ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಭಾವ ಅಭಾವ: ಸೇತುವೆ ಕಟ್ಟುವ ಬಗೆ ಹೇಗೆ?

Mainashree
Updated On : 1 Mar 2014, 11:58 am

ಸಂಬಂಧಗಳು ಗಾಢಗೊಳ್ಳದೆ ಕರಗುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ. ನಾಲ್ಕು ದಿನದ ತೀವ್ರತೆ ಐದನೇ ದಿನ ಮಾಯವಾಗಿ ಬಿಡುತ್ತದೆ. ಆರು- ಏಳನೇ ದಿನ ಮತ್ತೆ ಅಪರಿಚಿತರಾಗಿ ಬಿಡುತ್ತೇವೆ. ಭಾವನೆಗಳು ಸ್ವಾರ್ಥ ಮತ್ತು ಅನಿವಾರ್ಯತೆಗಳ ನಡುವೆ ಮುದುಡಿ ಹೋಗುತ್ತವೆ ಅಥವಾ ಹೊಸಕಿ ಹಾಕಲ್ಪಡುತ್ತವೆ. ಈ ಕಳಚಿಕೊಳ್ಳುವಿಕೆ ಸ್ವತಃ ರಕ್ತ ಹಂಚಿಕೊಂಡವರಲ್ಲೂ ಸ್ವಭಾವವಾಗುತ್ತಿರುವುದು ಆತಂಕದ ಸಂಗತಿ.
ಮೊನ್ನೆ ದೂರದ ಸಂಬಂಧಿಯೊಬ್ಬರು ಒಂದು ಕತೆ ಹೇಳಿದರು. ಅದು ಕತೆಯಲ್ಲ ಸತ್ಯ ಸಂಗತಿ. ಆದರೆ ಕತೆಯಲ್ಲೂ ನಡೆಯಲಾರದ ಸಂಗತಿ ನನ್ನೊಳಗನ್ನು ಬೆಚ್ಚಿ ಬೀಳಿಸಿದೆ. ಕಾಸರಗೋಡು ಸಮೀಪದ ಹಿರಿಯರು ಸಾತ್ವಿಕರು. ಹೆಂಡತಿ, ಮಗ ಮಗಳು ಹೀಗೆ ನಾಲ್ವರನ್ನೊಳಗೊಂಡ ಚಿಕ್ಕ ಸಂಸಾರ. ಮಗನನ್ನು ಚೆನ್ನಾಗಿ ಓದಿಸಿದರು. ಸಾಫ್ಟ್‌ವೇರ್ ಎಂಜಿನಿಯರ್ ಆದ ಆತ ಅಮೆರಿಕದಲ್ಲಿ ಉದ್ಯೋಗ ಪಡೆದ. ಒಂದು ಬಾರಿ ಊರಿಗೆ ಬಂದು ಮತ್ತೆ ಅಮೆರಿಕಕ್ಕೆ ಹೋದ. ತಿಂಗಳೊಳಗೆ ತಂದೆ ಜೀವನ್ಮರಣ ಹೋರಾಟದಲ್ಲಿ ಒದ್ದಾಡುತ್ತಿದ್ದಾರೆ. ಮನೆಯಲ್ಲಿ ಹೆಂಡತಿ ಮತ್ತು ಮಗಳು ನೋಡಿಕೊಳ್ಳುತ್ತಿದ್ದಾರೆ. ಮಗನಿಗೆ ತಕ್ಷಣ ಬಾ ಎಂದು ಕರೆ ಕಳಿಸಿದರೆ ಅಲ್ಲಿಂದ ಉತ್ತರ 'ಇಲ್ಲಮ್ಮಾ ತಿಂಗಳ ಹಿಂದೆ ಬಂದಿದ್ದೇನೆ. ಈಗ ಮತ್ತೆ ಬರುವುದಕ್ಕಾಗುವುದಿಲ್ಲ'. ಈಗ ಬಾರದಿದ್ದರೆ ತಂದೆಯ ಕೊನೆಯ ದಿನಗಳಲ್ಲಿ ಅವರ ಜತೆಗಿರಲಾರದ ನೋವು ನಿನ್ನನ್ನು ಕಾಡಬಹುದು ಎಂದು ತಂಗಿ ಹೇಳಿದರೆ ಅವ ಕೂಲಾಗಿ ನೋಡು ತಂಗಿ, 'ನಾನು ಬರುವುದರಿಂದ ತಂದೆಯನ್ನು ಬದುಕಿಸಲಾಗದಿದ್ದರೆ ಆ ನೋವು ಯಾಕೆ ಹೇಳು? ನನ್ನ ಅನಿವಾರ್ಯತೆಯನ್ನು ಸ್ವಲ್ಪ ಅರ್ಥ ಮಾಡಿಕೋ. ನಿನ್ನಲ್ಲಿ ನನ್ನದೊಂದು ಕೋರಿಕೆ. ತಂದೆಯ ಕೊನೆಯ ಕ್ಷಣಗಳನ್ನು ರೆಕಾರ್ಡ್ ಮಾಡಿ ಕಳುಹಿಸು. ಅದರ ಖರ್ಚು ಎಷ್ಟಾದರೂ ನಾನು ಭರಿಸುತ್ತೇನೆ..' ಅಲ್ಲಿಗೆ ಫೋನ್ ಕಟ್ಟಾಯಿತು. ರೆಕಾರ್ಡ್ ಮಾಡಿದರೋ, ಕಳುಹಿಸಿದರೋ, ಆ ಮಗ ಅದನ್ನು ಸಿನಿಮಾದ ಭಾಗವೆಂಬಂತೆ ಅದನ್ನು ಅನುಭವಿಸಿದನೋ ಗೊತ್ತಿಲ್ಲ. ಅಂತೂ ತಂದೆ ತೀರಿಕೊಂಡರು. ಕೆಲವು ತಿಂಗಳ ಹಿಂದೆ ಇಲ್ಲಿರುವ ಆಸ್ತಿ ಮಾರಿ ತಾಯಿ, ಮಗಳು ಅಮೆರಿಕದ ಮಗನ ಜತೆ ಸೇರಿಕೊಂಡರು.
ಇದು ಒಂದು ಕತೆಯಾದರೆ ಆರು ತಿಂಗಳಿನಿಂದ ನನ್ನನ್ನು ಕಾಡುತ್ತಿರುವ ಇನ್ನೊಬ್ಬರ ಮಾತು ಮತ್ತೊಂದು ಚಿತ್ರವನ್ನು ಅನಾವರಣಗೊಳಿಸುತ್ತದೆ.
ಬಹಳ ಮೂಡ್ ಆಫ್ ಆದಂತೆ ಕುಳಿತಿದ್ದ ಆತನನ್ನು ಮಾತನಾಡಿಸಿದೆ. ಏನೋ ವಿಶೇಷ ಬಹಳ ತಲೆಬಿಸಿ ಇರುವಂತಿದೆ.. ಆತ ಏನಿಲ್ಲಾ... ಎನ್ನುತ್ತಲೇ ಮಾತಿಗಾರಂಭಿಸಿದ. ನೋಡು ನನಗೆ ಬರುವ ಸಂಬಳ ನಿನಗೆ ಗೊತ್ತಿದೆ. ಹೇಗೋ ಸುಧಾರಿಸಿಕೊಡು ಅಲ್ಲಿಂದಲ್ಲಿಗೆ ಬದುಕುತ್ತಿದೆ. ಕಳೆದ ತಿಂಗಳು ನಿರೀಕ್ಷಿಸದ ಕೆಲವು ಖರ್ಚು ವೆಚ್ಚಗಳು ಬಂದು ಸಮಸ್ಥಿತಿ ತಪ್ಪಿಬಿಟ್ಟಿದೆ ಎನ್ನುತ್ತಾ ತಂದೆಯ ಮರಣದಿಂದ ಆದ ಖರ್ಚು ವೆಚ್ಚವನ್ನು ಮುಂದಿಟ್ಟ. ತಾನು ಖರ್ಚು ಕಡಿಮೆ ಮಾಡುವುದಕ್ಕಾಗಿ ಉಪ್ಪಿನಂಗಡಿಯಲ್ಲೇ ವಿಧಿ ಕ್ರಿಯೆಗಳನ್ನು ನಡೆಸಿದ ಬಗೆಗೆ ಹೇಳಿಕೊಂಡು ತನಗೆ ತಾನೇ ಸಮಾಧಾನ ಹೇಳಿಕೊಂಡ.
 ಇನ್ನೊಬ್ಬಳು ಮಗಳ ಕತೆ ಕೇಳಿ. ಮದುವೆಯಾಗಿ ನಾಲ್ಕು ವರ್ಷ ಕಳೆದಿದೆ. ಒಂದು ಹೆಣ್ಣು ಮಗು ಇದೆ. ಗಂಡನ ಒತ್ತಡವೋ ಏನೋ ಗೊತ್ತಿಲ್ಲ. ಅವಳು ತಂದೆಯಲ್ಲಿ ಬಂದು ನನ್ನ ಪಾಲು ಕೊಡಿ ಎಂದು ಕೇಳುತ್ತಿದ್ದಾಳೆ. ತಂದೆ ನಾನು ಬದುಕಿರುವವರೆಗೆ ಪಾಲು ಮಾಡುವುದಿಲ್ಲ. ಸತ್ತ ಮೇಲೆ ಏನು ಬೇಕಿದ್ದರೂ ಮಾಡಿಕೊಳ್ಳಿ ಎಂದು ಬಿಟ್ಟ. ನೀವು ಸತ್ತ ಮೇಲೆ ನಿಮ್ಮ ಮಗ ಅದನ್ನು ಕೊಡೋದಿಲ್ಲ ಎನ್ನುವುದು ಅವಳ ವಾದ.
 ಇವರೆಲ್ಲ ತಮ್ಮ ಅನಿವಾರ್ಯತೆಗಳನ್ನೇ ಮುಖ್ಯವಾಗಿಸಿಕೊಂಡು ತಮ್ಮ ಅಸ್ತಿತ್ವಕ್ಕೆ ಕಾರಣರಾದವರನ್ನು ಎಂಥ ನೋವಿಗೆ ಈಡು ಮಾಡುತ್ತಿದ್ದಾರೆ, ಸಂಬಂಧಗಳ ತೀವ್ರತೆಯಿಂದ ಕಳಚಿಕೊಳ್ಳುತ್ತಾರೆ ಎನ್ನುವುದು ವೇದನೆಯನ್ನುಂಟುಮಾಡುತ್ತದೆ. ಇವರು ಚಿಕ್ಕಂದಿನಲ್ಲಿ ತಂದೆ ತಾಯಿಯ ಮಡಿಲಲ್ಲಿ ಬೆಳೆದ, ಮಲ ಮೂತ್ರ ಮಾಡಿದ ನೆನಪನ್ನು ಮರೆತಿದ್ದಾರೆ. ಅದೇ ತಂದೆಯ ಬಾಯಿಂದ ಕಲಿತದ್ದನ್ನು, ಅವರ ಕೈಗಳಲ್ಲಿ ಕುಳಿತು ಆಸ್ಪತ್ರೆಗೆ, ಜಾತ್ರೆಗೆ, ಆಟಕ್ಕೆ ಹೋದದ್ದನ್ನು ಎಷ್ಟು ಬೇಗ ಮರೆತುಬಿಡುತ್ತಿದ್ದಾರೆ. ಪರಂಪರೆಯಿಂದ ಪಡೆದು ಮತ್ತೆ ಮರೆತು ಬಿಡುವ ಸ್ವಭಾವ ಬಹುಶಃ ಆಧುನಿಕ ತಲೆಮಾರಿನ ಬದುಕಿನ ಭಾಗವಾಗುತ್ತಿದೆಯೇ..
Listen children
Your father is dead.
From his old coats Ill make you little jackets
Ill make you little trousers
From his old pants
ತನಗೆ ಚಡ್ಡಿ ಅಂಗಿ ಸಿಕ್ಕಿದ ಮೇಲೆ ತಂದೆಯ ಹಂಗೇನು ಎಂದು ಧಿಕ್ಕರಿಸುವ ಯುವಜನತೆ ಎಡ್ಮಂಡ್ ವಿನ್ಸೆಂಟ್ ಮೆಲೆಯ ಈ ಕವಿತೆಯ ಸಾಲುಗಳನ್ನು ಗಮನದಲ್ಲಿಡಬೇಕು. ನಾವು ತಂದೆಯ ಪ್ಯಾಂಟಿನ ಮತ್ತು ಕೋಟಿನ ಋಣವನ್ನು ಹೊಂದಿದ್ದೇವೆ ಎಂಬುದನ್ನು ನೆನಪಿಡಬೇಕು. ಪರಂಪರೆಯಿಂದ ಪಡೆದು ಮರೆತು ಬಿಡುವ ನಿರ್ಭಾವುಕತೆ ಆಧುನಿಕ ಬದುಕಿನ ಭಾಗವಾಗುತ್ತಿರುವುದಕ್ಕೆ ನಾವೆಲ್ಲ ದುಃಖ ಪಡಬೇಕು. ದುಃಖದಿಂದ ಪ್ರಾಯಶ್ಚಿತ್ತಕೆ ಒಂದೇ ಉರುಳು.
ಕೆಲವು ದಿನಗಳ ಹಿಂದೆ ಪುತ್ತೂರಿನ ಸಮೀಪದ ಸೇವಾಶ್ರಮಕ್ಕೆ ಹೋಗುವ ಅವಕಾಶ ದೊರೆಯಿತು. ಅನೇಕ ವೃದ್ಧರನ್ನು ಅಲ್ಲಿ ನೋಡಿದೆ. ಕುಟುಂಬದ ಜನರ ಭಾವನಾಶೂನ್ಯತೆ ಅವರನ್ನು ಅಲ್ಲಿಗೆ ತಲಪಿಸಿದೆ ಎಂಬ ಕಹಿ ಸತ್ಯದ ಅರಿವಿದ್ದರೂ ಅಲ್ಲಿದ್ದವರೆಲ್ಲ ಒಂದು ಕುಟುಂಬವೆಂಬಂತೆ ಪ್ರೀತಿಯಿಂದ ಇರುವುದನ್ನು ನೋಡಿ ಸಂತಸವಾಯಿತು. ಒಬ್ಬರನ್ನು ಕೇಳಿದೆ. ನಿಮ್ಮ ಒಟ್ಟು ಬದುಕಿನ ಬಗೆಗೆ ಏನನ್ನಿಸುತ್ತದೆ. ನಿಮ್ಮ ಈಗಿನ ಬಯಕೆ ಏನು. ಅವರು ದಾರ್ಶನಿಕರಂತೆ ಕಣ್ಣರಳಿಸಿ ಹಸನ್ಮುಖಿಯಾಗಿಯೇ ಉತ್ತರಿಸಿದರು. ಯಾವುದನ್ನೂ ಅಪೇಕ್ಷಿಸದೇ ಬದುಕಬೇಕು ಮತ್ತು ಯಾವ ಆಸೆಯೂ ಈಗ ನನಗಿಲ್ಲ. ಕೇವಲ ಸಾಯಬೇಕು ಇದು ನಿರಾಸೆ ಅಲ್ಲ. ಪಕ್ವತೆ. ಈ ಸ್ಥಿತಿಗೆ ಬಂದರೆ ಮನುಷ್ಯ ಸಾಯುವುದಕ್ಕೆ ಅರ್ಹ. ಬಯಕೆಗಳ ಹಿಂದೆ ಓಡುತ್ತಾ ತಂದೆಯನ್ನು ಆಶ್ರಮ ಸೇರಿಸುವ ಮಗ- ಮಗಳು ಈ ಪಕ್ವತೆಯನ್ನು ಅರ್ಥೈಸಿಕೊಂಡರೆ ಸಾಕು.
ಸು.ರಂ. ಎಕ್ಕುಂಡಿಯವರ ಋಣದ ಹುಂಜ ಕವಿತೆ ಇಲ್ಲಿ ಸಹಜವಾಗಿಯೇ ನೆನಪಾಗುತ್ತಿದೆ. ಸಾವಿನ ಹತ್ತಿರವಿದ್ದರೂ ಚಿತ್ತ ಸ್ವಾಸ್ಥ್ಯವನ್ನು ಕಳೆದುಕೊಳ್ಳದೆ ಸಮಾಜದ ಒಂದು ಸಣ್ಣ ಋಣವನ್ನೂ ಉಳಿಸಿಕೊಳ್ಳದ ಸಾಕ್ರೆಟೀಸ್‌ನ ಕೊನೆಯ ಚಿತ್ರ ಈ ಕವಿತೆಯಲ್ಲಿದೆ.
ಸಾವಿನ ಕೈ ಹಿಡಿದಿರುವ ಸಾಕ್ರೆಟಿಸ್ ಅಳುತ್ತಿರುವ ಪ್ಲೇಟೋನನ್ನು ಸಮಾಧಾನಪಡಿಸಿ, ಇನ್ನೊಬ್ಬ ಶಿಷ್ಯನಾದ ಕ್ರೀಟೋನನ್ನು ಕರೆದು ನೆರೆಮನೆ ಅಸ್ಕೀ ಲಿಪಿಯಸ್ ನಿನಗೆ ಗೊತ್ತಲ್ಲ. ನಾನವಗೆ ಕೊಡಬೇಕು ಒಂದು ಹುಂಜ ಕೊಟ್ಟುಬಿಡು ಎನ್ನುತ್ತಾನೆ. ಕ್ರೀಟೋ ತಕ್ಷಣ ಈ ಸಾಲವನ್ನು ನಾನು ತೀರಿಸುತ್ತೇನೆ. ಬೇರೇನಾದರೂ ಇದೆಯೇ ಎಂದು ಪ್ರಶ್ನಿಸುತ್ತಾನೆ. ಆದರೆ ಆ ಪ್ರಶ್ನೆಗೆ ಉತ್ತರವಿರಲಿಲ್ಲ. ಸಮಾಜದ ಒಂದು ಋಣವನ್ನೂ ಉಳಿಸಿಕೊಳ್ಳದ ಸಾಕ್ರೆಟಿಸ್‌ನ ಋಣದ ಪ್ರಜ್ಞೆ ಎಲ್ಲಿ? ತನ್ನ ದೇಹದ ಇಂಚಿಂಚನ್ನೂ ಆವರಿಸಿಕೊಂಡಿರುವ ರಕ್ತವನ್ನು ಹಂಚಿದ ಅಪ್ಪ ಅಮ್ಮರನ್ನೇ ಆಶ್ರಮಕ್ಕೆ ಸ್ಥಳಾಂತರಿಸುವ ನಾವೆಲ್ಲಿ? ನಾವು ನಮ್ಮ ಹಿರಿಯರಿಂದ, ಸಮಾಜದಿಂದ, ಗೆಳೆಯರಿಂದ ಪಡೆದುಕೊಂಡದ್ದು ಎಷ್ಟು ಅದನ್ನು ಕೊನೆ ಪಕ್ಷ ಸ್ವಲ್ಪವಾದರೂ ಇನ್ನೊಬ್ಬರಿಗೆ ಹಂಚುವ ಉದಾರತೆ ನಮ್ಮದಾಗಬೇಡವೇ ಇಲ್ಲದಿದ್ದರೆ ಸಾವಿಗೂ ಬದುಕಿಗೂ ಏನು ವ್ಯತ್ಯಾಸ.
ಬದುಕು ಸಾವಿನಲ್ಲಿ ಕೊನೆಯಾಗುವುದಿಲ್ಲ. ಸಾವಿನಾಚೆಗೆ ತೆರೆದುಕೊಳ್ಳುತ್ತದೆ ಎಂಬ ರಮಣ ಮಹರ್ಷಿಯ ದರ್ಶನ, ಬಯಕೆ ಇಲ್ಲದೇ ಸಾವಿನತ್ತ ಹೋಗಬೇಕು ಎಂಬ ಆಶ್ರಮವಾಸಿಯ ಮಾತು ನಮ್ಮ ಮನಸ್ಸಿಗೆ ನಾಟ ಬೇಡವೇ? ನಾಟಿದರೆ ಅದುವೇ ಮದ್ದು. ಮದ್ದು ಆರೋಗ್ಯವನ್ನು ಮತ್ತೆ ಒದಗಿಸುತ್ತದೆ. ಆರೋಗ್ಯ ಭಾವಕ್ಕೆ ಬಾಗಿಲು, ಭಾವ ಪ್ರೀತಿ ಸಂಬಂಧಗಳಿಗೆ ಸೇತುವೆ. ಈ ಸೇತುವೆ ಎರಡೂ ದಡವನ್ನೂ ಜೋಡಿಸುತ್ತದೆ. ನಮ್ಮೆಲ್ಲರ ಜೀವನ ಈ ಸೇತುವೆಯ ನಡುವೆ ಹರಿಯುತಿರಲಿ.

  ಡಾ. ಧನಂಜಯ ಕುಂಬ್ಳೆ
ಸಹಾಯಕ ಪ್ರಾಧ್ಯಾಪಕರು ಕನ್ನಡ ವಿಭಾಗ, ಮಂಗಳೂರು ವಿಶ್ವವಿದ್ಯಾಲಯ, ಮಂಗಳಗಂಗೋತ್ರಿ.
dkumble1975@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement