ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಶೀರ್ಷಿಕೆಗೆ ಯಾಕಿಷ್ಟು ಸರ್ಕಸ್?

Vishwanath S
Updated On : 16 Mar 2014, 12:40 pm

ಮಸ್ತಿಷ್ಕಕ್ಕೆ ಕೆಲಸ ಕೊಡುವ ಬೈಟು ಕಾಫಿಯ ಪದಯಾತ್ರೆಯ ನಿತ್ಯ ಓದುಗಳು ಹಾಗೂ ಪದಯಾತ್ರಿ ನಾನು. ಆದರೆ ಒಂದು ಆಕ್ಷೇಪ. ಪದಯಾತ್ರಿಯ ಅಕ್ಷರ ತುಂಬಬೇಕಾದ ಮನೆಗಳಲ್ಲಿ ಸುಳಿವಿನ ಅಂಕಿಗಳೇ ಆಕ್ರಮಿಸಿ ಅಕ್ಷರ ಬರೆಯಲು ಸ್ಥಳವೇ ಇಲ್ಲದಂತಾಗಿದೆ. ಅಂಕಿಗಳನ್ನು ಸಣ್ಣದಾಗಿ ಮನೆಗಳ ಮೂಲೆಯಲ್ಲಿ ಪ್ರಕಟಿಸಬಾರದೇಕೆ?
- ಕೆ. ಲೀಲಾ ಶ್ರೀನಿವಾಸ್ , ಪಂಚವಟಿ, ಹೆಬ್ಬಾರ್ ಕಾಂಪ್ಲೆಕ್ಸ್, ಹರಪನಹಳ್ಳಿ, ದಾವಣಗೆರೆ ಜಿಲ್ಲೆ.

ಮಾ.8ರ ಕನ್ನಡಪ್ರಭದಲ್ಲಿ ಭರತನಾಟ್ಯದ ಕ್ರಿಸ್ತೀಕರಣ ಕುರಿತಾದ ಪ್ರತಾಪ್ ಸಿಂಹರ ಲೇಖನ ತುಂಬ ಮಾರ್ಮಿಕವಾಗಿತ್ತು. ಕಲಾವಿದರಿಗೆ ಎಲ್ಲಾ ಧರ್ಮಗಳು ಒಂದೇ ಎಂಬುದಾಗಿ ಡಾ. ಪವಿತ್ರಾ ಹಾಗೂ ಅವರ ಬಳಗ ಸಾಧಿಸಬಹುದು. ಆದರೆ ದುಡ್ಡಿಗಾಗಿ ಭರತನಾಟ್ಯವನ್ನು ಕ್ರಿಸ್ತೀಕರಣಗೊಳಿಸುವುದು ಡಾ. ಪವಿತ್ರಾರಂತಹ ಕಲಾವಿದೆಗೆ ಖಂಡಿತವಾಗಿಯೂ ಶೋಭಿಸುವುದಿಲ್ಲ. ಕೆಲವು ಸಮಯದ ಹಿಂದೆ, ಮೈಸೂರಿನ ಪ್ರಸಿದ್ಧ ಕ್ರಿಶ್ಚಿಯನ್ ಶಾಲೆಯೊಂದು, ತನ್ನ ಶಾಲಾ ವಾರ್ಷಿಕೋತ್ಸವಕ್ಕೆ 'ಕೃಷ್ಣಾ ನೀ ಬೇಗನೇ ಬಾರೋ' ಎಂಬ ಹಾಡನ್ನು, ಕೆಲವು ಬದಲಾವಣೆ ಮಾಡಿ, ಕ್ರಿಸ್ತಾ ನೀ ಬೇಗನೇ ಬಾರೋ ಎಂಬುದಾಗಿ ಪರಿವರ್ತಿಸಿ, ಭರತನಾಟ್ಯದ ವೇಷಭೂಷಣಗಳೊಂದಿಗೆ ಕಲಾವಿದರು ವೇದಿಕೆಯಲ್ಲಿ ನೃತ್ಯ ಮಾಡಲಾರಂಭಿಸಿದರು. ಕೆಲವೇ ಕ್ಷಣಗಳಲ್ಲಿ ನೆರೆದ ಸಭಿಕರ ಆಕ್ರೋಶ, ಪ್ರತಿಭಟನೆ ಜೋರಾದಾಗ ಹಾಡು, ನೃತ್ಯ ನಿಲ್ಲಿಸಲಾಯಿತು.
- ಜಯಶ್ರೀ ಕೆ., ಮೈಸೂರು

ದಿ. 8ರ ಶನಿವಾರದಂದು ಮಹಿಳಾ ದಿನದ ಪ್ರಯುಕ್ತ ಪ್ರಕಟವಾದ ಲೇಖನಕ್ಕೆ "ಹುಣಸೆ ಮುಪ್ಪಾದರೂ ಹುಲಿ ಮುಪ್ಪೇ?" ಎಂಬ ಈ ಶೀರ್ಷಿಕೆ ಅಷ್ಟು ಸೂಕ್ತವೆನಿಸಲಿಲ್ಲ. ಹುಣಸೆಗೂ ಹುಲಿಗೂ ಎತ್ತಣಿಂದೆತ್ತ ಸಂಬಂಧ? ಅಜ್ಜಿಯ ಹೆಸರು ಹುಲಿಯಮ್ಮ ಎಂಬ ಮಾತ್ರಕ್ಕೆ ಹುಣಸೆಗೂ ಹುಲಿಗೂ ಸಂಬಂಧ ಕಲ್ಪಿಸಿರುವುದು ಸಮಂಜಸವೇ? 90ರ ಇಳಿ ವಯಸ್ಸಿನಲ್ಲಿಯೂ ಸ್ವಾಭಿಮಾನಿ ಬದುಕು ಸಾಗಿಸುತ್ತಿರುವ ಹುಲಿಯಮ್ಮನ ಪರಿಚಯದ ಲೇಖನಕ್ಕೆ ಇನ್ನೂ ಅರ್ಥಗರ್ಭಿತವಾದ ಶೀರ್ಷಿಕೆಯನ್ನಿಡಬಹುದಲ್ಲವೇ?
- ಆರ್.ಸಿ. ಪರಶುರಾಮ್, 1ನೇ ಕ್ರಾಸ್, ಜಯನಗರ, ಶಿಕಾರಿಪುರ

"ಕನ್ನಡ (ತಿ) ಪ್ರಭ"- ಇನ್ನಾರು ನಿನಗೆ ಸಾಟಿ? ವಿಶ್ವಮಹಿಳಾ ದಿನದಂದು 8 ಮಾರ್ಚ್ 2014 ತಾವು ಪತ್ರಿಕೆಯ ಮುಖಪುಟದ ಬರಹಗಳಿಗೆ ನೀಡಿರುವ ತಲೆಬರಹಗಳು- "ಹುಣಸೇ ಮುಪ್ಪಾದರೂ ಹುಲಿ ಮುಪ್ಪೇ?" "ಕನ್ನಡತಿ ಪ್ರಭ", "ಅಮ್ಮ ಭವಾನಿ", "ಹೇಳಿ ಅಜ್ಜಿ ಏನ್ ಸುದ್ದಿ?" "ಸಿಂಪಲ್ ಸೈಕಲ್ಲಜ್ಜಿ" (ಸೈಕಾಲಜಿ ಅಲ್ಲಾ) ಒಂದಕ್ಕಿಂತ ಒಂದು ಸೂಪರ್ ತಲೆಬರಹಗಳು ವಾಹ್! ಕ.ಪ್ರ. ಮೊದಲೇ ಹೇಳಿದ್ದೇನೆ, ನಿನಗೆ ನೀನೇ ಸಾಟಿ! (ಹಾಗಂತ ಜಂಭದಿಂದ "ಸಮಾನರಾರಿಹರು" ಎಂಬ ಚಿತ್ರಗೀತೆ ಹಾಡಬೇಡ)
- ಬೆಳ್ಳಾವೆ ರಮೇಶ್, ಭುವನೇಶ್ವರಿನಗರ, ಬೆಂಗಳೂರು

ಕುಕ್ಕೆ ಸುಬ್ರಹ್ಮಣ್ಯದಿಂದ ಸಕಲೇಶಪುರಕ್ಕೆ ಎರಡೂವರೆ ತಾಸು ತಿನ್ನುತ್ತಿದ್ದ ರಸ್ತೆಯನ್ನು ಈಗ ಒಂದೇ ತಾಸಿನಲ್ಲಿ ಕ್ರಮಿಸುವಂತಾಗಿದೆ. ಒಂದೇ ಒಂದು ಗುಂಡಿ ಇಲ್ಲದ ರಸ್ತೆ ನೋಡಿ ನಿಮ್ಮನ್ನು ನೆನಪಿಸಿಕೊಂಡೆವು. ಥ್ಯಾಂಕ್ಸ್ ಮಾರಾಯ್ರೇ ರಸ್ತೆ ಸರಿ ಮಾಡಿಸಿದ್ದಕ್ಕೆ.
- ಬಿ. ಸುಮನ, ಶಿವನಗರ, ಚಳ್ಳಕೆರೆ., 99453 40544

ರವಿವಾರ ದಿ. 9.3.14ರ ಪತ್ರಿಕೆಯ ಸಂಪಾದಕೀಯ ಪುಟದಲ್ಲಿ "ನಮ್ಮ ಸಂತಸವು ಬೇರೆಯವರ ಸಂತಸದಲ್ಲಿ ಅಡಗಿದೆ. ನಾವು ಬೇರೆಯವರ ಸಂತಸವನ್ನು ಅವರಿಗೆ ಕೊಟ್ಟರೆ ನಮ್ಮ ಸಂತಸ ನಮಗೆ ಸಿಕ್ಕೇ ಸಿಗುತ್ತದೆ" ಎಂಬ ಭಾಷಣಕಾರರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೀರಿ. ಆದರೆ ಇದು ತಪ್ಪು ವಿಚಾರ ಎಂದು ಹೇಳಬಯಸುತ್ತೇನೆ. ಪ್ರತಿಯೊಬ್ಬರ ಅಂತಃಕರಣದಲ್ಲಿ ಅವರದ್ದೇ ಆದ ಸಂತೋಷ, ಆನಂದಗಳಿರುತ್ತವೆ. ಈ ಸಂತೋಷಾನಂದಗಳನ್ನು ನಮ್ಮ ದ್ವೇಷ, ಅಸೂಯೆ, ಕ್ರೋಧ, ಮತ್ಸರ, ಲೋಭ, ಕಾಮನೆಗಳ ಆವರಣವು ಮುಚ್ಚಿ ಹಾಕಿರುತ್ತದೆ. ಈ ಆವರಣವನ್ನು ತೆಗೆದು ಹಾಕಿದರೆ ನಮ್ಮ ಆನಂದ ನಮಗೇ ಉಳಿಯುತ್ತದೆ.
- ಎಸ್.ಬಿ. ಕರಾಳೆ, ಹಿಂಡಲಗಾ ರಸ್ತೆ., ಬೆಳಗಾವಿ., 934255 7677

ಮಂಗಳವಾರ ತಾ.11ರಂದು ಕ.ಪ್ರ.ದ 7ನೇ ಪುಟದಲ್ಲಿ ಪ್ರಕಟವಾದ 'ಆಮ್ ಆದ್ಮಿ ಪ್ರಶ್ನೆಗೆ ಉತ್ತರಿಸುವಿರಾ ಕೇಜ್ರಿವಾಲ್?' ಎನ್ನುವ ಲೇಖನ ಓದಿದೆ. ಕನ್ನಡಪ್ರಭ ಪತ್ರಿಕೆಯು ಮಾಹಿತಿ ಆಧಾರಿತ, ಚಿಂತನಶೀಲ ಲೇಖನಗಳನ್ನು, ಪತ್ರಗಳನ್ನು ಪ್ರಕಟಿಸಿ ದೇಶದ ವಾಸ್ತವ ಸ್ಥಿತಿಗತಿಗಳನ್ನು ವಾಚಕರ ಮುಂದಿಡುತ್ತಿದೆ. ಇದು ಅಭಿನಂದನೀಯ. ಆದರೆ ಇಂತಹ ಒಳ್ಳೆಯ ಲೇಖನಗಳು ಸಂಬಂಧಪಟ್ಟವರ ಗಮನಕ್ಕೆ ಬರದೆ ಹೋಗಬಹುದು. ಆದುದರಿಂದ ಇಂತಹ ಲೇಖನಗಳನ್ನು ಇಂಗ್ಲಿಷ್ ಮತ್ತು ಹಿಂದಿಗೆ (ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಹಿಂದಿ ಮಾತನಾಡುವುದರಿಂದ) ಅನುವಾದಿಸಿ ಸಂಬಂಧಪಟ್ಟವರಿಗೆ ಕಳುಹಿಸುವ ಯೋಜನೆಯನ್ನು ಮಾಡಬಹುದು.
- ಸಿ. ಭಾರತಿ, ಮಾರೇನಹಳ್ಳಿ, ಬೆಂಗಳೂರು ದೂ. 2658 3119

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement