ಬೇರುಗಳಲ್ಲಿದ ನಾವು ಸಮಾನ ದುಃಖಿಗಳು
ಹೌದು. ಮುಂಗಾರಿನ ಅಬ್ಬರದ ಮಳೆಯ ಆಗಮನಕ್ಕೆ ಮುಂಚೆಯೇ ಆಗೀಗ...
ಹೌದು. ಮುಂಗಾರಿನ ಅಬ್ಬರದ ಮಳೆಯ ಆಗಮನಕ್ಕೆ ಮುಂಚೆಯೇ ಆಗೀಗ ಬಂದ ಮಳೆಗಳಿಗೂ ನನ್ನ ವಂಶಸ್ಥರು ರಪ್ಪೆಂದು ನೆಲಕಚ್ಚುತ್ತಿದ್ದಾರೆ. ಶ್ರೀನಿವಾಸ ನಗರದಲ್ಲಿ ಮಳೆಗೆ ಮರ ಬಿದ್ದ ಹೊಡೆತಕ್ಕೆ ವಿದ್ಯುತ್ ಕಂಬಗಳೆಲ್ಲ ಮುರಿದುಬಿದ್ದವು, ತಂತಿಗಳೆಲ್ಲ ಹರಿದುಬಿದ್ದವು ಎಂಬೆಲ್ಲ ಸುದ್ದಿಗಳನ್ನು ಓದಿಕೊಂಡಿರುತ್ತೀರಿ. ರಾಜಭವನದ ರಸ್ತೆಯಲ್ಲಿ ದೊಡ್ಡಮರವೊಂದು ಧರೆಗುರುಳಿದ್ದರಿಂದ ಸಂಚಾರ ವ್ಯವಸ್ಥೆ ಏರುಪೇರು ಎಂಬೆಲ್ಲ ವಿದ್ಯಮಾನಗಳ ಮೇಲೆ ಕಣ್ಣಾಡಿಸಿಯೇ ಇರುತ್ತೀರಿ.
ನನಗೆ ಗೊತ್ತು ನೀವು ಹೆದರಿದ್ದೀರಿ. ಇಷ್ಟುದಿನ ನನ್ನ ನೆರಳಲ್ಲಿ ಬುರುಬುರನೇ ಹೊಗೆ ಚಿಮ್ಮಿಸಿ ಸಾಗುವಾಗ ಕತ್ತೆತ್ತಿ ಧನ್ಯವಾದದ ದೃಷ್ಟಿಯೊಂದನ್ನು ಹಾಯಿಸದಿದ್ದ ನೀವೆಲ್ಲ ಈಗ, 'ಅಯ್ಯೋ. ಸಾಯಂಕಾಲದ ಮಳೆಯಲ್ಲಿ ನಾವು ವಾಹನದಲ್ಲಿ ಸಾಗುತ್ತಿರುವಾಗಲೇ ಮರ ಮಗುಚಿಕೊಂಡರೆ ಜೀವದ ಗತಿಯೇನು' ಎಂದೆಲ್ಲ ಕಂಪಿಸಿದ್ದೀರಿ. ಪತ್ರಿಕೆಯಲ್ಲಿ ಪ್ರಕಟವಾದ ಮರಬಿದ್ದ ಚಿತ್ರವನ್ನು ನೋಡುತ್ತ, ಅದರಡಿ ನಿಲ್ಲಿಸಿದ್ದ ಕಾರು ನುಜ್ಜುಗುಜ್ಜಾಗಿದ್ದನ್ನು ಗಮನಿಸಿ ಮಮ್ಮಲ ಮರುಗಿದ್ದೀರಿ. ನಿಮ್ಮ ಆತಂಕಗಳೆಲ್ಲ ದಿಟವೇ. ಆ ಬಗ್ಗೆ ಮಾತಿಲ್ಲ. ಆದರೆ ಈ ಹೊತ್ತಿನಲ್ಲಿ ನೀವು ನನ್ನ ಕತೆಯನ್ನೂ ಕೇಳಬೇಕು.
ನನ್ನ ಕತೆಯಲ್ಲಿ ನಿಮ್ಮೆಲ್ಲರ ವ್ಯಥೆಯೂ ಇದೆ. ಏಕೆಂದರೆ ಇದು ಬೇರು ಕಳೆದುಕೊಂಡವರ ತಲ್ಲಣ! ಈ ತಳಮಳ ನನ್ನದೂ ಹೌದೂ, ನಿಮ್ಮದೂ. ಮಳೆ ಬಂದೊಡನೆ ಹಾದಿಪಕ್ಕದಿಂದ ಹೀಗೇಕೆ ಬುಡಮೇಲಾಗಿ ಬಿದ್ದುಬಿಡುತ್ತೇನೆ ಎಂದರೆ ನನಗೆ ಬೇರುಗಳು ಬಲವಾಗಿಲ್ಲ. ಬಲವಾಗುವುದಕ್ಕೆ ಇಲ್ಲಿ ಯಾವ ಅವಕಾಶವೂ ಇಲ್ಲ. ಪೈಪು, ಚರಂಡಿ, ಇನ್ಯಾವುದೋ ವಯರು.. ಹೀಗೆ ನೆಲದಡಿಯ ಅಸಂಖ್ಯ ಜಾಲಗಳು ನಿಮ್ಮ ಬದುಕಿನ ಸುಖಕ್ಕೆಂದು ನನ್ನ ಬೇರುಗಳನ್ನು ಕೊರೆದಿವೆ. ಅವುಗಳನ್ನು ಮೀರಿ ಅತ್ತಿತ್ತ ಹೇಗೋ ಬೇರು ಚಾಚಿಬಿಡೋಣ ಎಂದುಕೊಂಡರೆ ಹತ್ತೆಂಟು ಕಟ್ಟಡಗಳ ಕಲ್ಲಿನ ಅಡಿಪಾಯಗಳು ನನ್ನನ್ನು ಅಧೀರಗೊಳಿಸಿವೆ. ಬೇರೆ ಇಲ್ಲದ ನಾನು ಎಲ್ಲಿಂದ ಹೀರಲಿ ಜೀವಸತ್ವವನ್ನು? ಮೇಲಿಂದಲಾದರೂ ಜೀವಜಲ ಇಳಿಸಿಕೊಂಡು ಬೇರಿಗೆ ತಂದುಕೊಳ್ಳೋಣವೆಂದರೆ ಅದಕ್ಕೂ ಅವಕಾಶವೆಲ್ಲಿದೆ. ಮರದ ಬುಡದಲ್ಲೆಲ್ಲ ಕಾಂಕ್ರೀಟು ಮೆತ್ತಿ ನೀರಿಂಗದಂತೆ ಮಾಡಿ ನಿಮ್ಮ ಸೌಂದರ್ಯವರ್ಧನೆ ಮಾಡಿಕೊಂಡಿದ್ದೀರಿ. ಬೇರಿಲ್ಲದವರು ಎಷ್ಟು ದಿನ ಅಂತ ದೃಢವಾಗಿ ನಿಲ್ಲುವುದಕ್ಕೆ ಸಾಧ್ಯ? ನಿಶ್ಶಕ್ತರಾಗಿ ನೆಲ ಬಡಿಯುತ್ತೇವೆ ನಾವು ಬಿರುಮಳೆ ಬಂದೊಡನೆ.
ನನಗನ್ನಿಸುತ್ತೆ ಈ ಬೇರಿಲ್ಲದ ಸಮಸ್ಯೆ ನನ್ನದಷ್ಟೇ ಅಲ್ಲ, ಮೂಲತಃ ನಿಮ್ಮದು. ಹೆಂಗಾದರೂ ಹಣ ಗಳಿಸಿ ಕಟ್ಟೆಹಾಕಬೇಕೆಂದು ಎಲ್ಲೆಲ್ಲಿಂದಲೋ ಬಂದು ಜಮೆಯಾಗಿರುವ ನಿಮ್ಮಲ್ಲಿ ಹೆಚ್ಚಿನವರಿಗೂ ಬೇರುಗಳಿಲ್ಲ. ಇದು ನಿಮ್ಮ ಭೋಗಭೂಮಿ. ಈ ನೆಲವು ನಿಮ್ಮದೆಂದು ನೀವು ನಿಜಕ್ಕೂ ಬೇರುಬಿಟ್ಟು ಅಪ್ಪಿಕೊಂಡಿಲ್ಲ. ಹಾಗೆಂದೇ ನಿಮಗೆ ಸಂವೇದನೆಯ ಸತ್ವಗಳು ದಕ್ಕಿಲ್ಲ. ಮೂವತ್ತು ದಿನದಲ್ಲಿ ಇಂಗ್ಲಿಷ್ ಕಲಿಯಿರಿ ಎಂಬ ಜಾಹೀರಾತಿನ ತುಂಡನ್ನು ನನ್ನ ಕಾಂಡಕ್ಕಿಟ್ಟು ಮೊಳೆ ಹೊಡೆದು ಹೋಗಿಬಿಡುತ್ತೀರಿ ನೀವು. ಮೋಲ್ನೋಟಕ್ಕೆ ಎಷ್ಟೇ ಸ್ಥಿತಿವಂತರಂತೆಕಾಣುತ್ತಿದ್ದರೂ ಕಂಪಿಸಿ ನೆಲಕ್ಕೊರಗಿಬಿಡುತ್ತೀರಿ ನೀವು ಚಿಕ್ಕದೊಂದು ರಿಸೆಷನ್ಗೆ, ಸಿಗದ ಮಾರ್ಕ್ಸಿಗೆ, ಬಾರದ ಸಂಬಳ ಹೈಕಿಗೆ. ಪಾಪ, ಥೇಟು ನನ್ನಂತೆಯೇ ಬೇರುಗಳಿಲ್ಲ ನಿಮಗೆ.
ಹೇಳಪ್ಪಾ, ಬೇರುಗಳನ್ನು ಬೆಳೆಸಿಕೊಳ್ಳುವುದಕ್ಕೆ ನಾನು- ನೀನು ಸೇರಿ ಮಾಡುವುದೇನನ್ನು?
-ಅಶ್ವಹೃದಯ