ಅಕಾಡೆಮಿಗಳಿಗೆ ಹೈ-ಕದ ಸಾಧಕರು ಅಸ್ಪೃಶ್ಯರೆ?
ಶಕ್ತಿಕೇಂದ್ರ ಬೆಂಗಳೂರಲ್ಲಿದ್ದುಕೊಂಡು ಯಾರು ಹೆಚ್ಚು ಲಾಬಿ ಮಾಡುವರೋ, ವಿಧಾನಸೌಧದ ಮೆಟ್ಟಿಲು ಹತ್ತಿ ಇಳಿದು ಕಸರತ್ತು ನಡೆಸುವರೋ ಅಂತಹವರಿಗೇ ಅಧ್ಯಕ್ಷ- ಸದಸ್ಯತ್ವ ಪಟ್ಟ, ಉಳಿದವರಿಗೆ ಇದು ಕನಸಲ್ಲೂ ಕಬ್ಬಿಣದ ಕಡಲೆ!
ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷ ಹಾಗೂ ಸದಸ್ಯರಾಗುವ ಅರ್ಹತೆ ಹೈದ್ರಾಬಾದ್ ಕರ್ನಾಟಕ ಸೀಮೆಯ ಜನತೆಗೆ ಇಲ್ಲವೆ?
ರಾಜ್ಯ ಸರ್ಕಾರ ನಾಲ್ಕು ದಿನಗಳ ಹಿಂದಷ್ಟೆ ವಿವಿಧ 13 ಅಕಾಡೆಮಿ- ಪ್ರಾಧಿಕಾರಗಳಿಗೆ ಅಧ್ಯಕ್ಷ ಹಾಗೂ ಸದಸ್ಯರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ನೇಮಿಸಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಹೈ- ಕ ಸಾಂಸ್ಕೃತಿಕ ಹಾಗೂ ಸಾರಸ್ವತ ಲೋಕದಲ್ಲಿ ಮೇಲಿನ ಪ್ರಶ್ನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪ್ರಗತಿಯಲ್ಲಿ ಪ್ರಾದೇಶಿಕ ಅಸಮಾನತೆ ಅಟಕಾಯಿಸಿಕೊಂಡಿದೆ ಎಂದು ಅದರ ಪರಿಹಾರಕ್ಕೆ ಕಲಂ 371 (ಜೆ) ಇಲ್ಲಿಗೆ ಬಂತಾದರೂ ಸಾಂಸ್ಕೃತಿಕ- ಸಾರಸ್ವತ ಲೋಕಕ್ಕೆ ಅಮರಿಕೊಂಡಿರುವ ಇಂತಹ ಅಸಮಾನತೆಯ ಬೇಗುದಿಗೆ ಎಲ್ಲಿದೆ ಮದ್ದು? ಅಕಾಡೆಮಿ ಅಧ್ಯಕ್ಷರು- ಸದಸ್ಯರ ನೇಮಕಾತಿಯಲ್ಲಿ ಕಾಲಾಂತರದಿಂದ ಹೈ- ಕ ಮಂದಿ ನಿರ್ಲಕ್ಷ್ಯಕ್ಕೊಳಗಾಗುತ್ತಲೇ ಇದ್ದರೂ ಆಯಾ ಕಾಲಘಟ್ಟದಲ್ಲಿ ನಮ್ಮನ್ನಾಳುವವರೇ ಸಾಂಸ್ಕೃತಿಕ ಲೋಕದಲ್ಲಿನ ಈ ಅವಗಣನೆಗೆ ಹೊಣೆಗಾರರಾಗುತ್ತಿರುವುದು ದುರಂತವಲ್ಲದೆ ಮತ್ತೇನು?
ಗುಲ್ಬರ್ಗ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ ಹಾಗೂ ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯ ಹೈ- ಕ ನೆಲದಲ್ಲಿ 1 ಕೋಟಿಗೂ ಅಧಿಕ ಜನ ವಾಸವಾಗಿದ್ದಾರೆ. ಇಡೀ ರಾಜ್ಯದ ಜನಸಂಖ್ಯೆ 5 ಕೋಟಿ ಚಿಲ್ಲರೆಯಾದರೆ, ಈ ಪೈಕಿ ಶೇ. 30 ರಷ್ಟು ಜನ ವಾಸವಾಗಿರೋದು 6 ಜಿಲ್ಲೆಗಳ ವ್ಯಾಪ್ತಿಯ ಹೈ- ಕ ನೆಲದಲ್ಲಿ.
ವಿವಿಧ ಕ್ಷೇತ್ರಗಳಲ್ಲಿ ಇಡೀ ರಾಜ್ಯವನ್ನು ಪ್ರತಿನಿಧಿಸುವಂತಹ ಅಕಾಡೆಮಿ- ಪ್ರಾಧಿಕಾರಗಳ ಸಾರಥಿ- ಸದಸ್ಯರ ನೇಮಕದಲ್ಲಿ ಭೌಗೋಳಿಕವಾಗಿ, ಜನಸಂಖ್ಯಾ ದೃಷ್ಟಿಯಿಂದ ಈ ಪರಿಯಾಗಿ ಗಮನ ಸೆಳೆಯುವಂತಹ ಹೈ- ಕ ಪ್ರಾಂತದವರನ್ನು ಪರಿಗಣಿಸಬೇಕಾದ್ದು ನಿಸರ್ಗ ಸಹಜ ನ್ಯಾಯ. ಆದರೆ ಈಚೆಗಿನ ನೇಮಕಾತಿಗಳಲ್ಲಿ ಈ ಸಹಜ ನ್ಯಾಯ ಗಾಳಿಗೆ ತೂರಲ್ಪಟ್ಟು ಕುಳ್ಳುಬಾನದ ಸುತ್ತಲೇ ಕುಳ್ಳು ಆಯುವ ಕೆಲಸ ಸಾಗುತ್ತಿದೆ!
ಸಾಧಕರ ಬೇಟೆಯಲ್ಲಿ ಯಾಕೆ ಹೈದ್ರಾಬಾದ್ ಕರ್ನಾಟಕದತ್ತ ಸರ್ಕಾರ ನೋಡುತ್ತಿಲ್ಲ?
ನಾಲ್ಕು ದಿನಗಳ ಹಿಂದೆಯೇ ಹೊರಬಿದ್ದಿರುವ ಅಕಾಡೆಮಿ ಅಧ್ಯಕ್ಷರು, ಸದಸ್ಯರ ನೇಮಕಾತಿಯನ್ನೇ ನೋಡಿ, ಬಳ್ಳಾರಿ ಜಿಲ್ಲೆಯ ಬೆಳಗಲ್ ವೀರಣ್ಣನವರನ್ನು ಯಕ್ಷಗಾನ- ಬಯಲಾಟ ಅಕಾಡೆಮಿಗೆ ಹಾಗೂ ಗುಲ್ಬರ್ಗ ಜಿಲ್ಲೆ ಚಿತ್ತಾಪುರದ ಮಹಾದೇವಪ್ಪ ಸಿಂಪಿ ಅವರನ್ನು ಶಿಲ್ಪಕಲಾ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಹೊರತುಪಡಿಸಿದರೆ ಉಳಿದ್ಯಾವ ಅಕಾಡೆಮಿಗಳಿಗೂ ಹೈ- ಕ ಮಂದಿಗೆ ಸಾರಥ್ಯ ದಕ್ಕಿಲ್ಲ.
ಇನ್ನು 13 ಅಕಾಡೆಮಿಗಳಿಗೆ ನಡೆದಿರುವ 200 ಕ್ಕೂ ಹೆಚ್ಚು ಸದಸ್ಯರ ನೇಮಕದಲ್ಲಿಯೂ ಭಾರಿ ತಾರತಮ್ಯವಾಗಿರುವುದು ಮೇಲ್ನೋಟಕ್ಕೇ ಗಮನ ಸೆಳೆಯುತ್ತದೆ. ತಲಾ 15 ರಿಂದ 16 ಸದಸ್ಯರಿರುವ ಅಕಾಡೆಮಿಗಳಲ್ಲಿ ನೇಮಕಗೊಂಡ ಹೈ- ಕ ಸೀಮೆಯ ಸದಸ್ಯರು ಕೇವಲ 10 ಮಂದಿ! ತಾರತಮ್ಯವಾಗಿದೆ ಎನ್ನಲು ಇದಕ್ಕಿಂತ ಅನ್ಯ ನಿದರ್ಶನ ಬೇಕೆ?
ಇದೇ ಯಾದಿಯಲ್ಲಿರುವ ನಾಟಕ ಅಕಾಡೆಮಿ ಅಧ್ಯಕ್ಷರಾಗಿರುವ ಎಲ್ಬಿ ಶೇಖ್ ಮಾಸ್ತರ್ ಗುಲ್ಬರ್ಗದವರು ಎಂದು ಹೇಳಲಾಗುತ್ತಿದೆಯಾದರೂ ಇವರು ಮೂಲತಃ ವಿಜಾಪುರದವರು. ಕಳೆದೊಂದು ದಶಕದಿಂದ ಗುಲ್ಬರ್ಗದಲ್ಲೇ ನಾಟಕ ಕಂಪನಿಯೊಂದಿಗೆ ಇದ್ದಾರಷ್ಟೆ. ಇವರೂ ಹೈ- ಕ ದವರೇ ಅಲ್ಲವೆ ಎಂದು ಅಕಾಡೆಮಿ ಅಧ್ಯಕ್ಷಗಿರಿ, ಭೌಗೋಳಿಕ ಹಿನ್ನೆಲೆಯ ಚರ್ಚೆಗಳು ನಡೆದಾಗ ವಾದ ಹಾಕುವವರಿಗೇನು ಕಮ್ಮಿ ಇಲ್ಲ.
ಜಾನಪದ, ಸಾಹಿತ್ಯ, ಕಲೆ, ಬಯಲಾಟ, ಲಲಿತಕಲೆಗಳ ರಂಗದಲ್ಲಿ ಹೈ- ಕ ಜಿಲ್ಲೆಗಳು ಬಲು ಸಿರಿವಂತ ಎಂಬುದರಲ್ಲಿ ಎರಡು ಮಾತಿಲ್ಲ. ಅದಕ್ಕೇ ಇರಬೇಕು, ಶಾಂತರಸ, ಡಾ. ಗೀತಾ ನಾಗಭೂಷಣ, ಡಾ. ವಿಜಿ ಅಂದಾನಿ, ಜೆಎಸ್ ಖಂಡೇರಾವ್ರಂತಹ ಸಾಧಕರು ಸಾಹಿತ್ಯ, ಲಲಿತಾಕಲಾ ಅಕಾಡೆಮಿಗಳ ಅಧ್ಯಕ್ಷರಾಗಿ ಈ ನೆಲದ ಕೀರ್ತಿ ಪತಾಕೆ ಹಾರಿಸಿದ್ದು.
ಈ ಹಿರಿಯರ ತಲೆಮಾರಿನ ನಂತರ ಇಲ್ಲಿನ ಸಾಧಕರ ಪಟ್ಟಿಯೇ ತೀರಿತು ಎಂದುಕೊಂಡಂತಿದೆ ಸರ್ಕಾರ. ಸಾಹಿತ್ಯ, ಜಾನಪದ, ಅನುವಾದ, ಲಲಿತಕಲೆ ಅಕಾಡೆಮಿಗಳಿಗೆ ಸಮರ್ಥ ನಾಯಕತ್ವ ನೀಡುವಂತಹ ತಾಕತ್ತಿರುವ, ಪ್ರತಿಭೆ- ಶ್ರದ್ಧೆ, ಕಸವು ತಮ್ಮೊಳಗೆ ತುಂಬಿಕೊಂಡಿರುವ ಡಾ. ವಸಂತ ಕುಷ್ಟಗಿ, ಡಾ. ಕಾಶೀನಾಥ ಅಂಬಲಗೆ, ಡಾ. ವೀರಣ್ಣ ದಂಡೆ, ವಿಜಯ ಹಾಗರಗುಂಡಗಿ, ಎ.ಎಸ್. ಪಾಟೀಲ್, ಎಸ್. ಎಂ. ನೀಲಾ, ಬಸವರಾಜ ಜಾನೆಯಂತಹ ಹಲವು ಗಟ್ಟಿ ಪ್ರತಿಭೆಗಳು, ಸಾಧಕರು ಸರ್ಕಾರದ ಕಣ್ಣಿಗೆ ಬೀಳಲೇ ಇಲ್ಲ!
ಉರ್ದು, ಮರಾಠಿ, ಹಿಂದಿಯ ಸಿರಿವಂತ ನೆಲ ಗುಲ್ಬರ್ಗ. ಈ ಭಾಷೆಗಳನ್ನೆಲ್ಲ ಅರಗಿಸಿಕೊಂಡು ಕನ್ನಡದಷ್ಟೇ ಎಲ್ಲಾ ಭಾಷೆಗಳಲ್ಲಿ ಪ್ರಾವೀಣ್ಯತೆ ಮೆರೆದ ಹಿರಿಯರಿದ್ದರೂ ಅವರಿಗೆ ಕುವೆಂಪು ಭಾಷಾ ಭಾರತಿಯಲ್ಲೇಕೆ ಅನುವಾದ ಕೆಲಸದ ಜವಾಬ್ದಾರಿ ನೀಡಲಾಗಲಿಲ್ಲ? ಸಾಹಿತ್ಯ- ಲಲಿತಕಲೆ ಪ್ರವರ್ಧಮಾನಕ್ಕೆ ಬರುತ್ತಿರುವ ಹೈ- ಕ ನೆಲದವರಿಗೇ ಈ ಅಕಾಡೆಮಿಗಳಿಗೆ ಸಾರಥಿಯಾಗಿ ನೇಮಕಮಾಡಿದ್ದರೆ ಈ ನೆಲದಲ್ಲಿ ಇನ್ನೂ ಸಾಧನೆ ಪ್ರವರ್ಧಮಾನಕ್ಕೆ ಬರುವ ಅವಕಾಶಗಳಿದ್ದವು.
ಪ್ರಾದೇಶಿಕ ಅಸಮಾನತೆ ನೋವಿನಲ್ಲಿ ನರಳುತ್ತ ಹಿಂದುಳಿದವರು ಎಂದು ಹಣೆಪಟ್ಟಿ ಕಟ್ಟಿಸಿಕೊಂಡೇ ಇರುವ ಈ ಹೈ- ಕ ನೆಲದಿಂದಲೇ ಸಾಧಕ ಮುತ್ತು- ರತ್ನಗಳನ್ನು ಹೆಕ್ಕಿ ತೆಗೆದು ಕೊನೆಪಕ್ಷ 13 ರಲ್ಲಿ 5 ಅಕಾಡೆಮಿಗಳಿಗಾದರೂ ಸಾರಥಿಯಾಗುವ ಯೋಗ ಇಲ್ಲಿನವರಿಗೆ ಕೂಡಿಬಂದಿದ್ದರೆ ಇಲ್ಲಿನ ಸಾರಸ್ವತ ಲೋಕದಲ್ಲಿ ಹೊಸಮಿಂಚು- ಸಂಚಲನ ಕಾಣಬಹುದಿತ್ತೇನೋ..
ಅಭಿವೃದ್ಧಿಯಲ್ಲಿನ ಅಸಮಾನತೆ ರೋಗ ಹೈ- ಕ ದಲ್ಲಿ ಅದೆಷ್ಟು ಮಾರಕವಾಗಿದೆ ಎಂಬುದನ್ನು ಪತ್ತೆ ಹಚ್ಚಲು ಅಧ್ಯಯನ ನಡೆಸಿದ್ದ ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಡಿ.ಎಂ ನಂಜುಂಡಪ್ಪ ತಮ್ಮ ಅಧ್ಯಯನದಲ್ಲಿ ಸಾಂಸ್ಕೃತಿಕ ಲೋಕವನ್ನು ಕಾಡುತ್ತಿರುವ ಅಸಮಾನತೆಯ ರೋಗವನ್ನೂ ಪತ್ತೆ ಮಾಡಿ ಕಳವಳಪಟ್ಟಿದ್ದರು.
ರಾಜ್ಯ ಸರ್ಕಾರ ತಾನು ಅಕಾಡೆಮಿಗಳಿಗೆ ಮಾಡುವ ನೇಮಕದ ಸಂದರ್ಭದಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗವನ್ನೂ ಗುರುತಿಸಬೇಕು. ಅಸ್ತಿತ್ವದಲ್ಲಿರುವ 18 ಅಕಾಡೆಮಿಗಳ ಪೈಕಿ ಕನಿಷ್ಠ 4 ರಿಂದ 6 ಅಕಾಡೆಮಿಗಳಿಗಾದರೂ ಹೈ- ಕ ದವರಿಗೆ ಅಧ್ಯಕ್ಷರಾಗಿರುವಂತೆ ನೋಡಿಕೊಂಡು ಅಸಮಾನತೆಗೆ ಮದ್ದರೆಯಬೇಕು, ಜೊತೆಗೇ ಅಲ್ಲಿನ ಸಂಸ್ಕೃತಿ ಜೀವಂತವಾಗಿರುವಂತೆ ಕಾಳಜಿ ವಹಿಸಬೇಕು ಎಂದು ತಮ್ಮ ವರದಿಯಲ್ಲಿಯೂ ನಮೂದಿಸಿದ್ದರು.
ಆದರೇನು ಮಾಡುವುದು, ಶಕ್ತಿಕೇಂದ್ರ ಬೆಂಗಳೂರಲ್ಲಿದ್ದುಕೊಂಡು ಯಾರು ಹೆಚ್ಚು ಲಾಬಿ ಮಾಡುವರೋ, ವಿಧಾನಸೌಧದ ಮೆಟ್ಟಿಲು ಹತ್ತಿ ಇಳಿದು ಕಸರತ್ತು ನಡೆಸುವರೋ ಅಂತಹವರಿಗೇ ಅಧ್ಯಕ್ಷ- ಸದಸ್ಯತ್ವ ಪಟ್ಟ, ಉಳಿದವರಿಗೆ ಇದು ಕನಸಲ್ಲೂ ಕಬ್ಬಿಣದ ಕಡಲೆ!
ಮೊದಲೇ ಬೆಂಗಳೂರಿನಿಂದ 700 ಕಿಮೀ ದೂರದಲ್ಲಿರುವ ಹೈ- ಕ ಮಂದಿಗಂತೂ ಶಕ್ತಿಕೇಂದ್ರದ ಪ್ರದಕ್ಷಿಣೆ ಆಗದ ಮಾತು. ಅದಕ್ಕೇ ಅಕಾಡೆಮಿಗಳ ಅಧ್ಯಕ್ಷಗಿರಿಯಲ್ಲಿ ಹೆಚ್ಚಿನ ಪ್ರಾಶಸ್ತ್ಯ ಈ ಭಾಗದವರಿಗೆ "ಮನದಲ್ಲಿ ಮಂಡಿಗೆ ಮೆದ್ದರೆ ಗೋದಿ ಖರ್ಚು ಕೊಡುವವರಾರು?" ಎಂಬಂತಾಗಿದೆ.
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ