ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕಲಾ ವಿಭಾಗದ ಜೀರ್ಣೋದ್ಧಾರ ಆಗಲೇಬೇಕು

ಇಬ್ರಾಹಿಂ ಅಲ್ಕಾಜಿ, ಭಾರತೀಯ ರಂಗಭೂಮಿಯ ಭೀಷ್ಮ ಎಂದೇ ಕರೆಯಲ್ಪಡುವ ರಂಗ ಜಂಗಮ. ಬಿ.ವಿ. ಕಾರಂತರ ಗುರು. ...

Rashmi Kasaragodu
Updated On : 30 Mar 2014, 12:31 pm

ಇಬ್ರಾಹಿಂ ಅಲ್ಕಾಜಿ, ಭಾರತೀಯ ರಂಗಭೂಮಿಯ ಭೀಷ್ಮ ಎಂದೇ ಕರೆಯಲ್ಪಡುವ ರಂಗ ಜಂಗಮ. ಬಿ.ವಿ. ಕಾರಂತರ ಗುರು. ಭಾರತೀಯ ಸಿನಿಮಾ ರಂಗಕ್ಕೆ ನಾಸಿರುದ್ದೀನ್ ಷಾ, ಅನುಪಮ್ ಖೇರ್, ಓಂಪುರಿ ಮುಂತಾದ ಅದ್ಭುತ ನಟರನ್ನು ನೀಡಿದ ರಾಷ್ಟ್ರೀಯ ನಾಟಕ ಶಾಲೆಯ (ಎನ್‌ಎಸ್‌ಡಿ) ಸಂಸ್ಥಾಪಕರು. ಅಭಿನಯ ಕಲಿಯಲು ಬರುವವರು ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಅಭ್ಯಾಸ ಮಾಡಬೇಕು. ನೆಲ ಅಗೆದು ಸ್ಟೇಜ್ ಕಟ್ಟಬೇಕು ಎಂದು ನಿಯಮ ಮಾಡಿದವರು. ಇಂತಹ ಅಲ್ಕಾಜಿಯವರನ್ನು ನಾಲ್ಕಾರು ವರ್ಷಗಳ ಹಿಂದೆ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಲಾಗಿತ್ತು. "ಬಿ.ವಿ. ಕಾರಂತರಂತಹ ನಿರ್ದೇಶಕರು ಈಗ ಇಲ್ಲ, ಕಲಾವಿದರಲ್ಲಿ ಶಿಸ್ತಿಲ್ಲ, ಸಿನಿಮಾ- ಧಾರಾವಾಹಿ ಬಂದು ಎಲ್ಲ ಹಾಳಾಯಿತು..." ಮುಂತಾದ ಮಾತುಗಳನ್ನು ಅವರಿಂದ ನೀರಿಕ್ಷಿಸಲಾಗಿತ್ತು. ಆದರೆ ಅವರು ಹೇಳಿದ್ದೇನು ಗೊತ್ತೇ?
"ಎನ್‌ಎಸ್‌ಡಿಯಲ್ಲಿ ನಾಟಕದ ಜೊತೆಯಲ್ಲಿ ಸಿನಿಮಾ, ಧಾರಾವಾಹಿಯ ಅಭಿನಯವನ್ನೂ ಕಲಿಸಿ. ಕೇವಲ ರಂಗಭೂಮಿ ಎಂದರೆ ಬದುಕುವುದೂ ಕಷ್ಟವಾಗುತ್ತದೆ. ಜಗತ್ತಿನ ಯಾವ ಭಾಗದಲ್ಲೂ ಕೇವಲ ನಾಟಕದ ಅಭಿನಯದಿಂದ ಬದುಕುವುದು ಕಷ್ಟವೇ" ಎಂದರು.
ಇದಕ್ಕೆ ಪ್ರಾಕ್ಟಿಕಲ್ ಆಗಿ ವಿಚಾರ ಮಾಡುವುದು ಎನ್ನಲಾಗುತ್ತದೆ. ಇದು ಅನಂತಮೂರ್ತಿಯವರ ಸೂರ್ಯನ ಕುದುರೆ ಕಥೆಯಲ್ಲಿ ಹೇಳಿರುವ ಮೆನ್ಯುಪಿಲೇಶನ್ ಅಲ್ಲ. ಹೊಟ್ಟೆ ಪಾಡಿಗಾಗಿ ಆದರ್ಶ ಬಲಿ ಕೊಡುವುದಲ್ಲ. ಶ್ರೇಷ್ಠತೆಯ ಜೊತೆಗಿನ ಕಾಂಪ್ರಮೈಸ್ ಅಲ್ಲ. ಕಾಲದ ಅಗತ್ಯಕ್ಕೆ ತಕ್ಕುದಾಗಿ ಕುಣಿಯುವುದಲ್ಲ. ಇಬ್ರಾಹಿಂ ಅಲ್ಕಾಜಿಯವರು ಹೇಳಿದ್ದು ಶ್ರೇಷ್ಠತೆಯನ್ನು ಉಳಿಸಿಕೊಂಡೇ ಕಾಲಕ್ಕೆ ಹೊಂದುಕೊಳ್ಳುವ ಕ್ರಮ. ಅಪ್‌ಡೇಟ್ ಆಗುವ ಕ್ರಮ ಅರ್ಥಾತ್ ಅಭಿನಯ ಕಲಿಯುವಿಕೆಯಲ್ಲಿನ ಜೀರ್ಣೋದ್ಧಾರ.
ಇಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಈ ರೀತಿಯ ಜೀರ್ಣೋದ್ಧಾರದ ಅಗತ್ಯ ಇದೆ. ಇಂತಹ ಜೀರ್ಣೋದ್ಧಾರ ಇಲ್ಲದಿದ್ದರೆ ಆಯಾ ಕ್ಷೇತ್ರಗಳೇ ಮುಳುಗುತ್ತವೆ. ನಮಗೆ ಇಂದು ಬೇಕಾಗಿರುವುದು ಶ್ರೇಷ್ಠತೆ ಬಿಡದೆ ಜೀರ್ಣೋದ್ಧಾರ. ಅಂತಹ ಅಗತ್ಯ ಈಗ ತುರ್ತಾಗಿ ಬೇಕಾಗಿರುವುದು ಶೈಕ್ಷಣಿಕ ಕ್ಷೇತ್ರದಲ್ಲಿ ಕಲಾ ವಿಭಾಗಕ್ಕೆ. ವಿಶೇಷವಾಗಿ ಬಿ.ಎ ಕೋರ್ಸ್‌ಗೆ. ಈಗ ಬಹುತೇಕ ಎಲ್ಲ ಕಾಲೇಜುಗಳಲ್ಲಿ ಬಿಎ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 150-200ರಿಂದ 20-30ಕ್ಕೆ ಕುಸಿದಿದೆ. ಆದ್ದರಿಂದ ಕಲಾ ವಿಭಾಗಕ್ಕೆ ವಿದ್ಯಾರ್ಥಿಗಳು ಬರುತ್ತಿಲ್ಲ ಎಂಬ ಕೂಗು ಎದ್ದಿದೆ. ಅದು ಸತ್ಯ ಅಲ್ಲ. ಮುಂಚೆ ಬಿಎಗೆ ನೂರಾರು ವಿದ್ಯಾರ್ಥಿಗಳು ಸೇರುತ್ತಿದ್ದರು. ಆದ್ದರಿಂದ ಈಗ ಕಡಿಮೆ ಅನಿಸುತ್ತಿದೆ ಅಷ್ಟೆ. ಬಿ.ಎಸ್ಸಿ ಇನ್ ಎಫ್.ಎನ್.ಡಿ, ಬಿ.ಎಸ್.ಡ್ಲ್ಯೂ ಮುಂತಾದ ಕೋರ್ಸ್‌ಗಳಿಗೆ ಮುಂಚಿನಿಂದಲೂ 20-30 ಸಂಖ್ಯೆಯ ವಿದ್ಯಾರ್ಥಿಗಳಿರುತ್ತಿದ್ದರು. ಆದ್ದರಿಂದ ಈಗ ಅವುಗಳಿಗೆ ವಿದ್ಯಾರ್ಥಿಗಳ ಕೊರತೆ ಇದೆ ಅನಿಸುವುದೇ ಇಲ್ಲ. ಆದರೆ ಬಿಎ ಕೋರ್ಸ್‌ಗೆ ಮುಂಚೆ ನೂರಾರು ವಿದ್ಯಾರ್ಥಿಗಳು ಸೇರುತ್ತಿದ್ದರು. ಆದ್ದರಿಂದ ಈಗ ಕಡಿಮೆ ಅನಿಸುತ್ತಿದೆ. ಕಲಾ ವಿಭಾಗಕ್ಕೆ ಮುಂಚಿನ ಹಾಗೆ ನೂರಾರು ವಿದ್ಯಾರ್ಥಿಗಳು ಬರಬೇಕು ಎಂದಾದರೆ ಜೀರ್ಣೋದ್ಧಾರವಾಗಲೇಬೇಕು. ಅಭಿನಯವೇ ಆಗಲಿ ಬಿ.ಎ ಕೋರ್ಸ್ ಆಗಲಿ ಅದರಿಂದ ಉದ್ಯೋಗಾವಕಾಶ ಹುಟ್ಟುವುದಿಲ್ಲ ಎಂದಾದರೆ ಅದನ್ನು ಕಲಿಯುವವರ ಸಂಖ್ಯೆಯೂ ಕಡಿಮೆ ಆಗುತ್ತದೆ. ಅದು ಅಲ್ಕಾಜಿಯವರ ಮಾತುಗಳಲ್ಲೂ ಸ್ಪಷ್ಟವಾಗಿದೆ.
ಇಂದು ಬಿಎಗೆ ಸೇರಿದರೆ ಯಾವ ಉದ್ಯೋಗವಕಾಶಗಳಿವೆ ಎಂದು ಸ್ಪಷ್ಟವಾಗಿ ತಿಳಿಸಬೇಕಾಗಿದೆ. ಆ ಜವಾಬ್ದಾರಿಯನ್ನು ಕಾಲೇಜಿನ ಕಲಾ ವಿಭಾಗದ ಉಪನ್ಯಾಸಕರು, ಪ್ರಾಂಶುಪಾಲರು, ಆಡಳಿತ ವರ್ಗ ಮಾಡಬೇಕಾಗಿದೆ. ಉದಾಹರಣೆಗೆ ಪಿಡಿಓ, ಗ್ರಾಮ ಲೆಕ್ಕಿಗ, ನಾಗರಿಕ ಸೇವಾ ಇಲಾಖೆಗಳಲ್ಲಿ ಉದ್ಯೋಗ ಪಡೆಯುವ ಬಹುತೇಕರು ಬಿಎ, ಎಂಎ ಕಲಿತವರೇ. ಆದರೆ ಅದನ್ನು ನಾವು ವಿದ್ಯಾರ್ಥಿಗಳಿಗೆ ಸರಿಯಾಗಿ ತಿಳಿಸಲೇ ಇಲ್ಲ. ಎಲ್‌ಎಲ್‌ಬಿಯಂಥ ಕೋರ್ಸ್‌ಗಳಲ್ಲಿ ಕಲಾ ವಿಭಾಗದವರಿಗೆ ಹೆಚ್ಚಿನ ಸಾಧ್ಯತೆ ಇವೆ. ಇಂದು ದೇಶದಾದ್ಯಂತ ಸಮೀಕ್ಷೆ ಮಾಡಿದರೆ 'ನಾನು ಲಾ ಕಲಿತು ನ್ಯಾಯಾಧೀಶನಾಗಲು ಇಚ್ಚಿಸುತ್ತೇನೆ' ಎನ್ನುವ ವಿದ್ಯಾರ್ಥಿಗಳ ಸಂಖ್ಯೆ ಶೇ.5 ಕೂಡ ಇರಲಾರದು. ಅವರಿಗೆಲ್ಲ ಈಗ ಓದುತ್ತಿರುವ ಬಿ.ಎ. ಕೋರ್ಸ್ ನ್ಯಾಯಾಧೀಶನ ಹುದ್ದೆಗೆ ಮೊದಲ ಹೆಜ್ಜೆ ಅನ್ನಿಸುವುದೇ ಇಲ್ಲ.
ಕಲಾ ವಿಭಾಗವನ್ನು ಜಾಬ್ ಓರಿಯೆಂಟೆಡ್ ಕೋರ್ಸ್ ಮಾಡಲು ಸಾಧ್ಯವಿಲ್ಲ. ಆದರೆ ಇರುವ ಅವಕಾಶಗಳನ್ನು ತಿಳಿಸಿದರೆ ವಿದ್ಯಾರ್ಥಿಗಳಿಗೂ ಅನುಕೂಲ ಆಗುತ್ತದೆ. ವಿಭಾಗವೂ ಬೆಳೆಯುತ್ತದೆ.
ಬಹುಮುಖ್ಯವಾಗಿ ಪಠ್ಯಕ್ರಮವನ್ನು ಅಪ್‌ಡೆಟ್ ಮಾಡಲಾಗುತ್ತಿಲ್ಲ. ಉದಾಹರಣೆಗೆ ಇತ್ತೀಚಿನ ದಿನಗಳಲ್ಲಿ ಕೋಲಾಹಲ ಎಬ್ಬಿಸಿದ ಮಾಹಿತಿ ಹಕ್ಕು ಕಾಯ್ದೆ ಬಹುತೇಕ ರಾಜ್ಯಶಾಸ್ತ್ರದ ಪಠ್ಯದಲ್ಲಿ ಇಲ್ಲ. ಪ್ಲೇಟೊ, ಅರಿಸ್ಟಾಟಲ್ ಮುಂತಾದವರ ಬಗ್ಗೆ ಅಧ್ಯಯನ ಮಾಡಿದರೆ ಬುಡ ಗಟ್ಟಿ ಆಗುತ್ತದೆ, ಸತ್ಯ. ಆದರೆ ಕೇವಲ ಬುಡ ಇಟ್ಟುಕೊಂಡು ಏನು ಮಾಡುವುದು? ಮಾಹಿತಿ ಹಕ್ಕು ಕಾಯ್ದೆ, ಲೋಕಪಾಲ್ ಮಸೂದೆಯಂಥ ಇತ್ತೀಚಿನ ಬೆಳವಣಿಗೆಗಳು ರಾಜ್ಯಶಾಸ್ತ್ರದ ಪಠ್ಯದಲ್ಲಿ ಸೇರಬೇಕು. ಅಂತೆಯೇ ಲಿವ್ ಇನ್ ರಿಲೇಶನ್ ಬಗ್ಗೆ, ಸಲಿಂಗ ಕಾಮದ ಬಗ್ಗೆ ಸಮಾಜಶಾಸ್ತ್ರದ ಪಠ್ಯದಲ್ಲಿ ಸ್ಪಷ್ಟವಾದ ಮಾಹಿತಿ ಇರಬೇಕು. ಆಗ ಕಲಾ ವಿಭಾಗದ ವಿದ್ಯಾರ್ಥಿಗಳು ಬೌದ್ಧಿಕವಾಗಿ ಇನ್ನಷ್ಟು ಬೆಳೆಯುತ್ತಾರೆ, ಅಪಡೇಟ್ ಆಗುತ್ತಾರೆ. ಕಳೆದ ಐದಾರು ವರ್ಷಗಳಲ್ಲಿ ಪಿಡಿಓ, ನಾಗರಿಕ ಸೇವಾ ಪರೀಕ್ಷೆ, ಪಿಎಸ್‌ಐ ಹುದ್ದೆಗಾಗಿ ನಡೆದ ಪರೀಕ್ಷೆ ಮುಂತಾದ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳನ್ನೇ ಇಟ್ಟುಕೊಂಡು ಪಠ್ಯಕ್ರಮ ತಯಾರಿಸಿದರೆ ಕಲಾ ವಿಭಾಗ ಆಯ್ದುಕೊಂಡವರು ಸುಲಭವಾಗಿ ಪಾಸಾಗುತ್ತಾರೆ. ಉದ್ಯೋಗಾವಕಾಶ ಹೆಚ್ಚಾಗುತ್ತದೆ. ಪರಿಣಾಮ ವಿದ್ಯಾರ್ಥಿಗಳು ಹೆಚ್ಚಾಗಿ ಕಲಾ ವಿಭಾಗಕ್ಕೆ ಬರುತ್ತಾರೆ.
ನೆನಪಿರಲಿ ಪತ್ರಿಕೋದ್ಯಮ ಕೋರ್ಸ್‌ಗಳಿಗೆ ಹೆಚ್ಚು ವಿದ್ಯಾರ್ಥಿಗಳು ಬರಲು ಪ್ರಾರಂಭವಾಗಿದ್ದು ಆ ಕ್ಷೇತ್ರದಲ್ಲಿ ಉದ್ಯೋಗವಕಾಶ ಹೆಚ್ಚಾದ ನಂತರ. 90ರ ದಶಕದ ಕೊನೆಯಲ್ಲಿ ಹಾಗೂ ಈ ಶತಮಾನದ ಪ್ರಾರಂಭದಲ್ಲಿ ಹಲವಾರು ಸುದ್ದಿವಾಹಿನಿಗಳು ಪ್ರಾರಂಭವಾದವು. ಉದ್ಯೋಗಾವಕಾಶ ಹೆಚ್ಚಾಯಿತು, ವಿದ್ಯಾರ್ಥಿಗಳು ಹೆಚ್ಚಾದರು. ಜೊತೆಯಲ್ಲಿ ಪತ್ರಿಕೋದ್ಯಮ ಶಿಕ್ಷಣವೂ ಅಪ್‌ಡೇಟ್ ಆಯಿತು. ನಿಧಾನಕ್ಕೆ ಜೀರ್ಣೋದ್ಧಾರವೂ ಆಯಿತು. ಈಗ ಪತ್ರಿಕೋದ್ಯಮ ಶಿಕ್ಷಣವೆಂದರೆ ಕೇವಲ ಬರೆಯುವುದು ಮಾತ್ರವಲ್ಲ, ವಿದ್ಯಾರ್ಥಿಗಳ ಕೈಯಲ್ಲಿ ಕ್ಯಾಮರಾ ಕೂಡ ಇರುತ್ತದೆ. ಕಾಲೇಜ್‌ಗಳಲ್ಲಿ ಸ್ಟುಡಿಯೋ ಕೂಡ ಇರುತ್ತದೆ. ಡಾಕ್ಯುಮೆಂಟರಿ ಸಿನಿಮಾಗಳನ್ನು ವಿದ್ಯಾರ್ಥಿಗಳೇ ಮಾಡುತ್ತಾರೆ. ಕಾಲೇಜ್ ಮಟ್ಟದಲ್ಲಿ ಚಿಕ್ಕ ಪತ್ರಿಕೆಯನ್ನು ಪ್ರಕಟಿಸುತ್ತಾರೆ. ಜೊತೆಯಲ್ಲಿ ಪುಸ್ತಕ, ಸಿನಿಮಾ, ವಿಮರ್ಶೆ ಇತ್ಯಾದಿ ಪ್ರಕಟಿಸುತ್ತಾರೆ. ಆದರೆ 'ವಿದ್ಯಾರ್ಥಿಗಳು ಬರೆಯುವುದನ್ನು ಕಲಿಯುವುದಿಲ್ಲ' ಎಂದು ನೀವು ಹೇಳಬಹುದು, ಅದು ಸತ್ಯವೇ ಆಗಿರಬಹುದು. ಅದು ಬೇರೆ ವಿಚಾರ. ಅಲ್ಲಿಂದ ಜೀರ್ಣೋದ್ಧಾರವಾದದ್ದು ಸತ್ಯ. ರಾಜ್ಯಶಾಸ್ತ್ರದ ವಿದ್ಯಾರ್ಥಿಗಳು ಜನಪ್ರತಿನಿಧಿಗಳೊಂದಿಗೆ ಸಂವಾದ ನಡೆಸಬೇಕು. ಇತಿಹಾಸದ ವಿದ್ಯಾರ್ಥಿಗಳು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಬೇಕು. ಸಾಹಿತ್ಯ ಇತಿಹಾಸ, ರಾಜ್ಯಶಾಸ್ತ್ರ ವಿಷಯಗಳು ಒಳಗೊಂಡಿರುತ್ತದೆ. ಉದಾಹರಣೆಗೆ ಎಸ್.ಎಲ್. ಭೈರಪ್ಪನವರ 'ಆವರಣ'. ಆ ಕೃತಿ ಕೇವಲ ಸಾಹಿತ್ಯದ ವಿದ್ಯಾರ್ಥಿಗಳಿಗೆ ಮೀಸಲು ಎಂದು ಸಮಾಜ ವಿಜ್ಞಾನದ ವಿದ್ಯಾರ್ಥಿಗಳು ತಿಳಿದುಕೊಂಡರೆ ಮೂರ್ಖತನವಾಗುತ್ತದೆ.
ಪತ್ರಿಕೋದ್ಯಮ ಸೇರಿದಂತೆ ಕಲಾ ವಿಭಾಗದ ಕೆಲವು ವಿಷಯಗಳ ಜೀರ್ಣೋದ್ಧಾರವಾಗಿದೆ. ಇನ್ನೂ ಹಲವು ವಿಷಯಗಳು ಬದಲಾಗಬೇಕಿದೆ. ' 30 ವಿದ್ಯಾರ್ಥಿಗಳಿದ್ದಾರೆ. ಎಲ್ಲವೂ ಸರಿಯಾಗಿದೆ ಇನ್ನು ಯಾಕೆ ಜೀರ್ಣೋದ್ಧಾರ' ಎಂಬ ವಾದ ಸರಿಯಲ್ಲ. ಅಂತರ್ಜಾಲದ ಈ ಕಾಲದಲ್ಲಿ ಜಗತ್ತು ವೇಗವಾಗಿ ಚಲಿಸುತ್ತಿದೆ. ಪಠ್ಯ ಕ್ರಮವೂ ಆದೇ ವೇಗದಲ್ಲಿ ಬೆಳೆಯಬೇಕು. ಇನ್ನೆಷ್ಟು ದಿನ ಅದೇ ಶೀತಲ ಯುದ್ಧದ ಬಗ್ಗೆ ಕಲಿಸುವುದು? ಇನ್ನೆಷ್ಟು ದಿನ ಅದೇ ಪಠ್ಯ ಕ್ರಮ? ಇಷ್ಟಕ್ಕೂ ಜೀರ್ಣೋದ್ಧಾರ ವಿದ್ಯಾರ್ಥಿಗಳ ಸಂಖ್ಯೆ ಏರಿಸಲು ಇರುವ ತಂತ್ರವಲ್ಲ. ಬಹುಮುಖ್ಯವಾಗಿ ಅಪ್‌ಡೇಟ್ ಆಗುವುದರ ಅರ್ಥ ಈಗ ಎಲ್ಲವೂ ಸರಿಯಿಲ್ಲ ಎಂದಲ್ಲ. ಎಲ್ಲವೂ ಸರಿಯಾಗಿರುವಾಗಲೇ ಇನ್ನಷ್ಟು ಇಂದಿನದಾಗಿಸುವ ಹಲವಾರು ಉದಾಹರಣೆಗಳಿವೆ. ಇಬ್ಬರು ಭಾರತೀಯರಿಗೆ ಇತ್ತೀಚೆಗೆ 'ಭಾರತ ರತ್ನ' ಪ್ರಶಸ್ತಿ ದೊರೆತಾಗ 'ಕನ್ನಡಪ್ರಭ' ವಿಶಿಷ್ಟವಾಗಿ ಮುಖಪುಟ ರೂಪಿಸಿತ್ತು. ಇದು ಜೀರ್ಣೋದ್ಧಾರ ಅಲ್ಲ. ಇದು ಒಂದು ರೀತಿಯ ಪ್ರಯೋಗ. ಪತ್ರಿಕೆಯ ಬೈಟು ಕಾಫಿ ಇನ್ನೊಂದು ರೀತಿಯ ಪ್ರಯೋಗ. ನಿಂತ ನೀರಾದರೆ ಜಗತ್ತಿನಲ್ಲಿ ಯಾವುದೂ ಉಳಿಯುವುದಿಲ್ಲ. ಕಾಲಕ್ಕೆ ತಕ್ಕ ಹಾಗೆ ಅಪ್‌ಡೆಟ್ ಆಗಲೇಬೇಕು. ಇಲ್ಲದಿದ್ದರೆ ಅಭಿನಯ ಕಲಿಯುವಿಕೆಯಿಂದ ಕಲಾ ವಿಭಾಗದ ತನಕ ಯಾವುದೂ ಉಳಿಯಲಾರದು.


-ಆದಿತ್ಯ ಭಟ್‌ಉಪನ್ಯಾಸಕರು,
ಆಳ್ವಾಸ್ ಪದವಿ ಕಾಲೇಜು,
ಮೂಡುಬಿದಿರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement