ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಭಾರತೀಯತೆ ನಾಶವಾದರೆ ದೇಶಕ್ಕೆಲ್ಲಿದೆ ಅರ್ಥ?

ಬೆಳಗ್ಗೆ ಎದ್ದು ಸ್ನಾನ ಮಾಡಿ, ತುಳಸಿ ಕಟ್ಟೆಗೆ ಪೂಜೆ ಮಾಡಿ ನನ್ನ ಈ ದಿನ ಶುಭವಾಗಿರಲೆಂದು ಬೇಡುತ್ತಾ ದೈನಂದಿನ...

Rashmi Kasaragodu
Updated On : 10 Jun 2014, 12:03 pm

ಬೆಳಗ್ಗೆ ಎದ್ದು ಸ್ನಾನ ಮಾಡಿ, ತುಳಸಿ ಕಟ್ಟೆಗೆ ಪೂಜೆ ಮಾಡಿ ನನ್ನ ಈ ದಿನ ಶುಭವಾಗಿರಲೆಂದು ಬೇಡುತ್ತಾ ದೈನಂದಿನ ಕೆಲಸ ಮುಂದುವರಿಸಬೇಕು. ಆದರೆ ಈಗಿನ ಯುವ ಪೀಳಿಗೆ ಇದ್ಯಾವುದೋ 70 ಅಥವಾ 80ರ ದಶಕದ ಸಿನಿಮಾದ ಕಥೆ ಇರಬೇಕು ಎಂದುಕೊಂಡರೆ ಅಚ್ಚರಿಯಿಲ್ಲ. ಏಕೆಂದರೆ ಈಗಿನವರ ದಿನಚರಿ ಹಲ್ಲುಜ್ಜದೇ ಚರಂಡಿಯ ಹಾಗೆ ಗಬ್ಬುನಾತದ ಬಾಯಲ್ಲಿ ಬೆಡ್ ಕಾಫಿ ಕುಡಿದ ಮೇಲೇ ಶುರುವಾಗುತ್ತದೆ. ಪರಿಪೂರ್ಣ ಜೀವನ ಪಾಠ ಕಲಿಸುವ ವೇದಗಳ ಬಗ್ಗೆ ನಮಗೆ ತಿಳಿಯದು. ಇಂದು ನಮ್ಮ ಸಂಸ್ಕೃತಿಯನ್ನು ವಿದೇಶಿಯರು ಮೆಚ್ಚುತ್ತಾರೆ ಹಾಗೂ ಅನುಸರಿಸುತ್ತಾರೆ. ಆದರೆ ನಾವು ಮಾತ್ರ ನಮ್ಮ ಸಂಸ್ಕೃತಿಯನ್ನು ನಿರ್ಲಕ್ಷಿಸಿ ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಪದ್ಧತಿಗೆ ಮಾರುಹೋಗುತ್ತಿದ್ದೇವೆ.
ಹಾಗಾದರೆ ಈಗಿನ ಪೀಳಿಗೆಯ ಈ ನಿರ್ಲಕ್ಷ್ಯಕ್ಕೆ ಕಾರಣ ಯಾರು? ಶಾಲೆಗಳಾ? ಪೋಷಕರಾ ಅಥವಾ ಸರ್ಕಾರಗಳಾ? ಮುಖ್ಯವಾಗಿ ಈಗಿನ ಶಾಲೆಗಳು ಉತ್ತಮ ವ್ಯಕ್ತಿಯನ್ನು ರೂಪಿಸುವ ಕೆಲಸ ಮಾಡುತ್ತಿಲ್ಲ. ಮಾಡುತ್ತಿದ್ದರೂ ಬೆರಳೆಣಿಕೆಯಷ್ಟು ಮಾತ್ರ. ಪುಸ್ತಕದಲ್ಲಿರುವುದನ್ನು ಉತ್ತರ ಪತ್ರಿಕೆಗೆ ಇಳಿಸುವುದನ್ನು ಮಾತ್ರ ಈಗಿನ ಶಾಲೆಗಳು ಹೇಳಿಕೊಡುತ್ತಿವೆ. ಪಾಠದ ಸಾರಾಂಶವನ್ನು ಮಕ್ಕಳ ಮನಸ್ಸಿಗೆ ಇಳಿಸುವ ಶಾಲೆಗಳು ತೀರಾ ಕಡಿಮೆ. ರಾಜಕಾರಣಿಗಳು, ಉದ್ಯಮಿಗಳು ತಮ್ಮ ಕಪ್ಪುಹಣವನ್ನು ಬಿಳಿಯಾಗಿಸುವ ಸಲುವಾಗಿ ಬೀದಿ ಬೀದಿಗಳಲ್ಲಿ ನಾಯಿ ಕೊಡೆಗಳಂತೆ ಶಾಲೆಗಳನ್ನು ಕಟ್ಟಿದಾರೆ. ಇಂತಹ ಶಾಲೆಗಳು ಆದಾಯಕ್ಕಾಗಿ ಮಾತ್ರ. ಇನ್ನೆಲ್ಲಿ ಉತ್ತಮ ರಾಷ್ಟ್ರ ಮತ್ತು ವ್ಯಕ್ತಿತ್ವ ನಿರ್ಮಾಣವಾಗಬೇಕು?
ಒಮ್ಮೆ ಸ್ವಾಮಿ ವಿವೇಕಾನಂದರು ಜಪಾನ್ ಪ್ರವಾಸದಲ್ಲಿದ್ದರು. ರಾತ್ರಿ ಮಲಗುವಾಗ ಅಲ್ಲಿನ ಒಬ್ಬ ಹುಡುಗನಿಗೆ ಒಂದು ಬಾಳೆಹಣ್ಣು ತರುವಂತೆ ಹೇಳುತ್ತಾರೆ. ಆ ಹುಡುಗ ಹೋದವನು ಬರುವುದೇ ಇಲ್ಲ. ವಿವೇಕಾನಂದರು ಕಾದು ಕಾದು ಮಲಗಲು ಹೋಗುತ್ತಾರೆ. ಆಗ ಹುಡುಗ ಬಾಳೆಹಣ್ಣಿನೊಂದಿಗೆ ಓಡೋಡಿ ಬರುತ್ತಾನೆ. ಏಕೆ ಇಷ್ಟು ಹೊತ್ತು ಎಂದು ಕೇಳಿದಾಗ ಆ ಹುಡುಗ "ನಮ್ಮೂರಿನ ಎಲ್ಲಾ ಅಂಗಡಿಗಳು ಮುಚ್ಚಿದ್ದರೂ ಪಕ್ಕದ ಊರಿಗೆ ಹೋಗಿ ಬರಲು ತಡವಾಯಿಯಿತು. ಬಾಳೆಹಣ್ಣು ತರಲಿಲ್ಲವೆಂದರೆ ನಿಮ್ಮ ದೇಶಕ್ಕೆ ಹೋಗಿ ಜಪಾನ್ನಲ್ಲಿ ಒಂದು ಬಾಳೆಹಣ್ಣಿಗೂ ಗತಿಯಿಲ್ಲ ಎಂದು ಹೇಳಬಾರದಲ್ಲವೇ?" ಎನ್ನುತ್ತಾನೆ. ಅವನ ದೇಶಪ್ರೇಮವನ್ನು ನೋಡಿ ವಿವೇಕಾನಂದರು ಬೆರಗಾಗುತ್ತಾರೆ. ಅಲ್ಲಿದ್ದಾಗಲೇ ಇನ್ನೊಬ್ಬ ಹುಡುಗನನ್ನು "ಬುದ್ಧ ನಿಮ್ಮ ಆರಾಧ್ಯ ದೈವ, ಅಕಸ್ಮಾತ್, ಭಾರತದಿಂದ ಬುದ್ಧ ನಿಮ್ಮ ಮೇಲೆ ಯುದ್ದಕ್ಕೆ ಬರುತ್ತಾನೆ ಎಂದು ಊಹಿಸಿ. ಆಗ ಏನು ಮಾಡುತ್ತೀರಾ?" ಎಂದು ವಿವೇಕಾನಂದರು ಕೇಳುತ್ತಾರೆ. ಆಗ ಆ ಹುಡುಗ "ಹಾಗೇನಾದರೂ ಆದರೆ ನಾವು ಯುದ್ಧ ಮಾಡಿ ಬುದ್ಧನನ್ನು ಸೋಲಿಸುತ್ತೇವೆ" ಎನ್ನುತ್ತಾನೆ. ಈ ರೀತಿಯ ದೇಶಭಕ್ತಿ ಈಗಿನವರಿಗೆ ನಮ್ಮ ಯುವಪೀಳಿಗೆಯಲ್ಲಿ ಇಲ್ಲವೇ ಇಲ್ಲ. ಹಲ್ಲುಜ್ಜುವ ಪೇಸ್ಟ್, ಬ್ರಶ್, ತಿನ್ನುವ ಊಟ, ಹಾಕುವ ಬಟ್ಟೆ ಇತ್ಯಾದಿ ಎಲ್ಲವೂ ಪ್ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಬಿಂಬಿಸುವಂತಹವೇ.
ಒಮ್ಮೆ ಉಡುಪಿಯಲ್ಲಿ ಇಂಟರ್ನ್ಯಾಷನಲ್ ವೇದಿಕ್ ಸೆಮಿನಾರ್ ಆಯೋಜಿಸಿದ್ದರು. ಪ್ರಪಂಚದ ವಿವಿಧೆಡೆಯಿಂದ ಬಂದವರು ನಮ್ಮ ವೇದಗಳ ಬಗ್ಗೆ ಮಾತನಾಡುವ ಕಾರ್ಯಕ್ರಮ ಅದಾಗಿತ್ತು. ಒಬ್ಬ ವಿದೇಶಿ ಹೆಣ್ಣುಮಗಳು ವೇದಿಕೆಯ ಮೇಲೆ ತನ್ನ ಮಾತು ಶುರು ಮಾಡುತ್ತಾ 'ಈ ಕಾರ್ಯಕ್ರಮಕ್ಕೆ ನನ್ನ ಗಂಡ ಬರಬೇಕಿತ್ತು. ಕೆಲ ದಿನಗಳ ಹಿಂದೆ ಅಪಘಾತದಲ್ಲಿ ತೀರಿಕೊಂಡರು. ಸಾಯುವ ಮುನ್ನ ನಾನು ಭಾರತ ಬೇಟಿಯ ಅವಕಾಶದಿಂದ ವಂಚಿತನಾದೆ, ಆದರೆ ನೀನು ಈ ಅವಕಾಶವನ್ನು ಬಿಡಬೇಡ. ಭಾರತದ ನೆಲಕ್ಕೆ ಕಾಲಿಟ್ಟು ಪುಣ್ಯಾತ್ಮಳಾಗು ಎಂದರು, ಅದಕ್ಕೆ ಈಗ ಇಲ್ಲಿಗೆ ಬಂದಿದ್ದೇನೆ" ಎಂದರು. ಆದರೆ ಈಗಿನವರಿಗೆ ಪಿಯುಸಿ ಮುಗಿಯುತ್ತಿದ್ದಂತೆಯೇ ವಿದೇಶಕ್ಕೆ ಹಾರುವ ಕನಸು ಕಾಣುತ್ತಾರೆ. ಭಾರತಕ್ಕೆ ಅವಶ್ಯಕವಾಗಿ ಬೇಕಿರುವುದು 'ಭಾರತೀಯತೆ'. ಭಾರತೀಯತೆ ಅಂದರೆ ಭಾರತದ ಗ್ರಂಥಗಳ, ವೇದಗಳ, ಮಹಾಪುರುಷರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳುವುದು. ಮಹಾಪುರುಷರ ಅರಿವೇ ಇಲ್ಲದ ಈಗಿನ ಜನತೆ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳುವ ಪ್ರಯತ್ನ ಮಾಡುತ್ತದಾ?  ಭಾರತ ತನ್ನದೇ ಆದ ಕೆಲವು ವಿಶೇಷತೆಗಳನ್ನು ಹೊಂದಿದೆ. ಜರಾಯುವೆಂಬ ಪೊರೆಯಿಂದ ಗರ್ಭವು ಮುಚ್ಚಲ್ಪಟ್ಟಿದೆ ಎಂದು ಶ್ರೀ ಕೃಷ್ಣ ಭಗವದ್ ಗೀತೆಯಲ್ಲಿ ಬೋಧಿಸಿರುವ ನೆಲ ಭಾರತ. ಆಯುರ್ವೇದ, ಚದುರಂಗ, ದಶಾಂಶ ಪದ್ಧತಿ, ಬೀಜಗಣಿತ, ಕ್ಯಾಲ್ಕುಲಸ್ ಶುರುವಾಗಿದ್ದೇ ಭಾರತದಲ್ಲಿ. ರಾಮಾನುಜರೊಬ್ಬರೇ ಬರೋಬ್ಬರಿ 3542 ಗಣಿತ ಸಿದ್ಧಾಂತಗಳನ್ನು ಬರೆದಿದ್ದಾರೆ. 13ನೇ ಶತಮಾನದಲ್ಲಿ ಹಾವು-ಏಣಿ ಆಟವನ್ನು ಮೋಕ್ಷಪತ್ ಎಂಬ ಹೆಸರಿನಿಂದ ಆಡುತ್ತಿದ್ದರು. ಸಂಸ್ಕೃತ ಕಂಪ್ಯೂಟರ್ ಸಾಫ್ಟ್ವೇರ್ಗೆ ಸರಿಯಾಗಿ ಹೊಂದುತ್ತದೆ. ವಿಶ್ವದ ಪ್ರಥಮ ವಿಶ್ವವಿದ್ಯಾಲಯ ಶುರುವಾಗಿದ್ದು ತಕ್ಷಿಲಾದಲ್ಲಿ. ಇಲ್ಲಿ 10500 ವಿದ್ಯಾರ್ಥಿಗಳು ಸುಮಾರು 60 ವಿಷಯಗಳನ್ನು ಅಭ್ಯಸಿಸಿದ್ದರು. ಇಂದು ಓದಲು ವಿದೇಶಕ್ಕೆ ಹಾರುವ ಎಷ್ಟೋ ವಿದ್ಯಾರ್ಥಿಗಳಿಗೆ ಇದು ಗೊತ್ತೇ ಇಲ್ಲ.  
ಇದೆಲ್ಲ ಒಂದೆಡೆಯಾದರೆ, ಇನ್ನೊಂದೆಡೆ ಚೀನಾ, ಪಾಕಿಸ್ತಾನ, ಶ್ರೀಲಂಕಾ ಒಂದಾಗುತ್ತಿವೆ. ಹಣದುಬ್ಬರ ಏರಿಕೆ ಕಾಣುತ್ತಿದೆ. ವಿದೇಶಿ ವಿನಿಮಯ ಕುಸಿಯುತ್ತಲೇ ಇದೆ. ಓಟಿಗೆ ಮುನ್ನ ಜನ ದೇಶದ ಬದಲು ಜಾತಿ, ನೋಟು ನೋಡುತ್ತಿದ್ದಾರೆ. ಶಿಕ್ಷಣದಲ್ಲಿ ದೇಶಭಕ್ತಿ ಬದಲು ಸ್ವಾರ್ಥ ಬೆಳೆಯುತ್ತಿದೆ. ಆ್ಯಂಬುಲೆನ್ಸ್, ಪೊಲೀಸ್ರಿಗಿಂತ ಪಿಜ್ಜಾ ಬೇಗ ಮನೆಗೆ ಬರುತ್ತಿದೆ. ಶೈಕ್ಷಣಿಕ ಹಾಗೂ ರೈತರ ಸಾಲಕ್ಕೆ ಅಧಿಕ ಬಡ್ಡಿಯಾದರೆ, ಮರ್ಸಿಡೀಸ್ ಬೆನ್ಜ್ ಕಾರುಕೊಳ್ಳಲು ಶೇ.0 ಬಡ್ಡಿ. ತಿನ್ನೋ ಅಕ್ಕಿ 50 ರುಪಾಯಿ ಆದರೆ, ಸಿಮ್ಕಾರ್ಡ್ ಫ್ರೀ! ಬಡವರು ಕ್ರಿಕೆಟ್ ಪಂದ್ಯದ ಟಿಕೆಟ್ ಕೊಳ್ಳಲು ಪರದಾಡಿದರೆ, ಶ್ರೀಮಂತರು ಕ್ರಿಕೆಟ್ ತಂಡವನ್ನೇ ಖರೀದಿಸುತ್ತಾರೆ.
ಪ್ರತಿಭಟನೆಯ ಸಂದರ್ಭಗಳಲ್ಲಿ ಸರ್ಕಾರಿ ವಾಹನಗಳಿಗೆ ಕಲ್ಲು ಎಸೆಯುತ್ತೇವೆ. ಸರ್ಕಾರಿ ಆಸ್ತಿ ನಮ್ಮದೇ ಎಂಬ ಪರಿಜ್ಞಾನವೂ ಇರುವುದಿಲ್ಲ. ನಮ್ಮ ಹಬ್ಬಗಳು ಈಗಾಗಲೇ ನೆಲಕಚ್ಚುತ್ತಿರುವುದನ್ನು ಕಾಣುತ್ತಿದ್ದೇವೆ. ಹೊಸವರ್ಷವನ್ನು ಜನವರಿ ಒಂದಕ್ಕೆ ಆಚರಿಸುತ್ತೇವೆ. ಮದ್ಯಪಾನ, ಧೂಮಪಾನ ಮಾಡಿ ಹೊಸ ವರ್ಷವನ್ನು ಸ್ವಾಗತಿಸುವುದು ನಮ್ಮ ಸಂಸ್ಕೃತಿಯೇ? ಹಾಗಂತ ವಿದೇಶಿ ಸಂಸ್ಕೃತಿಯನ್ನು ತುಚ್ಛವಾಗಿ ಕಾಣಬೇಕು ಎನ್ನುತ್ತಿಲ್ಲ. ಆದರೆ ಅದರಲ್ಲಿರುವ ಒಳ್ಳೆಯ ಸಂಗತಿಗಳನ್ನು ಬಿಟ್ಟು, ಕೆಟ್ಟದರತ್ತಲೇ ನಮ್ಮ ಆಸಕ್ತಿ ಏಕೆ? ಆ ಆಸಕ್ತಿಯ ಬೆನ್ನು ಹತ್ತಿ ನಮ್ಮತನವನ್ನು ನಾವು ಮರೆಯುತ್ತಿದ್ದೇವೇಕೆ?
ಇವೆಲ್ಲದರ ನಡುವೆ ಹಣದುಬ್ಬರ ಭಯಾನಕ ಏರಿಕೆ ಕಾಣುತ್ತಿದೆ. ವಿದೇಶಿ ವಿನಿಮಯ ಕುಸಿಯುತ್ತಲೇ ಇದೆ. ಬಾಹ್ಯ ಶಕ್ತಿಗಳು ಭಾರತವನ್ನು ದುರ್ಬಲವಾಗಿಸಲು ಹೊಂಚು ಹಾಕುತ್ತಿವೆ. ಆದರೆ ಈ ಸಮಸ್ಯೆಗಳಿಗೆಲ್ಲ ಪರಿಹಾರ ಕೊಡಬಲ್ಲ ನಾಯಕನೊಬ್ಬ ಬಂದಿದ್ದಾನೆ. ದೇಶವನ್ನು ಬಲಿಷ್ಠಗೊಳಿಸಲು ಭಾರತೀಯ ಸಂಸ್ಕೃತಿಯನ್ನು ಪುನಃಸ್ಥಾಪಿಸಲು ಆತ ಪ್ರತಿಜ್ಞೆ ಮಾಡಿದ್ದಾನೆ. ಹಾಗಂತ ಬದಲಾವಣೆಯೆನ್ನುವುದು ಬರೀ ಆತನೊಬ್ಬನಿಂದಲೇ ಸಾಧ್ಯವಿಲ್ಲ ಎನ್ನುವುದನ್ನು ನಾವು ಅರಿತುಕೊಳ್ಳಬೇಕು. ಒಂದು ದೇಶವನ್ನು ಉಜ್ವಲವಾಗಿಸಲು ಕೇವಲ ರಾಜಕೀಯದಿಂದಲೇ ಸಾಧ್ಯವಿಲ್ಲ. ಸಾಂಸ್ಕೃತಿಕ ಸಂಗತಿಗಳೂ ಮುಖ್ಯವಾಗುತ್ತವೆ.
ಸ್ವಾಮಿ ವಿವೇಕಾನಂದರ ಕನಸಿನ ಭಾರತ ನಿರ್ಮಾಣವಾಗಬೇಕೆಂದರೆ ಮೊದಲು ನಾವು ಕಣ್ತೆರೆಯಬೇಕು. ಭಾರತ ವಿಶ್ವಗುರುವಾಗಿ ಮೆರೆಯಬೇಕೆಂದರೆ 'ಭಾರತೀಯತೆ' ಬೆಳೆಯಬೇಕು.  

 -ರೂಪೇಶ್. ಆರ್
rrupesh@ced.alliance.edu.in



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement