ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸ್ವಾತಂತ್ರ್ಯಹರಣವಾದ ಆ 19 ತಿಂಗಳುಗಳು

ಜೂನ್ 26, 2014. ಅಂದರೆ ಈ ದಿನವು...

Vishwanath S
Updated On : 26 Jun 2014, 1:48 am

ಜೂನ್ 26, 2014. ಅಂದರೆ ಈ ದಿನವು ತುರ್ತು ಪರಿಸ್ಥಿತಿಯ ಕರಾಳ ನೆನಪಿನ 39ನೇ ವಾರ್ಷಿಕ ದಿನವಾಗಿರುತ್ತದೆ. ಚುನಾವಣೆಯ ಎರಡು ತಿಂಗಳ ಅವಧಿಯನ್ನು ಬಿಟ್ಟು ಹೇಳುವುದಾದರೆ ತುರ್ತು ಪರಿಸ್ಥಿತಿಯ ದಮನಿತ ದಿನಗಳು 19 ತಿಂಗಳುಗಳ ಕಾಲವನ್ನು ಆವರಿಸಿಕೊಂಡಿದ್ದವು. ಸ್ವಾತಂತ್ರ್ಯೋತ್ತರ ಭಾರತದ ಪ್ರಜಾಪ್ರಭುತ್ವ ಪರ್ವದಲ್ಲಿ ಅತಿಕೆಟ್ಟ ದಿನಗಳೆಂದರೆ ಇವೇ ಆಗಿವೆ. ಈ ರಾಕ್ಷಸಿ ಪ್ರವೃತ್ತಿಯ ವಿರುದ್ಧ ದೇಶ ಹೋರಾಡುತ್ತಿದ್ದ ಸಂದರ್ಭದಲ್ಲಿ ಇಂದಿನ ಹೆಚ್ಚಿನ ಭಾರತೀಯರು ಹುಟ್ಟಿರಲಿಲ್ಲ. ಅವರಿಗೆಲ್ಲ ಇತಿಹಾಸದ ಈ ಕಾಲಘಟ್ಟವನ್ನು ನೆನಪಿಸುವುದು ಮಹತ್ವದ ಸಂಗತಿ ಆಗಿರುವುದರಿಂದ ತುರ್ತು ಪರಿಸ್ಥಿತಿ ಸಂದರ್ಭದ ವೈಯಕ್ತಿಕ ಅನುಭವಗಳನ್ನು ದಾಖಲಿಸುತ್ತಿದ್ದೇನೆ.
ಸಮಾಜವಾದಿ ರಾಜ್ ನಾರಾಯಣ್ ಅವರ ವಿರುದ್ಧ ಇಂದಿರಾ ಗಾಂಧಿ ಅವರು 1971ರ ಲೋಕಸಭೆ ಚುನಾವಣೆಯನ್ನು ರಾಯ್‌ಬರೇಲಿ ಕ್ಷೇತ್ರದಿಂದ ಗೆದ್ದುಕೊಂಡಿದ್ದರು. ರಾಜ್ ನಾರಾಯಣ್ ಅವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿಯೊಂದನ್ನು ಸಲ್ಲಿಸಿ ಚುನಾವಣೆಯಲ್ಲಿ ಇಂದಿರಾ ಆಯ್ಕೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದರು. ಅಲಹಾಬಾದ್ ಹೈಕೋರ್ಟ್‌ನಲ್ಲಿ ಅವರನ್ನು ಪ್ರತಿನಿಧಿಸಿದ್ದ ನ್ಯಾಯವಾದಿ ಎಂದರೆ ಶಾಂತಿ ಭೂಷಣ್. ಈ ವಿಚಾರಣೆಯನ್ನು ವಿವರವಾಗಿ ವರದಿ ಮಾಡಿದ ಭಾರತದ ಪತ್ರಿಕೆಗಳು ಇಡೀ ರಾಷ್ಟ್ರದ ಗಮನವನ್ನು ಸೆಳೆದವು. 1975ರ ಜೂನ್ 12ರಂದು ಜಸ್ಟೀಸ್ ಜಗಮೋಹನ್ ಲಾಲ್ ಸಿನ್ಹ ಅವರ ನ್ಯಾಯಪೀಠವು ಇಂದಿರಾ ಅವರ ಆಯ್ಕೆಯು ಭ್ರಷ್ಟ ಮಾರ್ಗಗಳಿಂದ ಆಗಿದ್ದು ಎಂದು ಹೇಳಿ ಅವರ ಆಯ್ಕೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿತು. ಪ್ರಧಾನಿಯೇ ಸಂಸತ್ತಿನ ಸದಸ್ಯತ್ವ ಕಳೆದುಕೊಂಡರಲ್ಲದೇ ಮುಂದಿನ ಆರು ವರ್ಷಗಳ ಕಾಲ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ಅವರಿಗೆ ಪ್ರತಿಬಂಧ ಹೇರಲಾಯಿತು.
ಇಂದಿರಾ ಗಾಂಧಿಯವರು ಸುಪ್ರೀಂಕೋರ್ಟ್ ಸಮ್ಮುಖಕ್ಕೆ ವಿಶೇಷ ರಜಾಕಾಲದ ಅರ್ಜಿಯನ್ನು ಸಲ್ಲಿಸಿದರು. ಇವರನ್ನು ನಾನಿ ಪಾಲ್ಖಿವಾಲಾ ಪ್ರತಿನಿಧಿಸಿದ್ದರು. ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಜಸ್ಟೀಸ್ ಕೃಷ್ಣ ಅಯ್ಯರ್ ಅವರು ಆಂಶಿಕ ತಡೆಯಾಜ್ಞೆಯನ್ನೂ ನೀಡಿದರು. ಪ್ರಧಾನಿಯಾಗಿ ಅವರು ಸಂಸತ್ತಿನ ಕಲಾಪದಲ್ಲಿ ಭಾಗವಹಿಸಬಹುದಿತ್ತು. ಆದರೆ ಅವರಿಗೆ ಮತದ ಅಧಿಕಾರ ಇರಲಿಲ್ಲ. ಇದೇ ವೇಳೆ ದುರಾಡಳಿತ ಮತ್ತು ಭ್ರಷ್ಟಾಚಾರಗಳನ್ನು ಪ್ರಶ್ನಿಸಿ ಜಯಪ್ರಕಾಶ ನಾರಾಯಣರು ಪ್ರಾರಂಭಿಸಿದ್ದ ರಾಷ್ಟ್ರವ್ಯಾಪಿ ಆಂದೋಲನವು ಜನರನ್ನು ವ್ಯಾಪಕವಾಗಿ ಸೆಳೆದಿತ್ತು. ದೆಹಲಿಯ ಗಾಂಧಿ ಫೀಸ್ ಫೌಂಡೇಶನ್‌ನಲ್ಲಿ ಕಾಂಗ್ರೆಸ್ಸೇತರ ಪಕ್ಷಗಳ ನಾಯಕರ ಎರಡು ದಿನಗಳ ಸಮ್ಮೇಳನವನ್ನು ಆಯೋಜಿಸಲಾಯಿತು. 1975ರ ಜೂನ್ 25ರ ಸಂಜೆ ರಾಮಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿಯೊಂದು ನಡೆದು ಜಯಪ್ರಕಾಶ ನಾರಾಯಣ್ ಹಾಗೂ ಇತರ ಮುಖಂಡರು ದನಸ್ತೇಮವನ್ನು ಉದ್ದೇಶಿಸಿ ಭಾಷಣ ಮಾಡಿದರು. ಆ ರ್ಯಾಲಿಯಲ್ಲಿ ಪಾಲ್ಗೊಂಡು ನಾನು ಮನೆಗೆ ಹಿಂತಿರುಗಿದ್ದೆ. ನಾನಾಗ ಕಾನೂನು ವಿದ್ಯಾಭ್ಯಾಸದ ಎರಡನೇ ವರ್ಷದಲ್ಲಿದ್ದೆ. ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷನಾಗಿದ್ದ ನಾನು ಜೆಪಿ ಸಮಿತಿಯ ಯುವ ಮತ್ತು ವಿದ್ಯಾರ್ಥಿ ಒಕ್ಕೂಟದ ಸಂಚಾಲಕನೂ ಆಗಿದ್ದೆ.
ಮಧ್ಯರಾತ್ರಿ ಎರಡು ಗಂಟೆಯ ಸಮಯ. ನನ್ನ ನಿವಾಸದ ಬಾಗಿಲನ್ನು ಯಾರೋ ಬಡಿಯುತ್ತಿದ್ದರು. ಪೊಲೀಸರುನನ್ನನ್ನು ಬಂಧಿಸುವುದಕ್ಕೆ ಬಂದಿದ್ದರು. ನ್ಯಾಯವಾದಿಯೂ ಆಗಿದ್ದ ನನ್ನ ತಂದೆ, ಗೇಟಿನಲ್ಲಿ ನಿಂತು ಅದ್ಯಾವ ಅಪರಾಧದ ಮೇರೆಗೆ ನನ್ನ ಮಗನನ್ನು ಬಂಧಿಸುತ್ತೀರಿ ಅಂತ ವಾದಕ್ಕೆ ಇಳಿದಿದ್ದರು. ಪೊಲೀಸರ ಬಳಿ ಇದ್ದಿದ್ದು ನನ್ನನ್ನು ಬಂಧಿಸಿ ತರಬೇಕು ಎಂಬ ಆದೇಶ ಮಾತ್ರ. ನನ್ನ ಅಪರಾಧ ಕೃತ್ಯ ಯಾವುದು, ಯಾವ ಕಾಯಿದೆ ಅಡಿಯಲ್ಲಿ ನನ್ನ ಬಂಧನ ಎಂಬ ಯಾವ ಅಂಶಗಳೂ ಅವರಿಗೆ ಗೊತ್ತಿರಲಿಲ್ಲ. ಅತ್ತ ನನ್ನ ತಂದೆ ಈ ಬಗ್ಗೆ ಪೊಲೀಸರೊಂದಿಗೆ ವಾಗ್ಯುದ್ಧ ನಡೆಸುತ್ತಿದ್ದಾಗಲೇ ನಾನು ಮನೆಯ ಹಿಂದಿನ ಬಾಗಿಲಿನಿಂದ ಪರಾರಿಯಾಗಿ ಹತ್ತಿರದಲ್ಲಿದ್ದ ಸ್ನೇಹಿತರ ಮನೆ ಸೇರಿಕೊಂಡಿದ್ದೆ.
ಮರುದಿನ ಬೆಳಗ್ಗೆ ನನ್ನ ಸಹವರ್ತಿಗಳಿಗೆ ಕರೆ ಮಾಡಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಂಡೆ. ಏಕೆಂದರೆ ಅವತ್ತು ಬೆಳಗ್ಗೆ ಯಾವ ಪತ್ರಿಕೆಗಳೂ ಮುದ್ರಣವಾಗಿರಲಿಲ್ಲ. ಬಹದ್ದೂರ್‌ಶಾ ಜಫರ್ ಮಾರ್ಗದ ಎಲ್ಲ ವಿದ್ಯುತ್ ಪೂರೈಕೆ ಮಾರ್ಗಗಳನ್ನೂ ಬರ್ಖಾಸ್ತುಗೊಳಿಸಲಾಗಿತ್ತು. ಪ್ರತಿಪಕ್ಷದ ಎಲ್ಲ ನಾಯಕರು- ಜಯಪ್ರಕಾಶ ನಾರಾಯಣ್, ಮೊರಾರ್ಜಿ ದೇಸಾಯಿ, ಚೌಧುರಿ ಚರಣ್‌ಸಿಂಗ್, ಅಟಲ್‌ಬಿಹಾರಿ ವಾಜಪೇಯಿ, ಎಲ್. ಕೆ. ಆಡ್ವಾಣಿ ಇವರೆಲ್ಲ ಬಂಧನಕ್ಕೆ ಒಳಗಾಗಿದ್ದಾರೆ ಎಂಬ ಸುದ್ದಿ ಖಾತ್ರಿಯಾಯಿತು. ದೆಹಲಿ ವಿಶ್ವವಿದ್ಯಾಲಯದ ಸಮೀಪದಲ್ಲಿದ್ದ ತಿಮಾರ್‌ಪುರ ಪೊಲೀಸ್ ಠಾಣೆಯೇ ಈ ಎಲ್ಲ ಚಟುವಟಿಕೆಗಳ ಕೇಂದ್ರಸ್ಥಾನವಾಗಿತ್ತು. ಬಂಧಿಸಿದ ಎಲ್ಲ ನೇತಾರರನ್ನೂ ಆ ಠಾಣೆಗೆ ಕರೆದೊಯ್ದು ನಂತರ ಹರ್ಯಾಣ ಮತ್ತು ದೆಹಲಿಗಳ ಜೈಲುಗಳಿಗೆ ವರ್ಗಾಯಿಸಲಾಯಿತು. ಎಬಿವಿಪಿಯ ನನ್ನ ಸಹವರ್ತಿಗಳೊಂದಿಗೆ ಸೇರಿಕೊಂಡು ಇದರ ವಿರುದ್ಧ ಪ್ರತಿಭಟನೆಗೆ ಅಂತ ನಾನು ಬೆಳಗ್ಗೆ ಹತ್ತು ಗಂಟೆಗೆ ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ತಲುಪಿದೆ. ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಸಾರ್ವಜನಿಕವಾಗಿ ನಡೆದ ಪ್ರತಿಭಟನೆ ಅಂದರೆ ಇದೊಂದೇ. ಪ್ರತಿಭಟನೆಯಲ್ಲಿ ನಾವು ಪ್ರತಿಕೃತಿಯೊಂದನ್ನು ದಹನ ಮಾಡಿದೆವು. ಪೊಲೀಸರು ನನ್ನನ್ನು ಸುತ್ತುವರಿಯುತ್ತಿದ್ದಂತೆ ನನ್ನ ಸಹವರ್ತಿಗಳಿಗೆಲ್ಲ ಶಾಂತವಾಗಿ ಮರೆಯಾಗುವಂತೆ ತಿಳಿಸಿದೆ. ನನ್ನ ಬಂಧನವಾಯಿತು. ನನ್ನನ್ನೂ ತಿಮಾರ್‌ಪುರ ಪೊಲೀಸ್ ಠಾಣೆಗೆ ಕರೆದುಕೊಂಡುಹೋಗಿ ಆಂತರಿಕ ಭದ್ರತೆ ಕಾಯ್ದುಕೊಳ್ಳುವ ಕಾಯ್ದೆ (ಮಿಸಾ) ಅಡಿ ನನ್ನನ್ನು ಬಂಧಿಸಿರುವುದಾಗಿ ಆದೇಶವನ್ನು ನೀಡಲಾಯಿತು. ನನ್ನನ್ನು ದೆಹಲಿಯ ತಿಹಾರ್ ಜೈಲಿಗೆ ಹಾಕಲಾಯಿತು. ಎಲ್ಲ ರಾಜಕೀಯ ಬಂಧಿಗಳೂ ಅಲ್ಲಿಯೇ ಇದ್ದರು. ಎಂಟು ದಿನಗಳ ನಂತರ ನನ್ನನ್ನು ಹರ್ಯಾಣದ ಅಂಬಾಲಾ ಜೈಲಿಗೆ ವರ್ಗಾಯಿಸಲಾಯಿತು. ಅಲ್ಲಿ ಮೂರು ತಿಂಗಶುಗಳ ನಂತರ ಮತ್ತೆ ದೆಹಲಿಗೆ ವರ್ಗಾಯಿಸಲಾಯಿತು. 1977ರ ಜನವರಿಯಲ್ಲಿ ತುರ್ತು ಪರಿಸ್ಥಿತಿ ಮುಕ್ತಾಯವಾಗುವವರೆಗೂ ನಾನು ಅಲ್ಲಿಯೇ ಇದ್ದೆ. ಮುನ್ನೆಚ್ಚರಿಕೆ ಬಂಧನದ ಅಡಿಯಲ್ಲಿ 19 ತಿಂಗಳುಗಳ ಕಾಲ ನನ್ನನ್ನು ಬಂಧಿಸಿದ್ದರಿಂದ ದೆಹಲಿಯಲ್ಲಿ ವಿದ್ಯಾಭ್ಯಾಸ ಮಾಡುವ ನನ್ನ ಹಕ್ಕು ಅಷ್ಟರಮಟ್ಟಿಗೆ ಕಳೆದುಹೋಯಿತು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ.
ವಿಧಿ 352ರ ಅನ್ವಯ ಘೋಷಿಸಿದ್ದ ತುರ್ತುಪರಿಸ್ಥಿತಿಗೆ ವಿಧಿ 359ರ ನೋಟಿಫಿಕೇಶನ್ ಸಹ ಸೇರಿಕೊಂಡು ಆರ್ಟಿಕಲ್ 14, 19, 21 ಹಾಗೂ 22 ಅಡಿಯಲ್ಲಿ ನೀಡಿದ್ದ ಮೂಲಭೂತ ಹಕ್ಕುಗಳೆಲ್ಲ ಮೊಟಕುಗೊಂಡಿದ್ದವು. ಎಲ್ಲ ಪತ್ರಿಕೆಗಳನ್ನೂ ಸೆನ್ಸಾರ್‌ಶಿಪ್ ನಂತರವಷ್ಟೇ ಪ್ರಕಟಣೆ ಆಗುವಂತೆ ನೋಡಿಕೊಳ್ಳಲಾಯಿತು. ಪ್ರತಿ ಪತ್ರಿಕೆ ಹಾಗೂ ಸುದ್ದಿಸಂಸ್ಥೆ ಕಟೇರಿಗೆ ಸೆನ್ಸಾರ್‌ನ ಅಧಿಕಾರಿಯೊಬ್ಬ ಬಂದು ಕುಳಿತಿರುತ್ತಿದ್ದ. ಮೂಲಭೂತ ಹಕ್ಕುಗಳು ಇಲ್ಲವಾಗಿದ್ದವು. ಸರ್ಕಾರದ ವಿರುದ್ಧ ಪ್ರತಿಭಟಿಸುವಂತಿರಲಿಲ್ಲ. ದೇಶದ ಯಾವ ಭಾಗದಲ್ಲೂ ಪ್ರತಿಭಟನಾ ಪ್ರದರ್ಶನಗಳನ್ನು ಹಮ್ಮಿಕೊಳ್ಳುವಂತಿರಲಿಲ್ಲ. ಬಹುಶಃ ನ್ಯಾಯಾಂಗ ಸ್ವಾತಂತ್ರ್ಯದ ಅತಿ ಕರಾಳ ದಿನಗಳು ಅವಾಗಿದ್ದು, ರಾಜಕೀಯ ನಾಯಕರನ್ನು ಅಕ್ರಮವಾಗಿಯೇ ಬಂಧಿಸಿದ್ದರೂ ಅವರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು. ಬಂಧನದಲ್ಲಿದ್ದವರು ಹತ್ಯೆಯಾದರೂ ಆ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರುವಂತಿಲ್ಲ ಎಂಬ ನಿರ್ಧಾರವನ್ನು ಅಂದಿನ ಸರ್ಕಾರ ತೆಗೆದುಕೊಂಡಿತು! ಸುಪ್ರೀಂಕೋರ್ಟ್ ಇದಕ್ಕೂ ಗೋಣು ಅಲ್ಲಾಡಿಸಿತು. ಸಂಸತ್ತಿನ ಹೆಚ್ಚಿನ ಸದಸ್ಯರೆಲ್ಲ ಬಂಧನಕ್ಕೆ ಒಳಗಾಗಿದ್ದರು. ಸರ್ಕಾರವನ್ನು ಟೀಕೆ ಮಾಡಿದ ಯಾವುದೇ ಸಂಸತ್ ಕಲಾಪವನ್ನು ವರದಿ ಮಾಡುವಂತಿರಲಿಲ್ಲ.
ಶಿಸ್ತಿನ ಪರ್ವ ಶುರುವಾಗಿದೆ ಎಂದು ಅಂದಿನ ಪ್ರಧಾನಿ ಇಂದಿರಾ ಹೇಳಿಕೊಂಡರು. ಅತ್ಯಂತ ದಮನಕಾರಿಯಾಗಿದ್ದ 20 ಅಂಶಗಳ ಆರ್ಥಿಕ ನೀತಿಯೊಂದನ್ನು ಅವರು ಘೋಷಿಸಿದ್ದರು. ಸರ್ವಾಧಿಕಾರದ ಆ ಇಪ್ಪತ್ತು ಅಂಶಗಳಿಗೆ ನಿಷ್ಠೆ ವ್ಯಕ್ತಪಡಿಸಿದ ಕಾಂಗ್ರೆಸ್ ಅಧ್ಯಕ್ಷ ದೇವಕಾಂತ ಬರುವಾ, 'ಇಂದಿರಾ ಎಂದರೆ ಇಂಡಿಯಾ. ಇಂಡಿಯಾ ಎಂದರೆ ಇಂದಿರಾ' ಎಂದುಬಿಟ್ಟರು. ಇಂದಿರಾ ಅವರ ಕಿರಿಯ ಮಗ ಸಂಜಯ್ ಗಾಂಧಿಯನ್ನು ದೇಶದ ಯುವ ಐಕಾನ್ ಎಂದು ಕರೆಯಲಾಯಿತು. ಈ ಇಪ್ಪತ್ತು ಅಂಶಗಳಿಗೆ ನಿಷ್ಠೆ ವ್ಯಕ್ತಪಡಿಸುವುದಕ್ಕೆ ಸಿನಿಮಾ ನಟರು ಹಾಗೂ ಸಂಗೀತಗಾರರು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುವಂತೆ ಹೇಳಲಾಯಿತು. ಇದಕ್ಕೆ ಒಪ್ಪದವರನ್ನು ಶಿಕ್ಷಿಸಲಾಯಿತು. ಆಲ್ ಇಂಡಿಯಾ ರೇಡಿಯೋದಲ್ಲಿ ಕಿಶೋರ್ ಕುಮಾರ್ ಗೀತೆಗಳಿಗೆ ನಿಷೇಧ ಹೇರಿದರೆ, ದೂರದರ್ಶನದಲ್ಲಿ ದೇವಾನಂದರ ಚಿತ್ರಗಳಿಗೆ ನಿಷೇಧ! ದೇಶದ ಇಡೀ ಪೊಲೀಸ್ ಪಡೆ ಭಟ್ಟಂಗಿತನದ ಪಡೆಯಾಗಿ ಸುಳ್ಳು ಎಫ್‌ಐಆರ್‌ಗಳ ಮೇಲೆ ಲಕ್ಷಾಂತರ ರಾಜಕೀಯ ಕಾರ್ಯಕರ್ತರನ್ನು ಜೈಲಿಗೆ ದಬ್ಬಿತು.
ಇಂದಿರಾ ಗಾಂಧಿಯವರ ಆಯ್ಕೆಯನ್ನು ಸಿಂಧುಗೊಳಿಸುವುದಕ್ಕಾಗಿಯೇ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಲಾಯಿತು. ಪ್ರಧಾನಿ ಆಯ್ಕೆಯನ್ನು ನ್ಯಾಯಾಲಯ ಪ್ರಶ್ನಿಸುವಂತೆಯೇ ಇಲ್ಲ ಎಂದು ತಿದ್ದುಪಡಿ ತರಲಾಯಿತು. ಕಾಂಗ್ರೆಸ್ ಪಕ್ಷದಲ್ಲೇ ಪ್ರತಿರೋಧ ವ್ಯಕ್ತಪಡಿಸಿದ ಚಂದ್ರಶೇಖರ್ ಅಂಥವರಿಗೂ ಬಂಧನವೇ ಗತಿಯಾಯಿತು. ಗುಜರಾತ್, ತಮಿಳುನಾಡುಗಳಲ್ಲಿದ್ದ ಪ್ರತಿಪಕ್ಷದವರ ಸರ್ಕಾರಗಳನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು. ಕೆಲ ರಾಜ್ಯಗಳ ಹೈಕೋರ್ಟ್‌ಗಳು ಬಂಧಿಗಳನ್ನು ಬಿಡುವ ಆದೇಶ ನೀಡುವ ಧೈರ್ಯ ತೋರಿದವಾದರೂ ಅಂಥ ಎಲ್ಲ ಆದೇಶಗಳನ್ನೂ ಸುಪ್ರೀಂಕೋರ್ಟ್ ತಿರಸ್ಕರಿಸಿತು.  
ಭಾರತದ ಸಂವಿಧಾನದಲ್ಲಿದ್ದ ದುರ್ಬಲ ಅಂಶಗಳನ್ನು ತುರ್ತು ಪರಿಸ್ಥಿತಿ ತೆರೆದಿರಿಸಿತು. ಪ್ರೆಸ್ ಅನ್ನು ಮೌನವಾಗಿಸಬಹುದು, ನ್ಯಾಯಾಂಗವನ್ನು ದುರ್ಬಲಗೊಳಿಸಬಹುದು ಅಂತೆಲ್ಲ ಅರಿವಾಯಿತು. ಎಡಪಕ್ಷಗಳೂ ಸೇರಿದಂತೆ ಪ್ರತಿಪಕ್ಷ ಪಾಳೆಯದಲ್ಲಿದ್ದ ಹಲವರು ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿದರು ಇಲ್ಲವೇ ಅಷ್ಟಾಗಿ ವಿರೋಧಿಸುವುದಕ್ಕೆ ಹೋಗಲಿಲ್ಲ. ಜೈಲಿನಲ್ಲಿದ್ದ ನಮಗೆಲ್ಲ ಆ ಸ್ಥಿತಿ ಎಷ್ಟು ಕಾಲ ಮುಂದುವರಿಯಬಹುದೆಂಬ ಬಗ್ಗೆ ಯಾವ ಚಿತ್ರಣಗಳೂ ಇರಲಿಲ್ಲ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪುಗೊಂಡ ಅಭಿಪ್ರಾಯಗಳು ಇಂದಿರಾ ಗಾಂಧಿಯವರು ಈ ಬಗ್ಗೆ ಮರುವಿಚಾರ ಮಾಡುವಂತೆ ಒತ್ತಡ ಸೃಷ್ಟಿಸಿದವು. ತಪ್ಪು ಲೆಕ್ಕಾಚಾರ ಹಾಕಿದ ಅವರು ಮತ್ತೆ ಚುನಾವಣೆ ಮಾಡುವ ನಿರ್ಧಾರ ತೆಗೆದುಕೊಂಡರು. ಜನವರಿ 1977ರ ಅಂತ್ಯಭಾಗದಲ್ಲಿ ತುರ್ತು ಪರಿಸ್ಥಿತಿಯನ್ನು ಸಡಿಲಿಸಲಾಯಿತು ಹಾಗೂ ಹೆಚ್ಚಿನ ರಾಜಕೀಯ ಬಂಧಿಗಳೆಲ್ಲ ಬಿಡುಗಡೆಯಾದರು. ಚುನಾವಣೆಯಲ್ಲಿ ಜನರು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಗೆಡವಿದರು. ದೇಶದ ಅನೇಕ ಭಾಗಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿತು. ಇಂದಿರಾ ಮತ್ತು ಅವರ ಮಗ ಸಂಜಯ್ ಇಬ್ಬರೂ ಕ್ರಮವಾಗಿ ರಾಯ್‌ಬರೇಲಿ ಮತ್ತು ಅಮೇಠಿಗಳಲ್ಲಿ ಸೋಲುಂಡರು.
ತುರ್ತು ಪರಿಸ್ಥಿತಿಯ ಅನುಭವಗಳನ್ನು ಉಂಡ, ಅದನ್ನು ವಿರೋಧಿಸಿದ ನನ್ನಂಥವರಿಗೆ ನಮ್ಮ ಜೀವನದ ತಿರುವೇ ಅದಾಯಿತು. ನನ್ನ ರಾಜಕೀಯ ಜೀವನದ ಅತ್ಯುತ್ತಮ ಪಾಠಗಳನ್ನು ಕಲಿಸಿದ್ದು ತುರ್ತು ಪರಿಸ್ಥಿತಿಯೇ. ಕೆಲವು ರಾಜಿಗಳನ್ನು ಯಾವತ್ತಿಗೂ ಮಾಡಿಕೊಳ್ಳಬಾರದು ಎಂಬ ದೊಡ್ಡ ಪಾಠವನ್ನು ನನಗೆ ಕಲಿಸಿತದು.


- ಅರುಣ್ ಜೇಟ್ಲಿ ಕೇಂದ್ರ ಸಚಿವರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement