ಬಗೆ ಬಗೆಯ ವೇಷದಲಿ ಭಿಕ್ಷುಕರ ಸಾಲು
ಮಗುವಿಗೆ ಜಯನಗರದ ಫ್ಯಾನ್ಸಿಡ್ರೆಸ್ ಮಾರುವ ಅಂಗಡಿಯಿಂದ ವೇಷ ತರಿಸಿ ತೊಡಿಸಿದ್ದಾರೆ. ಚಿಂದಿಯಾದ ಬನಿಯನ್ನು, ಅಂಡು ಸವೆದ ಚಡ್ಡಿ, ಒಂದು ಮುರುಕಲು ಭಿಕ್ಷಾಪಾತ್ರೆ - ಇವಿಷ್ಟಕ್ಕೆ ದಿನಕ್ಕೆ 200 ರುಪಾಯಿ ಬಾಡಿಗೆ! ಹಾಗೆ ತಂದ ಬಟ್ಟೆಯನ್ನು ಉಡಿಸಿ ಆ ಹುಡುಗನ ಬಾಯಿಂದ ನಾಲ್ಕು ಮಾತು ಹೊರಡಿಸಬೇಕು. 'ನಾನು ಭಿಕ್ಷುಕ. ಬೀದಿಬೀದಿಗಳಲ್ಲಿ ಸುತ್ತಿ ಕಾಸು ಸಂಪಾದಿಸುವುದೇ ನನ್ನ ಕಾಯಕ. ನಾನು ಬಡವನಾದ್ದರಿಂದ ಬೇಡ್ತಿದೇನೆ' ಅಂತ ಅವನಿಗೆ ನಾಲ್ಕು ಮಾತು ಇಂಗ್ಲಿಷಿನಲ್ಲಿ ಹೇಳಿಕೊಡ್ತಾರೆ ಅವನ ಮಮ್ಮಿ-ಡ್ಯಾಡಿ. ಆದರೆ ಆ ಹುಡುಗನಿಗೆ ಇದರಿಂದ ಕಿರಿಕಿರಿಯಾಗಿ 'ಮಮ್ಮಿ, ಬೆಗ್ಗರ್ಸ್ ಯಾವತ್ತಾದ್ರೂ ಇಂಗ್ಲಿಷಿನಲ್ಲಿ ಬೇಡ್ತಾರಾ?' ಅಂತ ಪ್ರಾಕ್ಟೀಸ್ ನಿಲ್ಲಿಸಿ ಕೇಳೇಬಿಡ್ತಾನೆ! ಹೋಗೋದು ಇಂಗ್ಲಿಷ್ ಮೀಡಿಯಮ್ಮಿನ ಇಂಟರ್ನ್ಯಾಷನಲ್ ಶಾಲೆಗೆ, ಸಹಪಾಠಿಗಳೆಲ್ಲ ಅಭಿನಯಿಸುವುದು ಇಂಗ್ಲಿಷಿನಲ್ಲೇ ಆಗಿರುವಾಗ ಇವನೊಬ್ಬ ಬಡ ಕನ್ನಡದಲ್ಲಿ ದಾರಿದ್ರ್ಯದ ಬಗ್ಗೆ ಮಾತಾಡಿದರೆ ಹೇಗಿದ್ದೀತು? ಅವನ ಮಮ್ಮಿ ಗದರಿ ಅವನಿಗೆ ಮತ್ತೆ ಇಂಗ್ಲಿಷ್ ಸಾಲುಗಳನ್ನು ಕಂಠಪಾಠ ಮಾಡಿಸುತ್ತಾಳೆ.
ಮಗು ಮುಂದೇನೂ ಮಾತಾಡಲು ಸಾಧ್ಯವಾಗದೆ ಶಾಲೆಗೆ ಹೊರಡುತ್ತದೆ. ದೊಡ್ಡ ಗೋಣಿಚೀಲದಲ್ಲಿ ಕೂತ ಪುಟಾಣಿಗುಬ್ಬಚ್ಚಿಯ ಹಾಗೆ, ಬೃಹತ್ ಎನ್ನಬಹುದಾದ ಆ ಆಧುನಿಕ ಕಾರಲ್ಲಿ ಮುದುಡಿ ಕೂರುತ್ತಾನೆ ಹುಡುಗ. ಜಗತ್ತು ಅವನ ಕಣ್ಣಬದಿಯಿಂದ ಸರಿದು ಹಿಂದೋಡುತ್ತಿದೆ. ಕಾರು ಮಹಾನಗರದ ಭೀಮಾಕಾರದ ರಸ್ತೆಯ ತೋಳುಗಳಲ್ಲಿ ಇಳಿದುಹತ್ತಿ ಸಾಗುತ್ತಿದೆ. ಅಲ್ಲೆಲ್ಲೋ ಒಂದುಕಡೆ 'ಕೆಲಸ ಖಾಲಿ ಇದೆ' ಎಂದು ಬೋರ್ಡು ಹಾಕಿದ ಆಫೀಸಿನ ಮುಂದೆ ಜನವೋ ಜನ. "ಸಾರ್, ಒಂದೇ ಒಂದು ಕೆಲಸ ಕೊಡಿ. ನಿಯತ್ತಿಂದ ಮಾಡ್ಕೊಂಡೋಗ್ತೇನೆ. ಕೊಟ್ಟ ಸಂಬಳಕ್ಕೆ ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ದುಡೀತೇನೆ" ಎಂದೆಲ್ಲ ಹೇಳಿ ಒಂದು ಉದ್ಯೋಗ ಗಿಟ್ಟಿಸಲು ಹೆಣಗಾಡುತ್ತಿರುವ ಜನ. ದೊಡ್ಡ ಐಟಿ ಕಂಪೆನಿಯಲ್ಲಿ ಕೆಲಸ ಮಾಡುವ ಮಮ್ಮಿ ಹೇಳ್ತಾಳೆ, ಕೆಲಸ ಸಿಕ್ಕಿದ ಮೇಲೂ ಮೇಲಿನವರ ಕೃಪೆ ಒದಗಿಸಿಕೊಳ್ಳಲು ಎಷ್ಟೆಷ್ಟೋ ದಾನಧರ್ಮ ಮಾಡಬೇಕಾಗುತ್ತಂತೆ. ಒಮ್ಮೆ ಮಮ್ಮಿಗೂ ಪಪ್ಪನಿಗೂ ದೊಡ್ಡ ಜಗಳವೇ ಆಗಿಹೋಗಿತ್ತು. ಮಮ್ಮಿಯ ಬಾಸ್ ಏನೋ ಕೇಳಿದನಂತೆ, "ಕೆಲಸದಲ್ಲಿ ಮುಂದೆ ಮುಂದೆ ಹೋಗಬೇಕಾದ್ರೆ ಕೇವಲ ನಿಯತ್ತಿದ್ದರೆ ಸಾಕಾ, ನಮ್ಮ ಬುಟ್ಟಿಗೂ ಏನಾದ್ರೂ ಹಾಕಬೇಕಲ್ವಾ?". ಪಪ್ಪ ಅವತ್ತು "ಬೆಗ್ಗರ್! ಲೂಸರ್! ಅಂತೆಲ್ಲ ಕೆಟ್ಟದಾಗಿ ಬೈದುಬಿಟ್ಟಿದ್ದ. ಹೋಗಿಹೋಗಿ ಮಮ್ಮಿ ಒಬ್ಬ ಭಿಕ್ಷುಕನ ಕೈಕೆಳಗೆ ಕೆಲಸ ಮಾಡ್ತಾಳಾ ಅಂತ ಆಶ್ಚರ್ಯ ಆಗಿತ್ತು!
ಕಾರು ಟ್ರಾಫಿಕ್ನಲ್ಲಿ ನಿಂತಿದೆ. ಟ್ರಾಫಿಕ್ ಲೈಟುಗಳು ಕೆಂಪು ಬೆಳಗಿದ ಕೂಡಲೇ ಈ ಹೆಣ್ಣುಗಳು ರೋಡಿಗಿಳಿದು ನಿಂತ ವಾಹನಗಳ ಮುಂದೆ ಸುಳಿದಾಡುತ್ತವೆ. ಅಂತದ್ದೇ ಒಬ್ಬಳು ಹೆಂಗಸು ಈ ಕಾರಿನ ಮುಂದೆಯೂ ಬಂದು ಒಂದಷ್ಟು ಕೆಟ್ಟ ಅಭಿನಯ ಮಾಡಿದಳು. "ಹೋಗಮ್ಮ, ನಿಂದೊಳ್ಳೆ! ಕಾರಲ್ಲಿ ಮಗು ಇದೆ, ಅದರ ಮುಂದೆ ಇದೆಲ್ಲ ಮಾಡಬೇಡ" ಅಂತ ಚಾಲಕ ಹೇಳುತ್ತಾನೆ. "ಅಯ್ಯೋ ನನ್ ರಾಜ, ಮಗೂ ಆದ್ರೇನು ಮನುಷ್ಯ ಅಲ್ವೇ? ಕಣ್ಣುಗಳಿಗೇನು ವಯಸ್ಸೋ ರಾಜ! ಎತ್ತು ಹತ್ರೂಪಾಯಿ" ಎಂದು ಆಕೆ ಚಾಲಕನ ಮುಂದೆ ಬಿಂಕದಿಂದ ಸುಳಿಯುತ್ತಾಳೆ. "ಭಿಕ್ಷೆ ಬೇಡೋ ಬದಲು ದುಡಿದು ಹೊಟ್ಟೆ ತುಂಬಿಸ್ಕೊಳ್ರೀ" ಎಂದವನು ದಬಾಯಿಸಿದರೆ, "ಹೀಗೆ ಬೇಡಿದರೆ ದಿನಕ್ಕೆ ಎರಡುಸಾವಿರ ಕಮಾಯಿಸ್ತೀನಿ. ನಿನ್ ಥರಾ ಕಾರು ಬಿಟ್ರೆ ಬರುತ್ತಾ ಸಾವ್ರ, ಸಾವ್ಕಾರ?" ಎಂದು ಆಕೆ ಹೇಳಿ ಕಿಚಾಯಿಸುತ್ತಾಳೆ. ಇವನ ಮರ್ಮಕ್ಕೇ ಯಾರೋ ಹೊಡೆದಂತಾಗಿ, ಕಿಸೆಯಿಂದ ಹತ್ತು ರುಪಾಯಿ ತೆಗೆದು ಅವಳ ಕೈಗೆಸೆದು ಬೈದು ಅಟ್ಟುತ್ತಾನೆ. ಭಿಕ್ಷುಕರು ಹೀಗೂ ಇರ್ತಾರಾ? ದಿನಕ್ಕೆ ಸಾವಿರಾರು ರುಪಾಯಿ ಸಂಪಾದನೆ? ಬೇಡುವುದನ್ನೂ ಗತ್ತಿನಿಂದ ಮಾಡುವ ಮಂದಿ? ಕಾರು ಮುಂದೆ ಹೋಗುತ್ತಿದೆ. ಅರರೆ. ದಾರಿಯ ಬದಿಯಲ್ಲಿ ಅದೇ ಪೋಲೀಸ್! ಒಮ್ಮೆ ಪಪ್ಪನ ಜೊತೆ ಬೈಕ್ನಲ್ಲಿ ಹೋಗುತ್ತಿದ್ದಾಗ, ಇದೇ ಜಾಗದಲ್ಲಿ ನಮ್ಮನ್ನು ನಿಲ್ಲಿಸಿ "ಲೈಸೆನ್ಸ್ ತೆಗಿ, ಆರ್ಸಿ ತೆಗಿ, ಇನ್ಶೂರೆನ್ಸ್ ಪೇಪರ್ ತೋರ್ಸು" ಎಂದು ಪಪ್ಪನನ್ನು ಮೇಲೆ ಕೆಳಗೆ ಮಾಡಿದ್ದ. ಪಪ್ಪನ ಬಳಿ ಎಲ್ಲಾ ಇದೆ ಅಂತ ಗೊತ್ತಾದ ಮೇಲೆ "ಟ್ರಾಫಿಕ್ ಲೈಟು ಕೆಂಪು ತಿರುಗಿದ ಮೇಲೂ ಗಾಡಿ ಓಡಿಸ್ತೀಯ?" ಅಂತ ದಬಾಯಿಸಲು ತೊಡಗಿದ್ದ. ಪಪ್ಪ ಸಿಗ್ನಲ್ ಜಂಪ್ ಮಾಡಲಿಲ್ಲ ಅಂತ ಎಷ್ಟು ಗೋಗರೆದರೂ ಈ ಮಾಮ ಕೇಳಲೇ ಇಲ್ಲ. ಕೊನೆಗೆ ತಾನೇ ಪಪ್ಪನ ಜೇಬಿಗೆ ಕೈಹಾಕಿ ಅಲ್ಲಿದ್ದ ಮುನ್ನೂರು ರುಪಾಯಿ ಎಗರಿಸಿಬಿಟ್ಟಿದ್ದ. ಅಲ್ಲಿಂದ ಹೊರಡ್ತಾ ಇರುವಾಗ ಪಪ್ಪ ನನಗೆ ಮಾತ್ರ ಕೇಳುವ ಹಾಗೆ "ಭಿಕ್ಷುಕರು ಯಾವ್ಯಾವ ವೇಷದಲ್ಲಿ ಇರ್ತಾರೆ ನೋಡು". ಅದೇ ಪೊಲೀಸ್, ಅದೇ ದರ್ಪ, ಪಪ್ಪನ ಹಾಗೇ ಗೋಗರೆದು ಕೈಮುಗಿದು ಬೇಡಿಕೊಳ್ಳುತ್ತಿರುವ ಮತ್ತೊಬ್ಬ..
ಕಾರು ನಿಲ್ಲುತ್ತದೆ. ಚಾಲಕ ಹಿಂತಿರುಗಿ "ಸಾರ್, ನಿಮಗೆ ಚಹಾನೋ ಬ್ರೆಡ್ಡೋ ಬನ್ನೋ ಬೇಕಾ?" ಎಂದು ಕೇಳುತ್ತಾನೆ. ಇವನಿಗೆಷ್ಟು ಸಲ ಹೇಳಿದ್ದೇನೆ, ಹೆಸರು ಹಿಡಿದು ಕರೀ ಅಂತ. ಕೆಲಸ ಕೊಟ್ಟವರ ಮಗ ಅಂದ ಮಾತ್ರಕ್ಕೆ ಹನ್ನೆರಡು ವರ್ಷದ ನನಗೆ ಸಾರ್ ಅಂತ ಹೇಳಬೇಕಾಗಿಲ್ಲ ಅಂತ. "ಏನೂ ಬೇಡ" ಅಂತ ಹೇಳಿದ ಹುಡುಗ. ಮನೆಯಲ್ಲಿ ಮೊದಲೇ ಕಟ್ಟಪ್ಪಣೆಯಾಗಿದೆ. "ಇವತ್ತು ನಿನ್ನ ಬ್ರೇಕ್ಫಾಸ್ಟ್ನಲ್ಲಿ ಒಂದೇ ಇಡ್ಲಿ ಕೊಡೋದು. ದಾರಿ ಮಧ್ಯೆ ಅದೂ ಇದೂ ಅಂತ ತಿನ್ನಬೇಡ. ಭಿಕ್ಷುಕ ನೀನು! ಸಿಕ್ಕಿದ್ದೆಲ್ಲ ಮುಕ್ಕಿ ಡುಮ್ಮನ ಹಾಗೆ ಹೊಟ್ಟೆ ಮಾಡ್ಕೊಂಡರೆ ನೀನು ಭಿಕ್ಷುಕ ಅಂತ ಯಾರೂ ಒಪ್ಪಲ್ಲ!" ಅಂತ ಮಮ್ಮಿ ಗದರಿ ಕಳಿಸಿದ್ದಾಳೆ. ಕುಮಾರ್ ಇಳಿದು ಚಹ ಕುಡಿಯಲು ಹೋಗಿದ್ದಾನೆ. ಕಾರಲ್ಲಿ ನಾನೊಬ್ಬನೇ. ಆಗಲೇ ಒಂದು ಆಕೃತಿ ಕನ್ನಡಿಯಲ್ಲಿ ಮುಖ ತೂರಿಸಿತು. ನೋಡಿದರೆ ಭಯವಾಗುವಂತಹ ಮುಖ! ಇಳಿದ ಬಡಕಲು ಚರ್ಮ, ಕುಂದಿದ ಕಣ್ಣು, ಕೆದರಿದ ಕೂದಲು, ಸ್ನಾನ ಕಾಣದ ಅರ್ಧ ಅಡಿ ಗಡ್ಡ. ಅವನನ್ನು ನೋಡಿ ನನಗೆಷ್ಟು ಭಯವಾಗಿತ್ತೋ ಕಾರಲ್ಲಿ ಕೂತ ನನ್ನಂತಹ ಭಿಕ್ಷುಕನನ್ನು ಕಂಡು ಅವನಿಗೂ ಅಷ್ಟೇ ಆಶ್ಚರ್ಯವಾಗಿರಬೇಕು! "ಯಾಕಪ್ಪ ಸೊರಗಿದ್ದೀಯ?!" ಎಂದ ಮುದುಕ ತನ್ನ ಗೊಗ್ಗರು ದನಿಯಲ್ಲಿ. "ಇಲ್ಲ ಅಜ್ಜಾ, ನಾನು ಸ್ಕೂಲಲ್ಲಿ ಫ್ಯಾನ್ಸಿ ಡ್ರೆಸ್ನಲ್ಲಿ ಪಾರ್ಟಿಸಿಪೇಟ್ ಮಾಡೋದಕ್ಕೆ ಹೋಗ್ತಿದೇನೆ" ಅಂದ ಹುಡುಗ. ಭಿಕ್ಷುಕನಿಗೆ ಅದೇನೆಂದೇ ಅರ್ಥವಾಗಲಿಲ್ಲ. ಮಗುವನ್ನು ಅಪಾದಮಸ್ತಕ ನೋಡಿ ಪೆಚ್ಚಾದ. "ಅಪ್ಪಾ ದೇವರೇ! ಹೊಟ್ಟೆ ಎಂಬ ಬೆಂಕಿ ಕೊಟ್ಟು ಯಾಕಪ್ಪಾ ನನ್ನನ್ನಿಲ್ಲಿಗೆ ತಂದೆ ದೊರೆಯೇ! ನಿಜವಾಗಿಯೂ ನಿನಗೆ ಬಡವನ ಮೇಲೆ ಎಷ್ಟೊಂದು ಪ್ರೀತಿ. ಅದಕ್ಕೇ ಈ ಜಗತ್ತಿನಲ್ಲಿ ಲಕ್ಷಾಂತರ ಬಡವರನ್ನ ಸೃಷ್ಟಿಸಿಬಿಟ್ಟಿದ್ದೀಯ. ಯಾಕೆ ಗೊತ್ತಾ? ಈ ಬಡವ ನಿಯತ್ತಾಗಿರೋ ನಾಯಿ ಅಲ್ಲವಾ? ಅವನು ದುಡ್ಡಿರೋ ಮನುಷ್ಯರ ಹಾಗೆ ನಿನ್ನನ್ನು ಮರೆಯೋದಿಲ್ಲ. ನಿನ್ನನ್ನು ಜರೆಯೋದಿಲ್ಲ. ಬಹಳ ದೈನ್ಯದಿಂದ ನಿನ್ನ ಬೇಡಿಕೊಳ್ತಾನೆ. ಹಗಲುರಾತ್ರಿ ನಿನ್ನ ನೆನಸಿಕೊಳ್ತಾನೆ. ಇಂಥಾ ಬಡವನ ಬಾಯಲ್ಲಿ ಸ್ಮರಣೆ ಮಾಡಿಸಿಕೊಳ್ಳೋ ದೇವರೇ, ನೀನೂ ಒಬ್ಬ ಭಿಕ್ಷುಕ ಅಲ್ಲವಾ?" ಅಂತ ಹೇಳಿ ಮೇಲೆ ನೋಡಿದ. ಕಾರಿನ ಸೀಟಿನಲ್ಲೇ ಮಮ್ಮಿ ಬಿಟ್ಟುಹೋಗಿದ್ದ ಪರ್ಸ್ ಎಳೆದು ಅದರಿಂದ ನೂರು ರುಪಾಯಿ ತೆಗೆದು ಹುಡುಗ ಭಿಕ್ಷುಕನ ಕೈಗೆ ಹಾಕಿದ. ಆದರೆ, ಒಮ್ಮೆಲೆ ಬೆಚ್ಚಿಬಿದ್ದ ಮುದುಕ ಆ ನೋಟನ್ನು ಮಗುವಿನತ್ತಲೇ ಎಸೆದು "ಬೇಡ ದೊರೆ, ಬೇಡ. ನೀನಿದೆಲ್ಲ ಮಾಡಬಾರದು!" ಎಂದು ಹೊರಟೇಬಿಟ್ಟ.
ಸ್ಕೂಲು. "ಮುಂದಿನ ಕಂಟೆಸ್ಟೆಂಟ್" ಎಂದು ಹೆಸರು ಕೂಗಿದ ಮೇಲೆ ಮಗು ವೇದಿಕೆಗೆ ಬಂತು. ಎದುರಿಗೆ ನೆರೆದಿರುವ ನೂರಾರು ಜನ. ಇದೇ ಜಂಗುಳಿಯಲ್ಲಿ ಪಪ್ಪ-ಮಮ್ಮಿಯೂ ಇರ್ತಾರೆ ಎಂದು ಗೊತ್ತು. ಬಾಸ್ನನ್ನು ಕಾಡಿಬೇಡಿ ಪಪ್ಪ ಅರ್ಧದಿನದ ರಜೆ ತೆಗೆದುಕೊಂಡು ಬಂದಿರ್ತಾರೆ. ಐವತ್ತೋ ನೂರೋ ಜಾಸ್ತಿ ಕೇಳುವ ಆಟೋ ಚಾಲಕನಿಗೆ ದಮ್ಮಯ್ಯ ಹೊಡೆದು ಮಮ್ಮಿ ಬಂದಿಳಿದಿರ್ತಾಳೆ. ಹೊಟ್ಟೆ ತಾಳ ಹಾಕುತ್ತಿದೆ. ನಿಜವಾಗಿಯೂ ಹಸಿವಾಗ್ತಿದೆ. ಮಮ್ಮಿ ಹೇಳಿಕೊಟ್ಟ ಸಾಲುಗಳೆಲ್ಲ, ಬೀಸಿದ ಕವಣೆಗೆ ಹಾರಿಹೋಗುವ ಹಕ್ಕಿಗಳ ಹಾಗೆ ಒಂದೊಂದಾಗಿ ಹಾರಿ ಮಾಯವಾಗುತ್ತಿವೆ. ಇಷ್ಟಕ್ಕೂ ನಾನು ಹಾಕಿರುವ ಡ್ರೆಸ್ಸು ಸರಿಯಾಗಿದೆಯಾ? ಚಿಂದಿಯಾದ ಬನಿಯನ್ನು, ಸವೆದ ಚಡ್ಡಿ, ಮುರಿದ ಭಿಕ್ಷಾಪಾತ್ರೆ! ಭಿಕ್ಷುಕ ಅಂದರೆ ಇದೇ ಡ್ರೆಸ್ನಲ್ಲಿ ಬರಬೇಕಾ? ಒಳ್ಳೇ ಡ್ರೆಸ್, ಸೆಂಟು ಹಾಕ್ಕೊಂಡು ಪ್ರೇಮಭಿಕ್ಷೆ ಬೇಡುವ ಹುಡುಗನ ಹಾಗೆ, ಓಟು ಕೇಳಲು ಬರುವ ಪುಢಾರಿಯ ಹಾಗೆ, ಎರಡು ರುಪಾಯಿ ಕಮ್ಮಿ ತಗೊಂಡು ಟಿಕೆಟ್ ಕೊಡದ ಬಸ್ ಕಂಡಕ್ಟರ್ ಹಾಗೆ, ಆರತಿ ಎತ್ತಿ ತೀರ್ಥ ಕೊಡಲು ಬರುವಾಗ ಹರಿವಾಣ ಹಿಡಿಯುವ ಭಟ್ಟರ ಹಾಗೆ, ಕಳ್ಳನನ್ನೇ ಮಹಾತ್ಮಾಗಾಂಧಿ ಎಂದು ಸಾಧಿಸಿ ಜಯಿಸುವ ಲಾಯರ್ ಹಾಗೆ, ಸಿನೆಮಾ ನೋಡಿ ಬಂದ ತಲೆನೋವಿಗೆ ಬ್ರೇನ್ ಸ್ಕ್ಯಾನ್ ಮಾಡುವ ವೈದ್ಯನ ಹಾಗೆ, ತಿರುಪತಿ ದೇವರ ಎದುರು ಕೈಮುಗಿದ ಕೋಟ್ಯಧೀಶ ಉದ್ಯಮಿಯ ಹಾಗೆ, ಶಾಲೆಯಲ್ಲಿ ಕಲಿಸದೆ ಟ್ಯೂಷನ್ಗೆ ಕರೆಯುವ ಗುರುವಿನ ಹಾಗೆ, ಪಾನಿಪೂರಿ ಮಾರುವವನ ಬಳಿ ಹಫ್ತಾ ಹೊಡೆಯುವ ಪೊಲೀಸನ ಹಾಗೆ - ಯಾವ ಡ್ರೆಸ್ಸಲ್ಲಿ ಬಂದರೂ ನಡೀತಾ ಇತ್ತಲ್ಲವೆ! ತಲೆಯೆಲ್ಲ ಧಿಂಗುಡುತ್ತಿದೆ. ನಾನು ಹೇಳಬೇಕಿದ್ದ ಸಾಲುಗಳನ್ನು ಮಂತ್ರದಂತೆ ತುಟಿಯಲ್ಲೇ ಹೇಳಿಕೊಂಡು ತುದಿಗಾಲಲ್ಲಿ ಕೂತಿರುವ ಮಮ್ಮಿಯ ತುಟಿಗಳು ಕೂಡ ಈ ಮರ್ಕ್ಯುರಿ ಬೆಳಕು ಹುಟ್ಟಿಸಿದ ಕತ್ತಲೆಯಲ್ಲಿ ಕಾಣುತ್ತಿಲ್ಲ! ಮಗು ಮೈಕ್ ಮುಂದೆ ನಿಂತಿತು. ಗಾಢ ಮೌನ. "ದೇವರೇ! ನಿನಗೆ ಬಡವನ ಮೇಲೆ ಎಷ್ಟೊಂದು ಪ್ರೀತಿ ನೊಡು! ಅದಕ್ಕೇ ಈ ಜಗತ್ತಿನಲ್ಲಿ ಲಕ್ಷಾಂತರ ಬಡವರನ್ನು ಸೃಷ್ಟಿಸಿದ್ದೀಯ. ಬಡವ ತುಂಬ ನಿಯತ್ತಿನ ನಾಯಿ. ಅವನು ದುಡ್ಡಿರೋ ಮನುಷ್ಯರ ಹಾಗೆ ನಿನ್ನ ಮರೆಯೋದಿಲ್ಲ, ಜರೆಯೋದಿಲ್ಲ. ತುಂಬ ದೈನ್ಯದಿಂದ ನಿನ್ನ ಬೇಡಿಕೊಳ್ತಾನೆ. ಹಗಲೂ ರಾತ್ರಿ ನಿನ್ನ ನೆನಸ್ಕೋತಾನೆ. ಇಂಥಾ ಬಡವನ ಬಾಯಲ್ಲಿ ಸ್ಮರಣೆ ಮಾಡಿಸ್ಕೋಳ್ಳೋ ದೇವರೇ, ನೀನೂ ಒಬ್ಬ ಭಿಕ್ಷುಕ ಅಲ್ಲವಾ?" ಮಗು ಅಷ್ಟು ಹೇಳಿ ಮುಗಿಸಿದ ಮೇಲೆ ಗಾಢ ಮೌನ. ನಂತರ ಕಿವಿಗಡಚಿಕ್ಕುವ ಚಪ್ಪಾಳೆ. ಜನ ಒಬ್ಬೊಬ್ಬರಾಗಿ ಎದ್ದುನಿಂತು ಚಪ್ಪಾಳೆ ಹೊಡೆಯುತ್ತಲೇ ಇದ್ದರು. ಮಗು ಕನ್ನಡದಲ್ಲಿ ಹೇಳಿದ್ದರ ಅರ್ಥ ಏನು ಎಂದು ಒಬ್ಬ ಜಡ್ಜ್ ಇನ್ನೊಬ್ಬರನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು. ಮಮ್ಮಿ ತನ್ನ ಸಾಲುಗಳನ್ನು ಪಠಿಸಿಕೊಳ್ಳುವುದನ್ನು ನಿಲ್ಲಿಸಿ ಆಘಾತವಾದಂತೆ ನಿಶ್ಚಲವಾಗಿದ್ದಳು. ಮೊದಲಬಾರಿಗೆ ಭಿಕ್ಷುಕನಾದ ತೃಪ್ತಿ ಮಗುವಿನ ಕಣ್ಣಲ್ಲಿ ನೀರಾಗಿ ಹರಿಯುತ್ತಿತ್ತು.
= ರೋಹಿತ್ ಚಕ್ರತೀರ್ಥ
rohithmath@gmail.com