ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅಂತರ್ಜಾತಿ ವಿವಾಹದಿಂದ ಜಾತಿ ನಿರ್ಮೂಲನೆ ಸಾಧ್ಯವೇ?

Vishwanath S
Updated On : 16 Mar 2014, 12:43 pm

ಅಂತರ್ಜಾತೀಯ ವಿವಾಹಗಳಿಂದ ಜಾತಿ ನಿರ್ಮೂಲನೆ ಸಾಧ್ಯವೆಂದು ಬಹಳಷ್ಟು ಜನರು ಹೇಳುವುದನ್ನು ಕೇಳಿ ಆಶ್ಚರ್ಯವಾಗುತ್ತದೆ. ಅನಕ್ಷರಸ್ಥ, ಅವಿದ್ಯಾವಂತ ಸಮುದಾಯದಲ್ಲಿ ಜಾತಿ ಅಷ್ಟೇನೂ ಮುಖ್ಯ ಸಮಸ್ಯೆಯಲ್ಲ. ಆದರೆ ಅಕ್ಷರಸ್ಥರಲ್ಲಿ, ವಿದ್ಯಾವಂತರಲ್ಲಿ, ವಿದ್ವಾಂಸರಲ್ಲಿ, ಜ್ಞಾನಿಗಳಲ್ಲಿ ಜಾತಿ ಬಹುಮುಖ ಕೆಲಸ ಮಾಡಿದೆ. ಪ್ರೀತಿ, ಪ್ರೇಮ, ಆಪ್ತತೆ, ಆರ್ದ್ರತೆ, ಆತ್ಮೀಯತೆ, ಸ್ನೇಹಕ್ಕೆ ಬಹುಶಃ ಜಾತಿ ಬೇಕಾಗುವುದಿಲ್ಲ. ಆದರೆ ಮದುವೆ ಸಂದರ್ಭದಲ್ಲಿ ಮಾತ್ರ ಕೆಲವರಿಗೆ ಜಾತಿ ಧುತ್ತನೆ ಎದುರಾಗುತ್ತದೆ. ಬಹಳಷ್ಟು ಬರಹಗಾರರು, ವಿಚಾರವಾದಿಗಳು ವಿವಾಹವಾಗುವವರೆಗೆ ಮಾತ್ರ ಆದರ್ಶ, ತತ್ವ, ಸಿದ್ಧಾಂತಗಳ ಆಳಕ್ಕೆ ಮುಳುಗಿ, ಮದುವೆಯ ನಂತರ ಮತ್ತೆ ತಮ್ಮ ತಮ್ಮ ಜಾತಿ ಶೋಧನೆಯಲ್ಲಿ ತೊಡಗುವುದನ್ನು ನಾವು ನೋಡಿದ್ದೇವೆ. ಸ್ವಜಾತಿಯ ಕಡು ವ್ಯಾಮೋಹವೇ ಇಂದಿಗೂ ಜಾತಿ ಪದ್ಧತಿ ಜೀವಂತವಾಗಿರಲು ಕಾರಣವಾಗಿದೆ.
ಡಾ.ಬಿ.ಆರ್. ಅಂಬೇಡ್ಕರ್ ಅವರು ಒಂದೆಡೆ- "ಮನಸ್ಸಿನ ಕೊಳೆ ತೊಳೆಯುವುದೇ ಧರ್ಮ, ಅಸ್ಪೃಶ್ಯತೆಯ ಬಗೆಗೂ ಇದೇ ಮಾತು ಸಲ್ಲುತ್ತದೆ. ಜಾತಿಯೆಂಬುದು ತೊಲಗಿಹೋಗಲು ಅದು ಮುಳ್ಳುಬೇಲಿಯಲ್ಲ, ಇಟ್ಟಿಗೆಗಳಿಂದ ಕಟ್ಟಿರುವ ಗೋಡೆಯಲ್ಲ. ಅದು ಮನಸ್ಸಿಗೆ ಹತ್ತಿರುವ ಕೊಳೆ. ಅದೊಂದು ಮಾನಸಿಕ ಭ್ರಾಂತಿ" ಎಂದಿದ್ದಾರೆ.
ಬುದ್ಧ, ಬಸವ, ಕಬೀರ, ರಾಮಾನುಜ, ಚೈತನ್ಯ, ಲೋಹಿಯಾ, ರಾಜಾರಾಂ ಮೋಹನರಾಯ್, ಸ್ವಾಮಿ ವಿವೇಕಾನಂದ, ಜ್ಯೋತಿ ಬಾಪುಲೆ, ಆನಿಬೆಸೆಂಟ್, ಗಾಂಧೀಜಿ, ಪೆರಿಯಾರ್ ಮುಂತಾದ ಸಮಾಜ ಸುಧಾರಕರು ಜಾತಿ ವಿನಾಶಕ್ಕೆ ಶತಾಯಗತಾಯ ಪ್ರಯತ್ನಿಸಿ ಕೊನೆಗೆ ಫಲಕಾಣದೆ ನಿರಾಶರಾಗಿದ್ದಾರೆ. ಜಾತಿ ಎಂಬುದು ಆಧುನಿಕ ಸಮಾಜದ ಪೆಡಂಭೂತವಾಗಿದೆ. ಆಲದ ಮರದಂತೆ ಸಹಸ್ರಾರು ವರ್ಷಗಳಿಂದ ಬೇರು-ಬಿಳಲು ಬಿಟ್ಟ ಮರವಾಗಿ, ಕವಲೊಡೆದು ವಿಸ್ತಾರವಾಗಿ ಹರಡಿಕೊಂಡಿದೆ. ಬಹಳಷ್ಟು ಸಲ ಜಾತಿಯಿಂದ ಜೀವನವೋ ಜೀವನದಿಂದ ಜಾತಿಯೋ ಎಂಬ ಪ್ರಶ್ನೆ ಯಕ್ಷಪ್ರಶ್ನೆಯಾಗಿ, ಬೀಜವೃಕ್ಷ ನ್ಯಾಯದಂತೆ, ಅಡ್ಡಗೋಡೆಯ ಮೇಲಿನ ದೀಪದಂತೆ ಸ್ಪಷ್ಟವಾದ, ನೇರವಾದ ಉತ್ತರ ನೀಡಲಾರದೆ ಅದು ಪಲಾಯನವಾದ ಅನುಸರಿಸುತ್ತದೆ.
"ಎಲುವು-ತೊಗಲ್-ನರ-ಮಾಸಂ ಒಲಿದ
ಚರ್ಮದ ಹೊದಿಕೆ ಹೊಲೆರಕ್ತ ಶುಕ್ಲದಿಂದಾದ
ದೇಹಕ್ಕೆ ಕುಲವಾವುದಯ್ಯ ಸರ್ವಜ್ಞ"
ವಿವಾಹ ಎನ್ನುವುದು ಇಂದು ಭಾವನಾತ್ಮಕ ಬಾಂಧವ್ಯಕ್ಕಿಂತ ಭಿನ್ನವಾಗಿ, ಬಿರುಕಾಗಿ, ವ್ಯವಹಾರಿಕ ಬಂಧನವಾಗಿದೆ. ಹೊರ ಜಗತ್ತಿಗೆ ಮಾದರಿಯಾದ ಪುರುಷ ಸ್ತ್ರೀಯರೇ ಒಳ ಜಗತ್ತಿನಲ್ಲಿ ಗೋಮುಖ ವ್ಯಾಘ್ರಗಳಾಗುತ್ತಿರುವುದು ವಿಪರ್ಯಾಸ. ಜಾತಿ ಭೇದಗಳು ಎಂದಿಗೂ ಸಾಂಘಿಕ ಯೋಗ್ಯತೆಯನ್ನು ನಿರ್ಣಯಿಸುವುದಕ್ಕೆ ಸಹಕಾರಿಯಾಗಿಲ್ಲ.
ಪಂಚಭೂತಗಳಿಗೆ, ಪ್ರಕೃತಿಗೆ, ಸಂಪತ್ತಿಗೆ, ವಿವೇಕಕ್ಕೆ ಜಾತಿ ಎಂಬುದು ಗೊತ್ತಿಲ್ಲ. ಜಾತಿ ಧರ್ಮಗಳ ಸಂಖ್ಯೆ ಕಿರಿದಾದಷ್ಟು ಸಮೂಹದ ಒಗ್ಗಟ್ಟು ಸದೃಢವಾಗಿರುತ್ತದೆ. ನಮ್ಮ ದೇಶದ ಬಹುದೊಡ್ಡ ಶತ್ರು ಜಾತಿ. ಇದರಿಂದಾಗಿಯೇ ಇಂದು ಯಾವ ವರ್ಗದ ಜನರೂ ಸುಖ-ಶಾಂತಿ, ನೆಮ್ಮದಿ, ಸಂತೋಷದಿಂದ ಇಲ್ಲ. ಅದರಿಂದಾಗಿ ಸಮಾಜದಲ್ಲಿನ ಕೆಲವರು ಅಂತರ್ಜಾತಿ ವಿವಾಹಿತರನ್ನು ಶಾಪಗ್ರಸ್ತರಂತೆ ಕಾಣುತ್ತಾರೆ. ಹೊರನೋಟಕ್ಕೆ ಮುಂದುವರಿದವರಂತೆ ಮಾತನಾಡುವವರೂ ಕೂಡ ಅಂತರ್ಜಾತೀಯ ವಿವಾಹ ಎಂಬ ಪದ ಕೇಳಿಸಿಕೊಂಡಾಕ್ಷಣ ಮೂಗುಮುರಿಯುತ್ತಾರೆ. ಯಾವುದೇ ಸುಂದರ ಸುಳ್ಳು ಯಾರ ಬದುಕನ್ನೂ ಸರಿ ಮಾಡದು. ಈ ಜಗತ್ತಿನಲ್ಲಿರುವ ಜಾತಿ ಎರಡೇ ಎರಡು 'ಒಂದು ಗಂಡು, ಮತ್ತೊಂದು ಹೆಣ್ಣು'. ಈ ಮಾತನ್ನು ಶತಮಾನಗಳಿಂದ ಹೇಳಿಕೊಂಡು ಬರಲಾಗುತ್ತಿದೆ. ಆದರೆ ಅದನ್ನು ನಿಜಕ್ಕೂ ಒಪ್ಪಿ ಮುನ್ನಡೆಯುವವರೆಷ್ಟು ಜನರಿದ್ದಾರೆ?
12ನೇ ಶತಮಾನದಲ್ಲೇ ಬಸವಣ್ಣ ಅಂತರ್ಜಾತಿಯ ವಿವಾಹವನ್ನು ಏರ್ಪಡಿಸುವುದರ ಮೂಲಕ ಹೊಸ ಸಮಾಜದ, ನವ ಮನ್ವಂತರದ ಸೃಷ್ಟಿಗೆ ಕಾರಣಕರ್ತೃರಾದರು. ಆದರೂ ಇಲ್ಲಿಯವರೆಗೂ ಅಷ್ಟೇನೂ ಹೇಳಿಕೊಳ್ಳುವಂಥ ಬದಲಾವಣೆಗಳೇನೂ ಆಗಿಲ್ಲ. ಅಂತರ್ಜಾತಿ ಮದುವೆಯಾದವರು ವಿದ್ಯೆ, ಅರ್ಹತೆ, ಜ್ಞಾನ, ಸಂಪತ್ತುಗಳಲ್ಲಿ ಎಷ್ಟೇ ಸಾಮರ್ಥ್ಯವುಳ್ಳವರಾದರೂ, ಅವರು ಇಂತಹ ಮದುವೆಯಾಗಿ ಏನೋ ಒಂದು ತಪ್ಪು ಮಾಡಿದ್ದಾರೆ ಎಂಬಂತೆ ಸಮಾಜ ಅವರನ್ನು ಕಾಕದೃಷ್ಟಿಯಿಂದ ಕಾಣುತ್ತದೆ. ಆದಷ್ಟು ಅಂಥವರಿಂದ ದೂರವಿರಲು ಪ್ರಯತ್ನಿಸುತ್ತದೆ.
ಮನದೊಳಗೆ ನಾವಿನ್ಯತೆಯ ಕಿರಣವೊಂದು ಉದಯಿಸಿದಾಗ, ಬಾಳೆಂಬುದು ಸವಿ, ಸುಖದ ಪರಿಕಲ್ಪನೆಯಾಗುತ್ತದೆ. ಅಂತಹ ಸಂದರ್ಭದಲ್ಲಿ ಬಾಳೆಲ್ಲವೂ ಚೆಲವು, ಸುಂದರ, ಸೊಗಸು ಎನಿಸುತ್ತದೆ.
ಅಂತರ್ಜಾತಿಯ ವಿವಾಹಗಳಲ್ಲಿ ಪ್ರೀತಿ ಸ್ಥಾಯಿ ಭಾವವಾಗಿದೆ. ಆತ್ಮೀಯತೆ ಕಾಯುವಿಕೆಯ ಸಂಯಮವನ್ನು, ನಿರೀಕ್ಷೆ ಬಾಳುವ ಹಂಬಲವನ್ನು ತಿಳಿಸಿಕೊಡುತ್ತದೆ. ಪ್ರಾಪ್ತ ವಯಸ್ಸಿಗೆ ಬಂದಾಗ ಪ್ರತಿ ಹೆಣ್ಣು ತನ್ನ ವಯಸ್ಸಿನ ಹುಡುಗನೊಂದಿಗೆ ಹಂಚಿಕೊಳ್ಳ ಬಹುದಾದ ವಿಷಯಗಳು ಸಾಕಷ್ಟಿರುತ್ತವೆ. ಅವರಿಬ್ಬರದು ನಿಷ್ಕಲ್ಮಶ ಮನಸ್ಸಿನ ಸ್ನೇಹವಾದರೆ ಆಪ್ತತೆ ಸ್ಫುರಿಸುತ್ತದೆ. ಹೆಣ್ಣು ತನ್ನ ಸಮಾನ ವಯಸ್ಕ ಗೆಳತಿಯೊಡನೆ ನುಡಿವ ನುಡಿಗಿಂತ, ತನ್ನ ಗೆಳೆಯನೊಂದಿಗೆ ಆಂತರ್ಯವನ್ನು ಬಿಚ್ಚಿಡುವ ಪರಿ ವಿಶಿಷ್ಟವಾದುದು.
"ಸಂಗಚ್ಛದ್ವಂ ಸಂವದಧ್ವಮ್
ಸಂ ವೋ ಮನಾಂ ಸಿ ಜಾನತಾಮ್
ದೇವಾ ಭಾಗಂ ಯಥಾಪೂರ್ವೇ
ಸಂಜನಾ ನಾ ಉಪಾಸತೆ-"ಯಜುರ್ವೇದ
ನಾವು ಜೊತೆಗೂಡಿ ನಡೆಯೋಣ. ಒಳ್ಳೆಯ ಮನಸ್ಸಿನಿಂದ ಮಾತನಾಡಿ ಒಬ್ಬರನ್ನೊಬ್ಬರು ಅರಿತುಕೊಳ್ಳೊಣ, ಸ್ನೇಹ ಪ್ರೀತಿಯೊಳಗೆ ವಿಲೀನಗೊಂಡರೆ ಅಪವಿತ್ರವಾಗಿ ಬಿಡುತ್ತದೆಂಬ ದಿಗಿಲು ಹಲವರದು. ಆದರೆ ನಿಜವಾದ ಸ್ನೇಹ ಪ್ರೀತಿಯಲ್ಲಿ ಐಕ್ಯಗೊಂಡರೆ ಸುಂದರ ಛಾಯಾಚಿತ್ರಕ್ಕೆ ಸುವರ್ಣಚೌಕಟ್ಟನ್ನು ಹಾಕಿದಂತಾಗುತ್ತದೆ.
  ಡಾ.ಕೆ. ಸೌಭಾಗ್ಯವತಿಸಹಾಯಕ ಪ್ರಾಧ್ಯಾಕರು
ಕನ್ನಡ ವಿಭಾಗ, ಯುವರಾಜ ಕಾಲೇಜು, ಮೈಸೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement