ್ಪರ್ಧಿಯೊಂದಿಗೆ ಪೈಪೋಟಿಗಿಳಿಯುವ ವೇದಿಕೆಯೂ ಅಲ್ಲ. ಉಪವಾಸ ಮುರಿಯಲು ವ್ರತಧಾರಿಗೆ ಒಂದು ಖರ್ಜೂರ ಕೊಟ್ಟರೂ ಸಾಕು. ಪರಮಾತ್ಮನ ದಯೆ ನಿಮ್ಮ ಮೇಲೆ ಇದ್ದೇ ಇರುತ್ತದೆ. ಅನೇಕರು ತಮ್ಮಲ್ಲಿರುವ ಹಣದ ಪ್ರದರ್ಶನಕ್ಕಾಗಿ ಅದ್ಧೂರಿ ಇಫ್ತಾರ್ ಕೂಟ ನಡೆಸಿ, ಭೂರಿಭೋಜನ ಏರ್ಪಡಿಸುತ್ತಾರೆ. ಅದರಲ್ಲಿ ಅರ್ಧಕ್ಕರ್ಧ ಆಹಾರ ಉಳಿದು ಕೊನೆಗೆ ತ್ಯಾಜ್ಯ ವಿಲೇವಾರಿ ಲಾರಿಯ ಪಾಲಾಗುತ್ತದೆ. ಇಷ್ಟೊಂದು ಆಹಾರವನ್ನು ಪೋಲು ಮಾಡಿದರೆ ನೀವು ಮಾಡಿದ ಸತ್ಕರ್ಮಕ್ಕೆ ಫಲವಾದರೂ ದೊರಕೀತೇ? ವಿಶ್ವದಲ್ಲಿ ಎಷ್ಟೋ ಕೋಟಿ ಜನ ತುತ್ತು ಅನ್ನಕ್ಕಾಗಿ ಪರದಾಡುವಾಗ ನೀವು ಈ ರೀತಿ ಆಹಾರ ಪದಾರ್ಥಗಳನ್ನು ವೇಸ್ಟ್ ಮಾಡಿದರೆ ಭಗವಂತ ಮೆಚ್ಚುತ್ತಾನೆಯೇ? ಈ ಬಗ್ಗೆ ಎಲ್ಲರೂ ಚಿಂತಿಸಬೇಕಾದ್ದು ಅಗತ್ಯ.
ಉಪವಾಸ ವ್ರತವೆಂಬುದು ಮುಸ್ಲಿಮರಿಗೆ ಮಾತ್ರ ಸೀಮಿತವೇ? ಖಂಡಿತಾ ಅಲ್ಲ. The best of all medicines is resting and fasting ಎನ್ನುತ್ತಾರೆ ಖ್ಯಾತ ಸಂಶೋಧಕ ಬೆಂಜಮಿನ್ ಫ್ರಾಂಕ್ಲಿನ್. ಎಲ್ಲ ಧರ್ಮಗಳಲ್ಲೂ ಹಲವಾರು ಶತಮಾನಗಳಿಂದಲೂ ಮಾನವ ಸಂಪ್ರದಾಯದ ಒಂದು ಧಾರ್ಮಿಕ ಪ್ರಕ್ರಿಯೆಯಾಗಿ ಇದನ್ನು ನಡೆಸಲಾಗುತ್ತಿದೆ. ಬೈಬಲ್ನ ಹಳೆಯ ಮತ್ತು ಹೊಸ ಒಡಂಬಡಿಕೆ, ಕುರಾನ್, ಭಗವದ್ಗೀತೆ ಸೇರಿದಂತೆ ಬಹುತೇಕ ಧರ್ಮಗ್ರಂಥಗಳಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಯಹೂದಿಗಳು ಯಾಮ್ ಕಿಪ್ಪರ್ (ಪ್ರಾಯಶ್ಚಿತ್ತದ ದಿನ) ಎಂಬ ದಿನದಂದು ಉಪವಾಸ ಮಾಡುತ್ತಾರೆ. ಒಂದು ದಿನದ ಸೂರ್ಯಾಸ್ತದಿಂದ ಹಿಡಿದು ಮಾರನೇ ದಿನ ಸೂರ್ಯಾಸ್ತ ಆಗುವವರೆಗೂ 25 ಗಂಟೆಗಳ ಕಾಲ ಅನ್ನ, ಪಾನೀಯಗಳನ್ನು ತ್ಯಜಿಸುತ್ತಾರೆ. ಈ ದಿನದಂದೇ ಭಗವಂತನು ಯಹೂದಿಯರ ಮುಂದಿನ ವರ್ಷದ ವಿಧಿಯನ್ನು ಬರೆಯುತ್ತಾನೆ ಎಂಬ ನಂಬಿಕೆಯಿದೆ. ಹಿಂದೂ ಧರ್ಮದಲ್ಲಿಯೂ ಏಕಾದಶಿಯ ದಿನದಂದು ಉಪವಾಸ ಮಾಡಲಾಗುತ್ತದೆ. ಆಧ್ಯಾತ್ಮಿಕ ಲಾಭಕ್ಕಾಗಿ ದೈಹಿಕ ಆಸೆಗಳನ್ನು ತ್ಯಜಿಸಬೇಕು. 8ರಿಂದ 80 ವರ್ಷದವರೆಗಿನ ಎಲ್ಲರೂ ನೀರೂ ಕುಡಿಯದೇ ಉಪವಾಸ ಮಾಡಬೇಕು ಎನ್ನುತ್ತದೆ ವೇದಗ್ರಂಥಗಳು. ಇದಲ್ಲದೇ, ನವರಾತ್ರಿ, ಶಿವರಾತ್ರಿ, ಕರ್ವಾಚೌತ್ನ ದಿನವೂ ಅನೇಕರು ಅನ್ನ ನೀರು ತ್ಯಜಿಸಿ ವ್ರತ ಕೈಗೊಳ್ಳುತ್ತಾರೆ. ಜೈನ ಧರ್ಮೀಯರು ಪರ್ಯುಷಾನ್ ದಿನದಂದು, ಕ್ರಿಶ್ಚಿಯನ್ನರು ಲೆಂಟ್ (45 ದಿನಗಳ ಅವಧಿಯ ಉಪವಾಸ) ನಂದು ಉಪವಾಸ ಮಾಡುತ್ತಾರೆ. ಒಟ್ಟಾರೆ ಉಪವಾಸವೆಂಬುದು ಆಹಾರದಿಂದ ದೂರವಿರುವ ದೈಹಿಕ ಕ್ರಿಯೆ ಮಾತ್ರವಲ್ಲ, ಅದು ನಮ್ಮ ಆಧ್ಯಾತ್ಮಿಕ ಸ್ನಾಯುವಿಗೆ ನೀಡುವ ವ್ಯಾಯಾಮವೂ ಹೌದು.
ಅನ್ನ ಪಾನೀಯಗಳನ್ನು ತ್ಯಜಿಸಿ ಅಂತರಂಗ ಹಾಗೂ ಬಹಿರಂಗ ಶುದ್ಧಿಗಾಗಿ ನಡೆಸುವ ಉಪವಾಸದ ಕ್ರಮ ಇಂದು ನಿನ್ನೆಯದಲ್ಲ. ಅಧ್ಯಾತ್ಮ ಶುದ್ಧೀಕರಣದ ಅಸ್ತ್ರವಾಗಿ ಇದು ಚಾಲ್ತಿಯಲ್ಲಿದೆ. ಅನೇಕ ವಿಜ್ಞಾನಿಗಳು, ತತ್ವಜ್ಞಾನಿಗಳು, ಉಪವಾಸವೆಂಬುದು ಅನಾರೋಗ್ಯಕರ ಶರೀರವನ್ನು ಪುನಶ್ಚೇತನಗೊಳಿಸುವ ಪ್ರಕ್ರಿಯೆ ಎಂದೇ ನಂಬಿಕೊಂಡು ಬಂದಿದ್ದಾರೆ. ಸಾಕ್ರೆಟೀಸ್, ಅರಿಸ್ಟಾಟಲ್, ಗಲೇನ್, ಪರಾಸೆಲ್ಸಸ್, ಹಿಪ್ಪೋಕ್ರೇಟ್ಸ್ನಂತಹ ಮಹಾನುಭಾವರೂ ಉಪವಾಸವನ್ನು ಒಂದು ಥೆರಪಿ ಎಂದೇ ನಂಬಿದ್ದರು.
ಧರ್ಮಗಳ ಚೌಕಟ್ಟಿನಿಂದ ಹೊರಬಂದು ನೋಡಿದರೆ ಮಹಾತ್ಮ ಗಾಂಧಿ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ, ಸ್ವಾತಂತ್ರ್ಯ ಸಂಗ್ರಾಮದ ವೇಳೆ ಭಗತ್ಸಿಂಗ್ ಜೈಲಲ್ಲೇ ನಡೆಸಿದ 64 ದಿನಗಳ ಉಪವಾಸ, ಲೋಕಪಾಲ ಮಸೂದೆಗಾಗಿ ಅಣ್ಣಾ ಹಜಾರೆ ನಡೆಸಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ವಿರೋಧಿಸಿ ಚಾನು ಶರ್ಮಿಳಾ ಎಂಬ ದಿಟ್ಟೆ ಇಂದಿಗೂ ನಡೆಸುತ್ತಿರುವ ಉಪವಾಸ ಎಲ್ಲವೂ ಅಹಿಂಸಾತ್ಮಕ ಪ್ರತಿಭಟನೆಯ ರೂಪಗಳು. ಉಪವಾಸದ ಮೂಲಕ ಪ್ರತಿಭಟಿಸಿ ಜನರ ಗಮನ ಸೆಳೆದವರಲ್ಲಿ ಮೊದಲಿಗರು ಗಾಂಧೀಜಿ. ಅಹಮದಾಬಾದ್ನಲ್ಲಿ ಜವಳಿ ಕಾರ್ಖಾನೆಯ ಕಾರ್ಮಿಕರು ಹೆಚ್ಚಿನ ವೇತನಕ್ಕಾಗಿ ಹಾತೊರೆಯುತ್ತಿದ್ದ ಸಂದರ್ಭದಲ್ಲಿ ಅವರಿಗೆ ಮುಷ್ಕರ ನಡೆಸುವಂತೆ ಗಾಂಧೀಜಿ ಸಲಹೆ ನೀಡಿದರು. ಆದರೆ 2 ವಾರಗಳ ಬಳಿಕ ಕಾರ್ಮಿಕರು ಹಿಂಸಾಚಾರಕ್ಕಿಳಿದರು. ಆಘಾತಗೊಂಡ ಗಾಂಧೀಜಿ ಹಿಂಸೆಗೆ ಕೊನೆಹಾಡಬೇಕೆಂದು ನಿರ್ಧರಿಸಿ ಮತ್ತು ಸಮಸ್ಯೆ ಇತ್ಯರ್ಥವಾಗಬೇಕೆಂದು ಆಶಿಸಿ ಸ್ವತಃ ಉಪವಾಸ ಸತ್ಯಾಗ್ರಹ ಆರಂಭಿಸಿದರು. ನಂತರ 1939ರಲ್ಲಿ ರಾಜ್ಕೋಟ್ನಲ್ಲಿ ಗಾಂಧೀಜಿ ನಡೆಸಿದ ಉಪವಾಸ ಸತ್ಯಾಗ್ರಹ ವಿಫಲವಾಯಿತು. ಆಗ ಅವರು ಉಪವಾಸದ ಮಹತ್ವವನ್ನು ಅರಿತರು."There can be no room for selfishness, anger, lack of faith or impatience in a pure fast' ಎಂದರು. ಅಂದು ಗಾಂಧೀಜಿ ರಾಜ್ಕೋಟ್ನಿಂದ ಖಾಲಿ ಕೈಯಲ್ಲಿ ಹೊರಬಂದಿದ್ದರು. ದೇಹ ಚದುರಿತ್ತು, ಭರವಸೆಯು ಸಮಾಧಿಯಾಗಿತ್ತು. ನಂಬಿಕೆಯಿಲ್ಲದ, ಸ್ವಾರ್ಥ, ಆಕ್ರೋಶದಿಂದ ಕೂಡಿದ ಉಪವಾಸವು ನೈಜ ವ್ರತವಾಗದು ಎಂಬುದನ್ನು ಅವರು ಮನಗಂಡಿದ್ದರು.
ನಿಜ. ಹಸಿವನ್ನು ತಡೆದು ಕುಳಿತರಷ್ಟೇ ಉಪವಾಸವಾಗದು. ವ್ರತಧಾರಿಯು ನಿಸ್ವಾರ್ಥತೆ, ಉಪಕಾರ ಮನೋಭಾವ, ಆಕ್ರೋಶ ತಡೆದುಕೊಳ್ಳುವ ಶಕ್ತಿ, ಸಹನೆ ಎಲ್ಲವನ್ನೂ ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ಆತ ಸನ್ಮಾರ್ಗಿಯಾಗಬಲ್ಲ, ಜತೆಗೆ ಆತನ ಉಪವಾಸಕ್ಕೂ ಬೆಲೆ ಸಿಗುತ್ತದೆ.
- ಹಲೀಮತ್ ಸಅದಿಯಾ
haleesukhi@gmail.com