ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕೇಜ್ರಿವಾಲ್ಗೂ ಮಾಯಾವತಿಗೂ ವ್ಯತ್ಯಾಸವೆಲ್ಲಿದೆ?

ಆಪ್ನ ಬಾಸ್ ಮತ್ತು ಸ್ವಯಂಘೋಷಿತ 'ಹೊಸ ರಾಜಕೀಯದ' ಪ್ರವರ್ತಕ ಅರವಿಂದ್ ...

Rashmi Kasaragodu
Updated On : 10 Jun 2014, 1:48 am

ಆಪ್ನ ಬಾಸ್ ಮತ್ತು  ಸ್ವಯಂಘೋಷಿತ 'ಹೊಸ ರಾಜಕೀಯದ' ಪ್ರವರ್ತಕ ಅರವಿಂದ್ ಕೇಜ್ರಿವಾಲ್ ಕಳೆದ ವರ್ಷ ದೆಹಲಿಯ ಮುಖ್ಯಮಂತ್ರಿಯಾಗಿದ್ದಾಗ ತಮಗೆ ದೊರೆತ ಬಂಗಲೆಯನ್ನು ಇನ್ನೂ ಸರ್ಕಾರಕ್ಕೆ ಬಿಟ್ಟುಕೊಟ್ಟಿಲ್ಲ. ನಿಯಮಗಳ ಪ್ರಕಾರ, ಅಧಿಕಾರದಿಂದ ಕೆಳಕ್ಕಿಳಿದ 15 ದಿನಗಳೊಳಗೆ ಅವರು ತಮಗೆ ದೊರೆತ ಮನೆಯನ್ನು ಬಿಟ್ಟು ಹೊರಡಬೇಕಿತ್ತು. ಆದರೆ ಅನುಮತಿಯ ಕಾಲಮಿತಿಯನ್ನೂ ದಾಟಿ ಆ ಮನೆಯನ್ನು ಬಿಟ್ಟುಕೊಡದ ಅವರು ಪ್ರತಿ ತಿಂಗಳು 80,000 ರುಪಾಯಿ ಬಾಡಿಗೆಯನ್ನೂ ಕಟ್ಟುತ್ತಿದ್ದಾರೆ.
ಇದೆಲ್ಲ ಸರಿ, ಆದರೆ ಇದಕ್ಕೆಲ್ಲ ಅರವಿಂದ್ ಕೇಜ್ರಿವಾಲ್ ಕೊಡುವ ಕಾರಣಗಳನ್ನು ನೀವು ನೋಡಬೇಕು. ಇಷ್ಟು ದಿನವಾದರೂ ಆ ಮನೆಯನ್ನೇಕೆ ಬಿಟ್ಟಿಲ್ಲ ಎಂಬ ಪ್ರಶ್ನೆಗೆ, ತಮ್ಮ ಮಗಳ ಶಾಲಾ ಪರೀಕ್ಷೆಯಿರುವುದರಿಂದ ಹಾಗೆ ಮಾಡಬೇಕಾಗುತ್ತಿದೆ, ಅಲ್ಲದೆ ಅದರ ಬಾಡಿಗೆಯನ್ನು ಐಐಟಿಯಲ್ಲಿನ ತಮ್ಮ ಕೆಲವು ಸ್ನೇಹಿತರೇ ಕಟ್ಟುತ್ತಿದ್ದಾರೆ ಎಂದು  ನಿರುದ್ವಿಗ್ನವಾಗಿ ಸಮಜಾಯಿಶಿ ಕೊಡುತ್ತಾರೆ.   ಅವರು ಕೇಜ್ರಿವಾಲ್ ಆಗಿರುವುದರಿಂದ, ಅಂದರೆ 'ಎಂದಿಗೂ ಭ್ರಷ್ಟನಾಗದ' ರಾಜಕಾರಣಿಯಾಗಿರುವುದರಿಂದ, ಅವರ ಈ ನಡೆ ನಮ್ಮ ತಲೆಯಲ್ಲಿ ಎರಡು ಸಣ್ಣ ಆಕ್ಷೇಪಗಳನ್ನು ಹುಟ್ಟುಹಾಕುತ್ತದೆ. ಮೊದಲನೆಯದು, ಬಹುತೇಕ ಎಲ್ಲಾ ರಾಜಕಾರಣಿಗಳೂ ತಮಗೆ ಸರ್ಕಾರ ಕೊಟ್ಟ ಮನೆಗಳನ್ನು ಉಳಿಸಿಕೊಳ್ಳಲು ಒಂದಲ್ಲ ಒಂದು ಕಾರಣವನ್ನು, ನೆಪವನ್ನು ಮುಂದಿಟ್ಟು ಕಾಲಮಿತಿಯನ್ನು ಕಾಲಲ್ಲಿ ತುಳಿಯುತ್ತಾರೆ. ಇದು ಸರ್ಕಾರಿ ಅಧಿಕಾರಿಗಳ ವಿಷಯದಲ್ಲೂ ಅನ್ವಯವಾಗುತ್ತದೆ. ಕಡೇಪಕ್ಷ ಕೇಜ್ರಿವಾಲ್ ಅವರಾದರೂ ಹೀಗೆ ಮಾಡದೇ, ಒಳ್ಳೆಯ ಉದಾಹರಣೆಯಾಗಿ ನಿಲ್ಲುತ್ತಾರೆ ಎಂದು ಭಾವಿಸಿದ್ದೆವು. ಆದರೆ ಅವರು 'ಉಳಿದವರಂತೆಯೇ' ನಡೆದುಕೊಂಡರು.
ಎರಡನೆಯದು, ಮಾರುಕಟ್ಟೆಯಲ್ಲಿ ಖಾಸಗಿ ಮನೆಯೊಂದರ ಬಾಡಿಗೆ ಬೆಲೆಗೆ ಹೋಲಿಸಿದರೆ ಸರ್ಕಾರ ಕೊಡುವ ಮನೆಗಳಿಗೆ ತೀರಾ ಕಡಿಮೆ ಬಾಡಿಗೆ ಇರುತ್ತದೆ.  ಮೂರು ಬೆಡ್ ರೂಂ ಹೊಂದಿರುವ ವಿಸ್ತಾರವಾದ ಮನೆ, ಹುಲ್ಲುಹಾಸು ಹೊಂದಿರುವ ಬೃಹತ್ ಅಂಗಳ..ಇಷ್ಟೆಲ್ಲ ಸೌಲಭ್ಯಕ್ಕೆ ಕೇವಲ 80,000 ರುಪಾಯಿ ತೆರುತ್ತಿರುವುದು ನಿಜಕ್ಕೂ ಕಳ್ಳತನವೇ(ಏಕೆಂದರೆ ಎಡವಿಬಿದ್ದರೆ ಇಂಡಿಯಾ ಗೇಟ್ಗೆ ತಲುಪುವಷ್ಟು ಹತ್ತಿರದಲ್ಲಿದೆ ಆ ಮನೆ!). ಸಾವಿರಾರು ದೆಹಲಿಗರು ಇಷ್ಟು ಬಾಡಿಗೆಯಲ್ಲಿ ಈ ಪರಿ ಬೃಹತ್ ಮನೆ ಸಿಕ್ಕರೆ ನಿಸ್ಸಂಶಯವಾಗಿಯೂ ಬಂದಿರಲು ಬಯಸುತ್ತಾರೆ.   ಆ ಮನೆಗೆ ತಾವಲ್ಲ, ಬದಲಾಗಿ ಐಐಟಿಯ ತಮ್ಮ ಕೆಲವು ಗೆಳೆಯರು ಬಾಡಿಗೆ ಕಟ್ಟುತ್ತಿದ್ದಾರೆ ಎನ್ನುವ ಅವರ  ಮಾತಿನಿಂದಾಗಿಯೇ ಈ ವಿಷಯ ಚರ್ಚೆಯಾಗಲೇಬೇಕಿದೆ. ಕಾಳಜಿಯುಳ್ಳ ಅವರ ಗೆಳೆಯರು ಕೇಜ್ರಿ ಅವರ ರಾಜಕೀಯ ಗುರಿಯನ್ನು ನೋಡಿ ಹಣಕೊಡುತ್ತಿರಬಹುದು. ಆದರೆ ತಾವು ಮುನ್ನಡೆಸುತ್ತಿರುವ ಪಕ್ಷದ ಬದಲಾಗಿ ಆ ದೇಣಿಗೆಯನ್ನು 'ಸ್ವಂತಕ್ಕಾಗಿ' ಕೇಜ್ರಿವಾಲ್ ಬಳಸಿಕೊಳ್ಳುವುದನ್ನು ಸಮರ್ಥಿಸಲು ಸಾಧ್ಯವೇ? ಅವರು ರಾಜಕಾರಣಿಯೆಂಬ ಮಾತ್ರಕ್ಕೆ ಸೋಕಾಲ್ಡ್ ಗೆಳೆಯರು ಮತ್ತು ಹಿತೈಷಿಗಳಿಂದ ದಾನ ಪಡೆಯುವುದು ಸರಿಯೇ? ಹೀಗೆ ಮಾಡುತ್ತಲೇ ಅಲ್ಲವೇ ಬಹುತೇಕ ರಾಜಕಾರಣಿಗಳು ಭ್ರಷ್ಟರಾಗಿ ಬದಲಾಗಿರುವುದು?
ಇಷ್ಟೆಲ್ಲ ಮಾಡುವ ಕೇಜ್ರಿವಾಲ್ರಿಗೂ ಮತ್ತು ತಮ್ಮ ನೂರಾರು ಕೋಟಿ ರುಪಾಯಿಗಳ ಅಕ್ರಮ ಹಣ ತೆರಿಗೆ ಇಲಾಖೆಯ ಕಣ್ಣಿಗೆ ಬಿದ್ದಾಗ, "ಅದೆಲ್ಲಾ ತನ್ನ ಅಭಿಮಾನಿಗಳು ಮತ್ತು ಭಕ್ತರು ಕೊಟ್ಟದ್ದೆಂದು" ಹೇಳುವ ಮಾಯಾವತಿಯವರಿಗೂ ಏನಾದರೂ ವ್ಯತ್ಯಾಸ ಉಳಿಯಿತೆ? ತಮ್ಮ ಮನೆ ಬಾಡಿಗೆ ಕಟ್ಟಲು ಐಐಟಿ ಗೆಳೆಯರಿಂದ ಹಣ ಪಡೆಯುತ್ತೇನೆ ಎನ್ನುತ್ತಾರೆ ಕೇಜ್ರಿವಾಲ್. ತುಳಿತಕ್ಕೊಳಗಾದವರನ್ನು ಎತ್ತುವ ತಮ್ಮ ಗುಣದಿಂದ ಇಂಪ್ರೆಸ್ ಆಗಿ ತನ್ನ ಅಭಿಮಾನಿಗಳು 10, 20, 30 ರುಪಾಯಿ ದೇಣಿಗೆ ಕೊಡುತ್ತಿರುವುದರಿಂದಲೇ ತಮ್ಮ ಸ್ವತ್ತು ಜಾಸ್ತಿಯಾಗಿದೆ ಎನ್ನುತ್ತಾರೆ ಬಿಎಸ್ಪಿ ನಾಯಕಿ! ಇಷ್ಟೇ ಅಲ್ಲ, ದೆಹಲಿಯ ಶ್ರೀಮಂತ ಏರಿಯಾದಲ್ಲಿರುವ ಮನೆಯೊಂದನ್ನು ಮಾಯಾವತಿಯವರಿಗೆ ಅತಿ ಕಡಿಮೆ ದರದಲ್ಲಿ ಮಾರಾಟವಾಗಿರುವುದನ್ನು ಪ್ರಶ್ನಿಸಿದಾಗಲೂ ಅವರು ಮತ್ತದೇ 'ಅಭಿಮಾನಿಗಳ' ನಾಟಕವನ್ನು ಮುಂದಿಟ್ಟರು. ಮಧ್ಯಮ ವರ್ಗದ 'ಜೈನರ' ಕುಟುಂಬವೊಂದು, ಮಾಯಾವತಿಯವರ 'ದಲಿತ' ಪರ ಹೋರಾಟವನ್ನು ನೋಡಿ ಎಷ್ಟು ಆಕರ್ಷಿತವಾಯಿತೆಂದರೆ ದೆಹಲಿಯಲ್ಲಿದ್ದ ತಮ್ಮ 'ಏಕೈಕ' ಮನೆಯನ್ನು ಬಿಎಸ್ಪಿಯ ನಾಯಕಿಗೆ ಅತಿ ಕಡಿಮೆ ದರದಲ್ಲಿ ಕೊಟ್ಟುಬಿಟ್ಟರಂತೆ!
ಇವೆಲ್ಲದರಿಂದ ನಮಗೆ ಅರ್ಥವಾಗುತ್ತಿರುವುದೇನು? ಹಣ ಪಡೆಯುವವನು ಸಮಾಜಕ್ಕಾಗಿ ಎಷ್ಟೇ ಒಳ್ಳೆಯ ಕೆಲಸ ಮಾಡುತ್ತಿರಲಿ, ಸ್ವಂತ ಹಿತಕ್ಕಾಗಿ ಆತ 'ರಾಜಕೀಯ ದೇಣಿಗೆ'ಯನ್ನು ಮಾತ್ರ ಪಡೆಯಲೇ ಬಾರದು. ವೈಯಕ್ತಿಕ ಭ್ರಷ್ಟಾಚಾರಕ್ಕೆ ಇದೇ ದಾರಿಯಾಗುತ್ತದೆ. ಕೇಜ್ರಿವಾಲ್ ಅವರು ಸರ್ಕಾರಿ ನೌಕರಿಯಲ್ಲಿದ್ದಾಗ ವಿದೇಶ ಅಧ್ಯಯನ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿಂದ ತಿರುಗಿ ಬಂದ ಮೇಲೆ ಕನಿಷ್ಠ ಮೂರು ವರ್ಷಗಳಾದರೂ ಅವರು ತಮ್ಮ ಸೇವೆಯಲ್ಲಿರಬೇಕೆಂಬ ನಿಯಮವಿತ್ತು. ಅದಕ್ಕಿಂತಲೂ ಮುಂಚೆಯೇ ಕೆಲಸ ಬಿಟ್ಟರೆ ಸರ್ಕಾರಕ್ಕೆ 8 ಲಕ್ಷ ರುಪಾಯಿ ಹಣ ಹಿಂದಿರುಗಿಸಬೇಕಾಗಿತ್ತು. ಆದರೆ ತಿರುಗಿ ಬಂದ ಕೂಡಲೇ ಸೇವೆಯಿಂದ ಹೊರಬಂದದ್ದಷ್ಟೇ ಅಲ್ಲದೆ, ಹಣ ಹಿಂದಿರುಗಿಸಲೂ ನಿರಾಕರಿಸತೊಡಗಿದರು! ಆದರೆ ಒತ್ತಡ ಜಾಸ್ತಿಯಾದ ನಂತರ 'ತಮ್ಮ ಹಿತೈಷಿಗಳಿಂದ' ಆ ಹಣವನ್ನು ತುಂಬಿಸುವ ಅಪ್ರಾಮಾಣಿಕ ಕೆಲಸ ಮಾಡಿದರು.
ತಮ್ಮ ಖಾಸಗಿ ಆಸಕ್ತಿಗಳಿಗಾಗಿ ಇನ್ನೊಬ್ಬರ ಹಣವನ್ನು ಬಳಸುವ ಪರವಾನಗಿ ರಾಜಕಾರಣಿಗಳಿಗೆ ಯಾರು ಕೊಟ್ಟದ್ದು? ಮಗಳ ಬೋರ್ಡ್ ಪರೀಕ್ಷೆ ಬಂದವೆಂದರೆ ಅಥವಾ ಕಾನೂನು ಒಪ್ಪಂದಗಳಿಗನುಗುಣವಾಗಿ ಹಣ ನೀಡಬೇಕಾಯಿತೆಂದರೆ ಉಳಿದ ಸಾಮಾನ್ಯ ಜನರಂತೆ ಅವರೂ ಕಷ್ಟಪಡಬೇಕು. ನಿಜಕ್ಕೂ ಕೇಜ್ರಿವಾಲ್ ಅವರದ್ದು ಭಾರೀ ಚಾಲಾಕಿ ಗುಣ. ಮೇಲ್ನೋಟಕ್ಕೆ ಸಂತನಂತೆ ವರ್ತಿಸುತ್ತಾ, ಒಳಗೊಳಗೆ ಆಪ್ನ ಹೆಸರನ್ನು ಮತ್ತು ಹಣವನ್ನು ತಮ್ಮ ಸ್ವಹಿತಾಸಕ್ತಿಗಾಗಿ ಬಳಸುವುದರ ಕುರಿತೇ ಯೋಚಿಸುತ್ತಿರುತ್ತಾರೆ. ಒಟ್ಟಾರೆ ಹೇಳಬೇಕೆಂದರೆ, ಕೇಜ್ರಿವಾಲ್ ತಪ್ಪು ದಾರಿಯಲ್ಲಿ ಹೊರಟಿದ್ದಾರೆ. ಸಾರ್ವಜನಿಕ ಹಣವನ್ನು ಖಾಸಗಿ ಬದುಕಿಗೆ ಬಳಸಿಕೊಳ್ಳುವ ಈ ದಾರಿ ಉಳಿದವರಿಗೂ ಉತ್ತೇಜನ ನೀಡುವ ಅಪಾಯವಿದೆ.
=
ಒಂದಂತೂ ಸತ್ಯ, ಭಾರತೀಯ ರಾಜಕಾರಣದಲ್ಲಿ ಯಾರೊಬ್ಬರೂ ಸ್ವ ಇಚ್ಛೆಯಿಂದ ನಿವೃತ್ತರಾಗುವುದೇ ಇಲ್ಲ. ಎಲ್.ಕೆ. ಆಡ್ವಾಣಿ ಅವರು ದಿನನಿತ್ಯವೂ ಅನುಭವಿಸುತ್ತಿರುವ ಅವಮಾನವನ್ನು ನೋಡಿದರೆ ಪ್ರಶ್ನೆಯೊಂದು ಏಳುತ್ತದೆ: ಈ 80 ದಾಟಿದ ನಾಯಕ ಅದೇಕೆ ನಿವೃತ್ತಿ ಪಡೆದು ತಮ್ಮ ಉಳಿದ ಜೀವನವನ್ನು ಆಪ್ತರೊಂದಿಗೆ ಕಳೆಯಬಾರದು? ಸಂಸತ್ತಿನಲ್ಲಿ ಅವರಿಗೊಂದು ಸ್ವಂತ ಕೊಠಡಿ ಇಲ್ಲ, ಲೋಕಸಭೆಯಲ್ಲಿ ಪ್ರಮುಖ ಸ್ಥಾನ ದೊರೆಯಲಿಲ್ಲ, ನರೇಂದ್ರ ಮೋದಿ ಸಮೂಹದಲ್ಲಿ ಸೂಕ್ತವಾದ ಸ್ಥಾನ ಸಿಗಲಿಲ್ಲ...ಎಂಬಿತ್ಯಾದಿ ಸುದ್ದಿಗಳನ್ನು ದಿನನಿತ್ಯ ಓದುವುದು ನಿಜಕ್ಕೂ ಮುಜುಗರ ಉಂಟುಮಾಡುತ್ತದೆ.
ಕಡೇಪಕ್ಷ ತಾವು ಸರ್ಕಾರದ ಯಾವುದೇ ಹುದ್ದೆಗಾಗಿ ಹವಣಿಸುತ್ತಿಲ್ಲ ಎನ್ನುವ ಮೂಲಕವಾದರೂ ಅವರು ತಮ್ಮ ಬಗ್ಗೆ ದಿನಂಪ್ರತಿ ಪ್ರಕಟವಾಗುವ ಮುಜುಗರದ ವರದಿಗಳಿಗೆ ಮುಕ್ತಾಯ ಹಾಡಬಹುದು. ಸತ್ಯವೇನೆಂದರೆ, ಯಾವ ಸಮಯದಲ್ಲೂ ಅವರ ಹೆಸರು ಲೋಕಸಭೆಯ ಸ್ಪೀಕರ್ ಸ್ಥಾನಕ್ಕೆ ಕೇಳಿಬಂದಿರಲೇ ಇಲ್ಲ! ಈ ಪುಕಾರನ್ನು ಎಬ್ಬಿಸಿದವರು ಬೇರಾರೂ ಅಲ್ಲ, ತಮ್ಮ ಪ್ರಸ್ತುತತೆಯನ್ನು ಪುನಃ ಸ್ಥಾಪಿಸಲು ಹವಣಿಸಿದ ಆಡ್ವಾಣಿಯವರ ಹಿಂಬಾಲಕರಷ್ಟೆ.
ಯುವಕರ ಅನುಕೂಲಕ್ಕಾಗಿ ತಮ್ಮ ಪದವಿಯನ್ನು ಬಿಟ್ಟುಕೊಟ್ಟ ಯುರೋಪಿಯನ್ ರಾಜರು ಮತ್ತು ರಾಣಿಯರ ಕಥೆ ನಮಗೆ ಗೊತ್ತು. ಇತಿಹಾಸದಲ್ಲಿ ಮೊದಲ ಬಾರಿಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಪೋಪ್ರ ಉದಾಹರಣೆಯೂ ನಮ್ಮ ಮುಂದಿದೆ. ಆದರೆ ಭಾರತದ ಹಿರಿಯ ನಾಯಕರು ಸ್ವ ಇಚ್ಛೆಯಿಂದ ನಿರ್ಗಮಿಸುವುದನ್ನು  ಮಾತ್ರ ನಾವು ಹೆಚ್ಚಾಗಿ ನೋಡಿಯೇ ಇಲ್ಲ. ಸಾವು ಇಲ್ಲವೇ ತೀವ್ರ ಅನಾರೋಗ್ಯವೊಂದೇ ರಾಜಕೀಯದಿಂದ ಅವರ ನಿರ್ಗಮನಕ್ಕೆ ಕಾರಣವಾಗಬೇಕೇ? ಇದು ನಿಜಕ್ಕೂ ದುಃಖಕರ ಸಂಗತಿ. ಆಡ್ವಾಣಿ ಅವರನ್ನು ನೋಡಿದರೆ ನಿಜಕ್ಕೂ ಕನಿಕರ ಹುಟ್ಟುತ್ತದೆ. ಏಕೆಂದರೆ ನನ್ನನ್ನೂ ಸೇರಿದಂತೆ ಅವರ ಹಿತೈಷಿಗಳೂ ಕೂಡ ಆ ಹಿರಿಯ ನಾಯಕ ಗೌರವಯುತವಾಗಿ ನಿವೃತ್ತಿ ಪಡೆದು ರಾಜಕೀಯದಿಂದ ಹೊರನಡೆಯಬೇಕು ಎಂದು ಬಯಸುತ್ತಿದ್ದೇವೆ.
=
ಸಮಯ ನಿಜಕ್ಕೂ ಬದಲಾಗುತ್ತಿದೆ. ಸಂಸತ್ತಿನಲ್ಲಿ ಕೇಸರೀಕರಣ ಯಾವ ಪರಿ ಆಗಿದೆಯೆಂದರೆ ಕಳೆದ ವಾರ ಸೆಂಟ್ರಲ್ ಹಾಲ್ನ ತುಂಬೆಲ್ಲ, ಮೊದಲ ಬಾರಿಗೆ ಸಂಸತ್ತಿಗೆ ಕಾಲಿಟ್ಟು ಬಿಜೆಪಿಯ ಸಂಸದರ ಮುಖಗಳೇ ಕಾಣಿಸಿದವು. ಎಲ್ಲವನ್ನೂ ಬೆರಗಿನಿಂದ ನೋಡುವ ಮಕ್ಕಳಂತೆ ತಮ್ಮ ಸುತ್ತಲಿನ ಹೊಸ ಜಾಗವನ್ನು ಪರಿಚಯಮಾಡಿಕೊಳ್ಳುತ್ತಿದ್ದರು ಅವರು. ಕೆಲವರಂತೂ ಯಾವ ಪರಿ ಭಾವಪರವಶರಾಗಿದ್ದರೆಂದರೆ, ಭಾರತೀಯ ಪ್ರಜಾಪ್ರಭುತ್ವದ ಗರ್ಭಗುಡಿಗೆ ತಾವು ಪ್ರವೇಶಿಸುತ್ತೇವೆಂದು ಕನಸುಮನಸಿನಲ್ಲಿಯೂ ಯೋಚಿಸಿರಲಿಲ್ಲ ಎಂದು ಹೇಳುತ್ತಿದ್ದರು.  ಆದರೇನು? ಇತ್ತ ಪ್ರಧಾನಿಗಳೇ ಮೊದಲ ಬಾರಿಗೆ ಸಂಸದರಾಗಿರುವುದರಿಂದ 300ಕ್ಕೂ ಹೆಚ್ಚು ಜನ 'ಮೊದಲಿಗರು' ಅಲ್ಲಿದ್ದರೆಂಬುದು ಅಷ್ಟೇನೂ ಆಶ್ಚರ್ಯ ಹುಟ್ಟಿಸದು. ಆದಾಗ್ಯೂ ಮೋದಿಯವರ ಆತ್ಮವಿಶ್ವಾಸವನ್ನು ಮೆಚ್ಚಲೇಬೇಕು. ಅತ್ಯಂತ ಜೋಕೆಯಿಂದ ಸೆಂಟ್ರಲ್ ಹಾಲ್ನಲ್ಲಿ ನಡೆದು ಬಂದ ಅವರು, ಕೆಲವರಿಗೆ ಹಾರೈಸಿದರು, ಇನ್ನೂ ಕೆಲವರನ್ನು ಅವರ ಹೆಸರು ಹಿಡಿದು ಮಾತನಾಡಿಸಿದರು, ತಮ್ಮ ಕಚೇರಿಗೆ ತೆರಳುವುದಕ್ಕೂ ಮುನ್ನ ಅವರೆಲ್ಲರೊಂದಿಗೆ ತುಸು ಸಮಯ ಕಳೆದರು. ಹಿಂದಿನ ಸರ್ಕಾರದಲ್ಲಿ ಈ ರೀತಿಯ ಚಿತ್ರಣವಿರಲಿಲ್ಲ. ಸೋನಿಯಾ ಮತ್ತು ರಾಹುಲ್ ಗಾಂಧಿ ಸೆಂಟ್ರಲ್ ಹಾಲ್ನ ಮೂಲಕ ತಮ್ಮ ಕಚೇರಿಗೆ ಎಷ್ಟು ವೇಗವಾಗಿ ನಡೆದುಹೋಗುತ್ತಿದ್ದರೆಂದರೆ, ಎರಡೂ ಬದಿಗಳಲ್ಲಿ ಶಾಲಾಮಕ್ಕಳಂತೆ ಕೈಕಟ್ಟಿಕೊಂಡು ಬೆನ್ನು ಬಾಗಿಸಿಕೊಂಡು ನಿಂತಿರುತ್ತಿದ್ದ ಪಕ್ಷದ ಅಭ್ಯರ್ಥಿಗಳೊಂದಿಗೆ ಮಾತನಾಡುವುದಿರಲಿ, ಅವರತ್ತ ನೋಡುತ್ತಲೂ ಇರಲಿಲ್ಲ.
ಅಮೆರಿಕದ ಸಂಗೀತಗಾರ ಬಾಬ್ ಡೈಲನ್ನ ಹಾಡೊಂದು ನೆನಪಾಗುತ್ತಿದೆ: "ದಿ ಟೈಮ್ಸ್, ದೆ ಆರ್ ಚೇಂಜಿಂಗ್'. ನಿಜ ಸಮಯ ಬದಲಾಗುತ್ತಿದೆ!


- ವೀರೇಂದ್ರ ಕಪೂರ್
virendra1946@yahoo.co.in


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement