ಅಭಿವೃದ್ಧಿಯ ಅರ್ಥಕ್ಕೆ ಮೂರು ಸವಾಲುಗಳು
'ನಮ್ಮ ಕಾಲವೇ ಚೆನ್ನಾಗಿತ್ತು' ಎಂದು ಹಿರಿಯರು ತಮ್ಮ ಕಾಲವನ್ನು ನೆನೆಸಿಕೊಂಡು ಗತ ವೈಭವವನ್ನು ಮೆಲುಕು ಹಾಕುವುದಿದೆ...
'ನಮ್ಮ ಕಾಲವೇ ಚೆನ್ನಾಗಿತ್ತು' ಎಂದು ಹಿರಿಯರು ತಮ್ಮ ಕಾಲವನ್ನು ನೆನೆಸಿಕೊಂಡು ಗತ ವೈಭವವನ್ನು ಮೆಲುಕು ಹಾಕುವುದಿದೆ. ಒಂದಿಷ್ಟು ದಶಕಗಳ, ಶತಮಾನಗಳ ಹಿಂದೆ ಹೋದರೆಷ್ಟು ಚೆನ್ನ ಎಂದು ತಾವು ಕಂಡ, ಇಲ್ಲವೇ ಕೇಳಿದ ಆ ಬಣ್ಣನೆಗಳ ನೆನಪಿನಲ್ಲಿ ಜಾರಿ ಹೋಗುತ್ತಾರೆ. ಇದೆಲ್ಲಾ ಭ್ರಮೆ, ಅಪ್ರಸ್ತುತ ಎಂದು ಪ್ರಗತಿಪರರಿಗೆ ಅನಿಸುವುದುಂಟು. ಆದರೆ ನಮ್ಮ ದೇಶದ ಖ್ಯಾತ ಪರಿಸರವಾದಿ ಅನಿಲ್ ಅಗರವಾಲ್ 21ನೇ ಶತಮಾನದ ನಮ್ಮ ದೇಶ 15ನೇ ಶತಮಾನದಲ್ಲಿದ್ದ ಹಾಗಿದ್ದರೆ ಎಷ್ಟು ಚೆನ್ನ ಎಂದು ಅಭಿಪ್ರಾಯಪಟ್ಟಿದ್ದಾರೆಂದರೆ ನಿಮಗೆ ಅಚ್ಚರಿಯಾಗಬಹುದು. ಆದರೆ ಅಗರವಾಲ್ ಈ ಮಾತನ್ನು ಹೇಳಿದ ಮಾತ್ರಕ್ಕೆ ಅವರು ಪ್ರಗತಿಯ ವಿರೋಧಿಗಳು, ದೇಶವನ್ನು ಹಿನ್ನಡೆಸುವ ಮಾತಾಡಿದ್ದಾರೆ ಎಂದಲ್ಲ. ಅವರು ಈ ಮಾತನ್ನು ಹೇಳಿರುವುದು ನಮ್ಮ ಪ್ರಾಕೃತಿಕ ಸಂಪನ್ಮೂಲಗಳನ್ನು ರಕ್ಷಿಸಿಕೊಳ್ಳುವ ದೃಷ್ಟಿಯಿಂದ.
ಅನಿಲ್ ಅಗರವಾಲ್ ಪ್ರಕಾರ ಇದು ಭಾರತಕ್ಕಷ್ಟೇ ಅಲ್ಲ, ಪ್ರಪಂಚದ ಬಹುತೇಕ ಅಭಿವೃದ್ಧಿಶೀಲ ದೇಶಗಳಿಗೂ ಅನ್ವಯವಾಗುತ್ತದೆ. ನಮ್ಮ ಆಡಳಿತ ಸಂಸ್ಥೆಗಳು ಸುಮಾರು 150 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ವಸಾಹತುಶಾಹೀ ಮಾದರಿಗಳು. ಬ್ರಿಟಿಷರ ಆಳ್ವಿಕೆಗಿಂತ ಮುಂಚೆ ನಮ್ಮ ದೇಶ ಅತ್ಯಂತ ಶ್ರೀಮಂತ ರಾಷ್ಟ್ರವಾಗಿತ್ತು. ಹಾಗಾಗಿಯೇ ಪರಕೀಯರು ನಮ್ಮ ಮೇಲೆ ಆಕ್ರಮಣ ನಡೆಸಿ ಇಲ್ಲಿನ ಸಂಪತ್ತನ್ನು ದೋಚಿದ್ದು. ವಸಾಹತುಶಾಹಿಯ ಪ್ರಭಾವದಿಂದ ನಮ್ಮ ಸಂಪತ್ತು ನಾಶವಾಯಿತು. ಶೇ.90ರಷ್ಟಿದ್ದ ಅಕ್ಷರಸ್ಥರ ಪ್ರಮಾಣ ಕುಸಿದು ಬಿತ್ತು. ಇಂದಿಗೂ ನಾವು ಆ ವಸಾಹತುಶಾಹೀ ಮಾದರಿಯ ಆಡಳಿತದ ಗುಂಗಿನಿಂದ ಪೂರಾ ಹೊರಬರಲಾಗಿಲ್ಲ. ಸ್ವಾತಂತ್ರ್ಯಬಂದು 6 ದಶಕಗಳು ಕಳೆದರೂ ಮತ್ತೆ ನಮ್ಮನ್ನ ನಾವು ಸಶಕ್ತರನ್ನಾಗಿ ಪುನರ್ ರೂಪಿಸಿಕೊಳ್ಳಲಾಗಿಲ್ಲ. ಆದರೆ ಒಂದು ವಿಷಯ ನಮ್ಮನ್ನು ಆಶ್ಚರ್ಯಗೊಳಿಸುತ್ತದೆ. 200 ವರ್ಷಗಳ ಹಿಂದೆ ಅತ್ಯಂತ ಕ್ರೂರರೂ, ಭ್ರಷ್ಟರೂ ಆದ ರಾಜರು ಆಳುತ್ತಿದ್ದರೂ ರಾಜ್ಯಗಳು ಸಂಪದ್ಭರಿತವಾಗಿದ್ದವು. ಸಾಕ್ಷರತೆಯ ಪ್ರಮಾಣ ಹೆಚ್ಚಿತ್ತು, ಇದಕ್ಕೆ ಕಾರಣ ಪ್ರಾಕೃತಿಕ ಸಂಪನ್ಮೂಲಗಳು ಈಗಿನಂತೆ ಆಡಳಿತ ಸಂಸ್ಥೆಗಳ ಕೈಲಿರಲಿಲ್ಲ. ಆಗ ಜನರೇ ಸ್ಥಳಿಯ ಸಂಪನ್ಮೂಲಗಳ ಮೇಲೆ ಹಿಡಿತ ಹೊಂದಿದ್ದರು. ಅದನ್ನು ಮುಕ್ತವಾಗಿ ಬಳಸುವ ಅವಕಾಶವಿದ್ದರೂ ವಿವೇಚನೆಯಿಂದ ಬಳಸುತ್ತಿದ್ದರು. ಯಾವೊಂದು ಕೆರೆಯನ್ನೂ ರಾಜ ಕಟ್ಟಿಸಲಿಲ್ಲ. ಅವೆಲ್ಲ ಜನ ತಾವೇಗೇ ತಮ್ಮದೇ ಸಹಭಾಗಿತ್ವದಲ್ಲಿ ಕಟ್ಟಿದ್ದು. ಅವನ್ನು ಅವರು ಅತ್ಯಂತ ಸಮರ್ಪಕವಾಗಿ ಮಾಲಿನ್ಯವಾಗದಂತೆ ನಿರ್ವಹಿಸುತ್ತಿದ್ದರು. ಅದೊಂದು ಅತ್ಯಂತ ಪ್ರಜಾತಾಂತ್ರಿಕ, ವಿಕೇಂದ್ರೀಕೃತ ವ್ಯವಸ್ಥೆ ಆಗಿತ್ತು. ಆದರೆ ಇವತ್ತು ಸರ್ಕಾರಗಳು, ಆಡಳಿತ ಸಂಸ್ಥೆಗಳು ಜನರನ್ನು ದೂರವಿಟ್ಟು ಪ್ರಾಕೃತಿಕ ಸಂಪನ್ಮೂಲಗಳ ಮೇಲೆ ನಿಯಂತ್ರಣ ಸಾಧಿಸಿವೆ. ಈ ಸಂಸ್ಥೆಗಳು ಸಂಪನ್ಮೂಲಗಳ ನಿರ್ವಹಣೆಯಲ್ಲಿ ಅಸಮರ್ಥ, ಭ್ರಷ್ಟ ಮತ್ತು ಸ್ಪರ್ಧಾತ್ಮಕವಲ್ಲದವು ಎಂಬುದನ್ನು ಪದೇ ಪದೆ ಸಾಬೀತು ಮಾಡಿವೆ. ಹಾಗಾಗಿ ಪರಿಸರ ಮತ್ತು ಪ್ರಾಕೃತಿಕ ಸಂಪನ್ಮೂಲಗಳನ್ನು ಕಾಪಾಡುವಂತಹ ಆಡಳಿತ ವ್ಯವಸ್ಥೆ ಮತ್ತೆ ಹಿಂದಿರುಗೀತೇ ಎಂದು ಎದುರುನೋಡಬೇಕಿದೆ.
ಅನಿಲ್ ಅಗರವಾಲ್ 21ನೇ ಶತಮಾನದಲ್ಲಿ ಮಾನವೀಯತೆ ಎದುರಿಸಬೇಕಾದ ಮೂರು ಸವಾಲುಗಳ ಬಗ್ಗೆ ಗಮನ ಸೆಳೆದಿದ್ದರು. ಮೊದಲನೆಯದು ಪರಿಸರ ಮಾಲಿನ್ಯ ನಿಯಂತ್ರಣದ ಸವಾಲು. ಆರ್ಥಿಕ ಬೆಳವಣಿಗೆಯಷ್ಟೇ ಕ್ಷಿಪ್ರವಾಗಿ ಮಾಲಿನ್ಯದ ಪ್ರಮಾಣವೂ ಏರುತ್ತಿದೆ ಎಂಬುದನ್ನು ಅವರು ಗಮನಿಸಿದ್ದರು. ಎರಡನೇ ಮಹಾಯುದ್ಧದ ನಂತರ ಉಂಟಾದ ಆರ್ಥಿಕ ಸಂಚಲನದಿಂದಾಗಿ ಮತ್ತು ಕೈಗಾರಿಕೀಕರಣದಿಂದಾಗಿ 15 ವರ್ಷಗಳೊಳಗೆ ಪಶ್ಚಿಮ ಜಗತ್ತು ಅಸಾಮಾನ್ಯವಾಗಿ ಮಾಲಿನ್ಯಕ್ಕೊಳಗಾಯಿತು. 60ರ ದಶಕದ ನಂತರವಷ್ಟೇ ಪರಿಸರದ ಬಗ್ಗೆ ಕಾಳಜಿ ಬೆಳೆಯಲಾರಂಬಿಸಿದ್ದು. ತೀರಾ ಆತಂಕದ ಸಂಗತಿ ಎಂದರೆ ಯಾವ ಅಭಿವೃದ್ಧಿ ಹೊಂದಿದ ದೇಶಗಳು ಪರಿಸರ ಮಾಲಿನ್ಯದ ವಾಸ್ತವತೆಯನ್ನು ಅರಿತು ಮಾಲಿನ್ಯ ನಿಯಂತ್ರಣಕ್ಕೆ ಕಡಿವಾಣ ಹಾಕಲು ಪ್ರಾರಂಭಿಸಿದವೋ ಆ ನಂತರದ ವರ್ಷಗಳಲ್ಲಿ ಅಭಿವೃದ್ಧಿಶೀಲ ದೇಶಗಳು ಅತಿ ಹೆಚ್ಚು ಮಾಲಿನ್ಯ ಹೊರಸೂಸತೊಡಗಿದವು. ಇದನ್ನೆಲ್ಲಾ ಬದಲಾಯಿಸಬೇಕಾದ ಹೊಣೆ ನಾಗರಿಕ ಸಮಾಜದ ಮೇಲಿದೆ. ಜನರಿಗೆ ಪರಿಸರ ಮಾಲಿನ್ಯದ ಬಗ್ಗೆ ಹೆಚ್ಚು ಹೆಚ್ಚು ತಿಳಿವಳಿಕೆ ನೀಡಬೇಕಿದೆ. ನಾವು ಎಷ್ಟು ಶೀಘ್ರವಾಗಿ ಇದಕ್ಕೆ ನಿಯಂತ್ರಣವನ್ನು ಹೇರುತ್ತೇವೆಯೋ ಅಷ್ಟು ವೇಗವಾಗಿ ನಾವು ಪರಿಸರ ಮಾಲಿನ್ಯದ ಮೇಲೆ ನಿಯಂತ್ರಣ ಸಾಧಿಸಬಹುದು.. ನಾಗರಿಕ ಸಮಾಜ ವ್ಯವಸ್ಥಿತವಾಗಿ ಇದಕ್ಕೆ ಕೂಡಲೆ ಸನ್ನದ್ಧವಾಗದಿದ್ದಲ್ಲಿ 10 ವರ್ಷಗಳಲ್ಲಿ ಆಗಬಹುದಾದ ಬದಲಾವಣೆಗೆ 40 ವರ್ಷ ಬೇಕಾಗಬಹುದು, ಇದು ತೀರಾ ದುಬಾರಿ ಎಂದು ಅನಿಲ್ ಎಚ್ಚರಿಸಿದ್ದರು. ಎರಡನೆಯ ಸವಾಲೆಂದರೆ ರೈತನ ಭೂಮಿ ಅವನತಿ ಹೊಂದದಂತೆ ತಡೆಯುವುದು. ಈ ದೇಶದ ದೊಡ್ಡ ಸಮಸ್ಯೆ ಎಂದರೆ ಪರಿಸರದೊಂದಿಗೆ ನೇರ ಸಂಬಂಧ ಹೊಂದಿರುವಂತಹ ಬಡತನ. 21ನೇ ಶತಮಾನದ ಆರಂಭದಲ್ಲಿ ಜಾಗತೀಕರಣದಿಂದ ಅಪಾರ ಸಂಪತ್ತು ವೃದ್ಧಿಯಾಗುತ್ತದೆ. ಈ ಸಂಪತ್ತು ಮಾರುಕಟ್ಟೆ ಕೌಶಲ ಹೊಂದಿಲ್ಲದ ಕನಿಷ್ಠ ಒಂದು ಬಿಲಿಯನ್ ಜನರನ್ನು ಆರ್ಥಿಕ ಮತ್ತು ಸಾಮಾಜಿಕ ಮುಖ್ಯವಾಹಿನಿಯಿಂದ ಬೇರ್ಪಡಿಸುತ್ತದೆ ಎಂದು ಅನಿಲ್ ಭವಿಷ್ಯ ನುಡಿದಿದ್ದರು. ಅವರ ಮಾತು ಸತ್ಯವಾಗಿದೆ. ನಮ್ಮ ವಿಷಯದಲ್ಲಿ ದೊಡ್ಡ ಜನಸಮೂಹ ಹಳ್ಳಿಗಳಲ್ಲಿ ವಾಸಿಸುತ್ತದೆ. ಆದ್ದರಿಂದ ಅವರ ಕೃಷಿ, ಹೈನುಗಾರಿಕೆ ಇತ್ಯಾದಿ ಚಟುವಟಿಕೆಗಳು ಮತ್ತು ಅತಿ ಮುಖ್ಯವಾದ ಆರ್ಥಿಕ ಆದಾಯ ಅವರ ಜಮೀನಿನ ಉತ್ಪಾದನಾ ಮಟ್ಟವನ್ನೇ ಅವಲಂಭಿಸಿರುತ್ತದೆ. ಕೃಷಿ ಉತ್ಪಾದನೆ ಕುಸಿದರೆ ಅವರ ಬದುಕೇ ಅಪಾಯಕ್ಕೆ ಸಿಲುಕುತ್ತದೆ. ಆದ್ದರಿಂದ ರೈತರ ಭೂಮಿ ಸಂರಕ್ಷಣೆ ಅತಿ ಮುಖ್ಯ ಎಂದು ಅನಿಲ್ ಅಭಿಪ್ರಾಯಪಡುತ್ತಾರೆ. ಮೂರನೆಯ ಸವಾಲು ಪರಿಸರ ಜಾಗತೀಕರಣ. ಈ ಪರಿಸರ ಜಾಗತೀಕರಣವೂ ಅಪಾರ ಪ್ರಮಾಣದ ಸಂಪತ್ತನ್ನು ಸೃಷ್ಟಿಸುತ್ತದೆ. ಸಂಪತ್ತು ಸೃಷ್ಟಿಯ ಭರದಲ್ಲಿ ನಾವು ಯಾವ ಒಂದು ದೇಶದಲ್ಲಿ ಪರಿಸರಕ್ಕೆ ಹಾನಿಕರವಾದ್ದನ್ನು ಏನೇ ಮಾಡಿದರೂ ಅದು ಮತ್ತೊಂದು ದೇಶದ ಮೇಲೆ ಪ್ರಭಾವ ಬೀರುತ್ತದೆ. ನಮ್ಮ ಒಂದೇ ದೇಶದ ಪರಿಸರ ನಿರ್ವಹಣೆಯ ಮೂಲಕ ನಾವು ಇಡೀ ಭೂಮಿಯನ್ನು ಸುಸ್ಥಿತಿಯಲ್ಲಿ ಇಡಲು ಸಾಧ್ಯವಿಲ್ಲ. ನಾವು ಇಡೀ ವಿಶ್ವವನ್ನು ನಿರ್ವಹಿಸಬೇಕು. ಅನಿಲ್ ಅಗರವಾಲ್ ಅವರ ಪ್ರತಿಪಾದನೆಗಳು ಇಂದಿಗೂ ಪ್ರಸ್ತುತ ಎನಿಸುತ್ತವೆ. ವಾತಾವರಣವನ್ನು ಸರ್ವರಿಗೂ ಸೇರಿದ ಜಾಗತಿಕ ಆಸ್ತಿಯಾಗಿ ಪರಿಗಣಿಸಿ ತಲಾ ಹೊರಸೂಸುವ ಹಕ್ಕು ಮತ್ತು ಹೊರಸೂಸುವ ಸಮಾನ ಜಾಗವನ್ನು ನಿಗದಿಪಡಿಸಬೇಕು. ಯಾವ ದೇಶ ಹೆಚ್ಚು ಅನಿಲ ಹೊರಸೂಸುತ್ತದೆಯೋ ಅದು ನಿಗದಿತ ಮಟ್ಟದಲ್ಲಿ ಹೊರಸೂಸದಿರುವ ದೇಶಗಳಿಗೆ ಹೊರಸೂಸುವ ಬಾಡಿಗೆ ನೀಡಬೇಕು. ಎರಡೂ ಗುಂಪಿನವರು ಸ್ವಯಂ ನಿಯಂತ್ರಣಕ್ಕೆ ಒಳಪಟ್ಟು ಸಮತೋಲನ ವ್ಯವಸ್ಥೆಯೊಂದನ್ನು ಜಾರಿಗೆ ತರಬೇಕು ಎಂದು ಅವರು ಪ್ರತಿಪಾದಿಸಿದ್ದರು. ಕೂಪನ್ ಹೇಗನ್ ವಾತಾವರಣ ಬದಲಾವಣೆ ಕುರಿತ ಶೃಂಗಸಭೆ ಮುಗಿದ ಬೆನ್ನಲ್ಲೇ ಜನವರಿ 2, 2002ರಂದು ಅನಿಲ್ ವಿಧಿವಶರಾದರು. ಪ್ರತಿವರ್ಷ ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಅನಿಲ್ ಅಗರವಾಲ್ ಅವರನ್ನು ಸ್ಮರಿಸಿಕೊಳ್ಳುವುದು ಹೆಚ್ಚು ಪ್ರಸ್ತುತ ಎನಿಸುತ್ತದೆ.
-ತುರುವೇಕೆರೆ ಪ್ರಸಾದ್
turuvekereprasad@gmail.com