ಸಸ್ಯ ಸಂಪತ್ತಿನ ಮಾಯಾಲೋಕದಲ್ಲಿ ವಿಹರಿಸಿದಾಗ
ಕಳೆದ ಮೂರು ವಾರಗಳಿಂದ ದೇವ ದೇವ ವನದ ಅದ್ಭುತ ಸಸ್ಯಲೋಕಕ್ಕೆ ನಿಮ್ಮನ್ನು...
ಕಳೆದ ಮೂರು ವಾರಗಳಿಂದ ದೇವ ದೇವ ವನದ ಅದ್ಭುತ ಸಸ್ಯಲೋಕಕ್ಕೆ ನಿಮ್ಮನ್ನು ಕರೆದೊಯ್ಯುತ್ತಿದ್ದೇನೆ. ಈ ವಾರ ಆ ವನದ ಸಂಪೂರ್ಣ ಅನಾವರಣ ಮಾಡುತ್ತೇನೆ. ಅರಣ್ಯ ಇಲಾಖೆಯಲ್ಲಿರುವ ಸಸ್ಯಗಳ ದಾಸ್ತಾನು ಸರಕುಗಳ ಬಗ್ಗೆ ಮಾಹಿತಿ http://stg3.kar.nic.in/forest_enursery/ ಯಲ್ಲಿ ಸಿಗುತ್ತದೆ. ಆ ತಾಣವನ್ನು aranya.gov.in ಮೂಲಕ ಹೋಗಬಹುದು. ಸಾವಿರಾರು ಸಸ್ಯಗಳ ಸಂಪತ್ತು ನಮ್ಮಲ್ಲಿದೆ. ಬೆಂಗಳೂರಿನಲ್ಲಿ ಫೌಂಡೇಷನ್ ಫಾರ್ ರಿವೈಟಲೈಸೇಷನ್ ಆಫ್ ಲೋಕಲ್ ಹೆಲ್ತ್ ಟ್ರಾಡಿಷನ್ಸ್ ಎನ್ನುವ ಸಂಸ್ಥೆಯು ಉಪಯುಕ್ತ ಸಸ್ಯ ಸಂಪತ್ತಿನ ದಾಖಲೆಗಳನ್ನು ಮಾಡಿಟ್ಟಿದೆ. ಆ ಸಂಸ್ಥೆಯ ಅಂತರ್ಜಾಲಕ್ಕೆ ಹೋಗಿ ನೋಡಿದರೆ ಸಸ್ಯಗಳ ಸಂಪೂಣ ಮಾಹಿತಿ ಚಿತ್ರಗಳ ಸಮೇತ ದೊರಕುತ್ತದೆ. ಆದರೆ ಓದುವುದಕ್ಕಿಂತ ಮಕ್ಕಳು ಮರಗಳನ್ನು ಪ್ರತ್ಯಕ್ಷವಾಗಿ ನೊಡಿದರೆ ಹೆಚ್ಚಿನ ಜ್ಞಾನ ಪಡೆಯುತ್ತಾರೆ ಎಂದು ಭಾವಿಸುತ್ತೇನೆ. ಉದಾ:
ಕಿರುಲುಬೋಗಿ: ಇದರ ಕಟ್ಟಿಗೆ, ಕಾಂಡ ಬೀಜ ದಾರುವು ಗಡುಸಾಗಿದ್ದು, ಬಾಳಿಕೆಯುತವಾಗಿ ಗೆದ್ದಲು ಹಿಡಿಯದೆ ಗೃಹ ನಿರ್ಮಾಣ, ದೋಣಿ ಕಟ್ಟಲು, ಹಾಗೂ ರೈಲ್ವೆ ಸ್ಲೀಪರುಗಳಲ್ಲಿ ವಿಶೇಷವಾಗಿ ಬಳಸಲ್ಪಡುವುದು. ಬೀಜದಿಂದ ಕೊಬ್ಬು ಹಾಗೂ ಕಾಂಡದಿಂದ ಅಂಟುರಾಳ ಒದಗುತ್ತದೆ.
ಗುಳ ಮಾವು: ಇದರ ಕಟ್ಟಿಗೆಯ ದಾರುವು ಕಂದು ಬಣ್ಣ ಹೊಂದಿದ್ದು, ಚುಕ್ಕೆಗಳಿಂದ ಕೂಡಿರುತ್ತದೆ. ಪೀಠೋಪಕರಣ, ಹಲಗೆಗಳು ಇನ್ನಿತರ ಮರಗೆಲಸಗಳಿಗೆ ಹಾಗೂ ಪದರ ಹಲಗೆಗಳ ತಯಾರಿಕೆಗೂ ಉಪಯೋಗಿಸುತ್ತಾರೆ.
ಮಾವು: ಇದರ ದಾರುವು ಮೃದುವಾಗಿದ್ದು, ಮರಗೆಲಸಕ್ಕೆ ಉಪಯುಕ್ತ. ಬಾಳಿಕೆಯುತವಲ್ಲ, ಸಂಸ್ಕರಿಸಲ್ಪಟ್ಟಾಗ ರೈಲ್ವೆ ಸ್ಲೀಪರುಗಳಿಗೆ ಬಳಸಲಾಗುತ್ತದೆ. ಬೆಂಕಿ ಪೊಟ್ಟಣಗಳ ಹಾಗೂ ಉತ್ತಮ ದರ್ಜೆಯ ಪದರ ಹಲಗೆಗಳ ತಯಾರಿಕೆಗೆ, ಭಾಂಗಿ ಪೆಟ್ಟಿಗೆಗಳಿಗೆ, ಚಿಕ್ಕಪುಟ್ಟ ಮರಗೆಲಸಗಳಿಗೆ, ಕೆಲವೊಮ್ಮೆ ಹಲಗೆ ಹಾಗೂ ತೋಡು ದೋಣಿಗಳಿಗೆ ಉಪಯೋಗಿಸುತ್ತಾರೆ.
ಬೇವು: ಇದನ್ನು ಕೆಂಪುಚೇಗು, ಬಾಳಿಕೆಯುತ ಪೀಠೋಪಕರಣ ಇನ್ನೂ ವಿವಿಧ ಕೆಲಸಗಳಿಗೆ ಬಳಸುತ್ತಾರೆ. ತೊಗಟೆಯಿಂದ ಬರುವ ಅಂಟು, ಹೂ, ಎಲೆಗಳು ಔಷಧಿಗೆ ಉಪಯುಕ್ತ. ಬೀಜದ ಎಣ್ಣೆ ಔಷಧಿಗೆ ಸೊಪ್ಪು ತಯಾರಿಸಲು ಹಾಗೂ ಉರಿಸಲು ಬರುತ್ತದೆ. ಬೀಜದ ಹಿಂಡಿ ಉತೃಷ್ಟ ಗೊಬ್ಬರ. ಎಲೆಯ ಕಡ್ಡಿ, ಸಣ್ಣ ರೆಂಬೆಗಳನ್ನು ದಂತ ಮರ್ಜನಕ್ಕಾಗಿ ಬಳಸಲಾಗುತ್ತದೆ.
ಸಂಪಿಗೆ: ಇದರ ಕಟ್ಟಿಗೆಯು ಪೀಠೋಪಕರಣಗಳು, ಅಲಮಾರಿಗಳು, ಪದರ ಹಲಿಗೆ ಇನ್ನಿತರ ಬಳಕೆಗಳಿಗೆ ಉಪಯುಕ್ತ.
ಹೊನ್ನೆ: ಇದರ ಕಟ್ಟಿಗೆ ಉತ್ತಮ ಚೌಬೀನ ದೊರಕುವುದು, ಇದನ್ನು ಗೃಹ ನಿರ್ಮಾಣ, ಗಾಡಿಯ ಭಾಗಗಳು, ಚಕ್ರಗಳು, ದೋಣಿ, ಕೃಷಿ ಉಪಕರಣ ಇನ್ನೂ ಅನೇಕ ಮನೆಗೆಲಸಗಳಿಗೆ ಬಳಸಲಾಗುತ್ತದೆ.
ರಕ್ತಚಂದನ ಕೆಂಪುಗಂಧ: ಇದರ ದಾರುವು ಅತಿ ಗಡುಸಾಗಿದ್ದು, ಬಾಳಿಕೆಯುತವಾಗಿರುತ್ತದೆ. ರಕ್ತಗೆಂಪು ಇಲ್ಲವೆ ಕಪ್ಪು ಬಣ್ಣ ಹೊಂದಿದ್ದು ಕೆತ್ತನೆ ಕೆಲಸಗಳಿಗೆ ಉಪಯೋಗಿಸಲಾಗುತ್ತದೆ.
ಹುಣಸೆ: ಇದರ ಕಾಯಿ, ಹಣ್ಣಿನ ತಿರುಳು ಸರ್ವ ಪರಿಚಿತವಾದ ಖಾದ್ಯವಸ್ತು. ಕಾಯಿಯಿಂದ ಟಾರ್ಟರಿಕ್ ಆಮ್ಲ ತಯಾರಿಸಬಹುದು. ಇದರ ದಾರುವು ಒತ್ತು ಕಣರಚನೆ ಹೊಂದಿರುವುದರಿಂದ ಬಹಳ ಗಡುಸಾಗಿರುತ್ತದೆ. ಗಾಣಗಳ ಭಾಗ, ಒನಕೆ, ಕೊಡಲಿ ತಯಾರಿಕೆಯಲ್ಲಿ ಹಾಗೂ ಚರಕ ಕೆಲಸಗಳಿಗೆ ಬಳಸಲ್ಪಡುತ್ತದೆ. ಇದರ ಸೌದೆ, ಇದ್ದಿಲೂ ಉತ್ತಮವಾಗಿರುತ್ತವೆ.
ಆಳಲೆ: ಇದರ ದಾರುವು ಬಹಳ ಗಡುಸಾಗಿದ್ದು ಸಾಕಷ್ಟು ಬಾಳಿಕೆಯುತವಾಗಿದ್ದು, ಗೃಹ ನಿರ್ಮಾಣ ಹಾಗೂ ಕೃಷಿ ಉಪಕರಣಗಳಲ್ಲಿ ಬಳಸಲ್ಪಡುತ್ತದೆ. ದಾರುವಿಗಿಂತ ಇದರ ಕಾಯಿಗೆ ಹೆಚ್ಚು ಪ್ರಾಶಸ್ತ್ಯ ಇರುವುದರಿಂದ ಜೀವಂತ ಮರದ ಮೌಲ್ಯವೇ ಹೆಚ್ಚೆಂದು ಭಾವಿಸಬೇಕು.
ಹುನಾಲ್: ಇದರ ದಾರುವು ಎಳೆಗಂದು ಬಣ್ಣ, ಅತಿ ಗಡುಸಾಗಿದ್ದು, ಹಲಗೆಗಳು, ಪೀಠೋಪಕರಣಗಳು, ಗಾಡಿ, ತೋಡುದೋಣೆ, ರೈಲ್ವೆ ಸ್ಲೀಪರುಗಳು, ಪದರ ಹಲಗೆಗಳಿಗೆ ಬಳಸಲಾಗುತ್ತದೆ. ತೊಗಟೆಯಿಂದ ಟ್ಯಾನಿನ್ ದೊರಕುತ್ತದೆ.
ಸಾಲುಧೂಪ: ಇದರ ದಾರುವು ಗಾಡುಸಾಗಿದ್ದು, ಪದರ ಹಲಗೆ, ಬೆಂಕಿ ಪೆಟ್ಟಿಗೆಗಳ ತಯಾರಿಕೆಯಲ್ಲಿ ವಿಶೇಷವಾಗಿ ಬಳಸಲ್ಪಡುತ್ತದೆ. ಇದರಿಂದ ರೈಲ್ವೆ ಸ್ಲೀಪರುಗಳನ್ನೂ ತಯಾರು ಮಾಡಲಾಗುತ್ತದೆ.
ಈ ಸಂಪತ್ತಿನ ಬಳಕೆಯ ಬಗ್ಗೆ ನಮ್ಮ ಪೂರ್ವಜರಲ್ಲಿ ಇದ್ದ ಜ್ಞಾನ ಅಪಾರ. ಇಂದಿಗೂ ಕೆಲವು ಪರಿಶಿಷ್ಟ ಪಂಗಡಗಳಲ್ಲಿ ಸಸ್ಯ ಸಂಪತ್ತಿನ ಉಪಯೋಗದ ಅರಿವಿನಿಂದಲೇ ತಮ್ಮ ಖಾಯಿಲೆಗಳಿಗೆ ಔಷಧಿಗಳನ್ನು ಮಾಡಿಕೊಳ್ಳುತ್ತಾರೆ.
ಈ ಸಂಪತ್ತು ನಾಶವಾಗಬಾರದು. ಔಷಧೀಯ ಗುಣಹೊಂದಿವೆ ಎನ್ನಲಾಗುವ ಸಸ್ಯಗಳನ್ನು ವೈಜ್ಞಾನಿಕವಾಗಿ ಇಂದು ದೃಢಪಡಿಸಿಕೊಳ್ಳಬಹುದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಇಂದಿಗೂ ಜಗತ್ತಿನಾದ್ಯಂತ ಆರೋಗ್ಯವನ್ನು ಕಾಪಾಡಿಕೊಳ್ಳಲು ಜನರು ಗಿಡ ಮೂಲಿಕೆಗಳ ಸಾಂಪ್ರದಾಯಿಕ ಪದ್ಧತಿಯನ್ನೇ ಅನುಸರಿಸುತ್ತಿದ್ದಾರೆ. ಅದರಲ್ಲೂ ಇಂದು ಯುವ ಜನತೆ ಕೂಡ ನಮ್ಮ ಹಿಂದಿನ ಸಾಂಪ್ರದಾಯಿಕ ಪದ್ಧತಿಗಳನ್ನು ಹೆಚ್ಚಾಗಿ ಅಭ್ಯಸಿಸಿ, ಬಳಸಲು ಇಚ್ಛಿಸುತ್ತಿದ್ದಾರೆ. ಆದುದರಿಂದ ಔಷಧೀಯ ಸಸ್ಯಗಳನ್ನು ಬೆಳೆಸಲು ಸರ್ಕಾರ ಒತ್ತು ಕೊಡುತ್ತಿದೆ. ಅದಕ್ಕೆಂದೇ ಅರಣ್ಯ ಇಲಾಖೆಯಲ್ಲಿ ಕರ್ನಾಟಕ ಔಷಧೀಯ ಸಸ್ಯಗಳ ಅಥಾರಿಟಿ ಎಂಬ ಂದು ಪ್ರತ್ಯೇಕ ಕಚೇರಿಯನ್ನು ತೆರೆದು, ವೈದ್ಯಕೀಯ ಸಸ್ಯಗಳನ್ನು ಬೆಳೆಸಲು ಇಚ್ಛಿಸುವವರಿಗೆ ಧನಸಹಾಯವನ್ನೂ ಮಾಡುತ್ತಿದೆ. ಅರಣ್ಯ ಪ್ರದೇಶಗಳಲ್ಲಿಯೂ ಸಹ ಔಷಧೀಯ ಸಸ್ಯಗಳನ್ನು ಬೆಳೆಸಲಾಗುತ್ತಿದೆ.
ಸಾಗವಾನಿ: ಇದರ ಕಟ್ಟಿಗೆ ದಾರುವಿನ ಉಪಯೋಗಗಳೂ ಅನೇಕ. ಗೃಹ ನಿರ್ಮಾಣಕ್ಕೆ, ಪೀಠೋಪಕರಣಗಳಿಗೆ, ಹಡಗು ಕಟ್ಟಲು, ರೈಲ್ವೆ ಕೋಚುಗಳಿಗೆ, ಸೇತುವೆ ನಿರ್ಮಾಣದಲ್ಲಿ, ಗಾಡಿ ತಯಾರಿಕೆಗೆ, ಗಾಡಿ ಚಕ್ರಗಳಿಗೆ, ಲಾರಿ ಒಡಲುಗಳಿಗೆ, ಕೆತ್ತನೆ ಇತರ ಕುಶಲ ಕೆಲಸಗಳಿಗೆ, ಪದರ ಹಲಗೆಗಳಿಗೆ, ಭಿತ್ತಿ ಫಲಕಗಳಿಗೆ, ಆಲಂಕಾರಿಕ ಫಲಕಗಳ ಹೊರಮೈ ಹೊದಿಕೆಗಳಿಗೆ, ತೆಳು ಹೊದಿಕೆಗಳಿಗೆ ಹೀಗೆ ವಿಧವಿಧವಾಗಿ ಉಪಯುಕ್ತವಾಗಿರುತ್ತದೆ. ಇದರ ದಾರುವಿನ ಎಣ್ಣೆಯನ್ನು- ಇಸುಬು, ಗಜಕರ್ಣ ಇತ್ಯಾದಿ ಚರ್ಮರೋಗಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ಇದರ ಬೀಜದ ಎಣ್ಣೆ ಕೇಶವರ್ಧಕವಾಗಿದೆ.
ತೊರೆಮತ್ತಿ: ಇದರ ದಾರುವು ಕಂದು ಬಣ್ಣದ್ದಾಗಿ ಅತಿ ಗಡುಸಾಗಿದ್ದು, ಗೃಹ ನಿರ್ಮಾಣಕ್ಕೆ, ಕೃಷಿ ಉಪಕರಣಗಳಿಗೆ, ಗಾಡಿಗಳಿಗೆ, ರೈಲ್ವೆ ಸ್ಲೀಪರ್ಗಳಿಗೆ, ಪದರ ಹಲಗೆ ತಯಾರಿಕೆಗೆ ಹಾಗೂ ದೋಣಿ ಕಟ್ಟಲು ಬಳಸುತ್ತಾರೆ. ಇದರ ತೊಗಟೆಯನ್ನು ಔಷಧ ತಯಾರಿಯಲ್ಲಿ ಬಳಸಲಾಗುತ್ತದೆ.
ತಾರೆ: ಇದರ ದಾರುವು ಬೂದು ಬಣ್ಣ ಹೊಂದಿದ್ದು, ಗಡುಸಾಗಿದ್ದರೂ ಬಾಳಿಕೆಯುತವಾಗಿರದೆ ಇದರ ಬಳಕೆ ಸೀಮಿತವಾಗಿರುವುದು. ನೀರಿನಲ್ಲಿ ಚೆನ್ನಾಗಿ ಬಾಳಿಕೆ ಬರುತ್ತದೆ. ಹಲಗೆಗಳಿಗೆ, ಭಾಂಗಿ ಪೆಟ್ಟಿಗೆಗಳಿಗೆ, ದೋಣಿಗಳಿಗೆ, ಪದರ ಹಲಗೆಗಳಿಗೆ, ಸಂಸ್ಕರಿಸಲ್ಪಟ್ಟ ನಂತರ ರೈಲ್ವೆ ಸ್ಲೀಪರಗಳಿಗೆ ಉಪಯೋಗಿಸಲ್ಪಡುತ್ತದೆ. ಇದರ ಹಣ್ಣುಗಳಿಂದ ಟ್ಯಾನಿನ್ ದೊರಕುತ್ತದೆ. ಇದರ ಕಾಯಿಯನ್ನು ಔಷಧಿಗೂ ಬಳಸುತ್ತಾರೆ.
ಹೆಬ್ಬೇವು: ಇದರ ಕಟ್ಟಿಗೆಯನ್ನು ಗೃಹ ಹಾಗೂ ಕೃಷಿ ಉಪಕರಣಗಳಿಗೆ ಬಳಸುತ್ತಾರೆ. ಇದರ ಒಣಗಿದ ಹಣ್ಣುಗಳನ್ನು ಹೊಟ್ಟೆ ಶೂಲೆಗೆ ಪರಿಹಾರವಾಗಿ ಬಳಸುತ್ತಾರೆ.
ರಂಜ: ಇದರ ಕಟ್ಟಿಗೆ ಬಹಳ ಗಡಸಾಗಿದ್ದು ಗೃಹ ನಿರ್ಮಾಣಗಳಲ್ಲಿ ಉಪಯುಕ್ತ. ಇದರ ಬೀಜದಿಂದ ಬರುವ ಎಣ್ಣೆಯನ್ನು ಅಡಿಗೆಗೆ, ಬೆಂಕಿ ಉರಿಸಲು ಹಾಗೂ ಔಷಧಿಗಳಿಗೆ ಬಳಸುವುದುಂಟು. ಹೂಗಳಿಂದ ಮನಸುರಿ ಸುಗಂಧ ಎಣ್ಣೆ ದೊರೆಯುತ್ತದೆ ಹಾಗೂ ತೊಗಟೆಯನ್ನು ಔಷಧಿಗೆ ಉಪಯೋಗಿಸುತ್ತಾರೆ.
ನೇರಳೆ: ಇದರ ಕಟ್ಟಿಗೆ ಬಾಳಿಕೆಯುತವಾಗಿದ್ದು, ಸಾಧಾರಣ ಗೃಹಗಳ ನಿರ್ಮಾಣಕ್ಕೆ, ಕೃಷಿ ಉಪಕರಣಗಳಿಗೆ, ಬಾವಿ ಕೆಲಸಗಳಲ್ಲಿ, ರೈಲ್ವೆ ಸ್ಲೀಪರಗಳಿಗಾಗಿ ಉಪಯೋಗಿಸಲ್ಪಡುತ್ತದೆ. ಇದರ ಸೌಧೆಯೂ ಉತ್ತಮವಾಗಿರುತ್ತದೆ. ಎಲೆ, ಹಣ್ಣು, ಬೀಜ, ತೊಗಟೆಗಳು ಔಷಧಿಗಳಿಗೆ ಬಳಸಲ್ಪಡುತ್ತವೆ. ಹಣ್ಣು, ಬೀಜ ಬಹು ಮೂತ್ರ ರೋಗಕ್ಕೆ ಔಷಧಿಯಾಗಿ ಬಳಕೆಯಾಗುತ್ತವೆ. ತೊಗಟೆಯಿಂದ ಟ್ಯಾನಿನ್ ಕೂಡ ದೊರಕುತ್ತದೆ.
ಈ ಕಾರಣಕ್ಕಾಗಿ ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯೂ ತಮ್ಮ ಪೂರ್ವಿಕರಿಂದ ತಮಗೇನಾದರೂ ಸಸ್ಯಗಳ ಬಗ್ಗೆ ಉಪಯುಕ್ತ ಮಾಹಿತಿ ಇದ್ದರೆ, ಅದನ್ನು ದಾಖಲಿಸಿ, ಮೇಲೆ ಹೇಳಿದಂಥ ಸಂಸ್ಥೆಗಳನ್ನು ಸಂಪರ್ಕಿಸಿ, ಅವರಿಗೆ ಮಾಹಿತಿಯನ್ನು ತಲುಪಿಸಿದರೆ, ಅವುಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಎಲ್ಲರಿಗೂ ಉಪಯುಕ್ತವಾಗುವಂತೆ ಕ್ರಮ ಕೈಗೊಳ್ಳುತ್ತಾರೆ. ಸರಿಯಾದ ಮಾಹಿತಿಯು ಇಡೀ ಪ್ರಪಂಚಕ್ಕೇ ದೊರಕುವಂತೆ ಮಾಡುತ್ತಾರೆ. ವೈಯುಕ್ತಿಕವಾಗಿ ಪ್ರತಿಯೊಬ್ಬ ನಾಗರಿಕನೂ ತಮ್ಮ ತಮ್ಮ ಮನೆಗಳಲ್ಲಿ ಜಾಗವಿಲ್ಲದಿದ್ದಲ್ಲಿ ತಾರಸಿಗಳಲ್ಲಿಯಾದರೂ ಔಷಧೀಯ ಸಸ್ಯಗಳನ್ನು ಬೆಳೆಸಬೇಕು. ಈ ಹಿನ್ನೆಲೆಯಲ್ಲಿ ನಾವು ಗುಲ್ಬರ್ಗಾ ನಗರದಲ್ಲಿ ಇಂಥ ಒಂದು ಔಷಧೀಯ ಸಸ್ಯಗಳ ಉದ್ಯಾನವನ್ನು ಸೃಷ್ಟಿಸಲು ಕ್ರಿಯಾ ಯೋಜನೆ ಸಿದ್ಧ ಪಡಿಸಿದೆವು.
-ಶಾಲಿನಿ ರಜನೀಶ್, ಐಎಎಸ್
anisikeprabha@gmail.com