ಹದಿನೆಂಟರಿಂದ ಮೂವತ್ತು. ಅದೊಂದು ಸಮೀಕರಣ. ಹೆಚ್ಚಿನವರ ಆಕರ್ಷಣೆ. ಈ ಪ್ರಾಯದ ಪರಿಧಿಯಲ್ಲಿ ಇರುವವರೇ ಮುಖ್ಯ ಎಂಬ ಅಭಿಪ್ರಾಯವೊಂದು ರೂಪು ತಳೆದಿದೆ. ಇವರನ್ನು ಆಕರ್ಷಿಸಲೆಂದೇ ಉತ್ಪನ್ನಗಳು ತಯಾರಾಗುತ್ತವೆ. ಇವರನ್ನು ಸೆಳೆಯಲೆಂದೇ ಜಾಹೀರಾತುಗಳು ಪೈಪೋಟಿ ನಡೆಸುತ್ತವೆ. ಇವರನ್ನು ಆಕರ್ಷಿಸದಿದ್ದರೆ ಆ ಬರವಣಿಗೆ ಸಾರ್ಥಕವಾದೀತಾರೂ ಹೇಗೆ ಅಂತ ಚರ್ಚೆಗಳಾಗುತ್ತವೆ. 'ದೇಶದ ಯೂಥ್‌ಗಳನ್ನು ಸೆಳೆಯಬೇಕು. ಅದು ಮುಖ್ಯ ನೋಡ್ರಿ' ಅಂತ ಬೇರೆ ಬೇರೆ ಸಂದರ್ಭಗಳಲ್ಲಿ ಮಾತುಗಳು ಜಿಗಿಯುತ್ತವೆ. ನಮ್ಮ ದೇಶದ ಯೂಥ್ ಪವರ್ ಸರಿಯಾಗಿ ಬಳಕೆಯಾದ್ರೆ ದೇಶ ಸೂಪರ್‌ಪವರ್ ಆಗುತ್ತದೆ ಎಂಬ ಮಾತಿನಲ್ಲಿ ನಿಜವಿರುವುದು ಹೌದಾದರೂ ಅದೊಂದೇ ಸತ್ಯ ಎಂಬ ನಂಬಿಕೆಯೂ ಹೇಗೋ ಸ್ಥಿರವಾಗಿಬಿಟ್ಟಿದೆ.
ಒಟ್ಟಾರೆ ಜಗತ್ತಿನಲ್ಲಿ ಹೀಗೆಲ್ಲ ಆಗುತ್ತಿರಬೇಕಾದರೆ ಮನರಂಜನೆ- ಆಕರ್ಷಣೆಗಳನ್ನೇ ಮೂಲದ್ರವ್ಯವಾಗಿರಿಸಿಕೊಂಡ ಸಿನಿಮಾ ಪ್ರಪಂಚದಲ್ಲಿ ಮತ್ತೇನಾಗಲು ಸಾಧ್ಯ? ವರ್ಷಕ್ಕೆ ಸಾವಿರ ಸಿನಿಮಾ ಬಂದರೆ ಎಲ್ಲದರಲ್ಲೂ ಯೌವನ ಸ್ವಪ್ನಗಳ ಮೆರವಣಿಗೆ. ಮುಕ್ಕಾಲು ಪಾಲು ಚಿತ್ರಗಳಾದರೂ ಕಾಲೇಜಿನ ಕ್ಯಾಂಪಸ್‌ನಲ್ಲಿ ಶುರುವಾಗಬೇಕು. ಅದಿಲ್ಲವೆಂದಾದರೆ ನಾಯಕ ಔದ್ಯೋಗಿಕ ಪ್ರಪಂಚದ ನವ ತರುಣನಾಗಿರುತ್ತಾನೆ. ಇಲ್ಲಿ ಕಾರ್ಪೋರೇಟ್ ಉದ್ಯೋಗ ಬಿಟ್ಟು ಸರ್ಕಾರಿ ವಲಯದಲ್ಲಿ ಕತೆ ಹೆಣೆಯಬೇಕೆಂದರೆ ನಾಯಕನನ್ನು ಖಡಕ್ ಪೊಲೀಸ್ ಅಧಿಕಾರಿಯನ್ನಾಗಿ ಮಾಡುವುದೇ ಸಲೀಸು. ಆತ ನಾಯಕಿಯನ್ನು ಸೆಳೆದು ಕ್ಲೈಮ್ಯಾಕ್ಸ್‌ನಲ್ಲಿ ತಾಳಿ ಬಿಗಿಯುವ ನಡುವಿನ ಎರಡೂ ಚಿಲ್ಲರೆ ತಾಸುಗಳಲ್ಲಿ ಪ್ರಪೋಸು, ಅಡ್ಡಿ-ಆತಂಕ, ಹಾಡು, ಹೊಡೆದಾಟ, ವಿರಹ, ಸಲ್ಲಾಪ ಇಂಥ ಎಲಿಮೆಂಟುಗಳನ್ನೆಲ್ಲ ಹೆಂಗೆ ತುಂಬಲಾಗಿದೆ ಎಂಬುದರ ಮೇಲೆ ಸಿನಿಮಾದ ಹಣೆಬರಹ ನಿರ್ಧಾರ.
ಇವೆಲ್ಲ ಸರಿ. ಆದರೆ 'ಶುಭಂ', 'ದಿ ಎಂಡ್' ಆಗುವ ಹೊತ್ತಿಗೆ ನಾಯಕನಿಗೆ ಅಬ್ಬಬ್ಬಾ ಅಂದರೆ ಮುವತ್ತಾರರ ಪ್ರಾಯ, ನಾಯಕಿಗೆ ಇಪ್ಪತ್ತೆಂಟು ಆಗಿರುತ್ತಲ್ಲ. ಆನಂತರದಲ್ಲಿ ನೆಗೆದುಬೀಳುವುದಕ್ಕೆ ಮೊದಲು ಹಾಗೊಂದು ನಲ್ವತ್ತು ವರ್ಷಗಳೇ ಸಿಗಬಹುದು. ಅದರದ್ದೇನು ಕತೆ? ಹೀಗಂತ ಕೇಳಿದರೆ ಉತ್ತರ ಸಿದ್ಧವಿದೆ. 'ನಂತರದ ಸಂಸಾರ ಜಂಜಾಟದಲ್ಲಿ ಸಾಯ್ತಾ ಇರೋರು ವೀಕೆಂಡ್‌ಗಳಲ್ಲಿ ಸ್ವಲ್ಪ ಹಗುರಾಗಲಿ ಅಂತಾನೇ ಸಿನಿಮಾ ಮಾಡೋದ್ರೀ. ಅವರು ಬಂದು ಫಿಲ್ಮ್‌ನ ಯೌವನಕ್ಕೆ ಕನೆಕ್ಟ್ ಆಗ್ತಾರೆ. ಅದಲ್ದೇ ಮತ್ತದೇ ತಲೆ ಬೆಳ್ಳಗಾಗುತ್ತಿರುವ ಬದುಕಿನ ಬಗ್ಗೆ ಹೇಳೋಕೆ ಇದೇನು ಫಿಲಾಸಫಿ ಕ್ಲಾಸೇ? ಇಲ್ಲಿನ ಉದ್ದೇಶ ಮನರಂಜನೆ. ಹೀಗಾಗಿಯೇ ಜಾಲಿ ಡೇಗಳ ಬಗ್ಗೆ ಹೇಳೋದು.'
ತಾರುಣ್ಯ ಸಂಭ್ರಮ, ಹುಡುಗನನ್ನೋ- ಹುಡುಗಿಯನ್ನೋ ತನ್ನವ ಎಂದಾಗಿಸಿಕೊಳ್ಳುವ ತವಕ, ಕೆಲಸ ದಕ್ಕಿಸಿಕೊಳ್ಳುವುದು, ಜಗತ್ತನ್ನೇ ಗುರಾಯಿಸಿಯಾದರೂ ತಾನಂದುಕೊಂಡಿದ್ದನ್ನು ಪಡೆದುಕೊಳ್ಳುವುದು ಇಂಥ ಎಲ್ಲ ವಿವರಗಳನ್ನೂ ಒದಗಿಸುವ ಯೌವನವೆಂಬುದು ಬಿರುಸಲ್ಲೇ ಆಸ್ವಾದಿಸಿಕೊಳ್ಳಬೇಕಾದ ಕಾಲದ ತುಣುಕು ಎಂಬುದರಲ್ಲಿ ತಕರಾರಿಲ್ಲ. ಆದರೆ ಆ ಕಾಲ ಸರಿದ ನಂತರ ಬದುಕಲ್ಲಿ ಹೇಳಿಕೊಳ್ಳುವಂಥ ಯಾವ ವಿವರಗಳೂ ಪಡಿಮೂಡುವುದಿಲ್ಲ ಎಂಬಂತಹ ನೀರಸವನ್ನು ಬಗೆ ಬಗೆಯ ಜನಪ್ರಿಯ ಮಾಧ್ಯಮಗಳೆಲ್ಲ ಸೇರಿಕೊಂಡು ನಂಬಿಸಿಬಿಟ್ಟಿರುವುದು ದುರಂತವಲ್ಲವೇ? ಆ ಪರ್ವದಲ್ಲಿ ಕನಸುಗಳ ಕತೆ ಹಾಗಿರಲಿ, ಭಾವ ತಲ್ಲಣಗಳೂ ಇಲ್ಲವೇ? ಅಂಥ ಕಂಪನಗಳಿಗೆ ಯೌವನದ ಬಿಸುಪಿಗೆ ಇರುವ ಘನತೆಯ ಚೂರೇ ಚೂರು ಭಾಗವೂ ಇರದೇನು? 'ಕಾಲೇಜ್ ಡೇಸ್‌ನಲ್ಲಿ, ಬ್ಯಾಚುಲರ್ ಡೇಸ್‌ನಲ್ಲಿ ಎಂಥಾ ಲೈಫ್ ಇತ್ತು. ಮದ್ವೆ ಆಗಿದ್ದೇ ಎಲ್ಲ ಮುಗ್ದ್‌ಹೋಯ್ತು ಮಗಾ' ಎಂಬ ಹತಾಶ ಹಳಹಳಿಕೆಯೇ ವಾಸ್ತವವೇ?
ಹಂಗೇನಿಲ್ಲ ಅಂತ ಫಿಲಾಸಫಿಕಲ್ ಆಗಿಯಲ್ಲದೇ, ಜನಪ್ರಿಯ ಧಾಟಿಯಲ್ಲೇ ಮನದಟ್ಟು ಮಾಡಿಸಿ ಸಕಲರನ್ನೂ ಸಂಭ್ರಮಕ್ಕೆ ಹಚ್ಚಿಸುವ ಪ್ರಯತ್ನಗಳು ಆಗಾಗ ಆಗುತ್ತಿರುತ್ತವೆ. ಪ್ರಕಾಶ ರೈ ಅವರ ನಿರ್ದೇಶನ ಮತ್ತು ಅಭಿನಯದ 'ಒಗ್ಗರಣೆ' ಬದುಕಿನ ಇಂಥದೇ ಒಂದು ಘಮವನ್ನು ಎದೆನಾಸಿಕಕ್ಕೆ ಮುಟ್ಟಿಸುವಂಥದ್ದು. ಇಲ್ಲಿ ನಾಯಕ- ನಾಯಕಿ ಕಾಲೇಜಿನ ಗುಲ್‌ಮೊಹರ್ ಗಿಡಗಳಡಿಯ ಹೂಚೆಲ್ಲಿದ ನೆರಳಲ್ಲಿ ಭೇಟಿಯಾಗುವುದಿಲ್ಲ. ಕಾರಿನಿಂದಿಳಿದು ಕಚೇರಿಯ ಒಳಗೋಡುವ ಭರದಲ್ಲಿ ಒಬ್ಬರನ್ನೊಬ್ಬರು ಢಿಕ್ಕಿಯಾಗುವ ಆಘಾತದಲ್ಲಿ ಪ್ರೀತಿಯ ಹಾಡು ಹುಟ್ಟುವುದಿಲ್ಲ. ಅವರು ಭೇಟಿಯಾಗುವುದೇ ಚಿತ್ರದಂತ್ಯದಲ್ಲಿ. ಅವರಿಬ್ಬರಿಗೂ ಪ್ರಾಯ ಸರಿದಿದೆ. ಇನ್ನೂ ಮದುವೆಯಾಗದೇ ಉಳಿದುಬಿಟ್ಟಿದ್ದಾಳೆ ಎಂಬ ಒತ್ತಡ ನಾಯಕಿಯ ಮೇಲೆ ಸಹಜವೆಂಬಂತೆ ಜಾಸ್ತಿ ಪ್ರಮಾಣದಲ್ಲಿದೆ. ನಾಯಕನಿಗೂ ಅವನ ಸುತ್ತಲಿನವರು ಮುಂದೊದಗಬಹುದಾದ ಒಂಟಿಭಾವವನ್ನು ಮೇಲಿಂದ ಮೇಲೆ ನೆನಪಿಸುತ್ತಿದ್ದಾರಾದರೂ ಆತನ ಭಾವ ಜಗತ್ತು, ಎದುರಾದವರೊಂದಿಗೆಲ್ಲ ಹಂಚಿಕೊಂಡು ರುಚಿ ಸವಿಯುವುದೇ ಜೀವನವೆಂಬ ಪ್ರೌಢ ಹರವು ಆತನನ್ನು ಇದಕ್ಕೆಲ್ಲ ಅಧೀರನಾಗದಂತೆ ತಡೆಯುತ್ತಿದೆ. ಅವೆಲ್ಲದರ ನಡುವೆಯೂ ಆತನಿಗೆ ತನ್ನ ಜೀವನದಲ್ಲಿ ಇಲ್ಲದ ಸಂಗಾತಿಯ ವಿವರವನ್ನು ಸಂಪನ್ನಗೊಳಿಸಿಕೊಳ್ಳುವ, ಅಭೀಪ್ಸೆ ಎಂದು ಹೇಳಲಾಗದ ಕುತೂಹಲವೊಂದಿದೆ. ಅವನದಲ್ಲದ ಒಂದು ಕರೆ ಇಂಥದೊಂದು ಆಸೆಗೆ ಧ್ವನಿ ಟಿಸಿಲುಗಳನ್ನು ಒಡಮೂಡಿಸಿಬಿಡುತ್ತದೆ. ಆ ತಲ್ಲಣ, ವಿಷಾದ, ಆ ವಿಷಾದವನ್ನು ಹತಾಶೆಗೆ ಎಡೆಮಾಡಿಕೊಡದಂತೆ ನಿಭಾಯಿಸಿಕೊಳ್ಳುವ ರೀತಿ ಈ ಎಲ್ಲ ವಿವರಗಳೂ ಸಿನಿಮಾದಲ್ಲಿ ತೆರೆದುಕೊಳ್ಳುತ್ತಿದ್ದಂತೆ, ಸೀಟಿನಲ್ಲಿ ಕುಳಿತ ಯೌವನಿಗನಿಗೂ ಪರದೆಯ ಮೇಲಿನ ಅಲೆಮಾರಿ ಮಧ್ಯವಯಸ್ಕನ ಹೊಯ್ದಾಟಗಳು ತನ್ನ ಬಾಳಪುಟದಲ್ಲೂ ಇದ್ದರೆಷ್ಟು ಚೆಂದ ಅಂತ ಕ್ಷಣಕ್ಕಾದರೂ ಅನ್ನಿಸಿಬಿಡುತ್ತದಲ್ಲ! ಅಲ್ಲಿಯೇ ಸಿನಿಮಾದ ಗೆಲುವಿದೆ ಹಾಗೂ ಬದುಕಿನ ವಾಸ್ತವವನ್ನು ಖುಷಿ-ದುಃಖಗಳ 'ಇವಿಷ್ಟೇ' ಎಂಬ ವ್ಯಾಖ್ಯಾನದಾಚೆಯ ಕಾಮನಬಿಲ್ಲಿನಲ್ಲಿ ಕಾಣಿಸಿದ ಸಾರ್ಥಕ್ಯವಿದೆ.
ನಾಯಕನಾಗಿಯೋ ವಿಲನ್ ಆಗಿಯೋ ಹಾಡು, ಕುಣಿತ, ಡಿಶ್ಶುಮ್‌ಗಳಲ್ಲೇ ಬಹುತೇಕ ಇಮೇಜ್ ಕಟ್ಟಿಕೊಂಡ ಪ್ರತಿಭಾವಂತರಿಗೆ ವಯಸ್ಸು ಮಾಗುತ್ತಿದ್ದಂತೆ ತಮ್ಮ ವಯಸ್ಸಿಗೆ ತಕ್ಕಂತೆ ಮಾರ್ಪಾಟಾಗಿ ಮುಖ್ಯಭೂಮಿಕೆಯಲ್ಲೇ ಇರುವುದು ಹೇಗೆ ಎಂಬ ಯೋಚನೆಗಳಿಗೆ ತೆರೆದುಕೊಳ್ಳುತ್ತಿದ್ದಾರೆನಿಸುತ್ತದೆ. ಅದರ ಲಾಭ ರಸಿಕರಿಗೆ, ಅಭಿರುಚಿ ಹೊಂದಿದವರಿಗೆ ಸಿಗುತ್ತಿದೆ. ಹಿರಿಯ ನಟರಾದ ಅಮಿತಾಭ್- ಟಬು ಮುಖ್ಯಪಾತ್ರದಲ್ಲಿ ಬಹಳ ಹಿಂದೆ ಬಂದ 'ಚೀನಿ ಕಮ್' ಪಕ್ಕಾ ಮಸಾಲೆ ಚಿತ್ರ ಎಂದೆನಿಸಿದರೂ ಯೌವನ ಸಮೀಕರಣದಾಚೆಯ ರೋಮಾಂಚನವೊಂದನ್ನು ನೀಡಿತ್ತು. ಮಧ್ಯವಯಸ್ಕ ತಲ್ಲಣವನ್ನಷ್ಟೇ ಅಲ್ಲದೇ, ನಾವೆಲ್ಲ ಅದೇ ರುಟೀನು ಅಂತ ಮೂಗುಮುರಿಯುವ ಮಹಾಕ್ಷಣಗಳಲ್ಲೇ ಗ್ರಹಿಸಿರದ ಪುಳಕವೊಂದಿದೆ ಅಂತ ಮನವರಿಕೆ ಮಾಡಿಕೊಟ್ಟ 'ಲಂಚ್‌ಬಾಕ್ಸ್' ಚಿತ್ರ ಅದೆಂಥ ಪಕ್ವ ರುಚಿ ಹತ್ತಿಸಿತಲ್ಲವೇ? ಅಲ್ಲಂತೂ ನಾಯಕ- ನಾಯಕಿ ಭೇಟಿಯೇ ಆಗುವುದಿಲ್ಲ. ನಿವೃತ್ತಿ ಅಂಚಿಗೆ ತಲುಪಿರುವ ವಿಧುರ, ಮುಂಬೈನ ಚಿಕ್ಕ ಗೂಡೊಂದರಲ್ಲಿ ಅನಾಸಕ್ತ ಗಂಡ- ಶಾಲೆಗೆ ಹೊರಟು ಮನೆಯಲ್ಲಿ ಶೂನ್ಯ ತುಂಬುವ ಮಗಳೊಂದಿಗಿನ ನಾಯಕಿಯ ಲೋಕ. ಈಕೆ ಡಬ್ಬಾವಾಲಾಗಳ ಕೈಯಲ್ಲಿ ಗಂಡನಿಗೆಂದು ಕಳುಹಿಸುತ್ತಿದ್ದ ಲಂಚ್‌ಬಾಕ್ಸ್ ಅದು ಹೇಗೋ ನಿಸ್ಸಾರ ಸರ್ಕಾರಿ ಕಚೇರಿಯಲ್ಲಿ ಕಡತಗಳ ನಡುವೆ ಕಳೆದುಹೋಗಿದ್ದ ಈ ವಿಧುರನಿಗೆ ತಲುಪಿಬಿಡುವುದು, ಲಂಚ್‌ಬಾಕ್ಸ್‌ನಲ್ಲೇ ನಡೆಯುವ ಪತ್ರ ಸಂವಹನ, ಅದುವರೆಗೆ ಸಾಧಾರಣ ಎಂಬಂತಿದ್ದ ದೈನಿಕದ ತಲ್ಲಣಗಳು ಇವರಿಬ್ಬರ ಸಮಾಲೋಚನೆಯಲ್ಲಿ ವಿಚಿತ್ರ ಪರಿಮಳವೊಂದನ್ನು ಪಡೆದುಕೊಳ್ಳುವ ಬಗೆ... ಭಿನ್ನಲಿಂಗಿಗಳ ನಡುವಿನ ಮಾಮೂಲಿ ಮೋಹವನ್ನು ಮೀರಿದ ರುಚಿ ಬಡಿಸಿದ ಈ ಚಿತ್ರಬುತ್ತಿಯನ್ನು ಸವಿದವರೇ ಧನ್ಯರು.
'ಅಂತ್‌ಹೀನ್' ಎಂಬುದು 2009ರ ಬಂಗಾಳಿ ಚಿತ್ರ. ಮದುವೆಯಾಗದೇ ಮಧ್ಯ ವಯಸ್ಸು ಸವೆಸುತ್ತಿರುವ ಪೊಲೀಸ್ ಅಧಿಕಾರಿ ಅಂತರ್ಜಾಲದಲ್ಲಿ ಅನಾಮಿಕ ಭಾವ ಸಂಗಾತಿಯನ್ನು ಕಂಡುಕೊಳ್ಳುತ್ತಾನೆ. ಅವನ ಸಂಬಂಧಿಕರ ವಿಷಯದಲ್ಲೂ ಮುರಿದಿರುವ ಸಂಬಂಧಗಳ ಸದ್ದಿದೆ. ಅದೇ ಅವನನ್ನು ಒಂಟಿ ಬದುಕಿನ ಖಾಯಸ್ಸಿನಲ್ಲಿರುವಂತೆ ನೋಡಿಕೊಂಡಿದೆ. ತನ್ನೆದುರಿಗೆ ಇದ್ದವಳೇ ಅಂತರ್ಜಾಲ ಸಾಂಗತ್ಯಕ್ಕೆ ದಕ್ಕಿದ್ದ ಕಿನ್ನರಿ ಅಂತ ಆತನಿಗೆ ಗೊತ್ತಾಗುವುದು ಆಕೆ ದುರ್ಮರಣಕ್ಕೆ ಈಡಾದ ನಂತರವೇ. 'ಕೊನೆಯಿಲ್ಲದ್ದು' ಎಂಬರ್ಥದ ಈ ದುಃಖಾಂತ್ಯ ಕತೆಯನ್ನು ನಾವೇಕೆ ನೋಡಬೇಕೆಂದರೆ, ಬದುಕಿನ ಕಡು ವಿಷಾದಗಳೂ ಸಹನೀಯ ಎಂದು ಅರ್ಥ ಮಾಡಿಕೊಳ್ಳುವುದಕ್ಕೆ. ಇದೇ ಚಿತ್ರದ ನಾಯಕ ರಾಹುಲ್ ಬೋಸ್ ಜತೆ 'ದ ಜಪಾನೀಸ್ ವೈಫ್' ಎಂಬ ಅದ್ಭುತ ಚಿತ್ರ ಕೊಟ್ಟಿದ್ದಾರೆ ಅಪರ್ಣಾ ಸೆನ್. ಹಳ್ಳಿಯೊಂದರ ಶಿಕ್ಷಕ ಜಪಾನಿನ ಯುವತಿಯೊಂದಿಗೆ ಪತ್ರ ವ್ಯವಹಾರ ಮಾಡುತ್ತ, ಅದು ಪ್ರೇಮಕ್ಕೆ ತಿರುಗಿ, ಭೇಟಿಯೇ ಆಗದೇ ಪತ್ರ ಮುಖೇನವೇ ಮದುವೆಯಾಗಿಬಿಡುವುದು, ಆಕೆ ಕ್ಯಾನ್ಸರ್‌ಗೆ ತುತ್ತಾಗಿದ್ದಾಳೆಂದು ತಿಳಿಯುತ್ತಲೇ ಈತ ಬಿರುಮಳೆಯಲ್ಲಿ ಇಲ್ಲೆಲ್ಲೋ ಔಷಧ ಹುಡುಕುವುದು, ಕೊನೆಗೀತ ಜ್ವರದಲ್ಲೇ ಸತ್ತ ನಂತರ ಆಕೆ ಬಿಳಿಸೀರೆ ಉಟ್ಟು ಭಾರತಕ್ಕೆ ಬರುವುದು... ಈ ಸಿನಿಮಾದ ಭಾವ ತುಣುಕುಗಳು ಹಿತವಾಗಿ ಅಲ್ಲಾಡಿಸುತ್ತವೆ. ತನ್ನ ಮಗನ ಸಾವಿನಿಂದ ಖಿನ್ನತೆಗೆ ಜಾರಿದ್ದ ವೈದ್ಯನಿಗೆ ಬದುಕಿನ ಹೊಸ ವ್ಯಾಖ್ಯಾನ ಕಟ್ಟಿಕೊಡುವ ಕತೆಯುಳ್ಳ 'ಕ್ಲಬ್ 60' ಮತ್ತೊಂದು ಮಮತೆಯ ಜಾಯಮಾನದ ಚಿತ್ರ.
ಪ್ರಾಯದ ಜಾತ್ರೆಯಾಚೆಗೂ, ಇಳಿವಯಸ್ಸಿನಲ್ಲಿ ಮೈಮರೆಯಬಹುದಾದ ಸಂತೆಗಳಿವೆ ಅಂತ ಭರವಸೆ ಮೂಡಿಸುವ ಕಲಾಕೃತಿಗಳು ಹಿತವಾದ ತಂಗಾಳಿಯಂತೆ ಹೀಗೆಯೇ ಬಂದು ಬಡಿಯುತ್ತಿರಲಿ ಆಗಾಗ.
-ಚೈತನ್ಯ ಹೆಗಡೆ
cchegde@gmail.com