ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಹಿರಿಯ ನಾಗರಿಕರನ್ನು ಕೇಳುವರ್ಯಾರು?

Vishwanath S
Updated On : 5 Mar 2014, 12:37 pm

ನಾನು ಬೆಂಗಳೂರಿನಲ್ಲಿ ವಾಸಿಸುವ ಒಬ್ಬ ಹಿರಿಯ ನಾಗರಿಕ. ವಯಸ್ಸು 63. ನಮ್ಮ ಅಂದರೆ, ಕರ್ನಾಟಕದ ಹಿರಿಯ ನಾಗರಿಕರ ಪಾಡು ಯಾರಿಗೆ ಹೇಳಬೇಕೋ ತಿಳಿಯದು. ಅದಕ್ಕೋಸ್ಕರವೇನೋ ಬಹಳಷ್ಟು ಮಂದಿ ಹಿರಿಯ ನಾಗರಿಕರು 'ನಮ್ಮ ಕಥೆ ಇಷ್ಟೇ' ಎಂಬಂತೆ ಏನೂ ಮಾಡಲಾಗದೆ, ಸುಮ್ಮನೆ ಕಾಲ ಕಳೆಯುತ್ತಿದ್ದಾರೆ. ಆದರೆ, ನನಗೆ ಇಂತಹ ಅಸಹಾಯಕತೆ ಅಂದರೆ ಆಗುವುದಿಲ್ಲ. ನಮ್ಮ ಹಕ್ಕುಗಳನ್ನು ಸಾಧಿಸಿಕೊಳ್ಳಲು ತಪ್ಪೇನೂ ಇಲ್ಲಾ ಅನಿಸುತ್ತದೆ.
ಮೊದಲನೆಯದಾಗಿ, ಬೆಂಗಳೂರಿನಲ್ಲಿ ಅಥವಾ ಬೇರೆ ಕಡೆಗಳಲ್ಲಿ ಸಂಚರಿಸುವ ನಗರ ಸಾರಿಗೆ ಬಸ್‌ಗಳಲ್ಲಿ 'ಹಿರಿಯ ನಾಗರಿಕರಿಗೆ' ಎಂದು ಒಂದು ಚೀಟಿಯನ್ನು (ಸ್ಟಿಕ್ಕರ್) ಹಚ್ಚಿರುತ್ತಾರೆ. ಬಹಳಷ್ಟು ಬಸ್‌ಗಳಲ್ಲಿ ಒಂದು ಆಸನಕ್ಕೆ ಮಾತ್ರ ಇದು ಸೀಮಿತವಾಗಿರುತ್ತದೆ. ಅಂದರೆ ಇದರಲ್ಲಿ ಇಬ್ಬರು ಮಾತ್ರ ಆಸೀನರಾಗಬಹುದು. ಇಡೀ ಒಂದು ಬಸ್ಸಿನಲ್ಲಿ ಅರ್ಧದಷ್ಟು ಮಹಿಳೆಯರಿಗೆ ಮತ್ತು ಉಳಿದರ್ಧದಷ್ಟು ಆಸನಗಳನ್ನು ಪುರುಷರಿಗೆ ಮೀಸಲಿರುತ್ತವೆ. ಅಂದರೆ ಹೆಚ್ಚು ಕಡಿಮೆ 20: 25ರಂತೆ. ಆದರೆ ಕೈ-ಕಾಲುಗಳಲ್ಲಿ ಶಕ್ತಿ ಕುಂದಿರುವ ನಮ್ಮಂಥವರಿಗೇ ಬರೀ ಒಂದು ಆಸನ ಮೀಸಲಿರುತ್ತದೆ (ಇದರಲ್ಲಿ ಇಬ್ಬರಿಗೆ ಮಾತ್ರ ಕೂರುವ ಅವಕಾಶವಿರುತ್ತದೆ). ಪರಿಸ್ಥಿತಿ ಹೀಗಿದ್ದರೂ, ಕೆಲವರು ನಮಗಾಗಿ  ಮೀಸಲಿಟ್ಟ ಆ ಆಸನಗಳಲ್ಲಿ ಕುಳಿತಿರುತ್ತಾರೆ. ಅವರನ್ನು ನಮ್ಮ ಆಸನಗಳನ್ನು ಬಿಟ್ಟುಕೊಡಲು ಕೇಳಿದರೆ, ಅವರು ಸರಿಯಾಗಿ ಸ್ಪಂದಿಸುವುದಿಲ್ಲ, ಮೇಲಾಗಿ ಏನೋ ಒಂದು ನೆಪ ಹೇಳುತ್ತಾರೆ. 'ನಾವು ಕೂಡ ಸೀನಿಯರ್ ಸಿಟಿಜನ್ಸ್ ಹೌದು' ಎಂದು ಹಾರಿಕೆ ಉತ್ತರ ಕೊಡುತ್ತಾರೆ. ಇದೇ ರೀತಿ ಬಹಳ ಸಲ ಮಹಿಳೆಯರೂ ಕೂತಿರುತ್ತಾರೆ. ಅಂತಹವರು ಏನು ಹೇಳಿದರೂ ನಮಗೆ ಸೀಟು ಬಿಟ್ಟುಕೊಡುವುದಿಲ್ಲ. ನಿರ್ವಾಹಕನಿಗೆ ಹೇಳಿದರೆ, ಸುಮ್ಮನೆ ನೋಡಿ ಕೇಳಿಯೂ-ಕೇಳದಂತೆ, ಇರುತ್ತಾರೆ. ನಾವು ಇನ್ನೊಂದು ಸಲ ಅವರನ್ನು ಕೇಳಿದರೆ, 'ಅವರು ಸೀನಿಯರ್ ಸಿಟಿಜನ್ಸ್ ಅವರಿಗೆ ಸೀಟು ಬಿಟ್ಟು ಕೊಡಿ' ಎಂದು ಕ್ಲುಪ್ತವಾಗಿ ಹೇಳಿ, ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಅಲ್ಲಿಯೇ ಇದ್ದರೆ ಮತ್ತೆ ನಾವು ಎಲ್ಲಿ ಕೇಳುತ್ತೀವೋ ಎಂದು. ಈ ಬಿಎಂಟಿಸಿನವರು ಮಹಿಳೆಯರ ಆಸನಗಳಲ್ಲಿ ಪುರುಷರು ಕುಳಿತರೆ ರು. 100 ದಂಡ ವಿಧಿಸುತ್ತಾರೆ. ಆದರೆ ನಮಗಾಗಿ ಇರೋ ಆಸನದಲ್ಲಿ ಬೇರೆಯವರು ಕುಳಿತರೆ ತೆಪ್ಪಗಿರುತ್ತಾರೆ. ಇದ್ಯಾವ ನ್ಯಾಯ? ಇದರ ಬಗ್ಗೆ ಬಿಎಂಟಿಸಿ ಮೇಲಾಧಿಕಾರಿಗಳಿಗೆ ಎಷ್ಟೇ ಪತ್ರಗಳನ್ನು ಬರೆದರೂ ಪ್ರಯೋಜನವಾಗಿರುವುದಿಲ್ಲ. ಆದರೆ ಕೊನೆಗೆ ಅವರುಗಳು ಒಂದು ಉತ್ತರವನ್ನು ದಯಪಾಲಿಸಿದರು. ಅದರ ಸಾರಾಂಶವಿಷ್ಟೇ, 'ನಾವು ಎಲ್ಲಾ ನಿರ್ವಾಹಕರುಗಳಿಗೆ, ನಿಮಗೆ ಬಸ್ಸಿನಲ್ಲಿ ಕಾದಿರಿಸಿರುವ ಆಸನಗಳನ್ನು ಬಿಟ್ಟುಕೊಡಲು ಹೇಳಿದ್ದೇವೆ ಹಾಗೂ ಆ ಆಸನಗಳಿಗೆ ಸಂಬಂಧಪಟ್ಟು ಸ್ಟಿಕ್ಕರ್‌ಗಳನ್ನು ಹಚ್ಚಲು ಹೇಳಿದ್ದೇವೆ' ಎಂದು. ಆಗ ಕೆಲವೊಂದು ಬಸ್ಸುಗಳಲ್ಲಿ ಅವರು ಹೇಳಿದಂತೆ-ವಯಸ್ಕರಿಗಾಗಿ -ಸೀನಿಯರ್ ಸಿಟಿಜನ್ ಎಂದು ಕಾಣತೊಡಗಿದೆವು. ಆದರೆ ಹಳೆಯ ಅನುಭವ ಸಾಕಷ್ಟು ಸಲ ಪುನರಾವರ್ತನೆಗೊಳ್ಳುತ್ತಿದೆ. ಹಿರಿಯ ನಾಗರಿಕರಿಗಾಗಿ ಮೀಸಲಿಟ್ಟ ಜಾಗದಲ್ಲಿ ಕುಳಿತವರಿಗೆ ಮತ್ತೆ, ಮತ್ತೆ ಹೇಳಲೂ ಅಸಹ್ಯವಾಗುತ್ತದೆ. ಏಕೆಂದರೆ, ನಮಗೆ ಅವರೇನೂ ಭಿಕ್ಷೆಯಾಗಿ ಕೊಡುತ್ತಿಲ್ಲವಲ್ಲಾ? ಆದ ಕಾರಣ ಹಿರಿಯ ನಾಗರಿಕರಿಗೆ ಕನಿಷ್ಟ ಮೂರು ಆಸನಗಳನ್ನು ಮೀಸಲಿಟ್ಟರೆ 6 ಮಂದಿಗಾದರೂ ಅನುಕೂಲವಾಗುತ್ತದೆ. ಇದೇ ರೀತಿ ಹಿರಿಯ ನಾಗರಿಕರಿಗೆ ಮಾಸಿಕ ಪಾಸುಗಳಲ್ಲಿ ಶೇ. 25 ರಿಯಾಯ್ತಿ ಕೊಡುತ್ತಿದ್ದೇವೆ ಎಂದು ಹೇಳುತ್ತಾರೆ. ಆದರೆ, ಇವರು 925 ರುಪಾಯಿಗಳು ಇರುವ ರೆಡ್ ಬೋರ್ಡ್ ಬಸ್ಸುಗಳಿಗೆ ರು. 830 ವಸೂಲು ಮಾಡುತ್ತಾರೆ. ಅಂದರೆ ರು. 225 ರಿಯಾಯಿತಿಯಲ್ಲಿ ಬರೀ 100 ರುಪಾಯಿಯನ್ನು ಮಾತ್ರ ಕಡಿಮೆ ಮಾಡಿರುತ್ತಾರೆ. ಇದು ಯಾವ ರಿಯಾಯಿತಿ ಅವರಿಗೇ ಗೊತ್ತು!
ಇದೇ ರೀತಿ ರೈಲ್ವೆ ನಿಲ್ದಾಣಗಳಲ್ಲಿ ಬೆಂಗಳೂರು ಬಿಟ್ಟು ಬೇರೆ ಕಡೆ ಎಲ್ಲೂ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಸ್ಥಳವಿಲ್ಲದ್ದು. ಉದಾಹರಣೆಗೆ: ಹುಬ್ಬಳ್ಳಿ, ಗುಲಬರ್ಗಾ, ಮೈಸೂರು ಹಾಗೂ ಮಂಗಳೂರು ಮುಂತಾದ ದೊಡ್ಡ ನಗರಗಳಲ್ಲಿ ಜನಗಳ ಸಾಲು ದೊಡ್ಡದಿರುತ್ತದೆ. ಇಂತಹದರಲ್ಲಿ ನಮ್ಮವರು ಸಾಲಾಗಿ ನಿಲ್ಲಬೇಕು. ಮೊದಲೇ ನಮಗೆ ರೈಲಿನಲ್ಲಿ ಸೀಟು ಸಿಗುವ ಖಾತರಿ ಇರುವುದಿಲ್ಲ. ಅಂದ ಮೇಲೆ ಇನ್ನು ಟಿಕೆಟ್ ಸಿಗುವುದಾದರೂ ಯಾವಾಗ? ರಿಸರ್ವೇಷನ್ ಮಾಡಿಸಲು ನಮ್ಮಂಥವರು ಯಾವ ಊರಿಗೆ, ಎಂದು ಹೋಗುತ್ತೇವೋ ಎಂಬುವುದು ಗೊತ್ತಿರುವುದಿಲ್ಲ. ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಸಹ ನಮ್ಮ ಸ್ಥಿತಿ ಭಿನ್ನವಾಗಿಲ್ಲ.
ಯಾವುದಾದರೂ ಕೆಲಸದ ಮೇಲೆ ಬೇರೆ ಊರುಗಳಿಗೆ ಹೋಗಬೇಕಾಗುತ್ತದೆ. ಅಂತಹ ಸಮಯದಲ್ಲಿ ಲಾಡ್ಜ್‌ಗಳಲ್ಲಿ ರೂಮು ಪಡೆಯಬೇಕೆಂದರೆ ಕನಿಷ್ಠ ದಿನವೊಂದಕ್ಕೆ ರುಪಾಯಿ 500ರಾದರೂ ಕೊಡಬೇಕಾಗಿರುತ್ತದೆ. ಇನ್ನು ಅದಕ್ಕಿಂತ ಕಡಿಮೆ ಬೆಲೆಯಿರುವ ಹೋಟೆಲ್‌ನ ಕೊಠಡಿಗಳಲ್ಲಿ 5-10 ನಿಮಿಷವಿರಲೂ ಅಸಾಧ್ಯವೆನಿಸುತ್ತದೆ. ಅದಕ್ಕೆ ಕಾರಣಗಳು ಸಾಕಷ್ಟು. ಆದರೆ ಮುಖ್ಯವಾಗಿ, ಅಲ್ಲಿ ಸ್ವಚ್ಛತೆಗೆ ಆದ್ಯತೆಯೇ ಇರುವುದಿಲ್ಲ. ಇಂತಹ ಸಮಯದಲ್ಲಿ ನಮ್ಮಂತಹ ಹಿರಿಯ ನಾಗರಿಕರಿಗೆ ಅಲ್ಲಿನ ಸರ್ಕಾರಿ ವಸತಿ ಗೃಹಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಬೇಕು. ಹೇಗಿದ್ದರೂ ನಮ್ಮಂಥವರಿಗೆ 2-3 ದಿನಗಳಿಗಿಂತಲೂ ಹೆಚ್ಚು ಉಳಿಯಲು ಆಗುವುದಿಲ್ಲ. ಹೇಗೂ ಎಲ್ಲಾ ನಗರಗಳಲ್ಲಿರುವ ಸರ್ಕಾರಿ ವಸತಿ ಗೃಹಗಳು (ಗೌವರ್ನಮೆಂಟ್ ಗೆಸ್ಟ್ ಹೌಸ್/ ಸರ್ಕ್ಯೂಟ್ ಹೌಸ್) ಸಾಕಷ್ಟು ಖಾಲಿಯಿರುತ್ತವೆ. ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ಎಂಬಂತೆ ಎಂದಾದರೂ ಆ ನಗರಗಳಿಗೆ ಯಾರಾದರೂ ಮುಖ್ಯ ಅತಿಥಿಗಳು (ವಿಐಪಿ) ಭೇಟಿ ಕೊಟ್ಟರೆ, ಅಂದು ಏನಾದರೂ ಕಾರ್ಯಕ್ರಮಗಳು ಇದ್ದರೆ, ಆಗ ಎಲ್ಲಾ ಕಡೆಗೂ ಎಲ್ಲಾ ಕೋಣೆಗಳು ತುಂಬಿರುತ್ತವೆ. ಅಂತಹ ಸಮಯದಲ್ಲಿ ನಮ್ಮನ್ನು ಯಾರೂ ಕೇಳುವುದಿಲ್ಲ. ಆದಕಾರಣ ಹೇಗೋ ಯಾವಾಗಲೂ ಅಲ್ಲಿ ಇರುವ ಸರ್ಕಾರಿ ವಸತಿ ಗೃಹಗಳು ಖಾಲಿಯೇ ಇರುತ್ತವೆ. ಅಂದ ಮೇಲೆ ನಾವುಗಳು ಅದು ಇದು ಎಂದೋ ಒಂದು ಸಲದ ಕೆಲಸದ ನಿಮಿತ್ತ ಅಥವಾ ಮತ್ಯಾವುದೋ ಕೆಲಸದ ಮೇಲೆ ಹೋದಾಗ, ನಮಗೆ 2-3 ದಿನಗಳಿಗೆ ಇರಲು ಅವಕಾಶ ಮಾಡಿಕೊಟ್ಟರೆ ಎಷ್ಟೋ ಅನುಕೂಲವಾಗುತ್ತದೆ. ಮೇಲಾಗಿ ಬರುವ ಅಲ್ಪ-ಸ್ವಲ್ಪ ಪಿಂಚಣಿ ಹಣದಲ್ಲಿ ಈ ಖರ್ಚನ್ನೂ ಭರಿಸಬೇಕು ಎಂದರೆ ಬಹಳ ತೊಂದರೆಯಾಗುತ್ತದೆ.
ಆದ ಕಾರಣ ಮೇಲೆ ಹೇಳಿದ ವಿಷಯಗಳ ಬಗ್ಗೆ ಸಂಬಂಧಪಟ್ಟವರು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ ಹಾಗೂ ಇದರಿಂದ ಸರ್ಕಾರಕ್ಕೇ ಆಗಲಿ ಅಥವಾ ಇನ್ನಿತರರಿಗೇ ಆಗಲೀ ಯಾವ ವಿಧವಾದ ತೊಂದರೆ ಹಾಗೂ ಭಾರ (ಹಣಕಾಸು ವಿಷಯದಲ್ಲಿ) ಎನಿಸುವುದಿಲ್ಲ. ಅಧಿಕಾರ ಶಾಶ್ವತವಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈ ಅಧಿಕಾರಾವಧಿಯಲ್ಲಿ ನಾವು ಮಾಡುವ ಅಲ್ಪ-ಸ್ವಲ್ಪ ಒಳ್ಳೆಯ ಕೆಲಸಗಳು ಜನಸಾಮಾನ್ಯರಲ್ಲಿ ಎಂದಿಗೂ ಮಾಸದ ನೆನಪಾಗಿ ಉಳಿಯುತ್ತವೆ.



- ಕೆ. ಅನಂತ ಪದ್ಮನಾಭ
ಹಿರಿಯ ನಾಗರಿಕ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement