ಮೂಲೆಗೆ ಸೇರಿ ಮಜವೇ ಮಿಸ್ಸಾದಂತಿದೆ...
ಚುನಾವಣೆ ಕಾವು ಶುರುವಾಗಿದೆ. ಉಳಿದೆಲ್ಲ ಅವಧಿಯಲ್ಲಿ ಭಾರಿ ಸುದ್ದಿಯಲ್ಲಿದ್ದ ನಾನು ಇಂಥ ಪ್ರಚಾರದ ಅವಧಿಯಲ್ಲೇ ತುಸು ತೆರೆಮರೆಗೆ ಸರಿದುಬಿಟ್ಟಿದ್ದೇನೆ ಅನ್ನಿಸುತ್ತಿದೆ. ನಾನ್ಯಾರು ತಿಳೀತೇ? ನಾನ್ರೀ, ಕಾಂಗ್ರೆಸ್ನ ಪಿಂಚ್ ಹಿಟ್ಟರ್ ದಿಗ್ವಿಜಯ್ ಸಿಂಗ್!
ಹೆಂಗೆಂಗೆಲ್ಲ ಹೇಳಿಕೆ ಒಗಾಯಿಸುತ್ತಿದ್ದೆ ನಾನು ಏನ್ಕಥೆ? ಈಗ ಈ ಚುನಾವಣಾ ಪರ್ವದಲ್ಲಿ ಪೇಪರ್ಗಳನ್ನೆಲ್ಲ ತಿರಿಸಿಮುರಿಸಿ ನೋಡಿದರೂ ನನ್ನ ಮುಖ, ಹೇಳಿಕೆಗಳೆಲ್ಲ ತೀರ ಅಪರೂಪಕ್ಕೆಂಬಂತೆ ಪ್ರಕಟವಾಗುತ್ತಿವೆ ಅಂತ ಅನ್ನಿಸ್ತಿದೆ. ಇದೇನು ನನ್ನ ಎಂಟರ್ಟೈನ್ಮೆಂಟ್ ವ್ಯಾಲ್ಯೂ ಕಡಿಮೆ ಆಗಿಹೋಯ್ತಾ? ಅಥವಾ ಜನ ಕೊನೆಗೂ ಗಹನ, ವಿಷಯಾಧಾರಿತ ಚರ್ಚೆಗಳಿಗೆ ತಿರುಗಿಬಿಟ್ರಾ? 'ಆರೆಸ್ಸೆಸ್ ಕೈವಾಡವಿದೆ' ಎಂಬ ನನ್ನ ಮಾತಿನ ಮೆರಗು ಇಷ್ಟು ಬೇಗ ಬಣ್ಣ ಕಳೆದುಕೊಂಡುಬಿಟ್ಟಿತೇ?
ಈಗ ನೋಡಿ, ನನಗೆ ಆಂಧ್ರಪ್ರದೇಶದ ಜವಾಬ್ದಾರಿ ವಹಿಸಿಬಿಟ್ಟಿದ್ದಾರೆ. ಇಲ್ಲಿ ಮೊದಲೇ ಕಾಂಗ್ರೆಸ್ ರಾಜ್ಯ ವಿಭಜನೆ ಮಾಡಿದ ರೀತಿ ಸರಿಯಾ, ತಪ್ಪಾ ಅಂತೆಲ್ಲ ಚರ್ಚೆಯಾಗುತ್ತಿದೆ. ತೆಲಂಗಾಣದ ಸೃಷ್ಟಿಯಾಗುತ್ತಲೇ ಟಿಆರ್ಎಸ್ ಪಕ್ಷವನ್ನು ಕಾಂಗ್ರೆಸ್ ಜತೆ ಸೇರಿಸಿ ಬಿಡುತ್ತೇವೆ ಅಂದವರು ಈಗ ಕೈಎತ್ತಿಬಿಟ್ಟಿದ್ದಾರೆ. ನಾವೇ ಕಿತಬಿಗಳು ಅಂತಂದ್ರೆ ನಮಗೆ ಸಿಗೋರೆಲ್ಲ ನಮ್ಮನ್ನು ಮೀರಿಸೋರೆ ಆಗ್ಬೇಕೆ? ಇನ್ನು ನಮ್ಮದೇ ಪಕ್ಷದಿಂದ ಮುಖ್ಯಮಂತ್ರಿ ಆಗಿದ್ದ ಕಿರಣ್ ಕುಮಾರ್ರೆಡ್ಡಿ ಚುನಾವಣೆ ಹೊಸ್ತಿಲಲ್ಲಿ ಹೊಸಪಕ್ಷ ಅಂತ ಹೋಗಿಬಿಟ್ಟಿದ್ದಾರೆ. ದೆಹಲಿಯಲ್ಲಿ ಹಾಯಾಗಿ ಎಲ್ಲವಕ್ಕೂ ಆರೆಸ್ಸೆಸ್ಸು- ಮೋದಿ ಕಾರಣ ಅಂತ ಬಯ್ದುಕೊಂಡು ಇದ್ದವನಿಗೆ ಈಗ ಬಾಯಿ ತುರಿಕೆ ಆದರೆ ಇಂಥವರನ್ನೇ ಬಯ್ದುಕೊಂಡಿರಬೇಕಷ್ಟೆ. ಅದು ಹೆಚ್ಚಾಗಿ ಸುದ್ದಿಯೂ ಆಗುವುದಿಲ್ಲ. ಆಂಧ್ರ ಉಸ್ತುವಾರಿಯ ಸೀರಿಯಸ್ ಬಿಸಿನೆಸ್ಗೆ ಬಂದು, ಸಮ್ವೇರ್ ಐ ಲಾಸ್ಟ್ ಮೈ ಫನ್ ಯು ನೊ?
ಇವೆಲ್ಲ ಇಲ್ಲದಿದ್ದರೆ ನಾನು ದೆಹಲಿ ರಾಷ್ಟ್ರೀಯ ಮಾಧ್ಯಮದ ಮುಂದೆ ನಿಂತು, 'ಮಲೇಷ್ಯಾ ವಿಮಾನ ಕಣ್ಮರೆಯಾಗುವುದಕ್ಕೂ ಆರೆಸ್ಸೆಸ್ ಕೈವಾಡದ ಶಂಕೆ ಇದೆ' ಎಂದೆನ್ನುತ್ತಿದ್ದೆ. ಇದನ್ನು ಶ್ರದ್ಧೆಯಿಂದ ಕೇಳಿಸಿಕೊಂಡು ಬಿಜೆಪಿಗರ ಮುಂದೆ ಹೋಗಿ ಕೆಲ ಪತ್ರಕರ್ತರು, 'ದಿಗ್ವಿಜಯ್ ಹೀಗೆ ಹೇಳಿದ್ದಾರೆ, ನಿಮ್ಮ ಅಭಿಪ್ರಾಯವೇನು' ಅಂತ ಕೇಳುತ್ತಿದ್ದರು. ಮಾಡುತ್ತಿರುವ ಕೆಲಸವನ್ನೆಲ್ಲ ಬಿಟ್ಟು ಅವರು ಈ ಅಸಂಬದ್ಧವನ್ನು ವಿರೋಧಿಸುತ್ತ ಕುಳಿತುಕೊಳ್ಳ ಬೇಕಾಗಿತ್ತು. 'ನರೇಂದ್ರ ಮೋದಿ ರ್ಯಾಲಿಗಳಲ್ಲಿ ಬೊಬ್ಬಿರಿಯುವುದರ ಬದಲು ನನ್ನ ಬಳಿ ಬಂದು ಚರ್ಚೆ ಮಾಡಲಿ' ಅಂತ ಘನಗಂಭೀರವಾಗಿ ಹೇಳಿಕೆ ಒಗಾಯಿಸುತ್ತಿದ್ದೆ. ತಾಗಿದರೆ ತಾಗಲಿ. ಇಲ್ಲದಿದ್ದರೆ ನಾನು ಕಳೆದುಕೊಳ್ಳುವುದು ಏನೂ ಇಲ್ಲ. ಇಂಥ ಹಿಟ್ ಆ್ಯಂಡ್ ರನ್ಗಳಿಗೇ ಅಲ್ಲವೇ ನಾನು ಪಕ್ಷದಲ್ಲಿರುವುದು?
ಅದೇಕೆ ಇಂಥ ಫನ್ಗಳ ಬಗ್ಗೆ ಜನಕ್ಕೆ, ಮಾಧ್ಯಮಕ್ಕೆ ಕುತೂಹಲ ಕರಗಿ ಹೋಗಿದೆ ಎಂಬ ಬಗ್ಗೆ ತಲೆ ಕೆರೆದುಕೊಳ್ಳುತ್ತಿದ್ದೇನೆ. ಬಹುಶಃ ಆ ಕೇಜ್ರಿವಾಲೇ ಕಾರಣ ಇರಬಹುದಾ? ಹೊಗಳಿಕೆಗೋ, ಟೀಕೆಗೋ, ಗೇಲಿಗೋ ಒಟ್ಟಿನಲ್ಲಿ ಮಾಧ್ಯಮಕ್ಕೆ ಆಪ್ ಮತ್ತು ಕೇಜ್ರಿವಾಲರೇ ಆದ್ಯತೆಯ ವಸ್ತುವಾಗಿಬಿಟ್ಟಿದ್ದಾರೆ. ಮೋದಿಗೆ ಸವಾಲು ಹಾಕಿ ಹೇಳಿಕೆ ಒಗಾಯಿಸುವುದರಲ್ಲಿ ಈ ಹಿಂದೆ ನಾನು, ನಿತೀಶ್ ಕುಮಾರರಂಥವರೆಲ್ಲ ಮುಂಚೂಣಿಯಲ್ಲಿದ್ದೆವು. ಈಗ ಆ ಸ್ಥಾನವನ್ನು ಇಡಿ ಇಡಿಯಾಗಿ ಕೇಜ್ರಿವಾಲರ ಕ್ರೇಜೇ ಆವರಿಸಿರುವುದರಿಂದ ನಮಗೆಲ್ಲ ನೋ ಸ್ಪೇಸ್. ಅವರದ್ದು ದಿನಕ್ಕೊಂದು ಶೋ. ಮೋದಿಯಾದಿಯಾಗಿ ಎಲ್ಲರನ್ನೂ ಉಗಿದೂ ಉಗಿದೂ ಅವರ ಧ್ವನಿಯೇ ಗೊಗ್ಗರಾಗಿದೆ. ಅಂಥ ಶೋ, ಆ್ಯಕ್ಷನ್, ಧಿರಿಸು, ಹಾವಭಾವ ನಮಗೆಲ್ಲಿ ಸಾಧ್ಯ?
ಇವೆಲ್ಲದರ ನಡುವೆ ನನಗೆ ಒಂದು ಸಮಾಧಾನವಿದೆ. ಭಯಾನಕ ಪದಪುಂಜಗಳನ್ನು ಬಳಸಿ ವಿರೋಧಿಗಳನ್ನು ಹಳಿಯುವ ಕಲೆಯನ್ನು ನನ್ನ ನೆಚ್ಚಿನ ನೇತಾರ ರಾಹುಲ್ ಗಾಂಧಿ ಅವರು ರೂಢಿಸಿಕೊಳ್ಳುವ ಆಸ್ಥೆ ತೋರಿದ್ದಾರೆ. ಖುರ್ಷಿದ್ ಅವರ 'ನಪುಂಸಕ' ಹೇಳಿಕೆಯನ್ನು ರಾಹುಲ್ ವಿರೋಧಿಸಿದಾಗ ನನಗೆ ಒಳಗೊಳಗೇ ಪಿಚ್ಚೆನಿಸಿತ್ತು. ಭಾಷೆಯ ಬಳಕೆ ಸರಿಯಾಗಿರಬೇಕು ಎಂದೆಲ್ಲ ಹೇಳಿದಾಗ ದಿಗಿಲಾಗಿತ್ತು. ಆದರೆ ರಾಹುಲ್ ಗುಜರಾತ್ಗೆ ಹೋಗಿ ನರೇಂದ್ರ ಮೋದಿಯವರನ್ನು ಹಿಟ್ಲರ್ಗೆ ಹೋಲಿಸಿದಾಗ ನನಗೆ ಎಂಥ ಸಂತೋಷವಾಯಿತು ಗೊತ್ತೇ? ನಮ್ಮ ಹಾದಿಗೆ ಬರುತ್ತಿದ್ದಾರಲ್ಲ ಅಂತ! ಚುನಾವಣಾ ಕಣದಲ್ಲಿ ಶೀಘ್ರವೇ ನಾನು ಮುನ್ನೆಲೆಗೆ ಬಂದು ನನ್ನ ಎಂದಿನ ಹಿಟ್ ಆ್ಯಂಡ್ ರನ್ ಕಾಯಕದಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂಬ ಹಪಾಹಪಿ...
- ಅಶ್ವಹೃದಯ