ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮಹಾಯುದ್ಧದ ಹೊಸ್ತಿಲಲ್ಲಿ ಭದ್ರತೆ ಚರ್ಚೆ

Mainashree
Updated On : 24 Mar 2014, 11:56 am

ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಇಂಡಿಯನ್ ಮುಜಾಹಿದೀನ್‌ನ ಉಗ್ರರು ಸೆರೆಸಿಕ್ಕಿರುವ ವಿದ್ಯಮಾನವು ಕೆಲವು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ಯಾವೆಲ್ಲ ರಾಜಕಾರಣಿಗಳು ಉಗ್ರರ ಗುರಿಯಲ್ಲಿದ್ದರು, ಪ್ರಜಾಪ್ರಭುತ್ವದ ಹಬ್ಬ ನಡೆಯುವ ಸಂದರ್ಭದಲ್ಲಿ ಎಂಥ ವಿಧ್ವಂಸಕ್ಕೆ ಯೋಜನೆ ನಡೆದಿತ್ತು ಎಂಬೆಲ್ಲ ಚರ್ಚೆಗಳು ಮುನ್ನೆಲೆಗೆ ಬಂದು, ಭದ್ರತೆಯ ಕುರಿತ ಆಯಾಮಗಳ ವಿಶ್ಲೇಷಣೆಯಾಗುತ್ತಿದೆ.
----
ಈ ಬಂಧನಗಳ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಸುಶೀಲಕುಮಾರ್ ಶಿಂದೆ ಅವರು, 'ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಹೆಚ್ಚುವರಿ ಆತಂಕವೇನೂ ಇಲ್ಲ. ಅಗತ್ಯವಿರು ಭದ್ರತೆಯನ್ನು ಈಗಾಗಲೇ ಒದಗಿಸಿದ್ದೇವೆ' ಎಂದಿದ್ದಾರೆ. ರೀಡಿಫ್ ಡಾಟ್‌ಕಾಮ್‌ನಲ್ಲಿ ವಿಕಿ ನಂಜಪ್ಪ ಅವರು ಈ ಧೋರಣೆಯನ್ನು ಪ್ರಶ್ನಿಸುತ್ತ, ಗೃಹ ಸಚಿವರು ಈ ಬಗ್ಗೆ ಮರು ವಿಚಾರ ಮಾಡಬೇಕಾದ ಅಗತ್ಯ ಇದೆ ಎಂದಿದ್ದಾರೆ. ಅವರು ಬರೆಯುತ್ತಾರೆ- 'ಗುಜರಾತ್, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸರ್ಕಾರಗಳು ತಮ್ಮಲ್ಲಿ ಸಕ್ರಿಯವಾಗಿರುವ ಇಂಡಿಯನ್ ಮುಜಾಹಿದೀನ್ ಮಾದರಿಗಳನ್ನು ಬೇಧಿಸುತ್ತಲೇ ಇವೆ. ಬಂಧಿತರಾಗಿರುವ ನಾಲ್ವರ ಪೈಕಿ ಒಬ್ಬನಾದ ವಕಾಸ್ ಅಹ್ಮದ್ ಇಂಡಿಯನ್ ಮುಜಾಹಿದೀನ್‌ನ ಮೂರನೇ ಮುಖ್ಯ ವ್ಯಕ್ತಿ ಎಂಬುದು ಜಾಹೀರಾಗಿದೆ. ಭಾರತದ ಹಲವು ಕಡೆಗಳಲ್ಲಿ ಸ್ಫೋಟ ಸಂಘಟಿಸುವ ಜವಾಬ್ದಾರಿ ಹೊತ್ತಿದ್ದ ಈತ.  2010ರಲ್ಲಿ ಪಾಕಿಸ್ತಾನದಿಂದ ವಾರಾಣಸಿಗೆ ತಲುಪಿಕೊಂಡವನು ಈ ವಕಾಸ್. ವಾರಾಣಸಿ, ದಿಲ್‌ಖುಶ್ ನಗರಗಳಲ್ಲಿ ಆದ ಸ್ಫೋಟಗಳಿಗೆ ಈತ ಯೋಜನೆ ರೂಪಿಸಿದವ ಎಂಬ ಅಂಶ ಬೆಳಕಿಗೆ ಬರುತ್ತಿದೆ. 250 ಕೆ.ಜಿ.ಯಷ್ಟು ಸ್ಫೋಟಕಗಳೊಂದಿಗೆ ಸಿಕ್ಕಿಬಿದ್ದಿರುವ ಉಗ್ರರು ರಾಜಸ್ಥಾನದಲ್ಲಿ ಹಲವು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದ ಮೋದಿಯವರನ್ನು ಗುರಿ ಮಾಡುವುದು ಇವರ ಉದ್ದೇಶವಾಗಿತ್ತು ಎನ್ನಲಾಗುತ್ತಿದೆ. ಈ ಮೊದಲು ಪಟ್ನಾದಲ್ಲಿ ಮೋದಿ ರ್ಯಾಲಿಯನ್ನು ಸ್ಫೋಟಿಸುವ ಯತ್ನದಲ್ಲಿ ಇಂಡಿಯನ್ ಮುಜಾಹಿದೀನ್ ವಿಫಲವಾಗಿತ್ತು ಎಂಬುದು ಗಮನಾರ್ಹ. ಮೋದಿಯೇ ಇಂಡಿಯನ್ ಮುಜಾಹಿದೀನ್‌ನ ಪ್ರಮುಖ ಗುರಿ ಎಂದು ಬಹಳಷ್ಟು ತನಿಖಾ ಸಂಸ್ಥೆಗಳೆಲ್ಲಿ ಹೇಳಿಯಾಗಿದೆ.'
-------
ಪತ್ರಕರ್ತ ಎಂ. ಜೆ. ಅಕ್ಬರ್ ಅವರು 'ಇಕನಾಮಿಕ್ ಟೈಮ್ಸ್‌'ನಲ್ಲಿ ತಾವು ಬಿಜೆಪಿ ಸೇರಿದ್ದೇಕೆ ಎಂದು ಬರೆಯುತ್ತ, ಭದ್ರತಾ ಆತಂಕಗಳ ನಡುವೆ ಮೋದಿ ಪ್ರಗತಿಯ ಬಗ್ಗೆ ಚಿಂತಿಸುತ್ತಿರುವುದರ ಬಗ್ಗೆ ಮೆಚ್ಚುಗೆ ನುಡಿದಿದ್ದಾರೆ. ಹಿಂದೊಮ್ಮೆ ಕಾಂಗ್ರೆಸ್ ಸಂಸದರಾಗಿದ್ದ ಅಕ್ಬರ್ ಅವರು ತಾವು ಈಗ ಬಿಜೆಪಿ ಸೇರಿರುವುದು ಏಕೆ ಎಂಬ ಬಗ್ಗೆ ಹೇಳಿರುವುದರ ಸಂಗ್ರಹ ಇದು- 'ಸಿದ್ಧತೆಗಳೊಂದಿಗೆ ಬಂದು ವೇದಿಕೆಯಲ್ಲಿ ಭಾಷಣ ಮಾಡುವ ಕಲೆಯನ್ನು ಯಾರೂ ನಿರ್ವಹಿಸಬಹುದು. ಆದರೆ ಬಿಕ್ಕಟ್ಟೊಂದಕ್ಕೆ ಆ ಕ್ಷಣದಲ್ಲಿಯೇ ಪ್ರತಿಸ್ಪಂದಿಸುವುದು ಸುಲಭದ ವಿಷಯ ಅಲ್ಲ. ಪಾಟಲಿಪುತ್ರದಲ್ಲಿ ನರೇಂದ್ರ ಮೋದಿಯವರು ರ್ಯಾಲಿಯಲ್ಲಿ ನಿರತರಾಗಿದ್ದಾಗ ಹೊರಗೆ ಸ್ಫೋಟಿಸಿದ ಬಾಂಬ್‌ಗಳು ಜನರನ್ನಷ್ಟೇ ಗುರಿಯಾಗಿರಿಸಿಕೊಂಡಿರಲಿಲ್ಲ. ಮೋದಿ ಸಹ ಅದರ ಗುರಿಯಾಗಿದ್ದರು. ಅಂಥ ಸಂದರ್ಭದಲ್ಲೂ ಮೋದಿ ಹೇಗೆ ಪ್ರತಿಕ್ರಿಯಿಸಿದರು? ಅವರು ಹಿಂದು-ಮುಸ್ಲಿಮರಿಗೆ ಕೆಲ ಕಠಿಣ ಪ್ರಶ್ನೆಗಳನ್ನು ಕೇಳಿದರು. ನಾವು ಪರಸ್ಪರ ಹೊಡೆದಾಡುವುದನ್ನು ಬಿಟ್ಟು ದೇಶಕ್ಕಾಗಿ ಶ್ರಮವಹಿಸಿದರೆ ಹೇಗೆ ಅದ್ಭುತಗಳನ್ನು ಸಾಧ್ಯವಾಗಿಸಬಹುದು ಎಂಬ ಬಗ್ಗೆ ಅವರು ಮಾತನಾಡಿದರು. ಇಲ್ಲಿಯೇ ಅವರು ಆದ್ಯತೆಗಳನ್ನು ಸ್ಪಷ್ಟವಾಗಿಸಿದರು. ದೇಶ ಮೊದಲು ಎಂಬ ಭಾವನೆ ಇದ್ದರೆ ನಾವೆಲ್ಲ ಒಂದಾಗಿ ಹದತಪ್ಪಿರುವ ಅರ್ಥವ್ಯವಸ್ಥೆಯನ್ನು ಹಳಿಗೆ ತರಬಹುದು ಎಂದು.
ಗುಜರಾತ್ ದಂಗೆಗಳ ಬಗ್ಗೆ ಎಲ್ಲ ಪತ್ರಕರ್ತರಂತೆ ನಾನೂ ಟೀಕಿಸಿದ್ದೇನೆ. ಆದರೆ ಯುಪಿಎಯ ಹತ್ತು ವರ್ಷಗಳ ಅವಧಿಯಲ್ಲಿ ಮೋದಿಯವರನ್ನು ಈ ಪ್ರಕರಣದಲ್ಲಿ ಹಣಿಯುವುದಕ್ಕೆ ಏನೆಲ್ಲ ಪ್ರಯತ್ನಗಳನ್ನು ಮಾಡಲಾಯಿತು. ಅದರಲ್ಲವರು ಯಶಸ್ವಿಯಾಗಿಲ್ಲ ಎಂಬ ಅಂಶವೇ ಸತ್ಯವನ್ನು ಅರಹುತ್ತದೆ. ರಾಜಕೀಯಕ್ಕೆ ಹೊರತಾಗಿರುವ ಸುಪ್ರೀಂಕೋರ್ಟ್ ನಿರ್ದೇಶಿತ ತನಿಖೆಯೇ ಮೋದಿ ಕೈವಾಡ ಕಾಣುವುದಕ್ಕೆ ಸಾಧ್ಯವಾಗಿಲ್ಲ. ಈ ದೇಶದಲ್ಲಿ ನಡೆದ ಇನ್ನೂ ನೂರೆಂಟು ಕೋಮುದಂಗೆಗಳಿಗೆ ನಾವಿನ್ನೂ ನ್ಯಾಯಕ್ಕಾಗಿ ಎದುರು ನೋಡುತ್ತಲೇ ಇದ್ದೇವೆ.'
-------
ರಾಜಕಾರಣಿಗಳು ಮಾಧ್ಯಮವನ್ನು ಕಟಕಟೆಯಲ್ಲಿ ನಿಲ್ಲಿಸುತ್ತಿರುವ ವಿದ್ಯಮಾನ ತೀವ್ರವಾಗಿರುವ ಸಂದರ್ಭದಲ್ಲಿ ಸಿಎನ್‌ಎನ್-ಐಬಿಎನ್ ಸಂಪಾದಕ ರಾಜ್‌ದೀಪ್ ಸರ್ದೇಸಾಯಿ ಅವರು 'ಹಿಂದುಸ್ತಾನ್ ಟೈಮ್ಸ್‌'ನ ತಮ್ಮ ಅಂಕಣದಲ್ಲಿ 'ಮಾಧ್ಯಮವು ತನ್ನೊಳಗೆ ಅಂತರ್ನೋಟವನ್ನು ಹರಿಸಿ ವಿಶ್ಲೇಷಿಸಿಕೊಳ್ಳಬೇಕಿದೆಯೇ' ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.
'2002ರ ಗುಜರಾತ್ ಗಲಭೆಯ ಕುರಿತು ನಿರಂತರ ವರದಿಗಳನ್ನು ಮಾಡಿದಾಗ ನಮ್ಮನ್ನು ಪೊಳ್ಳು ಸೆಕ್ಯುಲರ್‌ವಾದಿಗಳೆಂದು, ರಾಷ್ಟ್ರವಿರೋಧಿಗಳೆಂದು ಜರಿಯಲಾಯಿತು. ಈಗ ಮೋದಿ ರ್ಯಾಲಿಗಳನ್ನು ಯಾವುದೇ ಕತ್ತರಿ ಪ್ರಯೋಗವಿಲ್ಲದೇ ಪ್ರಸಾರ ಮಾಡುವಾಗ ನಾವು ಬಿಜೆಪಿಗೆ ಮಾರಿಕೊಂಡವರೆಂದು ದೂಷಿಸಲಾಗುತ್ತಿದೆ. ಮಾಧ್ಯಮವನ್ನು ಯುಪಿಎ2ರಂತೆ ಪರಿಶೋಧನೆಗೆ ಒಳಪಡಿಸಿದವರು ಯಾರೂ ಇಲ್ಲ. ಆದಾಗ್ಯೂ ಮಾಧ್ಯಮವು 10 ಜನಪಥದ ಏಜೆಂಟ್ ಎಂದು ಕರೆಸಿಕೊಳ್ಳುವುದು ತಪ್ಪಲಿಲ್ಲ' ಎಂಬುದು ರಾಜದೀಪ್ ಅವರ ಅಳಲು.
25 ವರ್ಷಗಳ ತಮ್ಮ ವೃತ್ತಿಯಲ್ಲಿ ಮಾಧ್ಯಮ ಪ್ರಪಂಚವು ಇಷ್ಟರಮಟ್ಟಿಗೆ ಧ್ರುವೀಕರಣವಾಗಿದ್ದನ್ನು ತಾವು ನೋಡಿರಲಿಲ್ಲ ಅಂತಾರೆ ರಾಜ್‌ದೀಪ್. ನಾನೂರು ಟಿವಿ ಚಾನೆಲ್‌ಗಳು, ಸಾವಿರಾರು ಪತ್ರಿಕೆಗಳು ಕಾರ್ಯನಿರ್ವಹಿಸುತ್ತಿರುವಾಗ ರಾಜಕೀಯ ವರ್ಗ ಸಹಜವಾಗಿಯೇ ಅವುಗಳನ್ನು ಬಳಸಿಕೊಳ್ಳುವುದಕ್ಕೆ ನೋಡುತ್ತದೆ ಎಂಬುದು ಅವರ ಅಭಿಮತ.
'ಸಂಪಾದಕರು ಸುದ್ದಿಗಳನ್ನು ನಿರ್ಮಿಸುವ, ಉದ್ದಿಮೆ ನಿರ್ವಹಿಸುವ, ಸ್ಟಾರ್‌ಗಳಂತೆ ತೋರಿಸಿಕೊಳ್ಳುವ ವ್ಯಕ್ತಿಗಳಾಗಿ ಬದಲಾಗಿರುವುದು ಸಹ್ಯವಲ್ಲ. ಓದುಗರು, ವೀಕ್ಷಕರಿಗೆ ಸಂಪಾದಕ ನಿಷ್ಠನಾಗಿರಬೇಕು' ಎಂಬುದು ಅವರ ಉಪಸಂಹಾರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement