ಟೋಪಿ ವಾದವನ್ನು ಬೇರೆಡೆಗೂ ಅನ್ವಯಿಸಿದರೆ...
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮುಸ್ಲಿಮರ ಟೋಪಿ ಧರಿಸಲು ಏಕೆ ನಿರಾಕರಿಸುತ್ತಾರೆ ಎಂಬುದು ಸಲ್ಮಾನ್ ಖುರ್ಷಿದ್ ಅವರ ಒಂದು ಬಹು ಮುಖ್ಯ ಪ್ರಶ್ನೆ. ಈ ಪ್ರಶ್ನೆಗೆ 'ಏಕೆ ನಿರಾಕರಿಸಬಾರದು' ಎಂಬ ಪ್ರತಿ ಪ್ರಶ್ನೆಯೇ ಉತ್ತರವೂ ಆಗಬಹುದು. ಯಾರೇ ಆಗಲೀ ಯಾವುದೇ ಟೋಪಿಯನ್ನು ಧರಿಸಲೇಬೇಕು ಎಂಬ ಯಾವುದೇ ಕಾನೂನು ನಮ್ಮ ದೇಶದಲ್ಲಿ ಇದೆಯಾ? ಸಾಮಾಜಿಕ ಶಿಷ್ಟಾಚಾರಕ್ಕೆ ವಿರುದ್ಧವಲ್ಲದ ಯಾವುದೇ ವಸ್ತ್ರಧಾರಣೆ ಪ್ರತಿಯೊಬ್ಬ ಪ್ರಜೆಯ ಹಕ್ಕು ಮತ್ತು ಸ್ವಾತಂತ್ರ್ಯ ಎಂಬುದನ್ನು ನಾವು ಅರ್ಥ ಮಾಡಿಕೊಂಡರೆ, ನರೇಂದ್ರ ಮೋದಿಯವರಿಗೇ ಆಗಲೀ, ಸಲ್ಮಾನ್ ಖುರ್ಷಿದ್ ಅವರಿಗೇ ಆಗಲೀ, ಅನ್ಯರಿಗೇ ಆಗಲೀ ಅವರಿಗೆ ಇಷ್ಟವಾಗುವ ವಸ್ತ್ರಗಳನ್ನೋ, ಉಪವಸ್ತ್ರಗಳನ್ನೋ, ಟೋಪಿಯೇ ಮೊದಲಾದ ಶಿರೋಭೂಷಣಗಳನ್ನೋ ಹೊಂದುವ ಹಾಗೂ ಧರಿಸುವ ಹಕ್ಕು ಮತ್ತು ಸ್ವಾತಂತ್ರ್ಯಗಳಿವೆ ಎಂದು ಒಪ್ಪಲೇಬೇಕಾಗುತ್ತದೆ. ಯಾವುದೇ ಒಂದು ಸಮುದಾಯದ ಜನರ ಸಮಾವೇಶ ಅಥವಾ ಸಮಾರಂಭಗಳಲ್ಲಿ ಭಾಗವಹಿಸುವಾಗ ಆ ಸಮುದಾಯದ್ದೇ ಆದ ನಿಬಂಧನೆಗಳು ಇಲ್ಲದಿದ್ದಲ್ಲಿ, ಅವರಂತೆಯೇ ನಮ್ಮ ವೇಷ ಭೂಷಣಗಳಿರಬೇಕೋ ಬೇಡವೋ ಎಂಬುದು ಹಾಗೆ ಭಾಗವಹಿಸುವವರ ವಿವೇಚನೆಗೆ ಒಳಪಡುವ ವಿಚಾರವೇ ಹೊರತು ಉಳಿದವರು 'ಹಾಗೆ ಯಾಕೆ ಹೀಗೆ ಯಾಕೆ' ಎಂದು ಪ್ರಶ್ನಿಸುವಂತಹ ಸಂಗತಿಯೇ ಅಲ್ಲ.
ಎಷ್ಟೋ ಜನ ಪ್ರಮುಖ ಹಿಂದೂ ರಾಜಕಾರಣಿಗಳು ಮುಸ್ಲಿಮ್ ಹಬ್ಬಗಳಂದು, ಈದಗಾ ಮೈದಾನಗಳಲ್ಲಿ ನಡೆಯುವ ಅವರ ಸಾಮೂಹಿಕ ಪ್ರಾರ್ಥನೆಗಳಲ್ಲಿ, ಅವರಂತೆಯೇ ಟೋಪಿ ಹಾಕಿಕೊಂಡು ಚಾಪೆಯ ಮೇಲೋ, ಬೇರೆ ಹಾಸಿನ ಮೇಲೋ ಮುಸ್ಲಿಮರ ಪ್ರಾರ್ಥನಾ ಭಂಗಿಯಲ್ಲಿಯೇ ಕುಳಿತು ಪ್ರಾರ್ಥಿಸುವುದನ್ನು (ಅಥವಾ ಪ್ರಾರ್ಥಿಸುವಂತೆ ನಟಿಸುವುದನ್ನು) ಸಾಮಾನ್ಯವಾಗಿ ಪ್ರತಿ ವರ್ಷವೂ ಕಾಣುತ್ತೇವೆ.
ಅದು ಅವರ ವೈಯಕ್ತಿಕ ವಿಷಯ. ನೀವು ಹಿಂದೂಗಳಾಗಿ ಯಾಕೆ ಹಾಗೆ ಮುಸ್ಲಿಮರಂತೆ ವರ್ತಿಸುತ್ತೀರಿ, ಎಂದು ಅವರನ್ನು ಕೇಳಿದರೆ- ಅದು ನನಗೆ ಇಷ್ಟವಾಗುವ ನನ್ನ ಸ್ವಂತ ವಿಚಾರ, ಅದರಿಂದ ನಿಮಗಾಗಲೀ ಹಿಂದೂ ಧರ್ಮಕ್ಕಾಗಲೀ ಏನಾದರೂ ತೊಂದರೆಯಿದೆಯಾ- ಎಂದು ಅವರು ಉತ್ತರಿಸಿದರೆ, ಅವರ ನುಡಿಗಳನ್ನು ತಪ್ಪು ಎನ್ನಲಾದೀತಾ? ಯಾವುದೇ ಧರ್ಮಕ್ಕೆ ಸೇರಿದ ದೇವರ ಅಥವಾ ಪ್ರವಾದಿಗಳ ಅಥವಾ ಸಂತರ ಬಗ್ಗೆ, ಹಿಂದೂಗಳಲ್ಲಿ ಯಾರು ಬೇಕಾದರೂ ಭಕ್ತಿಯನ್ನೋ ವಿಶ್ವಾಸವನ್ನೋ ಹೊಂದುವುದನ್ನು ಅನಾಚಾರವೆಂದು ಹಿಂದೂ ಧರ್ಮದಲ್ಲಿ ಪರಿಗಣಿಸಲಾಗುವುದಿಲ್ಲ.
ನರೇಂದ್ರ ಮೋದಿಯವರ ವಿಷಯಕ್ಕೆ ಬರುವುದಾದರೆ, ಅವರಿಗೆ ಬೇರೆ ಎಷ್ಟೋ ಸಮುದಾಯಗಳ, ಎಷ್ಟೋ ಬಗೆಯ ಸಾಂಪ್ರದಾಯಿಕ ದಿರಸುಗಳು, ಟೋಪಿಗಳು ಇಷ್ಟವಾಗಬಹುದು ಮತ್ತು ಸಂದರ್ಭಾನುಸಾರ ಅವುಗಳನ್ನು ಧರಿಸಲೂಬಹುದು.
ಇಂಥಾ ಅವರ ನಡವಳಿಕೆಯಲ್ಲಿ ಅವರ ಸ್ವಂತ ಅಥವಾ ಅವರ ಪಕ್ಷದ ಹಿತಾಸಕ್ತಿಗಳ ಸಾಧನೆಯ ಕಾರಣಗಳೂ ಇರಬಹುದು. ಹಾಗೆಂದು, ಅವರಿಗೆ ಅಗತ್ಯ ಎನ್ನಿಸದೇ ಇರುವಾಗ, ಅವರು ಮುಸ್ಲಿಮರ ಟೋಪಿಯನ್ನು ಧರಿಸುವುದಿಲ್ಲ ಏಕೆ ಎಂದು ಕೇಳುವುದರಲ್ಲಿ ಅರ್ಥವಿದೆಯೇ?
ಪುರುಷರ ಭಾಗವಹಿಸುವಿಕೆಯೂ ಇರುವಂಥಾ ಮುಸ್ಲಿಮ್ ಮಹಿಳೆಯರ ಸಮಾವೇಶವೊಂದರಲ್ಲಿ ಮುಸ್ಲಿಮ್ ಮಹಿಳೆಯರೆಲ್ಲರೂ ಬುರ್ಕಾಧಾರಿಗಳಾಗಿಯೇ ಭಾಗವಹಿಸುತ್ತಾರೆ ಎಂದಾದರೆ, ಅದೇ ಸಮಾವೇಶದಲ್ಲಿ ಸೋನಿಯಾ ಗಾಂಧಿಯವರೂ, ಪ್ರಿಯಾಂಕಾ ಗಾಂಧಿ ವಾಧ್ರಾರವರೂ, ಮೀರಾ ಕುಮಾರ್ ಅವರೂ ಭಾಗವಹಿಸುವುದಾದರೆ, ಸಲ್ಮಾನ್ ಖುರ್ಷಿದ್ ಅವರ ಪ್ರಕಾರ ಈ ಮೂವರು ಕೂಡಾ ಬುರ್ಕಾಧಾರಿಗಳಾಗಲೇಬೇಕಾ? ಬುರ್ಕಾ ಧರಿಸಲು ಇವರು ಇಷ್ಟಪಡದಿದ್ದರೆ, ಇವರೇಕೆ ಬುರ್ಕಾ ನಿರಾಕರಿಸುತ್ತಾರೆ ಎಂದು ಪ್ರಶ್ನಿಸುವ ಧೈರ್ಯ ಸಲ್ಮಾನ್ ಖುರ್ಷಿದ್ ಅವರಿಗೆ ಇದೆಯೇ.
- ಬೊ. ನಾ. ಕೃಷ್ಣಮೂರ್ತಿ, ಸಾಗರ