ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಬದಲಾವಣೆಯ ಆಶಯಗಳ ಒತ್ತಡದಲ್ಲಿ ಹೊಸ ಸರ್ಕಾರ

Mainashree
Updated On : 23 Jun 2014, 9:56 am

ಮತಸಮರದಲ್ಲಿ ಭಾರಿ ಗೆಲವು ಸಾಧಿಸಿದ ಯಾರಿಗಾದರೂ ಜನಸಮೂಹದ ಪ್ರೀತಿ ಸಾಗರದಲ್ಲಿ ಒಂದಿಷ್ಟು ಹೊತ್ತು ಕಳೆದುಹೋಗುವುದು ಸಹಜವಾದ ಕ್ರಿಯೆಯಾಗುತ್ತದೆ. ಪ್ರೇಮಿಯೊಬ್ಬ ತನ್ನ ಮನದನ್ನೆಯನ್ನು ಸೇರಿದ ಕೆಲವೇ ಸಮಯದಲ್ಲಿ ಆ ಪರಿಮಳವೇನೂ ಕಡಿಮೆ ಆಗಿಬಿಡುವುದಿಲ್ಲ. ಅಂಥದೊಂದು ಪ್ರಕ್ರಿಯೆ ಅದಾಗಲೇ ನರೇಂದ್ರ ಮೋದಿ ಸರ್ಕಾರದ ವಿಷಯದಲ್ಲಿ ಆಗುತ್ತಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದು ತಿಂಗಳಷ್ಟೇ ಸಂದಿದ್ದರೂ ಜನರು ಬದಲಾವಣೆ ತ್ವರಿತವಾಗಿ ಆಗಲಿ ಎಂಬಂತೆ ತಾಳ್ಮೆ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಅಕ್ಷರಶಃ ಮೂಲೆಗೆ ಒತ್ತಿರುವ ಮತದಾರ ತನ್ನ ಮನಗೆಲ್ಲುವ ಬದಲಾವಣೆಗೆ ಇನ್ನೂ ಕಾಯುತ್ತಲೇ ಇದ್ದಾನೆ. ಈಗ ಆಗಿರುವ ಬದಲಾವಣೆಗಳೇನಿದ್ದರೂ ದೈನಂದಿನದ ಆಡಳಿತಕಾರ್ಯದಲ್ಲಿ ಕೆಲಸಕ್ಕೆ ಬರದ ಹಳೆತಲೆಗಳನ್ನು ಪಕ್ಕಕ್ಕೆ ಸರಿಸಿ ಹೊಸಬರನ್ನು ತಂದಿರುವಂಥದ್ದು. ಇನ್ನೂ ಗುರುತರವಾದ ಬದಲಾವಣೆಗಳ ಬಗ್ಗೆ ಕಾತರವಿದೆ.
ಈ ವಿಷಯದಲ್ಲಿ ನೀವು ಕಾಂಗ್ರೆಸ್ ಪಕ್ಷದ ಪ್ರತಿಕ್ರಿಯೆಯನ್ನು ಪರಿಗಣಿಸಬೇಕಿಲ್ಲ. ಅಷ್ಟೊಂದು ಅವಮಾನದ ಸೋಲಿನ ನಂತರವೂ ಆ ಬಗ್ಗೆ ಸ್ವಲ್ಪವೂ ಆತ್ಮವಿಮರ್ಶೆ ಮಾಡಿಕೊಳ್ಳುವುದಕ್ಕೆ ಸಮಯ ಎತ್ತಿಡದೇ ಅದು ಹೊಸ ಸರ್ಕಾರದ ವಿರುದ್ಧ ಬೀದಿಗಿಳಿದಿದೆ. ನೀರಿನ ವ್ಯವಸ್ಥೆಯನ್ನಾಗಲೀ, ವಿದ್ಯುತ್ತನ್ನಾಗಲೀ ರಾತ್ರೋರಾತ್ರಿಯಲ್ಲಿ ಸಮರ್ಪಕಗೊಳಿಸಲಿಕ್ಕಾಗದು ಎಂಬ ಮೂಲಭೂತ ಸತ್ಯ ಗೊತ್ತಿದ್ದೂ ಅದು ಹೀಗೆಲ್ಲ ವರ್ತಿಸುತ್ತಿದೆ. ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗುವುದಕ್ಕೂ ಮೊದಲು ಈ ಹಿಂದಿನ ಸರ್ಕಾರ ಸೃಷ್ಟಿಸಿಟ್ಟ ಅಪಸವ್ಯಗಳನ್ನು ಹೊಗಲಾಡಿಸಿಕೊಳ್ಳಬೇಕಲ್ಲವೇ?
ಕಾಂಗ್ರೆಸ್ಸನ್ನು ನಿರ್ಲಕ್ಷಿಸುವ ಛಾತಿ ಮೋದಿ ಸರ್ಕಾರಕ್ಕೆ ಇದೆಯಾದರೂ ಶೀಘ್ರ ಬದಲಾವಣೆಗಳು ಆಗಬೇಕು ಎಂಬ ಜನರ ಉತ್ಕಂಟಿತ ಆಸೆಯನ್ನು ಅದು ನಿರ್ಲಕ್ಷಿಸುವಂತೆಯೇ ಇಲ್ಲ. ನಮ್ಮ ಪ್ರತಿದಿನದ ಬದುಕಿನಲ್ಲಿ ಹೇಳಿಕೊಳ್ಳುವಂಥ ಯಾವ ಬದಲಾವಣೆಗಳು ಆಗಿವೆ ಎಂದು ಬಿಜೆಪಿಗೆ ಮತ ಹಾಕಿದವರು ಇನ್ನೇನು ಪ್ರಶ್ನಿಸುವುದಕ್ಕೆ ಪ್ರಾರಂಭಿಸುತ್ತಾರೆ. ರಾಷ್ಟ್ರ ರಾಜಧಾನಿಯಲ್ಲಿ ಈಗಲೇ ಪ್ರತಿಭಟನೆಗೆ ಇಳಿದಿರುವ ಬೆರಳೆಣಿಕೆಯ ಕಾಂಗ್ರೆಸ್ಸಿಗರನ್ನು ಈ ಜನಸಮೂಹದೊಂದಿಗೆ ಹೋಲಿಸಬೇಕಾದ ಅಗತ್ಯವೇನಿಲ್ಲ. ಏಕೆಂದರೆ ಪ್ರಧಾನಿ ಫಲಿತಾಂಶಗಳನ್ನು ನೀಡುವುದಕ್ಕೆ ಕೆಲವು ತಿಂಗಳುಗಳವರೆಗೆ ಕಾಯುವ ತಾಳ್ಮೆ ಅವರಿಗಿದೆ.
ರಾಜಭವನದಲ್ಲಿರುವ ಕಾಂಗ್ರೆಸ್‌ನ ರಾಜಕೀಯ ನೇಮಕಗಳನ್ನು ಬದಲಿಸುವ ನಿಟ್ಟಿನಲ್ಲಿ ಈಗ ನಡೆದಿರುವ ಸಂಘರ್ಷದ ಬಗ್ಗೆ ಜನರಿಗೇನೂ ತಕರಾರುಗಳಿರಲಿಲ್ಲ. ಆದರೆ ಹಿಂದಿನ ಕಾಂಗ್ರೆಸ್ ಆಡಳಿತವು ಈ ಹುದ್ದೆಗಳನ್ನು ಹೇಗೆ ಆಶ್ರಯದ ತಾಣಗಳನ್ನಾಗಿ ಪರಿವರ್ತಿಸಿತ್ತೋ ಅಂತೆಯೇ ಈ ಹೊಸ ಸರ್ಕಾರವು ತನ್ನ ರಾಜಕೀಯ ಕೋವಿದರಿಗೆ ಅಲ್ಲಿ ಅವಕಾಶ ಕಲ್ಪಿಸುವುದಕ್ಕೆ ಬದಲಾವಣೆ ಮಾಡುತ್ತಿದೆ ಎಂಬ ಸೂಚನೆ ಈ ಸರ್ಕಾರಕ್ಕೆ ಕೆಟ್ಟ ಚಹರೆಯನ್ನು ನೀಡುತ್ತಿದೆ. ಸರ್ಕಾರ ಬದಲಾಗುತ್ತಲೇ ಹಿಂದೆ ರಾಜಕೀಯವಾಗಿ ಆಶ್ರಿತರಾಗಿದ್ದವರನ್ನು ತೆಗೆದು ತಮ್ಮ ಪಾಳೆಯದ ಅಂಥದ್ದೇ ಆಶ್ರಿತರನ್ನು ಕೂರಿಸುವುದು ಬದಲಾವಣೆ ಎಂದು ಹೇಗೆ ಕರೆಸಿಕೊಳ್ಳುತ್ತದೆ? ಈ ಕೆಟ್ಟ ಸಂಪ್ರದಾಯವನ್ನು ಮೋದಿ ಮುರಿಯಲಿ ಎಂದು ಜನ ಆಶಿಸುವುದರಲ್ಲಿ ತಪ್ಪೇನಿದೆ?
ಹಾಗೆಯೇ, ಪ್ರಧಾನಿ ಕಾರ್ಯಾಲಯದಲ್ಲಿಯೇ ಎಲ್ಲ ಅಧಿಕಾರವನ್ನೂ ಕೇಂದ್ರೀಕರಿಸುವ ಪದ್ಧತಿ ಎಲ್ಲಿಯವರೆಗೆ ಒಳ್ಳೆಯದೆಂದರೆ, ಅದರಿಂದ ಆಡಳಿತ ಉತ್ತಮವಾಗುವವರೆಗೆ ಮಾತ್ರ. ಇಂದಿರಾ ಗಾಂಧಿ ಅವರ ಅಧಿಕಾರಾವಧಿಯಲ್ಲಿ ದೇಶಕ್ಕೆ ಏನಾಯಿತು ಎಂದು ನಾವೆಲ್ಲ ನೋಡಿದ್ದೇವೆ. ಬಲಿಷ್ಠ ಪ್ರಧಾನಿ ಹಾಗೂ ಸರ್ವಾಧಿಕಾರಿ ಪ್ರಧಾನಿ ಎಂಬುದರ ನಡುವೆ ಬಹಳ ತೆಳುವಾದ ಗೆರೆ ಇದೆ. ಎಲ್ಲ ಸಚಿವಾಲಯಗಳಿಗೂ ಆಪ್ತ ಸಹಾಯಕ ಹಾಗೂ ಸಿಬ್ಬಂದಿಯನ್ನು ಪ್ರಧಾನಿ ಕಾರ್ಯಾಲಯವೇ ನೇಮಿಸುವುದಕ್ಕೆ ಹೊರಡುವುದರ ಬದಲು, ಒಳ್ಳೆಯವರನ್ನು ಸಚಿವರನ್ನಾಗಿ ಆರಿಸಿ ನಂತರ ಅವರಲ್ಲಿ ಸಂಪೂರ್ಣ ವಿಶ್ವಾಸವನ್ನು ಇಡುವ ವೈಖರಿ ಉತ್ತಮದ್ದೆನಿಸಿಕೊಳ್ಳುತ್ತದೆ. ಫೇಸ್‌ಬುಕ್, ಟ್ವಿಟ್ಟರ್, ಅಹೋರಾತ್ರಿ ಟಿವಿ ವಾಹಿನಿಗಳ ಈ ಯುಗದಲ್ಲಿ ಇಂಥವೆಲ್ಲ ವಿವಾದಗಳಿಗೆ ಎಂಡೆ ಮಾಡಿಕೊಡಬಾರದು.
ಹಿಂದಿ ಭಾಷೆಯ ಕುರಿತ ಸುತ್ತೋಲೆ ಹೊರಡಿಸುವಾಗಲೂ ಸ್ವಲ್ಪ ಯೋಚಿಸಬೇಕಿತ್ತು. ನಿಜ. ಹಿಂದಿ ಬಳಕೆಯ ಬಗ್ಗೆ ಅಧಿಕಾರಿಗಳಿಗೆ ಮನನ ಮಾಡಿಕೊಡುವ ಸುತ್ತೋಲೆ ಈ ಸರ್ಕಾರದ ಹೊಸ ಕ್ರಮವೇನೂ ಅಲ್ಲ. ಹಿಂದಿನಿಂದಲೂ ನಡೆದುಕೊಂಡುಬಂದಿದ್ದ ಈ ಕ್ರಮಕ್ಕೆ ಕರುಣಾನಿಧಿಯಂಥವರ ಪ್ರತಿಕ್ರಿಯೆಯೂ ಹೊಸತಲ್ಲ. ಆದರೆ, ಯಾವ ವಿಕಾಸ ಮತ್ತು ಅಭಿವೃದ್ಧಿ ಎಂಬ ಪರಿಕಲ್ಪನೆ ಮೂಲಕವೇ ಅಧಿಕಾರ ಹಿಡಿಯುವುದಕ್ಕೆ ಸಾಧ್ಯವಾಯಿತೋ ಅಂಥ ಕಾರ್ಯಸೂಚಿಯಿಂದ ಗಮನವನ್ನು ಬೇರೆಡೆ ಸೆಳೆಯುವ ಯಾವುದೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳದ ಎಚ್ಚರಿಕೆ ಸರ್ಕಾರಕ್ಕೆ ಇರಬೇಕು. ತಮ್ಮ ಮಕ್ಕಳನ್ನೆಲ್ಲ ಆಂಗ್ಲ ಮಾಧ್ಯಮಕ್ಕೆ ಸೇರಿಸುವ ಮನಸ್ಥಿತಿಯ ಕೆಲ ಹಿಂದಿ ಮನುಷ್ಯರನ್ನು ಖುಷಿಗೊಳಿಸುವುದಕ್ಕೆ ಈ ಸುತ್ತೋಲೆ ಹೊರಡಿಸಿ ಕರುಣಾನಿಧಿ ಅಂಥವರಿಗೆ ಭಾವನೆಗಳನ್ನು ಕೆದಕುವುದಕ್ಕೆ ಏಕೆ ಅವಕಾಶ ಒದಗಿಸಬೇಕು? ಈಗ ಡಿಎಂಕೆ ಪ್ರಮುಖರಿಗೆ ಗರ್ಜಿಸುವ ತಾಕತ್ತು ಅಷ್ಟಾಗಿ ಉಳಿದುಕೊಂಡಿಲ್ಲ ಎಂಬುದು ಬೇರೆ ವಿಷಯ.
ಇರಾಕ್‌ನಲ್ಲಿ ಭಾರತೀಯರು ಒತ್ತೆಯಾಳಾಗಿರುವ ಸಂದರ್ಭವು ಮೋದಿ ಸರ್ಕಾರ ಎದುರಿಸುತ್ತಿರುವ ಮೊದಲ ವಿದೇಶಿ ಬಿಕ್ಕಟ್ಟು ಎಂದು ಬಿಂಬಿಸುವುದು ತಪ್ಪಾಗುತ್ತದೆ. ಖಂಡಿತ ಅವರೆಲ್ಲರ ಸುರಕ್ಷತೆ ನಮ್ಮ ಆದ್ಯತೆಯೇ ಆದರೂ ಏಕಾಏಕಿ ಸ್ಫೋಟಿಸಿದ ಸಂಘರ್ಷದಲ್ಲಿ ಅವರು ಬಲಿಪಶುಗಳಾಗುವುದನ್ನು ತಪ್ಪಿಸುವುದು ನಮ್ಮ ಕೈಯಲ್ಲಿ ಇರಲಿಲ್ಲ. ಇರಾಕ್‌ನಲ್ಲಿ ಆಗಿರುವಂಥ ಸಂಘರ್ಷಮಯ ವಾತಾವರಣವನ್ನು ಯಾವ ಸರ್ಕಾರವೂ ಮೊದಲೇ ಗ್ರಹಿಸಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಸಾಧ್ಯವಿಲ್ಲ. ಇಷ್ಟಾಗಿಯೂ ಈ ಬೆಂಕಿಯಿಂದ ಭಾರತೀಯ ಒತ್ತೆಯಾಳುಗಳು ಹೊರಬರುವ ಸಾಧ್ಯತೆ ಪ್ರಖರವಾಗಿಯೇ ಇದೆ. ಹಿಂಸಾತ್ಮಕ ವಲಯದಲ್ಲಿ ಸಿಕ್ಕಿಬಿದ್ದವರನ್ನು ರಕ್ಷಿಸುವುದಕ್ಕೆ ಆಡಳಿತಾತ್ಮಕ, ರಾಜತಾಂತ್ರಿಕ ಕೌಶಲಗಳೇನೂ ಬೇಕಾಗಿಲ್ಲ.
ನಿಜಕ್ಕೂ ಮೋದಿ ಸರ್ಕಾರದ ಮುಂದಿರುವ ಸವಾಲು ಯಾವುದೆಂದರೆ ಆಹಾರ ವಸ್ತುಗಳ ಬೆಲೆ ಏರಿಕೆ ಹಾಗೂ ಅರ್ಥವ್ಯವಸ್ಥೆ. ವಾತಾವರಣದಲ್ಲಿನ ಏರುಪೇರು ಹಾಗೂ ಇಂಥ ಸಂದರ್ಭಗಳಲ್ಲಿ ಆದಷ್ಟು ಲಾಭ ಮಾಡಿಕೊಳ್ಲುವ ವ್ಯಾಪಾರಿಗಲ ಬುದ್ಧಿಯಿಂದಾಗಿ ಆಹಾರ ದರ ಏರಿಕೆ ಅದಾಗಲೇ ಗಂಭೀರ ಆತಂಕವನ್ನೇ ಸೃಷ್ಟಿಸಿದೆ. ನಿಜಕ್ಕೂ ಸರ್ಕಾರದ ಕೌಶಲ ಒರೆಗಲ್ಲಿಗೆ ಸಿಕ್ಕುವುದು ಇಲ್ಲೇ. ಏಕೆಂದರೆ ಈ ವ್ಯಾಪಾರಿ ವರ್ಗವೇ ಬಹುಕಾಲದಿಂದ ಜನಸಂಘ-ಬಿಜೆಪಿಯ ಮುಖ್ಯ ಬೆಂಬಲಿಗ ವರ್ಗವಾಗಿತ್ತು. ಆದರೆ, ಈರುಳ್ಳಿ ಮತ್ತೂ ಆಲೂಗಳನ್ನು ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿ ಇರಿಸಿಕೊಂಡಿರುವ ದಾಸ್ತಾನುಗಳ ಮೇಲೆ ಆಗಲೇ ದಾಳಿಗಳು ನಡೆದಿದ್ದು ಈ ನಿಟ್ಟಿನಲ್ಲಿ ಸ್ವಾಗತಾರ್ಹ ಬೆಳವಣಿಗೆಯೇ ಆಗಿದೆ.
ಆದರೂ ಬಹುದೊಡ್ಡ ಸುಧಾರಣೆಗೆ ಆಡಳಿತ ಸೂತ್ರ ಹಿಡಿದ ಎರಡು ವಾರಗಳಲ್ಲೇ ಮುಂದಾಗದಿರುವುದನ್ನು ಮೋದಿ ಸರ್ಕಾರದಲ್ಲಿ ಹೊಸ ಐಡಿಯಾಗಳಿಲ್ಲ ಎಂಬರ್ಥದಲ್ಲಿ ವ್ಯಾಖ್ಯಾನಿಸಬೇಕಿಲ್ಲ. ಮೋದಿ ಸರ್ಕಾರವು ಅಧಿಕಾರಿ ವಲಯದಲ್ಲಿ ಕೆಲಸದ ವೇಗ ಹೆಚ್ಚಿಸಿರುವುದೇ ಪ್ರಮುಖ ಬೆಳವಣಿಗೆ. ಏಕೆಂದರೆ ಇಂಥ ವಾತಾವರಣವಿಲ್ಲದೇ ಯಾವ ಸುಧಾರಣೆಗಳನ್ನೂ ಅಧಿಕಾರಿ ವರ್ಗದಿಂದ ಅನುಷ್ಠಾನಗೊಳಿಸುವುದಕ್ಕೆ ಸಾಧ್ಯವಿಲ್ಲ. 'ಸಬ್ ಚಲ್ತಾ ಹೌ' ಎಂಬ ಧೋರಣೆಯನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂಬ ಎಚ್ಚರಿಕೆ ತಟ್ಟಿಸಿದ ನಂತರವಷ್ಟೇ ನರೇಂದ್ರ ಮೋದಿ ಬಹುದೊಡ್ಡ ಸುಧಾರಣೆಗಳತ್ತ ದೃಷ್ಟಿ ಹಾಯಿಸಬಹುದು. ರಾಜಸ್ಥಾನದಲ್ಲಿ ವಸುಂಧರಾ ರಾಜೆ ಅವರು ಬೆಳವಣಿಗೆ ವಿರೋಧಿ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಬದಲಾಯಿಸಿ ಉದಾಹರಣೆ ನಿರ್ಮಿಸಿದ್ದಾರೆ. ನರೇಂದ್ರ ಮೋದಿಯವರಿಗೂ ಬೆಳವಣಿಗೆ ಪರವಾದ ಕಾಯ್ದೆಗಳನ್ನು ಎಲ್ಲ ಕಡೆ ತರುವ ಮೆಜಾರಿಟಿ ಇರದಿದ್ದರೂ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಕಾರ್ಮಿಕ ಕಾಯ್ದೆಗಳನ್ನು ಆಧುನಿಕವಾಗಿ ವ್ಯಾಖ್ಯಾನಿಸುವ ಮೂಲಕ ಬೆಳವಣಿಗೆ ಸಾಧಿಸಬಹುದು. ಬೆಳವಣಿಗೆಯನ್ನು ಪ್ರತಿಬಂಧಿಸುತ್ತಿರುವ, ಕೆಲವೇ ಭೂಮಾಲಿಕರ ಕೈಯಲ್ಲಿ ಸೇರಿಕೊಂಡು ಸ್ವಾಧೀನಕ್ಕೆ ಅಡ್ಡಿಯಾಗಿರುವಂಥ ಸ್ಥಿತಿಗಳನ್ನೆಲ್ಲ ಹೊಗಲಾಡಿಸಿ ಮುಂದಿನ ಚುನಾವಣೆಯ ಗೆಲವಿಗೆ ಮುನ್ನುಡಿ ಬರೆದುಕೊಳ್ಳಬಹುದಾಗಿದೆ. ರಾಷ್ಟ್ರ ನಿರ್ಮಾಣದ ಕಾರ್ಯಕ್ಕೆ ಕಠಿಣ ಪರಿಶ್ರಮ ಹಾಗೂ ತಾಳ್ಮೆ ಬೇಕಾಗುತ್ತದೆ. ಮೋದಿಯವರಿಗೆ ಇವುಗಳಲ್ಲಿ ಯಾವ ಕೊರತೆಯೂ ಇಲ್ಲ.
ಮೊದಲೇ ಹೇಳಿದಂತೆ ಕಾಂಗ್ರೆಸ್‌ನವರ ಬೀದಿ ಪ್ರಹಸನವೇನೂ ಪರಿಣಾಮ ಉಂಟುಮಾಡದು. ತನ್ನ 44ನೇ ಹುಟ್ಟುಹಬ್ಬದಂದು ಮಾಯವಾಗಿದ್ದ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಪಕ್ಷಕ್ಕೆ ದೊರಕಿಸಿಕೊಟ್ಟಿದ್ದೂ ಅಷ್ಟೇ ಸ್ಥಾನಗಳನ್ನು. ಮುಂದಿನ ಚುನಾವಣೆಯಲ್ಲಿ ಈ ಅಂಕಿ 49ಕ್ಕೆ ಏರಬಹುದು. ಏಕೆಂದರೆ ಯುವರಾಜನ ವಯಸ್ಸು ಅಷ್ಟೇ ಆಗಿರುತ್ತದಲ್ಲ.
-
ಕುಶಾಲು: ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿಪಕ್ಷದ ದಯನೀಯ ಸ್ಥಿತಿಗೆ ಕಾರಣವೇನು ಎಂಬುದನ್ನು ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಆಪ್ತರ ಬಳಿ ಹಂಚಿಕೊಂಡರಂತೆ. 'ನಾನು ಮತ್ತು ಸೋನಿಯಾಜಿ ಮಾಡಿದ ತಪ್ಪು ಒಂದೇ ಬಗೆಯದ್ದು. ಇಬ್ಬರೂ ಮಗನ ಮೇಲೆ ಭರವಸೆ ಇಟ್ಟೆವು!'
-
ವಸತಿ ಸಮಸ್ಯೆ: ಸಚಿವರಿಗೆ ಮತ್ತು ಮೊದಲ ಸಲದ ಸಂಸದರಿಗೆ ವಾಸ್ತವ್ಯ ಸಮಸ್ಯೆ ಎದುರಾಗಿದೆ. ಯುಪಿಎದ ಮಾಜಿ ಸಚಿವರು, ಅದರಲ್ಲೂ ಲೋಕಸಭೆ ಚುನಾವಣೆ ಸೋತವರು ತಮ್ಮ ವಾಸ್ತವ್ಯ ತೆರವು ಮಾಡುವ ಇಂಗಿತವನ್ನೇ ಇಟ್ಟುಕೊಂಡಿಲ್ಲ. ಕೆಲವರು ತಮಗೆ ಸೂಕ್ತ ನಿವೇಶನ ಸಿಗುವವರೆಗೆ ಈಗಿರುವ ಬಂಗಲೆಗೇ ಮಾರುಕಟ್ಟೆ ದರದಲ್ಲಿ ಬಾಡಿಗೆ ನೀಡುವುದಾಗಿ ವಿನಂತಿಸಿದ್ದಾರೆ. ಹೀಗಾಗಿ ಎನ್‌ಡಿಎ ಸಚಿವರಿಗೆ ನಾನಾ ರಾಜ್ಯಭವನಗಳಿಂದ ಕರ್ತವ್ಯ ನಿರ್ವಹಿಸುವ ಸ್ಥಿತಿ ಬಂದಿದೆ.

- ವೀರೇಂದ್ರ ಕಪೂರ್
virendra1946@yahoo.co.in

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement