ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸುಮ್ಮನೇ ನೋಡುತ್ತ 'ಇರಾಕ' ಆಗದ ಸಂಘರ್ಷ

'ಅಪಹರಣಕ್ಕೊಳಗಾಗಿದ್ದಾರೆ ಎನ್ನಲಾದ ನಲ್ವತ್ತು ಭಾರತೀಯ ದಾದಿಯರ ಕತೆ...

Mainashree
Updated On : 18 Jun 2014, 9:19 am

'ಅಪಹರಣಕ್ಕೊಳಗಾಗಿದ್ದಾರೆ ಎನ್ನಲಾದ ನಲ್ವತ್ತು ಭಾರತೀಯ ದಾದಿಯರ ಕತೆ ಏನು? ಇರಾಕ್‌ನಲ್ಲಿರುವ ಭಾರತೀಯರ ಸಂಖ್ಯೆ ಎಷ್ಟು? ಅವರನ್ನೆಲ್ಲ ಸಂಘರ್ಷದಿಂದ ಬಚಾವು ಮಾಡಲು ಭಾರತ ಇಡಬೇಕಾದ ಹೆಜ್ಜೆ ಏನು? ಮೋದಿ ಸರ್ಕಾರ ತನಗೊದಗಿರುವ ಮೊದಲ ವಿದೇಶಿ ಬಿಕ್ಕಟ್ಟನ್ನು ಹೇಗೆ ನಿಭಾಯಿಸಲಿದೆ?' ಹೀಗೆಲ್ಲ ಪ್ರಶ್ನೆಗಳೆದ್ದಿವೆ. ಗ್ಲೋಬಲ್ ವಿಲೇಜ್ ಪರಿಕಲ್ಪನೆಯಲ್ಲಿ ಬದುಕುತ್ತಿರುವ ನಾವು, ಅಲ್ಲೆಲ್ಲೋ ಇರಾಕಿನಲ್ಲಿ ಯುದ್ಧ ಹೊತ್ತಿಕೊಂಡರೆ ನಮಗೇನಂತೆ ಎನ್ನುವಂತೆಯೇ ಇಲ್ಲ.
ಹೀಗಾಗಿಯೇ ನಮಗೆ ದೂರವೆನಿಸುತ್ತಿರುವ ವಿಷಯಗಳನ್ನೂ ಕೆದಕಲೇಬೇಕಾಗುತ್ತದೆ. ಅಂಥ ಕುತೂಹಲದೊಂದಿಗೆ ಇರಾಕ್‌ನ ಜಾತಕಕ್ಕೆ ಕಣ್ಣು ಹಚ್ಚಿದರೆ, ಈಗಲ್ಲಿ ಎದ್ದಿರುವ ಬೆಂಕಿ ಇಸ್ಲಾಂ ತೀವ್ರವಾದದ ಸಾಮ್ರಾಜ್ಯವನ್ನು ಇರಾಕ್‌ನಲ್ಲಿ ಸ್ಥಾಪಿಸುವುದಕ್ಕೆ ಹೊರಟಿದೆಯೇನೋ ಎಂಬ ದಿಗಿಲು ಹಬ್ಬುತ್ತದೆ. ಈ ಸ್ಥಿತಿಯಿಂದ ಉಂಟಾಗುವ ಜಾಗತಿಕ ಕಂಪನಗಳು ಭಾರತವೂ ಸೇರಿದಂತೆ ಆರ್ಥಿಕ ತಾಕತ್ತು ಗಳಿಸಿಕೊಳ್ಳುವುದಕ್ಕೆ ಶ್ರಮಪಡುತ್ತಿರುವ ರಾಷ್ಟ್ರಗಳ ಮೇಲೆ ಏನೆಲ್ಲ ಪರಿಣಾಮ ಬೀರಬಲ್ಲುದು. ತೈಲ ಸಂಪದ್ಭರಿತವಾದ ಇರಾಕ್‌ನಲ್ಲಾಗುವ ಸಣ್ಣ ಕದನ ಜಾಗತಿಕ ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಭಾರತವೂ ಹೊರತಾಗಿಲ್ಲ. ಅತ್ತ ಉಗ್ರರು ಇರಾಕ್‌ನ ಪ್ರಮುಖ ನಗರವೊಂದನ್ನು ವಶಪಡಿಸಿಕೊಳ್ಳುತ್ತಿದ್ದಂತೆ ಇತ್ತ ಸೆನ್ಸೆಕ್ಸ್ ಪಾತಾಳಕ್ಕಿಳಿದಿದ್ದು ಇದಕ್ಕೆ ಸಾಕ್ಷಿ.
ಇರಾಕ್‌ನಲ್ಲಿ ಈಗಿನ ಸಂಘರ್ಷ ಸುನ್ನಿ ಮತ್ತು ಶಿಯಾ ಪಂಗಡಗಳ ನಡುವಿನ ಪಂಥೀಯ ಕದನವಾಗಿ ಮಾರ್ಪಟ್ಟಿದೆ. ಈಗಿನ ಹಿಂಸಾಚಾರಲ್ಲಿ ಸುನ್ನಿಗಳೇನಾದರೂ ಮೇಲುಗೈ ಸಾಧಿಸಿದರೆ ಇರಾಕ್ ಪೂರ್ತಿಯಾಗಿ ಮೂಲಭೂತವಾದಿಗಳ ಕೈವಶವಾಗುವುದು. 'ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್‌' ಎಂಬ ಬಂಡುಕೋರರ ಸೇನೆ ಈಗ ಇರಾಕ್ ಸೇನೆಯ ವಿರುದ್ಧ ಕಾದಾಡುತ್ತಿದೆ. ಇದೀಗ ಐಎಸ್‌ಐಎಸ್ ಉಗ್ರರು ಸಿರಿಯಾ ಗಡಿಯಿಂದ ಹಿಡಿದು ಬಾಗ್ದಾದ್ ತನಕ ತಮ್ಮ ಹತೋಟಿ ಸಾಧಿಸಿದ್ದಾರೆ. ಹೀಗೆಯೇ ಮುಂದುವರಿದರೆ ಇರಾಕ್ ನಾನ್-ನೇಷನ್ ಆಗುವುದರಲ್ಲಿ ಸಂಶಯವಿಲ್ಲ. ಇಲ್ಲಿನ ಜಿಯೋ ಪಾಲಿಟಿಕ್ಸ್ ತುಂಬಾ ಸಂಕೀರ್ಣ. ನೆರೆಯ ಸಿರಿಯಾದಲ್ಲಿ ಸಣ್ಣ ಬದಲಾವಣೆ ಕೂಡ ಇರಾಕ್‌ನಲ್ಲಿ ಪ್ರಭಾವ ಬೀರುತ್ತದೆ.
ಸುನ್ನಿ-ಶಿಯಾ ಸಂಘರ್ಷದ ಯಾವುದೇ ಇತಿಹಾಸ ಗಮನಿಸಿದರೂ ಅಲ್ಲಿ ಸುನ್ನಿಗಳು ಕಟ್ಟರ್‌ಪಂಥೀಯರಾಗಿ ಕಾಣಿಸಿಕೊಳ್ಳುತ್ತಾರೆ. ಸದ್ದಾಂ ಹುಸೇನ್ ಖುದ್ದು ಸುನ್ನಿ ಪಂಥದವನಾಗಿದ್ದ ಕಾರಣ ಆತನ ಆಡಳಿತಾವಧಿಯಲ್ಲಿ ರಾಜಕೀಯ ಬಲಗಳೆಲ್ಲ ಸುನ್ನಿ ಪಂಗಡದೊಂದಿಗೇ ಇದ್ದವು. ಇರಾಕ್‌ನಲ್ಲಿ ಸುನ್ನಿಗಳೇ ಬಹುಸಂಖ್ಯಾತರು ಎಂಬಂಥ ಗ್ರಹಿಕೆಯೊಂದನ್ನು ಸದ್ದಾಂ ಕಟ್ಟಿಕೊಟ್ಟಿದ್ದ. ತಮಾಷೆ ಎಂದರೆ ಬಹುತೇಕರು ಈಗಲೂ ಹಾಗೇ ಅಂದುಕೊಂಡಿದ್ದಾರೆ. ಬಹುಸಂಖ್ಯಾತರಾಗಿರುವ ಸುನ್ನಿಗಳು ಇರಾಕ್‌ನ ಶಿಯಾಗಳಿಂದ ಅಧಿಕಾರ ಪಡೆದುಕೊಳ್ಳುವುದಕ್ಕೆ ಪ್ರಯತ್ನಿಸಿದರೆ ತಪ್ಪೇನು ಎಂಬ ಭಾವವೂ ಏಳುವುದಕ್ಕೆ ಇಲ್ಲಿ ಆಸ್ಪದವಿದೆ. ಇರಾಕ್ ಜನಸಂಖ್ಯೆಯಲ್ಲಿ ಶೇ. 60-65ರಷ್ಟು ಶಿಯಾಗಳು ಹಾಗೂ ಸುನ್ನಿಗಳ ಸಂಖ್ಯೆ ಶೇ. 32-37. ಸದ್ದಾಂ ಆಡಳಿತದಲ್ಲಿ ಕೊಬ್ಬಿದ್ದ ಈ ಪಂಗಡ ಆತನ ಅವಸಾನವಾಗುತ್ತಲೇ ಬಲ ಕಳೆದುಕೊಂಡಿತು. ಇರಾಕ್‌ನಲ್ಲಿ ಅಮೆರಿಕ ತನ್ನ ವ್ಯವಹಾರ ಮುಗಿಸಿಹೋದಮೇಲೆ ಸದ್ದಾಂ ಹುಸೇನ್ ಯಾವ ಹಾದಿಯಲ್ಲಿ ಸಾಗಿದ್ದನೋ ಅದೇ ಹಾದಿಯಲ್ಲಿ ಹಾಲಿ ಅಧ್ಯಕ್ಷ ನೌರಿ ಮಲಿಕಿ ಆಡಳಿತ ಕೂಡ ಸಾಗಿತು. ಸರ್ಕಾರಿ ಸೇವೆಗಳಿಂದ, ಅಧಿಕಾರ ವ್ಯಾಪ್ತಿಯಿಂದ ಸುನ್ನಿಗಳನ್ನು ಬಿಲ್‌ಕುಲ್ ಹೊರಗಿಡಲಾಯಿತು. ನಿರುದ್ಯೋಗಿಗಳಾದ ಬಹುತೇಕ ಸುನ್ನಿಗಳು ಇದೀಗ ಐಎಸ್‌ಐಎಸ್ ಜತೆ ಗುರುತಿಸಿಕೊಂಡು ಹಿಂಸಾಚಾರದಲ್ಲಿ ತೊಡಗಿದ್ದಾರೆ.
ಇರಾಕ್‌ನ ಕೆಲವು ವಿದೇಶಾಂಗ ನೀತಿ ಕೂಡ ಬಿಕ್ಕಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇರಾಕ್‌ನಲ್ಲಿ ಶೇ.65ರಷ್ಟು ಶಿಯಾಗಳಿದ್ದರೆ, ಶೇ.35ರಷ್ಟು ಸುನ್ನಿಗಳಿದ್ದಾರೆ. ಪ್ರಧಾನಿ ಮಲಿಕಿ ಅವರು ಶಿಯಾಗಳೇ ಹೆಚ್ಚಾಗಿರುವ ಇರಾನ್ ಜತೆ ಒಪ್ಪಂದಕ್ಕೆ ಮುಂದಾಗಿರುವುದು ಸುನ್ನಿಗಳು ಕೋಪಗೊಳ್ಳಲು ಕಾರಣ. ಮತ್ತು ಈಗಿನ ಹಿಂಸಾಚಾರಕ್ಕೂ ಇದೇ ಪ್ರಮುಖ ಕಾರಣ. ಇದೇ ಮಾತನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಆಡುತ್ತಿವೆ. ಇರಾಕ್‌ನ ಸದ್ಯದ ಬಿಕ್ಕಟ್ಟಿಗೆ ಇರಾನ್ ಮಧ್ಯಪ್ರವೇಶವೇ ಕಾರಣ. ಇರಾಕ್ ಪ್ರಧಾನಿ ನೌರಿ ಮಲಿಕಿ ಇದಕ್ಕೆ ಅವಕಾಶ ಮಾಡಿಕೊಟ್ಟಿದ್ದು ತಪ್ಪು ಎನ್ನುವ ರೀತಿಯಲ್ಲಿ ಅಮೆರಿಕ, ಬ್ರಿಟನ್ ರಾಜತಾಂತ್ರಿಕರು ಮಾತನಾಡುತ್ತಿದ್ದಾರೆ. ಆದರೆ, ಅವರಿಗೂ ಗೊತ್ತು. ಇರಾಕ್‌ನಲ್ಲಿ ಮತ್ತಷ್ಟು ಪರಿಸ್ಥಿತಿ ಬಿಗಡಾಯಿಸಿದರೆ ಇರಾನ್ ಮಾತ್ರ ಇರಾಕ್‌ಗೆ ಸಹಾಯ ಮಾಡಬಲ್ಲದು ಎಂಬುದು. ಇದೇ ಉದ್ದೇಶವಿಟ್ಟುಕೊಂಡು ಮಲಿಕಿ ಇರಾನ್ ಜತೆ ಹೆಜ್ಜೆ ಹಾಕಿದ್ದರು.
ಇವೆಲ್ಲ ಆಂತರಿಕ ಹೊಯ್ದಾಟಗಳಾದರೆ, ಇರಾಕ್ ವಿದ್ಯಮಾನಗಳಿಗೆ ಅಮೆರಿಕವನ್ನು ಹೊಣೆಗಾರ ಆಗಿಸದಿದ್ದರೆ ಚರ್ಚೆ ಸಂಪೂರ್ಣವಾಗದು. ಸದ್ದಾಂ ಹುಸೇನ್‌ನ ಸದ್ದಡಗಿಸಲು 2003ರಲ್ಲಿ ಬುಷ್ ಆಡಳಿತ ಎಷ್ಟು ಆತುರಾತುರವಾಗಿ ಯುದ್ಧ ಘೋಷಿಸಿತೋ, ಅಷ್ಟೇ ಆತುರಾತುರವಾಗಿ ಈಗಿನ ಒಬಾಮಾಡಳಿತ 2011ರಲ್ಲಿ ತನ್ನ ಸೇನಾಪಡೆ ಹಿಂದಕ್ಕೆ ಕರೆಯಿಸಿಕೊಂಡಿದ್ದು ಕೂಡ ಈಗಿನ ದುಸ್ಥಿತಿಗೆ ಕಾರಣ. ಬುಷ್ ಆಡಳಿತ ಏನು ತಪ್ಪು ನಿರ್ಧಾರ ಕೈಗೊಂಡಿತ್ತೋ, ಅಂಥದ್ದೇ ನಿರ್ಧಾರಗಳನ್ನು ಒಬಾಮಾ ಕೂಡ ಕೈಗೊಂಡಿದ್ದಾರೆ ಎಂಬುದು ರಾಜಕೀಯ ಪರಿಣತರ ವಿಶ್ಲೇಷಣೆಯ ತಿರುಳು. ಯಾಕೆಂದರೆ, ಆಸ್ಟ್ರೇಲಿಯಾದ ನಿವೃತ್ತ ಸೇನಾಧಿಕಾರಿಯೊಬ್ಬರು ಈಗಾಗಲೇ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ಡೇವಿಡ್ ಬ್ರೂಕ್ಸ್ ಬರೆದ ಅಂಕಣದಲ್ಲಿ, ಇರಾಕ್ ರಾಷ್ಟ್ರವಾಗಿ ಉಳಿಯದಿರುವ ಆತಂಕವೊಂದನ್ನು ಎದುರಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಸುನ್ನಿಗಳ ಬಂಡುಕೋರರ ಸಂಘಟನೆ ಐಎಸ್‌ಐಎಸ್ ಹೋಗುತ್ತಿರುವ ವೇಗ ನೋಡಿದರೆ ಈ ಮಾತು ಅಕ್ಷರಶಃ ನಿಜ. ಈಗಾಗಲೇ ಕುರ್ದಿಸ್ತಾನ್ ಪ್ರಾಂತದಲ್ಲಿ ಸ್ವಾಯತ್ತ ಆಡಳಿತವಿದೆ. ಸದ್ಯ ಇರಾಕ್‌ನ ರಾಜಧಾನಿ ಬಾಗ್ದಾದ್‌ನ ಬುಡದಲ್ಲೇ ಉಗ್ರರು ಬೀಡು ಬಿಟ್ಟಿದ್ದಾರೆ. ಅಂದರೆ, ಬಾಗ್ದಾದ್‌ನಿಂದ ಕೇವಲ 37 ಕಿ.ಮೀ. ಅಂತರದಲ್ಲಿರುವ ಬಕುಬಾ ಪಟ್ಟಣವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಹಾಗಾಗಿ ಯಾವುದೇ ಕ್ಷಣದಲ್ಲಿ ಬಾಗ್ದಾದ್ ಬಾಗಿಲಿಗೇ ಬರಬಹುದು. ಇರಾಕ್‌ನ ಎರಡನೇ ಅತಿ ದೊಡ್ಡ ನಗರವಾದ ಮೊಸೂಲ್ ಅನ್ನು ಅತ್ಯಂತ ಸುಲಭವಾಗಿ ಐಎಸ್‌ಐಎಸ್ ವಶಪಡಿಸಿಕೊಂಡಿದ್ದು ನೋಡಿದರೆ, ಇದೇನು ಅಂಥ ಮಹಾಕಷ್ಟಕರ ಕೆಲಸವಲ್ಲ. ಸದ್ಯ ಅತ್ಯಂತ ಶ್ರೀಮಂತ ಉಗ್ರ ಸಂಘಟನೆ ಎಂಬ ಕುಖ್ಯಾತಿ ಇದಕ್ಕಿದೆ. ಅಮೆರಿಕದ ಗುಪ್ತಚರ ಮಾಹಿತಿ ಪ್ರಕಾರ ಸುಮಾರು 10 ಸಾವಿರಕ್ಕೂ ಹೆಚ್ಚು ಉಗ್ರರು ಈ ಸಂಘಟನೆಯಲ್ಲಿದ್ದಾರೆ. ವಿಶೇಷ ಎಂದರೆ, ಇದರಲ್ಲಿ ಐರೋಪ್ಯ ಒಕ್ಕೂಟ ರಾಷ್ಟ್ರದವರೂ ಇದ್ದಾರೆ!
ಸದ್ಯದ ಪರಿಸ್ಥಿತಿಯಲ್ಲಿ ಇರಾಕ್‌ನ ಬಿಕ್ಕಟ್ಟಿಗೆ ಪರಿಹಾರ ಹುಡುಕುವುದೆಂದರೆ, ಇರಾಕ್‌ಗೆ ಅಮೆರಿಕ ಮತ್ತೆ ಸೇನೆಯನ್ನು ಕಳುಹಿಸುವುದಲ್ಲ. ಬದಲಾಗಿ 'ಉಗ್ರ' ಹಿಂಸಾಚಾರವನ್ನು ತಡೆಗಟ್ಟುವಲ್ಲಿ ಇರಾಕ್ ಪ್ರಧಾನಿಗೆ ಹೆಚ್ಚಿನ ಸಲಹೆ, ಸಹಕಾರ ನೀಡುವುದು ಅಂತಾರಾಷ್ಟ್ರೀಯ ಸಮುದಾಯದ ಈಗಿನ ತುರ್ತು ಅಗತ್ಯ. ಇದೇ ವೇಳೆ, ತಪ್ಪು ನೀತಿ ಕೈ ಬಿಟ್ಟು ಪ್ರಧಾನಿ ಮಲಿಕಿ ಕೂಡಾ ಸೇನೆಯನ್ನು ಮತ್ತಷ್ಟು ವೃತ್ತಿಪರಗೊಳಿಸಿ, ಪ್ರಾಂತೀಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಆಗ ಇರಾಕ್‌ನಲ್ಲಿ ಸೃಷ್ಟಿಯಾಗಿರುವ ಹಿಂಸಾಚಾರ ಹಾಗೂ ರಾಜಕೀಯ ಬಿಕ್ಕಟ್ಟು ಶಮನಗೊಳ್ಳಬಹುದು.

=  ಮಲ್ಲಿಕಾರ್ಜುನ ತಿಪ್ಪಾರ, ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement