ಅಧ್ಯಯನ ಪೀಠಗಳು ಸಂಶೋಧನೆಗೋ, ರಾಜಕೀಯಕ್ಕೋ?
ಜಾತಿಗೊಂದು ಅಧ್ಯಯನ ಪೀಠ, ಮುಖ್ಯಮಂತ್ರಿ ಅಥವಾ ಪ್ರಭಾವಿ ಸಚಿವರು ನಂಬಿದ ಪ್ರಭಾವಿ ವ್ಯಕ್ತಿಯ ಹೆಸರಿಗೊಂದು ಪೀಠ, ಆ ವ್ಯಕ್ತಿಯ ಹೆಸರಲ್ಲಿ ವರ್ಷಕ್ಕೊಂದು ಅದ್ಧೂರಿ ಕಾರ್ಯಕ್ರಮ, ಅಲ್ಲೊಂದಿಷ್ಟು ಜಾತಿ ರಾಜಕೀಯ, ಮತ್ತೊಂದಿಷ್ಟು ಭ್ರಷ್ಟಾಚಾರ ಇದನ್ನು ಹೊರತುಪಡಿಸಿ ಒಂದು ರಚನಾತ್ಮಕ ಕಾರ್ಯ ನಡೆಯುವುದು ಹಾಗೂ ಅದರ ಸಾಧ್ಯತೆಯಿರುವುದು ನಮ್ಮ ರಾಜ್ಯದ ವಿಶ್ವವಿದ್ಯಾಲಯದಲ್ಲಿರುವ ಅಧ್ಯಯನ ಪೀಠಗಳಲ್ಲಿ ವಿರಳ.
ಆದಾಗ್ಯೂ ಪ್ರತಿಯೊಬ್ಬ ಸಚಿವರೂ ತಮ್ಮ ಜಾತಿಗೆ ಸೇರಿದ ಧಾರ್ಮಿಕ ವ್ಯಕ್ತಿ ಅಥವಾ ತಾವು ನಂಬಿದ ವ್ಯಕ್ತಿಗಳ ಹೆಸರಲ್ಲಿ ಅಧ್ಯಯನ ಪೀಠ ತೆರೆಯಲು ಮುಂದಾಗುತ್ತಾರೆ. ಕೇವಲ ಮತಬ್ಯಾಂಕ್ಗಳಿಗಾಗಿ ಈ ವಿಶ್ವವಿದ್ಯಾಲಯಗಳನ್ನು ಇವರು ಗುರಿಯಾಗಿಸಿಕೊಂಡಿದ್ದಾರೆಯಷ್ಟೆ. ಹೊರತಾಗಿ ಮತ್ಯಾವ ಮಹಾನ್ ಉದ್ದೇಶ ಇರಿಸಿಕೊಂಡು ಅಧ್ಯಯನ ಪೀಠ ಮಾಡುವುದಿಲ್ಲ.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ವತಃ ನೋಡಿದ ಪ್ರಸಂಗವಿದು.
ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭವದು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಶಿಕ್ಷಣ ಸಚಿವ ಎಚ್.ವಿಶ್ವನಾಥ್ ಒತ್ತಾಯಕ್ಕೆ ಮಣಿದು ಕನಕ ಅಧ್ಯಯನ ಪೀಠ ಮಂಜೂರು ಮಾಡಿದರು. ಆದರೆ ಕೃಷ್ಣ ನೀಡಿದ ಹಣದಲ್ಲಿ ಕಟ್ಟಡ ಕಾಮಗಾರಿಯೇ ಮುಗಿಯಲಿಲ್ಲ. ಮತ್ತೆ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾದ ಸಮಯದಲ್ಲಿ ಮತ್ತೊಂದು ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಿಸಿ ಭವ್ಯ ಕಟ್ಟಡವನ್ನು ಉದ್ಘಾಟಿಸಿದರು. ಆದರೆ ಕೋಟ್ಯಂತರ ರುಪಾಯಿ ಖರ್ಚು ಮಾಡಿ ದೊಡ್ಡ ಕಟ್ಟಡವನ್ನು ಕಟ್ಟಿ ಏನು ಮಾಡಿದ್ದಾರೆ ಎಂದು ಅದೇ ವಿಶ್ವವಿದ್ಯಾಲಯವನ್ನು ಕೇಳಿ ನೋಡಿ, ದೊಡ್ಡ ಶೂನ್ಯ ಕಾಣಿಸುತ್ತದೆ. ಪೀಠ ಅಸ್ತಿತ್ವಕ್ಕೆ ಬಂದ 10 ವರ್ಷಗಳಲ್ಲಿ ಸಮರ್ಪಕವಾಗಿ 10 ವಿದ್ಯಾರ್ಥಿಗಳು ಇದರ ಲಾಭ ಪಡೆದಿಲ್ಲ. ಸರ್ಕಾರ ನೀಡುವ ಅನುದಾನ ಬಳಕೆಗಾಗಿ ನೆನಪಿನಲ್ಲಿಟ್ಟುಕೊಂಡು ಕನಕದಾಸರ ಜಯಂತಿ ಆಚರಿಸುವುದು ಬಿಟ್ಟರೆ ಅಧ್ಯಯನ ಪೀಠ ಅಸ್ತಿತ್ವದಲ್ಲಿರುವುದೇ ಗೊತ್ತಾಗುವುದಿಲ್ಲ. ಆದರೆ ಕನಕದಾಸರ ಅಧ್ಯಯನ ಪೀಠದ ಹೆಸರಲ್ಲಿ ಕನಕದಾಸರ ಹೆಸರಿಗೆ ಅವಮಾನ ಮಾಡುವ ಕೆಲಸವನ್ನು ಖಂಡಿತ ಮಾಡುತ್ತಿದ್ದಾರೆ. ವಿಶ್ವವಿದ್ಯಾಲಯದ ಯಾವುದೇ ಮರಗೆಲಸವಿದ್ದರೆ ಇಲ್ಲಿಯೇ ಮಾಡುತ್ತಿದ್ದರು. ಕನಕದಾಸರ ಶಿಷ್ಯರಿರಲಿ, ಕನಕದಾಸರೇ ಅಲ್ಲಿ ಕೂರುವಂತಹ ಪರಿಸ್ಥಿತಿಯಿರಲಿಲ್ಲ. ಆ ಅಧ್ಯಯನ ಪೀಠವು ಸುಮಾರು 4 ವರ್ಷಗಳ ಕಾಲ ಅಕ್ಷರಶಃ ಕೆಲಸದ ಕೊಠಡಿ ಹಾಗೂ ಸಂಗ್ರಹಾಲಯವಾಗಿ ಪರಿಣಮಿಸಿತ್ತು. ರಾಜಕೀಯ ಕ್ಲೀಷೆಗಳಿಗೆ ಅಧ್ಯಯನ ಪೀಠ ಮಾಡಿ ಕನಕದಾಸರಂತಹ ದಾರ್ಶನಿಕರಿಗೆ ಮಾಡುವ ಅಪಮಾನ ಇದಲ್ಲವೇ?
ಇದೊಂದು ಉದಾಹರಣೆಯಷ್ಟೆ. ರಾಜ್ಯದ ಯಾವುದೇ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ಅಧ್ಯಯನ ಪೀಠಗಳನ್ನು ನೋಡಿದರೆ ಭೌತಿಕವಾಗಿ ವ್ಯವಸ್ಥೆಯಲ್ಲಿ ಬದಲಾವಣೆ ಇರಬಹುದು, ಆದರೆ ಶೈಕ್ಷಣಿಕವಾಗಿ ಯಾವುದೆ ವ್ಯತ್ಯಾಸ ಕಾಣುವುದಿಲ್ಲ. ಈಗಿರುವ ಅಧ್ಯಯನ ಪೀಠಗಳು ಹಾಳು ಬೀಳುತ್ತಿರುವ ಬೆನ್ನಲ್ಲೇ ಎಲ್ಲ ವಿವಿಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠ ಪ್ರಾರಂಭಿಸುತ್ತೇವೆ ಎಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಮಾಜಕಲ್ಯಾಣ ಸಚಿವ ಎಚ್.ಆಂಜನೇಯ ಅವರು ನಿರ್ಧಾರ ತೆಗೆದುಕೊಂಡ ನೆಪದಲ್ಲಿ ಈ ಪೀಠಗಳ ಬಗ್ಗೆ ಚರ್ಚೆ ಅನಿವಾರ್ಯ ಎನಿಸುತ್ತಿದೆ.
ಭಾರತದಲ್ಲಿ ಒಂದು ಹುಚ್ಚು ಪರಂಪರೆ ಅತಿಯಾಗುತ್ತಿದೆ. ಒಬ್ಬ ದಾರ್ಶನಿಕನನ್ನು ನೆನಪಿಸಿಕೊಳ್ಳಲು ಒಂದು ಸರ್ಕಾರಿ ರಜೆ, ಪುತ್ಥಳಿ, ಶಾಲೆಗಳಲ್ಲಿ ಫೋಟೋಗಳಿಗಾಗಿ ವರ್ಷಗಟ್ಟಲೇ ಪ್ರತಿಭಟನೆ ಮಾಡುತ್ತೇವೆ. ಹೇಗಾದರೂ ಮಾಡಿ ಪ್ರಭಾವಿ ರಾಜಕಾರಣಿ ಮೂಲಕ ಸರ್ಕಾರಿ ರಜೆ ಹಾಗೂ ಹುಟ್ಟು ಹಬ್ಬ ಆಚರಣೆಯ ಭಾಗ್ಯ ದೊರೆತರೆ ಪಟಾಕಿ ಹೊಡೆದು ಮನೆಗೆ ಹೋಗುತ್ತೇವೆ. ಮತ್ತೆ ಮುಂದಿನ ವರ್ಷ ಬಂದು ಒಂದಿಷ್ಟು ಗಲಾಟೆ ಮಾಡಿ, ಸಾಮಾಜಿಕ ಕಳಕಳಿ ತೋರಿಸಿ ಮಾಯವಾಗುತ್ತೇವೆ. ಇಂತಹುದೇ ಉತ್ಸಾಹದಲ್ಲಿ ಒಬ್ಬ ವ್ಯಕ್ತಿಯ ಜನ್ಮದಿನಾಚರಣೆ ದಿನದಂದು ಆತನ ಬೆಂಬಲಿಗರ ಅಥವಾ ಭಕ್ತರ ಮತಗಳಿಕೆಗಾಗಿ ಒಂದು ಅಧ್ಯಯನ ಪೀಠದ ಪ್ರಸ್ತಾಪವೂ ಬರುತ್ತದೆ. ಆದರೆ ಇಂತಹ ಘೋಷಣೆ ಮಾಡುವ ಯಾವೊಬ್ಬ ರಾಜಕಾರಣಿಯೂ ವಿವಿಯಲ್ಲಿನ ಅಧ್ಯಯನ ಪೀಠದ ಭವಿಷ್ಯ ಹಾಗೂ ಅಗತ್ಯದ ಬಗ್ಗೆ ಕಿಂಚಿತ್ ಕೂಡ ಆಲೋಚಿಸುವುದಿಲ್ಲ.
ಸಾಮಾನ್ಯವಾಗಿ ಒಂದು ಅಧ್ಯಯನ ಪೀಠದಿಂದ ಒಬ್ಬ ವಿದ್ಯಾರ್ಥಿ ಬಯಸುವುದಿಷ್ಟು. ವಿಶ್ವವಿದ್ಯಾಲಯಗಳಲ್ಲಿ ಮುಖ್ಯ ಕೋರ್ಸ್ ಮಾಡುತ್ತಿರುವಾಗ ಪೂರಕವಾಗಿ ಓದಲು ಬಯಸುತ್ತಾನೆ. ಅದು ಆತನ ಭವಿಷ್ಯ ರೂಪಿಸಿಕೊಳ್ಳುವಲ್ಲಿ ನೆರವಾಗಬೇಕು. ಮತ್ತೊಂದು ಹಂತದಲ್ಲಿ ಆ ಅಧ್ಯಯನ ಪೀಠ ನಡೆಸುವ ಅಲ್ಪಾವಧಿ ಕೋರ್ಸ್ಗಳು ವಿದ್ಯಾರ್ಥಿಯ ಔದ್ಯೋಗಿಕ ಜಗತ್ತಿಗೆ ಪ್ರವೇಶ ಕಲ್ಪಿಸುವಂತಹ ವೇದಿಕೆಯಾಗಬೇಕು. ಇನ್ನು ಈ ಪೀಠಗಳ ಉಚ್ಛ್ರಾಯ ಸ್ಥಿತಿಯೆಂದರೆ ಸಂಶೋಧನೆಯಲ್ಲಿ ತೊಡಗುವುದು. ಜಾತಿ, ಧರ್ಮ ಹಾಗೂ ಎಲ್ಲ ಸಮಾಜ ವ್ಯಾಧಿಗಳಿಂದ ದೂರವಿರುವ ಒಬ್ಬ ಸಾಮಾನ್ಯ ವಿದ್ಯಾರ್ಥಿ ಬಯಸುವ ಮೂಲಭೂತ ವಿಚಾರಗಳಿವು. ಈಗ ಹೇಳಿ, ನಮ್ಮ ವಿಶ್ವವಿದ್ಯಾಲಯಗಳಲ್ಲಿರುವ ಯಾವ ಅಧ್ಯಯನ ಪೀಠಗಳು ಈ ಕೆಲಸವನ್ನು ಮಾಡುತ್ತಿವೆ?
ವಿಶ್ವವಿದ್ಯಾಲಯಗಳನ್ನು ಧರ್ಮ ಅಥವಾ ಜಾತಿಯ ಕೊಂಪೆಯಲ್ಲಿ ನರಳುವ ಉದ್ದೇಶದಿಂದ ಅಧ್ಯಯನ ಪೀಠ ಮಾಡಬೇಡಿ. ನಿಮ್ಮ ರಾಜಕೀಯ ಇಚ್ಛೆಗಳಿಗಾಗಿ ಅಧ್ಯಯನ ಪೀಠ ಘೋಷಿಸುವ ಮೊದಲು ಆ ವಿವಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ತಜ್ಞರ ಬೇಡಿಕೆಯೇನು ಎನ್ನುವುದನ್ನು ಅರಿತುಕೊಳ್ಳಿ. ವಾರ್ಷಿಕ ದಿನಾಚರಣೆ ಮಾಡಲು ಒಂದು ಅಧ್ಯಯನ ಪೀಠ ತೆರೆದು ಏಕೆ ಖಜಾನೆಯನ್ನು ಬರಿದು ಮಾಡುತ್ತೀರಿ ಸ್ವಾಮಿ? ಬದಲಾಗಿ ಆ ವಿಶ್ವವಿದ್ಯಾಲಯಗಳ ಅದೆಷ್ಟೋ ವಿಭಾಗಗಳಲ್ಲಿ ಉಪನ್ಯಾಸಕರುಗಳೇ ಇರುವುದಿಲ್ಲ, ಉತ್ತಮ ಗ್ರಂಥಾಲಯ ಇರುವುದಿಲ್ಲ. ಅಗತ್ಯ ಪ್ರಯೋಗಾಲಯದ ಕೊರತೆಯಿರುತ್ತದೆ, ಕಂಪ್ಯೂಟರ್ ಶಿಕ್ಷಣ ಎನ್ನುವುದು ಕನಸಿನ ಮಾತಾಗಿರುತ್ತದೆ. ಈ ಬಗ್ಗೆ ವ್ಯಯ ಮಾಡಿ. ಇದು ಆ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳ ಹೊಟ್ಟೆ ತುಂಬಿಸುತ್ತದೆ. ಆದರೆ ಕೆಲಸಕ್ಕೆ ಬಾರದ ಅಧ್ಯಯನ ಪೀಠಗಳಿಂದ ರಾಜಕೀಯ ಬಿಟ್ಟು ಮತ್ತೇನು ಮಾಡಲು ಸಾಧ್ಯವಿಲ್ಲ. ನಿಮ್ಮ ಜಾತಿ ಅಥವಾ ರಾಜಕೀಯ ಬೆಂಬಲಿಗರನ್ನು ಆ ಪೀಠದ ಮುಖ್ಯಸ್ಥರನ್ನಾಗಿ ನೇಮಿಸುತ್ತೀರಿ. ಸಮಾಜದ ಪರ ಕೆಲಸ ಮಾಡಿ ಎಂದರೆ ವಿವಿಯಲ್ಲಿ ಅವರ ರಾಜಕೀಯ ಮಾಡಿ ಕೂರುತ್ತಾರೆ. ಆ ಬಳಿಕ ಸರ್ಕಾರ ಬದಲಾದಾಗ ಮತ್ತೊಂದು ಸುತ್ತಿನ ಗಲಾಟೆಯಾಗುತ್ತದೆ. ಇದರ ಬದಲಾಗಿ ಅಧ್ಯಯನ ಪೀಠಗಳಿಗೆ ಒಂದು ಸ್ಪಷ್ಟ ನಿರ್ದೇಶನ ನೀಡುವ ತಾಕತ್ತು ತೋರಿಸಿ.
ಸಂವಿಧಾನಶಿಲ್ಪಿ ಅಂಬೇಡ್ಕರ್ ಕುರಿತು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಅದರಲ್ಲೇನೂ ಎರಡು ಮಾತಿಲ್ಲ. ಆದರೆ ಕೇವಲ ಅಂಬೇಡ್ಕರ್ ಚಿತ್ರ ತೋರಿಸಿ ಮತ ಕೇಳಲು ಅಧ್ಯಯನ ಪೀಠ ಮಾಡುವ ಕೆಟ್ಟ ಸಂಪ್ರದಾಯ ಬೇಡ. ಅಂಬೇಡ್ಕರ್ ವಿಚಾರಗಳ ಕುರಿತು ನಿಜಕ್ಕೂ ಕಾಳಜಿ ಇದ್ದರೆ ಕೆಲವೊಂದಿಷ್ಟು ವಿಷಯಗಳ ಬಗ್ಗೆ ಆಸಕ್ತಿ ವಹಿಸಬಹುದು. ಆ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಸಾಮಾಜಿಕ ಬದಲಾವಣೆಗೆ ಅಧ್ಯಯನ ಪೀಠ ಹೇಗೆ ಕೆಲಸ ಮಾಡಬಹುದು? ಅಂಬೇಡ್ಕರ್ ವಿರೋಧಿಸಿದ ಜಾತಿ ವ್ಯವಸ್ಥೆ ವಿವಿ ವ್ಯಾಪ್ತಿಯ ಜಿಲ್ಲೆಗಳಲ್ಲಿ ಹೇಗೆ ಬಾಧಿಸುತ್ತಿದೆ? ವಿವಿಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಸರ್ಕಾರೇತರ ಸಂಸ್ಥೆಗಳ ಮೂಲಕ ಇದನ್ನು ಹೇಗೆ ಹೋಗಲಾಡಿಸುವುದು? ದಲಿತ ವಿದ್ಯಾರ್ಥಿಗಳನ್ನು ಹೇಗೆ ಸಮಾಜದ ಮುಖ್ಯ ವಾಹಿನಿಗೆ ತಂದು ಸಾಮಾನ್ಯ ವಿದ್ಯಾರ್ಥಿಗಳೊಂದಿಗೆ ಪ್ರತಿಭೆಯ ಆಧಾರದ ಮೇಲೆ ಹೇಗೆ ಜಯಿಸುವುದು? ಇಂತಹ ವಿಚಾರಗಳನ್ನು ಇರಿಸಿಕೊಂಡಿದ್ದರೆ ಒಳ್ಳೆಯದಿರುತ್ತದೆ. ಈ ಅಧ್ಯಯನ ಪೀಠಗಳು ರಚನೆಯಾದ ಮೇಲೆ ಮಾಡುವ ಕೆಲಸಗಳನ್ನು ನೀವೇ ಗಮನಿಸಿ ಹೇಗಿರುತ್ತದೆ ಎಂದು.
ಪ್ರತಿಯೊಂದು ಮಠ, ಸಂಘಟನೆ ಹಾಗೂ ಒಂದು ವ್ಯವಸ್ಥೆ ಬೊಬ್ಬೆ ಹೊಡೆದುಕೊಂಡಾಗ ಅಧ್ಯಯನ ಪೀಠ ಪ್ರಾರಂಭಿಸಿದರೆ ಯಾವುದೆ ಪ್ರಯೋಜನವಾಗುವುದಿಲ್ಲ. ಒಂದೊಮ್ಮೆ ಇಂತಹ ಕಾಳಜಿಯಿದ್ದರೆ ಆ ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ವಿಭಾಗಗಳೊಂದಿಗೆ ಅಧ್ಯಯನ ಪೀಠವನ್ನು ಜೋಡಿಸಿ, ವಿದ್ಯಾರ್ಥಿಗಳು ಆ ಪೀಠದೊಂದಿಗೆ ಶೈಕ್ಷಣಿಕವಾಗಿ ಜೋಡಿಸಿಕೊಳ್ಳುವಂತೆ ಕಾಳಜಿ ವಹಿಸಿ. ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ನೀಡುವ ಪ್ರತಿಯೊಂದು ವಿಭಾಗವು ಸಂಶೋಧನೆ ಎಂಬ ಒಂದೇ ಮಂತ್ರದೊಂದಿಗೆ ಕಾರ್ಯನಿರ್ವಹಿಸಬೇಕು, ಈ ಪೀಠಗಳು ಕೂಡ ಈ ಸಂಶೋಧನೆಗಳಿಗೆ ಪೂರಕವಾಗಿರಬೇಕು. ಆದರೆ ಇಂತಹ ಜಾತಿ ಹಾಗೂ ರಾಜಕೀಯ ವಿಷ ಬೀಜಗಳಿಂದ ಇಂದು ಸಂಶೋಧನೆ ಒಂದನ್ನು ಬಿಟ್ಟು ಉಳಿದೆಲ್ಲ ಅನಾಚಾರಗಳೂ ನಡೆಯುತ್ತಿವೆ.
ಜಾತಿ ವ್ಯವಸ್ಥೆ ಹೋಗಬೇಕು ಎಂದು ಮಾತನಾಡುತ್ತ ಪ್ರತಿ ಜಾತಿ ಹಾಗೂ ಧರ್ಮಗಳಿಗೊಂದು ಅಧ್ಯಯನ ಪೀಠ ಮಾಡುವ ಅಗತ್ಯವೇನಿದೆ? ಜಾತಿ ಅಥವಾ ಧರ್ಮವನ್ನು ಪೋಷಿಸುವ ಕೆಲಸವನ್ನು ಕೆಲ ಮಠ ಹಾಗೂ ಧಾರ್ಮಿಕ ಸಂಸ್ಥೆಗಳು ಮಾಡುತ್ತಿವೆ. ಆದರೆ ಸರ್ಕಾರ ಇದನ್ನು ಮಾಡುವ ಅಗತ್ಯವಿಲ್ಲ. ಒಂದೊಮ್ಮೆ ಅಧ್ಯಯನ ಪೀಠಗಳನ್ನು ಮಾಡುವ ಅಗತ್ಯವಿದ್ದರೆ ವಿಶ್ವವಿದ್ಯಾಲಯಗಳೇ ತಮ್ಮ ಅಗತ್ಯಕ್ಕೆ ತಕ್ಕಂತೆ ಮಾಡಿಕೊಳ್ಳುತ್ತವೆ. ವಿದ್ಯಾರ್ಥಿಗಳ ಬೇಡಿಕೆಯನ್ನು ನೋಡಿಕೊಳ್ಳುತ್ತವೆ. ಬದಲಾಗಿ ಒಂದು ಅಸ್ತಿತ್ವ ಅಥವಾ ರಾಜಕೀಯ ಪ್ರತಿಷ್ಠೆಗೆ ಅಧ್ಯಯನ ಪೀಠ ಬಳಸಿಕೊಂಡರೆ ಯಾವುದೇ ಪ್ರಯೋಜನವಿಲ್ಲ.
ಮೇಲೆ ಪ್ರಸ್ತಾಪಿಸಿದಂತೆ ಕನಕದಾಸ ಅಧ್ಯಯನ ಪೀಠವನ್ನು ಹಿಂದಿನ ಕಾಂಗ್ರೆಸ್ ಸರ್ಕಾರವು ಕುರುಬ ಮತಗಳಿಗಾಗಿ ಮಾಡಿತ್ತು. ಅದಕ್ಕೆ ಸಿದ್ದರಾಮಯ್ಯ ಅವರು ಬೆಂಬಲ ನೀಡಿದರು. ಕನಕದಾಸರ ಸಾಹಿತ್ಯ ಪ್ರಚಾರದಲ್ಲಿ ಈ ಪೀಠ ಏನು ಮಾಡುತ್ತಿದೆ? ಎಷ್ಟು ವಿದ್ಯಾರ್ಥಿಗಳಿಗೆ ಕನಕದಾಸರ ಸಾಹಿತ್ಯ ಅಥವಾ ವಿಚಾರಧಾರೆ ಮೂಲಕ ಜೀವ ಕಟ್ಟಿಕೊಟ್ಟಿದೆ? ಬಹುಶಃ ಉತ್ತರ ದೊಡ್ಡ ಶೂನ್ಯ. ಅಂಬೇಡ್ಕರ್ ಅವರ ಹೆಸರಿನ ಅಧ್ಯಯನ ಪೀಠವು ಮತ್ತೊಂದು ಸಂಗ್ರಹಾಲಯ ಮಾಡುವ ಬದಲು, ಈಗಿರುವ ಸಮಾಜ ವಿಜ್ಞಾನ ವಿಭಾಗಗಳಲ್ಲಿ ಅಂಬೇಡ್ಕರ್ ವಿಚಾರಧಾರೆ ಮೂಲಕ ಹೇಗೆ ಬೆಳೆಸಬಹುದು, ಆ ಮೂಲಕ ಹೇಗೆ ಸಮಾಜ ಕಟ್ಟಬಹುದೆಂದು ನೋಡಿ.
ನಮ್ಮ ಎಲ್ಲ ಹೊಸ ಪ್ರಯೋಗಗಳಿಗೆ ಐರೋಪ್ಯ ದೇಶಗಳೇ ಮಾದರಿಯಾಗುತ್ತಿದೆಯಲ್ಲವೇ? ಹಾಗಿದ್ದರೆ ವಿಶ್ವವಿದ್ಯಾಲಯಗಳಿಗೆ ಮಾದರಿ ಎನ್ನುವ ಆಕ್ಸ್ಫರ್ಡ್ ಅಥವಾ ಕೆಂಬ್ರಿಡ್ಜ್ಗಳಲ್ಲಿ ಇಂತಹ ಅಧ್ಯಯನ ಪೀಠಗಳನ್ನು ತೋರಿಸಿಬಿಡಿ. ಬದಲಾಗಿ ಇಂತಹ ದಾರ್ಶನಿಕರೇ ಹೇಳಿಕೊಟ್ಟ ವಿಚಾರಗಳ ಬಗ್ಗೆ ವಿಶೇಷ ಕೋರ್ಸ್ ಹಾಗೂ ಅಧ್ಯಯನ ಕೇಂದ್ರಗಳಿವೆ. ಚುನಾವಣೆ ಹಾಗೂ ಸಾಮಾಜಿಕ ವಿಚಾರಗಳು, ಸಾಮಾಜಿಕ ಭದ್ರತೆ, ಸಾಮಾಜಿಕ ತಾಣಗಳ ಅಧ್ಯಯನ ಸೇರಿದಂತೆ ಇಂತಹ ಹತ್ತಾರು ವಿಚಾರಗಳು ಅಲ್ಲಿ ಕಂಡುಬರುತ್ತವೆ. ಆದರೆ ಆ ವಿಶ್ವವಿದ್ಯಾಲಯಗಳಿಗೆ ಒಂದು ವ್ಯಕ್ತಿಗಿಂತ, ವ್ಯಕ್ತಿಯ ವಿಚಾರ ಮುಖ್ಯವಾಗುತ್ತದೆ. ಏಕೆಂದರೆ ವ್ಯಕ್ತಿಯ ಜಪದಲ್ಲಿ ಕಾಲ ಕಳೆಯುವುದರ ಬದಲಾಗಿ ವಿಷಯಗಳ ಬಗ್ಗೆ ಸ್ಪಷ್ಟನೆ ಹೊಂದಿದರೆ ವಿದ್ಯಾರ್ಥಿಗಳು ನಿಖರವಾಗಿ ಆಲೋಚನೆ ಮಾಡಲು ಸಾಧ್ಯವಾಗುತ್ತದೆ. ಇದಲ್ಲದೇ ಇಂತಹ ವಿಚಾರಗಳ ಬಗೆಗಿನ ಸಂಶೋಧನೆಗಳು ವಿದ್ಯಾರ್ಥಿಗಳನ್ನು ನೈಜ ಅರ್ಥದಲ್ಲಿ 'ಸಮಾಜ ವಿಜ್ಞಾನಿ'ಯಾಗಿಸುತ್ತದೆ. ಭಾರತದ ಯಾವ ವಿಶ್ವವಿದ್ಯಾಲಯಗಳಲ್ಲಿಯೂ ಇಂತಹ ಅಧ್ಯಯನ ಪೀಠ ಅಥವಾ ಕೇಂದ್ರ ನೋಡಲು ಸಿಗುವುದಿಲ್ಲ.
- ರಾಜೀವ ಹೆಗಡೆ
meet.hegde@gmail.com