ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಡಾ. ಡಿ.ಎಂ. ನಂಜುಂಡಪ್ಪ ವರದಿ: ಕನ್ನಡಿಯ ಗಂಟು

ರಾಜ್ಯದ ಹಿಂದುಳಿದ 114 ತಾಲ್ಲೂಕುಗಳಲ್ಲಿನ ಪ್ರಾದೇಶಿಕ ಅಸಮತೋಲನವನ್ನು ಪತ್ತೆ ಹಚ್ಚಿ...

Mainashree
Updated On : 25 Mar 2014, 9:34 am

ರಾಜ್ಯದ ಹಿಂದುಳಿದ 114 ತಾಲ್ಲೂಕುಗಳಲ್ಲಿನ ಪ್ರಾದೇಶಿಕ ಅಸಮತೋಲನವನ್ನು ಪತ್ತೆ ಹಚ್ಚಿ ಯಾವ್ಯಾವ ತಾಲ್ಲೂಕು ಯಾವ್ಯಾವ ಕ್ಷೇತ್ರದಲ್ಲಿ ಹಿಂದುಳಿದಿವೆ, ಆ ತಾಲ್ಲೂಕುಗಳಲ್ಲಿ ಯಾವ್ಯಾವ ರೀತಿಯಲ್ಲಿ ಅಭಿವೃದ್ಧಿ ಕೈಗೊಳ್ಳಬೇಕು ಎಂಬ ವಿಸ್ತೃತ ವರದಿಯನ್ನು ಡಾ. ಡಿ.ಎಂ. ನಂಜುಂಡಪ್ಪ ಸಮಿತಿ 2002ರಲ್ಲಿ ಸರ್ಕಾರಕ್ಕೆ ಸಲ್ಲಿಸಿದಾಗ ಇನ್ನೇನು ಈ ತಾಲ್ಲೂಕುಗಳ  ಬವಣೆಗಳು ನೀಗಿ ಅವುಅಭಿವೃದ್ಧಿ ಹೊಂದಿ ಕಂಗೊಳಿಸಲಿವೆ ಎಂಬ ಭಾವನೆ ಮೂಡಿಸಿತ್ತು. ಏಕೆಂದರೆ ಈ ಸಮಿತಿಯನ್ನು ರಚಿಸಿದ್ದ ಸರ್ಕಾರವೇ ಇನ್ನೂ ಅಧಿಕಾರದಲ್ಲಿತ್ತು. ಹಾಗಾಗಿ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸರ್ಕಾರ ಗಂಭೀರ ಪ್ರಯತ್ನ ನಡೆಸಲಿದೆ ಎಂಬ ವಿಶ್ವಾಸವೂ ಇತ್ತು.
2002ರ ಬಜೆಟ್‌ನಲ್ಲಿಯೇ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಪ್ರಥಮ ಕಂತು ಹಣ ಬಿಡುಗಡೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಮಿತಿಯು ಮೊದಲೇ ಮಧ್ಯಂತರ ವರದಿಯನ್ನು ನೀಡಿತ್ತಾದರೂ ಆಗಿನ ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರ ಮಾತ್ರ ಇದನ್ನು ಬಜೆಟ್‌ನಲ್ಲಿ ಸೇರಿಸಲಿಲ್ಲ. ಈ ಮೂಲಕ ಜನರ ನಂಬಿಕೆಗೆ ತಕ್ಕಂತೆ ಸರ್ಕಾರ ಕೆಲಸ ಮಾಡುವುದಿಲ್ಲ ಎಂಬುದಕ್ಕೆ ನಿದರ್ಶನವೂ ಆಯಿತು.
2004ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾದರೂ ಮತ್ತೆ ಮುಖ್ಯಮಂತ್ರಿ ಸ್ಥಾನ ಅದೇ ಪಕ್ಷಕ್ಕೆ ಲಭಿಸಿತು. ಉತ್ತರ ಕರ್ನಾಟಕ ಅದರಲ್ಲೂ ಅತಿ ಹೆಚ್ಚು ಹಿಂದುಳಿದಿರುವ ಗುಲ್ಬರ್ಗ ವಿಭಾಗದವರೇ ಆದ ಎನ್. ಧರ್ಮಸಿಂಗ್ ಮುಖ್ಯಮಂತ್ರಿಯಾದರೂ ನಂಜುಂಡಪ್ಪ ವರದಿ ಜಾರಿಗೆ ಗಮನ ಹರಿಸಲಿಲ್ಲ. ಆಗಿನ ಸಮ್ಮಿಶ್ರ ಸರ್ಕಾರದಲ್ಲಿ ಪಾಲು ಪಡೆದಿದ್ದ ಜನತಾದಳ (ಎಸ್) ಕೂಡ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ನಂತರ ಬಂದ ಜನತಾದಳ (ಎಸ್)-ಬಿಜೆಪಿ ಸಮ್ಮಿಶ್ರ ಸರ್ಕಾರ ಈ ಕಡೆ ಲಕ್ಷ್ಯ ವಹಿಸಿ ಹಣ ಬಿಡುಗಡೆಗೆ ಮುಂದಾಯಿತು. ತದ ನಂತರದ ವರ್ಷಗಳಲ್ಲೂ ಬಿಜೆಪಿ ಸರ್ಕಾರ ಹಣ ಬಿಡುಗಡೆಯನ್ನು ಘೋಷಿಸಿತು.
ಸಮಿತಿಯ ಆಶಯದಂತೆ ರಾಜ್ಯ ಸರ್ಕಾರ ಕೆಲಸ ಮಾಡಿದರೆ 2010ರ ವೇಳೆಗೆ ಪ್ರಾದೇಶಿಕ ಅಸಮತೋಲನ ನಿವಾರಣೆಯಾಗಿ ಹಿಂದುಳಿದಿದ್ದ ತಾಲ್ಲೂಕುಗಳೆಲ್ಲವೂ ನಳನಳಿಸಬೇಕಿತ್ತು. ಏಕೆಂದರೆ ಸಮಿತಿಯು ಎಂಟು ವರ್ಷಗಳಲ್ಲಿ ಒಟ್ಟು ರೂ. 16.000 ಕೋಟಿಯನ್ನು ಹೆಚ್ಚುವರಿಯಾಗಿ (ಬಜೆಟ್‌ನಲ್ಲಿ ನೀಡುವ ಹಣವನ್ನು ಹೊರತುಪಡಿಸಿ) ವಿಶೇಷ ಅಭಿವೃದ್ಧಿ ಯೋಜನೆಗೆ ಒದಗಿಸಿ, ಅಗತ್ಯ ಕೆಲಸಗಳನ್ನು ಪೂರ್ಣಗೊಳಿಸುವ ಮೂಲಕ ಅಸಮತೋಲನ ನಿವಾರಿಸಬೇಕೆಂದು ಶಿಫಾರಸು ಮಾಡಿತ್ತು. ವಿಪರ್ಯಾಸವೆಂದರೆ 2014 ಬಂದರೂ ಇನ್ನೂ ಸಮಿತಿಯ ವರದಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ. ಅಷ್ಟೇ ಏಕೆ, ಐದು ವರ್ಷಗಳಷ್ಟು ತಡವಾಗಿ 2007-08ನೇ ಸಾಲಿನಿಂದ ಮುಂದಿನ ಐದು ವರ್ಷಗಳವರೆಗೆ ಸರ್ಕಾರ ಬಿಡುಗಡೆ ಮಾಡುವುದಾಗಿ ಘೋಷಿಸಿದ ಹಣ ಕೂಡ ಪೂರ್ಣವಾಗಿ ಬಿಡುಗಡೆಯಾಗಲಿಲ್ಲ. ಜತೆಗೆ ಬಿಡುಗಡೆಯಾದ ಹಣವೂ ಸಂಪೂರ್ಣವಾಗಿ ಬಳಕೆಯಾಗಲಿಲ್ಲವೆಂಬ ಅಂಶವನ್ನು ಸೆಂಟರ್ ಫಾರ್ ಡಿಸಿಪ್ಲಿನರಿ ಡೆವಲಪ್‌ಮೆಂಟ್ ರಿಸರ್ಚ್ ಅಧ್ಯಯನ ಸ್ಪಷ್ಟಪಡಿಸುತ್ತದೆ. ನಂತರದ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ.
ಎಂಟು ವರ್ಷಗಳ ಕಾಲ ಪ್ರತಿ ವರ್ಷ ರೂ. 2000 ಕೋಟಿಯಂತೆ ಹೆಚ್ಚುವರಿಯಾಗಿ ಹಿಂದುಳಿದ ತಾಲ್ಲೂಕುಗಳ ವಿಶೇಷ ಅಭಿವೃದ್ಧಿ ಯೋಜನಗೆ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಅತ್ಯಂತ ಹಿಂದುಳಿದ 39 ತಾಲ್ಲೂಕುಗಳ ಪೈಕಿ 26 ತಾಲ್ಲೂಕುಗಳು ಉತ್ತರ ಕರ್ನಾಟಕದಲ್ಲಿವೆ. ಈ ಕಾರಣಕ್ಕಾಗಿಯೇ ಅಲ್ಲಿಗೆ, ಹೆಚ್ಚಿನ ಅನುದಾನ ಸಲ್ಲುವುದು ನ್ಯಾಯ. ಇದನ್ನು ನಂಜುಂಡಪ್ಪ ಸಮಿತಿ ಸ್ಪಷ್ಟವಾಗಿ ಗುರುತಿಸಿದ್ದು ಉತ್ತರ ಕರ್ನಾಟಕಕ್ಕೆ (ಗುಲ್ಬರ್ಗ ಮತ್ತು ಬೆಳಗಾವಿ ವಿಭಾಗ) ಶೇ. 60ರಷ್ಟು ಅನುದಾನ ಕೊಡಬೇಕು ಎಂದು ಹೇಳಿದೆ. ಆದರೆ ಹೆಚ್ಚಿನ ಹಣ ಉತ್ತರ ಕರ್ನಾಟಕಕ್ಕೆ ಹೋಗುತ್ತದೆ ಎನ್ನುವ (ಒಳ) ಕಾರಣವೇ ವರದಿ ಅನುಷ್ಠಾನಕ್ಕೆ ದೊಡ್ಡ ಅಡ್ಡಿ ಆಗಿದ್ದರೆ ಸಮಗ್ರ ಕರ್ನಾಟಕದ ಅಭಿವೃದ್ಧಿ ಎನ್ನುವುದು ಕನ್ನಡಿಯೊಳಗಿನ ಗಂಟಾಗಿಯೇ ಉಳಿಯುತ್ತದೆ ಅಷ್ಟೇ.
ತೀರಾ ಹಿಂದುಳಿದ ಉತ್ತರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಈ ವರದಿ ಒಂದು ನೀಲನಕ್ಷೆಯೇ ಸರಿ. ಈ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುವವರೆಗೂ ಪ್ರಾದೇಶಿಕ ಅಸಮತೋಲನದ ಕೂಗು ಕೇವಲ ಭಾವನಾತ್ಮಕ ಸಂಗತಿಯಾಗಿತ್ತು. ನಂಜುಂಡಪ್ಪ ಸಮಿತಿ ಅದಕ್ಕೆ ರಕ್ತ-ಮಾಂಸ ತುಂಬಿ ಜೀವ ಕೊಟ್ಟಿತು. ಈಗ ನೀಲನಕ್ಷೆ ಕೈಯಲ್ಲಿದ್ದರೂ ಹೇಗೆ, ಯಾವ್ಯಾವ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಬೇಕು ಎಂಬುದು ಸ್ಪಷ್ಟವಾಗಿದ್ದರೂ ಸರ್ಕಾರ ಸಮರ್ಪಕವಾಗಿ ಅನುದಾನ  ಒದಗಿಸುತ್ತಿಲ್ಲ. ಹಾಗಾಗಿ ಅನುಷ್ಠಾನ ತೃಪ್ತಿಕರವಾಗಿಲ್ಲ.
ಆದರೆ ನಂಜುಂಡಪ್ಪ ಸಮಿತಿ ವರದಿಯ ಅನುಷ್ಠಾನಕ್ಕೆ ಏಕೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಈ ಬಗ್ಗೆ ಯಾರೂ ಕೇಳುತ್ತಿಲ್ಲ. ಬಿಡುಗಡೆ ಆದ ಹಣವೂ ನಿರ್ದಿಷ್ಟ ಉದ್ದೇಶಕ್ಕೆ ಬಳಕೆಯಾಗಿದೆಯೇ ಎಂಬುದನ್ನು ಯಾರೂ ಪರಿಶೀಲಿಸುತ್ತಿಲ್ಲ. ಹಿಂದೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶಶಿಲ್ ನಮೋಶಿ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿಯನ್ನು ರಚಿಸಿದ್ದರು. ಈ ಸಮಿತಿ ಕೆಲವು ಸಭೆಗಳನ್ನು ನಡೆಸಿ ಅಭಿವೃದ್ಧಿ ಬಗ್ಗೆ ಪರಿಶೀಲಿಸಿತ್ತು. ಆದರೆ ಸರ್ಕಾರ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದ ಹಣ ವಿಶೇಷ ಅಭಿವೃದ್ಧಿ ಯೋಜನೆಗೆ ಬಿಡುಗಡೆಯಾಗದಿದ್ದಾಗ ಒತ್ತಡ ಹೇರುವ ಕೆಲಸವಾಗಲಿಲ್ಲ.
     ಹೋಗಲಿ, ಸರ್ಕಾರವೇ ನಂಜುಂಡಪ್ಪ ವರದಿ ಜಾರಿಗೆ ನಿಜವಾಗಲೂ ಆಸಕ್ತಿ ತೋರಿದ್ದರೆ ಆಯಾ ಜಿಲ್ಲಾ ಪಂಚಾಯ್ತಿ ಅಥವಾ ತಾಲ್ಲೂಕು ಪಂಚಾಯ್ತಿಗಳಿಂದ ಶಿಫಾರಸು ಆಧರಿಸಿ ಕ್ರಿಯಾ ಯೋಜನೆ ರೂಪಿಸಲು ಅದನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲು ಮುಂದಾಗಬಹುದಿತ್ತು. ಆ ಮೂಲಕ ನಿರ್ದಿಷ್ಟ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪರಿಪೂರ್ಣಗೊಳಿಸಲೂ ಸಾಧ್ಯವಿತ್ತು. ವಿಶೇಷ ಅಭಿವೃದ್ಧಿ ಯೋಜನೆಯ ಅನುಷ್ಠಾನದ ವೇಗವನ್ನು ನೋಡಿದರೆ ಸರ್ಕಾರಕ್ಕೂ ಈ ಬಗ್ಗೆ ಆಸಕ್ತಿ ಇಲ್ಲ ಎನಿಸುತ್ತದೆ.
ಹಳೆ ಮೈಸೂರು ಪ್ರಾಂತ್ಯಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕ, ಮುಂಬಯಿ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಜಿಲ್ಲೆಗಳು ಅತ್ಯಂತ ಹಿಂದುಳಿದಿವೆ. ಉತ್ತರ ಕರ್ನಾಟಕಕ್ಕೆ ರಾಜಧಾನಿ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಮಾರ್ಗವಾದ ರಾಷ್ಟ್ರೀಯ ಹೆದ್ದಾರಿ 13 ಕಳೆದ ವರ್ಷಗಳಿಂದ ದುರಸ್ಥಿಯಾಗಿಲ್ಲ. ಎಲ್ಲಾ ಕ್ಷೇತ್ರ ಗಳಲ್ಲೂ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ. ಇದಕ್ಕೆ ಪ್ರತ್ಯೇಕ ರಾಜ್ಯ ರಚನೆಯೇ ಮದ್ದು ಎಂದು ಹೇಳಬೇಕಾಗುತ್ತದೆ.
ರಾಜಧಾನಿ ಬೆಂಗಳೂರು ಉತ್ತರ ಕರ್ನಾಟಕ ಜಿಲ್ಲೆಗಳಿಂದ ಕನಿಷ್ಠ 450 ಕಿಮಿ.ನಿಂದ ಗರಿಷ್ಠ 750 ಕಿಮಿ. ದೂರದಲ್ಲಿದೆ. ಆಧುನಿಕ ಯುಗದಲ್ಲೂ ಈ ಜಿಲ್ಲೆಗಳಿಂದ ಬೆಂಗಳೂರಿಗೆ ತಲುಪಲು ಕನಿಷ್ಠ 10ರಿಂದ 20 ಗಂಟೆ ಬೇಕಾಗುತ್ತಿದೆ. ಯಾವುದೇ ಸಮಸ್ಯೆ ಎದುರಾದಲ್ಲಿ ಪ್ರಯಾಣದ ವೇಳೆ ಇನ್ನೂ ಹೆಚ್ಚಾಗುತ್ತಿದೆ. ಜನಸಾಮಾನ್ಯರು ತಮ್ಮ ಕೆಲಸಗಳಿಗಾಗಿ ರಾಜಧಾನಿಗೆ ತಲುಪುವುದು ಸಾಧ್ಯವಾಗುತ್ತಲೇ ಇಲ್ಲ. ರಾಜಧಾನಿ ಬೆಂಗಳೂರು ಅಭಿವೃದ್ಧಿಗೆ ಮಾತ್ರ ಒತ್ತು ನೀಡುವ ಸರ್ಕಾರಗಳು ಉತ್ತರ ಕರ್ನಾಟಕದ ಜಿಲ್ಲೆಗಳನ್ನು ಕಡೆಗಣಿಸಿವೆ.
ನಂಜುಂಡಪ್ಪ ಸಮಿತಿ ವರದಿ ಸಲ್ಲಿಸಿ 12 ವರ್ಷಗಳಾಗಿವೆ. ವರದಿ ಸಿದ್ಧಪಡಿಸಿದ ಸಂದರ್ಭದಲ್ಲಿನ ದರಗಳನ್ನು ಆಧರಿಸಿ ಸಮಿತಿಯು ವಿವಿಧ ವಿಶೇಷ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ನಿಗದಿಪಡಿಸಿದ್ದ ಹಣ ಈಗ ಬಹುತೇಕ ದುಪ್ಪಟ್ಟು ಆಗಿದೆ. ವರದಿ ಆಧರಿಸಿ ಹಣ ಬಿಡುಗಡೆ ಮಾಡಿದರೆ ಈಗ ಅದು ಯಾವುದಕ್ಕೂ ಸಾಲದು. ಹಿಂದುಳಿದ ತಾಲ್ಲೂಕುಗಳ ಬಗ್ಗೆ ಸರ್ಕಾರಕ್ಕೆ ನಿಜವಾದ ಕಳಕಳಿ ಇದ್ದರೆ ನಂಜುಂಡಪ್ಪ ಸಮಿತಿ ನೀಡಿರುವ ಖರ್ಚು-ವೆಚ್ಚ ಪರಿಷ್ಕೃತವಾಗಬೇಕು. ಅಷ್ಟಕ್ಕೂ ಈ ವಿಶೇಷ ಅನುದಾನ ಎನ್ನುವುದು ಕೇವಲ ತಾರತಮ್ಯ ನಿವಾರಣೆಗಾಗಿ ಹಿಂದುಳಿದ ತಾಲ್ಲೂಕುಗಳು ಚೇತರಿಸಿಕೊಳ್ಳಲಿಕ್ಕಾಗಿ ಕೊಡುವ ಒಂದು ಸಣ್ಣ ಬಲವಷ್ಟೆ.
ಆ ಬಲವು ಆದು ದಶಕಕ್ಕೂ ಹೆಚ್ಚು ಕಾಲ ಹಿಂದುಳಿದವರು ಎನ್ನುವ ಹಣೆಪಟ್ಟಿ ಕಟ್ಟಿಕೊಂಡವರ ನೋವನ್ನು ಶಮನ ಮಾಡುವ ಸಣ್ಣ ಪ್ರಯತ್ನ. ಹಾಗಾಗಿ ಸರ್ಕಾರ ನಿಗದಿತ ಯೋಜನೆಯ ಅನುಷ್ಠಾನಕ್ಕೆಂದೇ ಹಣವನ್ನು ಬಿಡುಗಡೆ ಮಾಡಬೇಕು. ಆಗ ಮಾತ್ರ ಹಿಂದುಳಿದ ತಾಲ್ಲೂಕುಗಳ ಹಣೆಪಟ್ಟಿಯನ್ನು ಕಿತ್ತು ಹಾಕಿ ಇತರೆ ಅಭಿವೃದ್ಧಿ ಹೊಂದಿದ ತಾಲ್ಲೂಕುಗಳ ಮಟ್ಟಕ್ಕೆ ಏರಲೂ ಸಾಧ್ಯವಾಗುತ್ತದೆ. ಕನಿಷ್ಠ ಆ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಬೇಕು.


- ಎಸ್.ಎಸ್. ಹೂಗಾರ
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement