ಆಚರಣೆಗಳಿಗೆಲ್ಲ ವೈಷಮ್ಯ ಬಿತ್ತುವ ವ್ಯಾಖ್ಯಾನವೇಕೆ?
ಒಬ್ಬರು ಉಂಡು ಬಿಟ್ಟ ಎಂಜಲೆಲೆಗಳ ಮೇಲೆ ಇನ್ನೊಬ್ಬರು ಉರುಳಾಡುತ್ತಾರೆ. ನಿಗಿನಿಗಿ...
ಒಬ್ಬರು ಉಂಡು ಬಿಟ್ಟ ಎಂಜಲೆಲೆಗಳ ಮೇಲೆ ಇನ್ನೊಬ್ಬರು ಉರುಳಾಡುತ್ತಾರೆ. ನಿಗಿನಿಗಿ ಪ್ರಖರಿಸುವ ಕೆಂಡದ ಮೇಲೆ ಬರಿಗಾಲಲ್ಲಿ ನಡೆದಾಡುತ್ತಾರೆ. ದೊಡ್ಡ ದಬ್ಬಳಗಳಿಂದ ಕೆನ್ನೆಗಳನ್ನು ತೂತು ಮಾಡಿಸಿಕೊಂಡು ಬಾಯಿಬೀಗ ಹಾಕಿಸಿಕೊಳ್ಳುತ್ತಾರೆ. ಬೆನ್ನಿನ ಚರ್ಮಕ್ಕೆ ಸರಳುಗಳನ್ನು ಕಟ್ಟಿ ರಥ ಏಳೆಯುತ್ತಾರೆ. ವ್ಯಕ್ತಿಯೊಬ್ಬನನ್ನು ಪಲ್ಲಕ್ಕಿಯಲ್ಲಿ ಕೂಡಿಸಿಕೊಂಡು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿ ಸಂಭ್ರಮಿಸುತ್ತಾರೆ. ಸ್ತ್ರೀಯರು ದೇವರ ಹೆಸರಲ್ಲಿ ಬೆತ್ತಲೆ ಸೇವೆ ಮಾಡುತ್ತಾರೆ. ಅಮಾನವೀಯ ಎನಿಸುವಂಥ ಇಂಥ ಸಾವಿರಾರು ಆಚರಣೆಗಳು ನಮ್ಮ ದೇಶದ ಒಂದೊಂದು ಮೂಲೆಯಲ್ಲಿ ಒಂದೊಂದು ರೀತಿಯಲ್ಲಿ ಚಾಲ್ತಿಯಲ್ಲಿವೆ. ಸರ್ಕಾರ ಕೆಲವು ಆಚರಣೆಗಳನ್ನು ನಿಷೇಧಿಸಿ ಕಾನೂನು ರೀತ್ಯ ಅಪರಾಧವೆಂದು ಘೋಷಿಸಿದ್ದರೂ ಅಲ್ಲಲ್ಲಿ ಕಾನೂನಿನ ಕಣ್ತಪ್ಪಿಸಿ ಕದ್ದುಮುಚ್ಚಾದರೂ ಆಚರಿಸಿ ಸಂತೃಪ್ತರಾಗುವ ಸುದ್ದಿಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಲೇ ಇರುತ್ತವೆ. ದೈಹಿಕಯಾತನೆ, ಮಾನಸಿಕ ಹಿಂಸೆ ಉಂಟುಮಾಡುವಂಥ, ಒಂದು ನಯಾಪೈಸೆಯಷ್ಟೂ ಐಹಿಕ ಲಾಭವಿರದಂಥ ಇಂಥ ಆಚರಣೆಗಳನ್ನು ಇಷ್ಟು ನಿಷ್ಠೆಯಿಂದ, ಸಂಭ್ರಮದಿಂದ ಹಬ್ಬದಂತೆ ಆಚರಿಸುವ ಕಾರಣವಾದರೂ ಏನು?.
ವೈಜ್ಞಾನಿಕ ದೃಷ್ಟಿಯಿಂದ ವಿಶ್ಲೇಷಿಸಿದರೆ ಮೌಢ್ಯವೆಂತಲೂ, ಸಮಾಜವಾದದ ಅಡಿಯಲ್ಲಿ ವಿಶ್ಲೇಷಿಸಿದರೆ ಶೋಷಣೆಯೆಂತಲೂ ಅನ್ನಿಸುವುದು ಸಹಜ. ಆದರೆ ಅದೇ ಅಂತಿಮ ಸತ್ಯವಲ್ಲ. ಮಡೆಸ್ನಾನವನ್ನೇ ತೆಗೆದುಕೊಳ್ಳಿ, ಒಂದು ನಿರ್ದಿಷ್ಟ ದಿನದಂದು ಎಂಜಲೆಲೆಯ ಮೇಲೆ ಉರುಳುವ ಸಂಪ್ರದಾಯವನ್ನು ಕೆಳಜಾತಿಯವರ ಮೇಲೆ ಬ್ರಾಹ್ಮಣರ ದೌರ್ಜನ್ಯವೆನ್ನುವ ಅರ್ಥದಲ್ಲೇ ವ್ಯಾಖ್ಯಾನಿಸಲಾಗುತ್ತದೆ. ಬ್ರಾಹ್ಮಣರು ಉಂಡು ಬಿಟ್ಟ ಎಲೆಗಳ ಮೇಲೆ ಉರುಳಾಡುವುದು ನಿಜವೇ ಆದರೂ ಕೆಳಜಾತಿಯವರೇ ಉರುಳಬೇಕೆಂಬ ನಿಯಮ ಅಲ್ಲಿನದಲ್ಲ. ಚರ್ಮವ್ಯಾಧಿಗಳಿಂದ ಬಳಲುತ್ತಿರುವವರು ಅವರು ಯಾವುದೇ ಜಾತಿಯವರಾಗಿರಲಿ ಉರುಳಿದರೆ ವ್ಯಾಧಿ ನಿವಾರಣೆಯಾಗುತ್ತದೆಂಬುದು ಅಲ್ಲಿನ ನಂಬಿಕೆಯೇ ಹೊರತು ಇಂಥ ಜಾತಿಯವರು ಉರುಳಲೇಬೇಕು ಇಲ್ಲದಿದ್ದರೆ ಶಿಕ್ಷಾರ್ಹರು ಎಂದೇನೂ ಅಲ್ಲಿ ನಿಯಮಾವಳಿ ರೂಪಿಸಿಲ್ಲ. ಒಂದು ವೇಳೆ ಬ್ರಾಹ್ಮಣರು ಇತರೆ ಜಾತಿಯವರನ್ನು ಶೋಷಣೆ ಮಾಡಲೆಂದೇ ಇಂಥ ಆಚರಣೆಗಳನ್ನು ರೂಪಿಸಿದ್ದಾರೆ ಎಂದೇ ಇಟ್ಟುಕೊಳ್ಳೋಣ, ಹಾಗಿದ್ದಲ್ಲಿ ಬ್ರಾಹ್ಮಣರೂ ಇಂಥ ಹಿಂಸೆಗಳನ್ನನುಭವಿಸುವಂಥ ಆಚರಣೆಗಳಿವೆಯಲ್ಲಾ? ಉದಾಹರಣೆಗೆ: ಏಕಾದಶಿ ದಿನದಂದು ಅವರು ಅನ್ನನೀರು ಇಲ್ಲದೆ ಉಪವಾಸ ಮಾಡಲೇಬೇಕು, ಒಮ್ಮೊಮ್ಮೆ ಎರಡು ದಿನ ಏಕಾದಶಿ ಬಂತೆಂದರೆ ಎರಡೂ ದಿನವೂ ಅನ್ನ ನೀರಿಲ್ಲದೆಯೇ ಕೊಳೆಯಬೇಕು, ವರ್ಷದಲ್ಲಿ ನಾಲ್ಕು ತಿಂಗಳು ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡು ಒಂದೊಂದು ತಿಂಗಳು ಒಂದೊಂದು ಪದಾರ್ಥಗಳು ನಿಶಿದ್ಧವಾದ್ದರಿಂದ ಆಯಾ ಪದಾರ್ಥಗಳಿಲ್ಲದೆಯೇ ಅಡಿಗೆ ಮಾಡಿಕೊಂಡು ಉಣ್ಣಬೇಕು. ಅಂಥ ಅಡುಗೆಯನ್ನು ಇತರರಿಗೆ ಹಾಕಿದರೆ ಅವರು ಅದನ್ನು ಒಮ್ಮೆ ಬಾಯಲ್ಲಿಟ್ಟುಕೊಂಡರೆ ಜನ್ಮದಲ್ಲಿಯೇ ಅದನ್ನು ಮತ್ತೆ ಮೂಸುವುದಿಲ್ಲ ಹಾಗಿರುತ್ತದೆ. ಅಷ್ಟು ಕೆಟ್ಟ ಊಟವನ್ನು ನಾಲ್ಕು ತಿಂಗಳು ಮಾಡಬೇಕು. ಇಂಥ ಆಚರಣೆಗಳನ್ನು ಬ್ರಾಹ್ಮಣರನ್ನು ಶೋಷಿಸಲು ಯಾವ ಜಾತಿಯವರು ಮಾಡಿದ್ದಾರೆ ಎನ್ನಬೇಕು? ಇನ್ನು ದೇವರ ಹೆಸರಲ್ಲಿ ಬೆತ್ತಲೆಸೇವೆ ಮಾಡುವುದನ್ನು ಶ್ರೀಮಂತ ವರ್ಗ ಪೂಜಾರಿಗಳ ಜೊತೆ ಸೇರಿ ಬಡಹೆಣ್ಣುಮಕ್ಕಳಿಗೆ ದೇವರ ಹೆಸರಲ್ಲಿ ತಲೆಕೆಡಿಸಿ ಈ ರೀತಿಯ ಒಂದು ಪದ್ಧತಿ ಹುಟ್ಟುಹಾಕಿ ತಮ್ಮ ತೆವಲು ತೀರಿಸಿಕೊಳ್ಳುತ್ತಾರೆ ಎಂಬ ಧಾಟಿಯಲ್ಲಿ ವ್ಯಾಖ್ಯಾನಿಸಲಾಗುತ್ತದೆ. ಹಾಗಿದ್ದರೆ ನಮ್ಮ ಇತಿಹಾಸದ ಪುಟಗಳನ್ನು ತಿರುವಿದಾಗ ಚನ್ನಮಲ್ಲಿಕಾರ್ಜುನನ ಮಹಾನ್ ಭಕ್ತೆಯಾದ ಅಕ್ಕಮಹಾದೇವಿಯವರು ವಿವಸ್ತ್ರರಾಗಿಯೇ ಇದ್ದರೆಂಬ ವಿಷಯ ಪ್ರಸ್ತಾಪವಾಗಿದೆಯೆಲ್ಲಾ, ಅವರು ಯಾರ ಶೋಷಣೆಗೆ ಒಳಗಾಗಿ ವಿವಸ್ತ್ರರಾಗಿದ್ದರು? ಅನುಭವಮಂಟಪಕ್ಕೆ ವಿವಸ್ತ್ರಳಾಗಿ ಬಂದ ಆಕೆಯನ್ನು ಅಲ್ಲಮಪ್ರಭುಗಳು ತುಂಬಿದ ಸಭೆಯಲ್ಲಿ ಹಾಗೆ ಬಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾರೆ, ಹಲವು ರೀತಿಯಲ್ಲಿ ಪ್ರಶ್ನಿಸುತ್ತಾರೆ. ಇಬ್ಬರ ಮಧ್ಯೆ ದೊಡ್ಡ ಚರ್ಚೆಯೇ ನಡೆದು ಆಕೆಯ ಆಧ್ಯಾತ್ಮಿಕ ಜ್ಞಾನಕ್ಕೆ ಇಡೀ ಸಭೆಯೇ ತಲೆದೂಗಿ 'ಅಕ್ಕ' ಎಂದು ಸಂಬೋಧಿಸಿ ಗೌರವ ಸೂಚಿಸುತ್ತದಲ್ಲಾ! ಇದಕ್ಕೇನೆನ್ನುವುದು? ಇನ್ನು ಪುರುಷರು ಹೆಣ್ಣಿನ ಶೋಷಣೆ ಮಾಡಲು ಇಂಥಾ ಆಚರಣೆಗಳನ್ನು ಹುಟ್ಟುಹಾಕುತ್ತಾರೆ ಎಂದಿಟ್ಟುಕೊಳ್ಳುವುದಾದರೆ ಭಗವಾನ್ ಮಹಾವೀರರು ತಮ್ಮ ಸಕಲ ರಾಜಭೋಗಗಳನ್ನೂ ತೊರೆದು, ಕಡೆಗೆ ತಾವು ಉಟ್ಟಬಟ್ಟೆಯನ್ನೂ ಕಳಚಿ ಸತ್ಯಾನ್ವೇಷಣೆ ಮಾಡುತ್ತಾ ಹೊರಟುಬಿಡುತ್ತಾರಲ್ಲಾ ಅವರನ್ನು ಯಾವ ಶೋಷಕರು ತಲೆಕೆಡಿಸಿದ್ದರು? ಅವರ ಪಂಥದಲ್ಲಿ ಗುರುಗಳೆನಿಸಿಕೊಂಡವರು ಇಂದಿಗೂ ಬೆತ್ತಲೆಯಾಗಿಯೇ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರಲ್ಲಾಗಲೀ ಅವರ ಭಕ್ತರಲ್ಲಾಗಲೀ ಯಾರಲ್ಲಿಯೂ ವಿಕಾರ ಭಾವನೆಗಳು ಸುಳಿಯುವುದೂ ಇಲ್ಲವಲ್ಲಾ? ಇಲ್ಲಿ ಯಾರು ಯಾರನ್ನು ಶೋಷಿಸುತ್ತಿದ್ದಾರೆ? ಧಾರ್ಮಿಕ ತತ್ವಸಿದ್ಧಾಂತಗಳ ತಳಹದಿಯ ಮೇಲೆ ರೂಪಿತವಾಗಿರುವ ಆಚರಣೆಗಳನ್ನು ಬೇರೊಂದು ದೃಷ್ಟಿಕೋನದಿಂದ ವಿಶ್ಲೇಷಿಸಿದಾಗ ಹೊಮ್ಮಬಹುದಾದ ಅಭಿಪ್ರಾಯಗಳು ಹೀಗೆ ವಾಸ್ತವಕ್ಕೆ ಹತ್ತಿರವಾಗಿರುವುದಿಲ್ಲ. ಅದನ್ನು ಧಾರ್ಮಿಕ ತತ್ವಸಿದ್ಧಾಂತಗಳ ತಳಹದಿಯ ಮೇಲೆಯೇ ವಿಶ್ಲೇಷಿಸಬೇಕು.
ಸಾವಿನಾಚೆಗಿನ ವಿಚಾರಗಳನ್ನು ನಮ್ಮ ಧರ್ಮದ ತತ್ವಸಿದ್ಧಾಂತಗಳು ಚರ್ಚಿಸಿದಷ್ಟು ಬೇರಾವ ಧರ್ಮವೂ ಚರ್ಚಿಸಿಲ್ಲ. ದೇಹ ಆತ್ಮಗಳ ಸಂಬಂಧದ ಸುತ್ತಲೇ ನಮ್ಮ ತತ್ವಸಿದ್ಧಾಂತಗಳು ಗಿರಕಿ ಹೊಡೆಯುವುದರಿಂದ ನಮ್ಮ ದೈನಂದಿನ ಬದುಕೂ ಅದರಿಂದಲೇ ಪ್ರಭಾವಿತವಾಗಿದೆ. ಹುಟ್ಟಿದವನು ಸಾಯಲೇಬೇಕು, ಸತ್ತವನು ಹುಟ್ಟಲೇಬೇಕು ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದರೆ, ಶ್ರೀ ಶಂಕರರು 'ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀ ಜಠರೇ ಶಯನಂ ಇಹಸಂಸಾರೇ ಬಹುದುಸ್ಸಾರೇ ಕೃಪಯಾ ಪಾರೇ ಪಾಹಿ ಮುರಾರೇ' ಮತ್ತೆ ಮತ್ತೆ ಹುಟ್ಟು ಮತ್ತೆಮತ್ತೆ ಸಾವು ಮತ್ತೆ ಮತ್ತೆ ತಾಯ ಗರ್ಭವಾಸ ಇದೇ ಸಂಸಾರ. ಈ ಚಕ್ರದಿಂದ ಪಾರಾಗಲು ಮುರಾರಿ ಕೃಪೆಯೇ ದಾರಿ' ಎಂದು ಸಾರಿದ್ದಾರೆ. ಇನ್ನು ದೇಹ ಬೇರೆ ಆತ್ಮಬೇರೆ, ಆತ್ಮನು ಸ್ವತಂತ್ರನಾದರೂ ದೇಹದಲ್ಲಿ ಸಿಕ್ಕಿ ದೇಹವೇ ತಾನೆಂದುಕೊಂಡು ಬಿಟ್ಟಿರುವುದರಿಂದ ಅವನಿಗೆ ಈ ಎಲ್ಲಾ ನೋವು ನಲಿವು ಸುಖ ದುಃಖಗಳ ಸುಳಿಯಲ್ಲಿ ಸಿಲುಕಿ ಒದ್ದಾಡುವ ಪರಿಸ್ಥಿತಿ ಇದೆ. ಒಮ್ಮೆ ಅವನಿಗೆ ತಾನು ಸ್ವತಂತ್ರನೆಂಬ ಅರಿವು ಬಂದುಬಿಟ್ಟಿತೆಂದರೆ ದೇಹದ ಮೇಲೆ ಮನಸಿನ ಮೇಲೆ ಆಗುವ ಯಾವಕ್ರಿಯೆಯಿಂದಲೂ ಬಾಧಿತನಾಗುವುದಿಲ್ಲ ಮತ್ತು ಈ ಜನನ ಮರಣಗಳೆಂಬ ಸುಳಿಯಿಂದ ತಪ್ಪಿಸಿಕೊಂಡು ಸುಲಭವಾಗಿ ಪರಮಪದ ಹೊಂದಬಹುದು ಎಂದು ಉಪನಿಷತ್ಗಳು ಹೇಳುತ್ತವೆ. ಆದ್ದರಿಂದ ಆತ್ಮನಿಗೆ ಶರೀರದಿಂದ ಭಿನ್ನ ಎಂಬ ಜ್ಞಾನ ಉಂಟಾಗಲಿಕ್ಕಾಗಿ ನಮ್ಮ ತತ್ವಸಿದ್ಧಾಂತಗಳು ದೇಹದಂಡನೆ ಮನೋನಿಗ್ರಹಗಳೆಂಬ ಎರಡು ಮಾರ್ಗಗಳನ್ನು ಸೂಚಿಸಿವೆ. ಅದರ ಪ್ರಯೋಗಾರ್ಥವಾಗಿಯೇ ಇಂಥ ಆಚರಣೆಗಳು ಹುಟ್ಟಿಕೊಂಡಿರಬೇಕು. ಯಾರೋ ಒಬ್ಬರು ಹಿಡಿದ ಮಾರ್ಗವನ್ನೇ ಇತರರು ಅನುಸರಿಸಿ ಅವುಗಳೆಲ್ಲಾ ಸಂಪ್ರದಾಯಗಳಾಗಿ ಹೋಗಿರಬೇಕು. ಸಾವಿನಾಚೆಗಿನ ಸತ್ಯದ ಬಗ್ಗೆ ಕಲ್ಪನೆಯಿಲ್ಲದವರು ಈ ನಡಾವಳಿಗಳನ್ನು ಹೇಗೆ ತಾನೇ ಒಪ್ಪಿಕೊಂಡಾರು? ಆತ್ಮ ಹಾಗೂ ಮರುಹುಟ್ಟು ಇವುಗಳಲ್ಲಿ ಅವರುಗಳಿಗೆ ನಂಬಿಕೆಯೇ ಇಲ್ಲ. ಹುಟ್ಟು ಒಂದು ಆಕಸ್ಮಿಕವೆಂದು ಸಾರುವ ಸಿದ್ಧಾಂತಗಳು ದೇಹದಂಡನೆ ಮನೋನಿಗ್ರಹದಂತಹ ಬೋಧನೆಗಳನ್ನು ಯಾಕೆ ಮಾಡುತ್ತವೆ? ಆಕಸ್ಮಿಕವಾಗಿ ಜಗತ್ತಿಗೆ ಬಂದಿರುವ ನಾವು ಇಂದ್ರಿಯಗಳಿಗೆ, ಮನಸ್ಸಿಗೆ ಮೋಸ ಮಾಡದೆ ಅವು ಬಯಸಿದ್ದನ್ನು ಕೊಡುವುದರಲ್ಲೇ ಸಾರ್ಥಕತೆ ಇದೆಯೆಂದು ಸಾರುತ್ತವೆ. ಹಾಗಾಗಿ ಇಂದ್ರಿಯ ಮನಸ್ಸುಗಳಿಗೆ ಮುದ ಕೊಡುವ ಆಚರಣೆಗಳಷ್ಟೇ ಅಲ್ಲಿ ಕಾಣುತ್ತವೆ. ಆ ಸಿದ್ಧಾಂತಗಳಿಂದ ಪ್ರೇರೇಪಿತರಾದವರು ದೇಹದಂಡನೆ ಮನೋನಿಗ್ರಹದಿಂದಲೇ ಪರಮಪದ ಪ್ರಾಪ್ತಿಯೆಂದು ನಂಬಿದವರ ಆಚರಣೆಗಳನ್ನು ವಿಶ್ಲೇಷಿಸಿದಾಗ ಮೌಢ್ಯ ಶೋಷಣೆ ಅಂತ ಅನಿಸಿದರೆ ಆಶ್ಚರ್ಯವಿಲ್ಲ. ಅಂಥವರ ವಾದಗಳನ್ನಾಲಿಸಿ ನಮ್ಮ ಧಾರ್ಮಿಕ ಆಚರಣೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ತಂದು ನಿರ್ಬಂಧಗಳನ್ನು ಹೇರುವುದು ನಮ್ಮ ಪರಂಪರೆಗೇ ಮಾಡುವ ಅಪಚಾರವಾದೀತು. ಹಾಗೆಂದು ಮಾನಹಾನಿ ಪ್ರಾಣಹಾನಿಗಳಿಗೆ ಕಾರಣವಾಗುವ ಆಚರಣೆಗಳನ್ನು ಪೋಷಿಸುವ ಇರಾದೆ ಈ ಲೇಖನಕ್ಕಿಲ್ಲ. ಕಾನೂನಿನಿಂದ ಅದು ಸಾಧಿಸಲಾಗದ್ದು ಎಂದಷ್ಟೇ ಅಭಿಪ್ರಾಯ. ಎಂಜಲೆಲೆಯ ಮೇಲೆ ಉರುಳಿದರೆ ಚರ್ಮವ್ಯಾಧಿಗಳು ವಾಸಿಯಾಗುತ್ತವೆ ಎಂದು ದಶಕಗಳ ಕಾಲ ನಂಬಿಕೊಂಡು ಬಂದಿರುವಾಗ ಸರ್ಕಾರ ಅದನ್ನು ಏಕ್ದಂ ನಿಷೇಧಿಸಿದರೆ ಆಸ್ತಿಕ ಜನ ಸರ್ಕಾರವನ್ನು ಖಳನಾಯಕನಂತೆ ಕಾಣುತ್ತಾರೆಯೇ ಹೊರತು ಆಚರಣೆಯನ್ನಂತೂ ಬಿಡುವುದಿಲ್ಲ. ಬೇರೆಲ್ಲೋ ಕದ್ದುಮುಚ್ಚಿ ಮಾಡುತ್ತಾರಷ್ಟೆ. ಬದಲಾಗಿ ಧಾರ್ಮಿಕ ಕಾರಣದಿಂದಾಗಿ ಉದ್ಭವಿಸಿರುವ ಸಮಸ್ಯೆಯನ್ನು ಧಾರ್ಮಿಕ ಅಸ್ತ್ರದಿಂದಲೇ ನಿವಾರಣೆ ಮಾಡುವುದು ಒಳಿತು. ಅಂಧಶ್ರದ್ಧೆ ಹಾಗೂ ಘೋರ ಆಚರಣೆಗಳನ್ನು ನಮ್ಮ ಶಾಸ್ತ್ರವೇ ಒಪ್ಪುವುದಿಲ್ಲ ಎನ್ನುವುದಕ್ಕೆ ಹಲವಾರು ದಾರ್ಶನಿಕರ ಸೂಕ್ತಿಗಳಿವೆ. ಭಗವದ್ಗೀತೆಯ ಹದಿನೇಳನೆಯ ಅಧ್ಯಾಯದಲ್ಲಿ ಶ್ರೀಕೃಷ್ಣ ಹೇಳುತ್ತಾನೆ, "ಯಾವ ಮನುಷ್ಯರು ಶಾಸ್ತ್ರೋಕ್ತ ವಿಧಿಗಳನ್ನು ಬಿಟ್ಟು ಮನಸ್ಸಿಗೆ ತೋಚಿದಂತೆ ಘೋರವಾದ ಆಚರಣೆಗಳನ್ನು ಮಾಡುವ ಮೂಲಕ ತಮ್ಮ ಶರೀರವನ್ನು ಒಣಗಿಸುವುದು (ಹಿಂಸಿಸುವುದು) ಮತ್ತು ಭಗವಂತನ ಅಂಶರೂಪಿಯಾದ ಜೀವಾತ್ಮನಿಗೆ ಕಷ್ಟ ಕೊಡುವುದು-ಜೀವಸಮುದಾಯವನ್ನೂ ಮತ್ತು ಅಂತರ್ಯಾಮೀ ಪರಮೇಶ್ವರನನ್ನು ಕೃಶಗೊಳಿಸುವುದು ಮಾಡುವರೋ ಆ ಅಜ್ಞಾನಿಗಳನ್ನು ಅಸುರೀ ಸ್ವಭಾವದವರೆಂದು ತಿಳಿ" ಅರ್ಥಾತ್ ಅಂಥವರನ್ನು ಭಗವಂತನೂ ಮೆಚ್ಚಲಾರ ಅಂತ ಇದೆ. ಇಂತಹ ವಿಚಾರಗಳನ್ನು ಧರ್ಮಗುರುಗಳಿಂದಲೇ ಹೇಳಿಸಿ ಅದಕ್ಕೆ ಸಾಕಷ್ಟು ಪ್ರಚಾರ ಕೊಡುವ ಮೂಲಕ ಜನಗಳ ಧಾರ್ಮಿಕ ತಿಳಿವಳಿಕೆಯ ದಿಕ್ಕನ್ನೇ ಬದಲಿಸಿ ಅಂಥ ಆಚರಣೆಗಳಿಗೆ ಶಾಶ್ವತ ಮುಕ್ತಿ ದೊರಕಿಸಬೇಕೇ ಹೊರತು ಅವರ ನಂಬಿಕೆಗಳನ್ನೇ ಹೀಯಾಳಿಸುವುದು, ಅವುಗಳನ್ನು ಜಾತಿ ವೈಷಮ್ಯಕ್ಕೆ ಕಾರಣವಾಗುವಂತೆ ವ್ಯಾಖ್ಯಾನಿಸುವುದು ಬೆಂಕಿಗೆ ತುಪ್ಪ ಸುರಿಯುವ ಕೆಲಸವಾದೀತೇ ವಿನಃ ಬೇರೇನೂ ಆಗದು.
-ಫಣಿರಾಮಚಂದ್ರ
paniramachandra.hs@gmail.com