ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಹೀಗೊಂದು ಶೂನ್ಯ ಖರ್ಚಿನ ಕೃಷಿ ಪ್ರಯೋಗ

ಗುಲ್ಬರ್ಗ ವಿಭಾಗದಲ್ಲಿ ಪ್ರತಿ ಎಕರೆ ಭೂಮಿಯಿಂದ ಸುಮಾರು 19,453 ರುಪಾಯಿ...

Mainashree
Updated On : 23 Mar 2014, 9:30 am

ಗುಲ್ಬರ್ಗ ವಿಭಾಗದಲ್ಲಿ ಪ್ರತಿ ಎಕರೆ ಭೂಮಿಯಿಂದ ಸುಮಾರು 19,453 ರುಪಾಯಿ ಆದಾಯ ಬಂದಿತೆಂಬುದು 2007-08ರ ಅಂದಾಜಿನ ಪ್ರಕಾರ ಗೊತ್ತಾಗುತ್ತದೆ. ಇದಕ್ಕೆ ರಾಜ್ಯಮಟ್ಟದ ಆದಾಯವನ್ನು ಹೋಲಿಸಿದರೆ ಪ್ರತಿ ಎಕರೆಗೆ ಸುಮಾರು 29,205 ರುಪಾಯಿ ಆಗುತ್ತದೆ. ಇದರರ್ಥ ಈ ವಿಭಾಗದಲ್ಲಿರುವ ರೈತರು ರಾಜ್ಯದ ಉಳಿದ ರೈತರ ಮಾದರಿಯಲ್ಲಿ ಕೃಷಿಯಿಂದ ಹೆಚ್ಚು ಲಾಭವನ್ನು ಪಡೆಯುತ್ತಿಲ್ಲ. ಮಾತ್ರವಲ್ಲ, ಗುಲ್ಬರ್ಗ ವಿಭಾಗದಲ್ಲಿಯೂ ಅತಿ ಕಡಿಮೆ ಸರಾಸರಿ ಆದಾಯ ಕೊಪ್ಪಳ ಜಿಲ್ಲೆಯಲ್ಲಿ( ರು. 17,620) ಮತ್ತು ಅತಿ ಹೆಚ್ಚು ಬಳ್ಳಾರಿ ಜಿಲ್ಲೆಯಲ್ಲಿ ರು. 23,680 ರವರೆಗೂ ಇತ್ತು. ಇದೇ ರೀತಿ ಕೃಷಿ ಕೂಲಿ ಕಾರ್ಮಿಕರ ಸರಾಸರಿ ಆದಾಯ ರಾಜ್ಯದಲ್ಲಿ ರು. 60,468 ಇದ್ದರೆ ಗುಲ್ಬರ್ಗ ವಿಭಾಗದಲ್ಲಿ ಕೇವಲ ರು. 42,882 ಇತ್ತು. ಈ ಅಂಕಿ ಅಂಶಗಳನ್ನು ನೋಡಿದರೆ ರೈತರ ಕಸುಬಿಗಿಂತ ಕೂಲಿ ಕಾರ್ಮಿಕರ ಕಸುಬು ವಾಸಿ ಅನಿಸುತ್ತದೆ! ಹಾಗಾಗಿ ಬಹಳಷ್ಟು ರೈತರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುವುದು ಸಾಮಾನ್ಯ. ಈ ಪರಿಸ್ಥಿತಿಗೆ ಕಾರಣಗಳೇನು ಎನ್ನುವುದನ್ನು ವಿಶ್ಲೇಷಣೆ ಮಾಡಿದಾಗ ಇದಕ್ಕೆ ಪ್ರಮುಖವಾಗಿ ನೀರಾವರಿಯ ಕೊರತೆ ಎನ್ನುವುದು ಅರ್ಥವಾಗುತ್ತದೆ. ಏಕೆಂದರೆ, ಗುಲ್ಬರ್ಗ ವಿಭಾಗದಲ್ಲಿ ಕೇವಲ ಶೇಕಡ 21 ರಷ್ಟು ಭೂಮಿಗೆ ನೀರಾವರಿ ಸೌಲಭ್ಯ ಲಭ್ಯವಿದೆ. ಆದರೆ ರಾಜ್ಯದ ಸರಾಸರಿ ಸುಮಾರು ಶೇಕಡ 30 ರಷ್ಟು ಇರುತ್ತದೆ. ನೀರಾವರಿ ಇಲ್ಲದೇ ಇರುವುದರಿಂದ ಹೆಚ್ಚು ಇಳುವರಿ ಕೊಡುವ ಮಾದರಿ ಬೀಜಗಳನ್ನು ಸ್ಥಳೀಯ ರೈತರು ಬಳಸಲು ಸಾಧ್ಯವಾಗುವುದಿಲ್ಲ. ಆದುದರಿಂದ, ಅವರ ಬೆಳೆಯ ಇಳುವರಿ ಸಹ ರಾಜ್ಯದ ಸರಾಸರಿಗಿಂತ ಕಡಿಮೆ ಇರುತ್ತದೆ. ಸಣ್ಣ ಮತ್ತು ಅತಿ ಸಣ್ಣ ರೈತರ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿರುವವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನ. 2005-06ರ ಜನಗಣತಿಯಂತೆ ವಿಭಾಗದಲ್ಲಿ ಸುಮಾರು 2,26,569 ಪರಿಶಿಷ್ಟ ಜಾತಿ ರೈತರು 3,70,659 ಎಕರೆ ಭೂಮಿಯನ್ನು ಹೊಂದಿರುತ್ತಾರೆ. ಅದೇ ರೀತಿ 1,59,002 ಪರಿಶಿಷ್ಟ ಪಂಗಡದ ರೈತರು 3,11,832 ಎಕರೆ ಭೂಮಿಯನ್ನು ಹೊಂದಿರುತ್ತಾರೆ. 2009-10 ರಲ್ಲಿ ಸುಮಾರು 69 ರೈತರು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.  ಕೃಷಿ ನಡೆಸಲು ಸಣ್ಣ ಮತ್ತು ಅತಿ ಸಣ್ಣ ರೈತರು ಸಾಲ ತೆಗೆದುಕೊಂಡಿರುತ್ತಾರೆ. ಆದರೆ ತಮ್ಮ ಉತ್ಪಾದನೆಯಿಂದ ಬಂದ ಆದಾಯದಲ್ಲಿ ಸಾಲವನ್ನು ಹಿಂತಿರುಗಿಸಲು ಸಾಧ್ಯವಾಗದೇ ಇರುವುದರಿಂದ, ಯಾವುದೇ ನೆರವು ಅಪೇಕ್ಷಿಸದೆ ಅವರು ಇಂತಹ ಗಂಭೀರ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದು ಕಟುಸತ್ಯ.  
ವ್ಯವಸಾಯವನ್ನು ಅತಿ ಲಾಭದಾಯಕವಾಗಿ ಮಾಡಲು ನಮ್ಮ ಸಮಿತಿ ವತಿಯಿಂದ ಕೆಲವು ಉಪಾಯಗಳನ್ನು ಹುಡುಕುವ ಪ್ರಯತ್ನ ನಡೆಸಿದೆವು. ಆಗ ಮಳೆ ಆಶ್ರಿತ ಪ್ರದೇಶದಲ್ಲಿ ಪ್ರತಿ ಎಕರೆಗೆ ಸರಾಸರಿ ಎಷ್ಟು ಖರ್ಚು ಬೀಳುತ್ತದೆ ಎಂದು ಲೆಕ್ಕ ಹಾಕಲಾಯಿತು. ಉದಾಹರಣೆಗೆ ಭೂಮಿಯನ್ನು ಉಳುವುದು, ಹಟ್ಟಿ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರ, ಬೀಜಗಳು, ನೀರಾವರಿ ಮುಂತಾದ ಚಟುವಟಿಕೆಗಳನ್ನು ರೈತರು ನಡೆಸಬೇಕಾದರೆ ಬಹಳಷ್ಟು ಖರ್ಚು ಆಗುತ್ತದೆ. ಮುಂದಿನ ದಿನಗಳಲ್ಲಿ ಅವರ ಭೂಮಿಯಲ್ಲಿ ಆದ ಇಳುವರಿಯನ್ನು ಸರಿಯಾಗಿ ಮಾರಾಟ ಮಾಡಿ ಕೊನೆಗೆ ಸಿಕ್ಕ ದರದಲ್ಲಿ ಬಹಳಷ್ಟು ಪಾಲು ಖರ್ಚು ನಿಭಾಯಿಸುವುದಕ್ಕೇ ಹೋಗುತ್ತದೆ.  ಹಾಗಾಗಿ ಕೃಷಿಯಿಂದ ಸಾಕಷ್ಟು ಆದಾಯ ಸಿಗುವುದಿಲ್ಲ. ಇದರಿಂದ ಬಹಳಷ್ಟು ರೈತರು ನಿರಾಶಾವಾದಿಗಳಾಗಿ ಕೃಷಿ ಕಸುಬಿನಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸುಭಾಷ್ ಪಾಲೇಕರ್ ಎಂಬ ಕೃಷಿ ತಜ್ಞರು ಪ್ರಮುಖರೆನಿಸುತ್ತಾರೆ. ಸುಭಾಷ್ ದೇಶಾದ್ಯಂತ ಶೂನ್ಯ ಖರ್ಚಿನ ಕೃಷಿ ಪದ್ಧತಿಯ ಪ್ರಚಾರದಲ್ಲಿ ನಿರತರಾಗಿದ್ದಾರೆ ಎನ್ನುವ ಸಂಗತಿ ನಮ್ಮ ಗಮನಕ್ಕೆ ಬಂದಿತು. ಕೂಡಲೇ ನಾವು ಅವರನ್ನು ಸಂಪರ್ಕಿಸಿದೆವು. ಅವರು ತಕ್ಷಣ ತಮ್ಮ ಪುಸ್ತಕವನ್ನು ಕಳುಹಿಸಿದರು ಹಾಗೂ ಕನಿಷ್ಠ ಒಂದು ಸಾವಿರ ರೈತರಿರುವ ಸಭೆಯನ್ನು ಏರ್ಪಡಿಸಿದರೆ ಅವರು ಮೂರರಿಂದ ನಾಲ್ಕು ದಿನ ತರಬೇತಿಯನ್ನು ನೀಡಲು ಬರುತ್ತೇನೆಂದು ಒಪ್ಪಿದರು.  
ಶೂನ್ಯ ಖರ್ಚು ಎಂಬುದು ಬಹಳ ಕುತೂಹಲ ಹುಟ್ಟಿಸುವಂಥ ಪದ. ಈ ಪದ್ಧತಿಯ ನಾಲ್ಕು ಚಕ್ರಗಳು ಏನೆಂದರೆ, 'ಬೀಜ ಮಿತ್ರ', 'ಜೀವ ಮಿತ್ರ', 'ಆಚಂದನ' ಮತ್ತು 'ವಾಪಹಸ'. ಸುಭಾಷ್ ಪಾಲೇಕರ್ ಅವರ ಪುಸ್ತಕವನ್ನು ಓದಿ ನಮಗೆ ಅರ್ಥವಾಗಿದ್ದು ಏನೆಂದರೆ, "ನಾವು ಹಿಂದಿನ ಕಾಲದಲ್ಲಿ ಪ್ರಚಲಿತದಲ್ಲಿದ್ದ ನೈಸರ್ಗಿಕ ಪದ್ಧತಿಯನ್ನು ಬೆಳೆ ಮತ್ತು ಹಣ್ಣುಗಳನ್ನು ಉತ್ಪಾದಿಸಲು ಪ್ರಯೋಗಿಸಿದರೆ, ಹೊರ ಮಾರುಕಟ್ಟೆಯಿಂದ ಯಾವುದೇ ಕೃಷಿ ಸಾಮಗ್ರಿಗಳನ್ನು ಖರೀದಿಸಬೇಕಾಗಿರುವುದಿಲ್ಲ.  ಅಲ್ಲದೆ, ಸುತ್ತಮುತ್ತ ಇರುವ ನೈಸರ್ಗಿಕ ಸಂಪನ್ಮೂಲಗಳನ್ನು ಸೂಕ್ಷ್ಮವಾಗಿ ಬಳಸಿ ಕೃಷಿ ಇಳುವರಿಯನ್ನು ಹೆಚ್ಚಿಸಬಹುದಾಗಿದೆ".
 ಈ ಬಗ್ಗೆ ಒಂದು ಉದಾಹರಣೆಯನ್ನೂ ಅವರು ತಮ್ಮ ಪುಸ್ತಕದಲ್ಲಿ ನೀಡಿದ್ದಾರೆ. "ನಮ್ಮ ದೇಶದ ಅರಣ್ಯಗಳಲ್ಲಿ ಯಾರಾದರೂ ನೀರಾವರಿ, ಗೊಬ್ಬರ, ಕೀಟನಾಶಕ, ಬೀಜ ಇತ್ಯಾದಿ ಹಾಕಲು ಹೋಗುತ್ತಾರಾ? ಆದಾಗ್ಯೂ, ಅರಣ್ಯಗಳಲ್ಲಿ ಹೂವು, ಹಣ್ಣು ಬಿಡುತ್ತವೆ. ಮರಗಳು ತಮ್ಮಷ್ಟಕ್ಕೆ ತಾವೇ ಬೆಳೆಯುತ್ತಾ ಹೋಗುತ್ತವೆ." ಇದು ಬಹಳ ಪ್ರಾಮಾಣಿಕ ವಿಚಾರ ಎಂದು ನಮಗೆ ಅನಿಸಿತು. ಈ ಪದ್ಧತಿಯಲ್ಲಿ ವಿಶೇಷವಾಗಿ, ದೇಸಿ ಹಸುವಿನ ಗೊಬ್ಬರವನ್ನು ಉಪಯೋಗಕ್ಕೆ ತರುವುದು ಮುಖ್ಯ.
ಸುಮಾರು 10 ಕೆಜಿ ದೇಸಿ ಗೊಬ್ಬರ ಮತ್ತು 5 ರಿಂದ 10 ಲೀಟರ್ ಹಸುವಿನ ಮೂತ್ರ ಮಿಶ್ರಣ ಮಾಡಿ 1 ಎಕರೆ ಭೂಮಿಯಲ್ಲಿ ತಿಂಗಳಲ್ಲಿ ಒಂದು ಸಲ ಹಾಕಿದರೆ ಎರೆಹುಳುಗಳು ಬೆಳೆಯಲು ಪ್ರಾರಂಭವಾಗುತ್ತವೆ. ಇವು ಭೂಮಿಯ ಒಳಗಿನ ತಮ್ಮ ಚಟುವಟಿಕೆಯಿಂದ ಮಣ್ಣನ್ನು ಉಳುಮೆ ಮಾಡುವ ಕೆಲಸವನ್ನು ಮಾಡುತ್ತವೆ. ಆದುದರಿಂದ ರೈತರಿಗೆ ಭೂಮಿಯನ್ನು ಉಳುವುದಕ್ಕೆ ಯಾವುದೇ ಖರ್ಚೂ ಬೀಳುವುದಿಲ್ಲ. ಇದರ ಜೊತೆಗೆ ಈ ಪದ್ಧತಿಯಲ್ಲಿ ಮೂರರಿಂದ ಐದು ವಿವಿಧ ಬೆಳೆಗಳ ಬೀಜಗಳನ್ನು ಬಿತ್ತನೆ ಮಾಡಲಾಗುತ್ತದೆ. ಇದರಿಂದ ಒಂದೇ ಎಕರೆ ಭೂಮಿಯಲ್ಲಿ ನಾಲ್ಕರಿಂದ ಐದು ಬೆಳೆಗಳು ಉತ್ಪಾದನೆ ಆಗುವುದರಿಂದ ರೈತರ ಆದಾಯ ಮೂರರಿಂದ ಐದು ಪಟ್ಟು ಹೆಚ್ಚಾಗುತ್ತದೆ. ನೈಸರ್ಗಿಕ ಪದ್ಧತಿಯನ್ನು ಬಳಸುವುದರಿಂದ ಯಾವುದೇ ಕೀಟ ನಾಶಕಗಳು ಅಥವಾ ರಾಸಾಯನಿಕ ಗೊಬ್ಬರಗಳನ್ನು ಖರೀದಿ ಮಾಡಬೇಕಾಗಿರುವುದಿಲ್ಲ.
ಸಮಿತಿಯಲ್ಲಿರುವ ಆರು ಜಿಲ್ಲೆಗಳ ಜಂಟಿ ನಿರ್ದೇಶಕರು, ಕೃಷಿ ಮುಖಂಡರು ಹಾಗೂ ವಿಜ್ಞಾನಿಗಳು ಈ ಪ್ರಯೋಗವನ್ನು ನಡೆಸಲು ಒಪ್ಪಿದರು. ತಕ್ಷಣವೇ ಒಂದು ತರಬೇತಿ ಶಿಬಿರವನ್ನು ಏರ್ಪಡಿಸಲು ಮೈಸೂರಿನ ಆಡಳಿತ ತರಬೇತಿ ಕೇಂದ್ರದ ಮಹಾ ನಿರ್ದೇಶಕರಿಗೆ ಪ್ರಸ್ತಾವನೆಯನ್ನು ಕಳುಹಿಸಿ, ಧನಸಹಾಯ ಮಾಡಲು ಕೋರಿದೆವು. ಅಲ್ಲದೆ, ಕೇಂದ್ರ ಸರ್ಕಾರದ ಗ್ರಾಮೀಣಾ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಾದ ಬಿ.ಕೆ. ಸಿನ್ಹಾರವರು ಯಾವಾಗಲು ಶೂನ್ಯ ಖರ್ಚಿನ ಕೃಷಿ ಪದ್ಧತಿಯಿಂದಲೇ ನಮ್ಮ ಗ್ರಾಮೀಣ ಅಭಿವೃದ್ಧಿ ಸಾಧ್ಯ ಎಂದು  ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದುದರಿಂದ ಅವರನ್ನು ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಹ್ವಾನಿಸಲಾಯಿತು.   
ಆರು ಜಿಲ್ಲೆಗಳಿಂದ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಆಯ್ಕೆ ಮಾಡಿ ಕೃಷಿ ಇಲಾಖೆ ವತಿಯಿಂದ ಈ ತರಬೇತಿಗಾಗಿ ನಿಯೋಜಿಸಲಾಯಿತು. ರೈತ ಮಹಿಳೆಯರನ್ನು ವಿಶೇಷವಾಗಿ ಈ ಶಿಬಿರಕ್ಕೆ ಆಹ್ವಾನಿಸಲಾಯಿತು.  ಹಾಗೂ ಬಂದ ಮಹಿಳೆಯರು ಆಶಿಸಿದರೆ ಅವರ ಮಕ್ಕಳಿಗಾಗಿ ಒಂದು ಸಣ್ಣ ಬಾಲವಾಡಿ ವ್ಯವಸ್ಥೆಯನ್ನು ಸಹ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚಿಸಲಾಯಿತು. ಈ ರೈತರು ಹೆಚ್ಚಾಗಿ ಭತ್ತ, ಜೋಳ, ಮೆಕ್ಕೆ ಜೋಳ, ಗೋಧಿ, ತೊಗರಿ ಬೇಳೆ, ಕಡಲೆ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದರು. ಸುಮಾರು ಒಂದು ಸಾವಿರದ ಐನೂರು ರೈತರನ್ನು ನಾಲ್ಕು ದಿವಸಕ್ಕೆ ಎಲ್ಲಿ ವಾಸ್ತವ್ಯ ಒದಗಿಸಬೇಕೆಂದು ಯೋಚಿಸಿದಾಗ ಹಳ್ಳಿಯೊಂದರಲ್ಲಿ ಒಂದು ಹೊಸ ವಸತಿ ನಿಲಯ ತಯಾರಾಗುತ್ತಿರುವುದನ್ನು ನೋಡಿದೆವು. ಇನ್ನು ಶೈಕ್ಷಣಿಕ ವರ್ಷ ಪ್ರಾರಂಭವಾಗದೇ ಇರುವುದರಿಂದ ಮಕ್ಕಳನ್ನು ಸೇರಿಸಿರಲಿಲ್ಲ. ಅಲ್ಲದೆ, ಬಹಳ ವಿಶಾಲವಾಗಿರುವ ಕಟ್ಟಡ ಹಾಗೂ ಅದರಲ್ಲಿ ಅಡುಗೆ ಕೋಣೆ, ಶೌಚಾಲಯಗಳು ಮತ್ತು ದೊಡ್ಡ ಮೈದಾನ ಮುಂತಾದ ಎಲ್ಲಾ ಸೌಲಭ್ಯಗಳು ಲಭ್ಯವಿತ್ತು. ಸ್ಥಳೀಯವಾಗಿ ಈ ವ್ಯವಸ್ಥೆಯನ್ನು ಏರ್ಪಡಿಸಲು ತೊಗರಿ ಮಂಡಳಿಯವರು ಮುಂದೆ ಬಂದರು. ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಲು ಕೋರಲಾಯಿತು. ಅವರು ಬಹಳ ಅಭಿಮಾನದಿಂದ ನಮ್ಮ ರೈತಬಂಧುಗಳನ್ನು ತಮ್ಮ ಅತಿಥಿಗಳನ್ನಾಗಿ ನೋಡಿಕೊಳ್ಳುತ್ತೇವೆಂದು ಮುಂದೆ ಬಂದರು. ಸ್ಥಳೀಯ ಮಹಿಳಾ ಸ್ವ-ಸಹಾಯ ಗುಂಪುಗಳು ಮೂರು ಸಲದ ಊಟ, ತಿಂಡಿ ವ್ಯವಸ್ಥೆಯನ್ನು ಮಾಡಲು ತುಂಬಾ ಸಂತೋಷದಿಂದ ಒಪ್ಪಿಕೊಂಡರು. ಮೈದಾನದಲ್ಲಿ ಒಂದು ದೊಡ್ಡ ಪೆಂಡಾಲನ್ನು ಹಾಕಿದೆವು. ಅದರಲ್ಲಿ ದೊಡ್ಡದೊಡ್ಡ ಟಿ.ವಿ. ಪರದೆಗಳನ್ನು ಹಾಕಲಾಯಿತು. ಉತ್ತಮ ಧ್ವನಿವರ್ಧಕ ವ್ಯವಸ್ಥೆಯನ್ನು ಮಾಡಲಾಯಿತು. ಮಾಧ್ಯಮದ ಮೂಲಕ ಹೆಚ್ಚಿನ ಪ್ರಚಾರ ನೀಡಲಾಯಿತು. ದೂರದರ್ಶನದ ವತಿಯಿಂದ ವಿಡಿಯೋ ರೆಕಾರ್ಡಿಂಗ್ ಹಾಗೂ ವಿಡಿಯೋ ಸಿ.ಡಿ.ಗಳನ್ನು ರೈತರಿಗೆ ತೋರಿಸಲು ತರಿಸಲಾಯಿತು.   
ಮುಂದಿನ ವಾರಗಳಲ್ಲಿ ಸುಭಾಷ್ ಪಾಲೇಕರ್ ಮತ್ತು ಅವರ ಕೃಷಿ ವಿಧಾನಗಳ ಪರಿಚಯ ಮಾಡಿಕೊಡುತ್ತೇನೆ.

- ಶಾಲಿನಿ ರಜನೀಶ್, ಐಎಎಸ್
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement