ಧೂಳು ಮುಕ್ಕಲಿಹರೇ ದಿಗ್ಗಜರು?
ಭಾರತದ ಮಹಾಯುದ್ಧವೆಂದರೆ ವಿದೇಶಿ ಮಾಧ್ಯಮಗಳೂ ಬಿಟ್ಟ ಕಣ್ಣು ಬಿಟ್ಟು ಕುಳಿತಿರುತ್ತವೆ. ಇಷ್ಟು ವಿಸ್ತಾರದ
ಪ್ರದೇಶದಲ್ಲಿ, ವ್ಯಾಪಕ ಜನಸಂಖ್ಯೆಯ, ಸಕಲೆಂಟು ಜಾತಿ ಸಮೀಕರಣದ ಚುನಾವಣೆ ಎಂದರೆ ಸಹಜವಾಗಿಯೇ ಹಲವು ಆಯಾಮಗಳ ಸುದ್ದಿಭೋಜನ. ಈ ಭಾರಿ ಘಟಾನುಘಟಿಗಳಲ್ಲಿ ಬಹುತೇಕರು ಸೋಲುವ ಸಂಭವ
ಇದೆಯೇ ಅಂತ ಬ್ರಿಟನ್ನ 'ಡೈಲಿಮೇಲ್' ಹೀಗೊಂದು ವಿಶ್ಲೇಷಣೆ ನಡೆಸಿದೆ.
ದೇಶದ ಮೂಡ್ ಗಮನಿಸುತ್ತಿದ್ದರೆ ಹಲವು ಘಟಾನುಘಟಿಗಳು ಈ ಲೋಕಸಭೆ ಚುನಾವಣೆಯಲ್ಲಿ ನೆಲಕಚ್ಚುವುದರೊಂದಿಗೆ ಅವರ ರಾಜಕೀಯ ವೃತ್ತಿಯೂ ಸಮಾಪ್ತಿಯಾಗಲಿದೆಯೇನೋ.
ಕಪಿಲ್ ಸಿಬಲ್: ದೆಹಲಿಯ ಚಾಂದನಿ ಚೌಕದಿಂದ ಸ್ಪರ್ಧಿಸುತ್ತಿರುವ ಕೇಂದ್ರ ಸಚಿವ ಕಪಿಲ್ ಸಿಬಲ್ ಅವರಿಗೆ ಬಿಜೆಪಿಯ ಡಾ. ಹರ್ಷವರ್ಧನ್ ಎದುರಾಳಿಯಾಗಿದ್ದಾರೆ. ಜತೆಗೆ ದೆಹಲಿ ವಿಧಾನಸಭೆಯಲ್ಲಿ ಸಾಬೀತಾಗಿರುವ ಆಪ್ ಹವಾವನ್ನು ಮರುಕಳಿಸುವುದಕ್ಕೆ ಮಾಜಿ ಪತ್ರಕರ್ತ ಅಶುತೋಷ್ ಸಹ ಉಮೇದುವಾರರಾಗಿ ಕಣದಲ್ಲಿದ್ದಾರೆ. ಕಪಿಲ್ ಸಿಬಲ್ರಿಗೆ ಇವರಿಬ್ಬರಿಂದಲೂ ಪ್ರಬಲ ಸ್ಪರ್ಧೆ ನಿರೀಕ್ಷಿತ. ಈ ಹಿಂದಿನ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರಲ್ಲಿ ಡಾ. ಹರ್ಷವರ್ಧನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿದ್ದು ಪ್ರಮುಖ ಕಾರಣಗಳಲ್ಲೊಂದಾಗಿತ್ತು. ಪೊಲಿಯೋ ಹೋಗಲಾಡಿಸುವ ಅಭಿಯಾನದಲ್ಲಿ ಅವರು ಪಾಲ್ಗೊಂಡ ರೀತಿ, ಅವರಿಗಿರುವ ಶುದ್ಧಚಾರಿತ್ರ್ಯ, ಸಜ್ಜನಿಕೆ ಇವೆಲ್ಲವೂ ಮತದಾರರನ್ನು ಈ ಬಾರಿಯೂ ಆಕರ್ಷಿಸುವುದರಲ್ಲಿ ಸಂದೇಹವೇ ಇಲ್ಲ. ಯುಪಿಎ ಹಗರಣಗಳ ಅವಧಿ ಸಿಬಲ್ರನ್ನು ಕಾಡಲಿದೆ. ಹೀಗಾಗಿ ಈ ಹಿಂದಿನ ಅವಧಿಯಲ್ಲಿ ಬಿಜೆಪಿಯ ವಿಜಯ್ ಗೋಯಲ್ ಅವರನ್ನು ಮಣಿಸಿದಷ್ಟು ಸುಲಭದಲ್ಲಿ ಹರ್ಷವರ್ಧನ್ ಅವರನ್ನು ಎದುರಿಸಲಾಗುವುದಿಲ್ಲ. ಇನ್ನು, ಆಪ್ಗಿರುವ ಕೆಲವರ್ಗದ ಬೆಂಬಲವು ಇನ್ನೂ ಮಾಸಿಲ್ಲವಾದ್ದರಿಂದ ಆಪ್ ಅಭ್ಯರ್ಥಿ ಅಶುತೋಷ್ ಸಹ ಪ್ರಬಲ ಪೈಪೋಟಿಯನ್ನೇ ನೀಡಲಿದ್ದಾರೆ.
ಯಡಿಯೂರಪ್ಪ: ಜೆಡಿಎಸ್ನಿಂದ ಬಂಗಾರಪ್ಪನವರ ಪುತ್ರಿ ಹಾಗೂ ಖ್ಯಾತ ಚಿತ್ರನಟ ಶಿವರಾಜ್ಕುಮಾರ್ ಅವರ ಮಡದಿ ಗೀತಾ ಶಿವರಾಜ್ಕುಮಾರ್ ಸ್ಪರ್ಧಿಸಿರುವುದು ಸ್ವಕ್ಷೇತ್ರದಲ್ಲಿ ಯಡಿಯೂರಪ್ಪನವರಿಗೆ ಕಷ್ಟದ ಪರಿಸ್ಥಿತಿಯನ್ನೇ ನಿರ್ಮಿಸಿದೆ.
ಶರದ್ ಯಾದವ್: ತೃತೀಯ ರಂಗದ ಕನಸು ಹೊಸೆಯುತ್ತಿರುವವರಲ್ಲಿ ಜೆಡಿಯುನ ಶರದ್ ಪವಾರ್ ಅಗ್ರಗಣ್ಯರು. ಬಿಹಾರದ ಮಾದೇಪುರದಲ್ಲಿ ಅವರಿಗೆ ಎದುರಾಗಿರುವವರು ಆರ್ಜೆಡಿಯ ಪಪ್ಪೂ ಯಾದವ್. 'ರೋಮ್ ಹೈ ಪೋಪ್ ಕಾ. ಮಾದೇಪುರ್ ಹೈ ಗೋಪ್ ಕಾ' (ರೋಮ್ ಪೋಪ್ರಿಗೆ ಸೇರಿದ್ದಾದರೆ ಮಾದೇಪುರ ಯಾದವರದ್ದು) ಎಂಬುದು ಪ್ರಸಿದ್ಧ ಸ್ಲೋಗನ್. ಕೊಲೆ ಪ್ರಕರಣವೊಂದರಲ್ಲಿ ಸಿಲುಕಿಕೊಂಡಿದ್ದರಿಂದ ಪಪ್ಪು ಯಾದವ್ಗೆ ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಾಗಿರಲಿಲ್ಲ. 2004ರ ಚುನಾವಣೆಯಲ್ಲಿ ಮಾದೇಪುರ ಕ್ಷೇತ್ರವನ್ನು 2 ಲಕ್ಷ ಮತಗಳ ಅಂತರದಿಂದ ಗೆದ್ದ ವ್ಯಕ್ತಿ ಈ ಪಪ್ಪು ಯಾದವ್. ಹೀಗಾಗಿ ಶರದ್ ಯಾದವ್ಗೆ ಗೆಲವು ಸುಲಭದ ತುತ್ತಲ್ಲ. 1999ರಲ್ಲಿ ಕ್ಷೇತ್ರದ ಹೊರಗಿನವ ಎಂದು ಕರೆಸಿಕೊಂಡರೂ ಶರದ್ ಯಾದವ್ ಅವರು ಮಾದೇಪುರದಲ್ಲಿ ಲಾಲು ಪ್ರಸಾದ್ರಂಥ ದಿಗ್ಗಜರ ವಿರುದ್ಧ ಜಯಿಸಿದ್ದರು. ಅದನ್ನೇ ಸ್ಫೂರ್ತಿಯಾಗಿರಿಸಿಕೊಂಡು, ನಿತೀಶ್ ಸರ್ಕಾರದ ಅಭಿವೃದ್ಧಿ ಸಾಧನೆ ಪ್ರಚಾರದೊಂದಿಗೆ ದಡ ಸೇರಬೇಕಷ್ಟೆ.
ಎಸ್ ಎಸ್ ಅಹ್ಲುವಾಲಿಯಾ: ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಅಹ್ಲುವಾಲಿಯಾ ಅವರಿಗೆ ಡಾರ್ಜಿಲಿಂಗ್ ಮತಕ್ಷೇತ್ರದಲ್ಲಿ ಈಬಾರಿ ಎದುರಾಗಿದ್ದಾರೆ ಭಾರತದ ಫುಟ್ಬಾಲ್ ಧ್ರುವತಾರೆ ಬೈಚುಂಗ್ ಭುಟಿಯಾ. ಅವರು ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಬೈಚುಂಗ್ ರಾಜಕೀಯವಾಗಿ ಪಳಗಿದವರಲ್ಲ ಎಂಬುದು ಹೌದಾದರೂ ಅವರಿಗೆ ಆ ಬೆಟ್ಟ ಪ್ರದೇಶದಲ್ಲಿರುವ ಅಭಿಮಾನಿ ಸಮೂಹವನ್ನು ಕಡೆಗಣಿಸುವಂತೆಯೇ ಇಲ್ಲ. ಬೈಚುಂಗ್ಗೆ ಗೆಲವಿನ ಗೋಲ್ ಬಾರಿಸುವುದಕ್ಕೆ ಬಿಡಲಾರೆ ಎಂದು ಅಹ್ಲುವಾಲಿಯಾ ವಿಶ್ವಾಸದಿಂದಿರುವುದಕ್ಕೆ ಕಾರಣವಾಗಬಹುದಾದ ಒಂದಂಶವಿದೆ. ಗೋರ್ಖಾಲ್ಯಾಂಡ್ ಎಂಬ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸುತ್ತಿರುವ 'ಗೋರ್ಖಾ ಜನಮುಕ್ತಿ ಮೋರ್ಚಾ' ಅಹ್ಲುವಾಲಿಯಾ ಅವರನ್ನೇ ಬೆಂಬಲಿಸಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದರೆ ತಮ್ಮ ಬೇಡಿಕೆ ಬೇಗ ಈಡೇರಬಹುದೆಂಬ ನಿರೀಕ್ಷೆ ಆ ಪಕ್ಷದ್ದು.
ಪ್ರಿಯಾ ದತ್: ಮುಂಬೈ ವಾಯವ್ಯ ಕ್ಷೇತ್ರವು ದತ್ ಕುಟುಂಬದ ಮೆರುಗಲ್ಲಿ ಮಿಂದು ಬಂದಿರುವ ಪ್ರಿಯಾ ದತ್ ಅವರಿಗೇ ಆಪ್ಯಾಯ ಎಂಬಂತಿತ್ತು. ಸುನಿಲ್ ದತ್ ಎಂಬ ದೊಡ್ಡಹೆಸರಿನ ವ್ಯಕ್ತಿಯ ಮಗಳಾಗಿ ಜಯಭೇರಿ ದಾಖಲಿಸಿದ್ದ ಪ್ರಿಯಾಗೆ ಈ ಬಾರಿ ಪ್ರಮೋದ್ ಮಹಾಜನ್ ಎಂಬ ಚರಿತ್ರೆಯ ಚುಂಬಕ ವ್ಯಕ್ತಿಯ ಪುತ್ರಿ ಪೂನಂ ಮಹಾಜನ್ ಎದುರಾಗಿದ್ದಾರೆ. ಇವರಿಗೆ ಶಿವಸೇನೆ ಸಹ ತನ್ನ ಬೆಂಬಲ ಘೋಷಿಸಿದೆ. ಪ್ರಿಯಾ ದತ್ ತನ್ನ ಕ್ಷೇತ್ರವನ್ನು ನಾಜೂಕಾಗಿ ಸಲಹಿದ್ದಾರೆಂಬ ಮಾತಿದ್ದರೂ ಪೂನಂ ಅಚ್ಚರಿಯ ಫಲಿತಾಂಶಕ್ಕೆ ದಾರಿ ಮಾಡಿಕೊಡಬಹುದು.