ಅಂಕಣಗಳು

ತಪ್ಪು ಮಾಡಿದವರನ್ನೂ ಶಿಕ್ಷಿಸಲು ಹೆದರುವುದೇಕೆ?

ಏಳನೇ ತರಗತಿಯವರೆಗೂ ನಾನು ಹಳ್ಳಿಯ ಶಾಲೆಯಲ್ಲಿ ಓದಿದವಳು ಎಂದು ಈಗಾಗಲೇ ಐದಾರು ಬಾರಿ ಇದೇ ಅಂಕಣದಲ್ಲಿ ಬರೆದಿದ್ದೇನೆ. 20 ವರ್ಷಗಳಷ್ಟು ಹಿಂದೆ ಒಂದು ಪುಟ್ಟ ಹಳ್ಳಿಯಲ್ಲಿದ್ದ ಪ್ರಾಥಮಿಕ ಶಾಲೆ ಅಂದ ಮೇಲೆ, ಅಲ್ಲಿ ಇದ್ದ ಅನುಕೂಲಗಳ ಬಗ್ಗೆ ವಿವರಿಸಬೇಕಿಲ್ಲ ತಾನೆ? ಆ ಶಾಲೆಯಲ್ಲಿದ್ದ ಅತಿ ಮುಖ್ಯ ಸಮಸ್ಯೆಯೆಂದರೆ ಶೌಚಾಲಯದ್ದು. ಆ ಶಾಲೆಯಲ್ಲಿ ಶೌಚಾಲಯವೇ ಇರಲಿಲ್ಲ. ಹುಡುಗರು ಪ್ರತಿ ಎರಡು ಪೀರಿಯಡ್‌ಗೆ ಒಮ್ಮೆ ಎದ್ದು ನಿಂತು, ಕಿರು ಬೆರಳನ್ನು ಮುಂದೆ ಮಾಡಿ ಹೊರಗೆ ಹೋಗುತ್ತಿದ್ದರು. ಕೆಲವರಂತೂ ಯಾವುದೇ ಸಂಕೋಚವಿಲ್ಲದೆ ಶಾಲೆಯ ಎದುರಿಗಿದ್ದ ಬಯಲಿನಲ್ಲಿ ಕೂತು ದೇಹಬಾಧೆ ತೀರಿಸಿಕೊಳ್ಳುತ್ತಿದ್ದರು. ಆದರೆ, ನಾವು ಹುಡುಗಿಯರು ಹಾಗೆ ಮಾಡಲು ಸಾಧ್ಯವಿರಲಿಲ್ಲ. ನಮ್ಮೆಲ್ಲರ ಮನೆಗಳಿಂದ ಶಾಲೆ ತುಂಬಾ ದೂರವಿದ್ದುದರಿಂದ, ದೇಹಬಾಧೆ ತೀರಿಸಿಕೊಳ್ಳಲು ಮನೆಗೆ ಹೋಗುವುದಕ್ಕೂ ಸಾಧ್ಯವಿರಲಿಲ್ಲ. ಹಾಗಾಗಿ, ಊಟದ ಬಿಡುವಿನಲ್ಲಿ, ಶಾಲೆಯಿಂದ ಸ್ವಲ್ಪ ದೂರವಿದ್ದು ಪೊದೆಯ ಮರೆಗೆ ಹೋಗಿ ದೇಹಬಾಧೆ ತೀರಿಸಿಕೊಂಡು ವಾಪಸಾಗುತ್ತಿದ್ದೆವು.
ಸ್ವಲ್ಪ ದಿನಗಳ ನಂತರ ನಮಗೆ ಗೊತ್ತಾಗಿದ್ದು ಏನೆಂದರೆ, ಸಹಪಾಠಿಯೊಬ್ಬ ನಮ್ಮನ್ನು ಹಿಂಬಾಲಿಸಿ ಬರುತ್ತಿದ್ದ. ಪೊದೆಗಳ ನಡುವೆ ಅಡಗಿ ಕೂತು ನಮ್ಮನ್ನು ಗಮನಿಸುತ್ತಿದ್ದು, ನಂತರ ಮೌನವಾಗಿ ಹಿಂದಿರುಗುತ್ತಿದ್ದ. ಆತ ಅಪ್ಪಿ ತಪ್ಪಿ ಕೂಡ ಹುಡುಗಿಯರನ್ನು ಕಣ್ಣೆತ್ತಿ ನೋಡುತ್ತಿರಲಿಲ್ಲ. ಆದರೆ, ನಾವು ಮೂತ್ರ ವಿಸರ್ಜನೆಗೆ ಹೊರಟರೆ ಮಾತ್ರ ಅದ್ಯಾವ ಮಾಯದಲ್ಲೋ ಹಿಂಬಾಲಿಸಿಕೊಂಡು ಬಂದು ಬಿಡುತ್ತಿದ್ದ.
  ಅವನ ವಿಲಕ್ಷಣ ವರ್ತನೆ ನಮಗಂತೂ ಭಯವನ್ನುಂಟು ಮಾಡಿತು. ನಾವು ಹುಡುಗಿಯರೆಲ್ಲಾ ಹೆಡ್‌ಮಾಸ್ಟರ್ ಬಳಿ ಹೋಗಿ ದೂರು ಹೇಳಿಕೊಂಡೆವು. ಹೆಡ್ ಮಾಸ್ಟರು, ಕೆಂಡಾಮಂಡಲವಾದರು.
ಆ ಹುಡುಗನನ್ನು ಛೇಂಬರಿಗೆ ಕರೆಸಿ, ಎಲ್ಲ ಹುಡುಗಿಯರಿಂದಲೂ ಅವನ ಕೆನ್ನೆಗೆ ಹೊಡೆಸಿದರು. ನಂತರ, ಇಂಥ ಹಲ್ಕಾ ಕೆಲಸ ಮಾಡೋದಕ್ಕಾ ಸ್ಕೂಲ್‌ಗೆ ಬರೋದು ಎಂದು ಬೈದು ತಾವೂ ಐದಾರು ಏಟು ಹಾಕಿದರು. ಅಷ್ಟಕ್ಕೇ ಸುಮ್ಮನಾಗದೆ, ಆ ಹುಡುಗನ ತಂದೆ-ತಾಯಿಯನ್ನು ಕರೆಸಿ, ಅವರಿಗೂ ಎಲ್ಲ ವಿಷಯ ತಿಳಿಸಿದರು. ತಾವು ನೀಡಿದ ಶಿಕ್ಷೆಯ ಕುರಿತೂ ವಿವರಿಸಿದರು. ನಂತರ, ಇಂಥ ಹುಡುಗರು ನಮಗೆ ಬೇಡ. ಟಿ.ಸಿ. ಕೊಡ್ತೇನೆ. ಕರ್ಕೋಂಡ್ ಹೋಗಿ ಅಂದು ಬಿಟ್ಟರು.
ಮಗನ ಚಿಲ್ಲರೆ ಬುದ್ಧಿ ಗೊತ್ತಾದಾಗ ಸಿಟ್ಟಿಗೆದ್ದ ಪೋಷಕರು, ತಾವೂ ನಾಲ್ಕು ಹೊಡೆತ ಹಾಕಿದರು. ನಂತರ-ಮೇಸ್ಟ್ರೇ, ಇವನ ಕಾಲು ಮುರಿದ್ರೂ ಸರಿ, ಒಳ್ಳೆಯ ಬುದ್ಧಿ ಕಲಿಸಿ. ಈ ವಿಷಯದಲ್ಲಿ ನಿಮಗೆ ಪೂರ್ತಿ ಸ್ವಾತಂತ್ರ್ಯವಿದೆ ಎಂದು ಹೇಳಿ ಹೋಗಿಬಿಟ್ಟರು. ಹೆತ್ತವರ ಕಠೋರ ಶಿಸ್ತು ಹಾಗೂ ಹೆಡ್‌ಮಾಸ್ಟರ್‌ರ ಶಿಕ್ಷೆಗೆ ಹೆದರಿದ ಆ ಹುಡುಗ ಮುಂದಿನ ವರ್ಷಗಳಲ್ಲಿ ಸಂಪೂರ್ಣವಾಗಿ ಬದಲಾದ.
ಇನ್ನೊಬ್ಬನಿದ್ದ. ಅವನಿಗೆ ಕದಿಯುವ ಚಟ. ಪೆನ್ನು, ಪುಸ್ತಕ, ಜಾಮಿಟ್ರಿ ಬಾಕ್ಸ್,  ಲಂಚ್‌ಬಾಕ್ಸ್, ಬ್ಯಾಗ್...ಹೀಗೆ ಸಿಕ್ಕಿದ್ದನ್ನೆಲ್ಲ ಕದಿಯುತ್ತಿದ್ದ. ಅದೊಮ್ಮೆ ತೀರಾ ಆಕಸ್ಮಿಕವಾಗಿ ಸಿಕ್ಕಿಬಿದ್ದ. 'ಕಳ್ಳತನ ಮಾಡೋಕೆ ಸ್ಕೂಲ್‌ಗೆ ಬರ್ತೀಯೇನೋ ಭಡವಾ' ಎಂದು ಅಬ್ಬರಿಸಿದ ಹೆಡ್‌ಮಾಸ್ಟರು ಚೆನ್ನಾಗಿ ಬಾರಿಸಿದರು. ನಂತರ, ಅವನ ಕೊರಳಿಗೆ-ನಾನೊಬ್ಬ ಕಳ್ಳ ಎಂಬ ಬೋರ್ಡ್ ನೇತು ಹಾಕಿ, ಎಲ್ಲಾ ಸೆಕ್ಷನ್‌ಗೂ ಆ ಹುಡುಗನನ್ನು ಕರೆದೊಯ್ಯಬೇಕೆಂದು ಅಟೆಂಡರ್‌ಗೆ ಆದೇಶಿಸಿದರು. ಪ್ರತಿ ಸೆಕ್ಷನ್‌ನಲ್ಲೂ ಈ ಹುಡುಗನಿಗೆ ಅಲ್ಲಿದ್ದ ಶಿಕ್ಷಕರಿಂದ ಛೀಮಾರಿ ಹಾಗೂ ಏಟು ಉಚಿತವಾಗಿ ಸಿಕ್ಕಿತು.
ಜೊತೆಗೆ ಸಹಪಾಠಿಗಳ ತಿರಸ್ಕಾರದ ನೋಟವೂ. ಮರುದಿನ ಆ ಹುಡುಗನ ಹೆತ್ತವರೂ ಶಾಲೆಗೆ ಬಂದರು. ಕಳ್ಳತನ ಮಾಡಿದ್ದು ತಪ್ಪಾಯ್ತು ಅನ್ನು. ಹೆಡ್ ಮಾಸ್ಟರ್ ಕಾಲಿಗೆ ಬಿದ್ದು ಕ್ಷಮೆ ಕೇಳು ಎಂದು ಆದೇಶಿಸಿದರು.
ಹುಡುಗ ಹಾಗೆಯೇ ಮಾಡಿದ. ಅಷ್ಟೇ ಅಲ್ಲ: ಆನಂತರದಲ್ಲಿ ಅವನೂ ಒಳ್ಳೆಯ ವಿದ್ಯಾರ್ಥಿ ಅನ್ನಿಸಿಕೊಂಡ.
 ಇದಿಷ್ಟೂ ಶಾಲೆಯ ಕಥೆಯಾದರೆ, ಊರಲ್ಲಿ ನಡೆದ ಮತ್ತೊಂದು ಪ್ರಸಂಗವನ್ನು ನಿಮಗೆ ಹೇಳಬೇಕು. ಕೃಷ್ಣ ಎಂಬ ಒಬ್ಬನಿದ್ದ. ಅಪಾಪೋಲಿಯಂತೆ ಅಲೆದಾಡಿಕೊಂಡಿದ್ದ ಅವನಿಗೆ ಹುಡುಗಿಯರ ಹಿಂದೆ ಸುತ್ತುವ, ಅವರನ್ನು ರೇಗಿಸುವ ಚಪಲ. ಯಾರಾದರೂ ಕೇಳಿದರೆ-ನಾನು ಕೃಷ್ಣ ಅಲ್ವೇನ್ರೀ, ನಾನು ಇನ್ನು ಹೇಗೆ ಇರಬೇಕೋ... ಎಂದು ಕ್ರಾಸ್ ಕ್ವಶ್ಚನ್ ಹಾಕುತ್ತಿದ್ದ. ಅವನ ಕಾಟವನ್ನು ಕೆಲ ದಿನಗಳ ಕಾಲ ಸಹಿಸಿಕೊಂಡ ಊರಜನ, ಕಡೆಗೊಮ್ಮೆ ಕಂಬಕ್ಕೆ ಕಟ್ಟಿ ಹೊಡೆದರು. ನಂತರದ ದಿನಗಳಲ್ಲಿ ಕೃಷ್ಣ, ಥೇಟ್ ಮೂಗನಂತೆಯೇ ಬದುಕಿದ.
ಹೌದು ತಾನೇ? ಇವು ಕೇವಲ ನನ್ನೊಬ್ಬಳ ಅನುಭವಗಳಲ್ಲ. ಬಹುಶಃ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ಇಂಥ ಪ್ರಸಂಗಗಳು ಗೋಚರಿಸಿರುತ್ತವೆ. ತಪ್ಪು ಮಾಡಿದರೆ ಶಿಕ್ಷೆ ಮತ್ತು ಒಂದಿಡೀ ಸಮುದಾಯದ ತಿರಸ್ಕಾರದ ನೋಟ ಉಡುಗೊರೆಯಂತೆ ಸಿಗುತ್ತದೆ ಎಂಬ ಸತ್ಯ ಸ್ಯಾಡಿಸ್ಟ್‌ಗಳಂತೆ ವರ್ತಿಸುವವರಿಗೆ ಗೊತ್ತಾಗಿ ಬಿಟ್ಟರೆ, ಅವರ ಚಿಲ್ಲರೆ ಬುದ್ಧಿ ತಂತಾನೇ ಹತೋಟಿಗೆ ಬರುತ್ತದೆ.
ನಮ್ಮ ಸನ್ಮಾನ್ಯ ಮುಖ್ಯಮಂತ್ರಿಗಳು, ಶ್ರೀಮಾನ್ ಗೃಹ ಸಚಿವರು, ವಿಧಾನಸಭೆಯಲ್ಲೂ ಚೆನ್ನಾಗಿ 'ಅಭಿನಯಿಸುವ' ನಟಿಯರು, ಕಾನೂನಿನ ಮಾತನಾಡುವ ಪೊಲೀಸರು- ಲಾಯರ್‌ಗಳು... ಈ ಎಲ್ಲರಿಗೂ, ಬಾಲ್ಯದಲ್ಲಿ ನಾನು ಕಂಡದ್ದಾಗಿ ವಿವರಿಸಿದ್ದೇನಲ್ಲ; ಅಂಥ ಸಂದರ್ಭಗಳನ್ನು ಪ್ರತ್ಯಕ್ಷ ಕಂಡಿದ್ದಾರೆ. ಕಠಿಣ ಶಿಕ್ಷೆ ಕೊಡದಿದ್ದರೆ ಖದೀಮರು ಬುದ್ಧಿ ಕಲಿಯುವುದಿಲ್ಲ ಎಂದು ಅವರಿಗೂ ಗೊತ್ತಿದೆ. ಹಾಗಿದ್ದರೂ, ಹೆಣ್ಣು ಮಕ್ಕಳ ಮೇಲೆ ಮೇಲಿಂದ ಮೇಲೆ ಅತ್ಯಾಚಾರದಂಥ ಪೈಶಾಚಿಕ ಕೃತ್ಯಗಳು ನಡೆಯುತ್ತಲೇ ಇದ್ದರೂ, ನೀಚರಿಗೆ ಕಠಿಣ ಶಿಕ್ಷೆ ವಿಧಿಸಲು ಹಿಂದೆ ಮುಂದೆ ನೋಡುತ್ತಾ ಕೂತು ಬಿಟ್ಟಿದ್ದಾರೆ. ವಿಪರ್ಯಾಸವೆಂದರೆ ಇದೇ ಅಲ್ಲವೆ?


- ನಾನು ಪ್ರಣತಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಒಳ ಮೀಸಲಾತಿಗೆ ಮೂರು ಸೂತ್ರ: ವಿಶೇಷ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ; ಯಾರಿಗೆ ಎಷ್ಟು?

ಅದಕ್ಕಾಗಿ ನಾನು ತಮನ್ನಾ ಭಾಟಿಯಾ ಕಾಲಿಗೆ ಬೀಳಲು ಸಿದ್ಧ: ಬಾಲಿವುಡ್ ನಟ ಅನ್ನು ಕಪೂರ್

ಮಣಿಪಾಲದಲ್ಲಿ ಇದೆಂಥಾ ಅಸಹ್ಯ: ರಸ್ತೆಯಲ್ಲೇ ರೊಮ್ಯಾನ್ಸ್; ಉತ್ತರ ಭಾರತ ಜೋಡಿಗೆ ಕನ್ನಡದಲ್ಲೇ ಉಗಿದ ಸ್ಥಳೀಯರು, Video!

ರಾಘವ್ ಚಡ್ಡಾ, ಇತರರು ಎಎಪಿ ಬಿಟ್ಟು ಹೋಗುತ್ತಿರಲಿಲ್ಲ...: ಅಣ್ಣಾ ಹಜಾರೆ ಸ್ಫೋಟಕ ಹೇಳಿಕೆ

DC ಕ್ಯಾಂಪ್ ನಲ್ಲಿ ಭಯಾನಕ ದೃಶ್ಯ: ಯುವ ಆಟಗಾರನ ಮುಖಕ್ಕೆ ಬಡಿದ ಬಾಲ್; ಗಂಭೀರ ಗಾಯ, ಆಸ್ಪತ್ರೆ ಶಿಫ್ಟ್! Video

SCROLL FOR NEXT