ಮೂಲ ವಿಜ್ಞಾನ ಬಲಪಡಿಸೀತೇ ಹೊಸ ಪರೀಕ್ಷಾ ನೀತಿ?
ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ನ್ಯಾಷನಲ್ ಕೋರ್ ಕರಿಕುಲಮ್ (NCERT)ಪಠ್ಯಕ್ರಮ ಅಳವಡಿಸಿ ಈ ಶೈಕ್ಷಣಿಕ ವರ್ಷದಲ್ಲಿ ಅಂದರೆ 2014 ಮಾರ್ಚ್ನಲ್ಲಿ ವಿಜ್ಞಾನ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುತ್ತಿದೆ. ಇದರಲ್ಲಿ ಪ್ರಾಯೋಗಿಕ ಪರೀಕ್ಷೆ ಇರುವ ಭೌತಶಾಸ್ತ್ರ (Physics) ರಸಾಯನ ಶಾಸ್ತ್ರ (Chemistry) ಹಾಗೂ ಜೀವಶಾಸ್ತ್ರ (Biology) ವಿಷಯಗಳಲ್ಲಿ ಮಾತ್ರ 70-30 ಅಂದರೆ ಥಿಯರಿಗೆ 70 ಅಂಕ ಮತ್ತು ಪ್ರಾಯೋಗಿಕ ಪರೀಕ್ಷೆಗೆ 30 ಅಂಕ ನಿಗದಿಪಡಿಸಿದೆ. ಇದು ಸ್ವಾಗತಾರ್ಹ ಹಾಗೂ ಅತ್ಯಂತ ವೈಜ್ಞಾನಿಕವಾಗಿದೆ. ಏಕೆಂದರೆ ಕಲಿಕೆ, ಬರೆಯುವುದಕ್ಕೆ ಮಾತ್ರ ಸೀಮಿತವಾಗಿಲ್ಲ. "ನೋಡಿ ಕಲಿ ಮಾಡಿ ತಿಳಿ" ಎನ್ನುವ ಹಾಗೆ ಪ್ರಾಯೋಗಿಕವಾಗಿ ಮಾಡಿದಾಗ ಮಾತ್ರ ಸಮಗ್ರ ಕಲಿಕೆ ಸಾಧ್ಯ. ಪ್ರಯೋಗಗಳನ್ನು ಮಾಡಲು ಕೌಶಲ್ಯ ಬೇಕು. ಒಬ್ಬ ವಿದ್ಯಾರ್ಥಿ ನೋಡಿದ ಕೂಡಲೇ ಪ್ರಯೋಗ ಮಾಡಬಲ್ಲ. ಆದರೆ ಒಂದು ಗಂಟೆ ಉಪನ್ಯಾಸ ಅತ್ಯಂತ ಶ್ರದ್ಧೆಯಿಂದ ಕೇಳಿದರೂ ಸಹ 20ರಿಂದ 30 ಶೇಕಡಾ ಮಾತ್ರ ಬರೆಯಲು ಸಾಧ್ಯವಾಗುತ್ತದೆ. ಈ ಕೌಶಲ್ಯಾಭಿವೃದ್ಧಿಯೇ ಜ್ಞಾನದ ಮೇಲಿನ ಸ್ತರ. ಸಾಮಾನ್ಯವಾಗಿ ಕೌಶಲ್ಯಗಳು ಅನುವಂಶೀಯವಾಗಿರುತ್ತವೆ. ಬಡಗಿಯ ಮಗ ಬಡಗಿಯ ಕೆಲಸವನ್ನು ಉತ್ಕೃಷ್ಟವಾಗಿ ಮಾಡುತ್ತಾನೆ. ಚಕ್ರವನ್ನು ತಿರುಗಿಸಿ ಮಡಕೆ ಮಾಡುವ ಕೌಶಲ್ಯ ಕುಂಬಾರನ ಮಗನಿಗೆ ಲೀಲಾಜಾಲವಾಗಿ ಬರುತ್ತದೆ. ಆದರೆ ಸತತವಾದ ಶ್ರದ್ಧೆ ವಹಿಸಿ, ಪ್ರಾರಂಭದಲ್ಲಿ ಸ್ವಲ್ಪ ಕಷ್ಟವಾದರೂ ಮುಂದುವರಿದಾಗ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬಹುದು. ಈ ಕೌಶಲ್ಯದ ಅಭಿವೃದ್ಧಿಯಿಂದ ಜೀವನಕ್ಕೆ ಮಾರ್ಗ ಹುಡುಕಿಕೊಳ್ಳುವುದು ಸುಲಭವಾಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಆವಿಷ್ಕಾರಗಳನ್ನು ಮಾಡಬಹುದು.
ಯಾವುದೇ ಪಠ್ಯ, ಪರೀಕ್ಷೆಯಲ್ಲಿ ಅಂಕ ಗಳಿಸಲು ನೆರವಾದಾಗ ಅದು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಪ್ರಾಯೋಗಿಕ ಪರೀಕ್ಷೆಗೆ 30 ಅಂಕ ಇರುವುದರಿಂದ ಈ ಅಂಶ ಪ್ರತಿ ವಿಜ್ಞಾನ ವಿದ್ಯಾರ್ಥಿಗೆ ತುಂಬ ಮುಖ್ಯ. ಈ ಅಂಕಗಳನ್ನು ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಪರಿಗಣಿಸಲಾಗುವುದರಿಂದ ಪ್ರತಿಯೊಂದು ಅಂಕವೂ ಮುಖ್ಯವಾಗುತ್ತದೆ. ಈ ಪರೀಕ್ಷಾ ನೀತಿಯನ್ನು ಸ್ವಲ್ಪ ಬಿಗಿ ಮಾಡಿದರೆ ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿಜ್ಞಾನ ವಿಷಯಗಳನ್ನು ಓದಲು ಮುಂದೆ ಬರುತ್ತಾರೆ.
ಇತ್ತೀಚಿನ ದಿನಗಳಲ್ಲಿ ವಿಜ್ಞಾನ ವಿಷಯಗಳಲ್ಲಿ (Pure science)ಸಂಶೋಧನೆ ಮಾಡುವವರ ಸಂಖ್ಯೆ ಕನಿಷ್ಟ ಮಟ್ಟಕ್ಕಿಳಿದಿದೆ. ಏಕೆಂದರೆ ಯಾವುದಾದರೂ ಇಂಜಿನಿಯರಿಂಗ್ ಪದವಿ ಪಡೆದರೆ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಸಿಗುತ್ತದೆ. ಅವರೇ ವಿದೇಶಕ್ಕೆ ಕಳುಹಿಸುತ್ತಾರೆ. ಕೆಲಸ ಕೊಟ್ಟು ಯಥೇಚ್ಛವಾಗಿ ಹಣ ಕೊಡುತ್ತಾರೆ. ಸ್ವಲ್ಪ ಬುದ್ಧಿವಂತರಾದ ಮಕ್ಕಳು ಇದನ್ನು ಪಡೆಯಲು ಕಷ್ಟಪಡಬೇಕಾಗಿಲ್ಲ. ಹಣ, ಅಂತಸ್ತು, ಕೆಲಸ, ಸಮಾಜದಲ್ಲಿ ಉನ್ನತ ಸ್ಥಾನ ಎಲ್ಲಾ ಇರುವುದರಿಂದ ಅದರ ಬಗ್ಗೆ ಒಲವು ಹೆಚ್ಚು. ಇಂಜಿನಿಯರಿಂಗ್ ಕ್ಷೇತ್ರದಲ್ಲಿಯೂ ಸಹ ಸಂಶೋಧನಗೆ ಅವಕಾಶ ಇರುತ್ತದೆ. ಆದರೆ ಯಾರೂ ಮುಂದುವರೆದು ಕಷ್ಟಪಡಲು ಇಚ್ಛಿಸುವುದಿಲ್ಲ. ಇದು ಒಂದು ಹಂತದ Brain drain. ಇನ್ನೊಂದು ಹಂತದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ಹೋಗಿ ಅಲ್ಲೇ ನೆಲೆಸಿ, ಅಲ್ಲಿನ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮಾಡಿ ಆ ದೇಶಗಳಿಗೆ ಹೆಸರು ತರುವುದು ಸಾಮಾನ್ಯವಾಗಿದೆ.
ಮೂರನೆಯದಾಗಿ ಪಿಯುಸಿ ಹಂತ. ಇಲ್ಲಿಯೂ ಹಾಗೆ. ಸರ್ವಶಿಕ್ಷಣ ಅಭಿಯಾನದ ಕಾರಣದಿಂದಾಗಿ ಯಾವ ವಿದ್ಯಾರ್ಥಿಯನ್ನು ಹತ್ತನೇ ತರಗತಿಯವರೆಗೂ ಅನುತ್ತೀರ್ಣಗೊಳಿಸುವಂತಿಲ್ಲ. ಹಾಗಾಗಿ ಯಾವುದೇ ಹಂತದಲ್ಲೂ ಚಿಕ್ಕ ವಯಸ್ಸಿನಲ್ಲಿ ಅಂದರೆ ಮೂಲ ಜ್ಞಾನ ಪಡೆಯುವಂತಹ ಸಮಯದಲ್ಲಿ ಕಷ್ಟಪಡದೇ ಮುಂದೆ ಬಂದಿರುತ್ತಾರೆ. ಪಿಯುಸಿ ಹಂತದಲ್ಲಿ (ಕಾಮರ್ಸ್) ವಾಣಿಜ್ಯ ವಿಭಾಗದಲ್ಲಿ ಓದಿ ಬಿಬಿಎಂ, ಬಿಸಿಎ, ಬಿಕಾಂ ಯಾವುದಾದರೂ ಡಿಗ್ರಿ ಪಡೆದು ಎಂಎನ್ಸಿ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಅಥವಾ ಸುಲಭವಾಗಿ ಜೀವನದಲ್ಲಿ ಗಳಿಸುವ ಹಂತಕ್ಕೇ ಬರುತ್ತಾರೆ. ಅದೇ ವಿಜ್ಞಾನ ವಿಷಯಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಅಷ್ಟು ಸುಲಭವಾಗಿ ಅಂಕ ಗಳಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅಕೌಂಟೆನ್ಸಿಯಲ್ಲಿ ಹತ್ತು ಅಂಕ ಗಳಿಸಲು ಸಾಮಾನ್ಯ ಜ್ಞಾನವಿದ್ದು ಕೂಡಿ, ಕಳೆಯುವುದು ಬಂದರೆ ಸಾಕು. ಆದರೆ ಗಣಿತ ಅಥವಾ ಭೌತಶಾಸ್ತ್ರ ಅಥವಾ ರಸಾಯನ ಶಾಸ್ತ್ರದಲ್ಲಿ ಹತ್ತು ಅಂಕ ಗಳಿಸಲು ಎಷ್ಟೊಂದು ಹಂತಗಳನ್ನು, ಕಾನ್ಸೆಪ್ಟ್ಗಳನ್ನು, ಮಾದರಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಚಿಕ್ಕಂದಿನಿಂದಲೂ ಕಲಿತಿದ್ದರೆ ಕಷ್ಟವಾಗುವುದಿಲ್ಲ. ಆದರೆ ಈಗ ಅನಿವಾರ್ಯವಾಗಿ ಕಲಿತುಕೊಳ್ಳಲು ಕಷ್ಟ. ಪ್ರತಿಯೊಂದು ನಿಷ್ಪತ್ತಿಯಲ್ಲೂ ಮಧ್ಯದಲ್ಲಿ ಯಾವುದಾದರೂ ತಪ್ಪಿದ್ದರೆ ಮುಂದೆ ಸರಿಯಾಗಿ ಮಾಡಿದರೂ ಸಹ ಅಲ್ಲಿಂದ ಅಂಕ ಕೊಡಲಾಗುವುದಿಲ್ಲ. ನೆನಪಿನಲ್ಲಿಟ್ಟುಕೊಂಡು ಬರೆದರೂ ಸಹ ಅಂಕ ಬರುವುದಿಲ್ಲ. ಏಕೆಂದರೆ ಅದನ್ನು ನಿಷ್ಪತ್ತಿಸಬೇಕಾಗಿರುತ್ತದೆ (to deviate). ಆದರೆ ಇತಿಹಾಸ, ಅರ್ಥಶಾಸ್ತ್ರ, ಇಂತಹುದರಲ್ಲಿ ಯಾವುದಾದರೂ ಸರಿ ಇರುವ ವಾಕ್ಯ ಇದ್ದರೆ ಸಾಕು ಅಂಕ ಸಿಗುತ್ತದೆ. ಹಾಗಿರುವಾಗ ಎಲ್ಲರೂ ಸುಲಭ ಮಾರ್ಗಕ್ಕೆ ಮೊರೆ ಹೋಗಿ ವಿಜ್ಞಾನದ ಬದಲಾಗಿ ಕಾಮರ್ಸ್ ವಿಷಯ ತೆಗೆದುಕೊಂಡು ಓದುತ್ತಾರೆ.
ಆದುದರಿಂದ ಈ ವರ್ಷ 2014 ಮಾರ್ಚ್ ಪರೀಕ್ಷೆಗಳಲ್ಲಿ 30-70 ಅಂಕ ಇರುವುದು ಸ್ವಾಗತಾರ್ಹ. ಈ 30 ಅಂಕಗಳನ್ನು ವಿವಿಧ ರೀತಿಯ ಪರೀಕ್ಷೆಗಳಿಂದ ಅಂದರೆ ರೆಕಾರ್ಡ್ ಬರೆಯುವುದು, ಮೌಖಿಕವಾಗಿ ಪ್ರಶ್ನೆ ಕೇಳುವುದು, ಸಲಕರಣೆಗಳನ್ನು ಜೋಡಿಸಿಕೊಂಡು ಪ್ರಯೋಗ ಮಾಡಿ ರೀಡಿಂಗ್ಸ್ ತೆಗೆದುಕೊಂಡು ಅವಲೋಕಿಸಿ, ಲೆಕ್ಕ ಮಾಡಿ ತಿಳಿಸುವುದು, ಮಾದರಿಯನ್ನು ನೋಡಿ ಹೇಳುವುದು, ಅದರ ಭಾಗಗಳನ್ನು ಗುರುತಿಸುವುದು ಮುಂತಾದ ಕೌಶಲ್ಯಗಳಿಂದ ಒಡಗೂಡಿದ ಪರೀಕ್ಷೆ ಎದುರಿಸಿ ಅಂಕ ಗಳಿಸುವುದು ನಿಜಕ್ಕೂ ಶ್ಲಾಘನೀಯ. ಇದೆಲ್ಲವೂ ಕೌಶಲ್ಯಕ್ಕೆ ಸಂಬಂಧಿಸಿರುವ ವಿಚಾರಗಳೇ ಆಗಿರುವುದರಿಂದ ಉಲ್ಲಾಸವಾಗಿ, ಸಂತೋಷದಿಂದ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಇಲ್ಲಿ ನಿಜವಾದ ಕ್ರಿಯಾಶೀಲತೆಯ ಮೌಲ್ಯಮಾಪನ ನಡೆಯುತ್ತದೆ. ಪ್ರಾಯೋಗಿಕ ಪರೀಕ್ಷೆಗಳ ವೀಡಿಯೋ ಚಿತ್ರೀಕರಣ ಮಾಡಿ ಡಿವಿಡಿಗಳನ್ನು ಇಲಾಖೆಗೆ ಕಳುಹಿಸಿಕೊಡಿ ಎಂದು ಪ.ಪೂ. ಶಿಕ್ಷಣ ಇಲಾಖೆ ಆದೇಶಿಸಿರುವುದರಿಂದ ಇದರ ಮೌಲ್ಯಮಾಪನ ಸಹ ಪಾರದರ್ಶಕವಾಗುತ್ತದೆ ಮತ್ತು ಅರ್ಹ ವಿದ್ಯಾರ್ಥಿಗೆ ಮಾತ್ರ ಅಂಕ ಸಿಗುತ್ತದೆ.
ಥಿಯರಿ ಪರೀಕ್ಷೆಯಲ್ಲಿ 70ಕ್ಕೆ 21 ಅಂಕ ಗಳಿಸಿದರೆ ಪಾಸ್. ಕೆಲವರಿಗೆ ಇದರಲ್ಲೂ 21 ಅಂಕ ಗಳಿಸಲು ಕಷ್ಟವಾಗಬಹುದು. ಆದರೂ ಒತ್ತು ಕೊಟ್ಟು ಓದಿ 21 ಅಂಕ ಗಳಿಸಿದರೆ ಸುಲಭವಾಗಿ ಸೆಕೆಂಡ್ ಕ್ಲಾಸ್ ಬರುತ್ತದೆ. ಇದರಿಂದ ಮುಂದಿನ ವಿದ್ಯಾಭ್ಯಾಸಕ್ಕೆ ಅರ್ಹತೆ ಸಿಗುತ್ತದೆ. ಬಹಳಷ್ಟು ವಿದ್ಯಾರ್ಥಿಗಳು ಪದವಿ ಪೂರ್ವ ಹಂತದಲ್ಲಿ ಗೊಂದಲಕ್ಕೊಳಗಾಗಿರುತ್ತಾರೆ. ಮೊದಲನೆಯದಾಗಿ ಹದಿಹರೆಯ, ಶಾರೀರಿಕ ಬದಲಾವಣೆಗಳಾಗುವ ಕಾಲ, ಮನಸ್ಸಿನ ಮೇಲೆ ಯಾವುದೇ ನಿಯಂತ್ರಣ ಇಲ್ಲದೇ ಇರುವುದು, ಕೀಳರಿಮೆ ಅಥವಾ ಮೇಲರಿಮೆ, ಪರೀಕ್ಷಾ ವಿಧಾನದ ವ್ಯತ್ಯಯ, Turning Point ಎನ್ನುವ ಭಯ ಮತ್ತು ಆತಂಕ. ಹುಡುಗರು ಹುಡುಗಿಯರಿಗಿಂತ ಅಪ್ರಬುದ್ಧರಾಗಿರುವುದು. ಹೀಗೆ ತುಲನೆ ಮಾಡಿ ಗೊಂದಲಕ್ಕೀಡಾಗುತ್ತಾರೆ. ನಂತರದ ದಿನಗಳಲ್ಲಿ ಹೇಗೋ ಮುಂದುವರೆದು ಒಳ್ಳೆಯ ಕೆಲಸ ಗಿಟ್ಟಿಸಿಕೊಂಡು ಚೆನ್ನಾಗಿ ಇರುತ್ತಾರೆ. ಆದರೆ ಈ ಹಂತದಲ್ಲಿ ಒಳ್ಳೆಯ ಅಂಕ ಬರುವುದರಿಂದ ಉತ್ತೇಜನ ಸಿಕ್ಕಿದಂತಾಗಿ ವಿಜ್ಞಾನ ವಿಷಯಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ಯಾವುದೇ ವ್ಯಕ್ತಿ ಮುಂದುವರೆಯಲು ಒಳ್ಳೆಯ ಉತ್ತೇಜನ ಬೇಕಾಗುತ್ತದೆ. ಮೇಡಂ ಕ್ಯೂರಿಯವರು ಚಿಕ್ಕವರಿರುವಾಗ ಒಮ್ಮೆ ಒಬ್ಬ ಮಾಂತ್ರಿಕ "ಪ್ರಪಂಚ ನಿನ್ನನ್ನು ಗುರುತಿಸುತ್ತದೆ" ಎಂದು ಹೇಳಿದ್ದನಂತೆ. ಆ ಒಂದು ಮಾತು ಅವರಿಗೆ ಜೀವನಪೂರ್ತಿ ನೆನಪಿನಲ್ಲುಳಿದು ಎರಡು ಬಾರಿ ನೊಬೆಲ್ ಪ್ರಶಸ್ತಿ ಪಡೆದ ಏಕೈಕ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾದರು. ಹಾಗಾಗಿ ಉತ್ತೇಜನ ಬಹಳ ಮುಖ್ಯವಾಗುತ್ತದೆ. ಆದುದರಿಂದ ಈಗ ಬಂದಿರುವ ಈ ಪರೀಕ್ಷಾ ವ್ಯವಸ್ಥೆಯಿಂದ ಶುದ್ಧ ವಿಜ್ಞಾನ ಓದಿ ಸಂಶೋಧನೆ ಮಾಡಿ ನಮ್ಮ ದೇಶಕ್ಕೂ ನೊಬಲ್ ಬಹುಮಾನ ಬರುವಂತೆ ಆಗಬೇಕು. ಹೆಚ್ಚು ಹೆಚ್ಚು ಬುದ್ಧಿವಂತ ಮಕ್ಕಳು ಶುದ್ಧ ವಿಜ್ಞಾನ ಓದಬೇಕು.
-ಎಂ.ಎಸ್. ಗಾಯತ್ರಿ
ಬೆಂಗಳೂರು