ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಪ್ರಾದೇಶಿಕ ಇತಿಹಾಸಕ್ಕೆ ಪಠ್ಯದಲ್ಲಿರಲಿ ಪ್ರಾಧಾನ್ಯ

ಕೇಂದ್ರ ಮಾನವ ಸಂಪನ್ಮೂಲ ಸಚಿವರಾದ ಸ್ಮೃತಿ ಇರಾನಿ ಅವರು ಶಾಲೆಯ ಪಠ್ಯಕ್ರಮದಲ್ಲಿ ವೇದೋಪನಿಷತ್ತುಗಳ...

Rashmi Kasaragodu
Updated On : 9 Jun 2014, 12:52 pm

ಕೇಂದ್ರ ಮಾನವ ಸಂಪನ್ಮೂಲ ಸಚಿವರಾದ ಸ್ಮೃತಿ ಇರಾನಿ ಅವರು ಶಾಲೆಯ ಪಠ್ಯಕ್ರಮದಲ್ಲಿ ವೇದೋಪನಿಷತ್ತುಗಳ ವಿಷಯಗಳ ಒಳಗೂಡಿಕೆಯಾಗಬೇಕು ಅನ್ನುವ ಮಾತಾಡಿರುವುದು ವರದಿಯಾಗಿದೆ. ವೇದೋಪನಿಷತ್ತುಗಳಲ್ಲಿ ಅಪಾರವಾದ ಜ್ಞಾನ ಅಡಗಿರುವುದು ದಿಟವೇ. ಅದರಲ್ಲಿನ ಒಳಿತು ನಮ್ಮ ಸಮಾಜವನ್ನು ತಲುಪಬೇಕು ಅನ್ನುವ ನಿಲುವು ಸರಿಯಾಗಿದೆಯಾದರೂ, ಬಹುಭಾಷಾ - ಬಹುಸಂಸ್ಕೃತಿಯಿಂದ ವೈವಿಧ್ಯಮಯವಾದ ಭಾರತ ದೇಶದಲ್ಲಿ ಅದನ್ನು ಹೇಗೆ ಸಾಧಿಸಬೇಕು ಅನ್ನುವ ಬಗ್ಗೆ ಸಮಗ್ರ ಚಿಂತನೆಯ ಅಗತ್ಯವಿದೆ.
'ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಕಟ್ಟಲಾರ' ಎನ್ನುವ ನಾಣ್ಣುಡಿ ಇದೆ. ಆದರೆ ಏಕರೀತಿಯ ಪಠ್ಯಕ್ರಮದಿಂದ ಈ ಉದ್ದೇಶ ಈಡೇರಿಸಲಾದೀತೇ?  ಮಕ್ಕಳ ಸುತ್ತಲ ಪರಿಸರದಲ್ಲಿರುವುದೇ ಪಠ್ಯಕ್ರಮದಲ್ಲೂ ಇರತಕ್ಕದ್ದು, ಮತ್ತು ಆ ಮೂಲಕವೇ ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಹುಟ್ಟಿಸಬಹುದು ಎನ್ನುತ್ತಾರೆ ಶಿಕ್ಷಣ ತಜ್ಞರು. ಅಂತೆಯೇ ಸಾಂಸ್ಕೃತಿಕವಾಗಿ ಭಾರತ ದೇಶ ಹಲವಾರು ವೈವಿಧ್ಯಗಳನ್ನು ಹೊಂದಿದೆ. ಬೆಂಗಳೂರಿನ ಬಸವನಗುಡಿಯ ಕಡಲೇಕಾಯಿ ಪರಿಶೆ ಇಲ್ಲಿನ ಮಂದಿಗೆ ಒಂದು ಹಬ್ಬವೇ ಸರಿ. ಆದರೆ ಇದನ್ನು ಒಡಿಶಾದಲ್ಲೋ, ಬಿಹಾರದಲ್ಲೋ ಹೇಳಹೊರಟರೆ ಅಲ್ಲಿನ ಮಕ್ಕಳಿಗೆ ಅದು ಏನೊಂದೂ ತಿಳಿಯುವುದಿಲ್ಲ. ಏಕೆಂದರೆ ಅದು ಅವರ ಪರಿಸರದಲ್ಲಿ ಕಂಡುಬರುವ ವಿಷಯವಲ್ಲ. ಹೀಗಿರುವಾಗ ಒಂದೇ ಪಠ್ಯಕ್ರಮದಲ್ಲಿ ದೇಶದ ಅತ್ಯಂತ ವೈವಿಧ್ಯಮಯ ಪರಿಸರವನ್ನು ಬಣ್ಣಿಸಲು ಸಾಧ್ಯವಾಗುವುದಿಲ್ಲ. ಸಿಬಿಎಸ್ಇ ಪಠ್ಯಕ್ರಮದ ಮೂಲಕ ದೇಶದ ಎಲ್ಲ ಮಕ್ಕಳಿಗೆ ಒಂದೇ ತೆರನಾದ ಪಠ್ಯಕ್ರಮವನ್ನು ಸಾಧಿಸುವ ಪ್ರಯತ್ನ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಸಿಬಿಎಸ್ಇ ಪಠ್ಯಕ್ರಮದಲ್ಲಿ ಓದುವ ಮಕ್ಕಳ 6ನೇ ತರಗತಿಯ ಇತಿಹಾಸದ ಪುಸ್ತಕದಲ್ಲಿ ಗಂಗ- ಕದಂಬ- ಚಾಲುಕ್ಯ - ಹೊಯ್ಸಳ - ರಾಷ್ಟ್ರಕೂಟ - ವಿಜಯನಗರ ಹೀಗೆ ಹೆಮ್ಮರದಂತಿರುವ ಕರ್ನಾಟಕದ ಇತಿಹಾಸವನ್ನು ಕೇವಲ 2-3 ಪುಟಗಳಲ್ಲಿ ಹೇಳಿ ಮುಗಿಸಿಬಿಟ್ಟಿದ್ದಾರೆ. ತಮಿಳುನಾಡನ್ನು ಆಳಿದ ಚೋಳರ ಬಗ್ಗೆ ಹೆಚ್ಚಿನ ಮಾಹಿತಿಯಿದೆ. ಅಲ್ಲದೇ ಚೋಳರ ಕುರಿತ ಒಂದು ಅಧ್ಯಯನದ ಅಭ್ಯಾಸ (exercise) ಕೂಡಾ ಇದೆ. ಕನ್ನಡಿಗರ ಹೆಮ್ಮೆಯ ಇತಿಹಾಸವನ್ನು ಎರಡು ಪುಟಗಳಲ್ಲಿ ಮುಗಿಸಿಬಿಟ್ಟರೆ, ಅದನ್ನೇ ಓದಿ ಬೆಳೆದ ಮಕ್ಕಳ ಮನಸ್ಸಿನಲ್ಲಿ ಕರ್ನಾಟಕದ ಇತಿಹಾಸವು ಅಚ್ಚಳಿಯದೇ ಕೂರುತ್ತದೆಯೇ? ನಮ್ಮ ಇತಿಹಾಸವನ್ನು, ನಮ್ಮತನವನ್ನು ಒಳಗೂಡಿಸುವ ಪಠ್ಯಕ್ರಮದಿಂದ ಮಕ್ಕಳಲ್ಲಿ ತಮ್ಮತನದ ಕುರಿತು ಹೆಮ್ಮೆ ಮೂಡುತ್ತದೆ. ಕನ್ನಡಿಗರು ಕರ್ನಾಟಕವನ್ನು ಆಳಿದ ಸಾಮ್ರಾಜ್ಯಗಳ ಕುರಿತು ಹೆಚ್ಚು ಆಳವಾಗಿ ತಿಳಿಯಬೇಕು, ಅದರಿಂದ ಮಕ್ಕಳು ನಮ್ಮ ನಾಡು, ನುಡಿ, ಸಂಸ್ಕೃತಿಯ ಕುರಿತು ಹೆಮ್ಮೆ ಪಡುತ್ತಾರೆ. ಅಂತೆಯೇ ತಮಿಳುನಾಡಿನಲ್ಲಿ ಆಳಿದ ಸಾಮ್ರಾಜ್ಯಗಳ ಕುರಿತು ತಮಿಳುನಾಡಿನ ಮಕ್ಕಳಿಗೆ ಆಳವಾಗಿ ಕಲಿಸಬೇಕು. ಈ ರೀತಿ ಇತಿಹಾಸದ ವಿಷಯದಲ್ಲಿ ಪ್ರತಿಯೊಂದು ಪ್ರದೇಶಕ್ಕೂ ಬೇರೆಯದೇ ಆದ್ಯತೆಗಳು ಇರುತ್ತದೆ. ಕರ್ನಾಟಕದ ಇತಿಹಾಸವನ್ನು ಕರ್ನಾಟಕದಲ್ಲಿ ಅಲ್ಲದೆ ಇನ್ನೆಲ್ಲಿ ಕಲಿಸಲು ಸಾಧ್ಯ? ಜರ್ಮನಿ ದೇಶವು ಉದ್ದಗಲ ಮತ್ತು ಜನಸಂಖ್ಯೆಯಲ್ಲಿ ಕರ್ನಾಟಕಕ್ಕಿಂತ ಸ್ವಲ್ಪ ದೊಡ್ಡದು ಅಷ್ಟೇ. ಜರ್ಮನಿಯಲ್ಲಿ ಪ್ರತಿಯೊಂದು ಲ್ಯಾಂಡರ್ಗಳಿಗೂ (ರಾಜ್ಯ) ತಮ್ಮದೇ ಪಠ್ಯಕ್ರಮ ರೂಪಿಸುವ ಅವಕಾಶವಿರುತ್ತದೆ. ನಮ್ಮ ನಾಡಿನ ಉದ್ದಗಲ ಮತ್ತು ವೈವಿಧ್ಯ ನೋಡಿದಾಗ ಪ್ರತಿಯೊಂದು ರಾಜ್ಯಕ್ಕೂ ತಮ್ಮದೇ ಪಠ್ಯಕ್ರಮ ಕಟ್ಟಿಕೊಳ್ಳುವ ಸ್ವಾಯತ್ತತೆ ಇರಬೇಕು. ಆಗಲೇ ಪ್ರತಿಯೊಂದು ನುಡಿಸಮುದಾಯವೂ ತಮ್ಮತನವನ್ನು ಉಳಿಸಿಕೊಳ್ಳಲು ಸಾಧ್ಯ. ಕನ್ನಡ ನಾಡಿನ ಜನಪದ ಅತ್ಯಂತ ಶ್ರೀಮಂತವಾದುದು. ಇಲ್ಲಿನ ಪ್ರಾದೇಶಿಕ ಆಚರಣೆಗಳು ನೂರಾರು ತೆರನಾದವು. ಮಲೆನಾಡು, ಬಯಲುಸೀಮೆ , ಕರಾವಳಿ , ಉತ್ತರ ಕರ್ನಾಟಕಗಳಲ್ಲಿ ಅಲ್ಲಿಯದೇ ಆದ ನೆಲಗಟ್ಟಿದೆ. ತಮ್ಮದೇ ಆದ ಆಚರಣೆಗಳಿವೆ, ನಂಬಿಕೆಗಳಿವೆ. ಆಯಾ ಪ್ರದೇಶದಲ್ಲಿ ಓದುವ ಮಕ್ಕಳು ಅಲ್ಲಲ್ಲಿನ ಪರಿಸರಕ್ಕೆ ಅನುಗುಣವಾಗಿ ಕಲಿಯಬೇಕು.
ದೇಶದ ಒಂದು ಬಗೆಯ ಇತಿಹಾಸ ತಿಳಿಸುವ ಭರದಲ್ಲಿ ಹಲವಾರು ಪ್ರಾದೇಶಿಕ ಇತಿಹಾಸದ ಆದ್ಯತೆಗಳನ್ನು ಗೊತ್ತಿಲ್ಲದೆಯೇ ಬದಿಗೊತ್ತುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡದಿರಲಿ.

-  ವಲ್ಲೀಶ ಕುಮಾರ್ ಎಸ್.
vallishkum ar@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement